Friday, March 13, 2015

ಬಾಗ್ದಾದ್: ಒಂದು ಪ್ರಾರ್ಥನೆ

ಎಚ್ ಎಸ್ ಶಿವಪ್ರಕಾಶ   
 

 
                                                     
ಈ ಹೊತ್ತು -                                                                                
೧೯೯೧ರ ಫೆಬ್ರುವರಿ ೪ರ ಸರುಹೊತ್ತು -                             
ಫೆಬ್ರುವರಿ ಐದು ಇನ್ನೂ ಶುರುವಾಗದ ಹೊತ್ತು -                      
                                                       
ಪಡುವಣ ಏಷಿಯಾದ ಅತ್ಯಂತ ನಾಗರಿಕರ ಕೊಲುದಾಣದಲ್ಲಿ
ಕೋಳಿಕಳ್ಳನ ಕತ್ತಿನ ಮೇಲೆ
ಇಪ್ಪತ್ತೆಂಟು ಕಡಲುಗಳ್ಳರ ಲೂಟಿಕಾರ
ಕೊಡಲಿಗಳು ಹೊಂಚುಹಾಕುತ್ತಿರುವ ಹೊತ್ತು -

ನೋಬೆಲ್ ಪಾರಿತೋಷಕದ ಪರತೋಷದಲ್ಲಿ
ಡಬಲ್ ಕಾಟಿನ ಮೇಲೆ ಗರ್ಬೊಚೆವ್
ಗೊರಕೆ ಹೊಡೆಯುವ ಹೊತ್ತು-
ಆಕಾಶದ ಬಾಂಬರುಗಳು ಎರಗುತ್ತಿರುವಾಗ
ಮಗು ಇರುಕಿಕೊಂಡು ಎಡ ಕಂಕುಳಲ್ಲಿ
ಬಂದೂಕು ಇನ್ನೊಂದು ಕೈಯಲ್ಲಿ-
ಈ ಸ್ಥಿತಿಯಲ್ಲು ಕಂದನಿಗೆ ಹಾಲೂಡುತ್ತಿದ್ದ
ವಿಯತ್ನಾಂ ತಾಯ ಧೀರ ವಾತ್ಸಲ್ಯವನ್ನು;

ಅಥವಾ

ಪಾರ್ಸಿ ಸಿಪಾಯಿಯ ಕತ್ತಿ ಕಿಬ್ಬದಿಯ ಕೀಲು ಹರಿವಾಗ
ಜ್ಯಾಮಿತಿಯ ಆಕಾರದ ಗೆರೆಗಳಲ್ಲಿ
ಅಲುಗದ ಹಾಗೆ ನಿಂತಿದ್ದ
ಆರ್ಕಿಮಿಡೀಸನ ಭದ್ರ ಚಿತ್ತವನ್ನು;

ಅಥವಾ

ಕತ್ತಿ ತೂಗುತ್ತಿದ್ದರೂ ನೆತ್ತಿ ಮೇಲೆ
ಗೋಳಾಕಾರದ ಛಾವಣಿಯ ಮೇಲೆ
ದೈವಸೃಷ್ಠಿ ರಂಗುರೂಪಗಳನ್ನು
ಅಚ್ಚಳಿಯದ ಹಾಗೆ ಬಿಡಿಸುತ್ತಿದ್ದ ಬಿಚ್ಚುಗಣ್ಣಿನ
ಮೈಕೆಲ್ ಏಂಜೆಲೋನ ವರ್ಣ ಸಮಾಧಿಯನ್ನು;

ಅಥವಾ

ಗರಿಷ್ಠ ಶಾಖದಲ್ಲೂ ಹೊಳೆಯುತ್ತಲೇ ಇರುವ 
ನಕ್ಷತ್ರಗಳ ನಿರುಮ್ಮಳ ಆಯುಷ್ಯವನ್ನು;

ಅಥವಾ 

ಸ್ಫೋಟಗಳ ನಡುವೆ
ತುಟಿಪಿಟಕ್ಕೆನ್ನದೆ ಗಾಣ ಸುತ್ತುತ್ತಿರುವ
ನೆಲತಾಯ ನಿಗೂಢ ಮೌನವನ್ನು;
ದಯವಿಟ್ಟು ದಯಪಾಲಿಸು ನಮಗೆ
ನಮ್ಮೊಡಲ ಕಣಕಣದ ಅಣು ಹೊಕ್ಕುಳಿನಲ್ಲಿ ಹೊಕ್ಕುಳಿದು
ನಕ್ಷತ್ರ ದೂರಗಳಲ್ಲೂ ಬಿಚ್ಚಿತೋರುವ
ನಿಂತು ನಡೆಯುವ
ಓ ಅನಾದಿಯೆ!
ಆದರೂ-

             ೨

ಹುಣ್ಣಿಮೆಯ ತುಂಬು ತಿಂಗಳ ಜಾದೂವಿನಲ್ಲಿ
ತಣ್ಣಗೆ ಮಲಗಿದ್ದ ಶಾಂತಸಾಗರದ ಎದೆಮೇಲೆ
ಭೈತ್ರಗಳು ಹೋಗುತ್ತ ಬರುತ್ತ ಇದ್ದಾಗ
ಗೊತ್ತಿತ್ತೆ ನಿಮಗೆ
ಬಡಬಾನಲವೊಂದು ಅಡಗಿತ್ತು ಎಂದು
ಸಾಗರದೊಳಗೆ?

ನೆಲದ ಬಸಿರನ್ನೆ ಸಿಡಿಸಿ ಹಾಕುವ
ಬಾಂಬರುಗಳ ಅವತಾರ
ಗೊತ್ತಿತ್ತೆ ನಿಮಗೆ
ಅಡಗಿತ್ತು ಎಂದು
ಪಿಕಾಸೋನ ಶಾಂತಿ ಪಾರಿವಾಳದ ಎದೆ ಒಳಗೆ

ಮುಗುಳುನಗೆ ಶಾಂತಿ ಸಂಧಾನಗಳೊಳಗೆ
ಸಮರ ಸನ್ನಾಹಗಳು
ಅಡಗಿದ್ದವೆಂದು ಗೊತ್ತಿತ್ತೆ ನಿಮಗೆ?

ಗೊತ್ತಿತ್ತೆ-
ಸ್ವಾತಂತ್ರ್ಯ ಬೀಜಗಳಲ್ಲಿ
ಪಾರತಂತ್ರದ ವೃಕ್ಷಗಳು?
ಜ್ಯೋತಿ ಮೈ ಹಿಂದೆ
ತಮಂಧ ಸೇನೆಗಳು

ಕಾಣದ ಕುರುಡಂದು;
ಕಾಣುವ ಕುರುಡಿಂದು;
ಎರಡು ಕುರುಡಿನ ನಡುವೆ
ಎಲ್ಲಿತ್ತು ನಡುಗಣ್ಣು?
ಹೇಳು ಬೆಳಕೆ.
ಎರಡು ಹಗಲಿನ ನಡುವೆ 
ಎಲ್ಲಿತ್ತು ಹಗಲು?
-ಹೇಳು ಯುಗವೆ.

         ೩

ಬಾಗ್ದಾದ್‌ನ ಹೆಸರಾಂತ ಸಂತ
ಷಹಾಬುದ್ದೀನ್ ಸುಹ್ರವಾದೀ ಅವರ
ಶಾಗಿರ್ದ್ ಅಬ್ದುಲ್ ಖಾದ್ರಿ ಗಿಲಾನೀ
ಅವರ ಸಿಲ್‌ಸಿಲಾದ
ಬೆಂಗಳೂರಿನ ಅಜ್ಞಾತ ಸಂತ
ಅಕ್ಬರ್ ಷಾ ವಲೀ ಅವರ ಶಾಗಿರ್ದ್
ಶೇಖ್ ಅಶದುಲ್ಲಾ ಖಾದ್ರೀ ವಲೀ
ಅವರ ಮಜಾರ್‌ನ ಪಕ್ಕ
ಕೂತು ಪ್ರಾರ್ಥಿಸುತ್ತಿದ್ದೇನೆ
ಹಣ್ಣುಹಣ್ಣು ಮುದುಕನ ರೂಪದಲ್ಲಿ;

“ಬಾಬಾ ದುವಾ ಮಾಡಿ.
ನನಗೆ ಗೊತ್ತು-
ನೆತ್ತಿ ಮೇಲೆ ಹಾರುತ್ತಿರುವ ವಿಮಾನಗಳು
ಮೂಲತಃ
ದಿವ್ಯಲೋಕದ ಅಮರ ಪಕ್ಷಿಗಳು;
ಪಾಪ, ಅವು ಅಮೆರಿಕಾದಲ್ಲಿ ಹೀಗಾಗಿ ಬಿಟ್ಟವು.

ಬಾಬಾ, ದುವಾ ಮಾಡಿ
ಅಲುಗುತ್ತಿರುವ ಸುಸಜ್ಜಿತ ನಗರದ ನಡುವೆ
ನೆಲ ಬಿರಿದರೂ ಅಲುಗೆನೆಂಬ ಪಣತೊಟ್ಟು
ನೀವು ಶಾಂತವಾಗಿ ನಿದ್ರಿಸುವ ಹಾಗೆ
ನಾವೂ ನಿದ್ರಿಸುವ ಹಾಗೆ;
ಬಾಬಾ ದುವಾ ಮಾಡಿ
ಮಗುಚಿಟ್ಟ ಆಕಾಶ ಛಾವಣಿ ಕೆಳಗೆ
ಸಿಡಿತ ಮೊರೆತಗಳ ಈ ಲೋಕ
ನೀರವ ಗೋರಿಯಂತಾದಾಗ
ಗೋರಿಯೊಳಗಡೆ ನಿಶ್ಚಿಂತವಾಗಿ ಮಲಗಿರುವ ನಾವು
ಮೇಲೆದ್ದು ನಡೆಯುವ ಹಾಗೆ
ನೀವು ಈಗಾಗಲೇ ನಡೆದಿರುವ ಹಾಗೆ;

ಬಾಬಾ ದುವಾ ಮಾಡಿ
ನೀವು ಹೋದ ಕಡೆ ನಾವು ಹಿಂಬಾಲಿಸುವ ಹಾಗೆ.

ನಿಮ್ಮ ಅಡ್ಡಹಾಕುವ ರಕ್ತ ಹೊಂಡಗಳಲ್ಲಿ
ಅದ್ದಿರುವ ನಿಮ್ಮ ಪಾದಗಳ ಅಂಗಾಲ ಗುಲಾಬಿ ಗುರುತು
ಛಾಪು ಹಾಕಿದೆ ಮರಳುಗಾಡಿನ ತುಂಬ;
ಆ ನೆತ್ತರಿನ ಗುಲಾಬಿ ಗುರುತುಗಳ ಗುರುತ್ಹಿಡಿದು
ಲೋಕ ನಡೆಯುವ ಹಾಗೆ

ಬೆಂಗಳೂರಿನ ಮರಳುಗಾಡುಗಳಲ್ಲಿ
ಬಾಬಾ, ದುವಾ ಮಾಡಿ’

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...