Tuesday, March 31, 2015

ವಿಶ್ವ ಮಾನವರಿಗೆ ಜಾತಿ ಸಂಕೋಲೆಸನತಕುಮಾರ ಬೆಳಗಲಿ
ವಿಶ್ವ ಮಾನವರಿಗೆ ಜಾತಿ ಸಂಕೋಲೆ


ಬಸವಣ್ಣ ಕನಕದಾಸ, ಸಂಗೊಳ್ಳಿ ರಾಯಣ್ಣ, ದೇವರ ದಾಸಿಮಯ್ಯ, ವಾಲ್ಮೀಕಿ, ಕುವೆಂಪು ಇವರೆಲ್ಲ ತಮ್ಮ ತಮ್ಮ ಜಾತಿಯನ್ನು ಮೀರಿ ನಿಂತಿದ್ದರು. ಜಾತಿ, ಮತದ ಸಂಕುಚಿತ ಸೀಮೆ ದಾಟಿ ವಿಶ್ವಮಾನವರಾಗಿ ಅವರು ಬೆಳೆದಿದ್ದರು. ಮೈಸೂರು ಹುಲಿ ಟಿಪ್ಪು ಸುಲ್ತಾನರಿಗೆ ಜಾತಿ ಧರ್ಮದ ವ್ಯಾಮೋಹವಿರಲಿಲ್ಲ. ಟಿಪ್ಪು ಆಸ್ಥಾನದಲ್ಲಿ ಪೂರ್ಣಯ್ಯನಂಥ ಮಂತ್ರಿಗಳಿದ್ದರು. ಶಿಶುನಾಳೀಶನನ್ನೇ ದೇವರೆಂದು ನಂಬಿದ ಶರೀ ಸಾಹೇಬರನ್ನು ಈ ನಾಡೇ ತಮ್ಮವನೆಂದು ಒಪ್ಪಿಕೊಂಡಿದೆ. ಇಂಥ ಪರಂಪರೆ ಈ ನೆಲದ್ದು.

ಈ ಮಹಾಚೇತನಗಳೆಲ್ಲ ತೀರಿಕೊಂಡ ನೂರಾರು ವರ್ಷಗಳ ನಂತರ ಇವರನ್ನು ಜಾತಿ ಸಂಕೋಲೆಯಲ್ಲಿ ಕಟ್ಟಿ ಹಾಕುವ ಹುನ್ನಾರ ನಡೆದಿದೆ. ‘‘ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ’’ ಎಂದು ಹೇಳಿದ ಬಸವಣ್ಣನವರನ್ನು ಲಿಂಗಾಯತರು ತಮ್ಮ ಸೊತ್ತನ್ನಾಗಿ ಮಾಡಿಕೊಂಡಿದ್ದಾರೆ. ಕನಕದಾಸ, ಸಂಗೊಳ್ಳಿ ರಾಯಣ್ಣ, ಕುರುಬ ಸಮಾಜದ ಖಾಸಗಿ ಆಸ್ತಿಯಾಗಿದ್ದಾರೆ. ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಅವರನ್ನು ಒಕ್ಕಲಿಗ ರಾಜಕಾರಣಿಗಳು, ಜಾತಿವಾದಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿ ಕೊಳ್ಳುತ್ತಿದ್ದಾರೆ. ಈಗ ದೇವರ ದಾಸಿಮಯ್ಯ ಯಾರು? ಎಂಬ ವಿವಾದ ಉಂಟಾಗಿದೆ. ರಾಜ್ಯ ಸರಕಾರ ಇತ್ತೀಚೆಗೆ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ನಡೆಸಿದ ಸಂದರ್ಭದಲ್ಲಿ ವಿವಾದಮೂರ್ತಿ ಎಂದೇ ಹೆಸರಾದ ಡಾ.ಚಿದಾನಂದ ಮೂರ್ತಿ ಹಾಗೂ ಸಂಗಡಿಗರು ಈ ಕಾರ್ಯಕ್ರಮ ನಡೆದ ಸಭಾಂಗಣಕ್ಕೆ ನುಗ್ಗಿ ‘ದೇವರ ದಾಸಿಮಯ್ಯ-ಜೇಡರ ದಾಸಿಮಯ್ಯ ಬೇರೆ, ದೇವರ ದಾಸಿಮಯ್ಯ ಶಿವಭಕ್ತ. ಆತ ವಚನಕಾರನಲ್ಲ. ವಚನಗಳನ್ನೇ ರಚಿಸದ ಆತನ ಜಯಂತಿ ಆಚರಿಸುವುದು ಸರಿಯಲ್ಲ ಎಂದು ಕ್ಕಾರದ ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ಸಭಿಕರು ಚಿಮೂ ಗ್ಯಾಂಗ್‌ಗೆ ವಿರುದ್ಧ ಪ್ರತಿಭಟನೆ ನಡೆಸಿದರು. ಕೊನೆಗೆ ಪೊಲೀಸರನ್ನು ಚಿಮೂ ಮತ್ತು ಸಂಗಡಿಗರನ್ನು ಸಭಾಂಗಣದಿಂದ ಹೊರದಬ್ಬಿದರು. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಎಂದು ಚಿ.ಮೂ. ಪ್ರತಿಪಾದಿಸುತ್ತಿದ್ದಾರೆ. ಆದರೆ ನಾಡಿನ ಖ್ಯಾತ ಸಂಶೋಧಕರಾಗಿದ್ದ ಡಾ.ಆರ್.ಸಿ.ಹಿರೇಮಠ, ಎಲ್.ಬಸವರಾಜು ಹಾಗೂ ಈಗ ನಮ್ಮ ನಡುವಿರುವ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಅವರ ಪ್ರಕಾರ ದೇವರ ದಾಸಿಮಯ್ಯನನ್ನು ವಚನಕಾರನನ್ನಾಗಿ ಗುರುತಿಸಿದ್ದಾರೆ. ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ ಬೇರೆ ಅಲ್ಲ ಎಂದು ಹೇಳಿದ್ದಾರೆ. ಈ ಚಾರಿತ್ರಿಕ ವಿಷಯದ ಬಗ್ಗೆ ಪ್ರಾಜ್ಞರು ಪರಸ್ಪರ ಸಂವಾದ ಚರ್ಚೆ ನಡೆಸಿ ಒಂದು ಇತ್ಯರ್ಥಕ್ಕೆ ಬರಬೇಕು. ಈ ಬಗ್ಗೆ ಚರ್ಚೆಗೆ ಹೆಚ್ಚಿನ ಕಾಲಾವಕಾಶ ಬೇಕು. ಈಗ ಅಂಥ ಚರ್ಚೆ ನ್ಯಾಯವಾಗಿದೆ. ದೇವರ ದಾಸಿಮಯ್ಯ ನೇಕಾರ ಸಮುದಾಯಕ್ಕೆ ಸೇರಿದುದರಿಂದ ಆ ಸಮುದಾಯ ತಮ್ಮ ಆಸ್ಮಿತೆಯ ಸಂಕೇತವಾಗಿ ಈತನನ್ನು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಈ ವಿವಾದ ಸರಕಾರಕ್ಕೆ ಮುಖ್ಯವಲ್ಲ. ಜಾತಿ ರಾಜಕಾರಣದ ಲೆಕ್ಕಾಚಾರದಂತೆ ಈ ಜಯಂತಿಗಳು ನಡೆಯುತ್ತಿವೆ. ಈ ಇಪ್ಪತ್ತು ವರ್ಷಗಳ ಹಿಂದೆ ವಾಲ್ಮೀಕಿ ಜಯಂತಿಯನ್ನು ಯಾರೂ ಆಚರಿಸುತ್ತಿರಲಿಲ್ಲ. ಹಿಂದಿನ ಬಿಜೆಪಿ ಸರಕಾರ ನಾಯಕ ಸಮುದಾಯದ ಓಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ವಾಲ್ಮೀಕಿ ಜಯಂತಿಯನ್ನು ಸರಕಾರದಿಂದ ಆಚರಿಸಿ ರಜಾ ಘೋಷಿಸಿತು. ಜಾತಿ ಮತವನ್ನು ಮೀರಿನಿಂತ ಬಸವಣ್ಣ, ಕುವೆಂಪು, ನಾರಾಯಣ ಗುರು ಅಂಥವರು ಜಾತಿ ರಾಜಕಾರಣಕ್ಕೆ ಎಂದೂ ಬಳಕೆಯಾಗಬಾರದು. ‘‘ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ’ ಎಂದು ಕರೆ ನೀಡಿದ ರಾಷ್ಟ್ರಕವಿ ಕುವೆಂಪು ೆಟೊಗಳನ್ನೇ ಒಕ್ಕಲಿಗ ಸಂಘದ ಚುನಾವಣೆಗಳಲ್ಲಿ ಒಕ್ಕಲಿಗರ ಸಮ್ಮೇಳನಗಳಲ್ಲಿ ಬಳಸಿಕೊಳ್ಳುವುದನ್ನು ನೋಡಿದಾಗ ಬೇಸರವಾಗುತ್ತದೆ. ವಾಸ್ತವವಾಗಿ ನಾಯಕ, ಕುರುಬ, ಅಗಸ, ನೇಕಾರ, ಪಿಂಚಾರ ಸೇರಿದಂತೆ ಎಲ್ಲ ಸಮುದಾಯಗಳ ಜನತೆ ಜಾತಿ ಮತಗಳ ಆಚೆಗೆ ನೀಡಿದ ತಮ್ಮ ಆರ್ಥಿಕ, ಸಾಮಾಜಿಕ ಬೇಡಿಕೆಗಳಿಗಾಗಿ ದನಿಯೆತ್ತಿ ಹೋರಾಡಬೇಕು. ಆದರೆ ಹಿಂದುಳಿದ ದುಡಿಯುವ ವರ್ಗದಲ್ಲಿ ಇಂಥ ಏಕತೆ ಬರಬಾರದೆಂದು ಅವರನ್ನು ವಿಭಜಿಸಲು ಜಾತಿಗೆ ಕಟ್ಟಿಹಾಕಿ ವಾಲ್ಮೀಕಿಯಂಥ ಸಂಕೇತ ಗಳಿಗೆ ಗಂಟು ಹಾಕಿದ್ದು ಸಂಘಪರಿವಾರದ ಪಿತೂರಿ. ಇದಕ್ಕೆ ಕಾರ್ಪೊರೇಟ್ ಬಂಡವಾಳಶಾಹಿಯ ಕುಮ್ಮಕ್ಕು ಇದೆ. ಬಸವಣ್ಣ, ಕುವೆಂಪು, ಕನಕದಾಸರಂಥ ಮಹಾ ಚೇತನಗಳಿಗೆ ಜಾತಿ ಸಂಕೋಲೆ ಬಿಗಿಯುವ ಹುನ್ನಾರ ಒಂದೆಡೆ ನಡೆದಿದ್ದರೆ ಇವರನ್ನು ಸೇರಿದಂತೆ ಭಗತ್‌ಸಿಂಗ್, ಅಂಬೇಡ್ಕರ್, ವಿವೇಕಾನಂದ, ಸುಭಾಷಚಂದ್ರ ಭೋಸ್, ನಾರಾಯಣಗುರು ಮುಂತಾದವರನ್ನು ಕೋಮುವಾದಿ ಹಿಂದುತ್ವದ ರಾಜಕಾರಣಕ್ಕೆ ಉಪಯೋಗಿಸಿಕೊಳ್ಳುವ ಮಸಲತ್ತು ನಿರಂತರವಾಗಿ ನಡೆದಿದೆ. ವಿಶ್ವಹಿಂದೂ ಪರಿಷತ್ತಿನ ಸಮಾಜೋತ್ಸವಗಳಲ್ಲೂ ಈ ಮಹಾಚೇತನಗಳ ಭಾವಚಿತ್ರ ಬಳಸಿ ಕೊಳ್ಳಲಾಗುತ್ತಿದೆ.

ಈ ದೇಶಕ್ಕಾಗಿ ದುಡಿದ, ಬಲಿದಾನ ಮಾಡಿದ ಮಹಾ ಚೇತನಗಳನ್ನು ಎಲ್ಲೆಡೆ ಉಪಯೋಗಿಸಿ ಕೊಂಡರೂ, ಮೈಸೂರು ಹುಲಿ ಟಿಪ್ಪು ಸುಲ್ತಾನ, ಶಿಶುನಾಳ ಶರೀ ಸಾಹೇಬರನ್ನು ಬೇಕಂತಲೆ ಕಡೆಗಣಿಸಲಾಗುತ್ತಿದೆ. ಟಿಪ್ಪು ನೆನಪಿನ ಕಾರ್ಯಕ್ರಮ ನಡೆಸಲು ಸರಕಾರ ಮುಂದಾದರೆ ಸಂಘಪರಿವಾರ ಅದನ್ನು ವಿರೋಸುತ್ತದೆ. ಈ ಕೋಮುವಾದಿಗಳಿಗೆ ಹೆದರಿ ಟಿಪ್ಪು ಕಾರ್ಯಕ್ರಮ ನಡೆಸಲು ಸರಕಾರ ಹಿಂದೇಟು ಹಾಕಿತು.

ಬಸವಣ್ಣ, ಟಿಪ್ಪು ಸುಲ್ತಾನ್, ಅಂಬೇಡ್ಕರ್, ಶಿವಾಜಿ, ವಿವೇಕಾನಂದ, ಕನಕದಾಸ ಇವರೆಲ್ಲ ಈ ನಾಡಿನ ಹೆಮ್ಮೆಯ ಸಂಕೇತ. ಇವರಿಗೆ ಜಾತಿ ಮತವಿಲ್ಲ. ಇವರು ಎಲ್ಲ ಸಮುದಾಯಗಳಿಗೆ ಸೇರಿದವರು. ಇವರನ್ನು ಜಾತಿಗೆ ಕಟ್ಟಿಹಾಕುವುದು, ಟಿಪ್ಪುಸುಲ್ತಾನರನ್ನು ಮುಸ್ಲಿಂ ಎಂಬ ಕಾರಣಕ್ಕೆ ಪ್ರತ್ಯೇಕಿಸಿ, ರಾಷ್ಟ್ರದ್ರೋಹಿ ಎಂದು ಜರೆಯುವುದು ಇವೆಲ್ಲ ಜಾತ್ಯತೀತ ಭಾರತಕ್ಕೆ ಶೋಭೆ ತರುವುದಿಲ್ಲ. ಚರಿತ್ರೆಯ ಪುಟಗಳನ್ನು ತಿರುಚಿ ಹಾಕಿದಾಗ ಒಂದು ಸಂಗತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ದೇಶದ ಜನಸಮುದಾಯದಲ್ಲಿ ಒಡಕುಂಟಾದಾಗಲೆಲ್ಲ ಈ ದೇಶ ಸೋತಿದೆ. ವಿದೇಶಿ ಆಕ್ರಮಣಕ್ಕೆ ತುತ್ತಾಗಿದೆ. ದಾಸ್ಯದ ನೊಗ ಹೊತ್ತಿದೆ. ಈಗ ಮತ್ತೆ ಅಂಥ ಅಪಾಯ ಎದುರಾಗಿದೆ. ಆರೆಸ್ಸೆಸ್‌ನ ಹಿಂದು ರಾಷ್ಟ್ರ ಅಜೆಂಡಾ ಈ ದೇಶವನ್ನು ವಿಭಜಿಸಲಿದೆ.

ಆರೆಸ್ಸೆಸ್ ಅಜೆಂಡಾವನ್ನು ಚಾಚೂ ತಪ್ಪದೇ ಜಾರಿಗೆ ತರುತ್ತಿರುವ ನರೇಂದ್ರ ಮೋದಿ, ಈ ದೇಶವನ್ನು ಅಪಾಯದ ಅಂಚಿಗೆ ದೂಡುತ್ತಿದ್ದಾರೆ. ಈ ವಿಭಜನಕಾರಿ ಹುನ್ನಾರ ವಿಲಗೊಳಿಸಬೇಕಾಗಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...