Tuesday, April 28, 2015

ದಲಿತ ಯುವಕ ರೇವಣ್ಣನ ಬರ್ಭರ ಹತ್ಯೆ-ಅರುಣ್ ಏಪ್ರಿಲ್ ೧೪ ರಂದು ಅಂಬೇಡ್ಕರ್ ಜಯಂತಿ ಆಚರಿಸುತ್ತಾ ದಲಿತ ಲೋಕದ ಶೋಷಣೆ ಮುಕ್ತ ಸಮಾಜದ ಕನಸುಗಳನ್ನು ಹಂಚಿಕೊಂಡಿದ್ದೇವೆ. ಈಗಲೂ ತಿಂಗಳು ಪೂರ್ತಿ ಅಲ್ಲಲ್ಲಿ ಅಂಬೇಡ್ಕರ್ ಜಯಂತಿಯ ಆಚರಣೆ ನಡೆಯುತ್ತಲೇ ಇದೆ. ಇದೇ ಹೊತ್ತಲ್ಲಿ ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಸಮೀಪದ ಓಬಳಾಪುರ ಗ್ರಾಮದ ದಲಿತ ಯುವಕ ರೇವಣ್ಣನು ಮೇಲು ಜಾತಿಯವರಿಂದ ಬರ್ಭರ ಹತ್ಯೆಗೆ ಒಳಗಾಗಿದ್ದಾನೆ. ಆತನ ಶವ ದಾವಣಗೆರೆ ಜಿಲ್ಲೆ ಜಗಲೂರು ತಾಲೂಕಿನ ಹಿರೇಮಲ್ಲೂರು ಗ್ರಾಮದ ಕ್ರಾಸ್ ಬಳಿ ಸಿಕ್ಕಿದೆ. ಜಗಲೂರು ಪೋಲಿಸ್ ಸ್ಟೇಷನ್ನಿನಲ್ಲಿ ಪ್ರಕರಣ ದಾಖಲಾಗಿದೆ. ಪತ್ರಿಕೆಗಳ ಸ್ಥಳೀಯ ಪುಟದ ಮೂಲೆಯೊಂದರಲ್ಲಿ ಒಂದು ಕಾಲಮ್ಮಿನ ಸುದ್ದಿಯಲ್ಲಿ ಶವ ಪತ್ತೆ ಎನ್ನುವಲ್ಲಿಗೆ ಮುಕ್ತಾಯವಾಗಿದೆ.


  ರೇವಣ್ಣನ ಹತ್ಯೆಯಾದ ಸುದ್ದಿ ತಿಳಿದು ವಿಚಲಿತನಾದ ನಾನು ಗೆಳೆಯ ಸೂರಮ್ಮನಹಳ್ಳಿ ಉಮೇಶ್ ಜತೆಗೂಡಿ (ಏಪ್ರಿಲ್ ೨೭)  ಓಬಳಾಪುರ ತಲುಪಿದಾದ ಸಂಜೆ ೪ ರ ಸಮಯ. ದುಃಖ ಮಡುಗಟ್ಟಿದ ಮನೆಯ ಮುಂದೆ ಹೋದಾಗ ರೇವಣ್ಣನ ಅಣ್ಣ ತಿಪ್ಪೇಸ್ವಾಮಿ ಮತ್ತಿತರರು ಸೇರಿದರು. ನೋಡು ನೋಡುತ್ತಿದ್ದಂತೆಯೇ ಇಡೀ ಕೇರಿಯ ಜನರು ನಮ್ಮನ್ನು ಮುತ್ತಿದರು. ಅವರ ಮುಖದಲ್ಲಿ ದುಃಖವಿತ್ತು ಅದಕ್ಕಿಂತ ಹೆಚ್ಚಾಗಿ ಆತಂಕ ಮನೆ ಮಾಡಿತ್ತು. ರೇವಣ್ಣನ ತಾಯಿ ಭರಮಮ್ಮ ದುಃಖಿಸಿದ್ದು ಕರುಳು ಹಿಂಡುವಂತಿತ್ತು. ಮನೆಯ ಆಧಾರ ಸ್ತಂಭವೇ ಕುಸಿದಂತೆ ಮನೆ ಬಿಕೋ ಎನ್ನುತ್ತುತ್ತು. ಇಡೀ ಕೇರಿಯೇ ರೇವಣ್ಣನ ಬರ್ಭರ ಹತ್ಯೆಗೆ ಕಣ್ಣೀರಾಗಿತ್ತು.

 ಓಬಳಾಪುರ ಕೂಡ್ಲಿಗಿ ತಾಲೂಕಿನ ಕೊನೆ ಅಂಚಿನ ಹಳ್ಳಿ. ಚಿಕ್ಕ ಜೋಗಿಹಳ್ಳಿಯಿಂದ ಮುಂದೆ ಸಾಗಿದರೆ ಹುರುಳಿಹಾಳ್ ಸಿಗುತ್ತದೆ. ಹುರುಳಿಹಾಳಿಗೆ ಅಂಟಿಕೊಂಡಂತಿರುವ ಓಬಳಾಪುರದ ೧೧೦ ರಷ್ಟು ಮನೆಗಳಿರುವ ಚಿಕ್ಕ ಗ್ರಾಮ. ದಲಿತರ ೫೨, ಲಿಂಗಾಯತ ಒಕ್ಕಲಿಗ ೪೫, ನಾಯಕ ಸಮುದಾಯದ ೪,  ಮುಸ್ಲೀಮರ ೫ ಮನೆಗಳಿರುವ ಹಳ್ಳಿ. ಈ ಊರಿನ ದಲಿತರಲ್ಲಿ ಶಿಕ್ಷಣ ಪಡೆದವರು ಹೆಚ್ಚಿದ್ದಾರೆ. ಎಂಟರಿಂದ ಹತ್ತರಷ್ಟು ಬೇರೆ ಬೇರೆ ವಲಯಗಳಲ್ಲಿ ಉದ್ಯೋಗಸ್ತರೂ ಇದ್ದಾರೆ. ಹೀಗೆ ಶಿಕ್ಷಣ ಪಡೆದು ಸ್ವಾಭಿಮಾನದಿಂದ ಬದುಕುವ ದಲಿತರ ಬಗ್ಗೆ ಮೇಲುಜಾತಿಯವರ ಅಸಹನೆ ಸಹಜವಾಗಿಯೆ ಇತ್ತು.

 ರೇವಣ್ಣ ಬಿಎ ಬಿಎಡ್ ಮಾಡಿಕೊಂಡು ಜಗಲೂರಿನ ಚೈತನ್ಯ ಫೈನಾನ್ಸ್ ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಉತ್ತಮ ಕೆಲಸಗಾರನೆಂಬ ಹೆಗ್ಗಳಿಕೆಯನ್ನೂ ಸಂಸ್ಥೆಯಲ್ಲಿ ಗಳಿಸಿದ್ದ. ಜೀವನ ನಿರ್ವಹಣೆಗೆ ಸಾಕಾಗುವಷ್ಟು ಸಂಬಳವೂ ಇತ್ತು. ತನ್ನ ಜತೆಯೇ ಕೆಲಸ ಮಾಡುತ್ತಿದ್ದ ಮೇಲುಜಾತಿ ಹುಡುಗಿಯೊಂದಿಗೆ ಪ್ರೇಮ ಅಂಕುರಿಸಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವ ಬಗ್ಗೆಯೂ ಇಬ್ಬರೂ ನಿರ್ಧರಿಸಿದ್ದರು. ಮನೆಯಲ್ಲಿಯೂ ರೇವಣ್ಣ ಈ ಹುಡುಗಿಯ ಜತೆಗಿನ ಪ್ರೇಮದ ಬಗ್ಗೆ ಹೇಳಿಕೊಂಡಿದ್ದನು. ಹುಡುಗಿಯ ಫೋಟೋವನ್ನು ತೋರಿಸಿದ್ದನು. ಮನೆಯಲ್ಲಿ ಸಹಜವಾಗಿ ತಾಯಿ ಭರಮಮ್ಮ ‘ದೊಡ್ಡ ಜಾತಿ ಹುಡುಗಿ ಬ್ಯಾಡಪ್ಪ ನಿಮ್ಮ ಅಕ್ಕನ ಮಗಳು ಇದಾಳ ಆಕೀನ ಮದ್ವಿ ಆಗು’ ಎಂದು ಬುದ್ಧಿವಾದ ಹೇಳಿದ್ದಳು. ಈ ಪ್ರೇಮವೇ ರೇವಣ್ಣನ ಜೀವಕ್ಕೆ ಮುಳುವಾಯಿತು ಎನ್ನುವುದು ರೇವಣ್ಣನ ಅಣ್ಣ ತಿಪ್ಪೇಸ್ವಾಮಿಯ ಅಳಲು.

  ಏಪ್ರಿಲ್ ೨೦ ಸೋಮವಾರ ರಾತ್ರಿ ರೇವಣ್ಣ ತನ್ನ ದೊಡ್ಡಪ್ಪನ ಮಗನಾದ ಹಿರಿಯಣ್ಣ ತಿಪ್ಪಣ್ಣನ ಬಳಿ ತಾನು ಒಂದು ಹುಡುಗಿಯನ್ನು ಪ್ರೀತಿಸುವುದಾಗಿಯೂ, ಲಿಂಗಾಯತರ ಹುಡುಗಿಯೆಂತಲೂ, ಆಕೆಯೂ ಮದುವೆಯಾಗಲು ಒತ್ತಾಯಿಸುತ್ತಿದ್ದಾಳೆ, ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾಳೆ ಎಂತಲೂ, ಆಕೆಗೆ ಮದುವೆ ಖಾಯಂ ಆಗಿದೆ ಏನು ಮಾಡುವುದು ಎಂದು ವಿಚಿತ್ರ ಗಲಿಬಿಲಿಯಲ್ಲಿ ಏನೊಂದು ತೋಚದಂತೆ ಹೇಳಿಕೊಂಡಿದ್ದನು. ಇದರ ಆಪಾಯವನ್ನರಿತ ತಿಪ್ಪಣ್ಣ ಆ ಹುಡುಗಿಯನ್ನು ಮದುವೆಯಾಗುವುದು ಬೇಡವೇ ಬೇಡ ಎಂತಲೂ, ಈ ಸಂಬಂಧ ಬೇಕಾದರೆ ಪೋಲಿಸ್ ಕಂಪ್ಲೇಂಟ್ ಬೇಕಾದರೆ ಕೊಡೋಣ ಎಂತಲೂ, ಮುಂದೆ ಕಷ್ಟವೆಂತಲೂ ಬುದ್ದಿವಾದ ಹೇಳಿದ್ದಾರೆ. ತಡ ರಾತ್ರಿಯವರೆಗೂ ಈ ಚರ್ಚೆ ನಡೆದಿದೆ. ಏಪ್ರಿಲ್ ೨೧ ರ ಬೆಳಗ್ಗೆ ತಿಪ್ಪಣ್ಣ ಹೊಲಗೆಲಸಕ್ಕೆ ಹೋಗಿದ್ದಾರೆ, ಇತ್ತ ಕಡೆ ಇದೇ ಗೊಂದಲದಲ್ಲಿ ರೇವಣ್ಣ ಜಗಲೂರಿಗೆ ಡ್ಯೂಟಿಗೆಂದು ಹೋಗಿದ್ದಾನೆ.

  ಏಪ್ರಿಲ್ ೨೧ ರ ಬೆಳಗ್ಗೆ ೮.೩೦ ಕ್ಕೆ ಓಬಳಾಪುರದ ಮನೆ ಬಿಟ್ಟ ರೇವಣ್ಣ ಮತ್ತೆ ಮನೆಯೊಂದಿಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಏಪ್ರಿಲ್ ೨೫ ರ ಶನಿವಾರ ಬೆಳಗ್ಗೆ ೯.೩೦ ಸುಮಾರಿಗೆ ಜಗಲೂರು ಪೋಲಿಸ್ ಸ್ಟೇಷನ್ನಿನಿಂದ ರೇವಣ್ಣನ ಅಣ್ಣ ತಿಪ್ಪೇಸ್ವಾಮಿಗೆ ಫೋನ್ ಬಂದಿದೆ. ತೀರಿಹೋದ ರೇವಣ್ಣನ ಸುದ್ದಿ ತಿಳಿಯುತ್ತಲೂ ಮನೆಯಲ್ಲಿ ದುಃಖ ಮುಗಿಲು ಮುಟ್ಟಿದೆ. ನಂತರ ತಿಪ್ಪೇಸ್ವಾಮಿ ಮೊದಲಾದವರು ದಿಢೀರನೆ ಜಗಲೂರಿಗೆ ದಾವಿಸಿದ್ದಾರೆ. ಜಗಲೂರು ಸಮೀಪದ ಹಿರೆಮಲ್ಲೂರು ಕ್ರಾಸಿನ ಹೊಲವೊಂದರ ಬದುವಿನಲ್ಲಿ ದೇಹವಿತ್ತು. ರೇವಣ್ಣನ ದೇಹ ಊದಿಕೊಂಡು ನೋಡುವಂತಿರಲಿಲ್ಲವಂತೆ. ಆತ ತೊಟ್ಟ ಷರ್ಟು ಪ್ಯಾಂಟಿನ ಮೇಲೆ ರೇವಣ್ಣ ಎಂದು ಅಣ್ಣ ತಿಪ್ಪೇಸ್ವಾಮಿ ಗುರುತಿಸಿದ್ದಾರೆ. ಕಾಲುಗಳನ್ನು ಕತ್ತರಿಸಿದ್ದರು, ಮುಖವನ್ನು ಖಜಂ ಆಗುವಂತೆ ಹೊಡೆಯಲಾಗಿತ್ತು, ದೇಹದ ಮೇಲೆ ಅಸ್ತ್ರಗಳಿಂದ ಕೊಯ್ದ ಗುರುತುಗಳಿದ್ದವು. ರಕ್ತಮಯವಾದ ದೇಹ ವಾಸನೆ ಬರತೊಡಗಿತ್ತು ಎಂದು ತಿಪ್ಪೇಸ್ವಾಮಿ ಹೇಳುತ್ತಾರೆ. ಅಂತೆಯೇ ಡೆಡ್ ಬಾಡಿಯ ಹತ್ತಿರ ಪೆನ್ನು ಪೇಪರು ಮೊಬೈಲು ವಿಷಯ ಬಾಟಲಿ ಇತ್ತೆಂದು ಪೋಲಿಸರು ತೋರಿಸಿದ್ದಾಗಿ ತಿಪ್ಪೇಸ್ವಾಮಿ ಹೇಳಿದರು. ಜಗಲೂರು ಸರಕಾರಿ ಆಸ್ಪತ್ರೆಯಲ್ಲಿ ಪೋಷ್ಟ್ ಮಾರ್ಟಮ್ ಆಗಿದೆ. ನಂತರ ಅದೇ ದಿನ ಏಪ್ರಿಲ್ ೨೫ ರ ಶನಿವಾರ ರಾತ್ರಿ ೧ ಗಂಟೆಯ ಸುಮಾರಿಗೆ ದೇಹವನ್ನು ಓಬಳಾಪುರದಲ್ಲಿ ಮಣ್ಣು ಮಾಡಿದ್ದಾರೆ. ಪೋಷ್ಟ್ ಮಾರ್ಟಮ್ ರಿಪೋರ್ಟ ಇನ್ನೂ ಬಂದಿಲ್ಲ ಎನ್ನುವುದು ಮನೆಯವರು ನೀಡಿದ ಮಾಹಿತಿ.
 ಈ ಮಧ್ಯೆ ರೇವಣ್ಣನ ಸಂಬಂಧಿ ತಿಪ್ಪಣ್ಣನಿಗೆ (೯೯೬೪೬೦೦೯೨೯ ನಂಬರಿಗೆ) ಪ್ರಿಯತಮೆಯ ಮಾವ ಎಂದು ಹೇಳಿಕೊಂಡವರೊಬ್ಬರು ಏಪ್ರಿಲ್ ೨೧ ರ ಮಂಗಳವಾರ ರಾತ್ರಿ ೮ ಗಂಟೆಯ ಸುಮಾರಿಗೆ ಫೋನ್ ಮಾಡಿ ‘ನಮ್ಮ ಹುಡುಗಿಗೆ ಏಪ್ರಿಲ್ ೨೩ ರಂದು ಮದುವೆ ಇದೆ, ನಿಮ್ಮ ಹುಡುಗನನ್ನು ಒಂದೆರಡು ದಿನಗಳ ಕಾಲ ಈ ಕಡೆ (ಜಗಲೂರು) ಬಿಡಬೇಡಿ, ಹಿಂದೆ ಏನೋ ನಡೆದಿದೆ ಆದದ್ದನ್ನು ಮರೆಯಲು ನಿಮ್ಮ ಹುಡುಗನಿಗೆ ಹೇಳಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಭಯಗೊಂಡ ತಿಪ್ಪಣ್ಣ ರೇವಣ್ಣನಿಗೆ ಬುದ್ದಿ ಮಾತು ಹೇಳುವುದಾಗಿಯೂ, ಆ ತರಹದ ಯಾವುದೇ ತೊಂದರೆಯಾಗದಂತೆ ನಮ್ಮ ಹುಡುಗನಿಗೆ ತಿಳಿ ಹೇಳುತ್ತೇವೆ,  ನಮ್ಮ ಹುಡುಗನನ್ನು ನಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುತ್ತೇವೆ ಎಂದು ತಿಪ್ಪಣ್ಣ ಹೇಳಿದ್ದಾರೆ.

 ಇದನ್ನೆಲ್ಲಾ ನೋಡಿದರೆ ಹುಡುಗಿಯ ಕಡೆಯವರೆ ರೇವಣ್ಣನನ್ನು ಕೊಲೆ ಮಾಡಿದ್ದಾರೆ ಅಥವಾ ಮಾಡಿಸಿದ್ದಾರೆ ಎನ್ನುವ ಅನುಮಾನ ಓಬಳಾಪುರ ಕೇರಿಯ ಜನರಲ್ಲಿ ದಟ್ಟವಾಗಿದೆ. ರೇವಣ್ಣನ ಸಾವಿನ ಆಚೀಚಿನ ಘಟನೆಗಳನ್ನು ನೋಡಿದರೂ ಈ ಅನುಮಾನ ಸಹಜವಾಗಿ ಬರುತ್ತದೆ. ಹಾಗಾಗಿ ರೇವಣ್ಣನ ಕೊಲೆಯ ಬಗ್ಗೆ ತನಿಕೆಯಾಗಬೇಕು, ಕೊಲೆಗಾರರು ಯಾರೆಂದು ತಿಳಿಯಬೇಕು, ಅವರಿಗೆ ಶಿಕ್ಷೆಯಾಗಬೇಕು ಎನ್ನುವುದು ರೇವಣ್ಣನ ಮನೆಯವರ ಒಕ್ಕೊರಲ ಧ್ವನಿ. ‘ನನ್ನ ಮಗ ಬಾಳ ನೋವುಂಡು ಸತ್ತಾನ್ರಿ, ಆ ಮಗ ಸಾಯೋ ಮುಂದೆ ಎಷ್ಟು ನೋವುಂಡುತ್ತೋ..’ ಎಂದು ರೇವಣ್ಣನ ತಾಯಿ ನೋಯುತ್ತಾ ಹೇಳುತ್ತಾರೆ.

 ರೇವಣ್ಣ ಬಿಎ ಬಿಎಡ್ ಮಾಡಿದ ಪದವೀದರ. ಆತನ ದಾಖಲಾತಿಗಳನ್ನು ಗಮನಿಸಿದರೆ ಬುದ್ದಿವಂತ ಕೂಡ. ರೇವಣ್ಣನ ಅಣ್ಣ ತಿಪ್ಪೇಸ್ವಾಮಿಯೂ ಬಿ.ಎ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಿತ. ಇನ್ನೊಬ್ಬ ಅಣ್ಣ ಮಲಿಯಪ್ಪ ಅನಕ್ಷರಸ್ತ. ಇಬ್ಬರು ಅಣ್ಣಂದಿರಿಗೂ ಮದುವೆಯಾಗಿ ಮಕ್ಕಳಿವೆ. ಈ ಕುಟುಂಬಕ್ಕೆ ಆರ್ಥಿಕ ಭದ್ರತೆಯೇ ರೇವಣ್ಣನಾಗಿದ್ದ. ಅಣ್ಣಂದಿರು ತುಂಡು ಭೂಮಿಯನ್ನು ಉಳುಮೆ ಮಾಡಿಕೊಂಡು ಕೃಷಿ ಕೂಲಿ ಮಾಡಿಕೊಂಡಿದ್ದಾರೆ. ರೇವಣ್ಣನು ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಓಬಳಾಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಮನೆಗೆ ಆಧಾರವಾಗಿದ್ದ ಜೋತಿಯೇ ಆರಿದಂತೆ ಮನೆಯಲ್ಲಿ ಕತ್ತಲು ಆವರಿಸಿದೆ. ಈ ಕೊಲೆಯನ್ನು ನೋಡಿದರೆ ಮೇಲುಜಾತಿಯ ಅಟ್ಟಹಾಸ ಎದ್ದು ಕಾಣುತ್ತದೆ. ಇವರ ಪ್ರಭಾವಕ್ಕೆ ಒಳಗಾಗಿ ರೇವಣ್ಣನ ಕೊಲೆ ಮುಚ್ಚಿ ಹೋಗುವ ಮುಂಚೆ ದಲಿತ ಸಂಘಟನೆಗಳು ಹೋರಾಟಕ್ಕೆ ಇಳಿಯಬೇಕಿದೆ. ಈ ಕೇಸಿನ ತನಿಕೆಯಾಗಬೇಕು. ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು

Tuesday, April 21, 2015

ಎಪ್ರಿಲ್ 26 ಮುದೋಳ : ಸಮಾನತೆಯ ಹರಿಕಾರರ ನೆನಪೋತ್ಸವ

ವಿಭಿನ್ನ ಧೃವಗಳ ವಿಶಿಷ್ಟ ಸಂಘರ್ಷ - ಗಾಂಧಿ ಮತ್ತು ಅಂಬೇಡ್ಕರ್

ಗೈಲ್ ಓಮ್ವೆಟ್

ಅನುವಾದ : ನಾ ದಿವಾಕರ
ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸಂಘರ್ಷ ಚಾರಿತ್ರಿಕವಾದದ್ದು. ೧೯೩೦-೩೨ರಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನ ಸಂದರ್ಭದಲ್ಲಿ ಈ ಸಂಘರ್ಷದ ಆರಂಭವನ್ನು ಗುರುತಿಸಬಹುದು.  ಮೊದಲನೆಯ ದುಂಡುಮೇಜಿನ ಪರಿಷತ್ತಿನ ಸಭೆಗೆ ಅಂಬೇಡ್ಕರ್ ದಲಿತರ ಅಥವಾ ಅಸ್ಪೃಶ್ಯರ ಪ್ರತಿನಿಧಿಯಾಗಿ ಹಾಜರಾಗಿದ್ದರು. ಎರಡನೆಯ ಪರಿಷತ್ತಿಗೆ ಹಾಜರಾಗಲು ನಿರ್ಧರಿಸಿದ ಗಾಂಧಿ ಅಸ್ಪೃಶ್ಯರು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿರುವುದರಿಂದ ತಾವೇ ಅಸ್ಪೃಶ್ಯರ ಪ್ರತಿನಿಧಿ ಎಂದು ಪ್ರತಿಪಾದಿಸಿದ್ದರು.  ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಅಸ್ಪೃಶ್ಯರು ಹಿಂದೂ ಸಮುದಾಯದ ಭಾಗವಾಗಿರಲಿಲ್ಲ ಬದಲಾಗಿ ಹಿಂದೂ ಸಮಾಜದಿಂದ ಹೊರತಾದ ಒಂದು ಭಾಗವಾಗಿದ್ದರು. ವಿಶಿಷ್ಟವಾದ ಶೋಷಣೆಗೊಳಗಾಗಿದ್ದರು. ದೇಶದ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್ ಪಕ್ಷದ (ಅಂದರೆ ಮೇಲ್ಜಾತಿಗಳ) ಅಧಿಪತ್ಯವನ್ನು ಅಸ್ಪೃಶ್ಯರು ಸ್ವಾಗತಿಸಿದ್ದರೂ ಅವರಿಗೆ ರಕ್ಷಣೆ ಅಗತ್ಯವಾಗಿತ್ತು.


ಸಾರ್ವತ್ರಿಕ ಮತದಾನ ವ್ಯವಸ್ಥೆಯಡಿ ಮೀಸಲು ಕ್ಷೇತ್ರಗಳು ಲಭ್ಯವಾದರೆ ಸಾಕು ಎಂದು ಅಂಬೇಡ್ಕರ್ ಆರಂಭದಲ್ಲಿ ಭಾವಿಸಿದ್ದರು. ಆದರೆ ಪರಿಷತ್ತಿನ ಸಭೆಯಲ್ಲಿ ಸಾರ್ವತ್ರಿಕ ಮತದಾನವನ್ನು ಒದಗಿಸಲಿಲ್ಲ. ಬದಲಾಗಿ ಪ್ರತ್ಯೇಕ ಮತದಾರರ ವ್ಯವಸ್ಥೆಯನ್ನು ಕುರಿತು ಚರ್ಚೆ ನಡೆಸಲಾಯಿತು.  ಪ್ರತ್ಯೇಕ ಮತದಾನವನ್ನು ಮುಸ್ಲಿಮರಿಗೆ ಒದಗಿಸಲು ಗಾಂಧೀಜಿ ಸಿದ್ಧರಾಗಿದ್ದರು. ಮುಸ್ಲಿಮರ ಪ್ರತ್ಯೇಕ ಸಾಮುದಾಯಿಕ ಅಸ್ಮಿತೆಯನ್ನು ಗಾಂಧೀಜಿ ಒಪ್ಪಿಕೊಂಡಿದ್ದರು.  ಆದರೆ ದಲಿತರ ಅಸ್ಮಿತೆಯನ್ನು ಗಾಂಧೀಜಿ ಲೆಕ್ಕಿಸಲಿಲ್ಲ. ರಾಂಸೇ ಮೆಕ್‌ಡೊನಾಲ್ಡ್ ತೀರ್ಪು ದಲಿತರಿಗೆ ಪ್ರತ್ಯೇಕ ಮತದಾನದ ಸೌಲಭ್ಯ ನೀಡಿದಾಗ ಗಾಂಧೀಜಿ ಆಮರಣಾಂತ ಉಪವಾಸ ಹೂಡುವ ಬೆದರಿಕೆ ಹಾಕಿದ್ದರು. ಇದು ಅಂಬೇಡ್ಕರ್ ಮತ್ತು ಗಾಂಧೀಜಿನ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿತ್ತು.

ಅಂಬೇಡ್ಕರ್ ಅವರಿಗೆ ಸಮಸ್ಯೆ ಸರಳವಾಗಿತ್ತು.  ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಒಂದು ವೇಳೆ ಗಾಂಧಿ ಮೃತಪಟ್ಟರೆ ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ವಿರುದ್ಧ ಆಕ್ರೋಶ ಭುಗಿಲೇಳುತ್ತಿತ್ತು. ದಲಿತರ ಮಾರಣಹೋಮ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಶರಣಾಗಿದ್ದರು.  ನಂತರದ ಪೂನಾ ಒಪ್ಪಂದದಲ್ಲಿ ದಲಿತರಿಗೆ ಮೀಸಲು ಕ್ಷೇತ್ರ ಒದಗಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದು ದಲಿತರ ನಿರೀಕ್ಷೆಯನ್ನು ಮೀರಿದ ಕೊಡುಗೆಯಾಗಿತ್ತು ಆದರೆ ಮೇಲ್ಜಾತಿ ಹಿಂದೂಗಳ ನಿಯಂತ್ರಣದಲ್ಲಿದ್ದ ಮತದಾನದ ಕ್ಷೇತ್ರಗಳನ್ನೇ ದಲಿತರಿಗೆ ಮೀಸಲಾಗಿರಿಸಲಾಗಿತ್ತು.

ಬಹಳ ವರ್ಷಗಳ ನಂತರ ಅಂಬೇಡ್ಕರ್  ಅಸ್ಪೃಶ್ಯರಿಗೆ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂಬ ಪ್ರಬಂಧದಲ್ಲಿ ಹೀಗೆ ಬರೆದಿದ್ದರು :  ಉಪವಾಸ ಸತ್ಯಾಗ್ರಹ ಮಾಡುವುದು ಉದಾತ್ತತೆಯ ಸಂಕೇತವೇನೂ ಅಲ್ಲ.  ಈ ಸತ್ಯಾಗ್ರಹ ದಲಿತರಿಗೆ ಪ್ರಯೋಜನವಾಗಲಿ ಎಂದು ಮಾಡಿದ್ದಲ್ಲ. ಒಂದು ಅಸಹಾಯಕ ಜನಸಮುದಾಯ ತಮ್ಮ ಸಾಂವಿಧಾನಿಕ ರಕ್ಷಣೆಗಳನ್ನು ಸ್ವ ಇಚ್ಚೆಯಿಂದ ಬಿಟ್ಟುಕೊಡುವಂತೆ ಮಾಡಲು ಒತ್ತಡ ಹೇರಲು ಗಾಂಧಿ ಅನುಸರಿಸಿದ ಮಾರ್ಗ ಇದೆ. ಹಾಗಾಗಿ ಇದು ದಲಿತ ವಿರೋಧಿ ಕ್ರಮ.  ಮತದಾನದ ಕ್ಷೇತ್ರಗಳನ್ನು ಮೀಸಲಿರಿಸುವ ವ್ಯವಸ್ಥೆ ಅಪ್ರಯೋಜಕ ಎಂದು ಅಂಬೇಡ್ಕರ್ ವಾದಿಸಿದ್ದರು.  ನಂತರ ಹಲವು ವರ್ಷಗಳ ಕಾಲ ರಾಜಕೀಯ ಪ್ರಾತಿನಿಧ್ಯ ವ್ಯವಸ್ಥೆ ಬೇರೂರಿತ್ತು. ಅಂಬೇಡ್ಕರ್ ಪ್ರತ್ಯೇಕ ಮತದಾನ ವ್ಯವಸ್ಥೆಗಾಗಿ ಆಗ್ರಹಿಸುತ್ತಲೇ ಇದ್ದರು. ಆದರೆ ಸಫಲವಾಗಲಿಲ್ಲ. ತಮ್ಮ ಜೀವನದ ಅಂತ್ಯದ ವೇಳೆಗೆ, ೧೯೫೩ರಲ್ಲಿ ಬರೆದ ಭಾಷಾವಾರು ರಾಜ್ಯಗಳನ್ನು ಕುರಿತ ಚಿಂತನೆ ಎಂಬ ಕೃತಿಯ ರಚನೆಯ ಸಂದರ್ಭದಲ್ಲಿ ತಮ್ಮ ಈ ಬೇಡಿಕೆಯನ್ನೂ ಬಿಟ್ಟುಕೊಟ್ಟ ಅಂಬೇಡ್ಕರ್ ಅನುಪಾತ ಆಧಾರಿತ ಪ್ರಾತಿನಿಧ್ಯಕ್ಕಾಗಿ ಆಗ್ರಹಿಸಲಾರಂಭಿಸಿದರು. ಆದರೆ ಪೂನಾ ಒಪ್ಪಂದ ಸೋಲಿನ ಕಹಿ ನೆನಪಾಗಿಯೇ ಉಳಿಯಿತು. ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಗಾಂಧೀಜಿಯನ್ನು ಅಸ್ಪೃಶ್ಯರ ಪರಮ ವೈರಿ ಎಂದೇ ಪರಿಗಣಿಸಲಾರಂಭಿಸಿದರು.

ತಮ್ಮ ಉಪವಾಸ ಸತ್ಯಾಗ್ರಹದ ನಂತರ ಗಾಂಧಿ ಹರಿಜನ ಸೇವಕ ಸಂಘ ಸ್ಥಾಪಿಸಿದರು. ಇಲ್ಲಿಯೂ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ದಲಿತರಿಗೆ ನಾಗರಿಕ ಹಕ್ಕುಗಳನ್ನು ಒದಗಿಸಲು ಶ್ರಮಿಸುವ ವಿಶಾಲ ತಳಹದಿಯ ನಾಗರಿಕ ಹಕ್ಕುಗಳ ಸಂಘಟನೆ ಸ್ಥಾಪಿಸಲು ಅಂಬೇಡ್ಕರ್ ಆಗ್ರಹಿಸಿದ್ದರು. ಸಾರ್ವಜನಿಕ ಸ್ಥಳಗಳಿಗೆ ದಲಿತರ ಪ್ರವೇಶ, ನಾಗರಿಕ ಹಕ್ಕುಗಳ ಪ್ರತಿಪಾದನೆ ಅಂಬೇಡ್ಕರ್ ಉದ್ದೇಶವಾಗಿತ್ತು.ಈ ಸಂಘಟನೆ ದಲಿತರ ನಾಯಕತ್ವದಲ್ಲೇ ಮುನ್ನಡೆಯಬೇಕು ಎಂದು ಅಂಬೇಡ್ಕರ್ ಆಶಯವಾಗಿತ್ತು. ಆದರೆ ಗಾಂಧೀಜಿ ಅಸ್ಪೃಶ್ಯರ ಅಭ್ಯುದಯಕ್ಕಾಗಿ ಶ್ರಮಿಸುವ ಮೇಲ್ಜಾತಿಯವರ ನೇತೃತ್ವದಲ್ಲಿ ಸಂಘಟನೆಯನ್ನು ಸ್ಥಾಪಿಸಲು ಯೋಚಿಸಿದ್ದರು.  ಅಸ್ಪೃಶ್ಯತೆ ಹಿಂದೂ ಧರ್ಮದ ಒಂದು ಪಾಪಕರ್ಮವೇ ಹೊರತು ಹಿಂದೂಧರ್ಮದ ನಿಯಮವಲ್ಲ, ಅಸ್ಪೃಶ್ಯತೆಯನ್ನು ನಿವಾರಿಸಿ ಹಿಂದೂಗಳು ಪಶ್ಚಾತ್ತಾಪ ಪಡುವ ಮೂಲಕ ಇದನ್ನು ನಿವಾರಿಸಬಹುದು, ಶುದ್ಧೀಕರಣದ ಮೂಲಕ ದಲಿತರ ಅಭ್ಯುದಯಕ್ಕಾಗಿ ಶ್ರಮಿಸಬಹುದು ಎಂಬ ಗಾಂಧೀಜಿಯ ಪ್ರತಿಪಾದನೆಯೇ ಈ ಧೋರಣೆಗೆ ಕಾರಣವಾಗಿತ್ತು.

ಕೊಳೆಗೇರಿಗಳನ್ನು ಶುಚಿಗೊಳಿಸುವುದು, ಸಾರಾಯಿ ಸೇವನೆಯ ವಿರುದ್ಧ ಪ್ರಚಾರ ಮಾಡುವುದು, ಸಸ್ಯಾಹಾರಿ ಆಹಾರ ಪದ್ಧತಿಯನ್ನು ಪ್ರಚುರಪಡಿಸುವುದುಇವೇ ಮುಂತಾದ ಚಟುವಟಿಕೆಗಳಲ್ಲಿ ಗಾಂಧಿ ತೊಡಗಿದ್ದರು.  ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಇವೆಲ್ಲವೂ ಅಪ್ರಯೋಜಕವಾಗಿದ್ದವು.  ಹರಿಜನ ಸೇವಕ ಸಂಘವನ್ನು ಉಗ್ರವಾಗಿ ಖಂಡಿಸಿದ್ದ ಅಂಬೇಡ್ಕರ್   ಸಂಘದ ಕಾರ್ಯಚಟುವಟಿಕೆಗಳು ಯಾವುದೇ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ.  ಇದು ಯಾರ ಊಹೆಗೂ ನಿಲುಕದಂತಹ ಚಿಂತನೆಗಳು. ಅಸ್ಪಶ್ಯರಿಗೆ ಅಗತ್ಯವಾಗಿರುವ ಬೆಂಬಲ ಮತ್ತು ಸಹಾಯದ ಕಲ್ಪನೆಗಳನ್ನೇ ಇದು ನಿರಾಕರಿಸುತ್ತದೆ.   ಸಂಘವು ತನ್ನ ಆಡಳಿತ ವ್ಯವಸ್ಥೆಯಲ್ಲಿ ಅಸ್ಪೃಶ್ಯರನ್ನು ಒಳಗೊಳ್ಳುವುದೇ ಇಲ್ಲ.  ಅಸ್ಪೃಶ್ಯರು ಇನ್ನೂ ಭಿಕ್ಷುಕರಲ್ಲ, ದಾನ ಧರ್ಮಕ್ಕಾಗಿ ಹಾತೊರೆಯುವವರಲ್ಲ ಎಂದು ಹೇಳುತ್ತಾ  ಅಸ್ಪೃಶ್ಯರು ಹರಿಜನ ಸೇವಕ ಸಂಘವನ್ನು ದುರುದ್ದೇಶಪೂರಿತವಾಗಿ ಸ್ಥಾಪಿಸಲಾದ ಒಂದು ವಿದೇಶಿ ಸಂಘಟನೆ ಎಂದು ಪರಿಗಣಿಸುತ್ತಾರೆ, ಹಿಂದೂ ಮಾಲೀಕರ ಬಗ್ಗೆ ಅಸ್ಪೃಶ್ಯರಲ್ಲಿ ಗುಲಾಮಗಿರಿ ಮನೋಭಾವ ಬೆಳೆಸುವ ಉದ್ದೇಶದಿಂದಲೇ ಈ ಸಂಘವನ್ನು ಸ್ಥಾಪಿಸಲಾಗಿದೆ  ಎಂದು ಹೇಳುತ್ತಾರೆ. ಇದು ಪಿತೃಪ್ರಧಾನ ವ್ಯವಸ್ಥೆಯ ಮೂಲ ಉದ್ದೇಶ ಎಂದು ಅಂಬೇಡ್ಕರ್ ಪ್ರತಿಪಾದಿಸುತ್ತಾರೆ.

ಹರಿಜನ ಸೇವಕ ಸಂಘವನ್ನು ಕುರಿತ ಚರ್ಚೆಯ ಹಿನ್ನೆಲೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ಮೂಲ ಧ್ಯೇಯಗಳಲ್ಲಿನ ಭಿನ್ನ ಧೋರಣೆಯನ್ನು ಗುರುತಿಸಬಹುದು.  ಅಂಬೇಡ್ಕರ್ ಜಾತಿ ವಿನಾಶವನ್ನು ಬಯಸುತ್ತಿದ್ದರು.  ಅಸ್ಪೃಶ್ಯತೆಯೇ ಜಾತಿಯ ಮೂಲ ಎಂದು ಪರಿಗಣಿಸಿದ್ದರು. ಜಾತಿಯನ್ನು ನಿರ್ಮೂಲ ಮಾಡದೆ ಯಾವುದೇ ಪರಿಹಾರ, ಜಾಗೃತಿ, ಮುನ್ನಡೆ ಅಥವಾ ನಿವಾರಣೆ ಸಾಧ್ಯವಿಲ್ಲ ಎಂದು ಭಾವಿಸಿದ್ದರು.  ಆದರೆ ಗಾಂಧಿ ಒಬ್ಬ ಕಟ್ಟಾ ಹಿಂದೂ ಮಾತ್ರವಲ್ಲದೆ ವರ್ಣಾಶ್ರಮ ಧರ್ಮದ ತಾತ್ವಿಕತೆಯಲ್ಲಿ ನಂಬಿಕೆ ಇದ್ದವರಾಗಿದ್ದರು.  ಜಾತಿ ವ್ಯವಸ್ಥೆಯ ದಯಾಮಯ ಧೋರಣೆಯನ್ನು ಮತ್ತು ಈ ಧೋರಣೆ ಸೃಷ್ಟಿಸುವ ಐಕಮತ್ಯವನ್ನು, ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾತಿ ಶ್ರೇಣೀಕರಣವನ್ನು ತೊಡೆದುಹಾಕುವುದರ ಮೂಲಕ ಮತ್ತು ಅಸ್ಪೃಶ್ಯತೆಯನ್ನು ಅಳಿಸಿಹಾಕುವ ಮೂಲಕ ಸಾಧಿಸಬಹುದು ಎಂದು ಭಾವಿಸಿದ್ದರು.  ಇದು ಗಾಂಧಿಯ ಸುಧಾರಣಾವಾದದ ಮೂಲ ತಿರುಳು ಆಗಿತ್ತು.

ಈ ಸಂಘರ್ಷದ ನಂತರದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಧರ್ಮವನ್ನು ಕುರಿತಂತೆ ಸಂಘರ್ಷ ಏರ್ಪಟ್ಟಿತ್ತು.  ಅಂಬೇಡ್ಕರ್ ಹಿಂದೂ ಧರ್ಮದ ಭ್ರಾಂತಿಯಿಂದ ಮುಕ್ತರಾಗಿದ್ದರು. ಮತಾಂತರದ ಬಗ್ಗೆ ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ್ದರು. ೧೯೩೬ರಲ್ಲಿ ಇಯೋಲಾದಲ್ಲಿ ಮಾತನಾಡುತ್ತಾ ಅಂಬೇಡ್ಕರ್  ನಾನು ಹಿಂದೂ ಆಗಿ ಜನಿಸಿ ಅಸ್ಪೃಶ್ಯತೆಯ ಕರಾಳ ಪರಿಣಾಮಗಳನ್ನು ಅನುಭವಿಸಿದ್ದೇನೆ, ಆದರೆ ನಾನು ಹಿಂದೂ ಆಗಿ ಸಾಯುವುದಿಲ್ಲ  ಎಂದು ಘೋಷಿಸಿದರು. ಎರಡು ದಿನಗಳ ನಂತರ ಗಾಂಧಿ ಒಂದು ಪತ್ರಿಕಾಗೋಷ್ಠಿ ನಡೆಸಿ ಅಂಬೇಡ್ಕರ್ ಅವರ ನಿರ್ಧಾರವನ್ನು ನಂಬಲಾಗದ ನಿಲುವು ಎಂದು ಬಣ್ಣಿಸಿದ್ದರು.  ಧರ್ಮ ಎನ್ನುವುದು ಮನಬಂದಂತೆ ಬದಲಾಯಿಸಲ್ಪಡುವ ಒಂದು ಮನೆ ಅಥವಾ ಗಡಿಯಾರ ಅಲ್ಲ ಎಂದು ಗಾಂಧಿ ಹೇಳಿದ್ದರು. ೧೯೩೬ರ ಆಗಸ್ಟ್ ೨೨ರಂದು ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧಿ  ಲಕ್ಷಾಂತರ ಮೂಕ ಅಮಾಯಕ ಹರಿಜನರನ್ನು ಚರಾಸ್ತಿಗಳಂತೆ ಮತ್ತೊಂದು ರೂಪಕ್ಕೆ ಪರಿವರ್ತಿಸುವ ರೀತಿಯಲ್ಲಿ ಅಂಬೇಡ್ಕರ್ ಮತ್ತು ಮೇಲ್ಜಾತಿಯವರ ನಡುವಿನ ಚರ್ಚೆ ಪರ್ಯವಸಾನ ಹೊಂದಿದೆ  ಎಂದು ಹೇಳಿದ್ದರು. ಇದು ಗಾಂಧೀಜಿಯ ಮಾತಿನ ವಿಶಿಷ್ಟ ವೈಖರಿಯೂ ಆಗಿತ್ತು. ಈ ವಿಚಾರದಲ್ಲಿ ಅಂಬೇಡ್ಕರ್ ಅವರನ್ನು ಬೆಂಬಲಿಸಿದ ಕೋಟ್ಯಂತರ ದಲಿತರ ಆಕ್ರೋಶ ಮತ್ತು ಹತಾಶೆಯನ್ನು ಗ್ರಹಿಸುವಲ್ಲಿ ಗಾಂಧಿ ವಿಫಲರಾಗಿದ್ದರು.

ಈ ವಾದ ಪ್ರತಿವಾದದ ಹಿನ್ನೆಲೆಯಲ್ಲಿ ಮಾನವೀಯತೆಯ ವಿಭಿನ್ನ ಧೋರಣೆಗಳನ್ನು ಗುರುತಿಸಬಹುದು. ಗಾಂಧಿ ಅಸ್ಪೃಶ್ಯರನ್ನು ಒಂದು ನಿರ್ದಿಷ್ಟ ಸಮುದಾಯದಲ್ಲಿ ಜನಿಸಿದ ವ್ಯಕ್ತಿಗಳೆಂದು ಭಾವಿಸಲೇ ಇಲ್ಲ. ಬದಲಾಗಿ ಅಸ್ಪೃಶ್ಯರನ್ನು ಹಿಂದೂ ಸಮಾಜದ ಯೋಚನಾ ಶಕ್ತಿ ಇಲ್ಲದ ಒಂದು ಭಾಗ ಎಂದೇ ಪರಿಗಣಿಸಿದ್ದರು.  ಹಿಂದೂ ಧರ್ಮ ಅಸ್ಪ್ಶಶ್ಯರ ಸ್ವಾಭಾವಿಕ ಧರ್ಮವಾಗಿರುವುದರಿಂದ ಅದನ್ನು ಸುಧಾರಿಸುವುದೇ ಪ್ರಧಾನ ಧ್ಯೇಯವಾಗಿತ್ತೇ ಹೊರತು, ಧರ್ಮವನ್ನು ತ್ಯಜಿಸುವುದು ಮುಖ್ಯವಾಗಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅಂಬೇಡ್ಕರ್ ವ್ಯಕ್ತಿಯನ್ನು ತಮ್ಮ ಚಿಂತನಾ ಕ್ರಮದ ಕೇಂದ್ರ ಬಿಂದುವನ್ನಾಗಿ ಪರಿಗಣಿಸಿದ್ದರು.  ಒಂದು ಹೊಸ ನೈಜ ಧರ್ಮದ ಆಶ್ರಯವಿಲ್ಲದೆ ಅಸ್ಪೃಶ್ಯರ ಮುನ್ನಡೆ, ಪ್ರಗತಿ, ಬೆಳವಣಿಗೆ ಅಸಾಧ್ಯ ಎಂದೇ ಭಾವಿಸಿದ್ದರು.

ಅಂಬೇಡ್ಕರ್ ಮತ್ತು ಗಾಂಧಿಯ ನಡುವಿನ ಈ ಸಂಘರ್ಷ ಇಲ್ಲಿಗೇ ಮುಕ್ತಾಯವಾಗಲಿಲ್ಲ. ಭಾರತದ ಅಭಿವೃದ್ಧಿ ಪಥವನ್ನು ಕುರಿತಂತೆ ಇಬ್ಬರ ನಡುವೆ ತೀವ್ರವಾದ ಭಿನ್ನಾಭಿಪ್ರಾಯಗಳು ತಲೆದೋರಿದ್ದವು.  ಗಾಂಧೀಜಿ ಗ್ರಾಮ ಕೇಂದ್ರಿತ ಅಭಿವೃದ್ಧಿ ಮಾದರಿಯನ್ನು ಪ್ರತಿಪಾದಿಸಿದರು. ಈ ಮಾದರಿಯಲ್ಲಿ ಕೈಗಾರಿಕೀಕರಣದ ವ್ಯಕ್ತಿಗತ ಧೋರಣೆಯನ್ನು ತ್ಯಜಿಸಿ, ಸೌಹಾರ್ದಯುತ ಸಾಂಪ್ರದಾಯಿಕ ಗ್ರಾಮೀಣ ಸಾಮುದಾಯಿಕ ಪ್ರಗತಿಯನ್ನು ತಮ್ಮ ರಾಮರಾಜ್ಯದ ಪರಿಕಲ್ಪನೆಯಲ್ಲಿ ಪ್ರತಿಪಾದಿಸಿದರು. ವ್ಯತಿರಿಕ್ತವಾಗಿ ಅಂಬೇಡ್ಕರ್ ಬಡತನವನ್ನು ನಿವಾರಿಸಲು ಆರ್ಥಿಕ ಅಭಿವೃದ್ಧಿ, ಕೈಗಾರಿಕೀಕರಣವೇ ಮೂಲ ಆಧಾರ ಎಂದು ಭಾವಿಸಿದ್ದರು.  ಈ ವ್ಯವಸ್ಥೆ ಕಾರ್ಮಿಕ ಸ್ನೇಹಿಯಾಗಿದ್ದು ಬಂಡವಾಳ ವ್ಯವಸ್ಥೆಯಿಂದ ಹೊರತಾದ ಪ್ರಭುತ್ವ ಸಮಾಜವಾದ ವ್ಯವಸ್ಥೆಯಾಗಿರಬೇಕು ಎಂದು ಅಂಬೇಡ್ಕರ್ ಬಯಸಿದ್ದರು. (ನಂತರದಲ್ಲಿ ಅಂಬೇಡ್ಕರ್ ಕೈಗಾರಿಕೆಯ ಖಾಸಗಿ ಒಡೆತನವನ್ನು ಸ್ವೀಕರಿಸಿದ್ದೂ ಹೌದು). ತಮ್ಮ ಜೀವನದ ಅಂತ್ಯದ ವೇಳೆಯಲ್ಲಿ ಅಂಬೇಡ್ಕರ್ ಒಬ್ಬ ಪ್ರಜಾತಂತ್ರವಾದಿ ಸಮಾಜವಾದಿಯಾಗಿದ್ದರು. ಅವರ ದೃಷ್ಟಿಯಲ್ಲಿ ಗ್ರಾಮಗಳು ಆದರ್ಶಪ್ರಾಯವಾಗಿರದೆ, ಹಿಂದುಳಿಯುವಿಕೆಯ, ಸಂಪ್ರದಾಯದ ಮತ್ತು ಬಂಧನದ ಕೇಂದ್ರಗಳಾಗಿದ್ದವು. ಅಸ್ಪೃಶ್ಯರು ಗ್ರಾಮಗಳನ್ನು ತೊರೆದು ಭಾರತ ತನ್ನ ಗ್ರಾಮೀಣ ಹಿನ್ನೆಲೆಯನ್ನು ನಿರಾಕರಿಸಬೇಕು ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು.

ಒಟ್ಟಾರೆ ಹೇಳುವುದಾದರೆ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ರಾಜಿಯಾಗಲಾರದಂತಹ ಭಿನ್ನಾಭಿಪ್ರಾಯಗಳು ಇದ್ದವು. ಭಾರತೀಯ ಇತಿಹಾಸದ ಎರಡು ಮಹಾನ್ ನಾಯಕರು ಪರಸ್ಪರ ಸೆಣಸಾಡುತ್ತಲೇ ಮಾನವತೆ ಮತ್ತು ಸಮಾಜಕ್ಕೆ ಪರ್ಯಾಯ ಮಾರ್ಗಗಳನ್ನು ಒದಗಿಸಿದ್ದರು. ಈ ಚರ್ಚೆ ಹೀಗೆಯೇ ಮುಂದುವರೆಯುತ್ತದೆ !
***
ಪ್ರಗತಿಯ ಪರ್ಯಾಯ ಮಾನದಂಡಗಳ ಸುತ್ತ


ಕೆ ಪಿ ಸುರೇಶ
ಸೌಜನ್ಯ : ವಿಜಯ ಕರ್ನಾಟಕ

ರಾಷ್ಟ್ರೀಯ ಆಂತರಿಕ ಉತ್ಪನ್ನ ಮತ್ತು ತಲಾ ಆದಾಯದ ಮೇಲೆ ದೇಶದ ಅಭಿವೃದ್ಧಿಯನ್ನು ಅಳೆಯುವ ವಿಧಾನ ಅರ್ಥ ಕಳೆದುಕೊಂಢು ದಶಕಗಳೇ ಕಳೆದಿವೆ. ಅವು ಏನಿದ್ದರೂ ಪ್ರಭುತ್ವ ಮತ್ತು ಆರ್ಥಿಕ ತಜ್ಞರ ಕೈಚಳಕವೆಂಬಂತಾಗಿ, ಇದೊಂದು ಆತ್ಮವಂಚನೆಯ ಮಿಥ್ಯೆ ಎನ್ನುವುದು 90ರ ದಶಕದ ವೇಳೆಗೆ ಸ್ಪಷ್ಟವಾಗತೊಡಗಿತ್ತು. ಒಬ್ಬನಲ್ಲಿ 99ಲಕ್ಷ, ಉಳಿದ 99 ಮಂದಿಯಲ್ಲಿ ಒಂದು ಲಕ್ಷ ಆದಾಯ ಇದ್ದಾಗಲೂ ಒಟ್ಟಾರೆ ತಲಾ ಆದಾಯ ಒಂದು ಲಕ್ಷ ಎಂದು ಘೋಷಿಸುವ ಹಾಸ್ಯಾಸ್ಪದ ಸ್ಥಿತಿ ಇದು.

ಹೆಚ್ಚುತ್ತಿರುವ ದಾರಿದ್ರ್ಯ ಸಂಪತ್ತಿನ ಅಸಮಾನ ಹಂಚಿಕೆ; ಮೂಲ ಸೌಕರ್ಯ, ಅವಕಾಶಗಳ ಅಭಾವ ಹೆಚ್ಚುತ್ತಾ ಹೋದಂತೆಲ್ಲ, ಈ ಅಭಿವೃದ್ಧಿಯ ಪರಿಕಲ್ಪನೆಯ ವಿಕೃತಿ ಢಾಳಾಗಿ ಕಾಣತೊಡಗಿತು.

ಇದಕ್ಕೆ ಮುಖಾಮುಖಿಯಾಗಿ ಹುಟ್ಟಿಕೊಂಡಿದ್ದು ಮಾನವ ಅಭಿವೃದ್ಧಿ ಸೂಚಿ. 1990ರಲ್ಲಿ ಇದನ್ನು ಅಭಿವೃದ್ಧಿಪಡಿಸಿದ್ದು ಪಾಕಿಸ್ತಾ ನದ ಮಕ್ಬೂಲ್ ಉಲ್ ಹಕ್. ಇದರ ಹಿಂದಿನ ಪ್ರಭಾವ, ಮಾರ್ಗ ದರ್ಶನ ನಮ್ಮ ಅಮರ್ತ್ಯ ಸೇನ್ (ಈ ಬಾರಿಯ ನೊಬೆಲ್ ಪ್ರಶ ಸ್ತಿಯ ಹಾಗೇ, ಕಿತ್ತಾಡುವ ದೇಶಗಳ ಇಬ್ಬರು ಅರ್ಥಶಾಸ್ತ್ರಜ್ಞರು ಪರ್ಯಾಯ ಅಭಿವೃದ್ಧಿ ಮೀಮಾಂಸೆಯ ಸೂಚಿಯನ್ನು ಅಭಿವೃದ್ಧಿ ಪಡಿಸಿದ್ದು ಸಾಂಕೇತಿಕ)

ಆರೋಗ್ಯವಂತ ದೀರ್ಘಾಯುಸ್ಸಿನ ಜೀವನ; ಜ್ಞಾನಾರ್ಜನೆಯ ಲಭ್ಯತೆ ಮತ್ತು ಮರ್ಯಾದೆಯಲ್ಲಿ ಬದುಕುವಷ್ಟು ಜೀವನ ಮಟ್ಟ ಈ ಸೂಚಿಯ ಮೂಲಾಂಶಗಳು. ಒಂದು ಸರಕಾರದ ಜನಪರ ದೃಷ್ಟಿಕೋನ, ಕಾರ್ಯಕ್ರಮಗಳ ಕ್ಷಮತೆ ಮತ್ತು ಸಾಧನೆಯನ್ನು ಒರೆ ಗಲ್ಲಿಗೆ ಹಚ್ಚಲು ಮೇಲಿನ ಅಂಶಗಳನ್ನು ಆಧರಿಸಿದ ಮಾನದಂಡಗಳು ಮುಖ್ಯ. ಕಳೆದ ಎರಡು ದಶಕಗಳಲ್ಲಿ ಮಾನವ ಅಭಿವೃದ್ಧಿ ವರದಿ ಗಳು ನಮ್ಮ ಯೋಜಕರು, ಪ್ರಭುತ್ವಗಳನ್ನು ಅಭಿವೃದ್ಧಿಯ ಪರಿಕಲ್ಪನೆ ಬಗ್ಗೆ ಪುನರಾಲೋಚಿಸುವಂತೆ ಮಾಡಿದೆ. ಮುಖ್ಯತಃ ಪ್ರಭುತ್ವಗಳು ಲಜ್ಜೆಯಿಲ್ಲದೆ, ಆರ್ಥಿಕ ಪುನರ‌್ರಚನೆಯ ನೆಪದಲ್ಲಿ ಎಲ್ಲವನ್ನೂ ಖಾಸಗಿ ಯವರಿಗೂ, ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿ ಗಳಿಗೂ ಧಾರೆ ಎರೆವ ಧಾವಂತಕ್ಕೆ ಕೊಂಚ ಬ್ರೇಕ್ ಹಾಕಿದೆಯಷ್ಟೆ ಅಲ್ಲ; ಮಾನವ ಅಭಿವೃದ್ಧಿಯ ಕುರಿತಾದ ಕಲ್ಯಾಣ ಕಾರ್ಯಕ್ರಮ ಗಳನ್ನು ಅಷ್ಟಿಷ್ಟಾದರೂ ಜಾರಿಗೆ ತರಲು ಇದು ಕಾರಣವಾಗಿದೆ. ಆದರೆ ಪ್ರಭುತ್ವಗಳು ಇದನ್ನೊಂದು ಕರ್ತವ್ಯವೆಂಬಂತೆ ಮಾಡಿಲ್ಲ; ಬದಲಿಗೆ ಜನಪರ ಒತ್ತಡದ ಕಾರಣಕ್ಕಾಗಿ ಮಾಡಿದೆ ಎಂಬುದನ್ನು ಮರೆಯಬಾರದು.

ಕುಡಿಯುವ ನೀರಿನ ಲಭ್ಯತೆ, ಹೆರಿಗೆಯಲ್ಲಿ ಸಾಯುವ ಹೆಣ್ಣು ಮಕ್ಕಳ ಸಂಖ್ಯೆ, ಶಿಕ್ಷಣ ಲಭಿಸುವ ಮಕ್ಕಳ ಸಂಖ್ಯೆ-ಹೀಗೆ ಹತ್ತು ಹಲವು ಅಂಶಗಳನ್ನು ಈ ಸೂಚಿ ಮುಂದಿಟ್ಟು, ಇವುಗಳ ಬಗ್ಗೆ ಕಾರ್ಯಪ್ರವೃತ್ತವಾಗುವ ಯತ್ನವನ್ನು ಪ್ರಭುತ್ವಗಳು ಮಾಡಿವೆಯೇ ಎಂಬ ನಮ್ಮ ದುಗುಡವನ್ನು ಜಾಗತಿಕವಾಗಿ ಜಾಹೀರುಪಡಿಸಿದೆ. ಪ್ರತಿವರ್ಷದ ವರದಿಗಳು ಪ್ರಭುತ್ವಗಳ ತಾತ್ಸಾರ ಮತ್ತು ಅದಕ್ಷತೆ ಯನ್ನು ಅಂಕಿಅಂಶಗಳೊಂದಿಗೆ ಸಾಬೀತುಪಡಿಸಿವೆ. ಕಳೆದ ಎರಡು ದಶಕಗಳಲ್ಲಿ ನಾವು ಪರಮಾಣು ಸಂಘಕ್ಕೆ ಸೇರಿ ದ್ದೇವೆ; ಮಂಗಳ ಯಾನ ಮಾಡಿದ್ದೇವೆ; ಜಗತ್ತಿನ ಟಾಪ್ ಟೆನ್ ಆರ್ಥಿಕತೆಗಳಲ್ಲಿ ಒಂದಾಗಿದ್ದೇವೆ ಎಂದು ನಮ್ಮ ಪ್ರಭುತ್ವ ಬೀಗಿದೆ. ಆದರೆ, ಮಾನವ ಅಭಿವೃದ್ಧಿಯಲ್ಲಿ ನೂರರಿಂದಾಚೆ, ಜಗತ್ತಿನ ಕಡುಬಡ ದೇಶಗಳ ಸಾಲಿನಲ್ಲಿ ಕೂತು ಹಲ್ಲು ಕಿರಿಯುತ್ತಿದೆ. ನಮ್ಮ ನೆರೆಹೊರೆಯ ಬಡ ದೇಶಗಳು ಈ ಅಂಶಗಳಲ್ಲಿ ನಮಗಿಂತ ಒಳ್ಳೆ ಸಾಧನೆ ಮಾಡಿವೆ ಎಂಬುದೂ ಗಮನಿಸಬೇಕಾದ ಅಂಶ. ಈ ಸೂಚಿ ಉಂಟುಮಾಡಿದ ಇರುಸುಮುರುಸಿನಿಂದಾಗಿಯೇ, ಪ್ರಾಥಮಿಕ ಶಿಕ್ಷಣ, ಕುಡಿಯುವ ನೀರು, ಆಹಾರ ಭದ್ರತೆ, ಉದ್ಯೋಗ ಖಾತರಿ ಯಂತಹ ಬಾಬು ಗಳಿಗೆ ಒಂದಷ್ಟು ಗಮನಾರ್ಹ ಅನುದಾನ ಲಭ್ಯವಾಗಿತ್ತು.

ನಮ್ಮ ದೇಶದಲ್ಲೂ ಗರೀಬರ ಆರೋಗ್ಯ, ಶಿಕ್ಷಣ, ಮತ್ತಿತರ ಮೂಲ ಭೂತ ಅವಶ್ಯಕತೆ ಬಗ್ಗೆ ಹೋರಾಡುತ್ತಿದ್ದ ವ್ಯಕ್ತಿ/ ಸಂಘಟನೆ ಗಳು ತಮ್ಮ ಹೋರಾಟಕ್ಕೆ ಬೇಕಾದ ಅಂಕಿಅಂಶಗಳನ್ನೂ ಈ ವರದಿ ಯಿಂದ ಪಡಕೊಂಡವು. ಉದಾ: ಜಗತ್ತಿನಾದ್ಯಂತ ಸುಮಾರು 20 ಕೋಟಿ ಜನ ವಿವಿಧ ರೀತಿಯ ದಾರಿದ್ರ್ಯದಿಂದ ನರಳುತ್ತಿದ್ದಾರೆ. ಸುಮಾರು ಶೇ.80ರಷ್ಟು ಜನಸಂಖ್ಯೆ ಸಮಗ್ರ ಸಾಮಾಜಿಕ ಸುರಕ್ಷಾ ಸೌಕರ್ಯಗಳಿಂದ ವಂಚಿತವಾಗಿದೆ. ಸುಮಾರು 150 ಕೋಟಿ ಕಾರ್ಮಿಕರು ಅಭದ್ರ ಉದ್ಯೋಗದಲ್ಲಿ ಒದ್ದಾಡುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ಮಂದಿ ನಮ್ಮ ದೇಶದಲ್ಲೇ ಇದ್ದಾರೆ!

ಈ ವರದಿಯೂ ತೀರಾ ಸ್ಥೂಲ ಕ್ಷೇತ್ರಗಳನ್ನು ಮಾತ್ರಾ ಗಮನಿಸಿದೆ ಎಂಬ ಆಕ್ಷೇಪ ಇತ್ತು. ಈ ದೃಷ್ಟಿಯಿಂದ ಕಳೆದ ವರ್ಷದಿಂದ ಚಾಲ್ತಿಗೆ ಬಂದಿರುವ ಸಾಮಾಜಿಕ ಅಭಿವೃದ್ಧಿ ಸೂಚಿ ಎಂಬ ಹೊಸ ಮಾನ ದಂಡದ ವರದಿ ಗಮನಾರ್ಹ. ಮಾನವ ಅಭಿವೃದ್ಧಿ ವರದಿಗಿಂತಲೂ ಈ ಸೂಚಿ ಹೆಚ್ಚು ಸೂಕ್ಷ್ಮವಾಗಿ ಸಾಮಾಜಿಕ ಅಭಿವೃದ್ಧಿಯ ಮಾನ ದಂಡಗಳನ್ನು ಗಮನಿಸಿದೆ.

ಅಮೆರಿಕದ ಸೋಷಿಯಲ್ ಪ್ರೋಗ್ರೆಸ್ ಇಂಪೆರೆಟಿವ್ (Social Progress Imperative) ಎಂಬ ಸಂಸ್ಥೆ ಇದನ್ನು ಸಿದ್ಧಪಡಿಸಿದೆ. (ಇದರ ಪೂರ್ಣ ವರದಿ ಅಂತರ್ಜಾಲದಲ್ಲಿ ಲಭ್ಯ ವಿದೆ). ಈ ಸೂಚಿ ಮೂರು ಮುಖ್ಯ ಧಾರೆಗಳನ್ನು ಪರಿಗಣಿಸಿ ಅದ ರಲ್ಲೂ ಒಳಧಾರೆಗಳನ್ನು ಗುರುತಿಸಿ ಅದಕ್ಕೊಂದು ಮಾಪನ ಸಿದ್ಧಪ ಡಿ ಸಿದೆ. ಸೂಚಿಗೆ ಮೂಲಾಧಾರವಾಗಿರುವ ಅಂಶಗಳು ಇಂತಿವೆ:

1. ಮೂಲಭೂತ ಅವಶ್ಯಕತೆಗಳು: ಇದರ ಉಪಧಾರೆಗಳು- ಉತ್ತಮ ಆಹಾರ ಮತ್ತು ವೈದ್ಯಕೀಯ ಸೌಲಭ್ಯದ ಲಭ್ಯತೆ; ನೀರು ಮತ್ತು ನೈರ್ಮಲ್ಯ; ಆಸರೆ ಮತ್ತು ವ್ಯಕ್ತಿ ಸುರಕ್ಷೆ

2. ಸುಖ ಸೌಖ್ಯ: ಉಪಧಾರೆಗಳು-ಜ್ಞಾನ ಲಭ್ಯತೆ ಮತ್ತು ಜ್ಞಾನ ವೃದ್ಧಿಯ ಅವಕಾಶ; ಮಾಹಿತಿ ಮತ್ತು ಸಂಪರ್ಕ; ಆರೋಗ್ಯ ಮತ್ತು ಸೌಖ್ಯ ಹಾಗೂ ಪರಿಸರದ ಸುಸ್ಥಿರತೆ

3. ಆಯ್ಕೆ ಮತ್ತು ಅವಕಾಶಗಳು: ಉಪಧಾರೆಗಳು- ಹಕ್ಕುಗಳು; ಸ್ವಾತಂತ್ರ್ಯ ಮತ್ತು ಆಯ್ಕೆಯ ಲಭ್ಯತೆ; ಸಹಿಷ್ಣುತೆ ಮತ್ತು ಒಳಗೊಳ್ಳು ವಿಕೆ; ಹೆಚ್ಚಿನ /ಉನ್ನತ ಶಿಕ್ಷಣಕ್ಕೆ ಆಸ್ಪದ.

ಒಂದು ಪ್ರಭುತ್ವ ತನ್ನ ಬಡಪಾಯಿ ಪ್ರಜೆಗಳಿಗೆ ಈ ನಿಟ್ಟಿನಲ್ಲಿ ಎಷ್ಟು ಕೆಲಸ ಮಾಡಿದೆ ಎಂಬುದನ್ನು ಇಲ್ಲಿ ಪರಿಗಣಿಸಲಾಗುತ್ತದೆ.

ಈ ಸೂಚಿಗಳು ಮಾನವ ಅಭಿವೃದ್ಧಿ ಸೂಚಿಯ ಆಕರಗಳಿಗಿಂತ ಹೆಚ್ಚು ಸಮಗ್ರವಾಗಿವೆ ಮತ್ತು ಆಯಾಯ ರಾಷ್ಟ್ರಗಳ ವಿಶಿಷ್ಟ ದಾರಿದ್ರ್ಯ ಅಸಮಾನತೆ ಮತ್ತು ತಾರತಮ್ಯಗಳನ್ನು ಗುರುತಿಸಲು ಸಹಕಾರಿಯಾಗಿವೆ. ಉದಾಹರಣೆಗೆ, ಸಹಿಷ್ಣುತೆ ಮತ್ತು ಒಳ ಗೊಳ್ಳು ವಿಕೆ ಯಂತಹ ಆಯಾಮಗಳು ಮಾಮೂಲಿ ಆರ್ಥಿಕ ಅಭಿವೃದ್ಧಿಯ ಮಾನದಂಡ ಗಳಲ್ಲಿ ಕಾಣಿಸುವುದೇ ಇಲ್ಲ. ಭಾರತದಂತಹ ದೇಶದಲ್ಲಿ ಗಮನಿಸ ಬೇಕಾದ ಬಹುಮುಖ್ಯ ಸಾಮಾಜಿಕ ಸಾಂಸ್ಕೃತಿಕ ಆಯಾಮಗಳಿವು.

ಈ ವರದಿಯ ಪಟ್ಟಿಯಲ್ಲೂ ಭಾರತದ ಸ್ಥಾನ ನೂರಾನಾಲ್ಕು!! ನೇಪಾಳವೂ ಇಲ್ಲಿ ನಮಗಿಂತ ಉತ್ತಮ ಸ್ಥಾನ ಹೊಂದಿದೆ. ಈ ವರದಿ ಸಮುದಾಯಗಳ ಹಠಾತ್ ದುಃಸ್ಥಿತಿಗೆ ಕಾರಣವಾ ಗುವ ನಾಜೂಕು ಅಂಶಗಳನ್ನು ಮುನ್ನೆಲೆಗೆ ತರುತ್ತದೆ. ಉದಾಹ ರಣೆಗೆ, ತೀವ್ರ ಅನಾರೋಗ್ಯ ಒಂದು ಕುಟುಂಬವನ್ನು ದಿವಾಳಿ ಎಬ್ಬಿಸ ಬಹುದು. ಒಂದು ಬರ ಊರನ್ನು ಮೂರಾಬಟ್ಟೆ ಮಾಡ ಬಲ್ಲದು. ಒಂದು ಕೋಮು ವೈಷಮ್ಯ ಬದುಕನ್ನು ದುರ್ಭರ ಗೊಳಿಸೀತು.

ಸರಕಾರದ ಜವಾಬ್ದಾರಿ ಇರುವುದು ವಿಕೋಪಗಳೆದುರು ನಿಸ್ಸ ಹಾಯಕವಾಗುವ ವ್ಯಕ್ತಿ ಅಥವಾ ಸಮುದಾಯಕ್ಕೆ ಭರವಸೆ ತುಂಬುವು ದರಲ್ಲಿ. ಇದು ಘಟನೆ ನಡೆದ ಬಳಿಕದ ಪ್ರತಿಕ್ರಿಯೆ ಯಾಗುವ ಬದಲು ಯೋಜನಾ ಶಕ್ತಿಯಾಗಬೇಕು. ಅಪಾಯಕ್ಕೆ ತುತ್ತಾಗುವ (Vulnerability) ಈ ಅಂಶಗಳನ್ನು ನಿಭಾಯಿಸು ವುದೇ ಸುಸ್ಥಿರತೆಯ ಮೂಲಮಂತ್ರ.

ಇಂತಹ ವರದಿಗಳ ಬಗ್ಗೆ ನಮ್ಮ ಸರಕಾರಗಳ ಸಂವೇದನಾಶೀಲತೆ ಅವುಗಳ ನೀತಿನಿರೂಪಣೆ, ಆದ್ಯತಾ ಕಾರ್ಯಕ್ರಮಗಳ ಚಾಲನೆ ಮತ್ತು ಅನುಷ್ಠಾನದ ಗತಿಯಲ್ಲಿ ಗೊತ್ತಾಗುತ್ತದೆ. ಮಾನವ ಅಭಿವೃದ್ಧಿ ಸೂಚ್ಯಂಕದ ವರದಿ ಬಂದ ಮೇಲೆ ನಮ್ಮ ದೇಶದಲ್ಲಿ ಕಲ್ಯಾಣ ಕಾರ್ಯಕ್ರಮಕ್ಕೆ ವೆಚ್ಚ ಮಾಡುವುದು ದಂಡ ಎಂಬ ಕಾರ್ಪೊರೇಟ್ ಆಗ್ರಹವಿದ್ದಾಗಲೂ ಯುಪಿಎ ಸರಕಾರ, ಕೆಲವು ಯೋಜನೆಗಳನ್ನು ಜಾರಿಗೆ ತಂದಿತು. ಉದ್ಯೋಗ ಖಾತ್ರಿ, ಆದಿವಾಸಿ ಹಕ್ಕು ಕಾಯಿದೆ, ಹೊಸ ಭೂಸ್ವಾಧೀನ ಕಾಯಿದೆ, ಶಿಕ್ಷಣದ ಹಕ್ಕು, ಆಹಾರ ಭದ್ರತೆಯ ಕಾಯಿದೆ ಇವೆಲ್ಲ ಬಂದಿದ್ದು ಈ ಮಾನದಂಡದ ಒತ್ತಡದಿಂದ.

ಆದರೆ ಈಗಲೂ ಈ ಕಲ್ಯಾಣ ಕಾರ್ಯಕ್ರಮಗಳ ಜವಾಬ್ದಾರಿ ಹೊಂದಿರುವ ರಾಜ್ಯ ಸರಕಾರಗಳು ಇದನ್ನೊಂದು ಕಟ್ಟಡ ಕಟ್ಟುವ ಅಥವಾ ಬಿಟ್ಟಿ ಕೊಡುವ ಸೌಲಭ್ಯಗಳ ದಾನದ ಮಟ್ಟಿಗೆ ತಂದು ನಿಲ್ಲಿಸಿವೆ. ಇದರೊಂದಿಗೆ ಇಲಾಖಾವಾರು ಪ್ರತ್ಯೇಕತೆ ಹೇಗಿದೆ ಯೆಂದರೆ ಪ್ರತಿ ಇಲಾಖೆಯ ಕೊಡುಗೆಗಳನ್ನು ಹಂಚುವುದಷ್ಟೇ ಪಂಚಾಯತಿಗಳ ಕೆಲಸವಾಗಿದೆ. ಗ್ರಾಮೀಣಾಭಿವೃದ್ಧಿ ಎಂದರೆ, ಕೇಂದ್ರೀಕೃತ ಮಾರ್ಗದರ್ಶಿ ಸೂಚಿಗಳು ಮತ್ತು ಅನುದಾನ ಎಂಬ ಪದ್ಧತಿ ಮುಂದುವರಿದಿದ್ದು, ಆಯಾ ಗ್ರಾಮಗಳ ವಿಶಿಷ್ಟ ಸಾಮಾಜಿಕ ಆರ್ಥಿಕ ಅಭಿವೃದ್ಧಿ, ತನ್ಮೂಲಕ ಸ್ಥಳೀಯ ಸುಸ್ಥಿರತೆ ಬಗ್ಗೆ ನಮ್ಮ ಯಾವ ಸರಕಾರಗಳೂ ಗಂಭೀರವಾಗಿ ಯೋಚಿಸಿಲ್ಲ. ಗ್ರಾಮ ಕ್ಕೊಂದು ಸಾಮಾಜಿಕ ಸಾಂಸ್ಕೃ ತಿಕ ಸೌಖ್ಯದ ಕಲ್ಪನೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಸಾಂಸ್ಥಿಕ ಕಿಂಡಿಗಳೇ ನಮ್ಮ ಮುಖ್ಯ ಇಲಾಖೆಗಳಲ್ಲಿ ಇಲ್ಲ. ಸ್ವಾಯತ್ತೆಯ ಮೂಲಕ ಗ್ರಾಮಗಳು ತಮ್ಮ ವಿಶಿಷ್ಟತೆಯನ್ನು ಉಳಿಸಿಕೊಂಡೂ ಗ್ರಾಮದ ಅಭಿವೃದ್ಧಿಯ ನೀಲಿ ನಕಾಶೆಯೊಂದನ್ನು ಸಿದ್ಧಪಡಿಸಿ ಕ್ರಿಯಾಶೀಲವಾಗಬಹುದು ಎಂದು ನಂಬಲು ನಮ್ಮ ರಾಜ್ಯ ಸರಕಾರಗಳು ಸಿದ್ಧವಿಲ್ಲ. ಈ ಹಿನ್ನೆಲೆಯಲ್ಲಿ

ಈ ಸಾಮಾಜಿಕ ಅಭಿವೃದ್ಧಿ ಸೂಚಿ ಎಲ್ಲದನ್ನೂ ತೋರಿಸಿಕೊಡುವ ಮಾಯಾದರ್ಪಣವಲ್ಲ; ಆದರೆ ನಮ್ಮ ನಗರ/ಗ್ರಾಮೀಣ ಸಂದ ರ್ಭಕ್ಕೆ ತಕ್ಕಂತೆ ಒಂದಿಷ್ಟು ತಿದ್ದಿ ತೀಡಿದರೆ, ನಮ್ಮ ಹಳ್ಳಿ/ ಪಂಚಾಯತಿ ಮಟ್ಟದ ಜೀವನೋಪಾಯಗಳು, ನೀರು/ ಶಿಕ್ಷಣ/ ಆಹಾರ ಲಭ್ಯತೆ/ ಕೃಷಿ ಉತ್ಪಾದನೆ/ ಸಾಮಾಜಿಕ ಸಂಬಂಧ-ಹೀಗೆ ಒಟ್ಟಾರೆ ಸ್ಥಿತಿಗತಿಗಳನ್ನು ಈ ಸೂಚ್ಯಂಕದ ಮೂಲಕ ಹೊಸ ರೀತಿಯಲ್ಲಿ ಅರಿಯಬಹುದು; ಅದನ್ನು ಆಧರಿಸಿ ಅಭಿವೃದ್ಧಿಯ ಹೊಸ ನಕಾಶೆ ಸಿದ್ಧಪಡಿಸಬಹುದು. ಇದೇನೂ ಕಷ್ಟದ ಕೆಲಸವಲ್ಲ. ಜಾತಿ ಗಣತಿಯಂಥದ್ದನ್ನೇ ಸಮರೋಪಾದಿಯಲ್ಲಿ ಮಾಡುವ ಸರ ಕಾರಕ್ಕೆ, ಇರುವ 6,000 ಪಂಚಾಯತಿಗಳ ಸ್ಥಿತಿಗತಿಯನ್ನು ಅರಿವ / ದಾಖಲಿಸುವ ಕೆಲಸ ಕಷ್ಟವೇನಲ್ಲ. ಇದನ್ನು ಮಾಡಿ, ಈಗಿ ರುವ ಟಾಪ್ ಡೌನ್ ಧೋರಣೆ ಬಿಡದಿದ್ದರೆ, ವರ್ಷ ಕಳೆದಂತೆ ದುರ್ಭರ ವಾಗುತ್ತಿರುವ ಗ್ರಾಮೀಣ /ನಗರ ಬದುಕನ್ನು ನಿಭಾ ಯಿ ಸಲು ಕೋಟಿಗಟ್ಟಲೆ ಖರ್ಚು ಮಾಡುತ್ತಲೇ ಹೋಗಬೇಕಾಗುತ್ತದೆ. ದುರ್ಭರಗೊಳ್ಳುತ್ತಿರುವ ಹಳ್ಳಿಗಳು, ಕಲುಷಿತಗೊಳ್ಳುತ್ತಿರುವ ನಗರಗಳು ಅಭಿವೃದ್ಧಿಯ ಲಕ್ಷಣವಾಗುವುದು ಸಾಧ್ಯವಿಲ್ಲ.

ಜಯಕಾಂತನ್: ಲೇಖಕನೊಬ್ಬನ ಹುಡುಕಾಟ
ಶೂದ್ರ ಶ್ರೀನಿವಾಸ


ಸುಮಾರು ಮೂವತ್ತು ವರ್ಷಗಳು ಹಿಂದೆ ಸರಿದಿದೆ. ಕಲ್ಕತ್ತದಲ್ಲಿ ನಲವತ್ತೊಂದು ದಿವಸವಿದ್ದು ಅಂದಿನ ಮದ್ರಾಸ್‌ಗೆ ಓಡೋಡಿ ಬಂದೆ. ರೈಲಿನಲ್ಲಿ ಟಿಕೆಟ್ ಕನ್‌ರ್ಮ್ ಆಗಿರಲಿಲ್ಲ. ಆಗ ಅನುಭವಿಸಿದ್ದು ಬೇರೆ ರೀತಿಯದ್ದು, ಮೂರುನಾಲ್ಕು ಕುಟುಂಬಗಳು ಆತ್ಮೀಯವಾಗಿಬಿಟ್ಟವು. ಒಬ್ಬ ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ‘‘ಈಕೆ ನನ್ನ ಹೆಂಡತಿ ದಯವಿಟ್ಟು ಕ್ಷೇಮವಾಗಿ ಮದ್ರಾಸ್ ತಲುಪಿಸಿ’’ ಎಂದರು ನಮಸ್ಕರಿಸುತ್ತಾ. ನಾನು ‘‘ಅಗಲಿ’’ ಎಂದೆ. ಆತ ನೆಮ್ಮದಿಯಿಂದ ಹೊರಟ. ಆಕೆ ‘‘ತುಂಬ ಥ್ಯಾಂಕ್ಸ್’’ ಎಂದರು. ಒಂದು ಕ್ಷಣ ತಬ್ಬಿಬ್ಬಾದೆ. ಇವೆಲ್ಲ ಎಂಥ ಸಂಬಂಧಗಳು ಎಂದು. ಹಾಗೆಯೇ ರೂರ್ಕೆಲಾ ಉಕ್ಕಿನ ನಗರಿಯಿಂದ ಬಂದ ಒಂದು ಕುಟುಂಬ ತುಂಬ ಆತ್ಮೀಯವಾಗಿಬಿಡ್ತು. ಅದರ ವಿವರ ರೋಮಾಂಚಕಾರಿಯಾಗಿದೆ. ಆದ್ದರಿಂದಲೇ ನನ್ನ ಮನಸ್ಸಿನಲ್ಲಿ ಗಾಢವಾಗಿ ಬೇರೂರಿಬಿಟ್ಟಿದೆ. ಮದ್ರಾಸ್‌ನಲ್ಲಿ ಆ ಕುಟುಂಬ ಇಳಿದು ವೇದನೆ ತುಂಬಿದ ಕಣ್ಣುಗಳಿಂದ ನಮ್ಮ ಜೊತೆ ವೆಲ್ಲೂರಿಗೆ ಬರಲೇಬೇಕು ಎಂದು ಕೈ ಹಿಡಿದು ಕೇಳಿಕೊಂಡರು, ರೂರ್ಕೆಲಾದ ಆ ಕುಟುಂಬದ ಮೂರು ಮಂದಿ ಒಂದೊಂದು ನಮೂನೆಯ ಹಿಂಸೆಯಿಂದ ನರಳುತ್ತಿದ್ದವರು. ಆದರೂ ಬದುಕಲೇ ಬೇಕು, ಒಬ್ಬರನ್ನೊಬ್ಬರು ಬದುಕಿಸಿಕೊಳ್ಳಲೇಬೇಕು ಎಂಬ ದಟ್ಟವಾದ ಕಾಳಜಿಯಿಂದ ಹೋರಾಟ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದರು. ಆ ಕುಟುಂಬದ ‘ಮೈಥಿಲಿ’ ವರ್ತನೆಗೂ ಮೀರಿದ ಮಾನವೀಯತೆಯನ್ನು ತುಂಬಿಕೊಂಡಿದ್ದಳು.

 ಪ್ರಸಿದ್ಧ ಬಂಗಾಳಿ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರು ತನ್ನ ಕ್ರತಿಗಳಲ್ಲಿ ಸುತ್ತಿಬಳಸಿ ಒಂದು ವಾಕ್ಯಕ್ಕೆ ಜೀವ ಕೊಡುತ್ತ ಹೋಗುತ್ತಾರೆ, ಅದು ಹೀಗಿದೆ: ‘‘ಬಂಗಾಳದ ಹೆಣ್ಣು ಮಕ್ಕಳು ಪ್ರೀತಿ ಪ್ರೇಮ, ವಿಷಾದ, ಕರುಣೆ ಮತ್ತು ಮಾನವೀಯತೆಯನ್ನು ತುಂಬಿಕೊಂಡು ಪ್ರತಿಕ್ಷಣವೂ ಗಂಡಸರ ಕ್ರೌರ್ಯಕ್ಕೆ ಮುಖಾಮುಖಿಯಾಗುತ್ತಿರುತ್ತಾರೆ.’’ ಎಂದು, ಅಂಥ ವ್ಯಾಪಕವಾದ ವ್ಯಕ್ತಿತ್ವ ವನ್ನು ಈ ಮೈಥಿಲಿ ಪಡೆದಿದ್ದಳು. ಅವಳ ಒಂದೊಂದು ಅಪೂರ್ಣ ಇಂಗ್ಲಿಷ್ ಶಬ್ದವೇ ವಾಕ್ಯದಂತಿದ್ದ ಪತ್ರಗಳು ಎಷ್ಟೋ ಕಾಡಿಸಿ ಬಿಟ್ಟಿವೆ. ಆದರೆ ದುರಂತವೆಂದರೆ: ಅವಳು ರೈಲ್ವೆ ಸ್ಟೇಷನ್‌ನಲ್ಲಿ ಕೊಟ್ಟ ವಿಳಾಸವಿದ್ದ ಪುಟ್ಟಡೈರಿ ಪಿಕ್‌ಪಾಕೆಟ್ ಆಗಿದ್ದರಿಂದ ಉತ್ತರಿಸಲಾಗುತ್ತಿರಲಿಲ್ಲ. ಪ್ರತಿ ಸಾರಿ ಅವಳು ಪತ್ರ ಬರೆಯುವಾಗಲೆಲ್ಲ ತನ್ನ ವಿಳಾಸ ಬರೆಯುತ್ತಿರಲಿಲ್ಲ. ನೀನು ಉತ್ತರಿಸದೇ ಇರುವುದರಿಂದ ಮತ್ತೆ ಪತ್ರ ಬರೆಯುವುದಿಲ್ಲ ಹೇಳುತ್ತಲೇ ಕೊನೆಗೊಂದು ದಿನ ಪತ್ರ ಬರೆಯುವುದನ್ನು ನಿಲ್ಲಿಸಿ ಬಿಡುತ್ತಾಳೆ. ಈ ದುರಂತಮಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಮೈಥಿಲಿಯ ಪತ್ರ’ ಎಂಬ ಶಿರ್ಷಿಕೆಯಲ್ಲಿ ಶೂದ್ರದ ‘ಕನಸಿಗೊಂದು ಕಣ್ಣು’ವಿನಲ್ಲಿ ಬರೆದೆ. ಅದನ್ನು ಲಂಕೇಶ್ ಅವರು ಮತ್ತು ಡಿ.ಆರ್. ನಾಗರಾಜ್ ತುಂಬ ಇಷ್ಟಪಟ್ಟು ಲಂಕೇಶ್ ಪತ್ರಿಕೆಯಲ್ಲಿ ಮರು ಮುದ್ರಿಸಿದರು. ಡಿ.ಆರ್. ಅದಕ್ಕೆ ಒಂದು ಪುಟ್ಟ ಟಿಪ್ಪಣಿಯನ್ನು ಸೇರಿಸಿದ್ದ.

ಇಂಥ ಹಿನ್ನೆಲೆಯ ಕೇಂದ್ರ ಪಾತ್ರಗಳನ್ನು ಅಂದು ರಾತ್ರಿ ಮದ್ರಾಸಿನ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಗೆಳೆಯ ಅಗ್ರಹಾರ ಕ್ರಷ್ಣಮೂರ್ತಿ ಮನೆಗೆ ಒಂದು ರೀತಿಯ ವೇದನೆಯಿಂದಲೇ ಹೋಗಿದ್ದೆ. ಒಂದು ವೇಳೆ ಹೋಗದೆ ಅವರ ಜೊತೆ ವೆಲ್ಲೂರಿಗೆ ಹೊರಟಿದ್ದರೆ ಈ ಲೇಖನದ ಕಥಾ ನಾಯಕನನ್ನು ಕಳೆದುಕೊಳ್ಳುತ್ತಿದ್ದೆ. ಮಾರನೆಯ ದಿನ ಕೃಷ್ಣಮೂರ್ತಿಯ ಮನೆಯಿಂದ ಮೆರೀನಾ ಬೀಚ್‌ಗೆ ಹೋಗಿ ಒಂದೆರಡು ಗಂಟೆ ಸಮುದ್ರದ ಅಲೆಗಳಲ್ಲಿ ಅಪೂರ್ವ ಭಾವನೆಗಳನ್ನು ತುಂಬಿಕೊಂಡು, ಮೈಥಿಲಿಯ ಕುಟುಂಬವನ್ನು ಏನು ಮಾಡಿದರೂ ಪಕ್ಕಕ್ಕೆ ತಳ್ಳಲು ಆಗದೆ ಅಗ್ರಹಾರನ ಮನೆಗೆ ಬಂದಿದೆ. ಕೇಂದ್ರ ಸಾಹಿತ್ಯ ಅಕಾಡಮಿಯ ಕಚೇರಿ ಆಗ ಮದ್ರಾಸ್‌ನಲ್ಲಿತ್ತು. ಅದರ ಪ್ರಾದೇಶಿಕ ಕಚೇರಿ ಅಲ್ಲಿಯೇ ಇತ್ತು. ಅವನ ಕಾರ್ಯವ್ಯಾಪ್ತಿಗೆ ಹೇಳಿ ಮಾಡಿಸಿದಂತಿದ್ದ ‘ಸಾಹಿತ್ಯ ಅಕಾಡಮಿ’ಯ ಸ್ವರೂಪವನ್ನು ಪರಿಚಯಿಸಿಕೊಳ್ಳುವಾಗ ಆಕರ್ಷಕವಾಗಿ ಯಾವುದೋ ವಿಚಾರ ಸಂಕಿರಣಕ್ಕಾಗಿ ಬಂದಿದ್ದ ಗೆಳೆಯ ಪ್ರೊ. ಎಸ್. ಚಂದ್ರಶೇಖರ ಅವರೂ ಇದ್ದರು. ಚಂದ್ರಶೇಖರ್ ಅವರು ಗಂಭೀರ ಇತಿಹಾಸ ಪ್ರಾಧ್ಯಾಪಕರು. ಅಂದು ಸಂಜೆ ನಮ್ಮಿಬ್ಬರಿಗೂ ತಮಿಳಿನ ಪ್ರಸಿದ್ಧ ವರ್ಣಮಯ ಲೇಖಕ ಜಯಕಾಂತನ್ ಅವರ ಜೊತೆ ಊಟದ ವ್ಯವಸ್ಥೆ ಮಾಡಿದ ಕೃಷ್ಣಮೂರ್ತಿ. ಇದಕ್ಕಿಂತ ಮೊದಲು ಕೃಷ್ಣಮೂರ್ತಿ ಬೆಂಗಳೂರಿಗೆ ಬಂದಾಗಲೆಲ್ಲಾ ಜಯಕಾಂತನ್ ಅವರ ಸಾಹಿತ್ಯದ ಹೆಚ್ಚುಗಾರಿಕೆಯನ್ನು ವಿವರಿಸುತ್ತ, ‘ಅವರನ್ನು ನೋಡಲೇ ಬೇಕು’ ಎಂಬ ತಾದ್ಯಾತ್ಮತೆಯನ್ನು ಬೆಳೆಸಿಬಿಟ್ಟಿದ್ದ.

    ಹಾಗೆ ನೋಡಿದರೆ ಡಿಸೆಂಬರ್ 30, 1986ರ ಸಂಜೆಯನ್ನು ಮರೆಯಲು ಸಾಧ್ಯವೇ ಇಲ್ಲ. ಹಾಗೆ ಮರೆಯಲು ಸಾಧ್ಯವೇ ಆಗದ ಜಯಕಾಂತನ್ ಅವರ ಜೊತೆಯಲ್ಲಿ ಮೂರುನಾಲ್ಕು ಗಂಟೆ ಅಮೂಲ್ಯ ಕಾಲವನ್ನು ಕಳೆದಿದ್ದೆವು. ಹೀಗೆ ನಮ್ಮ ಚಿಂತನಾ ಕ್ರಮವನ್ನು ಶ್ರೀಮಂತಗೊಳಿಸಿದ ಜಯಕಾಂತನ್ ಅವರು ಕಳೆದವಾರ ಚೆನ್ನೆನಲ್ಲಿ ತಮ್ಮ 81ನೆ ವಯಸ್ಸಿನಲ್ಲಿ ನಿಧನರಾದ ವಿವರವಾದ ವರದಿಯನ್ನು ‘ದಿ ಹಿಂದೂ’ ಪತ್ರಿಕೆಯಲ್ಲಿ ಓದಿದಾಗ, ಅವ್ಯಕ್ತ ವೇದನೆ ಕಾಡತೊಡಗಿತು. ಇದೇ ಸಮಯಕ್ಕೆ ಇದನ್ನು ಬರೆಯುವ ಕಾಲಕ್ಕೆ ನನಗೆ ತುಂಬ ಪ್ರಿಯವಾದ ಕಾದಂಬರಿಕಾರ ಜರ್ಮನಿಯ ಗುಂಥರ್‌ಗ್ರಾಸ್ ತಮ್ಮ 87ನೆ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಹಿಟ್ಲರ್‌ನ ಕ್ರೌರ್ಯವನ್ನು ತಮ್ಮ ಸಾಹಿತ್ಯದಲ್ಲಿ ದಾಖಲಿಸುತ್ತಲೇ, ಅಂಥ ರಾಕ್ಷಸನ ನೆಲದಲ್ಲಿ ನಾನು ಬದುಕಿದೆನಲ್ಲ ಎಂಬುದನ್ನು ಅವಮಾನವಾಗಿ ತೆಗೆದುಕೊಂಡು ಇಪ್ಪತ್ತನೆಯ ಶತಮಾನದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಪ್ರಭಾವಬೀರಿದ, ಕಾದಂಬರಿಕಾರ, ಕಥೆಗಾರ, ನಾಟಕಕಾರ ಮತ್ತು ಕವಿ. ಹಾಗೆಯೇ ಗುಂಥರ್‌ಗ್ರಾಸ್ ಕಲ್ಕತ್ತ ಮತ್ತು ಪಶ್ಚಿಮ ಬಂಗಾಳದ ಪ್ರಜ್ಞಾವಂತರ ಮನಸ್ಸಿನಲ್ಲಿ ಬೇರುಬಿಟ್ಟವರು. ‘ದಿ ಟಿನ್ ಡ್ರಮ್’ ಕಾದಂಬರಿ ಹೇಗೆ ಸಾಹಿತ್ಯವಲಯದಲ್ಲಿ ಸಂಚಲನ ಮೂಡಿಸಿತೋ, ಅದೇ ಸಮಯಕ್ಕೆ ಅವರ ‘ ಷೋ ಯುವರ್ ಟಂಗ್’ ಎಂಬ ಕೃತಿಯು ಕಾಳಿಕಾ ದೇವಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಲ್ಕತ್ತೆಯ ಏಳುಬೀಳುಗಳನ್ನು ಆತ್ಮೀಯವಾಗಿ ಚಿತ್ರಿಸಿದ ಕೃತಿ. ಮೂರುನಾಲ್ಕು ಬಾರಿ ಎಷ್ಟೋ ತಿಂಗಳು ಕಾಲ ಕಲ್ಕತ್ತೆಯಲ್ಲಿ ನೆಲೆಸಿ, ಅದರ ಪ್ರತಿ ಪ್ರದೇಶದ ವೈಶಿಷ್ಟ ಮತ್ತು ದೋಷಗಳನ್ನು ದಾಖಲಿಸಿದವರು. 1986ರಲ್ಲಿ ನಾನು ಕಲ್ಕತ್ತಕ್ಕೆ ಹೋದಾಗ, ಗುಂಥರ್‌ಗ್ರಾಸ್‌ರ ಬರವಣಿಗೆಯನ್ನು ಒಂದಷ್ಟು ಓದಿಕೊಂಡು ಹೋಗಲು ಸಾಧ್ಯವಾಗಿತ್ತು .
 
ಒಂದು ಹಂತದಲ್ಲಿ ಜಯಕಾಂತನ್ ಗುಂಥರ್‌ಗ್ರಾಸ್ ಅವರಷ್ಟು ದೊಡ್ಡ ಕಾದಂಬರಿಕಾರ ಅಲ್ಲದಿರಬಹುದು, ಆದರೆ ಅಗಾಧವಾದ ಅರ್ಥಪೂರ್ಣ ತುಡಿತವನ್ನು ತಮ್ಮ ಬರವಣಿಗೆಯಲ್ಲಿ ತುಂಬಿಕೊಂಡಿದ್ದವರು. ಅಂದಿನ ಮದ್ರಾಸ್ ಇರಬಹುದು, ಇಂದಿನ ಚೆನ್ನೆ ಇರಬಹುದು ಕೆಳವರ್ಗದ ಮತ್ತು ಮಧ್ಯಮ ವರ್ಗದ ಓದುಗರ ಹೃದಯದಲ್ಲಿ ಗಾಢವಾಗಿ ಬೇರು ಬಿಟ್ಟುಕೊಂಡಿದ್ದವರು. ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ಒಂದು ಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದವರು. ಏಳನೆಯ ತರಗತಿಯ ನಂತರ ಮುಂದೆ ಓದಲು ಮನಸ್ಸು ಬಾರದೆ ಮದ್ರಾಸಿಗೆ ಓಡಿಬಂದವರು. ಚಿಕ್ಕ ವಯಸ್ಸಿನಲ್ಲಿಯೇ ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತಗಳ ಬಗ್ಗೆ ಒಲವು ಬೆಳೆಸಿಕೊಂಡವರು. ಇದರಿಂದ ಕೆಳವರ್ಗದವರ ಬದು ಕನ್ನು ಅರಿಯುವ ತುಡಿತವನ್ನು ತಮ್ಮ ಬದುಕಿನ ಉಸಿರಾಟದಂತೆ ಕಾದಿಟ್ಟುಕೊಂಡವರು. ಈ ದೃಷ್ಟಿ ಯಿಂದ ಕೂಲಿಕಾರರ ಜೊತೆ ರಿಕ್ಷಾವಾಲಾ ಮತ್ತು ಕಂಡಕ್ಟರ್‌ಗಳ ಮಧ್ಯೆ ಸದಾ ಜೀವಿಸುತ್ತಲೇ ಅವರ ಬದುಕಿನ ಏಳು ಬೀಳುಗಳನ್ನು ಕಥೆ, ಕಾದಂಬರಿಗಳಲ್ಲಿ ದಾಖಲಿಸುತ್ತಲೇ ಸಾಹಿತ್ಯದ ಹೆಚ್ಚುಗಾರಿಕೆಯನ್ನು ಉಳಿಸಿಕೊಂಡವರು. ಮೊದಲನೆಯ ಬಾರಿಗೆ ಅವರನ್ನು ಮದ್ರಾಸ್‌ನಲ್ಲಿ ಊಟದ ಸಮಯದಲ್ಲಿ ಭೇಟಿಯಾದಾಗ, ಒಂದಷ್ಟು ಆ ಜನರ ಜೊತೆಯೇ ಬಂದಿದ್ದರು. ಯಾಕೆಂದರೆ ಆ ಜನ ಸಮುದಾಯವನ್ನು ಸಂಘಟಿಸುತ್ತಲೇ ಅವರಲ್ಲಿ ಜೀವನ ಪ್ರೀತಿಯನ್ನು ತುಂಬುತ್ತಿದ್ದವರು. ಅಷ್ಟೇ ಅಲ್ಲ ಅವರೆಲ್ಲ ತಮ್ಮನ್ನೇ ಕುರಿತು ಜಯಕಾಂತನ್ ಬರೆದಿದ್ದಾರೆ ಎಂದು ಆತ್ಮೀಯವಾಗಿ ಒಂದೊಂದು ಕಥೆಯನ್ನು ಒಳಗೆಬಿಟ್ಟುಕೊಂಡವರು.

ಜಯಕಾಂತನ್ ಅವರು ಭೌತಿಕವಾಗಿ ಸಾಮಾನ್ಯ ಎತ್ತರದ ವ್ಯಕ್ತಿ. ಆದರೆ ಆಕರ್ಷಕ ವ್ಯಕ್ತಿತ್ವವನ್ನು ತಮ್ಮ ಮೀಸೆ, ತಲೆಯ ಕೂದಲು ಹಾಗೂ ಸರಳ ರೀತಿಯ ನಡಾವಳಿಯಿಂದ ಎಲ್ಲರಿಗೂ ಪ್ರಿಯರಾಗಿದ್ದವರು. ಒಂದು ರೀತಿಯ ಏರುಧ್ವನಿಯಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನ ಜೀವನದ ಸಮಸ್ಯೆಗಳನ್ನು ಬರವಣಿಗೆಯಿಂದ ಹೊರಗೂ ಜನರಿಗೆ ತಲುಪಿಸುತ್ತಿದ್ದವರು. ಇಂಥ ವರ್ಣಮಯ ಲೇಖಕನನ್ನು ‘ಶೂದ್ರ’ ಇಪ್ಪತ್ತನೆಯ ವರ್ಷದ ಕಾರ್ಯಕ್ರಮಕ್ಕೆ ಅಗ್ರಹಾರ ಕೃಷ್ಣಮೂರ್ತಿಯ ಮೂಲಕ ಬೆಂಗಳೂರಿಗೆ ಕರೆಸಿದ್ದೆ. 

ಅಂದು ಯವನಿಕಾ ಸಭಾಂಗಣದಲ್ಲಿ ಜಯಕಾಂತನ್ ಅವರು ಮಾತಾಡುವಾಗ ಲಂಕೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಯಕಾಂತನ್ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ಕನ್ನಡದ ಅಪೂರ್ವ ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣನವರು ಬಂದು ಭೇಟಿಯಾಗಿದ್ದರು. ಒಂದು ದೃಷ್ಟಿಯಿಂದ ಲಂಕೇಶ್ ಅವರು ಜಯಕಾಂತನ್ ತಮ್ಮ ಒಟ್ಟು ಅನುಭವವನ್ನು ಭಾವುಕತೆಯ ನೆಲೆಯಲ್ಲಿ ಚಿತ್ರಿಸಿ ಬಿಡುತ್ತಾರೆ ಎಂಬ ಗುಮಾನಿಯನ್ನು ಹೊಂದಿದ್ದರು. ಯಾಕೆಂದರೆ ಸಾಮಾಜಿಕ ಏರುಪೇರುಗಳ ಕುರಿತು ಲೇಖಕನಾದವನು ಎಷ್ಟೋ ಕಳಕಳಿಯನ್ನು ಹೊಂದಿದ್ದರೂ, ಒಂದು ಹಂತದ ಅಂತರವನ್ನು ಕಾಪಾಡಿಕೊಳ್ಳಲೇಬೇಕು ಎಂಬುದನ್ನು ಗಾಢವಾಗಿ ನಂಬಿದ್ದವರು ಲಂಕೇಶ್. ಹಾಗೆಯೇ ತಮಿಳಿನ ಬಹುಪಾಲು ಲೇಖಕರು ಮತ್ತು ಕಲಾವಿದರು ಗಟ್ಟಿ ಧ್ವನಿಯಲ್ಲಿ ಮಾತಾಡುವಾಗ, ಏನಾದರೂ ಧ್ವನಿಪೂರ್ಣತೆಯನ್ನು ಸುರಿಸಲು ಸಾಧ್ಯವಾ? ಎಂಬ ಪ್ರಶ್ನೆಯು ಸ್ವಾಭಾವಿಕವಾಗಿಯೇ ಮುಖಾಮುಖಿಯಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಅಂದು ಲಂಕೇಶ್ ಅವರು ಕಾರ್ಯಕ್ರಮದಲ್ಲಿ ಮತ್ತು ಖಾಸಗಿ ಮಾತುಕತೆಯಲ್ಲಿ ಜಯಕಾಂತನ್ ಅವರನ್ನು ನೋಡಲು ಪ್ರಯತ್ನಿಸುತ್ತಿದ್ದರು. ಇಷ್ಟೊಂದು ಪ್ರಮಾಣದಲ್ಲಿ ಜನ ಸಾಮಾನ್ಯರ ಜೊತೆ ಬದುಕುತ್ತಿದ್ದ ಈ ಅರ್ಥಪೂರ್ಣ ಸಾಹಿತಿ ಹೇಗೆ ಇನ್ನೂರಕ್ಕೂ ಮೇಲ್ಪಟ್ಟು ಕಥೆಗಳನ್ನು, ಮೂವತ್ತಕ್ಕೂ ಮೇಲ್ಪಟ್ಟು ಕಾದಂಬರಿಗಳನ್ನು ಬರೆಯಲು ಸಾಧ್ಯವಾಯಿತು ಅನಿಸುತ್ತದೆ. ಯಾವುದೂ ಕರಪತ್ರದ ರೀತಿಯ ಕಳಪೆ ಸಾಹಿತ್ಯವಲ್ಲ. ಇದರ ಜೊತೆಗೆ ತಾನು ಸಾಹಿತ್ಯವನ್ನು ಹೇಗೆ ಗ್ರಹಿಸಿದ್ದೇನೆ ಎಂಬುದನ್ನು ದೃಷ್ಟಿಯಲ್ಲಿಟ್ಟು ಎರಡು ಮಹತ್ವಪೂರ್ಣ ಜೀವನ ಚರಿತ್ರೆಗಳನ್ನು 1974 ಮತ್ತು 1980ರಲ್ಲಿ ಬರೆದರು. ಇದರ ಜೊತೆಗೆ ಎರಡು ಚಲನಚಿತ್ರಗಳಿಗೆ ತಾವೇ ಚಿತ್ರಕಥೆ ಬರೆದು ನಿರ್ದೇಶಿಸಿದರು. ಜಯಕಾಂತನ್ ಅವರ ಕಾದಂಬರಿಗಳನ್ನು ಬೇರೆಯವರೂ ನಿರ್ದೇಶಿಸಿದ್ದಾರೆ. ಹೀಗೆ ವರ್ಣಮಯವಾಗಿ ಬದುಕಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಪದ್ಮಭೂಷಣ ಹಾಗೂ ರಶ್ಯಾ ಸರಕಾರ ಕೊಡುವ ‘ಆರ್ಡರ್ ಆ್ ್ರೆಂಡ್‌ಶಿಪ್’ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕೆಲವು ವರ್ಣಮಯ ವ್ಯಕ್ತಿಗಳು ನಮ್ಮ ಬದುಕಿಗೆ ಪರಿಚಯವಾಗಿ ಬಂದಾಗ, ಆಪ್ತತೆ ಎಂಬ ಧ್ವನಿಯೂ ಯಾವುದಾದರೂ ಒಂದು ವಿಧದಲ್ಲಿ ಕಾಡುತ್ತಲೇ ಇರುತ್ತದೆ. ಹೀಗೆ ಕಾಡುವ ಜಯಕಾಂತನ್ ಅವರನ್ನು ಎರಡು ವರ್ಷಗಳ ಹಿಂದೆ ಚೆನ್ನೆನಲ್ಲಿ ತಮಿಳಿನ ಬ್ಯಾತ್‌ಕವಿ ವೈರಮುತ್ತು ಅವರ ಅರವತ್ತನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಭೇಟಿಯಾಗಲು ಸಾಧ್ಯವಾಯಿತು. ತಮಿಳು ಕವಯಿತ್ರಿ ಮತ್ತು ಅತ್ಯುತ್ತಮ ಅನುವಾದಕಿ ಮಲರ್‌ವಿಳಿಯವರು ಕರೆದುಕೊಂಡು ಹೋಗಿದ್ದರು. ಅಂದು ಜಾತ್ರೆ ರೀತಿಯ ಜನ. ಕರುಣಾನಿಯವರು ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಯಕಾಂತನ್ ಅವರು ಭಾಗವಹಿಸಿದ್ದರು. ಹಾಗೆಯೇ ಕಮಲ್‌ಹಾಸನ್ ಅವರು. ಆ ಕಾರ್ಯಕ್ರಮದಲ್ಲಿ ಈ ಲೇಖನದ ಕಥಾನಾಯಕ ಅವರು ಮಾತಾಡುವಾಗ; ಧ್ವನಿ ಅತ್ಯಂತ ಕ್ಷೀಣಗೊಂಡಿದೆ ಅನ್ನಿಸಿತು. ಬದುಕಿನ ನಾನಾ ರೀತಿಯ ಸಂಘರ್ಷಗಳ ಕಾರಣಕ್ಕಾಗಿ ಭೌತಿಕವಾಗಿ ದುರ್ಬಲರಾಗಿದ್ದಾರೆಂದು ಭಾವಿಸಿದೆ. ಆದರೆ ಕಾರ್ಯಕ್ರಮ ಮುಗಿದ ಮೇಲೆ ಅವರನ್ನು ಭೇಟಿಯಾಗಿ ಪರಿಚಯ ಮಾಡಿಕೊಂಡೆ. ಮುಖದ ತುಂಬ ನಗು ತುಂಬಿಕೊಂಡು ‘‘ವಣಕ್ಕಮ್. ನಲ್ಲ ಇರ್ಕೆಂಗಳಾ’’ ಎಂಬ ಅವರ ಕೊನೆಯ ಧ್ವನಿ ಈಗಲೂ ನನ್ನ ಮನಸ್ಸಿನಲ್ಲಿ ವಿಷಾದವನ್ನು ಗುನುಗುನಿಸುತ್ತಿದೆ. ಈ ನೆಲೆಯಲ್ಲಿ ಆ ರೂರ್ಕೆಲ ಕುಟುಂಬದ ಮೈಥಿಲಿ ಏನಾಗಿದ್ದಾಳೋ ಗೊತ್ತಿಲ್ಲ. ಇಷ್ಟಾದರೂ ಗುಂಥರ್‌ಗ್ರಾಸ್, ಜಯಕಾಂತನ್ ಅವರಂಥ ಮಹನೀಯರ ನಡುವೆ ಟ್ರೈನಿನ ಅನುಭವ ಆವರಿಸಿಕೊಳ್ಳುತ್ತದೆ

Monday, April 20, 2015

ಕರ್ನಾಟಕ ಸಾಹಿತ್ಯ ಅಕಾಡೆಮಿ :ಪರಿಸರಜ್ಞಾನ ಸಂವಹನ ಕಮ್ಮಟ-ಅರ್ಜಿ ಆಹ್ವಾನ
                                                       
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015 ಮೇ 28, 29 ಮತ್ತು 30ರಂದು ಹಾಸನ  ಜಿಲ್ಲೆಯ  ಸಕಲೇಶಪುರದಲ್ಲಿ   ವಸತಿ ಸಹಿತ ಮೂರು ದಿನಗಳ ರಾಜ್ಯಮಟ್ಟದ ಪರಿಸರಜ್ಞಾನ ಸಂವಹನ ಕಮ್ಮಟವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.

·         ರಾಜ್ಯದ ಯಾವುದೇ ಜಿಲ್ಲೆಗೆ ಸೇರಿರುವ  ಪರಿಸರದ ಬಗ್ಗೆ ಆಸಕ್ತಿಯಿರುವ ಹಾಗೂ ಅಧ್ಯಯನ/ಅಭಿವ್ಯಕ್ತಿ ಮಾಡಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.  

·         20 ರಿಂದ 40 ವಯೋಮಿತಿಯಲ್ಲಿರುವವರು ಮಾತ್ರ  ಅರ್ಜಿ ಹಾಕಬೇಕು.

·         ಆಸಕ್ತ  ಅಭ್ಯರ್ಥಿಗಳು ಪರಿಸರದ ಬಗ್ಗೆ ಲೇಖನ, ಪುಸ್ತಕವನ್ನು ಬರೆದಿರಬೇಕು. ಅಥವಾ ವಿಡಿಯೊಗ್ರಫಿ, ನಾಟಕ ರಚನೆ ಮಾಡಿರಬೇಕು. ಅಥವಾ ಪರಿಸರ ವಿಷಯದಲ್ಲಿ ಭಾಷಣ/ಚರ್ಚಾಸ್ಪಧೆ೯ಯ ವಿಜೇತರಾಗಿರಬೇಕು.    ಕುರಿತು ವಿಶ್ವಾಸಾರ್ಹ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

·         ವಯಸ್ಸಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪಟ್ಟಿಯನ್ನು ಲಗತ್ತಿಸಬೇಕು.
·         ಆಯ್ಕೆಯಾದ  ಅಭ್ಯರ್ಥಿಗಳು ಕಡ್ಡಾಯವಾಗಿ ಮೂರು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು.
·         ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ ಪರಿಸರಜ್ಞಾನ ಸಂವಹನ ಕಮ್ಮಟ  ಕ್ಕೆ ಅರ್ಜಿ ಎಂದು ನಮೂದಿಸಿರಬೇಕು.

·         ಆಯ್ಕೆಯಾದ  ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ  ಬಂದುಹೋಗಲು ಸಾಮಾನ್ಯ ಬಸ್ ದರವನ್ನು ನೀಡಲಾಗುವುದು.  ಹಾಗೂ ಮೂರು ದಿನಗಳು ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು.

·         ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್ ನಿಂದ ಪಡೆದುಕೊಳ್ಳಬಹುದು.
·         ಆಯ್ಕೆಯಾದ  ಅಭ್ಯರ್ಥಿಗಳ ಪಟ್ಟಿಯನ್ನು  ಮೇ 9 ವೇಳೆಗೆ ಅಕಾಡೆಮಿಯ ವೆಬ್ ಸೈಟ್
http://karnatakasahithyaacademy.org  ನಲ್ಲಿ ಪ್ರಕಟಿಸಲಾಗುವುದು.

·         ಆಯ್ಕೆಯಲ್ಲಿ ಅಕಾಡೆಮಿಯ  ತೀರ್ಮಾನವೇ ಅಂತಿಮ

·         ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-4-2015

·         ಅರ್ಜಿಯನ್ನು ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಶ್ರೀ ನಾಗೇಶ ಹೆಗಡೆ
ಪರಿಸರ ಕಮ್ಮಟದ ನಿರ್ದೇಶಕರು
ಕೇರಾಫ್/ ಕರ್ನಾಟಕ ಸಾಹಿತ್ಯ  ಅಕಾಡೆಮಿ
ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
(080-22211730/ 22106460)

                                                                                                ಸಿ.ಎಚ್.ಭಾಗ್ಯ
                                                                                                 ರಿಜಿಸ್ಟ್ರಾರ್

ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
ಪರಿಸರಜ್ಞಾನ ಸಂವಹನ ಕಮ್ಮಟ
ಅರ್ಜಿ
1.
ಅಭ್ಯರ್ಥಿಯ ಹೆಸರು

  2.

ವಯಸ್ಸು
(ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಲಗತ್ತಿಸಬೇಕು)


3.

ಉದ್ಯೋಗ  4.

ಸಂಪರ್ಕ ವಿಳಾಸ;
ಮೊಬೈಲ್ ಸಂಖ್ಯೆ/ ದೂರವಾಣಿ ಸಂಖ್ಯೆ
-ಮೇಲ್ ವಿಳಾಸ

5.

ಪರಿಸರ ವಿಜ್ಞಾನ ಸಂಬಂಧಿತ ಪ್ರಕಟಿತ ಲೇಖನಗಳು/ ಕೃತಿಗಳು/ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಬೇಕು


6.

 ಇತರ ಆಸಕ್ತಿಗಳು


                                                                    
ಅಭ್ಯರ್ಥಿಯ ಸಹಿ

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...