Tuesday, April 21, 2015

ಜಯಕಾಂತನ್: ಲೇಖಕನೊಬ್ಬನ ಹುಡುಕಾಟ
ಶೂದ್ರ ಶ್ರೀನಿವಾಸ


ಸುಮಾರು ಮೂವತ್ತು ವರ್ಷಗಳು ಹಿಂದೆ ಸರಿದಿದೆ. ಕಲ್ಕತ್ತದಲ್ಲಿ ನಲವತ್ತೊಂದು ದಿವಸವಿದ್ದು ಅಂದಿನ ಮದ್ರಾಸ್‌ಗೆ ಓಡೋಡಿ ಬಂದೆ. ರೈಲಿನಲ್ಲಿ ಟಿಕೆಟ್ ಕನ್‌ರ್ಮ್ ಆಗಿರಲಿಲ್ಲ. ಆಗ ಅನುಭವಿಸಿದ್ದು ಬೇರೆ ರೀತಿಯದ್ದು, ಮೂರುನಾಲ್ಕು ಕುಟುಂಬಗಳು ಆತ್ಮೀಯವಾಗಿಬಿಟ್ಟವು. ಒಬ್ಬ ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ‘‘ಈಕೆ ನನ್ನ ಹೆಂಡತಿ ದಯವಿಟ್ಟು ಕ್ಷೇಮವಾಗಿ ಮದ್ರಾಸ್ ತಲುಪಿಸಿ’’ ಎಂದರು ನಮಸ್ಕರಿಸುತ್ತಾ. ನಾನು ‘‘ಅಗಲಿ’’ ಎಂದೆ. ಆತ ನೆಮ್ಮದಿಯಿಂದ ಹೊರಟ. ಆಕೆ ‘‘ತುಂಬ ಥ್ಯಾಂಕ್ಸ್’’ ಎಂದರು. ಒಂದು ಕ್ಷಣ ತಬ್ಬಿಬ್ಬಾದೆ. ಇವೆಲ್ಲ ಎಂಥ ಸಂಬಂಧಗಳು ಎಂದು. ಹಾಗೆಯೇ ರೂರ್ಕೆಲಾ ಉಕ್ಕಿನ ನಗರಿಯಿಂದ ಬಂದ ಒಂದು ಕುಟುಂಬ ತುಂಬ ಆತ್ಮೀಯವಾಗಿಬಿಡ್ತು. ಅದರ ವಿವರ ರೋಮಾಂಚಕಾರಿಯಾಗಿದೆ. ಆದ್ದರಿಂದಲೇ ನನ್ನ ಮನಸ್ಸಿನಲ್ಲಿ ಗಾಢವಾಗಿ ಬೇರೂರಿಬಿಟ್ಟಿದೆ. ಮದ್ರಾಸ್‌ನಲ್ಲಿ ಆ ಕುಟುಂಬ ಇಳಿದು ವೇದನೆ ತುಂಬಿದ ಕಣ್ಣುಗಳಿಂದ ನಮ್ಮ ಜೊತೆ ವೆಲ್ಲೂರಿಗೆ ಬರಲೇಬೇಕು ಎಂದು ಕೈ ಹಿಡಿದು ಕೇಳಿಕೊಂಡರು, ರೂರ್ಕೆಲಾದ ಆ ಕುಟುಂಬದ ಮೂರು ಮಂದಿ ಒಂದೊಂದು ನಮೂನೆಯ ಹಿಂಸೆಯಿಂದ ನರಳುತ್ತಿದ್ದವರು. ಆದರೂ ಬದುಕಲೇ ಬೇಕು, ಒಬ್ಬರನ್ನೊಬ್ಬರು ಬದುಕಿಸಿಕೊಳ್ಳಲೇಬೇಕು ಎಂಬ ದಟ್ಟವಾದ ಕಾಳಜಿಯಿಂದ ಹೋರಾಟ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದರು. ಆ ಕುಟುಂಬದ ‘ಮೈಥಿಲಿ’ ವರ್ತನೆಗೂ ಮೀರಿದ ಮಾನವೀಯತೆಯನ್ನು ತುಂಬಿಕೊಂಡಿದ್ದಳು.

 ಪ್ರಸಿದ್ಧ ಬಂಗಾಳಿ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರು ತನ್ನ ಕ್ರತಿಗಳಲ್ಲಿ ಸುತ್ತಿಬಳಸಿ ಒಂದು ವಾಕ್ಯಕ್ಕೆ ಜೀವ ಕೊಡುತ್ತ ಹೋಗುತ್ತಾರೆ, ಅದು ಹೀಗಿದೆ: ‘‘ಬಂಗಾಳದ ಹೆಣ್ಣು ಮಕ್ಕಳು ಪ್ರೀತಿ ಪ್ರೇಮ, ವಿಷಾದ, ಕರುಣೆ ಮತ್ತು ಮಾನವೀಯತೆಯನ್ನು ತುಂಬಿಕೊಂಡು ಪ್ರತಿಕ್ಷಣವೂ ಗಂಡಸರ ಕ್ರೌರ್ಯಕ್ಕೆ ಮುಖಾಮುಖಿಯಾಗುತ್ತಿರುತ್ತಾರೆ.’’ ಎಂದು, ಅಂಥ ವ್ಯಾಪಕವಾದ ವ್ಯಕ್ತಿತ್ವ ವನ್ನು ಈ ಮೈಥಿಲಿ ಪಡೆದಿದ್ದಳು. ಅವಳ ಒಂದೊಂದು ಅಪೂರ್ಣ ಇಂಗ್ಲಿಷ್ ಶಬ್ದವೇ ವಾಕ್ಯದಂತಿದ್ದ ಪತ್ರಗಳು ಎಷ್ಟೋ ಕಾಡಿಸಿ ಬಿಟ್ಟಿವೆ. ಆದರೆ ದುರಂತವೆಂದರೆ: ಅವಳು ರೈಲ್ವೆ ಸ್ಟೇಷನ್‌ನಲ್ಲಿ ಕೊಟ್ಟ ವಿಳಾಸವಿದ್ದ ಪುಟ್ಟಡೈರಿ ಪಿಕ್‌ಪಾಕೆಟ್ ಆಗಿದ್ದರಿಂದ ಉತ್ತರಿಸಲಾಗುತ್ತಿರಲಿಲ್ಲ. ಪ್ರತಿ ಸಾರಿ ಅವಳು ಪತ್ರ ಬರೆಯುವಾಗಲೆಲ್ಲ ತನ್ನ ವಿಳಾಸ ಬರೆಯುತ್ತಿರಲಿಲ್ಲ. ನೀನು ಉತ್ತರಿಸದೇ ಇರುವುದರಿಂದ ಮತ್ತೆ ಪತ್ರ ಬರೆಯುವುದಿಲ್ಲ ಹೇಳುತ್ತಲೇ ಕೊನೆಗೊಂದು ದಿನ ಪತ್ರ ಬರೆಯುವುದನ್ನು ನಿಲ್ಲಿಸಿ ಬಿಡುತ್ತಾಳೆ. ಈ ದುರಂತಮಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಮೈಥಿಲಿಯ ಪತ್ರ’ ಎಂಬ ಶಿರ್ಷಿಕೆಯಲ್ಲಿ ಶೂದ್ರದ ‘ಕನಸಿಗೊಂದು ಕಣ್ಣು’ವಿನಲ್ಲಿ ಬರೆದೆ. ಅದನ್ನು ಲಂಕೇಶ್ ಅವರು ಮತ್ತು ಡಿ.ಆರ್. ನಾಗರಾಜ್ ತುಂಬ ಇಷ್ಟಪಟ್ಟು ಲಂಕೇಶ್ ಪತ್ರಿಕೆಯಲ್ಲಿ ಮರು ಮುದ್ರಿಸಿದರು. ಡಿ.ಆರ್. ಅದಕ್ಕೆ ಒಂದು ಪುಟ್ಟ ಟಿಪ್ಪಣಿಯನ್ನು ಸೇರಿಸಿದ್ದ.

ಇಂಥ ಹಿನ್ನೆಲೆಯ ಕೇಂದ್ರ ಪಾತ್ರಗಳನ್ನು ಅಂದು ರಾತ್ರಿ ಮದ್ರಾಸಿನ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಗೆಳೆಯ ಅಗ್ರಹಾರ ಕ್ರಷ್ಣಮೂರ್ತಿ ಮನೆಗೆ ಒಂದು ರೀತಿಯ ವೇದನೆಯಿಂದಲೇ ಹೋಗಿದ್ದೆ. ಒಂದು ವೇಳೆ ಹೋಗದೆ ಅವರ ಜೊತೆ ವೆಲ್ಲೂರಿಗೆ ಹೊರಟಿದ್ದರೆ ಈ ಲೇಖನದ ಕಥಾ ನಾಯಕನನ್ನು ಕಳೆದುಕೊಳ್ಳುತ್ತಿದ್ದೆ. ಮಾರನೆಯ ದಿನ ಕೃಷ್ಣಮೂರ್ತಿಯ ಮನೆಯಿಂದ ಮೆರೀನಾ ಬೀಚ್‌ಗೆ ಹೋಗಿ ಒಂದೆರಡು ಗಂಟೆ ಸಮುದ್ರದ ಅಲೆಗಳಲ್ಲಿ ಅಪೂರ್ವ ಭಾವನೆಗಳನ್ನು ತುಂಬಿಕೊಂಡು, ಮೈಥಿಲಿಯ ಕುಟುಂಬವನ್ನು ಏನು ಮಾಡಿದರೂ ಪಕ್ಕಕ್ಕೆ ತಳ್ಳಲು ಆಗದೆ ಅಗ್ರಹಾರನ ಮನೆಗೆ ಬಂದಿದೆ. ಕೇಂದ್ರ ಸಾಹಿತ್ಯ ಅಕಾಡಮಿಯ ಕಚೇರಿ ಆಗ ಮದ್ರಾಸ್‌ನಲ್ಲಿತ್ತು. ಅದರ ಪ್ರಾದೇಶಿಕ ಕಚೇರಿ ಅಲ್ಲಿಯೇ ಇತ್ತು. ಅವನ ಕಾರ್ಯವ್ಯಾಪ್ತಿಗೆ ಹೇಳಿ ಮಾಡಿಸಿದಂತಿದ್ದ ‘ಸಾಹಿತ್ಯ ಅಕಾಡಮಿ’ಯ ಸ್ವರೂಪವನ್ನು ಪರಿಚಯಿಸಿಕೊಳ್ಳುವಾಗ ಆಕರ್ಷಕವಾಗಿ ಯಾವುದೋ ವಿಚಾರ ಸಂಕಿರಣಕ್ಕಾಗಿ ಬಂದಿದ್ದ ಗೆಳೆಯ ಪ್ರೊ. ಎಸ್. ಚಂದ್ರಶೇಖರ ಅವರೂ ಇದ್ದರು. ಚಂದ್ರಶೇಖರ್ ಅವರು ಗಂಭೀರ ಇತಿಹಾಸ ಪ್ರಾಧ್ಯಾಪಕರು. ಅಂದು ಸಂಜೆ ನಮ್ಮಿಬ್ಬರಿಗೂ ತಮಿಳಿನ ಪ್ರಸಿದ್ಧ ವರ್ಣಮಯ ಲೇಖಕ ಜಯಕಾಂತನ್ ಅವರ ಜೊತೆ ಊಟದ ವ್ಯವಸ್ಥೆ ಮಾಡಿದ ಕೃಷ್ಣಮೂರ್ತಿ. ಇದಕ್ಕಿಂತ ಮೊದಲು ಕೃಷ್ಣಮೂರ್ತಿ ಬೆಂಗಳೂರಿಗೆ ಬಂದಾಗಲೆಲ್ಲಾ ಜಯಕಾಂತನ್ ಅವರ ಸಾಹಿತ್ಯದ ಹೆಚ್ಚುಗಾರಿಕೆಯನ್ನು ವಿವರಿಸುತ್ತ, ‘ಅವರನ್ನು ನೋಡಲೇ ಬೇಕು’ ಎಂಬ ತಾದ್ಯಾತ್ಮತೆಯನ್ನು ಬೆಳೆಸಿಬಿಟ್ಟಿದ್ದ.

    ಹಾಗೆ ನೋಡಿದರೆ ಡಿಸೆಂಬರ್ 30, 1986ರ ಸಂಜೆಯನ್ನು ಮರೆಯಲು ಸಾಧ್ಯವೇ ಇಲ್ಲ. ಹಾಗೆ ಮರೆಯಲು ಸಾಧ್ಯವೇ ಆಗದ ಜಯಕಾಂತನ್ ಅವರ ಜೊತೆಯಲ್ಲಿ ಮೂರುನಾಲ್ಕು ಗಂಟೆ ಅಮೂಲ್ಯ ಕಾಲವನ್ನು ಕಳೆದಿದ್ದೆವು. ಹೀಗೆ ನಮ್ಮ ಚಿಂತನಾ ಕ್ರಮವನ್ನು ಶ್ರೀಮಂತಗೊಳಿಸಿದ ಜಯಕಾಂತನ್ ಅವರು ಕಳೆದವಾರ ಚೆನ್ನೆನಲ್ಲಿ ತಮ್ಮ 81ನೆ ವಯಸ್ಸಿನಲ್ಲಿ ನಿಧನರಾದ ವಿವರವಾದ ವರದಿಯನ್ನು ‘ದಿ ಹಿಂದೂ’ ಪತ್ರಿಕೆಯಲ್ಲಿ ಓದಿದಾಗ, ಅವ್ಯಕ್ತ ವೇದನೆ ಕಾಡತೊಡಗಿತು. ಇದೇ ಸಮಯಕ್ಕೆ ಇದನ್ನು ಬರೆಯುವ ಕಾಲಕ್ಕೆ ನನಗೆ ತುಂಬ ಪ್ರಿಯವಾದ ಕಾದಂಬರಿಕಾರ ಜರ್ಮನಿಯ ಗುಂಥರ್‌ಗ್ರಾಸ್ ತಮ್ಮ 87ನೆ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಹಿಟ್ಲರ್‌ನ ಕ್ರೌರ್ಯವನ್ನು ತಮ್ಮ ಸಾಹಿತ್ಯದಲ್ಲಿ ದಾಖಲಿಸುತ್ತಲೇ, ಅಂಥ ರಾಕ್ಷಸನ ನೆಲದಲ್ಲಿ ನಾನು ಬದುಕಿದೆನಲ್ಲ ಎಂಬುದನ್ನು ಅವಮಾನವಾಗಿ ತೆಗೆದುಕೊಂಡು ಇಪ್ಪತ್ತನೆಯ ಶತಮಾನದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಪ್ರಭಾವಬೀರಿದ, ಕಾದಂಬರಿಕಾರ, ಕಥೆಗಾರ, ನಾಟಕಕಾರ ಮತ್ತು ಕವಿ. ಹಾಗೆಯೇ ಗುಂಥರ್‌ಗ್ರಾಸ್ ಕಲ್ಕತ್ತ ಮತ್ತು ಪಶ್ಚಿಮ ಬಂಗಾಳದ ಪ್ರಜ್ಞಾವಂತರ ಮನಸ್ಸಿನಲ್ಲಿ ಬೇರುಬಿಟ್ಟವರು. ‘ದಿ ಟಿನ್ ಡ್ರಮ್’ ಕಾದಂಬರಿ ಹೇಗೆ ಸಾಹಿತ್ಯವಲಯದಲ್ಲಿ ಸಂಚಲನ ಮೂಡಿಸಿತೋ, ಅದೇ ಸಮಯಕ್ಕೆ ಅವರ ‘ ಷೋ ಯುವರ್ ಟಂಗ್’ ಎಂಬ ಕೃತಿಯು ಕಾಳಿಕಾ ದೇವಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಲ್ಕತ್ತೆಯ ಏಳುಬೀಳುಗಳನ್ನು ಆತ್ಮೀಯವಾಗಿ ಚಿತ್ರಿಸಿದ ಕೃತಿ. ಮೂರುನಾಲ್ಕು ಬಾರಿ ಎಷ್ಟೋ ತಿಂಗಳು ಕಾಲ ಕಲ್ಕತ್ತೆಯಲ್ಲಿ ನೆಲೆಸಿ, ಅದರ ಪ್ರತಿ ಪ್ರದೇಶದ ವೈಶಿಷ್ಟ ಮತ್ತು ದೋಷಗಳನ್ನು ದಾಖಲಿಸಿದವರು. 1986ರಲ್ಲಿ ನಾನು ಕಲ್ಕತ್ತಕ್ಕೆ ಹೋದಾಗ, ಗುಂಥರ್‌ಗ್ರಾಸ್‌ರ ಬರವಣಿಗೆಯನ್ನು ಒಂದಷ್ಟು ಓದಿಕೊಂಡು ಹೋಗಲು ಸಾಧ್ಯವಾಗಿತ್ತು .
 
ಒಂದು ಹಂತದಲ್ಲಿ ಜಯಕಾಂತನ್ ಗುಂಥರ್‌ಗ್ರಾಸ್ ಅವರಷ್ಟು ದೊಡ್ಡ ಕಾದಂಬರಿಕಾರ ಅಲ್ಲದಿರಬಹುದು, ಆದರೆ ಅಗಾಧವಾದ ಅರ್ಥಪೂರ್ಣ ತುಡಿತವನ್ನು ತಮ್ಮ ಬರವಣಿಗೆಯಲ್ಲಿ ತುಂಬಿಕೊಂಡಿದ್ದವರು. ಅಂದಿನ ಮದ್ರಾಸ್ ಇರಬಹುದು, ಇಂದಿನ ಚೆನ್ನೆ ಇರಬಹುದು ಕೆಳವರ್ಗದ ಮತ್ತು ಮಧ್ಯಮ ವರ್ಗದ ಓದುಗರ ಹೃದಯದಲ್ಲಿ ಗಾಢವಾಗಿ ಬೇರು ಬಿಟ್ಟುಕೊಂಡಿದ್ದವರು. ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ಒಂದು ಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದವರು. ಏಳನೆಯ ತರಗತಿಯ ನಂತರ ಮುಂದೆ ಓದಲು ಮನಸ್ಸು ಬಾರದೆ ಮದ್ರಾಸಿಗೆ ಓಡಿಬಂದವರು. ಚಿಕ್ಕ ವಯಸ್ಸಿನಲ್ಲಿಯೇ ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತಗಳ ಬಗ್ಗೆ ಒಲವು ಬೆಳೆಸಿಕೊಂಡವರು. ಇದರಿಂದ ಕೆಳವರ್ಗದವರ ಬದು ಕನ್ನು ಅರಿಯುವ ತುಡಿತವನ್ನು ತಮ್ಮ ಬದುಕಿನ ಉಸಿರಾಟದಂತೆ ಕಾದಿಟ್ಟುಕೊಂಡವರು. ಈ ದೃಷ್ಟಿ ಯಿಂದ ಕೂಲಿಕಾರರ ಜೊತೆ ರಿಕ್ಷಾವಾಲಾ ಮತ್ತು ಕಂಡಕ್ಟರ್‌ಗಳ ಮಧ್ಯೆ ಸದಾ ಜೀವಿಸುತ್ತಲೇ ಅವರ ಬದುಕಿನ ಏಳು ಬೀಳುಗಳನ್ನು ಕಥೆ, ಕಾದಂಬರಿಗಳಲ್ಲಿ ದಾಖಲಿಸುತ್ತಲೇ ಸಾಹಿತ್ಯದ ಹೆಚ್ಚುಗಾರಿಕೆಯನ್ನು ಉಳಿಸಿಕೊಂಡವರು. ಮೊದಲನೆಯ ಬಾರಿಗೆ ಅವರನ್ನು ಮದ್ರಾಸ್‌ನಲ್ಲಿ ಊಟದ ಸಮಯದಲ್ಲಿ ಭೇಟಿಯಾದಾಗ, ಒಂದಷ್ಟು ಆ ಜನರ ಜೊತೆಯೇ ಬಂದಿದ್ದರು. ಯಾಕೆಂದರೆ ಆ ಜನ ಸಮುದಾಯವನ್ನು ಸಂಘಟಿಸುತ್ತಲೇ ಅವರಲ್ಲಿ ಜೀವನ ಪ್ರೀತಿಯನ್ನು ತುಂಬುತ್ತಿದ್ದವರು. ಅಷ್ಟೇ ಅಲ್ಲ ಅವರೆಲ್ಲ ತಮ್ಮನ್ನೇ ಕುರಿತು ಜಯಕಾಂತನ್ ಬರೆದಿದ್ದಾರೆ ಎಂದು ಆತ್ಮೀಯವಾಗಿ ಒಂದೊಂದು ಕಥೆಯನ್ನು ಒಳಗೆಬಿಟ್ಟುಕೊಂಡವರು.

ಜಯಕಾಂತನ್ ಅವರು ಭೌತಿಕವಾಗಿ ಸಾಮಾನ್ಯ ಎತ್ತರದ ವ್ಯಕ್ತಿ. ಆದರೆ ಆಕರ್ಷಕ ವ್ಯಕ್ತಿತ್ವವನ್ನು ತಮ್ಮ ಮೀಸೆ, ತಲೆಯ ಕೂದಲು ಹಾಗೂ ಸರಳ ರೀತಿಯ ನಡಾವಳಿಯಿಂದ ಎಲ್ಲರಿಗೂ ಪ್ರಿಯರಾಗಿದ್ದವರು. ಒಂದು ರೀತಿಯ ಏರುಧ್ವನಿಯಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನ ಜೀವನದ ಸಮಸ್ಯೆಗಳನ್ನು ಬರವಣಿಗೆಯಿಂದ ಹೊರಗೂ ಜನರಿಗೆ ತಲುಪಿಸುತ್ತಿದ್ದವರು. ಇಂಥ ವರ್ಣಮಯ ಲೇಖಕನನ್ನು ‘ಶೂದ್ರ’ ಇಪ್ಪತ್ತನೆಯ ವರ್ಷದ ಕಾರ್ಯಕ್ರಮಕ್ಕೆ ಅಗ್ರಹಾರ ಕೃಷ್ಣಮೂರ್ತಿಯ ಮೂಲಕ ಬೆಂಗಳೂರಿಗೆ ಕರೆಸಿದ್ದೆ. 

ಅಂದು ಯವನಿಕಾ ಸಭಾಂಗಣದಲ್ಲಿ ಜಯಕಾಂತನ್ ಅವರು ಮಾತಾಡುವಾಗ ಲಂಕೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಯಕಾಂತನ್ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ಕನ್ನಡದ ಅಪೂರ್ವ ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣನವರು ಬಂದು ಭೇಟಿಯಾಗಿದ್ದರು. ಒಂದು ದೃಷ್ಟಿಯಿಂದ ಲಂಕೇಶ್ ಅವರು ಜಯಕಾಂತನ್ ತಮ್ಮ ಒಟ್ಟು ಅನುಭವವನ್ನು ಭಾವುಕತೆಯ ನೆಲೆಯಲ್ಲಿ ಚಿತ್ರಿಸಿ ಬಿಡುತ್ತಾರೆ ಎಂಬ ಗುಮಾನಿಯನ್ನು ಹೊಂದಿದ್ದರು. ಯಾಕೆಂದರೆ ಸಾಮಾಜಿಕ ಏರುಪೇರುಗಳ ಕುರಿತು ಲೇಖಕನಾದವನು ಎಷ್ಟೋ ಕಳಕಳಿಯನ್ನು ಹೊಂದಿದ್ದರೂ, ಒಂದು ಹಂತದ ಅಂತರವನ್ನು ಕಾಪಾಡಿಕೊಳ್ಳಲೇಬೇಕು ಎಂಬುದನ್ನು ಗಾಢವಾಗಿ ನಂಬಿದ್ದವರು ಲಂಕೇಶ್. ಹಾಗೆಯೇ ತಮಿಳಿನ ಬಹುಪಾಲು ಲೇಖಕರು ಮತ್ತು ಕಲಾವಿದರು ಗಟ್ಟಿ ಧ್ವನಿಯಲ್ಲಿ ಮಾತಾಡುವಾಗ, ಏನಾದರೂ ಧ್ವನಿಪೂರ್ಣತೆಯನ್ನು ಸುರಿಸಲು ಸಾಧ್ಯವಾ? ಎಂಬ ಪ್ರಶ್ನೆಯು ಸ್ವಾಭಾವಿಕವಾಗಿಯೇ ಮುಖಾಮುಖಿಯಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಅಂದು ಲಂಕೇಶ್ ಅವರು ಕಾರ್ಯಕ್ರಮದಲ್ಲಿ ಮತ್ತು ಖಾಸಗಿ ಮಾತುಕತೆಯಲ್ಲಿ ಜಯಕಾಂತನ್ ಅವರನ್ನು ನೋಡಲು ಪ್ರಯತ್ನಿಸುತ್ತಿದ್ದರು. ಇಷ್ಟೊಂದು ಪ್ರಮಾಣದಲ್ಲಿ ಜನ ಸಾಮಾನ್ಯರ ಜೊತೆ ಬದುಕುತ್ತಿದ್ದ ಈ ಅರ್ಥಪೂರ್ಣ ಸಾಹಿತಿ ಹೇಗೆ ಇನ್ನೂರಕ್ಕೂ ಮೇಲ್ಪಟ್ಟು ಕಥೆಗಳನ್ನು, ಮೂವತ್ತಕ್ಕೂ ಮೇಲ್ಪಟ್ಟು ಕಾದಂಬರಿಗಳನ್ನು ಬರೆಯಲು ಸಾಧ್ಯವಾಯಿತು ಅನಿಸುತ್ತದೆ. ಯಾವುದೂ ಕರಪತ್ರದ ರೀತಿಯ ಕಳಪೆ ಸಾಹಿತ್ಯವಲ್ಲ. ಇದರ ಜೊತೆಗೆ ತಾನು ಸಾಹಿತ್ಯವನ್ನು ಹೇಗೆ ಗ್ರಹಿಸಿದ್ದೇನೆ ಎಂಬುದನ್ನು ದೃಷ್ಟಿಯಲ್ಲಿಟ್ಟು ಎರಡು ಮಹತ್ವಪೂರ್ಣ ಜೀವನ ಚರಿತ್ರೆಗಳನ್ನು 1974 ಮತ್ತು 1980ರಲ್ಲಿ ಬರೆದರು. ಇದರ ಜೊತೆಗೆ ಎರಡು ಚಲನಚಿತ್ರಗಳಿಗೆ ತಾವೇ ಚಿತ್ರಕಥೆ ಬರೆದು ನಿರ್ದೇಶಿಸಿದರು. ಜಯಕಾಂತನ್ ಅವರ ಕಾದಂಬರಿಗಳನ್ನು ಬೇರೆಯವರೂ ನಿರ್ದೇಶಿಸಿದ್ದಾರೆ. ಹೀಗೆ ವರ್ಣಮಯವಾಗಿ ಬದುಕಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಪದ್ಮಭೂಷಣ ಹಾಗೂ ರಶ್ಯಾ ಸರಕಾರ ಕೊಡುವ ‘ಆರ್ಡರ್ ಆ್ ್ರೆಂಡ್‌ಶಿಪ್’ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕೆಲವು ವರ್ಣಮಯ ವ್ಯಕ್ತಿಗಳು ನಮ್ಮ ಬದುಕಿಗೆ ಪರಿಚಯವಾಗಿ ಬಂದಾಗ, ಆಪ್ತತೆ ಎಂಬ ಧ್ವನಿಯೂ ಯಾವುದಾದರೂ ಒಂದು ವಿಧದಲ್ಲಿ ಕಾಡುತ್ತಲೇ ಇರುತ್ತದೆ. ಹೀಗೆ ಕಾಡುವ ಜಯಕಾಂತನ್ ಅವರನ್ನು ಎರಡು ವರ್ಷಗಳ ಹಿಂದೆ ಚೆನ್ನೆನಲ್ಲಿ ತಮಿಳಿನ ಬ್ಯಾತ್‌ಕವಿ ವೈರಮುತ್ತು ಅವರ ಅರವತ್ತನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಭೇಟಿಯಾಗಲು ಸಾಧ್ಯವಾಯಿತು. ತಮಿಳು ಕವಯಿತ್ರಿ ಮತ್ತು ಅತ್ಯುತ್ತಮ ಅನುವಾದಕಿ ಮಲರ್‌ವಿಳಿಯವರು ಕರೆದುಕೊಂಡು ಹೋಗಿದ್ದರು. ಅಂದು ಜಾತ್ರೆ ರೀತಿಯ ಜನ. ಕರುಣಾನಿಯವರು ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಯಕಾಂತನ್ ಅವರು ಭಾಗವಹಿಸಿದ್ದರು. ಹಾಗೆಯೇ ಕಮಲ್‌ಹಾಸನ್ ಅವರು. ಆ ಕಾರ್ಯಕ್ರಮದಲ್ಲಿ ಈ ಲೇಖನದ ಕಥಾನಾಯಕ ಅವರು ಮಾತಾಡುವಾಗ; ಧ್ವನಿ ಅತ್ಯಂತ ಕ್ಷೀಣಗೊಂಡಿದೆ ಅನ್ನಿಸಿತು. ಬದುಕಿನ ನಾನಾ ರೀತಿಯ ಸಂಘರ್ಷಗಳ ಕಾರಣಕ್ಕಾಗಿ ಭೌತಿಕವಾಗಿ ದುರ್ಬಲರಾಗಿದ್ದಾರೆಂದು ಭಾವಿಸಿದೆ. ಆದರೆ ಕಾರ್ಯಕ್ರಮ ಮುಗಿದ ಮೇಲೆ ಅವರನ್ನು ಭೇಟಿಯಾಗಿ ಪರಿಚಯ ಮಾಡಿಕೊಂಡೆ. ಮುಖದ ತುಂಬ ನಗು ತುಂಬಿಕೊಂಡು ‘‘ವಣಕ್ಕಮ್. ನಲ್ಲ ಇರ್ಕೆಂಗಳಾ’’ ಎಂಬ ಅವರ ಕೊನೆಯ ಧ್ವನಿ ಈಗಲೂ ನನ್ನ ಮನಸ್ಸಿನಲ್ಲಿ ವಿಷಾದವನ್ನು ಗುನುಗುನಿಸುತ್ತಿದೆ. ಈ ನೆಲೆಯಲ್ಲಿ ಆ ರೂರ್ಕೆಲ ಕುಟುಂಬದ ಮೈಥಿಲಿ ಏನಾಗಿದ್ದಾಳೋ ಗೊತ್ತಿಲ್ಲ. ಇಷ್ಟಾದರೂ ಗುಂಥರ್‌ಗ್ರಾಸ್, ಜಯಕಾಂತನ್ ಅವರಂಥ ಮಹನೀಯರ ನಡುವೆ ಟ್ರೈನಿನ ಅನುಭವ ಆವರಿಸಿಕೊಳ್ಳುತ್ತದೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...