Saturday, April 11, 2015

ಮೂರು ಕವಿತೆಗಳು




ಕು.ಸ.ಮಧುಸೂದನ್


ಸ್ವಾರ್ಥ

ಇತಿಹಾಸವೇ ಶ್ರೇಷ್ಠವೆಂದು ಭ್ರಮಿಸುವ
ದೇಶಭಕ್ತರಿಗೆ
ಪುರಾಣಗಳ ಮಿಥ್ಯೆಯೇ ಸತ್ಯವೆಂದು ಸಾಧಿಸುವ
ಸನಾತನಿಗಳಿಗೆ
ವರ್ತಮಾನ
ಬೇಕಾಗುವುದು
ತಮ್ಮ ಗದ್ದುಗೆ ಉಳಿಸಿಕೊಳ್ಳಲು
ಮತ್ತು
ಚಾವಟಿಯ ತಮ್ಮ ಕೈಲೇ ಉಳಿಸಿಕೊಳ್ಳಲು
ಮಾತ್ರವೇ!
***




ಚರಿತ್ರೆ


ಚರಿತ್ರೆ ಅನ್ನುವುದು
ಅಂಗಿಯಾದರೂ ಆಗಿದ್ದರೆ
ದಿನಾ
ಸರ್ಫ ಎಕ್ಸೆಲಿನಲ್ಲಿ ತೊಳೆದು
ಗಂಜಿ ಹಾಕಿ
ಗರಿಗರಿ ಇಸ್ತ್ರೀ ಮಾಡಿ
ಇಡಬಹುದಿತ್ತು
ಬೇಕೆಂದಾಗ ಹಾಕಿಕೊಳ್ಳಬಹುದಿತ್ತು!
ಆದರಿಲ್ಲಿ
ಚರಿತ್ರೆ ಅನ್ನೋದು
ಅಡುಗೆ ಮನೆ ಮಸಿಬಟ್ಟೆಯಾಗಿ
ತೊಳೆದಷ್ಟೂ ಕೊಳೆ
ಮುಟ್ಟಿದೊಡನೆ ಮೆತ್ತಿಕೊಳ್ಳುತ್ತದೆ!
***


ಅರವತ್ತು ವರ್ಷಗಳಾದವು!

ಆರಂಭವಾಗಿ ಅರವತ್ತು ವರ್ಷಗಳಾದವು:
ನಾವವರ ವಿರುದ್ದ ಘೋಷಣೆ ಕೂಗುತ್ತೇವೆ
ಅವರ ಪ್ರತಿಕೃತಿಗಳ ಸುಡುತ್ತೇವೆ
ಕತ್ತೆಗಳ ಮುಖಕ್ಕೆ ಅವರ ಮುಖವಾಡಗಳ
ಲಗತ್ತಿಸಿ
ಕೇಕೆ ಹಾತ್ತೇವೆ
ಬಸ್ಸುಗಳಿಗೆ ಬೆಂಕಿಹಚ್ಚಿ
ಹೆದ್ದಾರಿಗಳಲ್ಲಿ
ಟೈರು ಉರಿಸುತ್ತೇವೆ
ಸಿಕ್ಕರೆ ಜಲ್ಲಿಕಲ್ಲುಗಳು ಕಂಡಕಡೆಗಳಿಗೆ ಬೀಸುತ್ತೇವೆ
ಇವೆಲ್ಲ ಸಾಕಾಗಲಿಲ್ಲ ಅನಿಸಿದರೆ
ಅಮರಣಾಂತ ಉಪವಾಸ ಹೂಡುತ್ತೇವೆ
ನಾಲ್ಕು ದಿನಗಳ ನಂತರ ನಮ್ಮವರ‍್ಯಾರಾದರು
ಕೊಟ್ಟ ಶರಬತ್ತು ಕುಡಿದು
ಮುಗುಳ್ನಗುವ ಮುಖಕ್ಕೆ ಮೆತ್ತಿಕೊಂಡು
ಪೇಪರಿನವರಿಗೆ ಪೋಸು ಕೊಟ್ಟು
ಮತ್ತೊಂದು ಸುತ್ತಿನ ಹೋರಾಟಕ್ಕೆ
ಸಿದ್ದಾರಾಗುತ್ತೇವೆ
ನಂಬಿದವರ ಮೂರ್ಖರನ್ನಾಗಿ ಮಾಡುತ್ತೇವೆ!
೨.
ಅವರು ಕೆರಳುವುದಿಲ್ಲ
ಕಾರಣ ಕೇಳುವುದಿಲ್ಲ  
ಸಮಾದಾನ ಹೇಳುವುದಿಲ್ಲ
ನಿರ್ಲಿಪ್ತತೆಯ ಮುಖಬಾವದೊಂದಿಗೆ
ಗದ್ದುಗೆ ಏರಲು
ಸನ್ನದ್ದರಾಗುತ್ತಾರೆ!
ಇದೆಲ್ಲ
ಆರಂಭವಾಗಿ ಅರವತ್ತು ವರ್ಷಗಳಾದವು!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...