Thursday, May 28, 2015

ಮಕ್ಕಳ ದುಡಿಮೆ ಸಾಮಾಜಿಕ ಕ್ರೌರ್ಯ


 
 
 ಹರ್ಷ ಮಂದರ್
ಅನು: ನಾ. ದಿವಾಕರ


  ಮಕ್ಕಳ ದುಡಿಮೆ ಸಾಮಾಜಿಕ ಕ್ರೌರ್ಯ


ಶಾಲೆಗೆ ಹೋಗುವ ಮಕ್ಕಳು ತಮ್ಮ ಶಾಲೆಯ ಸಮಯ ಮುಗಿದ ನಂತರ ಕೌಟುಂಬಿಕ ಉದ್ಯಮಗಳಲ್ಲಿ ಕೆಲಸ ಮಾಡಬಹುದು ಎಂದು ಕೇಂದ್ರ ಸಚಿವ ಸಂಪುಟ ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿರುವುದು ನಮ್ಮ ಸಮಾಜದ ಮತ್ತು ಪ್ರಭುತ್ವದ ಅತ್ಯಂತ ಕ್ರೂರ ಪದ್ಧತಿಯ ಸಂಕೇತವಾಗಿದೆ. ಬಡತನದಲ್ಲಿ ಜನಿಸುವುದೇ ಮಕ್ಕಳ ಅಪರಾಧ ಆಗಿರುವ ಸಂದರ್ಭದಲ್ಲಿ ಮಕ್ಕಳ ಭವಿಷ್ಯವನ್ನು ಕಸಿದುಕೊಂಡು ಅವರ ಬಾಲ್ಯವನ್ನು ದುರ್ಬರಗೊಳಿಸುವುದು ಕ್ರೌರ್ಯವಲ್ಲದೆ ಮತ್ತೇನು? ಇಂದಿಗೂ ಸಹ ವಿಶ್ವದ ಬಾಲಕಾರ್ಮಿಕರ ಪೈಕಿ ಅತಿ ಹೆಚ್ಚಿನ ಸಂಖ್ಯೆ ಭಾರತದಲ್ಲಿ ಕಂಡುಬರುತ್ತದೆ. ಬಾಲ ಕಾರ್ಮಿಕ ಕಾಯ್ದೆಯಲ್ಲಿ ಅಪಾಯಕಾರಿ ವೃತ್ತಿಯಲ್ಲಿ ಬಾಲ ಕಾರ್ಮಿಕರನ್ನು ತೊಡಗಿಸುವುದನ್ನು ನಿಷೇಸಲಾಗಿತ್ತು. ಈ ಪಟ್ಟಿಗೆ ಮನೆಗೆಲಸವನ್ನೂ ಸೇರಿಸಲಾಗಿತ್ತು. 14 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಈ ನಿಯಮವೂ ಅನ್ವಯಿಸುತ್ತಿರಲಿಲ್ಲ. ತಮ್ಮ ಮಕ್ಕಳಿಗೆ ಅತ್ಯುತ್ತಮ ಜೀವನವನ್ನು ಒದಗಿಸಲು ಹೆಣಗಾಡುವ ಮಧ್ಯಮ ವರ್ಗಗಳಿಗೆ ಮತ್ತು ನಮ್ಮ ಪ್ರಭುತ್ವಕ್ಕೆ ಅವಕಾಶವಂಚಿತ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಂಡು ಕಾರ್ಖಾನೆಗಳಲ್ಲಿ, ಬೀದಿ ಬದಿಯ ಅಂಗಡಿಗಳಲ್ಲಿ, ನಮ್ಮ ಮನೆಗಳಲ್ಲಿ ದುಡಿಮೆ ಮಾಡುವುದು ಸಮಸ್ಯೆ ಎನಿಸಲೇ ಇಲ್ಲ.

ಮಕ್ಕಳ ಹಕ್ಕುಗಳಿಗಾಗಿ ದಶಕಗಳಿಂದ ನಡೆಯುತ್ತಿರುವ ಹೋರಾಟಗಳಿಗೆ ಸ್ಪಂದಿಸಿ ಯುಪಿಎ ಸರಕಾರ 1986ರ ಬಾಲಕಾರ್ಮಿಕ ನಿಷೇಧ ಮತ್ತು ನಿಬಂಧನೆಯ ಕಾಯ್ದೆಗೆ ತಿದ್ದುಪಡಿ ಮಾಡಲು ಶಿಾರಸು ಮಾಡಿತ್ತು. 14 ವರ್ಷದವರೆಗಿನ ಮಕ್ಕಳನ್ನು ದುಡಿಮೆಗೆ ಹಚ್ಚುವುದನ್ನು ಕಾಯ್ದೆಯಡಿ ನಿಷೇಸಲಾಗಿತ್ತು. 14ರಿಂದ 18 ವರ್ಷ ದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್ಲಿ ದುಡಿಸಿಕೊಳ್ಳುವುದನ್ನು ಅಪರಾಧ ಎಂದು ಪರಿಗಣಿಸಲಾಗಿತ್ತು. ಅಲ್ಲಿಯವರೆಗೂ ಈ ಅನಿಷ್ಟ ಪದ್ಧತಿಗೆ ಕಾನೂನು ನಿರ್ಬಂಧ ಇರಲಿಲ್ಲ ಎನ್ನುವುದು ಸೋಜಿಗದ ಸಂಗತಿ. ಆದರೆ ಯುಪಿಎ ಸರಕಾರದ ಕೊನೆಯ ದಿನಗಳಲ್ಲಿ ಸಂಸತ್ತಿನ ಕಲಾಪ ಸರಿಯಾಗಿ ನಡೆಯದ ಕಾರಣ ಈ ತಿದ್ದುಪಡಿಗಳು ಜಾರಿಯಾಗಲಿಲ್ಲ. ಇತ್ತೀಚೆಗೆ ಕೇಂದ್ರ ಸರಕಾರ ಈ ಕಾಯ್ದೆಯ 14ರಿಂದ 18ನೆಯ ವರ್ಷದ ಮಕ್ಕಳನ್ನು ದುಡಿಮೆಗೆ ಹಚ್ಚುವುದನ್ನು ನಿಷೇಸುವ ಕಾಯ್ದೆಯನ್ನು ಜಾರಿಗೊಳಿಸಿತ್ತು. ಈ ನಿಟ್ಟಿನಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿಷೇಧವಾಗಬೇಕಿತ್ತು. ಆದರೆ ಕೇಂದ್ರ ಸರಕಾರ 14 ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಮರೆತು, ಶಾಲಾ ಸಮಯದ ನಂತರ ಕೌಟುಂಬಿಕ ಉದ್ಯಮದಲ್ಲಿ ದುಡಿಯಲು ಅವಕಾಶ ನೀಡಿರುವುದು ಅಕ್ಷಮ್ಯ, ಖಂಡನಾರ್ಹ.

ಇಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಕೌಟುಂಬಿಕ ಉದ್ಯಮದಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳ ವಿದ್ಯಾಭ್ಯಾಸ ಮತ್ತು ಬಾಲ್ಯವನ್ನು ಕಳೆದುಕೊಳ್ಳಲು ಸಿದ್ಧವಾಗಿರುವ ಸರಕಾರ ಮುಂದಿನ ಪ್ರಜೆಗಳಾದ ಮಕ್ಕಳನ್ನು ಅವರ ಪೋಷಕರ ವೃತ್ತಿಯಲ್ಲೇ ಮುಂದುವರಿಯುವಂತೆ ಏಕೆ ಬಯಸುತ್ತದೆ? ಅಕ್ಕಸಾಲಿಗನ ಮಗ ಕವಿ ಏಕಾಗಬಾರದು? ಮಗಳು ವಿಜ್ಞಾನಿ ಏಕಾಗಬಾರದು? ಮಧ್ಯಮವರ್ಗದ ಮಕ್ಕಳು ತಮ್ಮ ಶಾಲಾ ದಿನಗಳಲ್ಲೂ ಟಿವಿ, ಅಂತರ್ಜಾಲ, ಕಂಪ್ಯೂಟರ್ ಮುಂತಾದ ಸೌಲಭ್ಯಗಳನ್ನು ಹೊಂದಿರುತ್ತಾರೆ. ಇದೇ ಸೌಲಭ್ಯಗಳು ರೈತನ ಭೂಮಿಯಲ್ಲಿ ದುಡಿಯುವ, ಅಂಗಡಿಗಳಲ್ಲಿ ದುಡಿಯುವ ಮಕ್ಕಳಿಗೆ ಏಕೆ ನೀಡಲಾಗುವುದಿಲ್ಲ? ಬಡವರ ಮಕ್ಕಳು ಶಾಲೆಯ ನಂತರ ದುಡಿಯಬೇಕು ನಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಬೇಕು ಎಂದು ನಾವೇಕೆ ಬಯಸುತ್ತೇವೆ ? ದುಡಿಯುವ ವರ್ಗಗಳ ಮಕ್ಕಳು ತಮ್ಮ ಪೋಷಕರ ವೃತ್ತಿಯಲ್ಲೇ ಮುಂದುವರಿಯುವಂತೆ ಏಕೆ ಬಯಸುತ್ತೇವೆ? ಇದು ನಮ್ಮ ಸಮಾಜದಲ್ಲಿ ಗಾಢವಾಗಿ ಬೇರೂರಿರುವ ಜಾತಿ ವ್ಯವಸ್ಥೆ ಮತ್ತು ಜಾತಿ ಪ್ರಜ್ಞೆಯ ಸಂಕೇತ ಎನ್ನಬಹುದು. ಬಡ ಮತ್ತು ಅವಕಾಶವಂಚಿತರ ಮಕ್ಕಳು ದೈಹಿಕ ಶ್ರಮದಲ್ಲಿ ತೊಡಗಬೇಕೇ ಹೊರತು ಬೌದ್ಧಿಕ ಶ್ರಮದಲ್ಲಿ ತೊಡಗುವಂತಿಲ್ಲ ಎಂಬ ಜಾತಿ ಪ್ರಜ್ಞೆಯ ಧೋರಣೆ ಸಮಾಜದಲ್ಲಿ ಇನ್ನೂ ಗಟ್ಟಿಯಾಗುತ್ತಿದೆ.

ಸಂದರ್ಭದಲ್ಲಿ ನಾವು ಶ್ರಮಿಕರ ಘನತೆಗಾಗಿ ಆಗ್ರಹಿಸಬೇಕಿದೆ. ಶಾಲಾ ಶಿಕ್ಷಣದಲ್ಲಿ ಮಕ್ಕಳು ದೈಹಿಕ ದುಡಿಮೆಯಲ್ಲಿ ತೊಡಗುವಂತೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಬೇಕಿದೆ. ಗಾಂೀಜಿ ಈ ಒಂದು ಪದ್ಧತಿಯನ್ನು ಪ್ರತಿಪಾದಿಸಿದ್ದರು. ಶ್ರೀಮಂತರ ಮಕ್ಕಳು ದೈಹಿಕ ದುಡಿಮೆಯಲ್ಲಿ ತೊಡಗಿ ನೆಲ ಗುಡಿಸುವುದು, ಶೌಚಾಲಯ ಶುಚಿ ಮಾಡುವುದು, ಇಟ್ಟಿಗೆ ಹೊರುವುದು, ಬಟ್ಟೆ ನೇಯುವುದು ಮುಂತಾದ ಕೆಲಸಗಳಲ್ಲಿ ಪಾಲ್ಗೊಳ್ಳಲಿ. ಇದು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವಾಗುತ್ತದೆ. ಹೊಸ ಆರ್ಥಿಕ ನೀತಿಯ ಲವಾಗಿ ಕಾರ್ಖಾನೆಯ ಕೆಲಸಗಳು ಈಗ ಮನೆಯಲ್ಲೇ ಮಾಡುವಂತಾಗಿದೆ. ಬೆಂಕಿ ಪೆಟ್ಟಿಗೆಯಂತಹ ಪುಟ್ಟ ಮನೆಗಳಲ್ಲಿ ಈ ಮಕ್ಕಳು ಅನೇಕ ರೀತಿಯ ಕೆಲಸದಲ್ಲಿ ತೊಡಗಿರುತ್ತಾರೆ. ಕೃಷಿ ಭೂಮಿಯಲ್ಲಿ ಕೆಲಸ ನಿರ್ವಹಿಸುವ ಮಕ್ಕಳು ರಾಸಾಯನಿಕ ಗೊಬ್ಬರ ಮತ್ತು ಇತರ ಔಷಗಳಿಂದ ಹಾನಿ ಎದುರಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಮಕ್ಕಳನ್ನು ದುಡಿಮೆಗೆ ಹಚ್ಚುವುದು ಅಕ್ಷಮ್ಯ ಅಪರಾಧ ಅಲ್ಲವೇ? ಬಾಲಕಾರ್ಮಿಕ ದುಡಿಮೆಯನ್ನು ಕಾನೂನುಬದ್ಧವಾಗಿ ಮಾಡುವ ಉದ್ದೇಶ ಎಂದರೆ ಮಕ್ಕಳ ದುಡಿಮೆಯ ಮೂಲಕ ಕಡಿಮೆ ಖರ್ಚಿನಲ್ಲಿ ವಸ್ತುಗಳನ್ನು ಉತ್ಪಾದಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಲಾಭ ಗಳಿಸುವುದೇ ಆಗಿದೆ. ಆದರೆ ಈ ಎಳೆಯ ಮಕ್ಕಳ ಶಿಥಿಲ ಭುಜಗಳ ಮೇಲೆ ಅಭಿವೃದ್ಧಿ ಪಥದ ಹಾಸುಗಲ್ಲುಗಳನ್ನು ಹೊರುವಂತೆ ಮಾಡುವುದು ಅಮಾನವೀಯ ಅಲ್ಲವೇ ?

Monday, May 25, 2015

ಚಿತ್ತ ಭಿತ್ತಿ ಪುಸ್ತಕದ ಮುಖಪುಟ ಯಾವುದಿರಲಿ?
ಚಿತ್ತ ಭಿತ್ತಿ ನಮ್ಮ ನಡುವಿನ ಪ್ರತಿಭಾವಂತ ಯುವ ಕವಯತ್ರಿ ರೂಪಶ್ರೀ ಕಲ್ಲಿಗನೂರ ಅವರ ಕವನ ಸಂಕಲವ. ಈ ಸಂಕಲನಕ್ಕೆ ವಿಭಾ ಸಾಹಿತ್ಯ ಪ್ರಶಸ್ತಿ ಬಂದಿದೆ. ನಮ್ಮ ಪ್ರಕಾಶನದ ಹೊಸ ಪುಸ್ತಕವಿದು. ಅಚ್ಚಿಗೆ ಹೊರಟಿರುವ ಈ ಪುಸ್ತಕದ ಬೆಲೆ 100 ರೂ.
ಈ ಪುಸ್ತಕಕ್ಕೆ ನನ್ನ ನೆಚ್ಚಿನ ಕಲಾವಿದ ಜಿ. ಅರುಣಕುಮಾರ ಎಂದಿನಂತೆ ಅದ್ಬತ ಮುಖಪುಟ ಮಾಡಿದ್ದಾರೆ. ಯಾವುದನ್ನು ಆರಿಸಿಕೊಳ್ಳಬೇಕು ಅಂತ ತಿಳಿವಲ್ಲದು. ಮೂರೂ ಚನ್ನಾಗಿವೆಯೆಂದು ಅನ್ನಿಸುತ್ತದೆ... ನಿಮಗೆ ಇಷ್ಟವಾದ ನಿಮ್ಮ ಆಯ್ಕೆ ಯಾವುದು ಹೇಳಿ..?ನಮ್ಮ ಹೊಸ ಪುಸ್ತಕ : 'ಪರೋಹಿತಶಾಹಿ ಮತ್ತು ಗುಲಾಮಗಿರಿ'

ನಮ್ಮ ಪ್ರಕಾಶನದ ಹೊಸ ಪುಸ್ತಕ ಜ್ಯೋತಿಬಾ ಫುಲೆ ಅವರ 'ಪರೋಹಿತಶಾಹಿ ಮತ್ತು ಗುಲಾಮಗಿರಿ' ಹಾವೇರಿಯ ಗೆಳೆಯರಾದ ಬಿ ಶ್ರೀನಿವಾಸ ಅನುವಾದಿಸಿದ್ದಾರೆ. ಪುಸ್ತಕ ಬೆಲೆ 100 ರೂ.
ನಮ್ಮ ನಡುವಿನ ತುಂಬ ಉತ್ತಮ ಚಿತ್ರಕಾರ ಜಿ ಅರುಣಕುಮಾರ 3 ಮುಖಪುಟ ಮಾಡಿದ್ದಾರೆ. ನಿಮಗೆ ಯಾವುದು ಇಷ್ಟವಾಯಿತು. ಹೇಳಿ


Thursday, May 21, 2015

ರಾಷ್ಟ್ರಕವಿ ವಿವಾದಕ್ಕೊಂದು ವಿರೋಧಾಭಾಸದ ವರದಿ

ಬರಗೂರು ರಾಮಚಂದ್ರಪ್ಪ
ಸೌಜನ್ಯ:  ವಿಜಯ ಕರ್ನಾಟಕ


 2105-2-2-EDIT RASTRA

'ರಾಷ್ಟ್ರಕವಿ' ಪುರಸ್ಕಾರವನ್ನು ಕೊಡುವ ಪರಿಪಾಠವನ್ನು ಸರಕಾರವು ಮುಂದುವರಿಸಬೇಕೊ, ಬೇಡವೊ ಎನ್ನುವ ಬಗ್ಗೆ ಪರ -ವಿರೋಧದ ಅಭಿಪ್ರಾಯಗಳಿದ್ದು, ಅದು ಮುಂದುವರಿಯುತ್ತಲೇ ಇದೆ. ಹೀಗೆ 'ಬಿರುದು' ಕೊಡುವುದು ರಾಜಶಾಹಿ, ಸಾಮ್ರಾಜ್ಯ ಶಾಹಿ ಸಂಕೇತವಾದ್ದರಿಂದ ಅದನ್ನು ಕೈ ಬಿಡಬೇಕೆಂಬ 'ತಾತ್ವಿಕ' ನೆಲೆಯ ವಾದದಿಂದ ಹಿಡಿದು, ಕವಿಗೆ ಮಾತ್ರ ಪುರಸ್ಕಾರವೆ, ಗದ್ಯ ಲೇಖಕರಿಗೆ ಬೇಡವೆ, ರಾಜ್ಯವೊಂದು 'ರಾಷ್ಟ್ರಕವಿ' ಪುರಸ್ಕಾರ ಕೊಡುವುದು ಸರಿಯೆ, ಅರ್ಹರು ಯಾರೂ ಇಲ್ಲದಿರುವಾಗ ಈಗ ಕೊಡುವುದು ಯುಕ್ತವೆ ಎಂಬಂಥ ಪ್ರಶ್ನಾರ್ಥಕ ನಿರ್ಧಾರಗಳು ವ್ಯಕ್ತವಾಗುತ್ತಿವೆ.

ನಿಜ, ಆಸ್ಥಾನ ಕವಿಗಳಿಗೆ ಬಿರುದು ಕೊಡುವುದು ರಾಜಶಾಹಿಯ ಸಂಪ್ರದಾಯ; ಸಾಮ್ರಾಜ್ಯವಾದಿಗಳಿಗೂ ಇದು ಪ್ರಿಯ. ಆದರೆ ಕರ್ನಾಟಕ ಸರಕಾರದ ಆದೇಶದ ಪ್ರಸ್ತಾವನೆಯಲ್ಲಿ ಮಾತ್ರ ಇದನ್ನು ಒಮ್ಮೆ 'ಅಭಿದಾನ' ಎಂದು ಕರೆಯಲಾಗಿದ್ದು, ಆದೇಶದಲ್ಲಿ 'ಪುರಸ್ಕಾರ' ಎಂದು ನಮೂದಿಸಲಾಗಿದೆ. 27-1-1965ರಲ್ಲಿ ಕುವೆಂಪು ಅವರಿಗೆ 'ರಾಷ್ಟ್ರಕವಿ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾ ಗಿದೆ; 'ಬಿರುದು' ಎನ್ನುವ ಬದಲು 'ಪ್ರಶಸ್ತಿ' ಎಂಬ ಪದವನ್ನು ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಅರ್ಪಿಸಿದ ಬಿನ್ನವತ್ತಳೆ ಯಲ್ಲಿ ಬಳಸಲಾಗಿದೆ. ಇಷ್ಟಾದರೂ 'ರಾಷ್ಟ್ರಕವಿ' ಎಂಬ ಹೆಸರಿಗೆ, ಅದರ ಮುಂದುವರಿಕೆಗೆ ಆಕ್ಷೇಪ ವ್ಯಕ್ತಪಡಿಸುವಾಗ ಇದು ರಾಜ ಶಾಹಿ-ಸಾಮ್ರಾಜ್ಯಶಾಹಿ ಫಲಿತವೆಂಬ ಕಾರಣ ಕೊಟ್ಟು ವಿರೋಧಿಸುವವರು ಇದ್ದಾರೆ. ಈ ಸಾರಿಯ ಆಯ್ಕೆ ಸಮಿತಿಯಲ್ಲಿದ್ದ ಎಸ್.ಜಿ. ಸಿದ್ದರಾಮಯ್ಯನವರು 'ರಾಷ್ಟ್ರಕವಿ ಎಂಬುದು ಸಾಮ್ರಾಜ್ಯಶಾಹಿ ಪ್ರತಿಷ್ಠೆಯ ಬಿರುದಾವಳಿ,' ಎಂದು ಟೀಕಿಸಿದ್ದಾರೆ. 'ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಅದರ ಆಶಯಕ್ಕೆ ಹಾಗೂ ಸ್ವರೂಪಕ್ಕೆ ರಾಷ್ಟ್ರಕವಿಯಂತಹ ಆಲಂಕಾರಿಕ ಪದವಿಗಳು ಸೂಕ್ತವಾಗಿ ಹೊಂದುವುದಿಲ್ಲ,' ಎಂದು ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ. ಸಮಿತಿಯಲ್ಲಿ ಇಲ್ಲದ ಚಂದ್ರಕಾಂತ ಕುಸನೂರರು 'ಇಂಥ ಪದವಿ ಪುರಸ್ಕಾರಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾನವಿಲ್ಲ,' ಎಂದಿದ್ದಾರೆ.

ಈ ಅಭಿಪ್ರಾಯಗಳಿಗೆ ಭಿನ್ನವಾದ ಅಭಿಪ್ರಾಯವೂ ಸಾಧ್ಯ. ಸಾಮ್ರಾಜ್ಯಶಾಹಿ ಎನ್ನುವ ಹೆಸರಿನಲ್ಲಿ ಆಗಿನದೆಲ್ಲವನ್ನೂ ಬಿಡಬೇಕೆ? ಪ್ರಜಾಸತ್ತಾತ್ಮಕ ಸರಕಾರವೊಂದು 'ಬಿರುದು' ಎನ್ನುವ ಬದಲು 'ಪ್ರಶಸ್ತಿ' ಎಂದು ಕೊಡುವ ಅಧಿಕಾರವಿಲ್ಲವೆ? ಸರಕಾರವು ಜನತೆ ಯಿಂದ ಆಯ್ಕೆಯಾದ ಪ್ರಾತಿನಿಧಿಕ ಪ್ರತೀಕವಲ್ಲವೆ? ಆದ್ದರಿಂದ 'ರಾಷ್ಟ್ರಕವಿ' ನಿರಾಕರಣೆಯ ಈ ನಿಲುವುಗಳು ಅರ್ಧಸತ್ಯದ ವಾದವಾಗುವುದಿಲ್ಲವೆ? ಇಂಥ ಪ್ರತಿಪ್ರಶ್ನೆಗಳಿಗೆ ಏನು ಉತ್ತರ? ಇದಕ್ಕೆ ಹೊರತಾಗಿ ಎಸ್.ಜಿ. ಸಿದ್ದರಾಮಯ್ಯನವರ ಇನ್ನೊಂದು ಅಭಿಪ್ರಾಯ ವಿಚಾರಯೋಗ್ಯವೆನಿಸುತ್ತದೆ. ಅವರ ಅಭಿಪ್ರಾಯ ಹೀಗಿದೆ: 'ರಾಷ್ಟ್ರಕವಿ ಎಂಬುದನ್ನು ಉಳಿಸಿಕೊಳ್ಳಬೇಕೆಂದರೆ, ಇದನ್ನು ಪ್ರಭುತ್ವದ ಪಳೆಯುಳಿಕೆಯಾಗಿ ಉಳಿಸಿಕೊಳ್ಳದೆ ಪ್ರಜಾ ಪ್ರಭುತ್ವದ ಆಶಯಗಳಿಗೆ ತಕ್ಕನಾಗಿ ಪರಿವರ್ತಿಸಿಕೊಳ್ಳಬೇಕಾಗುತ್ತದೆ'.

ರಹಮತ್ ತರೀಕೆರೆಯವರು ಕವಿಗಳಿಗೆ ಮಾತ್ರ ಪದವಿ ಕೊಡು ವು ದನ್ನು ವಿರೋಧಿಸುತ್ತ ''ಈ ಪದವಿಯು ಕನ್ನಡ ಸಾಹಿತ್ಯದ ಪ್ರಕಾರ ಬಹುತ್ವವನ್ನು ನಿರಾಕರಿಸುತ್ತದೆ,'' ಎಂದು ವಿಶ್ಲೇಷಿಸಿರು ವುದು ಸಹ ಸರಿಯಾಗಿದೆ. ಎಸ್.ಜಿ. ಸಿದ್ದರಾಮಯ್ಯನವರ ಅಭಿ ಪ್ರಾಯವೂ ಇದಕ್ಕೆ ಪೂರಕವಾಗಿದೆ; ಸರಿಯಾಗಿದೆ. ನಾನು ಇನ್ನೊಂದು ಅಂಶವನ್ನೂ ಇದಕ್ಕೆ ಸೇರಿಸುತ್ತೇನೆ. 'ರಾಷ್ಟ್ರ' ಪದವಿಗೆ ಕೇವಲ ಸಾಹಿತ್ಯವೆ ಯಾಕೆ? ಇತರೆ ಕಲಾಪ್ರಕಾರಗಳಿಲ್ಲವೆ? ರಂಗಭೂಮಿ, ಸಂಗೀತ, ಚಿತ್ರಕಲೆ, ಜಾನಪದ ಮುಂತಾದ ಕಲೆಗಳಿಗೆ 'ರಾಷ್ಟ್ರಕವಿ'ಯಂತೆಯೇ ಮನ್ನಣೆ ಬೇಡವೆ? ಆದ್ದರಿಂದ 'ರಾಷ್ಟ್ರಕವಿ' ಎನ್ನುವುದು ಕಲಾ ಜಗತ್ತಿನಲ್ಲಿ ಅಸಮತೆಗೆ ಕಾರಣವಾ ಗುವುದಿಲ್ಲವೆ? ಇನ್ನು, ರಾಜ್ಯವೊಂದು 'ರಾಷ್ಟ್ರಕವಿ'ಯನ್ನು ಗುರು ತಿಸಿ ಗೌರವಿಸುವುದು ಮೇಲ್ನೋಟಕ್ಕೇ ವಿಪರ್ಯಾಸವಾಗಿ ಕಾಣು ತ್ತದೆ. ಡಾ. ಚಿದಾನಂದಮೂರ್ತಿ ಮತ್ತು ಜಿ.ಎಸ್. ಸಿದ್ದಲಿಂಗಯ್ಯ ನವರ ಅಭಿಪ್ರಾಯದಲ್ಲಿ ಈ ಭೌಗೋಳಿಕ ಮಿತಿಯ ಪ್ರಶ್ನೆಯಿದೆ. ಈ ಪ್ರಶ್ನೆಗೆ ಸೂಕ್ತ ತರ್ಕವೂ ಇದೆ.

ಈಗ 'ರಾಷ್ಟ್ರ ಕವಿ' ಆಯ್ಕೆ ಸಮಿತಿಯ ವಿಷಯಕ್ಕೆ ಬರೋಣ. ಸರಕಾರವು ''ಕನ್ನಡದ ರಾಷ್ಟ್ರಕವಿ ಪುರಸ್ಕಾರಕ್ಕೆ ನಾಡಿನ ಹಿರಿಯ ಕವಿಯೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ'' 28-11- 2014 ರಂದು ಆದೇಶವೊಂದನ್ನು ಹೊಡಡಿಸಿ ಸಮಿತಿಯನ್ನು ರಚಿಸಿತು. ಹಿರಿಯರಾದ ಕೋ. ಚೆನ್ನಬಸಪ್ಪನವರು ಅಧ್ಯಕ್ಷರಾದ ಈ ಸಮಿತಿ ಯಲ್ಲಿ ಪುಂಡಲೀಕ ಹಾಲಂಬಿ, ಎಚ್.ಎಲ್. ಪುಷ್ಪ, ಎಸ್.ಜಿ. ಸಿದ್ದರಾಮಯ್ಯ, ವಿಷ್ಣು ನಾಯ್ಕ, ರೂಪಾ ಹಾಸನ, ಕಾಳೇಗೌಡ ನಾಗವಾರ, ಪ್ರಭು ಖಾನಾಪುರೆ, ಕೆ. ಷರೀಫಾ, ಗಿರಡ್ಡಿ ಗೋವಿಂದ ರಾಜು, ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಇದ್ದರು. ಸರಕಾರಿ ಆದೇಶವು ರಾಷ್ಟ್ರಕವಿಯ ಆಯ್ಕೆಗಾಗಿಯೇ ಇದ್ದರೂ ಈ ಪದವಿ-ಪುರಸ್ಕಾರ ವನ್ನು ಮೂಲತಃ ವಿರೋಧಿಸುವವರೂ ಒಪ್ಪಿ ಸದಸ್ಯರಾದದ್ದು ಒಂದು ವಿಪರ್ಯಾಸವೇ ಸರಿ. ಸರಕಾರವು ಆಯ್ಕೆ ಮಾಡಲು ಕೇಳಿತ್ತೇ ಹೊರತು, ರಾಷ್ಟ್ರಕವಿ ಪದವಿ-ಪುರಸ್ಕಾರದ ಔಚಿತ್ಯ ವಿವೇ ಚನೆಯನ್ನು ಅಪೇಕ್ಷಿಸಿರಲಿಲ್ಲ. ಹೀಗಿದ್ದರೂ ರಾಷ್ಟ್ರಕವಿ ಪರಿಕಲ್ಪನೆಯ ಮೂಲ ವಿರೋಧಿಗಳೂ, ಪರವಾದವರೂ, ಸ್ವಲ್ಪ ಗೊಂದಲ ದಲ್ಲಿದ್ದವರೂ ಒಟ್ಟಿಗೆ ಒಂದೇ ಸಮಿತಿಯಲ್ಲಿದ್ದುದು ವಿರೋಧಾಭಾಸ ಗಳಿಗೆ ಬೀಜ ಬಿತ್ತಿ ಬೆಳೆಯಿತು. ಇಲ್ಲಿ ನೈತಿಕ ಪ್ರಶ್ನೆ ಎದುರಾಗದೆ ಹೋದದ್ದು ಒಂದು ಸಾಂಸ್ಕೃತಿಕ ಸೋಜಿಗ!

ಸಮಿತಿಯು 'ರಾಷ್ಟ್ರಕವಿ' ಆಯ್ಕೆ ಬಗ್ಗೆ ಚರ್ಚೆ ಮಾಡುತ್ತ 'ಇದನ್ನು ಕೊಡದೆ ಇರುವುದರಿಂದ ಯಾವ ಅನೌಚಿತ್ಯವೂ ಇಲ್ಲ,' ಎಂದು ಅಭಿಪ್ರಾಯಪಟ್ಟ ಸಭೆಯಲ್ಲೇ ಆಯ್ಕೆಯ ಮಾನದಂಡ ವಾಗಿ ಸಪ್ತ ಸೂತ್ರಗಳನ್ನು ರೂಪಿಸುತ್ತದೆ. (ವರದಿಯ ಪುಟ-4) ಮೇಲ್ನೋಟಕ್ಕೇ ಇದೊಂದು ವಿರೋಧಾಭಾಸದ ಹೆಜ್ಜೆ. ಇನ್ನು ಸಪ್ತ ಸೂತ್ರಗಳ ಮಾನದಂಡಕ್ಕೆ ಪೂರ್ಣ ಅರ್ಹರಾಗುವವರು ಅಂದೂ ಇರಲಿಲ್ಲ; ಮುಂದೆಯೂ ಇರುವುದಿಲ್ಲ; ಈಗಲೂ ಇಲ್ಲ. ಈ ಅಭಿಪ್ರಾಯದ ಧಾಟಿಯಲ್ಲೇ ಡಾ. ವಿಜಯಾ ಅವರು ''ಸಮಿತಿ ಕೊಟ್ಟಿರುವ ಮಾನದಂಡಗಳು ಮಹತ್ವಾಕಾಂಕ್ಷೆಯ ನಿರೀಕ್ಷೆಗಳು. ಅಂಥ ಮಹನೀಯರನ್ನು ಇನ್ನೂ ಕಾಣಬೇಕಾಗಿದೆ,'' ಎಂದಿದ್ದಾರೆ (ವರದಿಯ ಪುಟ-10). ಎಚ್.ಎಲ್. ಪುಷ್ಪ ಅವರು ''ನಾ ೆ ಲ್ಲರೂ (ಸದಸ್ಯರು) ಒಪ್ಪಿಕೊಂಡಂತಹ ನೀತಿ ನಡಾವಳಿಗಳ ಹಿನ್ನೆಲೆ ಯಲ್ಲಿ ಸೂಕ್ತವಾದ ಸರ್ವಾಂಗ ಅಂಶಗಳನ್ನು ಒಳ ಗೊಂಡಂತಹ ವ್ಯಕ್ತಿತ್ವ ಖಂಡಿತ ಸಾಧ್ಯವಿಲ್ಲ,'' ಎಂದು ಸರಿಯಾಗಿಯೇ ಹೇಳಿದ್ದಾರೆ. ಈ ಮಾನದಂಡಗಳಲ್ಲಿ ''ಮೇರು ಸದೃಶ ವ್ಯಕ್ತಿತ್ವ, ಲೌಕಿಕ ಪಾರ ಮಾರ್ಥಿಕ ಆದರ್ಶ ಜೀವನ, ಇಡೀ ಜನಾಂಗ ಅವರ ಮಾತನ್ನು ಕೇಳಬೇಕು, ದಾರ್ಶನಿಕರು ನಾಡಗುರುಗಳಂತಿರಬೇಕು,'' ಎಂಬ ಒಂದು ಅಂಶವಿದ್ದು ಇದು ಸಂಪೂರ್ಣ ಸಾಪೇಕ್ಷ ಪರಿಕಲ್ಪನೆ ಯಾಗಿದೆ. ಲೌಕಿಕ ಎಂಬುದನ್ನು ವಿವರಿಸುವಂತೆ 'ಪಾರಮಾರ್ಥಿಕ' ವನ್ನು ಒಂದೇ ರೀತಿಯಲ್ಲಿ ವಿವರಿಸಲಾಗದು. ಇಷ್ಟಕ್ಕೂ ಆದರ್ಶ ಜೀವಿಗಳು ಪಾರಮಾರ್ಥಿಕವಾಗುವುದು ಕಡ್ಡಾಯವೇನಲ್ಲ. ದಾರ್ಶ ನಿ ಕರು, ನಾಡಗುರುಗಳು ಎಂಬ ಪರಿಕಲ್ಪನೆಯೂ ಸಾಪೇಕ್ಷವೇ ಹೊರತು ನಿರ್ದಿಷ್ಟ ನಿರ್ವಚನಕ್ಕೆ ಸುಲಭವಾಗಿ ದಕ್ಕುವುದಿಲ್ಲ. ಇನ್ನು 'ಇಡೀ ಜನಾಂಗ ಅವರ ಮಾತನ್ನು ಕೇಳಬೇಕು' ಎಂಬ ಮಾನದಂಡಕ್ಕೆ ಯಾವುದು ಮಾನದಂಡ ಎಂದು ಕೇಳಬೇಕಾಗಿದೆ. ಯಾರು ಎಷ್ಟೇ ಮೇರು ವ್ಯಕ್ತಿತ್ವದವರಾಗಿರಲಿ, ಕಡೇ ಪಕ್ಷ ಗೌರವ ಪೂರ್ವಕ ಭಿನ್ನಾಭಿಪ್ರಾಯಗಳು ಕೆಲವಾದರೂ ಇರುತ್ತವೆ. ಎಲ್ಲರೂ ಅವರ ಮಾತನ್ನು ಕೇಳಬೇಕು ಎನ್ನುವುದಾದರೆ ಇದು 'ರಾಷ್ಟ್ರಕವಿ'ಯ ಆಯ್ಕೆಯೊ, 'ಸಾಂಸ್ಕೃತಿಕ ಸರ್ವಾಧಿಕಾರಿ'ಯ ಆಯ್ಕೆಯೊ ಎಂದು ಕೇಳಬೇಕಾಗುತ್ತದೆ. 'ಯಾವ ಅಪಾದನೆಗೂ ಗುರಿಯಾಗಿರಬಾ ರದು,' ಎಂಬ ಮಾನದಂಡಕ್ಕೂ ಸ್ಪಷ್ಟನೆ ಬೇಕಾಗುತ್ತದೆ. ಕೇವಲ ಆಪಾದನೆಯೇ ಆಗಿದ್ದರೆ ಅದು ಸಿವಿಲ್ ಸ್ವರೂಪದ್ದೊ , ಕ್ರಿಮಿನಲ್ ಸ್ವರೂಪದ್ದೊ ಎಂದು ಸ್ಪಷ್ಟವಾಗ ಬೇಕು. ಆಪಾದಿತ ಬೇರೆ, ಅಪರಾಧಿ ಬೇರೆ ಎಂಬ ಅಂಶವೂ ಚರ್ಚಿತವಾಗಬೇಕು. ಇನ್ನು 'ಆಚಾರ್ಯ ಪುರುಷ'ರಾಗಿರಬೇಕು ಎಂಬ ರೂಢಿಗತ ಅಪೇಕ್ಷೆಯು ಮಹಿಳಾ ವಿರೋಧಿಯೂ ಆಗಬಹುದು.

ಹೀಗೆ ಮೂರ್ತ-ಅಮೂರ್ತ ಮಾನದಂಡಗಳ ಸಪ್ತ ಸೂತ್ರಗಳಿ ಗಿಂತ ಸಮಿತಿಯ ಸದಸ್ಯರಾದ ಕಾಳೇಗೌಡ ನಾಗವಾರ ಅವರು ಸಭೆಯಲ್ಲೇ ಹೇಳಿರುವ ಮುಂದಿನ ಮಾತುಗಳು ಮಾನನೀಯವೂ ಉಚಿತವೂ ಆಗಿವೆ. ಅವರು ಹೀಗೆ ಹೇಳಿದ್ದಾರೆ: ''ಮಾನವ ಕುಲದ ಘನತೆಯನ್ನು ನಿರಂತರವಾಗಿ ಎತ್ತಿ ಹಿಡಿಯಬಲ್ಲ ಬದುಕಿನ ಬದ್ಧತೆ, ಅತ್ಯುತ್ತಮ ಕವಿಸಹಜ ಸೃಜನಶೀಲ ಗುಣ ಹಾಗೂ ಸಮಾಜದ ಏಳಿಗೆಗೆ ಯಾವತ್ತೂ ಪೂರಕವಾದ ಚಿಂತನೆಯ ಮೂಲಕ ಶ್ರೀಸಾಮಾನ್ಯನ ನಿತ್ಯ ಧ್ಯಾನದಲ್ಲಿರುವ ಕನ್ನಡದ ಹೆಮ್ಮೆಯ ಅಸಾಧಾರಣ ಕೊಡುಗೆಯ ಕವಿಗೆ ಈ ಪ್ರಶಸ್ತಿಯು ಸಹಜವಾಗಿ ಸಲ್ಲಬೇಕಾಗಿದೆ''. ಇವರು ಮುಂದುವರಿದು ''ರಾಷ್ಟ್ರಪ್ರಶಸ್ತಿ ನೀಡುವ ಈ ಪೈಪೋಟಿಪೂರಿತ ಆಲೋಚನೆಯನ್ನೇ ಕೈ ಬಿಡುವುದು ಸೂಕ್ತ,'' ಎಂದೂ ಭಾವಿಸುತ್ತಾರೆ. ಹೀಗೆ ಕೈಬಿಡುವ ಬಗ್ಗೆ ಸಮಿತಿಯಲ್ಲೇ ಭಿನ್ನಾಭಿಪ್ರಾಯವಿರುವುದು ಸಹಜವೇ ಆಗಿದೆ. ಸಮಿತಿಯ ಬಹುಮತದ ನಿರ್ಣಯಕ್ಕೆ ಬದ್ಧರಾಗುವುದಾಗಿ ಬಂಜ ಗೆರೆ, ರೂಪಾ ಹಾಸನ ಮುಂತಾದ ಕೆಲವರು ಹೇಳಿದರೆ, ಹಾಲಂಬಿ ಯವರು ನಿಸಾರ್ ಅಹಮದ್ ಅವರ ಹೆಸರನ್ನೂ, ಗಿರಡ್ಡಿಯವರು ಚೆನ್ನವೀರ ಕಣವಿಯವರ ಹೆಸರನ್ನೂ ಸ್ಪಷ್ಟವಾಗಿ ಸೂಚಿಸುತ್ತಾರೆ. ಪ್ರಭು ಖಾನಾಪುರೆ, ವಿಷ್ಣುನಾಯ್ಕ, ಷರೀಫಾ, ಎಲ್.ಹನು ಮಂತಯ್ಯ ಇವರೆಲ್ಲ ರಾಷ್ಟ್ರಕವಿಯನ್ನು ಹೆಸರಿಸುವ ಪರವಾಗಿದ್ದಾರೆ.

ಸಮಿತಿ ಕೈಗೊಂಡಿತೆಂದು ವರದಿಯಲ್ಲಿ ಹೇಳಲಾದ ಅಂತಿಮ ನಿರ್ಣಯವೂ ವಿರೋಧಾಭಾಸದಿಂದ ಕೂಡಿದೆ. ಸಾಮಾಜಿಕ ನ್ಯಾಯಕ್ಕೆ, ಪ್ರಾದೇಶಿಕ ನ್ಯಾಯಕ್ಕೆ ವಿರುದ್ಧವಾದ ನೆಲೆ ತಲುಪುವ ನಿರ್ಣಯವು ಒಬ್ಬರಿಗೆ ಕೊಟ್ಟರೆ ಇನ್ನೊಂದು ಸಮುದಾಯಕ್ಕೆ, ಇನ್ನೊಂದು ಪ್ರದೇಶಕ್ಕೆ ಅಸಮಾಧಾನವಾಗುತ್ತದೆ ಎಂದು ಹೇಳು ವುದು ವಿಚಿತ್ರವಾಗಿದೆ. ನೂರಕ್ಕೆ ನೂರು ಸಮ್ಮತಿಯಿರುವಂತೆ ಯಾವು ದಾ ದರೂ ಪ್ರಶಸ್ತಿ ಆಯ್ಕೆ ಸಾಧ್ಯವೇ ಎಂಬ ಸಾಮಾನ್ಯ ವಿವೇಕವೂ ಈ ನಿರ್ಣಯದ ಹಿಂದೆ ಇದ್ದಂತಿಲ್ಲ. ಇಂಥ ಪ್ರಶಸ್ತಿಗಳನ್ನು ನೀಡುವುದು ಸಂವಿಧಾನ ವಿರೋಧಿಯೆಂದೂ, ಕೇಂದ್ರ ಸರಕಾರವು ಕೆಲಕಾಲ 'ಪದ್ಮ' ಪ್ರಶಸ್ತಿಗಳನ್ನು ಕೊಡುವುದನ್ನು ಕೈಬಿಟ್ಟಿತ್ತೆಂದೂ ಹೇಳುವ ವರದಿಯು ಸಂವಿಧಾನ ವಿರೋಧಿ, ಗಣತಂತ್ರ ವಿರೋಧಿ ಎಂಬ ನೆಲೆಯಲ್ಲೇ 'ರಾಷ್ಟ್ರಕವಿ' ಅಭಿದಾನ ನೀಡಬಾರದೆಂದು ಶಿಫಾರಸು ಮಾಡುತ್ತದೆ. ತನಗೆ ಕೊಟ್ಟ ಕೆಲಸ ಬಿಟ್ಟು ಬೇರೆ ಕೆಲಸ ಮಾಡಿದ ಸಮಿತಿಯ ಈ ನಿರ್ಣಯಕ್ಕೆ ಸಂವಿಧಾನದಲ್ಲಿ ಸಮರ್ಥನೆಯಿದೆಯೆ ಎಂದರೆ, 18ನೇ ಪರಿಚ್ಛೇದ ವನ್ನು ನೋಡಬೇಕಾಗುತ್ತದೆ. ಈ ಪರಿಚ್ಛೇದವು ಹಿಂದಿನ ಎಲ್ಲ ಬಿರುದುಗಳನ್ನೂ ರದ್ದುಗೊಳಿಸಿದೆ. ಆದರೆ ಪದ್ಮ ಪ್ರಶಸ್ತಿಗಳ ಪ್ರಸ್ತಾಪವಿಲ್ಲ. ಪದ್ಮ ಪ್ರಶಸ್ತಿಗಳನ್ನು ಪ್ರಶ್ನಿಸಿದ ಒಂದು ಪ್ರಕರಣದಲ್ಲಿ (1996-1-ಎಸ್‌ಸಿಸಿ 361) ಸುಪ್ರೀಂ ಕೋರ್ಟು 'ಈ ಪ್ರಶಸ್ತಿಗಳು 18ನೇ ಪರಿಚ್ಛೇದದ ಉಲ್ಲಂಘನೆಯಾಗುವುದಿಲ್ಲ,' ಎಂದು ಸ್ಪಷ್ಟಪಡಿಸಿದೆ.

ಇಷ್ಟಾಗಿಯೂ ನಾನು 'ರಾಷ್ಟ್ರಕವಿ' ಕಲ್ಪನೆಯು ಸಮರ್ಥನೀಯ ವೆಂದು ಹೇಳುವುದಿಲ್ಲ. ಆಯಾ ಕ್ಷೇತ್ರಗಳಲ್ಲಿ ಅಸಮತೆಯನ್ನು ಸ್ಥಾಪಿಸುವ ಸಂಕೇತಗಳಂತಿರುವ ರಾಷ್ಟ್ರಕವಿ, ರಾಷ್ಟ್ರಪಕ್ಷಿ, ರಾಷ್ಟ್ರಮೃಗ ಇತ್ಯಾದಿಗಳ ಬಗ್ಗೆ ಮರುಚಿಂತನೆ ನಡೆಯಲೇಬೇಕು. ನಮಗೆ ರಾಷ್ಟ್ರಧ್ವಜ, ರಾಷ್ಟ್ರಲಾಂಛನವಷ್ಟೆ ಸಾಕು. ರಾಜ್ಯದಲ್ಲಿ ' ಕರ್ನಾಟಕ ರತ್ನ'ವೇ ಉನ್ನತ ಪುರಸ್ಕಾರವಾಗಬೇಕು. ಆದ್ದರಿಂದ ರಾಜ್ಯದ ವ್ಯಾಪ್ತಿಗೆ ಬಾರದ, ಒಂದೇ ಕಲಾ ಪ್ರಕಾರಕ್ಕೆ ಅನ್ವಯಿಸುವ 'ರಾಷ್ಟ್ರ ಕವಿ' ಪುರಸ್ಕಾರ ರದ್ದಾಗಬೇಕು. ಆದರೆ ಆಯ್ಕೆ ಸಮಿತಿ ನೀಡಿರುವ ಅಸಮರ್ಥನೀಯ ನಿರ್ಣಯಗಳ ಆಧಾರದಲ್ಲಿ ಅಲ್ಲ. ಕೆಲ ಸದಸ್ಯರ ಮೌಲಿಕ ಮಾತುಗಳ ಹೊರತಾಗಿಯೂ ಆ ವರದಿಯಲ್ಲಿ ವಿಪರ್ಯಾಸ ಮತ್ತು ವಿರೋಧಾಭಾಸದ ಅಂತಿಮ ನಿಲುವು ನೆಲೆಗೊಂಡಿದೆ ಎಂದು ವಿಷಾದದಿಂದ ಹೇಳಬೇಕಾಗಿದೆ.

ಭೂಸ್ವಾಧೀನ: ಎತ್ತ ಸಾಗಿದೆ ವಿತ್ತ ವಲಯ?ಪ್ರಾಚಿ ಸಾಳ್ವೆ
ಭೂಸ್ವಾಧೀನ: ಎತ್ತ ಸಾಗಿದೆ ವಿತ್ತ ವಲಯ?

 

 

ಉದ್ದೇಶಿತ ಪರಿಷ್ಕೃತ ಭೂಸ್ವಾಧೀನ ಕಾಯ್ದೆಯಡಿ ಸ್ವಾಧೀನವಾದ ಒಂದಿಂಚು ಭೂಮಿಯೂ ಯಾವ ಕಂಪೆನಿಗಳಿಗೂ ಅನುಕೂಲ ಮಾಡಿಕೊಡುವ ದೃಷ್ಟಿ ಯಿಂದ ಸ್ವಾಧೀನವಾಗುವುದಲ್ಲ. ಅಭಿವೃದ್ಧಿ ಹಳ್ಳಿಗ ಳನ್ನು ತಲುಪಬೇಕು ಎನ್ನುವುದೇ ಈ ಕಾಯ್ದೆಯ ಆಶಯ. ಇಲ್ಲಿ ರಸ್ತೆ, ರೈಲ್ವೆ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿವೆ. ಉದ್ಯೋಗ ಸೃಷ್ಟಿ ಯೋಜನೆ ಗಳಿಗಷ್ಟೇ ಭೂಸ್ವಾಧೀನವಾಗಲಿದೆ. ಇದು ಉಭಯ ವರ್ಗಕ್ಕೂ ಲಾಭವಾಗುವ ಕಾಯ್ದೆ; ನಿಜವಾಗಿ ರೈತಮಿತ್ರ.
ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಗೆ ನೀಡಿದ ಸಂದರ್ಶನದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ಷಾ, ವಿವಾದಾತ್ಮಕ ಭೂಸ್ವಾಧೀನ ಕಾಯ್ದೆಯನ್ನು ಸಮರ್ಥಿಸಿಕೊಂಡ ರೀತಿ ಇದು. ಮಸೂದೆಯ ಪರವಾಗಿ ಹೋರಾಟ ಮುಂದುವರಿಯಲಿದೆ ಎಂಬ ಮುನ್ಸೂಚನೆಯನ್ನೂ ಈ ಮೂಲಕ ನೀಡಿದ್ದಾರೆ.

ಆದರೆ ಇದುವರೆಗೆ ಸರಕಾರ ಸ್ವಾಧೀನಪಡಿಸಿಕೊಂಡ ಭೂಮಿ ನಿಗದಿತ ಉದ್ದೇಶಕ್ಕೆ ಬಳಕೆಯಾಗಿಲ್ಲ ಎನ್ನುವುದಕ್ಕೆ ಬಲವಾದ ಪುರಾವೆ ಸಿಕ್ಕಿದೆ. 2012-13ನೇ ಸಾಲಿನ ಕಂ ಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. 

ವರದಿಯ ಪ್ರಮುಖ ಅಂಶಗಳು ಹೀಗಿವೆ:
    ವಿಶೇಷ ವಿತ್ತ ವಲಯಗಳಿಗೆ ಸ್ವಾಧೀನವಾದ ಭೂಮಿ ಯ ಪೈಕಿ ಶೇ.62ರಷ್ಟು ಭೂಮಿ ಮೂಲ ಉದ್ದೇಶಕ್ಕೆ ಬಳಕೆಯಾಗಿಲ್ಲ. ಇದು ಬಹುತೇಕ ರೈತರಿಂದಲೇ ಸ್ವಾಧೀನಪಡಿಸಿಕೊಂಡ ಭೂಮಿಯಾಗಿದ್ದು, ಇಲ್ಲಿ ಉತ್ಪಾದನಾ ಚಟುವಟಿಕೆಯಾಗಲೀ, ರಫ್ತ್ತು ಅಥವಾ ಉದ್ಯೋಗ ಸೃಷ್ಟಿ ನಡೆದಿಲ್ಲ.

    ವಿಶೇಷ ವಿತ್ತವಲಯದ ಬಹುತೇಕ ಯೋಜನೆಗಳು ಮಾಹಿತಿ ತಂತ್ರಜ್ಞಾನ ಹಾಗೂ ಇದಕ್ಕೆ ಸಂಬಂಧಿ ಸಿದವು. ಆದರೆ ಉತ್ಪಾದನಾ ಕ್ಷೇತ್ರಕ್ಕೆ ವಿಶೇಷ ವಿತ್ತವಲಯದ ಕೊಡುಗೆ ಶೇ.9ನ್ನು ಮೀರಿಲ್ಲ.

ಎಲ್ಲ ವಿಶೇಷ ವಿತ್ತ ವಲಯಗಳು ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ ಮತ್ತು ರಪ್ತು ಗುರಿಗಿಂತ ಬಹ ಳಷ್ಟು ಹಿಂದೆ ಉಳಿದಿವೆ. ಉದಾಹರಣೆಗೆ ವಿಶೇಷ ವಿತ್ತ ವಲಯಗಳಿಂದ ಆಗಿರುವ ಉದ್ಯೋಗ ಸೃಷ್ಟಿ ಪ್ರಮಾಣ ನಿರೀಕ್ಷೆಯ ಶೇ.8 ರಷ್ಟು ಮಾತ್ರ.

ಆಂಧ್ರಪ್ರದೇಶ, ಗುಜರಾತ್, ಹರ್ಯಾಣಾ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇಂದ್ರಾ ಡಳಿತ ಪ್ರದೇಶವಾದ ಚಂಡೀಗಢದ ಒಟ್ಟು 187 ವಿಶೇಷ ವಿತ್ತವಲಯ ಅಭಿವೃದ್ಧಿ ಸಂಸ್ಥೆಗಳು ಮತ್ತು 574 ಘಟಕಗಳಿಂದ 2012- 13ನೆ ಸಾಲಿನಲ್ಲಿ ಪಡೆದ ಮಾಹಿತಿಗಳನ್ನು ವಿಶ್ಲೇಷಿಸಿ ಈ ನಿರ್ಧಾರಕ್ಕೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷ ಗಳಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತು ಈ ಕಾಯ್ದೆ ರೈತವಿರೋಧಿ ಎಂಬ ಆರೋಪ ಬಲವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಯ್ದೆಯನ್ನು ಸಂಸದೀಯ ಸಮಿತಿಯ ಮರುಪರಿಶೀಲನೆಗೆ ನೀಡಲಾಗಿದೆ. ಈ ಕಾಯ್ದೆಯನ್ನು ತ್ವರಿತಗೊಳಿಸುವ ಅನಿವಾರ್ಯತೆ ಇದೆ ಎನ್ನುವುದು ಕೇಂದ್ರ ಸರಕಾರದ ವಾದ. ಈ ಮೂಲಕ ಕೈಗಾರಿಕೆಗಳಿಗೆ ಭೂಮಿ ಲಭ್ಯವಾಗುವಂತೆ ಮಾಡಿ, ವ್ಯಾಪಕ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವುದು ಮತ್ತು ಆರ್ಥಿಕ ಪ್ರಗತಿಗೆ ಶಕ್ತಿ ತುಂಬಲಾಗುವುದು ಎನ್ನುವುದು ಸರಕಾರದ ಸಮರ್ಥನೆ.

ಸರಕಾರ ವಿಶೇಷ ವಿತ್ತವಲಯಗಳನ್ನು ಸೃಷ್ಟಿಸಿದ ಹಿಂದಿ ನ ಉದ್ದೇಶವೂ ಇದೆ ಎನ್ನುವುದು ಗಮನಾರ್ಹ.

ಭೂಬಳಕೆ

ಇದುವರೆಗೆ ಭೂಮಿ ಪಡೆದುಕೊಂಡ ವಿಶೇಷ ವಿತ್ತ ವಲಯಗಳ ಪೈಕಿ 392 ವಲಯಗಳು 28,489 ಹೆಕ್ಟೇರ್ ಪ್ರದೇಶದಲ್ಲಿ ಕಾರ್ಯಾರಂಭ ಮಾಡಿವೆ.

ಒಟ್ಟು ಅನುಮೋದನೆಗೊಂಡ ಎಸ್‌ಇಝೆಡ್ ಪೈಕಿ ಶೇ.52.8ರಷ್ಟು ಇನ್ನೂ ಕಾರ್ಯಾರಂಭ ಮಾಡಿಲ್ಲ. ಅಂದರೆ 424 ವಿಶೇಷ ವಿತ್ತವಲಯಗಳಿಗೆ ಮಂಜೂರಾದ 31,886 ಎಕರೆ ಭೂಮಿ ಹಾಗೆಯೇ ಉಳಿದಿದೆ. ಈ ಪೈಕಿ 2006ರಲ್ಲೇ ಭೂಮಿ ಮಂಜೂ ರಾದ 54 ಹಳೆಯ ಪ್ರಕರ ಣಗಳೂ ಸೇರಿವೆ.

ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ಗುಜ ರಾತ್ ರಾಜ್ಯಗಳ 30 ವಿಶೇಷ ವಿತ್ತ ವಲಯ (1,858 ಹೆಕ್ಟೇರ್)ಗಳಲ್ಲಿ ಪ್ರವರ್ತಕರು ಒಂದು ಪೈಸೆಯೂ ಬಂಡವಾಳ ಹೂಡಿಲ್ಲ. ಸುಮಾರು ಎರಡರಿಂದ ಏಳು ವರ್ಷಗಳ ಕಾಲ ಈ ಭೂಮಿ ಪ್ರವರ್ತ ಕರ ಸ್ವಾಧೀನದಲ್ಲೇ ಇದೆ.

ಉದ್ಯೋಗ- ಬಂಡವಾಳ
ವಿಶೇಷ ವಿತ್ತವಲಯಗಳು ಪ್ರಗತಿ, ಉದ್ಯೋಗ ಮತ್ತು ರಪ್ತು ನಿರೀಕ್ಷೆಯಲ್ಲೂ ಬಾರಿ ಹಿಂದೆ ಬಿದ್ದಿವೆ ಎನ್ನುವುದನ್ನು ಸಿಎಜಿ ವರದಿ ಹೀಗೆ ಉಲ್ಲೇಖಿಸಿದೆ:

    ಉದ್ಯೋಗ ಸೃಷ್ಟಿ ಪ್ರಮಾಣ ನಿರೀಕ್ಷೆಗಿಂತ ಶೇ.93 ರಷ್ಟು ಹಿಂದಿದೆ. ವಿಶೇಷ ವಿತ್ತವಲಯ ಗಳಿಂದ 39 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ ಇತ್ತು. ಆದರೆಇದುವರೆಗೆ ಸೃಷ್ಟಿಯಾಗಿರುವ ಉದ್ಯೋ ಗಾವಕಾಶ ಗಳು ಕೇವಲ ಎರಡು ಲಕ್ಷ.

    ಬಂಡವಾಳ ಹೂಡಿಕೆ ಪ್ರಮಾಣ ನಿಗದಿತ ಗುರಿಗಿಂತ ಶೇ.59ರಷ್ಟು ಹಿಂದಿದೆ. ಎಸ್‌ಇಝೆಡ್ ಮೂಲಕ ಸುಮಾರು 36 ಶತಕೋಟಿ ಡಾಲರ್ ಅಂದರೆ 1.95 ಲಕ್ಷ ಕೋಟಿ ರೂ.ಬಂಡವಾಳ ನಿರೀಕ್ಷಿಸಲಾಗಿತ್ತು. ಆದರೆ ವಾಸ್ತವ ಹೂಡಿಕೆ ಕೇವಲ 80176.3 ಕೋಟಿ ರೂ.(14.8 ಶತಕೋಟಿ).

    ಎಸ್‌ಇಝೆಡ್‌ಗಳ ರಪ್ತು ಪ್ರಮಾಣ ನಿಗದಿತ ಗುರಿಗಿಂತ ಶೇ.74ರಷ್ಟು ಹಿಂದಿದೆ. ವಿಶೇಷ ವಿತ್ತವಲ ಯಗಳ ಒಟ್ಟು ರಫ್ತ್ತು ವೌಲ್ಯ 73.2 ಶತಕೋಟಿ ಡಾಲರ್ (3.96 ಲಕ್ಷ ಕೋಟಿ ರೂಪಾಯಿ) ಎಂದು ನಿರೀಕ್ಷಿಸಲಾಗಿತ್ತು. ವಾಸ್ತವವಾಗಿ ಆಗಿರುವ ರಫ್ತಿನ ವೌಲ್ಯ ಕೇವಲ 18.6 ಶತಕೋಟಿ ಡಾಲರ್ (1 ಲಕ್ಷ ಕೋಟಿ ರೂಪಾಯಿ).

ವಿಶೇಷ ವಿತ್ತವಲಯಗಳ ಇನ್ನೊಂದು ಪ್ರಮುಖ ಗುರಿ ಎಂದರೆ ಉತ್ಪಾದನಾ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುವುದು. ಅದು ಕೂಡಾ ಮರೀಚಿಕೆಯಾಗಿಯೇ ಉಳಿದಿದೆ.

ಒಟ್ಟು ಮಂಜೂರಾದ 625 ಎಸ್‌ಇಝೆಡ್ ಯೋಜನೆಗಳ ಪೈಕಿ ಕೇವಲ 152 (ಶೇ.24) ಮಾತ್ರ ಕಾರ್ಯ ನಿರ್ವಹಿ ಸುತ್ತಿವೆ ಎಂದು ಸಿಎಜಿ ವರದಿ ಹೇಳಿದೆ.

ಮಂಜೂರಾತಿ ಪಡೆದ ಯೋಜನೆಗಳ ಪೈಕಿ ಶೇ.56 ರಷ್ಟು ಮಾಹಿತಿ ತಂತ್ರ ಜ್ಞಾನ ಘಟಕಗಳಿಗೆ ಮೀಸಲಾದ ವಿಶೇಷ ವಿತ್ತವಲಯಗಳು. ಕೇವಲ ಶೇ.9 ರಷ್ಟು ಮಾತ್ರ ಉತ್ಪಾದನಾ ಚಟುವಟಿಕೆಗಳಿಗೆ ಮೀಸಲಾದ ಎಸ್‌ಇಝೆಡ್‌ಗಳು. ಐಟಿ ವಲಯದ ಶೇ.59ರಷ್ಟು ಎಸ್‌ಇಝೆಡ್‌ಗಳು ಮತ್ತು ಉತ್ಪಾದನಾ ವಲಯದ ಶೇ.8.5 ರಷ್ಟು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಯೋಜನೆ ಯಡಿ ಐಟಿ ವಿಶೇಷ ವಿತ್ತವಲಯಗಳಿಗೆ 10 ವರ್ಷಗಳ ಕಾಲ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಎಸ್‌ಇಝೆಡ್‌ನಲ್ಲಿ ಕಾರ್ಯನಿರ್ವಹಿಸು ತ್ತಿರುವ ಬಹುತೇಕ ಘಟಕಗಳು, ಈ ಸೌಲಭ್ಯವನ್ನು ಪಡೆ ಯಲು ಬೇರೆಡೆಯಿಂದ ವಲಸೆ ಬಂದ ಘಟಕಗಳೇ ವಿನಃ ಹೊಸ ಘಟಕಗಳು ಸ್ಥಾಪನೆಯಾದದ್ದು ವಿರಳ ಎಂದು ಸಿಎಜಿ ಹೇಳಿದೆ.

ರಾಜ್ಯವಾರು ಎಸ್‌ಇಝೆಡ್

ದೇಶದ 392 ವಿಶೇಷ ವಿತ್ತವಲಯಗಳ ಪೈಕಿ 301 (ಶೇ.77) ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿವೆ. ಅವಿಭಜಿತ ಆಂಧ್ರಪ್ರದೇಶವೊಂದರಲ್ಲೇ 78 ವಿಶೇಷ ವಿತ್ತವಲ ಯಗಳು ಕಾರ್ಯ ನಿರ್ವಹಿಸುತ್ತಿವೆ. ಮಹಾರಾಷ್ಟ್ರ (65), ತಮಿಳುನಾಡು (53), ಕರ್ನಾಟಕ (40), ಹರ್ಯಾಣಾ (35) ಮತ್ತು ಗುಜರಾತ್ (30) ನಂತರದ ಸ್ಥಾನಗಳಲ್ಲಿವೆ.

ಸಿಎಜಿ ವರದಿ ಪ್ರಕಾರ, ರಾಜ್ಯಗಳ ನಡುವೆ ಎಸ್‌ಇಝೆಡ್‌ಗಳ ಅಸಮಾನ ಹಂಚಿಕೆಗೆ ಮೂಲ ಕಾರಣ ವೆಂದರೆ, ಹಲವಾರು ರಾಜ್ಯಗಳಲ್ಲಿ ಇಂಥ ಯೋಜ ನೆಗಳಿಗೆ ಮಂಜೂರಾತಿ ನೀಡಲು ಇನ್ನೂ ಏಕಗವಾಕ್ಷಿವ್ಯವಸ್ಥೆ ಇಲ್ಲದಿರುವುದು. ಇದರಿಂದಾಗಿ ಮಂಜೂ ರಾತಿ ವಿಳಂಬವಾಗುತ್ತಿದೆ.

ಬಹುತೇಕ ವಿಶೇಷ ವಿತ್ತವಲಯಗಳು ನಗರ ಕೇಂದ್ರಿ ತವಾಗಿವೆ. ಉದಾಹರಣೆಗೆ ಅವಿಭಜಿತ ಆಂಧ್ರ ದ 36 ವಿಶೇಷ ವಿತ್ತವಲಯಗಳ ಪೈಕಿ 20 ರಾಜಧಾನಿ ಹೈದರಾಬಾದ್‌ನಲ್ಲೇ ಕಾರ್ಯ ನಿರ್ವಹಿಸುತ್ತಿವೆ.

ವರದಿಯ ಉಪಸಂಹಾರದಲ್ಲಿ ಹೇಳಿದಂತೆ, ವಿಶೇಷ ವಿತ್ತವಲಯ ನೀತಿ ಮತ್ತು ವಿಧಿವಿಧಾನಗ ಳು ವಲಯವಾರು ಮತ್ತು ರಾಜ್ಯಗಳ ನೀತಿಗಳಿಗೆ ಅನುಗು ಣವಾಗಿ ಇರಬೇಕು. ಜತೆಗೆ ಅನುಕೂಲಕ ರವಾಗಬಲ್ಲ ಅಂಶಗಳನ್ನು ಒಳಗೊಂಡಿರಬೇಕು.


ಎಸ್‌ಇಝೆಡ್  ಕಥೆ ಏನು?

ವಿಶೇಷ ವಿತ್ತವಲಯಗಳು ದೇಶದ ಆರ್ಥಿಕ ಪ್ರಗತಿಯ ಯಂತ್ರಗಳಾಗಬೇಕು ಎಂಬ ಮೂಲ ಉದ್ದೇಶದಿಂದ 2,000ನೆ ಇಸವಿಯಲ್ಲಿ ವಿಶೇಷ ವಿತ್ತವಲಯ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿ ಸಲಾಯಿತು. ಇದು 2005ರಲ್ಲಿ ಜಾರಿಗೆ ಬಂತು. ವಿಶೇಷ ವಿತ್ತವಲಯದ ಘಟಕಗಳಿಗೆ ತೆರಿಗೆ ಮುಕ್ತ ಅನುಕೂಲತೆ ಕಲ್ಪಿಸಿಕೊಡಲಾಯಿತು. ಇಂಥ ಘಟ ಕಗಳ ವ್ಯಾಪಾರ ವಹಿವಾಟುಗಳಿಗೆ ವಿದೇಶಿ ಮಾರುಕಟ್ಟೆಯನ್ನು ಮುಕ್ತಗೊಳಿ ಸಲಾಯಿತು. ಎಲ್ಲ ಯಲ್ಕ ಮತ್ತು ತೆರಿಗೆಗಳಿಂದ ವಿನಾಯಿತಿ ನೀಡಲಾಯಿತು.

ಹಿಂದಿನ ಯುಪಿಎ ಸರಕಾರ 576 ವಿಶೇಷ ವಿತ್ತ ವಲಯ ಘಟಕಗಳ ಪ್ರಸ್ತಾವಗಳಿಗೆ ಅನುಮೋದನೆ ನೀಡಿ 60,375 ಹೆಕ್ಟೇರ್ ಜಮೀನನ್ನು ಮಂಜೂರು ಮಾಡಲಾಯಿತು. 2014ರ ಮಾರ್ಚ್ ಅಂತ್ಯದವರೆ ಗೆ 392 ವಿಶೇಷ ವಿತ್ತ ವಲಯಗಳಿಗೆ 45,636 ಎಕರೆ ಜಮೀ ನು ಮಂಜೂರಾತಿ ಮಾಡಿ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.
(ಕೃಪೆ: ಇಂಡಿಯಾಸ್ಪೆಂಡ್.ಕಾಮ್)

ಗಾಂಧಿ ಎಂಬ ‘‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’’ : ಭಾಗ-2
ಶ್ರೀಧರ ಪ್ರಭು

ಗಾಂಧಿ ಎಂಬ ‘‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’’ಇಂದು ಹಿಂದುತ್ವ ಪರಿವಾರ ಗಾಂಧಿಯನ್ನು ಮತ್ತು ಗಾಂಧಿಯ ಅಂತರಂಗದ ಶಿಷ್ಯ ಪಟೇಲ್‌ರನ್ನು ನುಂಗುತ್ತಿದೆ. ಸಂಘ ಪರಿವಾರವನ್ನು ನೆಹರುಗಿಂತ ಒಂದು ಕೈ ಹೆಚ್ಚೇ ವಿರೋಸುತ್ತಿದ್ದ ಪಟೇಲರು ಇಂದು ಗಣ ವೇಷ ತೊಟ್ಟು ನಡುನೀರಿನಲ್ಲಿ ಮೂರ್ತಿಯಾಗಿ ನಿಂತಿದ್ದರೆ, ನೆಹರು ಇನ್ನೊಂದು ಐದು ವರ್ಷಕ್ಕೆ ‘‘ನಮಸ್ತೆ ಸದಾ ವತ್ಸಲೇ..’’ ಶುರು ಮಾಡಿಕೊಳ್ಳಬಹುದು. ಇನ್ನು ಅಂಬೇಡ್ಕರ್‌ರಂತೂ ‘‘ಸಾಮಾಜಿಕ ಕ್ರಾಂತಿ ಸೂರ್ಯ’’ರಾಗಿ ಹಿಂದೂ ಧರ್ಮದ ರಕ್ಷಣೆಗೆ ಕಂಕಣ ತೊಟ್ಟು ನಿಂತಾಗಿದೆ!
ಇಂತದ್ದರಲ್ಲಿ, ಸಂಘ ಪರಿವಾರದ ಬದ್ಧ ವಿರೋಗಳಾದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾೀಶ ಮಾರ್ಕಂಡೇಯ ಕಟ್ಜು ‘ಮಹಾತ್ಮಾ ಗಾಂಧಿ ಬ್ರಿಟಿಷರ ಏಜೆಂಟ್’ ಎಂದು ಇತ್ತೀಚಿಗೆ ಅಪ್ಪಣೆ ಕೊಡಿಸಿದ್ದಾರೆ. ಅರುಂಧತಿ, ಗಾಂಧಿಯನ್ನು ಹಿಗ್ಗಾ ಮುಗ್ಗಾ ಖಂಡಿಸಿ, ನವಯಾನ ಪ್ರಕಟಿಸಿದ ಬಾಬಾ ಸಾಹೇಬರ ""Annihilation of Caste'' ನಲ್ಲಿ ಮುನ್ನುಡಿ ಬರೆದಿದ್ದಾರೆ. ಇದೆಲ್ಲದುರಿಂದ ಯಾರಿಗೆ ಯಾವ ರಾಜಕೀಯ ಲಾಭ ಸಿಗುತ್ತದೆ ಎಂದು ಗೊತ್ತಾಗದಷ್ಟು ಅಮಾಯಕರೇ ಇವರೆಲ್ಲ ಎಂದು ಅಚ್ಚರಿಯಾಗುತ್ತದೆ!

ಬುದ್ಧ-ಬಸವ-ಮಾರ್ಕ್ಸ್- ುಲೆ-ಅಂಬೇಡ್ಕರ್‌ವಾದಿಗಳು ಗಾಂಯನ್ನು ಹೀಗೆ ದೂರ ಮಾಡಿಕೊಂಡಿದ್ದ ಪರಿಣಾಮ ಇಂದು ಗಾಂಧಿಯನ್ನು ಸಂಗಳು ಹೈಜಾಕ್ ಮಾಡಿಕೊಂಡಿದ್ದಾರೆ. ನಿಮಗೆ ಗೊತ್ತಿರಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪ್ರಾತಃ ಸ್ಮರಣೀಯರ ಪಟ್ಟಿ ಒಂದಿದೆ; ಅದರಲ್ಲಿ ಗಾಂಧಿ ಕೂಡ ಒಬ್ಬರು. 1992ರ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಕೈಗೆತ್ತಿಕೊಂಡ ಅಜೆಂಡಾ ಗಾಂಧಿಯ ‘‘ಸ್ವದೇಶೀ’’. ಸಂಘ ಪರಿವಾರದ ಬೆನ್ನೆಲುಬು ಎನಿಸಿಕೊಂಡ ವ್ಯಾಪಾರಸ್ಥರು ತಾವು ವಿದೇಶಿ ಸರಕು ಅಂಗಡಿಯಲ್ಲಿ ಇಟ್ಟುಕೊಂಡೇ ‘‘ಸ್ವದೇಶೀ ಸಾಮಗ್ರಿ ಕೊಳ್ಳಿ’’ ಎಂದು ಪ್ರಚಾರ ಶುರು ಮಾಡಿದರು. ಹೀಗೆ, ಗಾಂಧಿಯನ್ನು ಕಾಪಿ ಹೊಡೆಯದೆ ಇದ್ದಿದ್ದರೆ ಸಂಗಳಿಗೆ ಸಂಸತ್ತಿನಲ್ಲಿ ‘‘35 ಮಾರ್ಕು’’ ದಾಟುತ್ತಿರಲಿಲ್ಲ.

ಇನ್ನು ಗಾಂಧಿಯನ್ನು ದೊಡ್ಡ ದೊಡ್ಡ ‘ಸೈದ್ಧಾಂತಿಕ’ ಕಾರಣಗಳಿಗೆ ವಿರೋಸಿದವರು ಇಂದು ಬೋರ್ಡಿಗಿಲ್ಲದೆ ಹೋದರು. ಏನೇ ಆದರೂ ಗಾಂಧಿ ವಿರೋಧದಿಂದ ಒಂದು ಪೈಸೆಯ ಲಾಭವಂತೂ ಇಲ್ಲ; ಉಲ್ಟಾ ನಷ್ಟವೇ ಜಾಸ್ತಿ. ಇಂದು ವಿದೇಶಗಳಲ್ಲಿ ಭಾರತ ಪ್ರತಿಮೆ ಎಂದರೆ ಗಾಂಧಿ ಪ್ರತಿಮೆ. ವಿದೇಶಗಳಲ್ಲಿ ಗಾಂಧಿಯನ್ನು ಬೈದುಕೊಂಡು ತಿರುಗಿದರೆ ಭಾರತವನ್ನೇ ಬೈದಂತೆ. ಉಗ್ರ ನಾಸ್ತಿಕವಾದಿ ಗೊ.ರಾ. ಮತ್ತು ಎಚ್.ನರಸಿಂಹಯ್ಯನವರು ಎಷ್ಟು ಗಾಂಧಿವಾದಿಯೊ ಅಷ್ಟೇ ಸ್ವಮೂತ್ರ ಪಾನ ಮಾಡುವ ಕಟ್ಟಾ ಸಂಪ್ರದಾಯವಾದಿ ಮೊರಾರ್ಜಿ ಕೂಡ ಅಷ್ಟೇ ಗಾಂಧಿವಾದಿ., ಲೋಹಿಯಾರಷ್ಟೇ ಗಾಂಧಿಯನ್ನು ಸರದಾರ್ ಪಟೇಲ್ ಮತ್ತು ಕೆ.ಎಲ್. ಮುನ್ಷಿ ಇಷ್ಟಪಟ್ಟಿದ್ದರು. ಇನ್ನು ತೆಲಂಗಾಣದಲ್ಲಿ ಪಟೇಲರ ಗುಂಡು ಎದುರಿಸುತ್ತಲೇ, ಗಾಂಗೆ ಶ್ರದ್ಧಾಂಜಲಿ ಅರ್ಪಿಸುವ ಡಾಂಗೆಯ ವೈಶಿಷ್ಟ್ಯ ನೋಡಿ! ತತ್ವ ಸಿದ್ಧಾಂತಗಳ ಎಲ್ಲೆ ಮೀರಿ ಎಲ್ಲ ಹಂತದ ಮತ್ತು ಭಿನ್ನ ಒಲವಿನ ವ್ಯಕ್ತಿ ಗಳನ್ನೂ ಆಕರ್ಷಿಸುವ ಶಕ್ತಿ ಮತ್ತು ಸತ್ವ ಗಾಂಯಲ್ಲಿತ್ತು.

ಗೋಡೆಗೆ ಬಣ್ಣ ಹಚ್ಚುವ ಮೊದಲು ವಾಲ್‌ಪುಟ್ಟಿ ಹಚ್ಚುವ ಮಾದರಿಯಲ್ಲಿ ರಾಜಕೀಯ ಹೋರಾಟಕ್ಕೆ ಮುನ್ನ ಮತ್ತು ನಂತರ ವೈಯಕ್ತಿಕ ಮತ್ತು ಸಾಮಾಜಿಕ ಸನ್ನದ್ಧತೆ ತಂದು ಕೊಳ್ಳಬೇಕಾದ ಅಗತ್ಯತೆಯನ್ನು ಗಾಂಯಷ್ಟು ಪ್ರಖರವಾಗಿ ಪ್ರತಿಪಾದಿಸಿದವರೇ ಇಲ್ಲ. ಎಲ್ಲ ಪಕ್ಷಗಳಿಗೆ ರಾಜಕೀಯವೆಂದರೆ ಚುನಾವಣೆ ಮಾತ್ರ. ಆದರೆ ಸಂಘ ಪರಿವಾರಕ್ಕೆ ಚುನಾವಣಾ ಸೋಲು ಗೆಲುವು ಗೌಣ. ಸಂಘ ಪರಿವಾರದ್ದು ‘‘ವಾಲ್ ಪುಟ್ಟಿ’’ ರಾಜಕಾರಣ. ಬಣ್ಣ ಯಾವುದಾದರೂ ಆದೀತು ತಳಹದಿ ಭದ್ರವಾಗಿರಬೇಕು. ಇದನ್ನೇ ಅವರು ಗಾಂಯಿಂದ ಕಲಿತದ್ದು ಮತ್ತು ಉಳಿದವರು ಬಿಟ್ಟಿದ್ದು. ಗಾಂಯನ್ನು ಪ್ರಗತಿಪರರು ತುಚ್ಚೀಕರಿಸಿದರೆ ಕೋಮುವಾದಿಗಳು ಗುರುವಾಗಿ ಸ್ವೀಕರಿಸಿದರು. ಇಂದು ಅದೇ ಗುರುವನ್ನು ಮುಂದಿಟ್ಟುಕೊಂಡು ಪ್ರಗತಿಪರರ ಹೆಬ್ಬೆಟ್ಟು ಕಿತ್ತಿದ್ದಾರೆ. ರಾಜಕೀಯದ ಇಸ್ಪೀಟ್ ಆಟದಲ್ಲಿ ನಮಗೆ ಬೇಡ ಎಂದು ಪ್ರಗತಿಪರರು ಎಸೆದ ಕಾರ್ಡ್ ಇಂದು ಸಂಗಳಿಗೆ ಟ್ರಂಪ್ ಕಾರ್ಡ್ ಆಗಿದೆ!

 ಕಾಂಗ್ರೆಸ್‌ಗೆ ಚುನಾವಣಾ ರಾಜಕಾರಣ ಬಿಟ್ಟರೆ ಬೇರೆ ಗೊತ್ತಿಲ್ಲ. ಸಿದ್ಧಾಂತದ ಗೋಜು ಏನಾದರೂ ಇದ್ದರೆ ಸಿಪಿಐ/ಸಿಪಿಎಂ ಮತ್ತು ಬಿಎಸ್‌ಪಿಗಳಿಗೆ. ಆದರೆ ಈ ಸೈದ್ಧಾಂತಿಕ ಪಕ್ಷಗಳ ಗತಿ ಏನಾಗಿದೆ? ಇಂದು ಸಂಗಳ ‘ರಾಮ’ನನ್ನು ಎದುರಿಸುವ ಶಕ್ತಿ ಏನಾದರೂ ಇದ್ದರೆ ಅದು ಗಾಂಯ ರಾಮನಿಗೆ ಮಾತ್ರ ಹೊರತು (ಯೆಚೂರಿ) ಸೀತಾರಾಮನಿಗಲ್ಲ ಅಥವಾ (ಕಾನ್ಷಿ) ರಾಮನನ್ನು ತೊರೆದ ಮಾಯಾವತಿಗೂ ಅಲ್ಲ. ಸಂಗಳ ಕೋಮುವಾದಕ್ಕೆ ಹಿಂದೂಧರ್ಮ ಮತ್ತು ವರ್ಣಾಶ್ರಮ ‘ಪ್ರತಿಪಾದಿಸುವ’ ಗಾಂಯೇ ಮದ್ದು. ಗಾಂಯಷ್ಟು ರಾಜಕಾರಣದಲ್ಲಿ ‘ಧರ್ಮವನ್ನು’ ಬೆರೆಸಿದವರೇ ಇಲ್ಲ. ಗಾಂ ಬಿಡಿಸಿದ ಒಂದೊಂದೇ ಚಿತ್ರವು ವಿಚಿತ್ರವಾಗಿ ಕಂಡರೂ ಒಟ್ಟಿನ ಕೊಲಾಜ್ ಅರ್ಥಪೂರ್ಣವಾಗಿಸುವ ಗಾಂ ಭಾರತವನ್ನು ಒಟ್ಟು ಗೂಡಿಸಿದ ಶಕ್ತಿ.

ಗಾಂ, ಎರಡಲ್ಲ, ನಾಲ್ಕು ಧ್ರುವಗಳನ್ನು (ಹಿಂದೂ-ಮುಸ್ಲಿಂ-ಎಡ-ಬಲ) ಸಮಗ್ರವಾಗಿ ಸಮನ್ವಯಗೊಳಿಸಿದ ಶಕ್ತಿ. ಸಂವಿಧಾನ ರಚನೆಗೆ ಬಾಬಾ ಸಾಹೇಬರನ್ನೇ ನೇಮಿಸಬೇಕು ಎಂದು ನೆಹರುಗೆ ಒತ್ತಾಯಿಸಿದ್ದು ಗಾಂಯೇ. ಅಂಬೇಡ್ಕರ್ ಮತ್ತು ಗಾಂ ನಡುವಣ ಭಿನ್ನತೆಗಳು ಹೊರಪದರಿನ ಹೊಂದಾಣಿಕೆ ಸಮಸ್ಯೆಗಳೇ ವಿನಃ ಅಂತರಂಗದ ಸರಿಹೋಗಲು ಸಾಧ್ಯವೇ ಇಲ್ಲದ ವೈರುಧ್ಯಗಳಲ್ಲ. ಅಂಬೇಡ್ಕರ್, ಗಾಂಗಿಂತ ಹೆಚ್ಚು ವಿದ್ವತ್ಪೂರ್ಣ ಮತ್ತು ಪ್ರಖರ ಶಕ್ತಿ. ನಿಜ. ಆದರೆ, ಗಾಂಯನ್ನು ನಂಜಿಕೊಳ್ಳಲು ಒಲ್ಲದ ಅಂಬೇಡ್ಕರ್ ವಾದಕ್ಕೆ ನಂಜು ತಗಲುವ ಭಯವಿದೆ. ಹಾಗೆಯೇ, ಮಾರ್ಕ್ಸ್‌ವಾದ ಭಾರತದ ಸಂದರ್ಭಕ್ಕೆ ಗಾಂ ಸತ್ವ ಮತ್ತು ಅಂಬೇಡ್ಕರ್‌ರ ಕಾಣ್ಕೆಯನ್ನು ಅಂತರ್ಗತಗೊಳಿಸಿಕೊಳ್ಳಲೇಬೇಕು. ಹಾಗೆಯೇ ಮಾರ್ಕ್ಸ್ ಪ್ರತಿಪಾದಿಸಿದ ಅಂತಾರಾಷ್ಟ್ರೀಯ ಶೋಷಿತರ ಭ್ರಾತೃತ್ವ, ಆರ್ಥಿಕ ಸಮಾನತೆಯ ತತ್ವ ಅಂಬೇಡ್ಕರ್ ಸಿದ್ಧಾಂತಕ್ಕೆ ಅತಿ ಮುಖ್ಯ.

ತತ್ವ ಸಮನ್ವಯ ಇಂದಿನ ಸಾಮಾಜಿಕ ಮತ್ತು ರಾಜಕೀಯ ತುರ್ತುಗಳಲ್ಲಿ ಒಂದು ಎಂದಾದ ಮೇಲೆ ಗಾಂ ಇಂದಿನ ತುರ್ತು ಎಂದು ಬೇರೆ ಹೇಳಬೇಕಿಲ್ಲ. ಏಕೆಂದರೆ ಈ ತತ್ವ ಸಮನ್ವಯ ಸಾಧ್ಯವಾಗುವುದು ಗಾಂ ಎಂಬ ಸಮಾನಾಂತರ ಕೇಂದ್ರ ಬಿಂದುವಿನಿಂದ.

ಇಂದು, ಅಂಬೇಡ್ಕರ್ ವಾದಿಗಳು, ಲೋಹಿಯಾ ಮತ್ತು ಮಾರ್ಕ್ಸ್ ವಾದಿಗಳು ಸೇರಿದಂತೆ ಎಲ್ಲ ಸಮಾಜಪರ ಪ್ರಗತಿಪರ ಶಕ್ತಿಗಳು, ನಮ್ಮ- ನಮ್ಮಲ್ಲಿ 100-5 ಎಂಬ ಭೇದ ಬೆಳೆಸಿಕೊಂಡರೂ, ಬೇರೆಯವರನ್ನು 105 ರ ಶಕ್ತಿಯಿಂದ ಎದುರಿಸಬೇಕಾದ ಅಗತ್ಯವಿದೆ. ಈ ಒಗ್ಗಟ್ಟಿನ ಸಾಧ್ಯವಾಗಿಸುವ ಅತ್ಯಂತ ಸರಳ ಸಂವಹನ ಸಾಧನ ಇಂದಿಗೆ ಗಾಂ ಮಾತ್ರ.

ಗಾಂಯ ಕುರಿತ ಬಿಡಿ ಬಿಡಿ ್ಛಚ್ಚಠಿಗಳು ಸತ್ಯವೆನಿಸಿಕೊಳ್ಳುವುದಿಲ್ಲ. ಇಂದಿಗೆ ಇದನ್ನೆಲ್ಲಾ ಕೆದಕಿ ಕೊಂಡು ಇದ್ದೊಂದು ಗುಡಿಸಲನ್ನೂ ಮೈಮೇಲೆ ಕೆಡವಿಕೊಳ್ಳಲು ಇದು ಸಂದರ್ಭವೂ ಅಲ್ಲ. ಇನ್ನು ಈ ಎಲ್ಲ ಅಂತರ್ ಕಲಹದ ಲಾಭ ಯಾರಿಗೆ ಎಂದು ಬಿಡಿಸಿ ಹೇಳಬೇಕಾದ ಅಗತ್ಯವೂ ಇಲ್ಲ.

ವಿಚಿತ್ರವೆಂದರೆ, ಇಂದು ಬಿಜೆಪಿಯಲ್ಲಿನ ಅಡ್ವಾಣಿ ಮತ್ತು ಬ್ರಾಹ್ಮಣಶಾಹಿ ನಾಯಕತ್ವಕ್ಕೆ ಮೋದಿ ಮೇಲೆ ಇರುವಷ್ಟು ಸಿಟ್ಟು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ರ ಮೇಲೂ ಇಲ್ಲ. ಆದರೂ ಹೇಗೆ ತೆಪ್ಪಗೆ ನುಂಗಿಕೊಂಡು ಕೂತಿದ್ದಾರೆ ನೋಡಿ. ಇಂತಹದ್ದರಲ್ಲಿ ನಾವು ನಾವುಗಳೇ ಇಲ್ಲ ಸಲ್ಲದ ರಾದ್ಧಾಂತ ಮಾಡಿಕೊಂಡು ಹೋಗುತ್ತಿದ್ದೇವೆ. ಹಾಗೆಂದು ಪ್ರಗತಿಪರರ ವಿವಿಧ ಬಣಗಳು ತಮ್ಮ ಎಲ್ಲ ತಾತ್ವಿಕ ಭಿನ್ನಾಭಿಪ್ರಾಯಗಳನ್ನೂ ಸುಮ್ಮ ಸುಮ್ಮನೆ ಬಿಟ್ಟು ಬಿಡಬೇಕು ಸಕಾರಣವಿಲ್ಲದೆ ಸುಟ್ಟು ಬಿಡಬೇಕು ಎಂದಲ್ಲ. ಹೀಗೆ ಮಾಡಿದರೆ ಅದು ತುಂಬಾ ತಾತ್ಕಾಲಿಕ ಮತ್ತು ಕೃತ್ರಿಮವಾದೀತು.

ಅಭಿಪ್ರಾಯ ಮತ್ತು ಸೈದ್ಧಾಂತಿಕ ಭೇದಗಳು ಇರಲಿ. ಅವುಗಳನ್ನು ಮನಸ್ಸಿನ ಒಂದು ಒಳ ಕೊಣೆಯಲ್ಲಿ ಇಟ್ಟುಕೊಂಡೇ ಗಾಂ ಎಂಬ ಅಂಗಳದಲ್ಲಿ ಒಟ್ಟು ಸೇರೋಣ. ನಮ್ಮ ನಮ್ಮ ಕಾರ್ಯಕ್ರಮ ನಮಗಿರಲಿ; ಗಾಂಧಿ ಮಾತ್ರ ನಮ್ಮೆಲ್ಲರ ‘‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’’ ವಾಗಿರಲಿ.

ರೂಪಶ್ರೀ ಕಲ್ಲಿಗನೂರ : ಎರಡು ಕವಿತೆಗಳುರೂಪಶ್ರೀ ಕಲ್ಲಿಗನೂರ


1

ಹೂ ಹುಡುಗಿಇವಳು
ಹೂ ಮುಡಿಯದ ಹುಡುಗಿ
ಮಲ್ಲಿಗೆ, ಸಂಪಿಗೆ, ಟಬೆಬುಯಾ, ಗುಲಾಬಿ
ಗುಲ್ಮೊಹರ್, ದೇವಕಣಗಿಲೆ
ಏಪ್ರಿಕಾಟ್, ಯಥೇಚ್ಚವಾಗಿ ಕಪ್ಪು ರಸ್ತೆಯಲ್ಲಿ
ಸುರಿದ ಹೆಸರು ಗೊತ್ತಿಲ್ಲದ್ದೂ... ಮತ್ತಷ್ಟೂ 
ಎದೆಗಪ್ಪಿ ಸಂಭ್ರಮಿಸುತ್ತಾಳೆ
ತೆಳು ಪಕಳೆ ಜೀವಗಳ

ಆಘ್ರಾಣಿಸಿ ಒಳಗೆ ಇಳಿ ಬಿಟ್ಟ ಘಮದ
ಸೊಗಸಿಗೆ ಬಚ್ಚಿಟ್ಟ ಬಯಕೆಯ ಮೊಗ್ಗು ಬಿರಿದು
ತುಟಿಗಳಲಿ ಹೂನಗೆ ಕನಸಲಿ ಕಂಡ ಅಸ್ಪಷ್ಟ
ಚಿತ್ರಗಳಿಗೆ ರೇಖೆ ಮೂಡಿದ ಪುಳಕ

ಹೊಟ್ಟೆ ಬೆನ್ನಿಗಂಟಿಸಿಕೊಂಡ
ಹರಕಂಗಿಯ ಹೂ ಹುಡುಗಿಗೆ
ಸೂತಕದ ಮನೆಯಲ್ಲಿ ಭರ್ಜರಿ ವ್ಯಾಪಾರ
ಇವಳು ಕೊಂಡ ನಾಲ್ಕುಮೊಳದ
ಹೂವಿಂದ ಅವಳಂದಿನ ಹಸಿವಿನ ಭಾರ ಹಗುರ

ಓಹ್! ಎಷ್ಟೊಂದು ರಸ್ತೆನಕ್ಷತ್ರಗಳು
ನಿದ್ರೆಯ ಜೋಂಪಿನಲಿ ರಸ್ತೆಗೆ ಬಿದ್ದರೆ
ಮೈಮೇಲೆ ವಾಹನದ ಸವಾರಿ
ಫುಟ್ಪಾತಿನಲಿ ಮಲಗಿದರೆ ಪಾದಚಾರಿಗಳ
ಕಿರಿಕಿರಿ ತ್ರಾಣವಿಲ್ಲದವರ ಪಾದದಡಿ ಸಿಲುಕಿ
ಕಂದಗಾಗಿ ಚಿರ ನಿದ್ರೆಗೆ ಜಾರಿದ
ಹಳದಿ ಹೂಗಳೆಷ್ಟಿರಬಹುದು ಇಂದು!
ಮೆಲ್ಲನಾಯ್ದು ಉಡಿತುಂಬಿಸಿಕೊಳ್ಳುವಳು
ಜನಾಕ್ರಮಣದಲ್ಲುಳಿದ ಹೂಗಳ
ಕಲ್ಲ ದೇವರ ತಲೆಯ ಮೇಲಿಡುವಳು
ನಂಬಿಕೆಯಿಲ್ಲದಿದ್ದರೂ ರಕ್ಷಣೆಯ ಕಾರ್ಯ ಮಾತ್ರಕ್ಕೆ

ಸೂರ್ಯನೊಂದಿಗೆ ಅಸ್ತವಾಗುವ
ಬದುಕಿನ ಕೊನೆ ಚಣದ ಘಳಿಗೆ
ಬಾಡಿದ ಎದೆಯರಳಿಸುವ ನಿಮಗೇಕೆ
ನಿತ್ಯ ಸಾವು? ಉತ್ತರ ಬಾರದ
ಪ್ರಶ್ನೆಗೆ ತಾನೇ ಹಲಬುತ್ತಾಳೆ
ಒಡಲಲಿ ಬೆಂಕಿಯಡಗಿಸಿಟ್ಟುಕೊಂಡವರಿಗೆ
ನಯವಾಗಿ ಕತ್ತಿ ಮಸೆಯುವವರಿಗೆ
ಹೂದೋಟಕೆ ಕಲ್ಲೆಸೆಯುತ್ತಿರುವವರಿಗೆ
ಚಿಗುರೆಲೆಗೆ ವಿಷವಿಡುವವರಿಗೆ
ನೀಲಿಗಣ್ಣಿನ ಕಾಮುಕ ಕುರುಡರಿಗೆ
ಮನೆಜ್ಯೋತಿಗೇ ಬೆಂಕಿಯಿಡುವವರಿಗೆ
ದೇಶದ ತಲೆ ಬೋಳಿಸುವ ಭ್ರಷ್ಟರಿಗೆ
ಸಂಭವಿಸಬೇಕು ನಿತ್ಯ ಸಾವು
ಎಷ್ಟು ದಂಡವಾಗುತ್ತಿದೆ ಅವರಿಗಿತ್ತ ಆಯಸ್ಸು
ಹಳಹಳಿ ನಿರಂತರ
ಇಲ್ಲಿ ಕೇಳು ಹೂವೇ ಕಲ್ಲಿಗೆ ಕಿವಿಯಿಲ್ಲಯೆಂಬುದ
ತಿಳೀಬೇಕಿದೆ ನಾನೂ ನೀನೂ
***

2

ಅಮ್ಮನಲ್ಲಿ ಅರಿಕೆ

ಅಮ್ಮ,
ಇಷ್ಟು ದಿನ ನಿನ್ನೊಡಲ
ತಟದಲ್ಲಿ ಬೆಳೆದವಳನ್ನು, ಹೊತ್ತು
ಮೀರುತ್ತಿದೆಯೆಂಬ ದೌಡಿನಲಿ
ಬದುಕಿನ ಮತ್ತೊಂದು
ದಡ ಮಟ್ಟಿಸಲು ಹವಣಿಸುತ್ತಿದ್ದಿ
ನಿನ್ನಾರೈಕೆಯ ತೋಳುಗಳಿಂದ
ಬಿಡಿಸಿ, ಬೆಚ್ಚನೆಯ ಅಂಗೈಗಳಲ್ಲಿ
ನಿನ್ನ ನೆಚ್ಚಿನ ಮಗಳ ರೂಪು ಅಚ್ಚಾಗಲೆಂದು

ಏನು ಮಾಡಲಿ?
ನಾ ನೆಚ್ಚಿ ಕಾಯುತ್ತಿರುವ ಮಾನಸ
ಸರೋವರದ ನಾವಿಕನ ಮುಖವೀಗ
ಯಾವುದೋ ರಾತ್ರಿಯೊಂದರಲಿ ಕಳೆದುಕೊಂಡಿದ್ದ
ಚಂದ್ರಿಕೆಯನ್ನು ಹಗಲಿನಂಗಳದಲ್ಲಿ
ಹುಡುಕುತ್ತಾ ಅನೂಹ್ಯವೊಂದರಲ್ಲಿ ಮುಳುಗಿಹೋಗಿದೆ
ಅವ ಕಡಲಲ್ಲಿ; ನಾ ಇತ್ತಣ ದಡದಲ್ಲಿ
ನನ್ನ ಹಾದಿ ತೆರೆಯುತ್ತಿಲ್ಲ
ಅವನ ಕಥೆ ಮುಗಿಯುತ್ತಿಲ್ಲ

ಶಾಲಭಂಜಿಕೆಯರ ತಂಗಿಯಂತೆ
ನೆಲಕಚ್ಚಿ ನಿಂತೂ ನಿಂತೂ
ಕಾಲುಗಳು ಮರಳೆದೆಯಲ್ಲಿ ಹೂಳಲಾರಂಭಿಸಿವೆ
ದಶಕಗಳಿಂದ ನಡೆದೂ ನಡೆದೂ
ನಿತ್ರಾಣಗೊಂಡಿದ್ದೀಯ
ತುತ್ತುಣಿಸಲಿನ್ನು ಕಾಯುತ್ತ ನಿಲ್ಲಬೇಡ; ಭಯಪಡಬೇಡ
ಅಕ್ಕನ ಬಯಲ ಆಯಲದಲ್ಲಿ ಆಶ್ರಯಿಸುತ್ತೇನೆ
ಒಬ್ಬಂಟಿಯೇನಲ್ಲ; ಕಾಡುವ ಕಡಲು ಮುಂದೆಯೇ ಇದ್ದಾನೆ
ಅವನಿಗೆ ನನ್ನ ಕಾಯುವ ಕಾವು
ತಟ್ಟುವವರೆಗೂ ಕಾಯುತ್ತಿರುತ್ತೇನೆ
ಕಡೆಗೆ,
ದಿನಗಳನ್ನೆಣಿಸುತ್ತಿರುವ ನನ್ನ
ಮುಗ್ಧ ಕನಸುಗಳ ಸಾವಿಗೊಂದು
ಹೆಸರು ಸಿಗುವವರೆಗಾದರೂ ಕಾಯುತ್ತೇನೆ
 ***

ಮುನ್ನುಡಿ ಬೆನ್ನುಡಿಗಳ ಹಿನ್ನೆಲೆಯಲ್ಲಿ

ಜಿ.ಪಿ.ಬಸವರಾಜು

ಲೇಖಕರು ಮುನ್ನುಡಿ, ಬೆನ್ನುಡಿಗಳ ಬೆನ್ನುಹಿಡಿದು ಹೋಗುವುದೇತಕ್ಕೆ? ಸಾಹಿತ್ಯ ಕ್ಷೇತ್ರಕ್ಕೆ ಇದೀಗ ಪ್ರವೇಶ ಪಡೆಯುತ್ತಿರುವ ಬರಹಗಾರರಿಗೆ ಇವುಗಳ ಅಗತ್ಯ ಇರಬಹುದು. ಅವರ ಆತ್ಮವಿಶ್ವಾಸವನ್ನು ಕುದುರಿಸಲು ಇವು ಬೇಕಾಗಲೂಬಹುದು. ಹಾಗೆಯೇ ಓದುಗರಿಗೆ ಹೊಸ ಧ್ವನಿಗಳನ್ನು ಪರಿಚಯಿಸುವ ಕೆಲಸವೂ ಆಗಬೇಕಾಗುತ್ತದೆ. ಆದರೆ ಈಗಾಗಲೇ ತಮ್ಮ ಕೃತಿಗಳ ಮೂಲಕ ಹೆಸರು ಮಾಡಿದವರು, ತಮ್ಮ ಮುದ್ರೆಯನ್ನು ಒತ್ತಿರುವವರು, ಓದುಗರ ನಿರೀಕ್ಷೆಯನ್ನು ಎತ್ತರಿಸಿದವರು-ಇಂಥ ಲೇಖಕರಿಗೂ ಮುನ್ನುಡಿ ಬೆನ್ನುಡಿಗಳ ಅಗತ್ಯವಿರುತ್ತದೆಯೇ?

ತಮ್ಮ ’ಭೂಮಿಗೀತ’ ಸಂಕಲವನ್ನು ಪ್ರಕಟಿಸುವ ಹೊತ್ತಿಗೆ ಕವಿ ಎಂ.ಗೋಪಾಲ ಕೃಷ್ಣ ಅಡಿಗರು ಮಧ್ಯವಯಸ್ಸನ್ನು ತಲುಪಿದ್ದರು. ನವ್ಯ ಪಂಥದ ನಾಯಕರೂ ಆಗಿದ್ದರು. ’ಚಂಡೆಮದ್ದಳೆ’ಯ ಮೂಲಕ ಅವರ ಧ್ವನಿ ಆಗಲೇ ಮೊಳಗಿತ್ತು. ನವೋದಯದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಅಡಿಗರು ಹೊಸ ತಲೆಮಾರನ್ನು ಪ್ರಭಾವಿಸಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸದೊಂದು ಅಭಿವ್ಯಕ್ತಿ ಕ್ರಮಕ್ಕೆ ಪ್ರಯತ್ನಿಸಿ ದೊಡ್ಡ ಕವಿ ಎನ್ನಿಸಿಕೊಂಡಿದ್ದರು. ಅಂಥವರೂ ’ಭೂಮಿಗೀತ’ಕ್ಕೆ ಅನಂತಮೂರ್ತಿಯವರಿಂದ ಮುನ್ನುಡಿಯನ್ನು ಬರೆಸಿದ್ದರು. ಅನಂತಮೂರ್ತಿ ಆಗಿನ್ನೂ ತರುಣ; ೨೫ರ ಆಜುಬಾಜು ಇದ್ದವರು. ಅಡಿಗರಿಗೆ ಈ ಮುನ್ನುಡಿಯ ಅಗತ್ಯವಿತ್ತೇ?

ಅನಂತಮೂರ್ತಿಯವರ ಈ ಮುನ್ನುಡಿ ಎಷ್ಟು ಮಹತ್ವದ್ದೆಂದರೆ ಇವತ್ತಿಗೂ ಭೂಮಿಗೀತದ ಕವಿತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರಿಗೆ ಇದು ದೊಡ್ಡ ನೆರವನ್ನು ನೀಡುತ್ತದೆ. ಹೊಸ ಕಾವ್ಯವೊಂದರ ಲಯ, ಅರ್ಥವಂತಿಕೆ, ಅದರ ವಿಭಿನ್ನ ಆಯಾಮಗಳು, ಶಿಲ್ಪದ ಸೊಗಸು, ಪ್ರತಿಮಾ ವಿಧಾನ ಇತ್ಯಾದಿ ಅನೇಕ ಸಂಗತಿಗಳ ಬಗ್ಗೆ ಈ ಮುನ್ನುಡಿ ಬೆಳಕುಚೆಲ್ಲುತ್ತದೆ; ಹೊಸ ಹೊಸ ಒಳನೋಟಗಳನ್ನು ಕಟ್ಟಿಕೊಡುತ್ತ, ಹೊಸ ಅಭಿವ್ಯಕ್ತಿಯಲ್ಲಿ ಹುಟ್ಟಿಕೊಂಡ ಇಲ್ಲಿನ ಕವಿತೆಗಳ ಅರ್ಥವಂತಿಕೆಯನ್ನು ತೋರಿಸಿಕೊಡುತ್ತದೆ.

ಮುನ್ನುಡಿ ಎಂದರೆ ಕೇವಲ ಬೆನ್ತಟ್ಟುವ ಕೆಲಸವಲ್ಲ; ಒಂದು ರೀತಿಯ ವಿಮರ್ಶೆಗೂ ಈ ಮುನ್ನುಡಿ ದಾರಿ ಮಾಡಿಕೊಡುತ್ತದೆ. ಗುಣವನ್ನು ಮೆಚ್ಚುತ್ತಲೇ ನಿರ್ದಾಕ್ಷಿಣ್ಯವಾಗಿ ಟೀಕಿಸುವ ಕೆಲಸವನ್ನು ವಿಮರ್ಶೆ ಮಾಡುತ್ತದೆ ಎನ್ನುವುದಾದರೆ, ಕನ್ನಡದಲ್ಲಿ ಬಂದ ಮತ್ತು ಬರುತ್ತಿರುವ ಅನೇಕ ಮುನ್ನುಡಿಗಳು ವಿಮರ್ಶೆಯ ಹೊಣೆಗಾರಿಕೆಯನ್ನು ನಿಭಾಯಿಸಿವೆ ಎನ್ನುವುದು ನಿಜ. ಇದು ನಮ್ಮ ಸಾಹಿತ್ಯದ ಆರೋಗ್ಯಕರ ಬೆಳವಣಿಗೆಯನ್ನು ಸೂಚಿಸುತ್ತದೆ.

ಬಹುಶಃ ಬಹುಪಾಲು ಲೇಖಕರೂ ಇಂಥ ಮುನ್ನುಡಿಗಳನ್ನು ಇಷ್ಟಪಡುವ ಕಾರಣ, ಪ್ರತಿಯೊಂದು ಕೃತಿಯೂ ಮುನ್ನುಡಿಯೊಂದಿಗೆ ಪ್ರಕಟವಾಗುತ್ತಿರುವುದನ್ನು ನೋಡಬಹುದು. (ಓದುಗರನ್ನು ದಾರಿತಪ್ಪಿಸುವ, ಲೇಖಕರನ್ನು ಅಟ್ಟದ ಮೇಲೆ ಕೂರಿಸುವ ಭಟ್ಟಂಗಿ ಮುನ್ನುಡಿಗಳ ಸಂಖ್ಯೆಯೇ ಹೆಚ್ಚಾಗಿದೆ ಎಂಬುದನ್ನು ಮರೆಯುವಂತಿಲ್ಲ) ಮುನ್ನುಡಿಯನ್ನು ಲೇಖಕ ಬಯಸುವುದರ ಹಿಂದೆ ಇನ್ನೊಂದು ಅಂಶವೂ ಇದೆ. ಕೃತಿ ಪ್ರಕಟವಾದ ಮೇಲೆ ಸರಿಯಾದ ವಿಮರ್ಶೆಯೇ ಪ್ರಕಟಗೊಳ್ಳದಿರುವುದು ಇವತ್ತಿನ ಕಟು ವಾಸ್ತವವೂ ಆಗಿದೆ. ಆದ್ದರಿಂದಲೇ ವಿಮರ್ಶಾತ್ಮಕ ಮುನ್ನುಡಿಯೊಂದು ಪ್ರಕಟವಾದರೆ ಅದು ವಿಮರ್ಶೆಯ ಹೊಣೆಗಾರಿಕೆಯನ್ನೂ ನಿಭಾಯಿಸಿ, ಲೇಖಕನಿಗೆ ಮತ್ತು ಓದುಗರಿಗೆ ನ್ಯಾಯ ದೊರಕಿಸಬಹುದೆಂಬ ತರ್ಕವೂ ಇದೆ.

ಹಿಂದೆ ವಿಮರ್ಶೆಯ ಕೆಲಸವನ್ನು ಕೆಲವೇ ಕೆಲವು ಪತ್ರಿಕೆಗಳಾದರೂ ಸಮರ್ಥವಾಗಿ ಮಾಡುತ್ತಿದ್ದವು. ಸಾಹಿತ್ಯಕ ಪತ್ರಿಕೆಗಳಲ್ಲಿಯೂ ವಿಮರ್ಶೆ ಎನ್ನುವುದು ಅರ್ಥಪೂರ್ಣ ಸಂವಾದಕ್ಕೆ ಎಡೆಮಾಡಿಕೊಡುತ್ತಿತ್ತು. ಇವತ್ತು ಪತ್ರಿಕೆಗಳಲ್ಲಿ ವಿಮರ್ಶೆಗೆ ಜಾಗದ ಅಭಾವ. ಜಾಗವೆಂದರೆ ಅದು ಹಣವನ್ನು ತರುವ ಜಾಹಿರಾತಿಗೆ ಮೀಸಲು. ಎಷ್ಟು ಚುಟುಕಾಗಿ ವಿಮರ್ಶೆ ಇದ್ದರೆ ಅದು ತನಗೆ ಲಾಭ ಎಂದು ಭಾವಿಸುವ ಪತ್ರಿಕೆಗಳೇ ಹೆಚ್ಚು. ವಿಮರ್ಶೆ ಎನ್ನುವ ಬರಹ ಇಲ್ಲದಿದ್ದರೂ ಪತ್ರಿಕೆಯ ಪ್ರಸಾರ ಸಂಖ್ಯೆ ಇಳಿಯುವುದಿಲ್ಲ. ಕೆಲವೇ ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ವಿಮರ್ಶೆ ಎನ್ನುವುದು ಸಾಹಿತ್ಯಕ ಹೊಣೆಗಾರಿಕೆ, ಸಾಮಾಜಿಕ ಬದ್ಧತೆ ಎನ್ನುವಂತೆ ಪತ್ರಿಕೆಗಳು ಭಾವಿಸಿದಂತೆ ತೋರುತ್ತಿತ್ತು.

ವರ್ಷದಲ್ಲಿ ಬರುವ ಎಲ್ಲ ವಿಮರ್ಶೆಗಳನ್ನು ಸಂಗ್ರಹಿಸಿ ಇಟ್ಟುಕೊಂಡರೆ, ವರ್ಷದ ಪ್ರಮುಖ ಕೃತಿಗಳ ಮೌಲ್ಯಮಾಪನವಾಗುತ್ತಿತ್ತು. ಕನ್ನಡದ ಮುಖ್ಯ ವಿಮರ್ಶಕರು ಉತ್ಸಾಹದಿಂದ ವಿಮರ್ಶೆಯನ್ನು ಬರೆಯುತ್ತಿದ್ದರು. ಛೇಡಿಸುವುದು, ವ್ಯಂಗ್ಯವಾಡುವುದು, ಕಾಲೆಳೆಯುವುದು ಇದ್ದರೂ, ಉತ್ತಮ ಕೃತಿಗಳಿಗೆ ಸಿಕ್ಕಬೇಕಾದ ನ್ಯಾಯ ಸಿಕ್ಕೇ ಸಿಕ್ಕುತ್ತದೆ ಎಂಬ ಭರವಸೆಯ ವಾತಾವರಣವಿತ್ತು. ಅಲ್ಲದೆ ಗಮನಾರ್ಹ ಕೃತಿಗಳು, ಭರವಸೆಯ ಧ್ವನಿಗಳು ಓದುಗರ ಕಣ್ತಪ್ಪದಂತೆ ಈ ವಿಮರ್ಶೆಗಳು ನೋಡಿಕೊಳ್ಳುತ್ತಿದ್ದವು. ದೊಡ್ಡ ಪತ್ರಿಕೆಗಳ ಪುರವಣಿಗಳಲ್ಲಿ ಈ ಕಾರ್ಯ ಶಿಸ್ತ್ತುಬದ್ಧವಾಗಿ ನಡೆಯುತ್ತಿತ್ತು. ಸಾಹಿತ್ಯಕ ಪತ್ರಿಕೆಗಳಲ್ಲಂತೂ ಇದು ಇನ್ನಷ್ಟು ಅರ್ಥಪೂರ್ಣವಾಗಿ ಇರುತ್ತಿತ್ತು.  ತನ್ನೆಲ್ಲ ಸೃಜನಶೀಲತೆಯನ್ನು ಪಣಕ್ಕಿಟ್ಟು ಬರೆಯುವ ಉತ್ಸಾಹ ಲೇಖಕರಲ್ಲೂ ಮೂಡುತ್ತಿತ್ತು. ಕೊಳ್ಳುವ ಓದುಗನಿಗೆ ಈ ಪುಸ್ತಕ ವಿಮರ್ಶೆ ಎನ್ನುವುದು ಮಾರ್ಗ ಸೂಚಿಯೂ ಆಗಿರುತ್ತಿತ್ತು. ಪ್ರಕಾಶಕರಿಗೂ ಇದರ ಪ್ರಯೋಜನವಾಗುತ್ತಿತ್ತು. ಹಿಂದೆ ಸಾಹಿತ್ಯ ಪತ್ರಿಕೆಗಳಲ್ಲಿ ನಡೆಯುತ್ತಿದ್ದ ದೊಡ್ಡ ಚರ್ಚೆಗಳು, ವಾಗ್ವಾದಗಳು, ವಿಮರ್ಶೆಯ ವಿವೇಕವನ್ನು, ಓದುಗ ಸಂವೇದನೆಯನ್ನು ಹರಿತಗೊಳಿಸುತ್ತಿದ್ದವು. ಜನಪ್ರಿಯ ಮತ್ತು ಹೆಚ್ಚಿನ ಪ್ರಸಾರದ ಸಾಪ್ತಾಹಿಕಗಳ ಮೇಲೂ ಈ ಪ್ರಭಾವ ಇರುತ್ತಿತ್ತು.

ಇವತ್ತಿನ ಬದಲಾದ ಪರಿಸ್ಥಿತಿಯಲ್ಲಿ ಅದೆಲ್ಲ ಕಣ್ಮರೆಯಾಗಿದೆ. ’ಟಾಪ್ ಟೆನ್’ಗಳು ಮಾರುಕಟ್ಟೆಯ ಮಾನದಂಡಗಳಾಗಿವೆ. ’ವಿಮರ್ಶೆ’ ಎಂದು ಪ್ರಕಟವಾಗುವ ಬರಹಗಳೂ ಬೇಕಾಬಿಟ್ಟಿಯಾಗಿರುತ್ತವೆ. ಅನೇಕರು ಮುನ್ನುಡಿ ಬೆನ್ನುಡಿಗಳ ಮಾತುಗಳನ್ನು ಹೆಕ್ಕಿ ಕೈತೊಳೆದುಕೊಳ್ಳುವ ವಿಮರ್ಶಕರೂ ಇದ್ದಾರೆ. ಇದು ಪರಿಚಯ, ಇದು ಕಿರುವಿಮರ್ಶೆ ಇತ್ಯಾದಿ ಮಾತುಗಳಲ್ಲಿ ತಮ್ಮ ಬರಹಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಪದಮಿತಿಯ ಕಾರಣವೋ ಅಥವಾ ಪತ್ರಿಕೆಗಳ ಹೊಣೆಗೇಡಿತನವು ಕಾರಣವೋ ಅಂತೂ ನಮ್ಮ ಪ್ರಮುಖ ವಿಮರ್ಶಕರನೇಕರು ಉತ್ಸಾಹದಿಂದ ಪುಸ್ತಕ ವಿಮರ್ಶೆಯನ್ನು ಮಾಡುತ್ತಿಲ್ಲ. ಇನ್ನೂ ಕೆಲವರು ಗಂಭೀರ ವಿಮರ್ಶೆಯಲ್ಲಿ ತೊಡಗಿಕೊಂಡಿದ್ದರೂ, ಈಗಾಗಲೇ ಚರ್ಚಿತವಾಗಿರುವ, ಮೌಲ್ಯಮಾಪನವಾಗಿರುವ ಕೃತಿಗಳನ್ನೇ ಮತ್ತೆ ಎತ್ತಿಕೊಂಡು ಜಗಿದದ್ದನ್ನೇ ಜಗಿಯುವುದರಲ್ಲಿ ತೃಪ್ತಿಪಟ್ಟುಕೊಳ್ಳುತ್ತಾರೆ. ಇದು ಸಾಹಿತ್ಯದ ಒಟ್ಟಾರೆಯ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿ ಕಾಣುವುದಿಲ್ಲ.

ಇಂಥ ಹಿನ್ನೆಲೆಯಲ್ಲಿ ಲೇಖಕರು ಮುನ್ನುಡಿಯನ್ನು ಅಪೇಕ್ಷಿಸುತ್ತಿರಬಹುದು. ಮುನ್ನುಡಿ ಎನ್ನುವುದು ಕೃತಿಯ ವಿಮರ್ಶೆಯಾಗಿರಲಿ, ತನ್ನ ಮಿತಿಗಳೇನು, ಸಾಮರ್ಥ್ಯವೇನು ಎಂಬುದನ್ನು ವಿಮರ್ಶಕ ಈ ನೆಪದಲ್ಲಾದರೂ ತನಗೆ ತಿಳಿಸಿಕೊಡಲಿ ಎಂಬ ಅಪೇಕ್ಷೆಯೂ ಮುನ್ನುಡಿ ಬರೆಸುವುದರ ಹಿನ್ನೆಲೆಯಲ್ಲಿರಬಹುದು.

ಓದುಗರ ಸಂಖ್ಯೆ ಹೆಚ್ಚಾಗಿರುವಂತೆ ಪ್ರತಿಕ್ರಿಯೆಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಅವೆಲ್ಲ ಯಾವ ಮಾದರಿಯವು? ಫೇಸ್‌ಬುಕ್ ಅಥವಾ ಬ್ಲಾಗ್‌ಗಳಲ್ಲಿ ಪ್ರಕಟವಾಗುವ ’ವಾಹ್‌ವಾ!’ ’ನೈಸ್’, ’ವಂಡರ್‌ಫುಲ್’, ’ಎಷ್ಟೊಂದು ನವಿರು’-ಇಂಥವೇ.

ಕೃತಿಯೊಂದರ ಬಗ್ಗೆ ವಿಸ್ತಾರವಾಗಿ ಬರೆಯುವ ಪರಿಪಾಠವೇ ಈಗ ಮಾಯವಾಗಿದೆ. ಅದೇನಿದ್ದರೂ ಸೆಲ್ ಫೋನ್‌ನಲ್ಲಿ ಒಂದೆರಡು ಮಾತುಗಳು. ಅದ್ಭುತವಾದ ಹೊಸ ಕೃತಿಯೊಂದು ಪ್ರಕಟವಾದರೆ ಅದನ್ನು ಕುರಿತ ಗಂಭೀರ ಚರ್ಚೆ, ವಾಗ್ವಾದ, ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಯಾವುದೂ ಇಲ್ಲದೆ ಇಡೀ ಸಾಹಿತ್ಯಕ ವಾತಾವರಣವೇ ಬರಡಾದಂತೆ ಕಾಣಿಸುತ್ತದೆ.

ಸಾಂಸ್ಕೃತಿಕ ಬದುಕೇ ಮಂಕಾಗಿರುವ ಈ ಹೊತ್ತಿನಲ್ಲಿ ಸಾಹಿತ್ಯ ಮಾತ್ರ ಝಗಮಗಿಸಬೇಕೆಂದು ಬಯಸುವುದೇ ತಪ್ಪಾಗಬಹುದು. ಹೆಚ್ಚು ಹೆಚ್ಚು ಪತ್ರಿಕೆಗಳಿದ್ದು, ಅತ್ಯಾಧುನಿ ತಂತ್ರಜ್ಞಾನದ ನೆರವಿದ್ದು, ಓದುಗರ ಮತ್ತು ಬರಹಗಾರರ ಸಂಖ್ಯೆಯೂ ಸಮೃದ್ಧವಾಗಿರುವ ಈ ದಿನಗಳಲ್ಲಿ ಮುಖ್ಯವಾದದ್ದೇ ನಾಪತ್ತೆಯಾಗಿರುವುದು ಎಂಥ ದುರಂತ!

-ಜಿ.ಪಿ.ಬಸವರಾಜು
೯೪೮೦೦ ೫೭೫೮೦

Wednesday, May 20, 2015

ರೊಹಿಂಗ್ಯಾ ವಲಸೆ ಸಮಸ್ಯ ಮತ್ತು ಜಾಗತಿಕ ಜವಾಬ್ದಾರಿ
ಕರ್ಸ್ಟನ್ ಮೆಕ್‌ಕೊನಾಚಿ

ರೊಹಿಂಗ್ಯಾ ವಲಸೆ ಸಮಸೆ್ಯ ಮತ್ತು ಜಾಗತಿಕ ಜವಾಬ್ದಾರಿ

ಮ್ಯಾನ್ಮಾರ್‌ನಲ್ಲಿ ಆಂತರಿಕವಾಗಿ ರೊಹಿಂಗ್ಯಾ ಸಮುದಾಯವನ್ನು ಪರಿಗಣಿಸುವ ರೀತಿ ನೀತಿ ಬದಲಾಗಬೇಕು. ಅವರ ಸ್ಥಿತಿಗತಿ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಮ್ಯಾನ್ಮಾರ್‌ನ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ರೊಹಿಂಗ್ಯಾ ಜನರಿಗೆ ಪೂರ್ಣ ಪೌರತ್ವ ನೀಡುವುದು ಅಸಾಧ್ಯ. ಆದರೆ ಇತರ ಹಲವು ಸಾಧ್ಯತೆಗಳಿವೆ. ಏಷಿಯನ್ ಸದಸ್ಯರಾಷ್ಟ್ರಗಳ ಮಾನವಹಕ್ಕು ಸಂಸದರು ಹಲವಾರು ರಚನಾತ್ಮಕ ಸಲಹೆಗಳ ರೂಪುರೇಷೆ ಸಿದ್ಧಪಡಿಸಿದೆ.

 

ಸಾವಿರಾರು ಮಂದಿ ರೊಹಿಂಗ್ಯಾ (ಮ್ಯಾನ್ಮಾರ್ ಜನಾಂಗ) ಮತ್ತು ಬಾಂಗ್ಲಾದೇಶಿ ವಲಸೆಗಾರರು ಸಮುದ್ರದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಥಾಯ್ಲೆಂಟ್ ಸರಕಾರ ಮನುಷ್ಯರ ಕಳ್ಳಸಾಗಣೆ ಜಾಲ ದಮನಕ್ಕೆ ಮುಂದಾಗಿರುವ ಕ್ರಮದಿಂದ ಡಜನ್‌ಗಟ್ಟಲೆ ಪ್ರಯಾಣಿಕ ನಾವೆಗಳ ಮಾಲಕರು ಮತ್ತು ಸಿಬ್ಬಂದಿ ಮಾನವ ಸರಕನ್ನು ನಡುನೀರಿನಲ್ಲಿ ಕೈಬಿಟ್ಟಿವೆ.


ಸಮುದ್ರದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಸಾವಿರಾರು ಮಂದಿ ವಲಸೆಗಾರರು ಅನ್ನ- ನೀರಿಲ್ಲದೇ ಬಳಲುತ್ತಿದ್ದಾರೆ. ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ಅವರ ಸಾವು ನಿಶ್ಚಿತ. ಇದುವರೆಗೆ 2000 ಮಂದಿಯನ್ನು ರಕ್ಷಿಸಿ ದಡಕ್ಕೆ ಕರೆತರಲಾಗಿದೆ. ಆದರೆ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್ ಅಧಿಕಾರಿಗಳು ಒಗ್ಗಟ್ಟಾಗಿ, ಇನ್ನಷ್ಟು ಪರಿಹಾರ ಕಾರ್ಯಾಚರಣೆ ಕೈಗೊಳ್ಳದಿರಲು ನಿರ್ಧರಿಸಿದ್ದಾರೆ. ಮುಂದೆ ಯಾವುದೇ ನಾವೆಗಳು ಬಾರದಂತೆ ತಡೆಯುವುದಾಗಿ ಘೋಷಿಸಿದ್ದಾರೆ.


ರೊಹಿಂಗ್ಯಾ ನಾವೆಗಳ ರಕ್ಷಣೆಗೆ ಅಧಿಕಾರಿಗಳು ನಿರಾಕರಿಸಿರುವು ದು, ಹಿಂದೆ ಭಾರತ ಮತ್ತು ಚೀನಾ ನಡುವೆ ವಲಸೆಗಾರರ ಸಮಸ್ಯೆ ತಲೆದೋರಿದ್ದಾಗಿನ ಪರಿಸ್ಥಿತಿಯನ್ನು ಪ್ರತಿಫಲಿಸುತ್ತಿದೆ. ಆಗ ಇಂಡೋ ನೇಷ್ಯಾ, ಮಲೇಷ್ಯಾ, ಫಿಲಿಫೀನ್ಸ್, ಸಿಂಗಾಪುರ ಮತ್ತು ಥಾಯ್ಲೆಂಡ್ ಸಂಘಟಿತವಾಗಿ ವಲಸೆಗಾರರಿಗೆ ಆಶ್ರಯ ನೀಡಲು ನಿರಾಕರಿಸಿದ್ದವು. ಕಾಂಬೋಡಿಯಾ, ವಿಯೇಟ್ನಾಂ ಹಾಗೂ ಲಾವೋಸ್‌ಗಳಿಂದ ಆಗ ಅಸಂಖ್ಯಾತ ನಿರಾಶ್ರಿತರು ವಲಸೆ ಬಂದಿದ್ದರು. ಸಮುದ್ರ ಮತ್ತು ಭೂ ಮಾರ್ಗದ ಮೂಲಕ ಸಾವಿರಾರು ಮಂದಿಯನ್ನು ವಾಪಸು ಕಳುಹಿಸಿದ ಬಳಿಕ ಕೊನೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಅದರಲ್ಲೂ ಪ್ರಮುಖವಾಗಿ ಅಮೆರಿಕದಲ್ಲಿ ಅವರಿಗೆ ಕಾಯಂ ಪುನರ್ವಸತಿ ಒದ ಗಿಸಲು ನಿರ್ಧರಿಸಲಾಯಿತು. ಇದರಿಂದ ಸಮಸ್ಯೆ ಬಗೆಹರಿಯಿತು.
ಶೀತಲ ರಾಜಕೀಯ ಸಮರದಿಂದ ಉದ್ಭವಿಸಿದ್ದ ಆ ಪರಿಸ್ಥಿತಿಯೇ ಬೇರೆ. ಅದೀಗ ದೂರದ ನೆನಪು. ಇದೀಗ ಯೂರೋಪಿಯನ್ ಯೂನಿಯನ್ ತನ್ನ ಪ್ರದೇಶದ ವ್ಯಾಪ್ತಿಗೆ ಬರುವ ಸಮುದ್ರ ಕಿನಾರೆ ಗಳಿಗೆ ಬರುವ ನಾವೆಗಳನ್ನು ನಿರ್ದಾಕ್ಷಿಣ್ಯವಾಗಿ ವಾಪಸು ಕಳುಹಿಸು ತ್ತಿದ್ದು, ಸಂಘಟಿತ ಅಂತಾರಾಷ್ಟ್ರೀಯ ಸ್ಪಂದನೆ ಅಸಂಭವ ಎನಿಸುತ್ತಿದೆ.


ತಪ್ಪು ಉತ್ತರ


ದಕ್ಷಿಣ ಥಾಯ್ಲೆಂಡ್‌ನ ಶಂಕಿತ ಕಳ್ಳಸಾಗಣೆ ಕ್ಯಾಂಪ್‌ನಲ್ಲಿ ಸಾಮೂ ಹಿಕ ಸಮಾಧಿ ಪತ್ತೆಯಾದ ಬಳಿಕ ವಲಸೆಗಾರರ ಕಳ್ಳಸಾಗಣೆ ವಿರುದ್ಧ ಅಲ್ಲಿನ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮಾನವ ಕಳ್ಳಸಾ ಣೆ ನಿಜವಾಗಿಯೂ ದೊಡ್ಡ ಅಪಾಯಕ್ಕೆ ಆಹ್ವಾನ ನೀಡುವಂಥದ್ದು. ರೊಹಿಂಗ್ಯಾ ವಲಸೆಯೊಂದೇ ಮಾನವ ಕಳ್ಳಸಾಗಣೆಗೆ ಪ್ರಾಥಮಿಕ ಕಾರಣವಲ್ಲ. ಇದಕ್ಕೆ ನಾವೆಗಳನ್ನು ಹಿಂದೆ ಕಳುಹಿಸುವುದು ಉತ್ತರ ವೂ ಆಗಲಾರದು.


ಸಮುದ್ರದ ನಡುವೆ ಸಿಕ್ಕಿಹಾಕಿಕೊಂಡಿರುವ ಹಲವರು ಸ್ವಯಂ ಪ್ರೇರಿತರಾಗಿ ವಲಸೆಗೆ ಮುಂದಾದವರು. ಇಂಥ ನಿರಾಶ್ರಿತರು ವಾಪ ಸು ಮ್ಯಾನ್ಮಾರ್‌ಗೆ ತೆರಳಿದರೆ, ಖಂಡಿತವಾಗಿಯೂ ಹಿಂಸೆ ಎದುರಿಸ ಬೇಕಾಗುತ್ತದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಮಾಡಿದಂತೆ, ಆಗ್ನೇಯ ಏಷ್ಯಾದಲ್ಲೂ ನಾವೆ ವಲಸೆಯನ್ನು ತಡೆಯಬೇಕಾದರೆ, ಕಳ್ಳಸಾಗಣೆದಾರರು ಮತ್ತು ಮಾನವ ಕಳ್ಳಸಾಗಣೆದಾರರೆಂಬಂತೆ ಅವರನ್ನು ನೋಡದೇ, ಬಲಾತ್ಕಾರವಾಗಿ ವಲಸೆಗೆ ಒಳಗಾದವರು ಎಂಬ ಮಾನವೀಯ ದೃಷ್ಟಿಯಿಂದ ನೋಡಬೇಕಾದ ಅಗತ್ಯವಿದೆ. ರೊಹಿಂಗ್ಯಾ ನಿರಾಶ್ರಿತರು ಈಗ ಮ್ಯಾನ್ಮಾರ್ ಸರಕಾರದಿಂದ ದೇಶ ರಹಿತರಾಗಿದ್ದಾರೆ. ಜತೆಗೆ ಮಾನವಹಕ್ಕುಗಳ ಉಲ್ಲಂಘನೆಯೂ ವ್ಯಾ ಪಕ ಪ್ರಮಾಣದಲ್ಲಿ ಆಗಿದೆ. ಗಾಯದ ಮೇಲೆ ಬರೆ ಎಂಬಂತೆ ಈ ನಿರಾಶ್ರಿತರು ಈಗ ಆಗ್ನೇಯ ಏಷ್ಯಾ ದೇಶಗಳಿಂದ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ.


ಈ ಬಗ್ಗೆ ಕ್ರಮ ಕೈಗೊಳ್ಳುವ ಬದಲು ಮಾತನಾಡುವುದೇ ಸುಲಭ. ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಸಮುದಾಯ ಎದುರಿಸುತ್ತಿರುವ ಸಂಘರ್ಷ, ಸರಿಪಡಿಸಲಾಗದ ದೊಡ್ಡ ಕಂದಕವಾಗಿ ಮಾರ್ಪಟ್ಟಿದೆ. ಧನಾತ್ಮಕ ಸುಧಾರಣೆಗಳ ಮಾರ್ಗಗಳು ಕ್ಷೀಣವಾಗಿವೆ. ದಶಕಗಳ ಕಾಲದಿಂದ ರೊಹಿಂಗ್ಯಾ ಸಮುದಾಯಕ್ಕೆ ಪೌರತ್ವ ನಿರಾಕರಿಸಲಾಗಿದ್ದು, ಅವರ ಪ್ರಯಾಣ, ಚಲನೆ ಮತ್ತು ಮದುವೆಗಳ ಬಗ್ಗೆ ಕಟ್ಟುನಿ ಟ್ಟಿನ ನಿರ್ಬಂಧ ವಿಧಿಸಲಾಗಿದೆ. ಇವರಿಗೆ ಹಿಂದೆ ನೀಡಿದ್ದ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರಗಳನ್ನು ಹಠಾತ್ತನೇ ರದ್ದು ಮಾಡಲಾಗಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ರೊಹಿಂಗ್ಯಾ ಸಮುದಾಯ ತನ್ನನ್ನು ಗುರುತಿಸಿಕೊಳ್ಳಲು ಇದ್ದ ಏಕೈಕ ದಾಖಲೆ ಅದಾಗಿತ್ತು. ಜತೆಗೆ ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸಲು ಕೂಡಾ ಇದು ಅನಿವಾರ್ಯವಾಗಿತ್ತು.


ಮ್ಯಾನ್ಮಾರ್‌ನ ರೊಹಿಂಗ್ಯಾ ಭೀತಿ ಅವರ ಅಸ್ತಿತ್ವಕ್ಕೆ ಸಂಬಂಧಿಸಿ ದ್ದು. ಬಾಂಗ್ಲಾದೇಶಕ್ಕೆ ವಲಸೆ ಹೋದವರ ಸ್ಥಿತಿ ಇದಕ್ಕಿಂತ ಸ್ವಲ್ಪಮಟ್ಟಿಗೆ ಉತ್ತಮ. ಏಕೆಂದರೆ ಅವರಿಗೂ ಶಿಕ್ಷಣ ಅಥವಾ ಆರೋಗ್ಯಸೇವೆಗಳು ಕೈಗೆಟುಕುತ್ತಿಲ್ಲ. ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ಏಜೆನ್ಸಿಗಳನ್ನು ಸಂಪರ್ಕಿಸಲು ಕೂಡಾ ದೊಡ್ಡ ನಿರ್ಬಂಧವಿದೆ. ಇಂಥ ನಿರ್ಬಂಧಗಳು ನಿರಾಶ್ರಿತರನ್ನು ಬೇರೆ ದೇಶಗಳಿಗೆ ವಲಸೆ ಹೋಗು ವಂತೆ ಮಾಡುತ್ತಿವೆ. ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಭಾರತ , ನೇಪಾಳ ಹಾಗೂ ಸೌದಿ ಅರೇಬಿಯಾಗೂ ವಲಸೆ ಹೋಗುತ್ತಿದ್ದಾರೆ.


ಅಂಡಮಾನ್ ಸಮುದ್ರ ಮತ್ತು ಮಲಾಕ್ಕಾ ಸಮುದ್ರಮಾರ್ಗದಲ್ಲಿ ಸೃಷ್ಟಿಯಾಗಿರುವ ಈ ಮಾನವ ದುರಂತವನ್ನು ತಡೆಯಲು, ಪ್ರಾದೇ ಶಿಕ ಪರಿಹಾರವನ್ನು ಕಂಡುಹಿಡಿಯಲು ಆಗ್ನೇಯ ಏಷ್ಯಾ ದೇಶಗಳು ರಂಗಕ್ಕೆ ಇಳಿಯಲೇಬೇಕಾಗಿದೆ.
ಅಸೋಸಿಯೇಶನ್ ಆಪ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್ (ಏಷಿಯನ್), ಯಾವುದೇ ಸದಸ್ಯ ರಾಷ್ಟ್ರಗಳ ಆಂತರಿಕ ವ್ಯವಹಾ ರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ನಿರ್ಬಂಧ ಇದ್ದ ಹಿನ್ನೆಲೆ ಯಲ್ಲಿ ರೊಹಿಂಗ್ಯಾ ಜನತೆಯ ಅತಂತ್ರ ಸ್ಥಿತಿ ಮತ್ತು ತಾರತಮ್ಯದ ಬಗ್ಗೆ ಪ್ರಾದೇಶಿಕ ಮಟ್ಟದಲ್ಲಿ ಚರ್ಚೆ ಆರಂಭವಾಗಿರಲಿಲ್ಲ. ಆದರೆ ಪ್ರಸ್ತುತ ಉದ್ಭವಿಸಿದ ಸಮಸ್ಯೆಯು, ಇದು ಕೇವಲ ಮ್ಯಾನ್ಮಾರ್‌ನ ಆಂತರಿಕ ಸಮಸ್ಯೆಯಲ್ಲ; ಈ ಪ್ರದೇಶದ ಹಲವಾರು ದೇಶಗಳ ಮೇಲೆ ಪರಿಣಾ ಮ ಬೀರುವಂಥದ್ದು ಎನ್ನುವುದು ಖಚಿತವಾಗಿದೆ. ಏಷಿಯನ್ ಸದಸ್ಯ ರಾಷ್ಟ್ರಗಳಿಗೆ ಈ ಸಮಸ್ಯೆಯನ್ನು ಬಗೆಹರಿಸುವ ಹಕ್ಕು ಇದ್ದು, ಈ ನಿಟ್ಟಿನಲ್ಲಿ ಪರಸ್ಪರ ಸಹಕರಿಸಿಕೊಳ್ಳಬೇಕು.


ಈ ಬಗ್ಗೆ ಚರ್ಚಿಸಲು ಮೇ 29ರಂದು ಬ್ಯಾಂಕಾಂಗ್‌ನಲ್ಲಿ ಸಭೆ ಆಯೋಜಿಸಲಾಗಿದೆ. ಆದರೆ ಅದಕ್ಕಿಂತ ಮೊದಲೇ ಮಧ್ಯಪ್ರವೇಶ ಮಾಡದಿದ್ದರೆ, ಸಮುದ್ರದಲ್ಲಿರುವ ವಲಸೆಗಾರರು ಸಾಯುವುದು ನಿಶ್ಚಿತ. ನಾವೆಗಳನ್ನು ವಾಪಸು ಕಳುಹಿಸುವ ಕಾರ್ಯ ನಿಲ್ಲಬೇಕು ಮತ್ತು ಸಮುದ್ರದ ನಡುವೆ ಸಿಕ್ಕಿಹಾಕಿಕೊಂಡಿರುವವರ ರಕ್ಷಣೆಗೆ ತುರ್ತು ಪರಿಹಾರ ಕಾರ್ಯಗಳು ಆರಂಭವಾಗಬೇಕು.


ಮ್ಯಾನ್ಮಾರ್‌ನಲ್ಲಿ ಆಂತರಿಕವಾಗಿ ರೊಹಿಂಗ್ಯಾ ಸಮುದಾಯವನ್ನು ಪರಿಗಣಿಸುವ ರೀತಿ ನೀತಿ ಬದಲಾಗಬೇಕು. ಅವರ ಸ್ಥಿತಿಗತಿ ಸುಧಾ ರಣೆಗೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಮ್ಯಾನ್ಮಾರ್‌ನ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ರೊಹಿಂಗ್ಯಾ ಜನರಿಗೆ ಪೂರ್ಣ ಪೌರತ್ವ ನೀಡುವುದು ಅಸಾಧ್ಯ. ಆದರೆ ಇತರ ಹಲವು ಸಾಧ್ಯತೆಗಳಿವೆ. ಏಷಿಯನ್ ಸದಸ್ಯರಾಷ್ಟ್ರಗಳ ಮಾನವಹಕ್ಕು ಸಂಸದರು ಹಲವಾರು ರಚನಾತ್ಮಕ ಸಲಹೆಗಳ ರೂಪುರೇಷೆ ಸಿದ್ಧಪಡಿಸಿದೆ. ಏಷಿಯನ್ ಅಂತರ ಸರಕಾರ ಮಾನವಹಕ್ಕುಗಳ ಆಯೋಗ ಇಡೀ ಪರಿಸ್ಥಿತಿಯ ಅಧ್ಯಯನ ನಡೆಸಿ,ಮ್ಯಾನ್ಮಾರ್‌ನ ಸ್ಪಂದನೆಯ ಮೇಲೆ ನಿಗಾ ವಹಿಸುವ ಹೊಸ ವ್ಯವಸ್ಥೆ ಆರಂಭವಾಗಬೇಕು.


ಮ್ಯಾನ್ಮಾರ್ ಸರಕಾರ ಪ್ರಾಯೋಗಿಕವಾಗಿ, ದೇಶದಲ್ಲಿ ವಾಸಿಸುವ ರೊಹಿಂಗ್ಯಾ ಜನರ ಜೀವನಮಟ್ಟವನ್ನು ಸುಧಾರಿಸಲು ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಅವರಿಗೆ ಕುಡಿಯಲು ಯದ್ಧ ನೀರು, ಸಮರ್ಪಕ ಪೌಷ್ಟಿಕ ಆಹಾರ, ಆರೋಗ್ಯ ಸೇವೆ ಮತ್ತು ವಸತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು.ರೊಹಿಂಗ್ಯಾ ಸಮುದಾಯದ ಬಗ್ಗೆ ಇರುವ ತಾರತಮ್ಯ ಹಾಗೂ ನಿಬರ್ಂಧಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಆಡಳಿತಾತ್ಮಕ ಮತ್ತು ಕಾನೂನು ಸುಧಾರಣೆಗಳು ಆಗಬೇಕು. ಇತ್ತೀಚೆಗೆ ವಾಪಸು ಪಡೆಯ ಲಾದ ತಾತ್ಕಾಲಿಕ ನೋಂದಾವಣಿ ಕಾರ್ಡುಗಳನ್ನು ಮತ್ತೆ ನೀಡ ಬೇಕು. ತಾರತಮ್ಯದ ಅಪರಾಧಗಳು ಮತ್ತು ದ್ವೇಷ ಹೆಚ್ಚಿಸುವಭಾಷಣಗಳಿಗೆ ಕಡಿವಾಣ ಹಾಕಬೇಕು. ಇದುವರೆಗೆ ಬೆಳೆದುಬಂದಂತೆ ಮುಂದೆ ಬೆಳೆಯಲು ಅವಕಾಶ ನೀಡಬಾರದು.


ಜಾಗತಿಕ ಜವಾಬ್ದಾರಿ


ಏಷಿಯನ್ ಸದಸ್ಯ ರಾಷ್ಟ್ರಗಳು ಈ ಬಿಕ್ಕಟ್ಟು ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು. ಆದರೆ ಇದು ಕೇವಲ ಏಷಿಯನ್ ರಾಷ್ಟ್ರಗಳ ಜವಾಬ್ದಾರಿಯಲ್ಲ. ಮ್ಯಾನ್ಮಾರ್‌ನಲ್ಲಿ 2011ರಲ್ಲಿ ರಾಜಕೀ ಯ ಸುಧಾರಣೆಗಳ ಪ್ರಕ್ರಿಯೆ ಆರಂಭವಾದ ಬಳಿಕ ಹಲವಾರು ದೇಶಗಳು ಸಹಾಯ ಮತ್ತು ನೆರವು ನೀಡಲು ಮುಂದೆಬಂದಿವೆ. ಅಂಥ ದೇಶಗಳು ಇದೀಗ ತಮ್ಮ ಬಂಡವಾಳಕ್ಕೆ ಪ್ರತಿಫಲವನ್ನು ಅಲ್ಲಿನ ಸರಕಾರದಿಂದ ನಿರೀಕ್ಷಿಸಲೇಬೇಕಾಗಿದೆ. ಅದು ರೊಹಿಂಗ್ಯಾ ಮತ್ತು ಮ್ಯಾನ್ಮಾರ್‌ಗಳಲ್ಲಿ ವಾಸವಾಗಿರುವ ಇತರ ಬುಡಕಟ್ಟು ಜನಾಂಗಗಳ ಜನರಿಗೆ ಸಂಪೂರ್ಣ ಸುರಕ್ಷತೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಬದುಕಿಗೆ ಅವಕಾಶ ಮಾಡಿಕೊಡುವ ಮೂಲಕ. ಇದೇ ವೇಳೆ ಆಗ್ನೇಯ ಏಷ್ಯಾದಲ್ಲಿ ದೊಡ್ಡಪ್ರಮಾಣದ ಮಾನ ವೀಯ ಸಂಘರ್ಷ ಅನಾವರಣಗೊಂಡಿದೆ. ಸಾವಿರಾರು ಮಂದಿ ಸಮುದ್ರ ಮಧ್ಯದಲ್ಲಿ ಅತಂತ್ರಸ್ಥಿತಿಯಲ್ಲಿದ್ದಾರೆ. ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳದಿದ್ದರೆ ಅವರು ಸಾಯುವುದು ಖಚಿತ. ಆದರೆ ಮೆಡಿಟರೇನಿಯನ್‌ನಂತೆ, ಇಲ್ಲೂ ದುರಂತ ಅಂತ್ಯವನ್ನು ತಡೆ ಯುವ ನಿಟ್ಟಿನಲ್ಲಿ, ಈ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿರು ವವರು ಸಕ್ರಿಯರಾದರೆ ಮಾತ್ರ ಸ್ವಲ್ಪಮಟ್ಟಿಗೆ ನೈತಿಕ ನಾಯ ಕತ್ವ ನೀಡಿದಂತಾಗುತ್ತದೆ. ಜತೆಗೆ ಅಗತ್ಯ ಪರಿಹಾರ ಕ್ರಮ ಸಾಧ್ಯ ವಾಗುತ್ತದೆ.

ಗಾಂಧಿ ಎಂಬ ‘‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’’ಶ್ರೀಧರ ಪ್ರಭು

ಸೌಜನ್ಯ: ವಾರ್ತಾಭಾರತಿ

ಭಾಗ-1


ಗಾಂಧಿ ಎಂಬ ‘‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’’ದಲಿತರಿಗೆ ಗಾಂಧಿ ಬಗೆಗಿನ ವಿರೋಧಕ್ಕೆ, ಅಂಬೇಡ್ಕರ್‌ರ ವಿದ್ವತ್ ಪೂರ್ಣ ಸಿದ್ಧಾಂತ, ಬರಹ - ಭಾಷಣಗಳ ತಳಹದಿ ಇತ್ತು. ಕಮ್ಯುನಿಸ್ಟ್‌ರಿಗೆ ಗಾಂಧಿವಾದದ ಎದುರು ಮಾರ್ಕ್ಸ್ ವಾದವೆಂಬ ವಿಶ್ವ ವಿಶಾಲ ತತ್ವದ ಆಸರೆಯಿತ್ತು. ಆದರೆ ವೈದಿಕಶಾಹಿಗಳಿಗೆ ಯಾವ ಸೈದ್ಧಾಂತಿಕ ತಲೆ ಬುಡವೂ ಇರಲಿಲ್ಲ. ಅವರ ಗರ್ಭಗುಡಿಯೊಳಗೇ ನಿಂತು ಅವರ ಮಂತ್ರ ಗಳನ್ನೂ ಉಚ್ಚರಿಸಿಯೇ ಅವರ ಭೂತವನ್ನು ಉಚ್ಚಾಟನೆ ಮಾಡುತ್ತಿದ್ದ ಗಾಂಯನ್ನು ದೈಹಿಕ ಹಲ್ಲೆ / ಕೊಲೆ ಮಾಡದೆ ಬೇರೆ ಮಾರ್ಗವೇ ಇರಲಿಲ್ಲ.

ಯುಗ ಯುಗಾಂತರದಿಂದ ಶೋಷಣೆ ಸಾಧನ ಮಾಡಿಕೊಂಡ ವೈದಿಕ ಧರ್ಮವನ್ನು ಸಮರ್ಥವಾಗಿ ಬೀದಿಯಲ್ಲಿ ಬೆತ್ತಲೆ ಮಾಡಿದ ಅಂಬೇಡ್ಕರ್‌ರನ್ನು ಕಡೆಗಣಿಸಿದ ಸಾತ್ವಿಕ ಸಿಟ್ಟಿನ ಕಾರಣ ಯಾವ ದಲಿತನೂ ಗಾಂಧಿಯನ್ನು ಕೊಲ್ಲಲಿಲ್ಲ. ಪಾಕಿಸ್ತಾನದ ಉಗ್ರಪಂಥೀಯರಾಗಲಿ ಅಥವಾ ಸರ್ವಸ್ವ ಕಳೆದುಕೊಂಡ ವರಳಿಯ-ತೆಲಂಗಾಣದ ಕಮ್ಯುನಿಸ್ಟ್ ರೈತರಾಗಲಿ ಗಾಂಧಿಯನ್ನು ಕೊಲ್ಲಲಿಲ್ಲ. ಗಾಂಧಿಯನ್ನು ಕೊಂದದ್ದು ಒಬ್ಬ ‘ಹಿಂದೂ’ ಬ್ರಾಹ್ಮಣ! ಗಾಂಧಿಯ ರಾಮನ ಬಾಣ ಯಾರನ್ನು ಹೆಚ್ಚು ಚುಚ್ಚುತ್ತಿತ್ತು ಎಂದು ಇದರಿಂದಲೇ ವೇದ್ಯವಾಗುತ್ತದೆ.

ೆಬ್ರವರಿ 1948ರ ಸಂದರ್ಭ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿ ಹತ್ತು ಹದಿನೈದು ದಿನಗಳು ಸಂದಿರಬೇಕು. ಪ್ರಧಾನಿ ನೆಹರು ಮತ್ತು ಉಪ ಪ್ರಧಾನಿ ಪಟೇಲರು ಅೀರರಾಗಿದ್ದರು. ಭಾರತದಲ್ಲಂತೂ ಸೂತಕದ ಛಾಯೆ. ಇಡೀ ಪ್ರಪಂಚದಾದ್ಯಂತ ಮಹಾತ್ಮರ ಹತ್ಯೆಯನ್ನು ಖಂಡಿಸಿ ಸಾವಿರಾರು ಶ್ರದ್ಧಾಂಜಲಿ ಸಭೆ ಸಮಾರಂಭಗಳು ನಡೆದಿದ್ದವು.

ಕೇವಲ ಎರಡು ಮೂರು ದಿನಗಳ ಅಂತರದಲ್ಲಿ, ಅತ್ಯಂತ ವಿಭಿನ್ನ ಹಿನ್ನೆಲೆಯ ಇಬ್ಬರು ಭಾರತೀಯ ಗಣ್ಯರು, ಮರೆಯದ ಶ್ರದ್ಧಾಂಜಲಿ ಅರ್ಪಿಸಿದರು.

ಒಬ್ಬರು, ನಲವತ್ತರ ಅಂಚಿನ ಸರ್ವ ಸಂಗ ಪರಿತ್ಯಾಗಿ ಮತ್ತು ಅಂದು ಕರಾಚಿಯಲ್ಲಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ - ಸ್ವಾಮಿ ರಂಗನಾಥನಂದ.

ಇನ್ನೊಬ್ಬರು, ವರ್ಲಿ ರೈತ ದಂಗೆ, ತೆಲಂಗಾಣ ಸಶಸ ಹೋರಾಟ ಮತ್ತು ಮಹಾರಾಷ್ಟ್ರ ರಾಜ್ಯ ರಚನೆಯ ಸುಡುಬಿಸಿಯ ಹೋರಾಟಗಳ ನಡುಮಧ್ಯದಲ್ಲಿದ್ದ ಅರವತ್ತರ ಹರೆಯದ ಕಮ್ಯುನಿಸ್ಟ್ ನಾಯಕ - ಶ್ರೀಪಾದ ಅಮೃತ ಡಾಂಗೆ.
ಎಂತಹ ಅಗಾಧ ಭಿನ್ನತೆ ಮತ್ತು ಅಸಾಮ್ಯತೆ!

ವ್ಯಕ್ತಿಗಳ ಹಿನ್ನೆಲೆಗಳ ಅಗಾಧ ಭಿನ್ನತೆಯತೆಗಳ ಜೊತೆ ಜೊತೆಯಲ್ಲೇ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಗಾಂಧಿಯವರೂ ಕೂಡ ಅಗಾಧ ವೈರುಧ್ಯ ಮತ್ತು ವಿರೋಧಾಭಾಸಗಳ ಮೊತ್ತವಾಗಿದ್ದರು. ಹೀಗಾಗಿ ಗಾಂಧಿಯನ್ನು ಕುರಿತು ಒಂದೇ ಹಿನ್ನೆಲೆಯ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಮಾತನಾಡುವುದು ಸಾಧ್ಯವಿದೆಯೇ? ಸಾಧ್ಯವಾಯಿತು ನೋಡಿ!
ಇನ್ನೊಂದು ವಿಶೇಷತೆ ಗಮನಿಸಿ. ವಿವೇಕಾನಂದರಾಗಲಿ, ಅವರ ಗುರುಭಾಯಿಗಳಾಗಲಿ ಅಥವಾ ಆಶ್ರಮವಾಗಲಿ, ನೇರ ಅಥವಾ ಪರೋಕ್ಷವಾಗಿ ಯಾವುದೇ ರಾಜಕೀಯ ಹೋರಾಟ (ಸಾಮಾಜಿಕ ಹೋರಾಟ ಗಳಲ್ಲಿ ಕೂಡ) ಭಾಗಿಯಾಗಿರಲಿಲ್ಲ. ಏನಿದ್ದರೂ, ರಂಗನಾಥನಂದರಾಗಲಿ ಅವರ ಅಶ್ರಮವಾಗಲಿ ಗಾಂವಾದದ ಆಸುಪಾಸು ಎನ್ನುವಂತೆ ಕೂಡ ಇರಲಿಲ್ಲ.

ಇನ್ನು ಡಾಂಗೆಯವರಂತೂ ಗಾಂೀಜಿಯ ವರನ್ನು ಉದ್ದಕ್ಕೂ ವಿರೋಸಿದವರು. ಗಾಂ ಪ್ರೇರಿತ ಸಮಾಜವಾದ ಕಮ್ಯುನಿಸ್ಟರ ಮಟ್ಟಿಗೆ ಒಂದು ಕಾಗಕ್ಕ ಗುಬ್ಬಕ್ಕ ಕಥೆಗಿಂತ ಹೆಚ್ಚು ಮಹತಿಯದ್ದೇನಲ್ಲ.
ಹಾಗಿದ್ದರೆ, ಗಾಂಯವರ ಬದುಕು ಇವರನ್ನು ಒಟ್ಟು ಗೂಡಿಸಿತಲ್ಲದೆ, ಸಾವು ಕೂಡ ಹೇಗೆ ಸಾಮ್ಯತೆ ಬೆಸೆಯಿತು?

ಇವರಿಬ್ಬರ ಮಾತುಗಳಲ್ಲಿ ಅಗಾಧ ಸಾಮ್ಯತೆ ಇತ್ತು ಎಂದರೆ ಆಶ್ಚರ್ಯವಾಗುತ್ತದೆ. ಎಷ್ಟರ ಮಟ್ಟಿಗೆಂದರೆ, ಇವರಿಬ್ಬರ ಭಾಷಣದ ವಾಕ್ಯಗಳನ್ನು ಬಿಡಿಯಾಗಿ ಉದಾಹರಿಸಿದರೆ, ಯಾವುದನ್ನು ಯಾರು ಹೇಳಿದ್ದು ಎಂದು ಹೇಳುವುದು ಕಷ್ಟ. ಇದಕ್ಕಿಂತ ಜಾಸ್ತಿ, ಹಂತಕ ಗೋಡ್ಸೆಯ ಕುರಿತಾದ ಇವರಿಬ್ಬರ ನಿಲುಮೆಯಲ್ಲಿ ಕೂಡ ಒಂದಿನಿತೂ ಭಿನ್ನತೆಗಳಿರಲಿಲ್ಲ. ಗೋಡ್ಸೆಯನ್ನು ಕ್ಷಮಿಸಿ ಬಿಡಬೇಕು ಎಂದು ಕೆಲವರು ರಾಗ ತೆಗೆದಿ ದ್ದನ್ನು ತಮ್ಮದೇ ರೀತಿಯಲ್ಲಿ ಇಬ್ಬರೂ ವಿರೋಸುತ್ತಾರೆ. ಡಾಂಗೆ ವಿಧಾನ ಸಭೆಯಲ್ಲಿ ಮಾತನಾಡಿದ್ದಕ್ಕೂ, ರಂಗನಾಥನಂದರು ಭಕ್ತರಿಗೆಂದು ಮೀಸಲಾದ ಸಂಜೆಯ ಪ್ರವಚನದಲ್ಲಿ ಹೇಳಿದ್ದೂ ಏಕಸೂತ್ರದಂತಿದೆ!

ಹಾಗೆಂದು ಸ್ವಾಮಿ ರಂಗನಾಥನಂದರು ನಮ್ಮ ಇಂದಿನ ಕೆಲವು ಪ್ರಗತಿಪರ ಮಠಾೀಶರ ಸಾಲಿನವರೇನಲ್ಲ. ರಂಗನಾಥನಂದರು ನಾಲ್ಕು ಕಂತುಗಳಲ್ಲಿ ಬರೆದ ಬೃಹತ್ ಮತ್ತು ಪ್ರಸಿದ್ಧ ಪುಸ್ತಕ ‘‘ಉಠಿಛ್ಟ್ಞಿಚ್ಝ ್ಖಚ್ಝ್ಠಛಿ ್ಛಟ್ಟ  ಇಚ್ಞಜಜ್ಞಿಜ ಖಟ್ಚಜಿಛಿಠಿ’’ ವೇದ, ವೇದಾಂತ ಇತ್ಯಾದಿ ಕುರಿತೇ ಇರುವಂಥದ್ದು.

ಇದಕ್ಕಿಂತ ವಿಶೇಷ ಏನು ಗೊತ್ತೇ? ರಂಗನಾಥನಂದರ ಕರಾಚಿ ಆಶ್ರಮದಲ್ಲಿ ಅತ್ಯಂತ ಭೀಕರ ಕೋಮು ಭೀತಿಯ ವಾತಾವರಣ ಇತ್ತು. ಇಂಥ ಸಂದರ್ಭದಲ್ಲೂ ಗಾಂಯನ್ನು ಧೇನಿಸುವ ತಿಳಿ ಮನಸ್ಸು ನೋಡಿ!

ಇನ್ನೊಂದು ವಿಶೇಷವೆಂದರೆ ಕರಾಚಿ ರಾಮಕೃಷ್ಣ ಆಶ್ರಮದಲ್ಲಿ ಜರುಗುತ್ತಿದ್ದ ಭಜನೆ ಮತ್ತು ಉಪನ್ಯಾಸ ಕಾರ್ಯಕ್ರಮಗಳಿಗೆ ಸದಾ ಬರುತ್ತಿದ್ದವರಲ್ಲಿ ಒಬ್ಬ ವಿಶೇಷ ವ್ಯಕ್ತಿ ಕೂಡ ಇದ್ದರು. ಈ ವ್ಯಕ್ತಿ ಇಂದಿಗೂ ಸ್ವಾಮೀಜಿಯವರ ವ್ಯಕ್ತಿತ್ವ ಮತ್ತು ಅವರ ಆಧ್ಯಾತ್ಮಿಕತೆ ಕುರಿತ ಅವರ ಉಪನ್ಯಾಸಗಳನ್ನು ನೆನೆದುಕೊಳ್ಳುತ್ತಾರೆ. ಆದರೆ ಈ ವ್ಯಕ್ತಿ ಗಾಂ ಹತ್ಯೆ ಕುರಿತ ಸ್ವಾಮೀಜಿಯವರ ಈ ಉಪನ್ಯಾಸ ಕೇಳಿಸಿಕೊಂಡಿದ್ದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಯಾರು ಗೊತ್ತೇ ಆ ವ್ಯಕ್ತಿ? ಲಾಲ್‌ಕೃಷ್ಣ ಅಡ್ವಾಣಿ!

ಅಂದು ಮತ್ತೆ ಇಂದು, ಅಡ್ವಾಣಿಯವರಿ ಗಾಗಲಿ ಅಥವಾ ಸಂಘ ಪರಿವಾರಕ್ಕಾಗಲಿ ಗಾಂ ತತ್ವವನ್ನು ವಿರೋಸುವ ಮನಸ್ಸೇನೋ ತುಂಬಾ ಇದೆ. ಆದರೆ ಸ್ವಾಮಿ ರಂಗನಾಥನಂದರಂಥ ಸಂತರು ಗಾಂಯನ್ನು ಗೌರವಿಸುವಾಗ ಸಂಘ ಪರಿವಾರಕ್ಕೆ ಎಷ್ಟು ಇರುಸು ಮುರುಸು ಉಂಟಾಗುತ್ತದೆ ಗಮನಿಸಿ.

ವಿಷಯ ಹಾಗಿರಲಿ; ಗಾಂಧಿ ಎರಡಾಣೆ ಶುಲ್ಕ ಕೊಟ್ಟು ಕಾಂಗ್ರೆಸ್‌ನ ಸದಸ್ಯರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಅವರು ಗಾಂಧಿ ಟೊಪ್ಪಿ ಎಂದೂ ತೊಡಲಿಲ್ಲ. ಎಂದಿಗೂ ಯಾವುದೇ ಮಠ ಮಾನ್ಯಗಳ ಬಾಗಿಲಿಗೆ ಹೋಗಲಿಲ್ಲ; ದೇವಸ್ಥಾನ, ಆಶ್ರಮ ಇತ್ಯಾದಿಗಳ ಗೋಜಿಗೂ ಹೋಗಲಿಲ್ಲ. ಬೆಳಗಾವಿಯಲ್ಲಿ ಜರುಗಿದ ಅವೇಶನ ಬಿಟ್ಟು ಬೇರೆಲ್ಲೂ ಕಾಂಗ್ರೆಸ್ ಅಧ್ಯಕ್ಷರಾಗಿರಲಿಲ್ಲ.
ಗಾಂ, ಭಾರತದ ಅತ್ಯಂತ ಪ್ರಭಾವಿ ಶಕ್ತಿ ಕೇಂದ್ರವಾಗಿದ್ದರೂ, ಯಾವ ವ್ಯಕ್ತ ಅಥವಾ ಪ್ರಕಟ ಸ್ವರೂಪದ ಅಕಾರವನ್ನು ಸ್ವೀಕರಿಸಲಿಲ್ಲ. ಭಾರತದ ಸ್ವಾಯತ್ತತೆ ಮತ್ತಿತರ ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲು 1945 ರಲ್ಲಿ ಅಂದಿನ ವೈಸ್ ರಾಯ್ ಮೌಂಟ್ ಬ್ಯಾಟನ್ ಶಿಮ್ಲಾದಲ್ಲಿ ಕರೆದ ಸಭೆಯನ್ನು ಗಾಂಧಿ ನಿರ್ದೇಶಿಸಿದ ರೀತಿ ನೋಡಿ. ಸಭೆಯ ಮುನ್ನಾ ದಿನ ಶಿಮ್ಲಾಗೆ ಬಂದಿಳಿಯುವ ಗಾಂ, ಸಭೆಗೆ ಹಾಜರಾಗುವುದಿಲ್ಲವಾದರೂ, ಸಭೆಗೆ ಹಾಜರಾಗುವ ಕಾಂಗ್ರೆಸ್‌ನ ಎಲ್ಲ ನಾಯಕರಿಗೆ ನೀತಿ ನಿರ್ದೇಶನ ನೀಡುತ್ತಾರೆ.

ಗಾಂಧಿ ಹಾಗೆಂದು ರಿಮೋಟ್ ಕಂಟ್ರೋಲ್ ನಾಯಕರಲ್ಲ. ಸ್ವಾತಂತ್ರ್ಯ ಬಂದ ಹೊಸ್ತಿಲಿನಲ್ಲಿ ಕೋಮು ದಳ್ಳುರಿ ತಣಿಸಲು ಗಾಂಧಿ ನೌಖಾಲಿಗೆ ಹೊರಡುತ್ತಾರೆ. ಅಲ್ಲಿ ಕೆಲವು ದುಷ್ಟರು ಗಾಂೀಜಿ ಉಳಿದುಕೊಂಡ ಗ್ರಾಮಗಳಲ್ಲಿ ಸಾಗುವ ದಾರಿಯುದ್ದಕ್ಕೂ ಮಲ, ಮೂತ್ರ ಹರಡಿರುತ್ತಾರೆ. ಗಾಂೀಜಿಯ ಮೊಮ್ಮಗಳು ಮನು ಗಾಂ ಬೇಗನೆ ಮುಂದೆ ತೆರಳಿ ಅದನ್ನು ಸ್ವಚ್ಛಗೊಳಿಸುತ್ತಾರೆ. ಇದನ್ನು ಅರಿತ ಗಾಂಧಿ ಹೇಳುತ್ತಾರೆ ‘‘ಇಂದು ಶ್ರೇಷ್ಠವಾದದ್ದನ್ನು ನನ್ನಿಂದ ಕಸಿದುಕೊಂಡೆ’’!

ಗಾಂಧಿಯ ಸಂವಹನ ಪ್ರಕ್ರಿಯೆ ತುಂಬಾ ಸೂಕ್ಷ್ಮ ಆದರೆ ತೀಕ್ಷ್ಣ ಮಟ್ಟದ್ದು. ಗಾಂ ಮೇಲ್ಪದರಿನ ರಾಜಕಾರಣ ಮಾಡಲೇ ಇಲ್ಲ. ದೇಶದ ವಿಭಜನೆಯೂ ಸೇರಿದಂತೆ, ಸರಕಾರದ ಅಥವಾ ಕಾಂಗ್ರೆಸ್‌ನ ಅನೇಕ ಮಹತ್ತರ ತೀರ್ಮಾನಗಳಲ್ಲಿ ಗಾಂ ನೇರವಾಗಿ ಭಾಗಿಯಲ್ಲ. ನೇತಾಜಿ - ಪಟ್ಟಾಭಿ ಸ್ಪರ್ಧೆಯ ಸಂದರ್ಭ ಬಿಟ್ಟರೆ ಗಾಂ ಕಾಂಗ್ರೆಸ್‌ನ ಸಂಘಟನೆಯ ಒಳಗಿನ ಸೋಲು ಗೆಲುವನ್ನು ತಮ್ಮ ಸೋಲು - ಗೆಲುವು ಎಂದು ಭಾವಿಸಲಿಲ್ಲ - ಕನಿಷ್ಠ ಬಿಂಬಿಸಲಂತೂ ಇಲ್ಲ.

ಹಾಗಿದ್ದಾಗ್ಯೂ, ಗೋಡ್ಸೆ ಕೊಲ್ಲುವುದು ಗಾಂಯನ್ನು; ಕಾಂಗ್ರೆಸ್‌ನ ನಾಯಕರ ನ್ನಲ್ಲ. ಇನ್ನೊಂದು ಕಡೆಯಿಂದ ನೋಡಿದರೆ, ವರ್ಣಾಶ್ರಮವನ್ನು ಸಂಪೂರ್ಣವಾಗಿ ಒಪ್ಪುವ ಹಿಂದೂ ಆಗಿದ್ದ ಗಾಂಯನ್ನು ಕೊಂದದ್ದು ಇನ್ನೊಬ್ಬ ‘ಹಿಂದೂ’, ಅದರಲ್ಲೂ ಬ್ರಾಹ್ಮಣ!

ಯುಗ ಯುಗಾಂತರದಿಂದ ಶೋಷಣೆ ಸಾಧನ ಮಾಡಿಕೊಂಡ ವೈದಿಕ ಧರ್ಮವನ್ನು ಸಮರ್ಥವಾಗಿ ಬೀದಿಯಲ್ಲಿ ಬೆತ್ತಲೆ ಮಾಡಿದ ಅಂಬೇಡ್ಕರ್‌ರನ್ನು ಕಡೆಗಣಿಸಿದ ಸಾತ್ವಿಕ ಸಿಟ್ಟಿನ ಕಾರಣ ಯಾವ ದಲಿತನೂ ಗಾಂಯನ್ನು ಕೊಲ್ಲಲಿಲ್ಲ. ಪಾಕಿಸ್ತಾನದ ಉಗ್ರಪಂಥೀಯರಾಗಲಿ ಅಥವಾ ಸರ್ವಸ್ವ ಕಳೆದುಕೊಂಡ ವರಳಿಯ-ತೆಲಂಗಾಣದ ಕಮ್ಯುನಿಸ್ಟ್ ರೈತರಾಗಲಿ ಗಾಂಯನ್ನು ಕೊಲ್ಲಲಿಲ್ಲ. ಗಾಂಯನ್ನು ಕೊಂದದ್ದು ಒಬ್ಬ ‘ಹಿಂದೂ’ ಬ್ರಾಹ್ಮಣ! ಗಾಂಯ ರಾಮನ ಬಾಣ ಯಾರನ್ನು ಹೆಚ್ಚು ಚುಚ್ಚುತ್ತಿತ್ತು ಎಂದು ಇದರಿಂದಲೇ ವೇದ್ಯವಾಗುತ್ತದೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...