Sunday, May 10, 2015

ಫ್ಯಾಸಿಸಂಗೆ ಪರ್ಯಾಯ ಎಲ್ಲಿದೆ?ಸನತಕುಮಾರ ಬೆಳಗಲಿ


ಯುರೋಪಿನಲ್ಲಿ ಫ್ಯಾಸಿಸ್ಟ್ ಕರಾಳಛಾಯೆ ಕವಿದಾಗ ಬಲ್ಗೇರಿಯಾದ ಡಿಮಿಟ್ರೋವ್ ರೂಪಿಸಿದ ಫ್ಯಾಸಿಸ್ಟ್ ವಿರೋಧಿ ರಂಗ ಭಾರತದ ಎಡಪಕ್ಷಗಳಿಗೆ ಮಾದರಿಯಾಗಬೇಕು. ಇಂಥ ರಂಗದಲ್ಲಿ ದಲಿತ, ರೈತ ಸಂಘಟನೆಗಳು ಒಂದುಗೂಡಿದರೆ ಕಾಂಗ್ರೆಸ್ ಕೂಡ ದಾರಿಗೆ ಬರುತ್ತದೆ. ಕಾಂಗ್ರೆಸ್ ಎಷ್ಟೇ ದಾರಿ ತಪ್ಪಿದರೂ ಅದು ಗಾಂಧಿ-ನೆಹರೂ ಪರಂಪರೆಗೆ ಸೇರಿದ ಪಕ್ಷ. ಅದನ್ನು ಸಾವರ್ಕರ್-ಗೋಡ್ಸೆ-ಗೋಳ್ವಲ್‌ಕರ್ ಪರಂಪರೆಗೆ ಸೇರಿದ ಬಿಜೆಪಿ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ.  ಕಾರ್ಪೊರೇಟ್ ಕಂಪೆನಿಗಳ ಕೃಪಾಶೀರ್ವಾದ ದಿಂದ ಅಕಾರಕ್ಕೆ ಬಂದ ನರೇಂದ್ರ ಮೋದಿಯ ಬಣ್ಣ ಬಯಲಾಗತೊಡಗಿದೆ. ತಮ್ಮ ಆಡಳಿತದ ಈ ವೈಲ್ಯಗಳನ್ನು ಮುಚ್ಚಿಕೊಳ್ಳಲು ಕೋಮು ಉನ್ಮಾದವನ್ನು ಕೆರಳಿಸುವ ಹುನ್ನಾರವನ್ನು ಪ್ಯಾಸಿಸ್ಟ್ ಪರಿವಾರ ನಡೆಸಿದೆ. ಇಂಥ ಸಂಕ್ರಮಣ ಕಾಲಘಟ್ಟದಲ್ಲಿ ಪರ್ಯಾಯವೊಂದನ್ನು ಜನತೆ ನಿರೀಕ್ಷಿಸುತ್ತಿದ್ದಾರೆ. ಆದರೆ ಈ ನಿರೀಕ್ಷೆ ಹುಸಿಯಾಗತೊಡಗಿದೆ. ಭರವಸೆಯ ಆಶಾಕಿರಣವೆನಿಸಿದ್ದ ಆಮ್ ಆದ್ಮಿ ಪಕ್ಷದ ಬಗ್ಗೆ ಜನ ಭ್ರಮೆ ನಿರಸನಗೊಂಡಿದ್ದಾರೆ.

ಇನ್ನು ಜನತಾ ಪರಿವಾರದ ಪಕ್ಷಗಳು ಒಂದುಗೂಡುವ ಯತ್ನ ನಡೆಸಿದ್ದರೂ ಇನ್ನೂ ಸಲವಾಗಿಲ್ಲ. ಮುಲಾಯಂ, ಲಾಲೂ ಒಂದಾಗಿ ಉತ್ತರಪ್ರದೇಶ, ಬಿಹಾರದಲ್ಲಿ ಬಿಜೆಪಿಗೆ ಪಾಠ ಕಲಿಸಬಹುದು. ಆದರೆ ಉಳಿದ ರಾಜ್ಯಗಳಲ್ಲಿ ಈ ಪರಿವಾರ ನಗಣ್ಯವಾಗಿದೆ. ಕರ್ನಾಟಕದಲ್ಲಿ ‘‘ಜಾತ್ಯತೀತ’’ ಜನತಾದಳ ಇಂದಿಗೂ ಬಿಜೆಪಿ ಜೊತೆ ರಹಸ್ಯ ಸಂಬಂಧವಿರಿಸಿಕೊಂಡಿದೆ. ಇವರೆಲ್ಲ ಒಂದಾದರೂ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಹಾಗೂ ಕರುಣಾನಿಧಿ ಅವರ ಡಿಎಂಕೆಗಳ ನಿಲುವು ಸ್ಪಷ್ಟವಾಗಿಲ್ಲ. ಇನ್ನು ಎಡಪಕ್ಷಗಳು. ಸೀತಾರಾಮ್ ಯೆಚೂರಿ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿಯಾದ ನಂತರ ಕಮ್ಯುನಿಸ್ಟ್ ಪಕ್ಷಗಳ ಮುಂದಿನ ನಡೆಯನ್ನು ಜನತೆ ಕುತೂಹಲದಿಂದ ನೋಡುತ್ತಿದ್ದಾರೆ. ‘‘ಭೂಸ್ವಾಧೀನ ಮಸೂದೆ ಮತ್ತು ಜಾತ್ಯತೀತತೆ ಯಂಥ ಪ್ರಶ್ನೆಯಲ್ಲಿ ಸಂಸತ್ತಿನಲ್ಲಿ ಕಾಂಗ್ರೆಸ್ ಜೊತೆ ಸೇರಿ ರಂಗ ರಚಿಸಲು ತಮ್ಮ ಪಕ್ಷ ಸಿದ್ಧವಿದೆ’’ ಎಂದು ಯೆಚೂರಿ ಹೇಳಿದ್ದಾರೆ. ಆದರೆ ಎಡಪಕ್ಷಗಳ ಕೆಲ ನಾಯಕರು ಇಂದಿಗೂ ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂಬ ಹಳೆ ರಾಗ ಹಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಂಥದೇ ವಿಚಿತ್ರ ವಾದದಿಂದ ಕಮ್ಯುನಿಸ್ಟ್ ಪಕ್ಷಗಳು ಜನರಿಂದ ತಿರಸ್ಕರಿಸಲ್ಪಟ್ಟವು. ನರೇಂದ್ರ ಮೋದಿ ನೇತೃತ್ವದಲ್ಲಿ ್ಯಾಸಿಸ್ಟ್ ಶಕ್ತಿಗಳು ಅಕಾರಕ್ಕೆ ಬರುವುದು ಹಗಲಿನಷ್ಟು ನಿಚ್ಚಳವಾಗಿದ್ದರೂ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳ ಅಪಾಯದ ಬಗ್ಗೆ ಸ್ಪಷ್ಟವಾದ ನಿಲುವನ್ನು ತಾಳದ ಎಡಪಕ್ಷಗಳು ಕಾಂಗ್ರೆಸ್ ಮೇಲೆ ದಾಳಿಯನ್ನು ಕೇಂದ್ರೀಕರಿಸಿದವು. ಆದರೆ ಸೋಷಲಿಸ್ಟ್ ಯುನಿಟಿ ಸೆಂಟರ್ (ಎಸ್.ಯು.ಸಿ.ಐ) ಮೋದಿ ಅಪಾಯದ ಜನಜಾಗೃತಿ ಉಂಟು ಮಾಡುವ ಅಳಿಲು ಪ್ರಯತ್ನ ಮಾಡಿದವು. ಕರ್ನಾಟಕದಲ್ಲಿ ದಲಿತ ಸಂಘಟನೆಗಳು ಕೋಮುವಾದದ ವಿರುದ್ಧ ಸಮರ ಸಾರಿದ್ದವು.

 ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂಬ ಮಾತನ್ನು ಈಗಲೂ ಆಗಾಗ ಕೇಳುತ್ತೇವೆ. ಕಳೆದ ಆರೂವರೆ ದಶಕಗಳ ದೇಶದ ಚರಿತ್ರೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ಮಾತಿಗೆ ಪುರಾವೆ ಒದಗಿಸುವಂಥ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ತೊಂಬತ್ತರ ದಶಕದ ನಂತರ ದೇಶದಲ್ಲಿ ಜಾಗತೀಕರಣ, ಖಾಸಗೀಕರಣ, ಕೇಸರೀಕರಣಗಳ ಕರಾಳ ಶಕೆ ಆರಂಭವಾದ ನಂತರ ಈ ಎರಡೂ ಪಕ್ಷಗಳ ಆರ್ಥಿಕ ನೀತಿಯಲ್ಲಿ ಅಂಥ ವ್ಯತ್ಯಾಸ ಕಂಡು ಬರುತ್ತಿಲ್ಲ ಎಂಬುದು ಸ್ಪಷ್ಟ. ಇದಕ್ಕೆ ಪ್ರತಿಯಾಗಿ ‘‘ಎರಡೂ ಪಕ್ಷಗಳ ಆರ್ಥಿಕ ಧೋರಣೆ ಒಂದೇ ಆಗಿದ್ದರೂ, ಕಾಂಗ್ರೆಸ್, ಬಿಜೆಪಿ ಒಂದೇ ಅಲ್ಲ. ಬಿಜೆಪಿ ಎಂಬುದು ಆರೆಸ್ಸೆಸ್ ್ಯಾಸಿಸ್ಟ್ ಸಂಸ್ಥೆಯ ರಾಜಕೀಯ ವೇದಿಕೆ. ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಮಾರ್ಪಡಿಸುವುದು ಅದರ ಹಿಡನ್ ಅಜೆಂಡಾ. ಆದರೆ ಕಾಂಗ್ರೆಸ್ ಏನೇ ಆಗಿದ್ದರೂ ಅದೊಂದು ಜಾತ್ಯತೀತ ಪಕ್ಷ. ಗಾಂ, ನೆಹರೂ, ಆಝಾದ್ ಪರಂಪರೆ ಅದಕ್ಕಿದೆ’’ ಎಂಬ ವಾದವೂ ಸ್ಪಷ್ಟವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಬಿಜೆಪಿ ನಡುವೆ ವ್ಯತ್ಯಾಸವಿದೆ ಎಂಬುದು ನಿಜ. ಕಾಂಗ್ರೆಸ್‌ನಲ್ಲಿ ಭಿನ್ನ ವಿಚಾರಧಾರೆಯ ಜನರೆಲ್ಲ ಸೇರಿದ್ದಾರೆ. ಆದರೆ ಬಿಜೆಪಿಯಲ್ಲಿ ಅದಕ್ಕೆ ಅವಕಾಶವಿಲ್ಲ. ಆರೆಸ್ಸೆಸ್ ಶಾಖೆಯಲ್ಲಿ ತಯಾರಾಗಿ ಬಂದವರೇ ಅದರ ಸಾರಥಿಗಳು. ಕಾಂಗ್ರೆಸ್ ಎಂಬುದು ಬಿಜೆಪಿಯಂತೆ ಕೋಮುವಾದಿ ಪಕ್ಷವಲ್ಲವಾದರೂ, ಕೋಮುವಾದಿ ಶಕ್ತಿಗಳ ಜೊತೆ ರಹಸ್ಯ ಹೊಂದಾಣಿಕೆ ಮಾಡಿಕೊಂಡ ಆರೋಪ ಕಾಂಗ್ರೆಸ್ ಮೇಲಿದೆ. ಇದಕ್ಕೆ ವಾಣಿಜ್ಯ ರಾಜಧಾನಿ ಮುಂಬೈ ಸ್ಪಷ್ಟ ಉದಾಹರಣೆ. 

ಒಂದು ಕಾಲದಲ್ಲಿ ಕಾರ್ಮಿಕ ಚಳವಳಿಯ ಭದ್ರಕೋಟೆಯಾಗಿದ್ದ ಈ ಮಹಾನಗರದಲ್ಲಿ ಅರವತ್ತರ ದಶಕದಲ್ಲಿ ಕಮ್ಯುನಿಸ್ಟರು ಪ್ರಾಬಲ್ಯ ಸಾಸಿದ್ದರು. ಎಸ್.ಎಸ್.ಮಿರಜ್‌ಕರ್ ಮುಂಬೈ ಮೇಯರ್ ಆಗಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಎಸ್.ಎ.ಡಾಂಗೆ ಮತ್ತು ಸೋಷಲಿಸ್ಟ್ ನಾಯಕ ಜಾರ್ಜ್ ಪರ್ನಾಂಡಿಸ್ ಮುಂಬೈನಿಂದ ಲೋಕಸಭೆಗೆ ಚುನಾಯಿತರಾಗಿ ಬರುತ್ತಿದ್ದರು. ಇಂಥ ಮುಂಬೈನಲ್ಲಿ ಕಮ್ಯುನಿಸ್ಟರ ಬೆನ್ನು ಮೂಳೆ ಮುರಿಯಬೇಕೆಂದರೆ ಕಾರ್ಮಿಕರಲ್ಲಿ ಒಡಕು ಹುಟ್ಟಿಸಬೇಕೆಂಬ ತಂತ್ರವನ್ನು ಜವಳಿ ಗಿರಣಿ ಮಾಲಕರು ರೂಪಿಸಿದರು. ಈ ಕುತಂತ್ರದ ಭಾಗವಾಗಿ ಶಿವಸೇನೆ ಎಂಬ ಪ್ಯಾಸಿಸ್ಟ್ ಸಂಘಟನೆ ತಲೆ ಎತ್ತಿತು. ಬಾಳಠಾಕ್ರೆಯನ್ನು ಸೃಷ್ಟಿಸಿದ ಬಂಡವಾಳಿಗರು ಸಕಲ ನೆರವನ್ನು ಆತನಿಗೆ ನೀಡಿದರು. ಆಗ ಮುಂಬೈ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್.ಕೆ.ಪಾಟೀಲ್ ಅವರು ಮಿಲ್ ಮಾಲಕರಿಗೆ ಕುಮ್ಮಕ್ಕು ನೀಡಿದ್ದರು. ಶಿವಸೇನೆ ಪ್ರಬಲವಾಗುತ್ತಿದ್ದಂತೆ ಕಮ್ಯುನಿಸ್ಟರ ಕೋಟಿ ಕುಸಿಯಿತು. 1970ರಲ್ಲಿ ಮುಂಬೈನ ಪರೇಳನ ಕಮ್ಯುನಿಸ್ಟ್ ಶಾಸಕ ಕೃಷ್ಣದೇಸಾಯಿ ಅವರನ್ನು ಶಿವಸೇನೆ ಗೂಂಡಾಗಳು ಹಾಡಹಗಲೆ ಹತ್ಯೆ ಮಾಡಿದರು. ಇದಕ್ಕೆಲ್ಲ ಎಸ್.ಕೆ.ಪಾಟೀಲರ ಪ್ರಚೋದನೆ ಇತ್ತು. ಹೀಗೆ ಕಾಂಗ್ರೆಸ್‌ನ ಅವಕಾಶವಾದಿ ನೀತಿ ಅನೇಕ ಬಾರಿ ಕೋಮುವಾದಿ ಶಕ್ತಿಗಳಿಗೆ ನೆರವಾಗಿದೆ. ಕಾಂಗ್ರೆಸ್‌ನ ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗಲೇ ಅಯೋಧ್ಯೆಯ ಬಾಬರಿ ಮಸೀದಿಯನ್ನು ಸಂಘಪರಿವಾರದ ್ಯಾಸಿಸ್ಟರು ನೆಲಸಮಗೊಳಿಸಿದರು. ಇದಕ್ಕೆ ನರಸಿಂಹರಾಯರ ವೌನ ಸಮ್ಮತಿಯಿತ್ತು ಎಂಬುದು ಬರೀ ಆರೋಪವಲ್ಲ. ಗಿರೀಶ್ ಕಾರ್ನಾಡ್ ತಮ್ಮ ‘ಆಡಾಡತ ಆಯಷ್ಯ’ ಆತ್ಮಕತೆಯಲ್ಲಿ ಇದನ್ನು ದಾಖಲಿಸಿದ್ದಾರೆ. ಮಸೀದಿ ಉರುಳಿದ ನಂತರ ಅಲ್ಪಸಂಖ್ಯಾತರಿಂದ ದೂರವಾದ ಕಾಂಗ್ರೆಸ್ ಚೇತರಿಸಿಕೊಳ್ಳಲೇ ಇಲ್ಲ. ಆದರೆ ಕಾಂಗ್ರೆಸ್ ಸಿದ್ದರಾಮಯ್ಯನವರಂಥ ನಾಯಕರ ನೇತೃತ್ವ ಇರಬೇಕು. ಇಂಥವರ ನಾಯಕತ್ವವಿದ್ದರೆ ಕಾಂಗ್ರೆಸ್ ದಾರಿತಪ್ಪುವುದಿಲ್ಲ. ಎಲ್ಲ ಸಂದರ್ಭಗಳಲ್ಲೂ ಇಂಥ ನಾಯಕತ್ವ ಇರುವುದಿಲ್ಲ. ಹಣ ಮಾಡಲೆಂದೇ ಬಂದವರು ಕಾಂಗ್ರೆಸ್‌ನಲ್ಲಿ ತುಂಬಿಕೊಂಡಿರುವುದರಿಂದ ಅದು ತನ್ನ ಮೂಲ ಸಿದ್ಧಾಂತದಿಂದ ದೂರವಾಗುತ್ತಿದೆ. ಇದರ ದುರುಪಯೋಗಪಡೆದುಕೊಂಡು ಬಿಜೆಪಿ ಬೆಳೆಯುತ್ತಿದೆ. 

ಇತ್ತೀಚೆಗೆ ಐ.ಎ.ಎಸ್. ಅಕಾರಿ ಡಿ.ಕೆ.ರವಿ ನಿಗೂಢ ಸಾವಿನ ನಂತರ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಕುಮಾರಸ್ವಾಮಿ ತಾವು ಮಹಾಸಂಪನ್ನರಂತೆ ಸದನದಲ್ಲಿ ಹಾರಾಡಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಂಗಿಯಾಗಿ ಅವರನ್ನು ಎದುರಿಸಬೇಕಾಯಿತು. ಉಳಿದ ಕಾಂಗ್ರೆಸ್ ಮಂತ್ರಿ, ಶಾಸಕರು ಬಾಯಿ ಮುಚ್ಚಿಕೊಂಡು ಕುಳಿತಿದ್ದರು. ಬಿಜೆಪಿ ನಾಯಕರ ಬಾಯಿ ಮುಚ್ಚಿಸಲು ಸಾಕಷ್ಟು ಅಸ ಗಳಿದ್ದವು. ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನ ಪ್ರಕರಣ, ಉಡುಪಿ ಬಿಜೆಪಿ ಶಾಸಕರಾಗಿದ್ದ ರಘುಪತಿ ಭಟ್ಟರ ಪತ್ನಿಯ ದುರಂತ ನಿಗೂಢ ಸಾವಿನ ಪ್ರಕರಣ ಪ್ರಸ್ತಾಪಿಸಿ ಬಾಯಿಮುಚ್ಚಿಸಬಹು ದಿತ್ತು. ಈ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಕೊಡಲು ಒತ್ತಾಯಿಸಬಹುದಿತ್ತು. ಆದರೆ ದಿವ್ಯ ವೌನ ತಾಳಿದರು. ಮೈತ್ರಾದೇವಿ ನಿಗೂಢ ಸಾವಿನ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿ ದ್ದರು. ಆಗ ಯಾರನ್ನು ಯಾರು ರಕ್ಷಿಸಿದರೆಂದು ಎಲ್ಲರಿಗೂ ಗೊತ್ತಿದೆ. ರಘುಪತಿ ಭಟ್ಟರ ಪತ್ನಿ ದಿಲ್ಲಿಗೆ ಹೋಗಿ ನಿಗೂಢ ಸಾವಿಗೀಡಾದಾಗ ಅಲ್ಲಿ ಕಾಂಗ್ರೆಸ್ ಸರಕಾರವಿತ್ತು. ಆಗ ಅವಿಭಜಿತ ದ.ಕ. ಮೂಲದ ಹಿರಿಯ ಕಾಂಗ್ರೆಸ್ ನಾಯಕರೇ ಭಟ್ಟರನ್ನು ರಕ್ಷಣೆ ಮಾಡಿದರೆಂಬ ವದಂತಿ ದಟ್ಟವಾಗಿ ಹರಡಿತ್ತು.

ಹೀಗೆ ಕಾಂಗ್ರೆಸ್‌ನ ನಾಯಕರ ಅವಕಾಶವಾದಿ ರಾಜಕಾರಣದಿಂದ ಬಿಜೆಪಿಯಂಥ ಪ್ಯಾಸಿಸ್ಟ್ ಪಕ್ಷ ಈ ದೇಶದಲ್ಲಿ ಪ್ರಾಬಲ್ಯ ಗಳಿಸಿದೆ. ಈಗಲು ಕಾಂಗ್ರೆಸ್‌ಗೆ ಬುದ್ಧಿ ಬಂದಿಲ್ಲ. ಕೋಮುವಾದದ ವಿರುದ್ಧ ವ್ಯಾಪಕ ಜನಾಂದೋಲನ ನಡೆಸಲು ಅದು ಮುಂದಾಗುತ್ತಿಲ್ಲ. ಎಲ್ಲದಕ್ಕೂ ಸೋನಿಯಾ, ರಾಹುಲ್ ಗಾಂಯನ್ನು ಅವಲಂಬಿಸಿಕೊಂಡಿದೆ. ಆದರೂ ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಲ್ಲ. ಎರಡೂ ಪಕ್ಷಗಳ ಆರ್ಥಿಕ ನೀತಿ ಹೆಚ್ಚು ಕಡಿಮೆ ಒಂದೇ ಆಗಿದ್ದರೂ ಕಾಂಗ್ರೆಸ್ ್ಯಾಸಿಸ್ಟ್ ಪಕ್ಷವಲ್ಲ. ಅದನ್ನು ರಿಪೇರಿ ಮಾಡಲು ಸಾಧ್ಯವಿದೆ. ಅದಕ್ಕೂ ಮುನ್ನ ಎಡಶಕ್ತಿಗಳು ಈ ದೇಶದಲ್ಲಿ ಒಗ್ಗೂಡಿ ನಿಲ್ಲಬೇಕಾಗಿದೆ. ಎಡಪಕ್ಷಗಳ ಪೊರೆ ಕಳಚಿ ಕಾಲದ ಕರೆಗೆ ಸ್ಪಂದಿಸಬೇಕಾಗಿದೆ. ಮಾರ್ಕ್ಸ್‌ವಾದ ಸೇರಿದಂತೆ ಯಾವುದೇ ಸಿದ್ಧಾಂತಗಳು ಈಗ ಹೊಸ ಹುಟ್ಟು ಪಡೆಯಬೇಕಾಗಿದೆ. ‘ಕಮ್ಯುನಿಸಂ ಒಂದು ವಿಜ್ಞಾನ’ ಎಂದು ಸ್ವತಃ ಕಾರ್ಲ್‌ಮಾರ್ಕ್ಸ್ ಹೇಳಿದ್ದರು. ವಿಜ್ಞಾನ ನಿಂತ ನೀರಲ್ಲ. ಅದು ಹರಿಯುತ್ತಲೇ ಇರಬೆಕು. ವಿಮರ್ಶೆಗೊಳಪಡುತ್ತಲೇ ಇರಬೇಕು. ಅದೇ ರೀತಿ ಗಾಂ, ಅಂಬೇಡ್ಕರ್, ಲೋಹಿಯಾ ಸಿದ್ಧಾಂತಗಳು ಪೊರೆಕಳಚಿ ಒಂದೇ ವೇದಿಕೆಗೆ ಬರುವುದು ಇಂದಿನ ಅಗತ್ಯವಾಗಿದೆ. ಈ ಸತ್ಯ ಕಮ್ಯುನಿಸ್ಟ್ ಪಕ್ಷಗಳಿಗೂ ನಿಧಾನವಾಗಿ ಅರ್ಥವಾಗ ತೊಡಗಿದೆ. ತಮ್ಮಿಂದಲೇ, ತಮ್ಮ ಕಾರ್ಯಕ್ರಮದಿಂದಲೇ ಕ್ರಾಂತಿಯಾಗುತ್ತದೆ ಎಂಬುದನ್ನು ಬಿಟ್ಟು ನಾವೆಲ್ಲ ಒಂದೇ ವೇದಿಕೆಗೆ ಬರಬೇಕು ಎಂದು ಎಡಪಕ್ಷಗಳು ಪ್ರತಿಪಾದಿಸುತ್ತಿವೆ. ಆದರೆ ಇಂಥ ವೇದಿಕೆಯಲ್ಲಿ ಎಡಪಕ್ಷಗಳಿಗೆ ಮಾತ್ರವಲ್ಲ ಕಾಂಗ್ರೆಸ್‌ಗೂ ಜಾಗವಿರಬೇಕು. ಆವಾಗ ಮಾತ್ರ ಸಮರ್ಥ ಪರ್ಯಾಯ ರೂಪಿಸಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ದಾರಿ ತಪ್ಪದಿರಬೇಕಾದರೆ ಎಡಪಕ್ಷಗಳು ಮೊದಲು ಬಲಿಷ್ಟವಾಗಬೇಕು. ಇದೇ ಮಾತನ್ನು ಯೆಚೂರಿ ಹೇಳಿದ್ದಾರೆ. ಎಡಪಕ್ಷಗಳು ಬಲಿಷ್ಟವಾಗಬೇಕಾದರೆ ‘‘ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು’’ ಎಂಬ ಗೊಂದಲಕಾರಿ ವಾದ ಕೈಬಿಡಬೇಕು.
ಪ್ಯಾಸಿಸ್ಟ್ಸಂಘಪರಿವಾರಕ್ಕೆ ಪರ್ಯಾಯವಾಗಿ ‘ಪ್ಯಾಸಿಸ್ಟ್ ವಿರೋ ರಂಗ’’ ರಚಿಸಬೇಕು, ಆಗ ಕಾಂಗ್ರೆಸ್ ದಾರಿ ತಪ್ಪದಂತೆ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಯುರೋಪಿನಲ್ಲಿ  ಕರಾಳಛಾಯೆ ಕವಿದಾಗ ಬಲ್ಗೇರಿಯಾದ ಡಿಮಿಟ್ರೋವ್ ರೂಪಿಸಿದ ಪ್ಯಾಸಿಸ್ಟ್ ವಿರೋಧಿ ರಂಗ ಭಾರತದ ಎಡಪಕ್ಷಗಳಿಗೆ ಮಾದರಿಯಾಗಬೇಕು. ಇಂಥ ರಂಗದಲ್ಲಿ ದಲಿತ, ರೈತ ಸಂಘಟನೆಗಳು ಒಂದುಗೂಡಿದರೆ ಕಾಂಗ್ರೆಸ್ ಕೂಡ ದಾರಿಗೆ ಬರುತ್ತದೆ. ಕಾಂಗ್ರೆಸ್ ಎಷ್ಟೇ ದಾರಿ ತಪ್ಪಿದರೂ ಅದು ಗಾಂ ನೆಹರೂ ಪರಂಪರೆಗೆ ಸೇರಿದ ಪಕ್ಷ. ಅದನ್ನು ಸಾವರ್ಕರ್-ಗೋಡ್ಸೆ-ಗೋಳ್ವಲ್‌ಕರ್ ಪರಂಪರೆಗೆ ಸೇರಿದ ಬಿಜೆಪಿ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ. ಸದ್ಯಕ್ಕೆ ಸಂಸತ್ತಿನಲ್ಲಿ ಕಾಂಗ್ರೆಸ್ ಜೊತೆ ರಂಗ ರಚನೆಯಾಗಲಿ. ಕ್ರಮೇಣ ಇದು ಸಂಸತ್ತಿನ ಹೊರಗೂ ರೂಪುಗೊಳ್ಳಲಿ. ಕಾಂಗ್ರೆಸ್ ಎಷ್ಟೇ ದಾರಿ ತಪ್ಪಿದ್ದರೂ ಜನರಿಂದ ತಿರಸ್ಕರಿಸಲ್ಪಟ್ಟಿದ್ದರೂ ಅದು ಒಂದು ಜಾತಿಯ, ಒಂದು ಜನಾಂಗದ, ಧರ್ಮಕ್ಕೆ ಸೇರಿದವರ ಪಕ್ಷವಲ್ಲ. ಎಲ್ಲ ಸಮುದಾಯಗಳನ್ನು ಪ್ರತಿನಿಸುವ ದಾರಿತಪ್ಪಿದ ಪಕ್ಷ ಎಂಬುದನ್ನು ಮರೆಯಬಾರದು.
  
ದಾರಿ ತಪ್ಪಿದ ಕಾಂಗ್ರೆಸ್‌ಗೆ ಮೂಗುದಾಣ ಹಾಕಿ ದಾರಿಗೆ ತರಬಹುದು. ಆದರೆ, ಇಡೀ ದೇಶವನ್ನೇ ದಾರಿತಪ್ಪಿಸಿ, ಹಿಂದುತ್ವದ ಹೆಸರಿನಲ್ಲಿ ಕಂದಾಚಾರದ ಕೂಪಕ್ಕೆ ತಳ್ಳುವ ಮನುವಾದಿ ಪ್ಯಾಸಿಸ್ಟ್ ಶಕ್ತಿಗಳಿಗಿಂತ ಕಾಂಗ್ರೆಸ್ ಅಪಾಯಕಾರಿ ಅಲ್ಲ ಎಂಬುದನ್ನು ಮರೆಯಬಾರದು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...