Sunday, May 03, 2015

ಎದೆಯೂ ಕುಸಿದ ನೇಪಾಳದ ಹಾಗೆ







ಎಷ್ಟು ಕಾಲದ ವಜ್ಜೆ ಹೆಚ್ಚೆನಿಸಿ
ಕಂಪಿಸಿದಳು ಭೂಮಿ?
ಅವಳ ಕ್ಷಣದ ಕಂಪನ
ಹುಟ್ಟಿಸಬಹುದೇ ಹೀಗೆ
ಶತಮಾನ ಕಳೆದರೂ
ಮುಗಿಯದ ಆಕ್ರಂದನ?
ಬದುಕು ಮಣ್ಣಾದ
ಛಿದ್ರ ಚಿತ್ರದೆದುರು
ಮನುಷ್ಯರುಟ್ಟ
ಕಾಲ ಬಟ್ಟೆಯಲಿ
ಸಾವು ತಂದಿಡುವ
ಗಾಯದ ಕಲೆಗಳಿಲ್ಲದ ಜಾಗ
ಉಳಿದಿದ್ದಾದರೂ ಎಲ್ಲಿ?


ಮನೆಮಾರು ಕುಸಿದು
ನೆಲಕಚ್ಚಿದ ಅವಶೇಷಗಳ ನಡು
ಉರುಳಿಬಿದ್ದ ತಥಾಗತನ
ಮೂರ್ತಿಯ ಮೊಗದಲಿ
ಅದೇ ಸ್ನಿಗ್ದ ನಗು!

ಎಂದೂ ಅಳುವಿನೆದುರು
ನಗುವಾಗದ
ನನ್ನೊಳಗಿನ ಬುದ್ದ
ಸಣ್ಣಗೆ ಕಂಪಿಸಿದ
ಕಳವಳ ಹೊತ್ತು
ಪೌರ್ಣಿಮೆ ನೋಡಲು ಕುಳಿತರೆ
ಮೈಮನಕೆಲ್ಲ
ಅಮವಾಸ್ಯೆಯನುಭವ
ಒಳಗೆ ಏನೆಲ್ಲ
ಕುಸಿವ ಭಾವ
ಹುಸಿವ ಲೋಕ
ಇದ್ದವರ ಭಿಕ್ಷೆ
ಬಿದ್ದಷ್ಟು
ಬಿಕ್ಕುವಿನ ಬೊಗಸೆ
ತಳ ಒಡೆದ ಮಡಿಕೆ

ಉರುಳಿ ಬಿದ್ದ
ಜೀವನಿರ್ಜೀವ ರಾಶಿಗಳ ನಡುವೆ
ಹಜ್ಜೆಯೂರಿದ್ದಾರೆ ಜನ ನನ್ನ ಹಾಗೆ
ನೆಲವೆ ಮುಳ್ಳಾಗಿ ಚುಚ್ಚುವಾಗ
ಪಾದ ಎಷ್ಟು ದೂರ ಸಾಗುವುದು?
ಎದೆಯ ಬ್ಯಾನಿಯ ಹೊತ್ತು
ಎಷ್ಟು ದೂರ ಹಕ್ಕಿ ಹಾರುವುದು?

ಕಟ್ಟಬಹುದು
ನೆಲ ಕಂಪಿಸಿದ ನಾಡ
ಎದ್ದು ನಿಲಿಸಬಹುದೆ
ಎದೆ ಕಂಪಿಸಿದ ಮನುಷ್ಯನ?
ಹಸಿದ ಬೆರಳು
ಎಲೆ ಮುಂದಿರುವಾಗ
ಎಬ್ಬಿಸಿ ಕಳುಹವರಂಗಳದ
ಹಣದ ರಾಶಿ ಮೇಲಿನ
ನಗುವ ಬುದ್ದನ ಚಿತ್ರ
ಯಾವ ಪ್ರಶ್ನೆ ಕೇಳಬಹುದು?

ನಾಡಿನುದ್ದ
ಮೂರ್ತಿಯಾಗಿಸುವ
ಪ್ರೀತಿ ಉಕ್ಕುಕ್ಕಿ ಹರಿದರೂ
ಹೊಳೆಯ ಹಾಗೆ
ಖಾಲಿ ಬೊಗಸೆಯ ಬುದ್ದನೆದೆ
ಅನಾಥವಾಗಿದೆ ಇನ್ನೂ ಕಾರುಣ್ಯ ಇಲ್ಲದ ಮೇಲೆ

ಬೆಳದಿಂಗಳು
ಮಿದುವಾಗದ ಆಗಸದಲಿ
ಮೂಡುವುದಿಲ್ಲ
ಪೌರ್ಣಿಮೆ
ಸೂತಕದಂಗಳದಲಿ
ನಗುವುದಿಲ್ಲ

ಒಡಲ ಕತ್ತಲೆದುರು
ಬೆಳಕಾಗಲೊಲ್ಲದ ಕೈಯಲಿ
ಬುದ್ದ
ಮೂರ್ತಿಯಾದಾಗಲೊಮ್ಮೆ
ಭೂಮಿ ಕಂಪಿಸುತ್ತಾಳೆ
ಅವಳ
ದಾರಿಗತ್ತಲಿಗೆ ದೀಪವಾದವರಿಲ್ಲ
ಅವನ ಹಾಗೆ!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...