Saturday, May 09, 2015

ಅವ್ವ ಎಂದರೆ ದೇವರಲ್ಲ..


-ಡಾ.ಶಿವಾನಂದ ಕುಬಸದ



ಅವ್ವ ಎಂದರೆ ದೇವರಲ್ಲ
ಯಾಕೆಂದರೆ
ಅವ್ವ ಎಂದರೆ ಅವ್ವ ಮಾತ್ರ
ಇನ್ನೂರೆಪ್ಪತ್ತು ಮೇಲೊಂಭತ್ತು
ದಿನ ಉದರದಲಿ ಹೊತ್ತು ಪೋಷಿಸಿ
ಒದ್ದದ್ದಕ್ಕೆ ರೋಮಾಂಚನಗೊಂಡು
ಭಯಂಕರ ಪ್ರಸವ ವೇದನೆಯನ್ನು
ಸುಖವೆಂದೆಣಿಸಿ ಅಳುವಿಗೆ ಜೋಗುಳವ
ಜೋಡಿಸಿ ಹೆಣೆದು ಮೈಯ ಕಸುವನ್ನೆಲ್ಲ
ಬಸಿದು ಎದೆಯುಣಿಸಿ ತೃಪ್ತಳಾಗುತ್ತಾಳೆ

ಆಡಿ ಬಂದವನ ಅಂಗಾಲು ತೊಳೆದು
ಓಡಿ ಬಂದವನ ಬರಸೆಳೆದು ಮುದ್ದಿಸಿ
ಜಗಕೆಲ್ಲ ತನ್ನ ಕಂದನೆ ರಾಜ ಎಂದೆನುತ
ಕಪ್ಪಿರಲಿ ಬಿಳುಪಿರಲಿ ಕುಂಟ ಕುರುಡನಿರಲಿ
ಧಡ್ಡ ಮೂಢನೋ ಎಂತಾದರೂ ಇರಲಿ
ಸೆರಗೆಂಬ ಅದ್ಭುತ ಆಕಾಶವನೆ ಹೊದಿಸಿ
ಪ್ರೀತಿಯನು ಸುರಿದು ಸುಖಿಸುತ್ತಾಳೆ

ಅವನು ಬೆಳೆದರೆ ಇವಳು ಎತ್ತರವಾಗಿ
ಅವನು ಬಿದ್ದರೆ ಇವಳು ತತ್ತರವಾಗಿ
ಅವನುಂಡರೆ ಇವಳ ಹೊಟ್ಟೆ ತುಂಬಿ
ಎಲ್ಲಿದ್ದರೂ ಹೇಗಿದ್ದರೂ ನನ್ನ ಮಗ ಎಂದು
ತನ್ನ ಕಷ್ಟಗಳನೆಲ್ಲ ನುಂಗಿ ಅವನ ಕಾಪಾಡುತ್ತಾಳೆ
ಇವನೆಲ್ಲಾ ಮಾಡುವನೇ ಆ ದೇವ ತಾ ಬಂದು
ಅದಕ್ಕೆ
ಅವ್ವ ಎಂದರೆ ದೇವರಲ್ಲ
ಅವ್ವ ಎಂದರೆ ಅವ್ವ ಮಾತ್ರ....!!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...