Thursday, May 07, 2015

’ರಾಷ್ಟ್ರಕವಿ’ ಎಂಬ ಸ್ಥಾನಮಾನ ಬೇಡವೇ?


ಜಿ.ಪಿ.ಬಸವರಾಜು ಕೋ.ಚೆನ್ನಬಸಪ್ಪ ಅವರ ಅಧ್ಯಕ್ಷತೆಯ ಸಮಿತಿ ’ರಾಷ್ಟ್ರಕವಿ’ಯ ಸ್ಥಾನವೇ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟಿದೆ. ಡಾ.ಜಿ.ಎಸ್.ಶಿವರುದ್ರಪ್ಪನವರ ನಂತರ ಈ ಗೌರವವನ್ನು ಯಾರಿಗೆ ಕೊಡುವುದು ಎಂಬ ಚಿಂತನೆಯಲ್ಲಿದ್ದ ಸರ್ಕಾರ ಅದಕ್ಕಾಗಿ ಕೋಚೆ ಸಮಿತಿಯನ್ನು ನೇಮಿಸಿತ್ತು. ಸಮಿತಿ ಈ ವಿಷಯನ್ನು ಕೂಲಂಕಷವಾಗಿ ಚರ್ಚಿಸಿ, ’ಈ ಸ್ಥಾನವೇ ಅಪ್ರಸ್ತುತ’ ಎಂಬ ನಿಲುವನ್ನು ತಳೆದು ಅದೇ ಅಭಿಪ್ರಾಯವನ್ನು ಸರ್ಕಾರಕ್ಕೆ ಕಳುಹಿಸಿದೆ. ಈ ಮಧ್ಯೆ ಸಾರ್ವಜನಿಕ ಅಭಿಪ್ರಾಯಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಚಿಂತನೆ :

ಯಾವ ಪ್ರಜಾಪ್ರಭುತ್ವ ವ್ಯವಸ್ಥೆಯೂ ಪರಿಪೂರ್ಣ ಅವತಾರವಲ್ಲ. ವ್ಯವಸ್ಥೆಯನ್ನು ಸಮಾಜ ರೂಪಿಸುತ್ತ ಹೋಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳುತ್ತ, ಹೊಸ ಹೊಸ ಕನಸುಗಳ ಸಾಕಾರಕ್ಕೆ ನೆರವಾಗಬಲ್ಲಂಥ ಯೋಜನೆಗಳನ್ನು ರೂಪಿಸುತ್ತ ಹೋಗುವ ಪ್ರಯೋಗವೇ ಪ್ರಜಾಪ್ರಭುತ್ವ. ಸಮಾಜಕ್ಕೆ ಯಾವುದು ಹಿತ ಎಂಬುದನ್ನು ಚಿಂತಿಸುವ ಹೊಣೆ ಎಲ್ಲರ ಮೇಲೂ ಇರುತ್ತದೆ. ಈ ಹೊಣೆಗಾರಿಕೆಯನ್ನು ಸರ್ಕಾರವೂ ಸೇರಿದಂತೆ ಸಮಾಜ ಇಡಿಯಾಗಿ ನಿಭಾಯಿಸುವುದು ಸಾಧ್ಯವಾದಾಗ ಉತ್ತಮ ವ್ಯವಸ್ಥೆಯೊಂದು ರೂಪಗೊಳ್ಳುತ್ತದೆ. ಅಂಥ ವ್ಯವಸ್ಥೆ ಒಟ್ಟಾರೆಯಾಗಿ ಸಮಾಜದ ಮುನ್ನಡೆಗೆ ಸಹಕಾರಿಯಾಗಿರುತ್ತದೆ.
ಕೇವಲ ರಾಜವ್ಯವಸ್ಥೆಯಲ್ಲಿ ಮಾತ್ರವಲ್ಲ, ಪ್ರಜಾವ್ಯವಸ್ಥೆಯಲ್ಲಿಯೂ ಕವಿಗಳನ್ನು, ಕಲಾವಿದರನ್ನು, ಚಿಂತಕರನ್ನು, ಸಮಾಜ ಕಟ್ಟುವವರನ್ನು ಗೌರವಿಸುವುದು ಒಳ್ಳೆಯ ಸಂಪ್ರದಾಯ. ಇದಕ್ಕಾಗಿಯೇ ಸರ್ಕಾರ ಪ್ರಶಸ್ತಿಗಳನ್ನು, ಗೌರವ ಪದವಿಗಳನ್ನು ನೀಡುವ ಪರಿಪಾಠವನ್ನು ರೂಢಿಸಿಕೊಂಡು ಬಂದಿದೆ. ಜನತೆ ಕೂಡಾ ಇಂಥ ಮನ್ನಣೆಯನ್ನು ಮಾನ್ಯಮಾಡುತ್ತ, ತನ್ನ ಒಪ್ಪಿಗೆಯನ್ನು ಪರೋಕ್ಷವಾಗಿಯಾದರೂ ಸೂಚಿಸುತ್ತಾ ಬಂದಿದೆ. ಸಮಾನತೆಯ ಪರಿಕಲ್ಪನೆ, ಸಾಮಾಜಿಕ ಪಿಡುಗುಗಳ ವಿರುದ್ಧದ ಹೋರಾಟ, ಸಾಮಾಜಿಕ ನ್ಯಾಯ ಇತ್ಯಾದಿ ಚಿಂತನೆಗಳನ್ನು ನಡೆಸುವವರು ಕವಿ, ಕಲಾವಿದ, ಚಿಂತಕರು ಎಂಬ ನಂಬಿಕೆಯೂ ನಮ್ಮಲ್ಲಿದೆ. ಈ ಕಾರಣದಿಂದಾಗಿಯೇ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿಯೂ ಮೇಲ್ಮನೆಗಳ ನಿರ್ಮಾಣವಾಗಿದೆ.

ಚುನಾವಣೆಯಲ್ಲಿ ಗೆದ್ದವರು ಮಾತ್ರವಲ್ಲ, ಗೆಲ್ಲಲಾಗದವರು, ಆದರೆ ಸಮಾಜವನ್ನು ಕಟ್ಟಲು ಅಗತ್ಯ ಚಿಂತನೆಯನ್ನು ನೀಡಬಲ್ಲವರು ಈ ಮೇಲ್ಮನೆಗೆ ನೇಮಕಗೊಳ್ಳಬೇಕು; ಅವರ ಒಟ್ಟಂದದ ಚಿಂತನೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಅಗತ್ಯ ಎಂಬ ಗ್ರಹಿಕೆಯಿಂದಲೇ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆದರೆ ಇವತ್ತು ಮೇಲ್ಮನೆಗೆ ನಾಮನಿರ್ದೇಶನ ಹೊಂದುತ್ತಿರುವವರನ್ನು ಮತ್ತು ಹೀಗೆ ಮಾಡುತ್ತಿರುವ ಹಿಂದಿನ ರಾಜಕೀಯ ಚದುರಂಗದಾಟವನ್ನು ನೋಡಿದಾಗ ಮೇಲ್ಮನೆಯೇ ಬೇಡ ಎನ್ನುವ ಕಟು ಅಭಿಪ್ರಾಯಗಳೂ ಆಗಾಗ ಕೇಳಿಬರುತ್ತಿವೆ. ಇದಕ್ಕೆ ಕಾರಣಗಳೂ ಇವೆ ಎಂಬುದನ್ನು ಕಡೆಗಣಿಸಲಾಗದು.
ನಮ್ಮಲ್ಲಿರುವ ಪ್ರಶಸ್ತಿಗಳನ್ನೇ ನೋಡಿ: ಅವೆಲ್ಲ ಕವಿ, ಕಲಾವಿದರು ಮತ್ತು ಚಿಂತಕರಲ್ಲಿ ನಮ್ಮ ಸಮಾಜ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತವೆ. ಎಲ್ಲ ಸಂದರ್ಭದಲ್ಲೂ ಈ ಪ್ರಶಸ್ತಿಗಳಿಗೆ ಅರ್ಹರೇ ಆಯ್ಕೆಯಾಗುತ್ತಾರೆ ಎಂದಲ್ಲ. ಅನರ್ಹರ ಆಯ್ಕೆಯನ್ನು ಟೀಕಿಸುತ್ತ, ಅರ್ಹರ ಆಯ್ಕೆಗೆ ಅಗತ್ಯವಾದ ದಾರಿಯನ್ನು ಸೂಚಿಸುವುದು ನಮ್ಮೆಲ್ಲರ ಹೊಣೆಯೇ. ’ರಾಷ್ಟ್ರಕವಿ’ ಎನ್ನುವ ಗೌರವವನ್ನೂ ನಾವು ಹೀಗೆಯೇ ನೋಡಬೇಕಾದ ಅಗತ್ಯವಿದೆ.

ಕವಿ ಎಂದ ಕೂಡಲೇ ಕಾವ್ಯ ಬರೆಯುವವರು ಮಾತ್ರ ಎಂದು ಅರ್ಥೈಸಬೇಕಾಗಿಲ್ಲ. ಕತೆ, ಕವಿತೆ, ನಾಟಕ, ವಿಮರ್ಶೆ, ಚಿಂತನೆ ಹೀಗೆ ಎಲ್ಲವೂ ಸೇರಿದ ಸಾಹಿತ್ಯ ಪ್ರಕಾರದಲ್ಲಿ ಅರ್ಥಪೂರ್ಣವಾಗಿ ತೊಡಗಿಕೊಂಡಿರುವ ವ್ಯಕ್ತಿಯನ್ನು ’ಕವಿ’ ಎಂದು ಭಾವಿಸಬೇಕಾಗುತ್ತದೆ. ಹಾಗೆಯೇ ’ರಾಷ್ಟ್ರಕವಿ’ ಎಂದ ಕೂಡಲೇ ರಾಷ್ಟ್ರದ ಕವಿ, ರಾಜ್ಯದ ಕವಿಯಲ್ಲ ಎಂದು ವ್ಯಾಖ್ಯಾನಿಸುವುದೂ ತಪ್ಪು. ಭಾರತೀಯ ಚಿಂತನೆ ಎಂದರೇನು? ಅದು ಕನ್ನಡವನ್ನು ಅಥವಾ ಪ್ರಾದೇಶಿಕ ಭಾಷೆಯನ್ನು ಬಿಟ್ಟ ಚಿಂತನೆಯಲ್ಲ. ಭಾರತೀಯ ಸಂಸ್ಕೃತಿಯೂ ಹೀಗೆಯೇ. ನಮ್ಮದು ಗಣರಾಜ್ಯ. ಇಲ್ಲಿ ಬಹುಮುಖೀ ಸಂಸ್ಕೃತಿ, ಬಹುಭಾಷೆ, ಬಹುಮುಖೀ ನಂಬಿಕೆಗಳು, ಚಿಂತನೆಗಳು ಎಲ್ಲವೂ ಮುಖ್ಯ. ಇವೆಲ್ಲವೂ ಸೇರಿಯೇ ಭಾರತೀಯ ಎನ್ನುವುದು ರೂಪಗೊಳ್ಳುತ್ತದೆ. ಸಂವಿಧಾನ ಮಾನ್ಯ ಮಾಡಿರುವ ಎಲ್ಲ ಭಾಷೆಗಳೂ ಸಮಾನವೇ. ಪ್ರತಿಯೊಂದು ನಂಬಿಕೆಯೂ, ಸಂಸ್ಕೃತಿಯೂ, ಮೌಲ್ಯವೂ ಇಲ್ಲಿ ಮುಖ್ಯವೇ. ಪ್ರತಿಯೊಬ್ಬ ಪ್ರಜೆಯೂ ಇಲ್ಲಿ ಸಮಾನವಾಗಿಯೇ ತನ್ನ ಹಕ್ಕು ಬಾಧ್ಯತೆಗಳನ್ನು ಪಡೆದಿರುತ್ತಾನೆ. ತನ್ನ ಬದುಕಿನ ಎಲ ಮೌಲ್ಯಗಳನ್ನು ಉಳಿಸಿಕೊಳ್ಳಲು ಅವನಿಗೆ ಅವಕಾಶವಿರುತ್ತದೆ. ಇವುಗಳನ್ನೆಲ್ಲ ಉಳಿಸಿಕೊಂಡೇ ನಾವು ಭಾರತವನ್ನು ಕಟ್ಟಬೇಕು. ಇವೆಲ್ಲ ಇರುವುದು ಸಾಧ್ಯವಾದಾಗಲೇ ’ಭಾರತೀಯ’ ಎನ್ನುವುದು ಸಾಧ್ಯವಾಗುತ್ತದೆ. ಈ ಅರ್ಥದಲ್ಲಿಯೇ ಪ್ರತಿಯೊಂದು ರಾಜ್ಯವೂ ತನ್ನ ’ರಾಷ್ಟ್ರಕವಿ’ಯನ್ನು ಕಂಡುಕೊಂಡು ಅವನನ್ನು ಗೌರವಿಸಬಹುದು. ಅದು ಆ ರಾಜ್ಯದ ಘನತೆಯಂತೆ ರಾಷ್ಟ್ರದ ಘನತೆಯೂ ಹೌದು.

ರಾಷ್ಟ್ರದ ಬದುಕನ್ನು, ಸಮಸ್ಯೆಗಳನ್ನು, ಸಂಕಷ್ಟಗಳನ್ನು ತನ್ನ ಅನುಭವದ ಮೂಸೆಯಲ್ಲಿಟ್ಟು ನೋಡುವ ಬರಹಗಾರನ ಕೃತಿಗಳು ಸಮಾಜವನ್ನು, ನಾಡನ್ನು ಕಟ್ಟಲು ಅಗತ್ಯ ಚಿಂತನೆಯನ್ನು ಒದಗಿಸಬಹುದು. ಅಂಥ ಬರಹಗಾರರು ಕೇವಲ ಒಂದು ರಾಜ್ಯಕ್ಕಲ್ಲ, ಇಡೀ ರಾಷ್ಟ್ರಕ್ಕೆ ಮುಖ್ಯನಾಗಿರುತ್ತಾರೆ. ಅವರು ರಾಷ್ಟ್ರದ ಸಂಪತ್ತಾಗಿರುತ್ತಾರೆ.

ರಾಷ್ಟ್ರಕವಿಗೂ, ಆಸ್ಥಾನ ಕವಿಗೂ ವ್ಯತ್ಯಾಸವಿದೆ. ಆಸ್ಥಾನ ಕವಿಯನ್ನು ರಾಜ ನೇಮಿಸಿಕೊಳ್ಳುತ್ತಿದ್ದ. ರಾಜಋಣದಲ್ಲಿ ಬದುಕಬೇಕಾಗಿದ್ದ ಕವಿ ರಾಜನನ್ನು ಟೀಕಿಸುವ ಹಕ್ಕನ್ನು ಕಳೆದುಕೊಂಡಿರುತ್ತಿದ್ದ. ಆದರೆ ರಾಷ್ಟ್ರಕವಿ ಎನ್ನುವುದು ಜನತೆ, ಒಂದು ಪ್ರಜ್ಞಾವಂತ ಸಮಾಜ ಕೊಡುವ ಗೌರವ. ಅದನ್ನು ಕೊಡುವ ಮುನ್ನ ಸಾರ್ವಜನಿಕ ಚರ್ಚೆ ನಡೆಯುತ್ತದೆ; ನಡೆಯಬೇಕು. ಸರ್ಕಾರ ಏಕಾಏಕಿ ತನಗೆ ಬೇಕಾದವರಿಗೆ ಇದನ್ನು ಕೊಡುವುದಲ್ಲ. ಇಂಥ ಚರ್ಚೆಗಳು ಒಂದರ್ಥದಲ್ಲಿ ಬರಹಗಾರನ ಕೊಡುಗೆಯ ವಿಶ್ಲೇಷಣೆಯೂ ಆಗುತ್ತವೆ. ಅಷ್ಟೇ ಅಲ್ಲ, ಬರಹಗಾರನ ಹೊಣೆಗಾರಿಕೆಯನ್ನೂ ನೆನಪಿಸಿಕೊಡುತ್ತವೆ.

ಸಮಾಜಮುಖೀ ಚಿಂತನೆಯ ಮೂಲಕ ತನ್ನ ಸೃಜನಶೀಲ ಬರಹವನ್ನು ಕಟ್ಟುವ ಲೇಖಕ ಸಹಜವಾಗಿಯೇ ಜನತೆಯ ಗೌರವಕ್ಕೆ ಪಾತ್ರನಾಗುತ್ತಾನೆ. ಅಂಥ ಬರಹಗಾರರಿಗೆ ಕೊಡುವ ಗೌರವ ವ್ಯರ್ಥವಾಗುವುದಿಲ್ಲ. ಎಳೆಯ ತಲೆಮಾರಿನವರು ನಡೆಯಬೇಕಾದ ದಿಕ್ಕನ್ನೂ ಅದು ಪರೋಕ್ಷವಾಗಿ ಸೂಚಿಸುವಂತಿರುತ್ತದೆ. ಇಂಥ ಗೌರವವನ್ನು ಅರ್ಹರು ಇಲ್ಲದಿದ್ದರೆ ಬಿಡಬಹುದೇ ಹೊರತು, ಈ ಗೌರವವೇ ಅನಗತ್ಯ ಎಂದು ಭಾವಿಸುವುದು ಸರಿಯಾದ ಕ್ರಮವಾಗಲಾರದು. ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ತನಗೆ ಬೇಕಾದವರಿಗೆ ಇಂಥ ಗೌರವವನ್ನು ನೀಡಿದರೆ ಜನ ಅದನ್ನು ಪ್ರತಿಭಟಿಸಬೇಕು, ಪ್ರಶ್ನಿಸಬೇಕು. ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿ ಸಾರ್ವಜನಿಕರ ಚರ್ಚೆಗೆ ಅವಕಾಶ ಕಲ್ಪಿಸಿಕೊಡುತ್ತದೆ ಎಂದರೆ ಅದನ್ನು ಸ್ವಾಗತಿಸಬೇಕು; ಅಷ್ಟೇ ಅಲ್ಲ ಪ್ರತಿಯೊಬ್ಬ ಪ್ರಜ್ಞಾವಂತನೂ ಈ ಚಿಂತನೆಯನ್ನು ಬೆಳೆಸುವ ಅಭಿಪ್ರಾಯ ನೀಡಿ ಸಕಾರವನ್ನು ಎಚ್ಚರದಲ್ಲಿಡಬೇಕು.

ಖಾಸಗಿಯಾಗಿ ನೀಡುವ ಅನೇಕ ಗೌರವ, ಸ್ಥಾನಮಾನ, ಪ್ರಶಸ್ತಿಗಳು ನಮ್ಮಲ್ಲಿವೆ. ಅನೇಕ ಪ್ರಶಸ್ತಿಗಳಿಗೆ, ಸ್ಥಾನಮಾನಗಳಿಗೆ ಜಾತಿಯ ಲೇಪ ಅಂಟಿರುತ್ತದೆ. ಇನ್ನು ಕೆಲವಕ್ಕೆ ಪಕ್ಷಪಾತದ ರೋಗ. ಮತ್ತೂ ಕೆಲವು ಖಾಸಗೀ ಪ್ರಶಸ್ತಿಗಳು ಲೇಖಕರಿಂದಲೇ ಹಣ ಪಡೆದು ಅವರನ್ನೇ ಗೌರವಿಸುವ ದುಷ್ಟ ಪ್ರಶಸ್ತಿಗಳಾಗಿವೆ. ಈ ಪ್ರಶಸ್ತಿಗಳ ಬಗ್ಗೆ ಖಾಸಗಿಯಾಗಿ ಚರ್ಚಿಸುವ, ಟೀಕಿಸುವ ನಮ್ಮ ಅನೇಕ ಬರಹಗಾರರು, ಬುದ್ಧಿಜೀವಿಗಳು ಸಾರ್ವಜನಿಕವಾಗಿ ಅಭಿಪ್ರಾಯ ಹೇಳಲು ಹಿಂಜರಿಯುತ್ತಾರೆ. ಇಂಥ ಪ್ರಶಸ್ತಿಗಳನ್ನು, ಸ್ಥಾನಮಾನಗಳನ್ನು ನಿರಾಕರಿಸುವ ದಿಟ್ಟತನವನ್ನೂ ತೋರಿಸುವುದಿಲ್ಲ. ಅವುಗಳಿಗೆ ಎಷ್ಟು ಕಿಮ್ಮತ್ತು ಎಂದು ಗೊತ್ತಿದ್ದರೂ, ತಮ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ ಇಂಥ ಪ್ರಶಸ್ತಿಗಳಿಗೂ ಜಾಗಕೊಟ್ಟು ಅವುಗಳ ’ಮೌಲ್ಯ’ವನ್ನು ಹೆಚ್ಚಿಸುತ್ತಾರೆ.

ಇಂಥ ಎಡಬಿಡಂಗಿತನದಿಂದ ನಾವು ಮೊದಲು ಪಾರಾಗಬೇಕು. ಖಾಸಗೀ ಪ್ರಶಸ್ತಿಗಳನ್ನು ನಾವು ಒಪ್ಪಿಕೊಳ್ಳದೆ ಅವುಗಳ ಸ್ಥಾನ ಏನು ಎಂಬುದನ್ನು ತೋರಿಸಬಹುದು. ಆದರೆ ಅವುಗಳನ್ನೆಲ್ಲ ಸರಿಪಡಿಸುತ್ತೇವೆ ಎಂಬುದು ಆಗದ ಮಾತು. ಆದರೆ ಸಕಾರದ ಪ್ರಶಸ್ತಿಗಳು ದಾರಿತಪ್ಪಿದ್ದರೆ ಅವುಗಳನ್ನು ಸರಿದಾರಿಗೆ ತರುವ ಹೊಣೆ ಸಾರ್ವಜನಿಕರ ಮೇಲಿರುತ್ತದೆ. ಸಾರ್ವಜನಿಕ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ತಪ್ಪುಗಳನ್ನು ಮುಲಾಜಿಲ್ಲದೆ ಎತ್ತಿತೋರಿಸುವುದು, ಸರಿಯಿದ್ದರೆ ಬೆಂಬಲಿಸುವುದು ಇತ್ಯಾದಿ ಕ್ರಿಯೆಗಳ ಮೂಲಕ ಸರ್ಕಾರಗಳ ಮೇಲೆ ಒತ್ತಡ ತಂದು ಪ್ರಶಸ್ತಿಗಳಿಗೆ ’ಮೌಲ್ಯ’ ತರಬಹುದು. ಹೀಗೆ ಮಾಡಬೇಕಾದದ್ದು ನಮ್ಮ ಕರ್ತವ್ಯ ಕೂಡಾ.-ಜಿ.ಪಿ.ಬಸವರಾಜು
೯೪೮೦೦೫೭೫೮೦

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...