Thursday, July 30, 2015

ಅಗಷ್ಟ್ 1 ಗದಗ : ಸರಕಾರಿ ಪ್ರಾಯೋಜಿತ ರೈತರ ಕಗ್ಗೊಲೆ ಖಂಡಿಸಿ ಪ್ರತಿಭಟನಾ ಧರಣಿ ಹಾಗೂ ಬೀದಿ ಕವಿಗೋಷ್ಟಿ-ಕರಪತ್ರ

ಸರಕಾರಿ ಪ್ರಾಯೋಜಿತ ರೈತರ ಕಗ್ಗೊಲೆ ಖಂಡಿಸಿ ಅಗಷ್ಟ್ 1 ರಂದು ಗದಗಿನ ಗಾಂಧಿ ಸರ್ಕಲ್ ನಲ್ಲಿ ಕವಿ ಸಾಹಿತಿ ವಿಚಾರವಂತ ಪ್ರಗತಿಪರ ಮತ್ತು ರೈತರಿಂದ ಪ್ರತಿಭಟನಾ ಧರಣಿ ಹಾಗೂ ಬೀದಿ ಕವಿಗೋಷ್ಟಿ.
ಬನ್ನಿ ಜೊತೆಗೂಡಿ

Friday, July 24, 2015

15, ಅಗಷ್ಟ್ ಬೆಂಗಳೂರು : ನವಕರ್ನಾಟಕ ಪ್ರಕಾಶನದ ಪುಸ್ತಕ ಬಿಡುಗಡೆ

ಕೇಂದ್ರ ಸಾಹಿತ್ಯ ಅಕಾದೆಮಿ ಯುವ ಸಾಹಿತ್ಯ : 2016 ಕ್ಕೆ ಪುಸ್ತಕ ಆಹ್ವಾನ


ರೈತ-ರಾಜಕೀಯ: ಒಂದು ಕಾರ್ಟೂನ್
ಅಗಸ್ಟ್ 2, ಬೆಂಗಳೂರು :ಶ್ರೀಲೇಖಾ ದತ್ತಿ ಪ್ರಶಸ್ತಿ ಪ್ರದಾನ

ಹೊಸತನಕ್ಕೆ ತುಡಿವ ಮನ ಹೋಯಿತೆಲ್ಲಿಗೆ?

ಜಿ.ಪಿ.ಬಸವರಾಜು

ಸರಿಯಾಗಿ ಒಂದು ಶತಮಾನದ ಹಿಂದೆ ಟಿ.ಎಸ್. ಎಲಿಯಟ್ ಬರೆದ ’ದಿ ಲೌ ಸಾಂಗ್ ಆಫ್ ಜೆ.ಆಲ್ಫ್ರೆಡ್ ಪ್ರುಫ್ರಾಕ್’ ಪದ್ಯ ಇಂಗ್ಲಿಷ್ ಸಾಹಿತ್ಯದಲ್ಲಿ ಒಂದು ಅಪೂರ್ವ ಘಟನೆಯೆಂದು ಪರಿಗಣಿಸಲ್ಪಟ್ಟಿದೆ. ಈ ಪದ್ಯದ ಶತಮಾನೋತ್ಸವವನ್ನು ಇಂಗ್ಲಿಷ್ ಕಾವ್ಯ ಪ್ರೇಮಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಎಲಿಯಟ್‌ನ ಪ್ರತಿಭೆ, ಈ ಪದ್ಯದ ಹೊಸತನ, ಅದರ ಹಿಂದಿನ ಹಲವಾರು ಸಾಹಿತ್ಯಕ ಸಂಗತಿಗಳ ಸುತ್ತ  ಅನೇಕ ಲೇಖನಗಳು ಪ್ರಕಟವಾಗಿವೆ.

ಆ ಕಾಲದಲ್ಲಿ ಹೊಸ ಅಭಿವ್ಯಕ್ತಿಗಾಗಿ, ವಿಶೇಷವಾಗಿ ಕಾವ್ಯದಲ್ಲಿನ ಪ್ರಯೋಗಗಳಿಗಾಗಿಯೇ ಆರಂಭವಾಗಿದ್ದ (೧೯೧೨) ’ಪೊಯೆಟ್ರಿ’ ಮಾಸಿಕದಲ್ಲಿ ಪ್ರಕಟಣೆಗೆಂದು ಯುವಕ ಎಲಿಯಟ್ ಈ ಪದ್ಯವನ್ನು ಕಳುಹಿಸಿದಾಗ ಕೂಡಲೇ ಅದಕ್ಕೆ ಮಾನ್ಯತೆ ಸಿಕ್ಕಲಿಲ್ಲ. ಅದರ ಸಂಪಾದಕಿ ಹ್ಯಾರಿಯಟ್ ಮನ್ರೊ ಈ ಪದ್ಯವನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಹೊಸ ಬಗೆಯ ರುಚಿಯನ್ನು, ಅಭಿವ್ಯಕ್ತಿಯನ್ನು ಬಲ್ಲವನಾಗಿದ್ದ ಅಮೆರಿಕದ ಕವಿ ಎಜ಼್ರಾಪೌಂಡ್ ’ಪೊಯೆಟ್ರಿ’ಯ ವಿದೇಶೀ ಪ್ರತಿನಿಧಿಯಾಗಿದ್ದ. ಪೌಂಡ್ ಈ ಪದ್ಯವನ್ನು ಓದಿ ರೋಮಾಂಚನಗೊಂಡ. ಇಲ್ಲಿನ ತಾಜಾತನ, ಹೊಸ ಜಾಡನ್ನು ಹುಡುಕುವ ಹಂಬಲ, ಅನುಭವದ ಪ್ರಾಮಾಣಿಕತೆಗಳನ್ನು ತಕ್ಷಣ ಗುರುತಿಸಿದ. ’ನವ್ಯ ಕವಿತೆ’ ಎಂದರೆ ಇದೇ ಎಂಬುದು ಆತನಿಗೆ ಮನದಟ್ಟಾಗಿತ್ತು. ಪೌಂಡ್ ಮನ್ರೋಗೆ ಪತ್ರ ಬರೆದು ಈ ಕವಿತೆಯ ಹೆಚ್ಚುಗಾರಿಕೆಯನ್ನು ತಿಳಿಸಿದ. ’ನಾನು ಈವರೆಗೆ ಓದಿದ ಅಮೆರಿಕನ್ ಕವಿಯೊಬ್ಬನ ಅತ್ಯುತ್ತಮ ಕವಿತೆ ಇದು’ ಎಂದು ಹೇಳಿ ಈ ಕವಿತೆಯನ್ನು ’ಪೊಯೆಟ್ರಿ’ಯಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದ. ತನಗೆ ಸಂಪೂರ್ಣ ಒಪ್ಪಿಗೆಯಾಗದಿದ್ದರೂ ಪೌಂಡ್ ಅಭಿಪ್ರಾಯವನ್ನು ತಳ್ಳಿಹಾಕಲಾಗದ ಅನಿವಾರ‍್ಯತೆಯಲ್ಲಿ ಮನ್ರೊ ಇದನ್ನು ಪ್ರಕಟಿಸಿದಳು. ಮುಂದಿನದನ್ನು ಇತಿಹಾಸ ಹೇಳುತ್ತದೆ. ಎಲಿಯಟ್ ಜಗದ್ವಿಖ್ಯಾತ ಕವಿಯಾದ ನೊಬೆಲ್ ಪ್ರಶಸ್ತಿಯನ್ನೂ ಪಡೆದುಕೊಂಡ. ನವ್ಯ ಕಾವ್ಯದಲ್ಲಿ ಎಲಿಟಯಟ್‌ನನ್ನು ಹೆಸರಿಸದೆ ಮುಂದೆ ಹೋಗಲು ಸಾಧ್ಯವೇ ಇಲ್ಲದಂಥ ಸಂದರ್ಭ ಒದಗಿಬಂತು.

ಹೊಸದನ್ನು ಗುರುತಿಸಿದ ಕೀರ್ತಿ ಪೌಂಡ್‌ನದಾಯಿತು. ಅಷ್ಟೇ ಅಲ್ಲ, ಎಲಿಯಟ್‌ನ ’ದಿ ವೇಸ್ಟ್ ಲ್ಯಾಂಡ್’ ಕವಿತೆಯನ್ನು ಪೌಂಡ್ ತಿದ್ದಿದ ರೀತಿ ಅದ್ಭುತವಾದದ್ದು. ಎಷ್ಟೋ ಸಾಲುಗಳನ್ನು ಒಡೆದು ಹಾಕಿದ; ಸೂಚ್ಯವಾಗಿ ಹೇಳುವುದನ್ನು ಹಾಗೆಯೇ ಹೇಳಬೇಕೆಂದು ಸೂಚಿಸಿದ. ಮಾತುಗಳು ಹೆಚ್ಚಾದ ಕಡೆ ತೆಗೆದುಹಾಕಿದ. ಅನಗತ್ಯವಾದ ವಿವರಗಳನ್ನು ಕತ್ತರಿಸಿದ. ಧ್ವನಿಶಕ್ತಿಯನ್ನು ಹೆಚ್ಚಿಸಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ. ಎಲಿಯಟ್ ತಂಬ ಗೌರವದಿಂದ, ಪೌಂಡ್ ಕಾವ್ಯಶಕ್ತಿಯ ಮೇಲಿದ್ದ ಅಖಂಡ ವಿಶ್ವಾಸದಿಂದ ಪೌಂಡ್ ತೋರಿದ ದಾರಿಯಲ್ಲಿ ನಡೆದ. ’೨೦ನೇ ಶತಮಾನದ ಕಾವ್ಯದಲ್ಲಿ ನಡೆದ ಕ್ರಾಂತಿಗೆ ಪೌಂಡ್’ ನ ಕೊಡುಗೆ ಬಹಳ ಮುಖ್ಯವಾದದ್ದು ಎಂಬುದನ್ನು ಎಲಿಯಟ್ ಬಹಳ ಮುಕ್ತ ಮನಸ್ಸಿನಿಂದ ಸಾರಿದ.

ಇಂಗ್ಲಿಷ್ ಸಾಹಿತ್ಯದಲ್ಲಿ ರೂಪಪಡೆದ ಈ ನವ್ಯ ಸಾಹಿತ್ಯ ಜಗತ್ತಿನ ಅನೇಕ ಭಾಷೆಗಳ ಮೇಲೆ ಪ್ರಭಾವ ಬೀರಿತು. ಕನ್ನಡದಲ್ಲಿ ಕವಿ ಎಂ.ಗೋಪಾಲಕೃಷ್ಣ ಅಡಿಗರ ನೇತೃತ್ವದಲ್ಲಿ ನಡೆದ ಚಳವಳಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನವ್ಯಚಳವಳಿಯ ಹುಟ್ಟಿಗೆ ಕಾರಣವಾಯಿತು.  ಪೌಂಡ್‌ನಂತೆ ಅಡಿಗರೂ ಹೊಸದಕ್ಕೆ ಕಣ್ಣು, ಕಿವಿಗಳನ್ನು ತೆರೆದವರಾಗಿದ್ದರು. ಕವಿಯಾಗಿ ಹೊಸ ಅಭಿವ್ಯಕ್ತಿಯ ಮಾರ್ಗವನ್ನು ಕಂಡುಕೊಂಡ ಅಡಿಗರು ಇದೊಂದು ಚಳವಳಿಯಾಗಿ ರೂಪಪಡೆಯಲು ದುಡಿದರು. ’ಸಾಕ್ಷಿ’ ಪತ್ರಿಕೆಯ ಮೂಲಕ ಅವರು ಹೊಸ ಪ್ರತಿಭೆಗನ್ನು  ಹುಡುಕಿದರು. ಹೊಸದನ್ನು ಗುರುತಿಸುವ, ಬೆಂಬಲಿಸುವ, ಓದುಗ ವರ್ಗಕ್ಕೆ ಅದನ್ನು ಅರ್ಥಮಾಡಿಸುವ ಬಹುಮುಖ್ಯ ಹೊಣೆಯನ್ನು ಅಡಿಗರು ಹೊತ್ತುಕೊಂಡರು. ಕನ್ನಡ ಸಾಹಿತ್ಯದಲ್ಲಿ ಅಡಿಗರು ಗುರುತಿಸಿದ ಪ್ರತಿಭಾವಂತರು ಎಷ್ಟು ಎಂಬುದನ್ನು ಈಗ ಲೆಕ್ಕಹಾಕಿದರೆ, ನವ್ಯ ಸಾಹಿತ್ಯದಲ್ಲಿ ಪ್ರಸಿದ್ಧರಾದ ಅನೇಕರು ಕಾಣಿಸುತ್ತಾರೆ. ಈ ಪ್ರತಿಭಾವಂತರಲ್ಲಿ ಅಡಿಗರು ಚಿಮ್ಮಿಸಿದ ಚೈತನ್ಯ, ಹೊಮ್ಮಿಸಿದ ಉತ್ಸಾಹ ಎಷ್ಟು ದೊಡ್ಡದಾಗಿತ್ತು ಎಂಬುದು ನಮಗೆ ಈಗ ಸ್ಪಷ್ಟವಾಗುತ್ತದೆ. ಭಾಷೆ, ಶೈಲಿ, ಅಭಿವ್ಯಕ್ತಿಯ ಹೊಸ ಹೊಸ ಸಾಧ್ಯತೆಗಳು, ರಚನೆ, ವಿನ್ಯಾಸ, ಹೀಗೆ ಎಲ್ಲವನ್ನೂ ಒಂದು ಸಮಗ್ರ ಕಲಾಕೃತಿಯ ಒಟ್ಟಂದವಾಗಿ, ಶಿಲ್ಪವಾಗಿ ಅಡಿಗರು ನೋಡಿದ ರೀತಿ, ಪ್ರಾಮಾಣಿಕತೆಯನ್ನು ಅವರು ಪರಿಭಾವಿಸಿದ, ಗೌರವಿಸಿದ ವಿಧಾನ ಈಗಲೂ ಮೆಚ್ಚುವಂತಿವೆ. ಅಡಿಗರ ಈ ಪ್ರಯತ್ನಕ್ಕೆ ಬೆಂಬಲ ನೀಡುವಂತೆ ’ಸಂಕ್ರಮಣ’, ’ಕವಿತಾ’ ’ಲಹರಿ’, ಮೊದಲಾದ ಅನೇಕ ಸಾಹಿತ್ಯ ಪತ್ರಿಕೆಗಳು ಹುಟ್ಟಿಕೊಂಡು ನವ್ಯ ಎನ್ನುವುದು ಒಂದು ಚಳವಳಿಯಾಗಿ ಬೆಳೆಯಲು ಕಾರಣವಾಯಿತು. ಮುಂದೆ ನವ್ಯ ಬರಹಗಾರರಲ್ಲಿಯೇ ಹುಟ್ಟಿಕೊಂಡ ಕವಲುಗಳು, ಬಂಡಾಯದ ಸಂದರ್ಭದಲ್ಲಿ ಅಡಿಗರನ್ನು ಟೀಕಿಸಿದ, ಮಿತಿಗಳನ್ನು ಗುರುತಿಸಿದ, ಇದೆಲ್ಲವನ್ನು ನಿರ್ಭೀತಿ, ನಿರ್ಭಿಡೆಗಳಿಂದ ಹೇಳಿದ ಪ್ರಯತ್ನದ ಹಿಂದೆ ಕೂಡಾ ಅಡಿಗರು ಹಾಗೂ ಅವರಂಥ ಕೆಲವರು ಬರಹಗಾರರು ಇರುವುದು ಕಂಡುಬರುತ್ತದೆ.

ಸಾಹಿತ್ಯ ಎನ್ನುವುದು ಬದುಕಿನಂತೆಯೇ ನಿರಂತರ ಪ್ರವಾಹ. ಹೊಸ ನೀರು ಬರುವುದು, ಹಳೆಯದು ಕೊಚ್ಚಿಹೋಗುವುದು ಸಹಜ. ಆದರೆ ತನ್ನ ಕಾಲದಲ್ಲಿ ಗಟ್ಟಿಯಾಗಿ ನಿಂತು, ಹೊಸದನ್ನು ಹುಡುಕುವ, ಪರಂಪರೆಯನ್ನು ಗೌರವಿಸುವ, ಮೌಲ್ಯಗಳನ್ನು ಬಿಟ್ಟುಕೊಡದೆ ತನ್ನ ತಲೆಮಾರನ್ನು ಪ್ರಭಾವಿಸುವ ಬರಹಗಾರ ದೊಡ್ಡವನಾಗಿ ಕಾಣುತ್ತಾನೆ. ಇದು ಚರಿತ್ರೆಯ ಉದ್ದಕ್ಕೂ ನಡೆದುಕೊಂಡು ಬಂದಿರುವಂಥದೇ. ಪೌಂಡ್ ಇಲ್ಲದಿದ್ದರೆ ಎಲಿಯಟ್ ಪ್ರತಿಭೆ ತನ್ನ ಹೊಸ ದಾರಿಯಲ್ಲಿ ಚಲಿಸುತ್ತಿತ್ತೆ? ಹೊಸತನಕ್ಕೆ ಎಲ್ಲ ಕಾಲದಲ್ಲೂ ಮಾನ್ಯತೆ ಇರುತ್ತದೆ. ಹೊಸತನಕ್ಕೆ ಮನುಷ್ಯನ ಹುಡುಕಾಟ ನಿರಂತರವಾದದ್ದು.

ಇವತ್ತಿನ ಸಾಹಿತ್ಯ ಸಂದರ್ಭವನ್ನು ವಿಶ್ಲೇಷಿಸುವ ಹಲವರು ನಿರಾಶೆಯ ಧ್ವನಿಯಲ್ಲಿಯೇ ಮಾತನಾಡುತ್ತಾರೆ. ಚರಿತ್ರೆಯನ್ನು ಮುಂದಿಟ್ಟು ತಮ್ಮ ಮಾತುಗಳಿಗೆ ಸಮರ್ಥನೆಯನ್ನು ಕೊಡುತ್ತಾರೆ. ಇದು ಸ್ವಲ್ಪಮಟ್ಟಿಗೆ ನಿಜವೂ ಹೌದು. ಆದರೆ ಹೊಸ ಪ್ರತಿಭೆಗಳು ಇವತ್ತು ಕಾಣಿಸುತ್ತಿಲ್ಲವೆ? ಹೊಸ ದನಿಗಳು ಕೇಳಿಸುವುದಿಲ್ಲವೇ? ಇದೆಲ್ಲವನ್ನು ಕಾಣಿಸುವಂತೆ, ಕೇಳುವಂತೆ ಮಾಡುವ ಮಾಧ್ಯಮಗಳು ಸೊರಗಿರುವುದಂತೂ ನಿಜ. ಕೆಲವು ಮಾಧ್ಯಮಗಳಿಗೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಬೇರೆ ರೀತಿಯಲ್ಲಿಯೇ ಕಾಣಿಸುತ್ತಿವೆ. ಹಣವನ್ನು ತರುವ ಜಾಹೀರಾತಿನ ಬೆಳಕಿನಲ್ಲಿ ಎಲ್ಲವೂ ಗೌಣವಾಗಿರುವುದೂ ಉಂಟು. ಅಬ್ಬರದ ಪ್ರಚಾರ, ಅದರ ಹಿಂದೆಯೇ ಹೋಗುವ ಹೊಸ ಬರಹಗಾರರು ಒಂದು ಕಡೆಯಾದರೆ, ಹೊಸ ಅಭಿವ್ಯಕ್ತಿಗೆ ಸಮರ್ಪಕ ಎನ್ನಬಹುದಾದ ವೇದಿಕೆಯೇ ಇಲ್ಲವೇನೋ ಎನ್ನುವಂಥ ಪರಿಸ್ಥಿತಿ ಮತ್ತೊಂದೆಡೆ. ಹೆಚ್ಚು ಪ್ರಸಾರದ ಪತ್ರಿಕೆಗಳು ಒಂದು ಕಾಲದಲ್ಲಿ ಸಾಹಿತ್ಯ, ಕಲೆಗಳನ್ನು ಗೌರವದಿಂದಲೇ ನೋಡುತ್ತಿದ್ದವು. ಸಾಕ್ಷಿ, ಸಂಕ್ರಮಣಗಳಂಥ ಹೊಸ ಅಭಿವ್ಯಕ್ತಿಯ ಪತ್ರಿಕೆಗಳಿಗೆ ಬೆಂಬಲವಾಗಿ ಈ ಅಧಿಕ ಪ್ರಸಾರದ ಪತ್ರಿಕೆಗಳು ನಿಂತಿವೆಯೇನೋ ಎನ್ನುವಂಥ ಸಂದರ್ಭವೂ ಕನ್ನಡದಲ್ಲಿ ಇತ್ತು. ಹೊಸ ಪ್ರತಿಭೆಗಳಿಗಂತೂ ಈ ಪತ್ರಿಕೆಗಳು ಬಹುದೊಡ್ಡ ವೇದಿಕೆಯನ್ನು ಒದಗಿಸುತ್ತಿದ್ದವು. ಇದೆಲ್ಲ ಈಗ ಕಣ್ಮರೆಯಾಗಿರುವುದು ಸ್ಪಷ್ಟ. ಬ್ಲಾಗ್‌ಗಳು, ಇ-ಪತ್ರಿಕೆಗಳು, ಫೇಸ್‌ಬುಕ್‌ಗಳು ಹೀಗೆ ಹೊಸ ಹೊಸ ಮಾಧ್ಯಮಗಳೂ ಈ ಕೊರತೆಯನ್ನು ತುಂಬಿದಂತೆ ಕಾಣುವುದಿಲ್ಲ. ಹೊಸ ಹುಡುಕಾಟದಲ್ಲಿ ತೊಡಗಿರುವವರ ಸಾಹಿತ್ಯ ಕೃತಿಗಳ ಮೌಲ್ಯಮಾಪನವಾದರೂ ಎಲ್ಲಿ ನಡೆಯುತ್ತಿದೆ? ಹೊಸ ಪದ್ಯಗಳ, ಹೊಸ ಕತೆಗಳ, ಹೊಸ ರೀತಿಯ ನಾಟಕಗಳ ಸಂಕಲನಗಳನ್ನು ಪ್ರಕಟಿಸಿದ ಲೇಖಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸವಾದರೂ ಎಲ್ಲಿದೆ? ಯಾವುದು ಗಟ್ಟಿ, ಯಾವುದು ಟೊಳ್ಳು ಎಂಬುದನ್ನು ಹೇಳದಿದ್ದರೆ ಬರಹಗಾರ ಎದ್ದುನಿಲ್ಲುವುದು ಕಷ್ಟ.  ನಮ್ಮ ಅಕಾಡೆಮಿಗಳಾದರೂ ಈ ಕೆಲಸವನ್ನು ಮಾಡುತ್ತಿವೆಯೇ? ಕಾರ್ಯಕ್ರಮಗಳೇನೋ ಹೆಚ್ಚು ಹೆಚ್ಚು ನಡೆಯುತ್ತಿವೆ; ಹಣದ ಕೊರತೆ ಆಗದಂತೆ ಸರ್ಕಾರಗಳು ನಿಧಿಯನ್ನು ಒದಗಿಸುತ್ತಿವೆ. ಆದರೆ ಯಾವುದು ಸತ್ವಯುತ, ಯಾವುದು ಪೊಳ್ಳು, ಯಾರು ಪ್ರತಿಭಾವಂತ, ಯಾರ ದಾರಿ ಎತ್ತ ಇತ್ಯಾದಿಗಳನ್ನು ಗುರುತಿಸುವವರೇ ಇಲ್ಲದಿದ್ದರೆ ಹೇಗೆ? ಗದ್ದಲದ ಕವಿಗೋಷ್ಠಿಗಳು, ಹಲವು ಮಿತಿಗಳಲ್ಲಿ ನಡೆಯುವ ಕಮ್ಮಟಗಳು ಈ ಕೆಲಸವನ್ನು ಮಾಡಲಾರವು.

ಹಾಗಾದರೆ ಹೊರ ದಾರಿ ಇಲ್ಲವೇ?- ಈ ಪ್ರಶ್ನೆಯನ್ನು ಗಂಭೀರವಾಗಿ ಕೇಳುವವರ ಸಂಖ್ಯೆ ಹೆಚ್ಚಿದರೆ ಅಲ್ಲಿ ಉತ್ತರ ಸಿಗಬಹುದು.

-ಜಿ.ಪಿ.ಬಸವರಾಜು
೯೪೮೦೦ ೫೭೫೮೦

ಜುಲೈ 25, ಧಾರವಾಡ :ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ


 ಹರಿವು
On 25-7-2015 6-15pm

@ Srujana, KCD campus,Dharwad. 
" COURT "

On 29-7-2015 6-15pm

@ Srujana, KCD campus,Dharwad.


( for admission cards contact A.M.Khan 9448378593 OR Madhu Desai -9448022952) )

Thursday, July 23, 2015

ರೈತರ ಆತ್ಮಹತ್ಯೆ : ಒಂದು ಕಾರ್ಟೂನ್
ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ – 2015


ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರಿಂದ ಕರ್ನಾಟಕದ ಉದಯನ್ಮೋಖ ಹಾಗೂ ಎಲೆಮರೆಯ ಕವಿಗಳನ್ನು ಬೆಳಕಿಗೆ ತರುವ ಸದುದ್ದೇಶದಿಂದ ಪ್ರತಿವರ್ಷದಂತೆ ಈ ವರ್ಷವೂ ” ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ – 2015″ ಅನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವನಗಳನ್ನು ಕಳುಹಿಸಬಹುದಾಗಿದೆ.

ಸೂಚನೆಗಳು
01. ಕವಿತೆಗಳು 30 ಸಾಲುಗಳು ಮೀರಿರಬಾರದು.
02. ಕವಿಗಳು ತಮ್ಮ ಕವಿತೆಗಳ ಜೊತೆಯಲ್ಲಿ ತಮ್ಮ ಇತ್ತೀಚಿನ ಪೋಟೋ, ಅಂಚೆ ವಿಳಾಸ, ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
03. 2015ರ ಅಕ್ಟೋಬರ್ ತಿಂಗಳಿನಲ್ಲಿ ಫಲಿತಾಂಶ ಘೋಷಿಸಲಾಗುವುದು.

ಕವನಗಳು ಕಳುಹಿಸಬೇಕಾದ ವಿಳಾಸ
ಜೀವನ್ ಪ್ರಕಾಶನ,
ಅಂಚೆ ಪೆಟ್ಟಿಗೆ ಸಂಖ್ಯೆ 03,
ಚಿಕ್ಕಬಳ್ಳಾಪುರ – 562 101

ನುಡಿ ತಂತ್ರಾಂಶದಲ್ಲಿ ಟೈಪಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು.
jeevanprakashana@gmail.com

ಹೆಚ್ಚಿನ ಮಾಹಿತಿಗಾಗಿ
9901982195/9901928906
ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ.

Sunday, July 19, 2015

ವಿಶ್ವ ಬಂಧುಗೆ ಭಿಕ್ಷೆ


ಡಾ ಶಶಿಕಾಂತ .ಪಟ್ಟಣ -ಪೂನಾ


 
ಬಸವಣ್ಣ ನಿನ್ನ ಮೂರ್ತಿಗೆ 
ಕಳ್ಳ ಕಾಕರ ದೇಣಿಗೆ. 
ಹೆಂಡ ದೊರೆಗಳ ವಂತಿಗೆ
ನಿನೋಪ್ಪದ ಸ್ಥಾವರಕೆ 
ಅಬ್ಬರದ ವಾಗ್ದಾನ .
ಮುಗಿಲು ಮುಟ್ಟುವ ಕಂಚಿಗೆ
  ಸರಕಾರದ ಹಂಗು.
ಕಪ್ಪು ಹಣ ಬಿಳಿಯಾಗುವದು .
ಮೂರ್ಖ ಶರಣ ಖುಷಿ .
ನಿಮ್ಮ ಶರಣರ ತಿಪ್ಪೆಯ ತಪ್ಪಲ 
ತಂದು ನಿಶ್ಚಯಿಸುವುದು ನಿನ್ನ ಧರ್ಮ
ಕೊಳ್ಳೆ ಸುಲಿಗೆಯ  ಲಿಲಾವಿನಲಿ 
ಬಸವನ  ಹರಾಜು ನಮ್ಮ ಕರ್ಮ .
ಶರಣರ ಚಮ್ಮಾವುಗೆಗೆ 
ನಿನ್ನ ಚರ್ಮ ಅಂಗ ದಾನ .
ಇಲ್ಲಿ ಅಕ್ಕ ಮಾತೆ ಶರಣರು
ಭಕ್ತರ ಚರ್ಮ ಸುಲಿಯುವ ಶೂರರು .
ಕಾಗೆ ಕೋಳಿ ಅಪ್ಪಿದ ದಿಟ್ಟ ಶರಣ .
ಎಲ್ಲವನೂ ದಾಸೋಹ ಮಾಡಿದ ಧೀರ. 
ಈಗ ಮುಗಿಲೆತ್ತರಕೆ ಮುಟ್ಟುವ
ಬಸವಣ್ಣ ನಿನ್ನ  ಕಂಚಿನ ಮೂರ್ತಿ 
ವಿಗ್ರಹ ನಂತರ ದರ್ಶನಕೆ ಟಿಕೇಟು .
ದುಡ್ಡು ಹುಟ್ಟಿಸುವ ಮತ್ತೊಂದು ಉಧ್ಯಮ .
ಸಮತಾವಾದಿ ಕ್ರಾಂತಿ ಪುರುಷ  
ವಿಶ್ವ ಬಂಧುವಿಗೆ  ಭಿಕ್ಷೆಯ ನಮನ .
 
------------------------------------
ಡಾ ಶಶಿಕಾಂತ .ಪಟ್ಟಣ -ಪೂನಾ 

ಇತ್ತೀಚಿಗೆ ನಾಡಿನ ಹಿರಿಯ ಪ್ರಭಾವಿ ಮಠಾಧೀಶರು  ಬಸವಣ್ಣನ ೩೨೫ ಅಡಿ ಎತ್ತರದ ಕಂಚಿನ ಪ್ರತಿಮೆಗೆ  ಹಣ ಕೂಡಿಸಲು ಜನರಿಂದ ವಂತಿಗೆ ಸೇರಿಸಲು ವಾಗ್ದಾನ ಪಡೆಯಲು ಸಭೆ ಕರೆದಿದ್ದರು.
ಮನಸ್ಸು ಘಾಸಿಯಾಯಿತು ನೊಂದು ಬರೆದ ಕವನ ,ಬಸವ ಉಧ್ಯಮಿಗಳು ಇನ್ನಾದರೂ ಬಸವನ ಹೆಸರಲಿ ಶೋಷಣೆ ನಿಲ್ಲಿಸಲಿ -

Saturday, July 11, 2015

ದೀಪದ ಗಿಡ : ಸಮಬಾಳಿನ ಆಶಯದ ಕಾವ್ಯ
-ಸಿ.ಎಸ್. ಭೀಮರಾಯ    

ದೀಪಡ ಗಿಡ
ಬಸೂ
ಪುಟ : ೧೫೮, ಬೆಲೆ : ೧೫೦/-
ಪ್ರಕಾಶನ : ಕವಿ ಪ್ರಕಾಶನ, ಕವಲಕ್ಕಿ - ಹೊನ್ನಾವರ

   
ಬಸೂ ನಮ್ಮ ನಡುವಿನ ಸೂಕ್ಷ್ಮ  ಸಂವೇದನಾಶಿಲ ಕವಿ, ಸಹೃದಯಿ ಬಂಡಾಯಗಾರ, ಪತ್ರಕರ್ತ ಮತ್ತು ಸಮಾಜಮುಖಿ ಚಿಂತಕ.

    ಪ್ರಸ್ತುತ ’ದೀಪದ ಗಿಡ’ ಬಸೂರವರ ದ್ವಿಪದಿಗಳ ಸಂಕಲನವಿದು. ಈ ಕೃತಿಯಲ್ಲಿನ ದ್ವಿಪದಿಗಳು ಸಾಮಾಜಿಕ ಸಾಂದರ್ಭಿಕ ವಿನ್ಯಾಸದಲ್ಲಿಯೇ ಮೈಪಡಿದಿವೆ. ವರ್ತಮಾನದ ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಹಿತ್ಯ, ಸಂಸ್ಕೃತಿ, ಭಾಷೆ, ಜಾತಿವ್ಯವಸ್ಥೆ, ಭಯೋತ್ಪಾಧನೆ, ಭ್ರಷ್ಟಾಚಾರ, ಪ್ರೀತಿ, ಪ್ರೇಮ, ಬಾಲ್ಯ, ಯೌವನ, ಸುಖ, ದುಃಖ, ಚೆಲುವು, ಒಲವು, ವಿರಹ, ಕತ್ತಲೆ, ಬೆಳಕು, ಕನಸು, ಕನವರಿಕೆ, ಒಂಟಿತನ, ದಾಂಪತ್ಯ, ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಪಾಳೆಗಾರಿಕೆ, ಬಡತನ - ಹೀಗೆ ಮನುಷ್ಯನ ಪಾಡನ್ನು ಅಖಂಡವಾಗಿ ಗ್ರಹಿಸಿ ಎಲ್ಲವುಗಳ ಬಗ್ಗೆ ಮುಕ್ತವಾಗಿ ಬರೆದಿರುವ ದ್ವಿಪದಿಗಳಲ್ಲಿ ಭಾವೋನ್ಮಾದಕ್ಕಿಂತ ಹೆಚ್ಚಾಗಿ ಅಂತರ್ಮುಖತೆ ಇದೆ, ಚಿಂತನಪರತೆ ಇದೆ. ಹಲವು ದ್ವಿಪದಿಗಳಲ್ಲಿ ವಿಶಿಷ್ಟವೆನಿಸುವ ಹೊಳಹುಗಳಿವೆ.

ಈ ಮನೆಯ ಕದ ಮುಚ್ಚಿದಾಗ ಆ ಮನೆಯ ಬಾಗಿಲು ತೆರೆದ ಸದ್ದಾಯಿತು
ದೇಹ ಬೆಸೆಯುವ ಓಣಿಯಲಿ ಮನಸು ಬೆಸೆಯುವ ಹೆಜ್ಜೆಯದೇ ಅನಾಥ ನಡುಗೆ ||

    ನಾವು ವಾಸಿಸುತ್ತಿರುವ ಕಾಲವೇ ತೀವ್ರ ವೇಗವಾಗಿ ಬದಲಾಗುತ್ತಿದ್ದು, ವರ್ತಮಾನ ಸದಾ ಚಲನಶೀಲವಾಗಿದೆಯೆಂಬುದನ್ನು ಈ ಸಾಲುಗಳು ಮನವರಿಕೆ ಮಾಡುವುದರೊಂದಿಗೆ ಆಧುನಿಕ ಜಗತ್ತಿನ ವಿಕೃತ ಮುಖವಾಡಗಳನ್ನು ಬಹು ಸಮರ್ಥವಾಗಿ ದರ್ಶಿಸುತ್ತವೆ.

ಕೊಂಡವರ ಮನೆಯ ಜಗುಲಿಯೇರಿ ಹಣತೆ ಬೆಳಕಾಯಿತು
ಹಣತೆ ಮಾರುವ ಕುಂಬಾರನ ಬದುಕು ಬೀದಿ ಬದಿಗಿತ್ತು ||

    ಇಂತಹ ಎಚ್ಚರದೊಂದಿಗಿನ ಕಳಕಳಿ ಬಸೂವರ ದ್ವಿಪದಿಗಳಲ್ಲಿ ಆಗಾಗ್ಗೆ ಮಿಂಚಿನಂತೆ ಕಾಣಿಸಿಕೊಂಡಿದೆ. ಸ್ವಾರ್ಥ, ದುರಾಶೆ, ದುರಾಡಳಿತದಿಂದ ದೇಶ ಹಾಳಾಗುತ್ತಿದೆ, ಶೋಷಿತರ - ಶ್ರಮಿಕರ ಬದುಕಿಗೆ ಬೆಳಕು ಬರಬೇಕೆಂಬ ಆಶಯ ಕವಿಯದು.

ನಮ್ಮ ಕೇರಿಗೂ ಬೆಳಕು ಬೇಕೆಂದು ಹಠ ಹಿಡಿದ ಹುಡುಗರ ಕನಸು ಬಿತ್ತು
ಎಚ್ಚರಾದಾಗ ಮೂಗಿಗಡರಿತು ರಾತ್ರಿಯೇ ಉರಿದುಹೋದ ಕೇರಿಯ ಬೂದಿ ||

    ಇಂಥಲ್ಲಿ ಅಗಾಧವಾದ ಮಾನವಪ್ರೀತಿಯ ಸೆಲೆಯನ್ನು ಕವಿ ಚಿಮ್ಮಿಸಿದ್ದಾರೆ. ಸಾಮಾಜಿಕ ಹೊಣೆಗಾರಿಕೆಯ ದ್ವಿಪದಿಗಳಿವಾಗಿವೆ. ಕವಿತೆಗೆ ಬಾಯಿ ಕೊಡುವ, ಹೊಸ ದನಿ ಕೊಡುವ ಕಾವ್ಯ ಪ್ರೀತಿ ಈ ದ್ವಿಪದಿಗಳಲ್ಲಿದೆ. ಕವಿತೆಯ ಉಜ್ವಲ ಬೆಳಕಿನಲ್ಲಿ ಸಮಾನತೆ, ಸಮಾಧಾನದ ಬದುಕು ಕಾಣುವ ಕವಿ ಅಂತಹ ನಿರ್ಮಲ ಬದುಕಿಗಾಗಿ ಹಂಬಲಿಸಿದ್ದಾರೆ.

ನಿಜ ನನಗೆ ಹಸಿವಿಲ್ಲದಾಗ ಮಾತ್ರ ನನ್ನ ಬದುಕು ಬದಲಾಗುವುದು
ಹಸಿವು ಇರುವಷ್ಟು ಕಾಲ ನಾನು ಮನುಷ್ಯನಂತೆಯೇ ಬದುಕುವೆನು ||

    ಎಂಬ ಭಾವನೆ ಕವಿಯದು. ಈ ಕವಿ, ಜಗತ್ತಿನ ಕಟ್ಟು ಕಟ್ಟಳೆಗಳನ್ನು ಅನುಭವಿಸುವ ನೋವಿನಲ್ಲೇ, ಅವೆಲ್ಲವುಗಳನ್ನು ಮೀರಬೇಕೆನ್ನುವ ಅದಮ್ಯ ವಾಂಛೆಯುಳ್ಳವರಾಗಿದ್ದಾರೆ.

ನಗರದ ಕೂಟಗಳಲ್ಲಿ ಹಾರಾಡುತ್ತಿದೆ ಬೀದಿಗೆ ಹಸ್ತಾಂತರಗೊಂಡ ಧರ್ಮದ ಧ್ವಜ
ಜಡಿಮಳೆ ವಾರವಿಡೀ ಸುರಿದರೂ ಹಾಗೆ ಇದೇ ಬೀದಿ ತುಂಬಿದ ಸಾವ ವಾಸನೆ ||

ವರ್ತಮಾನದ ಜಗತ್ತಿನಲ್ಲಿ ವಿವಿಧ ಬಗೆಯ ಕೇಡನ್ನು ಬಯಸುತ್ತಿರುವ ಧಾರ್ಮಿಕರು, ದಾರ್ಶನಿಕರು, ಬಂಡವಾಳಶಾಹಿಗಳು, ರಾಜಕಾರಣಿಗಳಿಂದ ತುಂಬಿ ಹೋಗಿರುವ ಲೋಕದಲ್ಲಿ ದೊಡ್ಡ ಕೊರತೆಯೆಂದರೆ ಸಮಾನತೆಯವರದ್ದು. ಸಮಾನತೆಯನ್ನು ಪ್ರೀತಿಸಬಲ್ಲ ಜೀವವು ಮಾತ್ರ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಲೋಕಕ್ಕೆ ಒಳಿತನ್ನು ನೀಡಬಲ್ಲದೆಂಬ ನಂಬಿಕೆಯೊಂದು ಈ ಕಾವ್ಯದ ಬೆನ್ನಿಗೆ ಬೆಳಕಾಗಿ ನಿಂತಿದೆ.

ನಿನ್ನ ಸಮಾಧಿ ಕಡೆಗೆ ಮಗಳ ಕೈ ಹಿಡಿದು ನಡೆವಾಗ ಏನಿತ್ತು ಸಾಕ್ಷಿ ನನ್ನ ಬಳಿ
ಒಡೆದುಹೋದ ಕ್ಯಾಸೆಟ್‌ನಲ್ಲಿದ್ದ ನಿನ್ನ ಹಾಡು ಅತ್ತು ಸಮನಾಗದಂಥ ಕಣ್ಣು ||

    ಬಸೂ ಅವರ ದ್ವಿಪದಿಯಲ್ಲಿ ನೋವು, ಹತಾಶೆ, ತವಕ, ತಳಮಳ, ಏಕಾಂಗಿತನ, ದುಃಖ ಮಡುಗಟ್ಟಿ ಮೆಲುನುಡಿಯುತ್ತಿದೆ. ಸಮಕಾಲೀನ ಜಗತ್ತು ತನ್ನ ಒಡಲಾಳದಲ್ಲಿ ಬಚ್ಚಿಟ್ಟುಕೊಂಡ ದುಃಖ - ದುಮ್ಮಾನಗಳಿಗೆ ಕವಿತೆಯ ರೂಪಕೊಟ್ಟಿರುವ ಕವಿ ಸಾವಿನ ವಾಸ್ತವತೆಯನ್ನು, ಬಾಳಜೀವಿ ಹೆಂಡತಿಯ ಅಗಾಧ ಜೀವನಪ್ರಿತಿಯನ್ನು ಈ ದ್ವಿಪದಿಯಲ್ಲಿ ತೆರೆದಿಟ್ಟಿದ್ದಾರೆ. ಈ ದ್ವಿಪದಿಯನ್ನು ಓದಿದಾಗ ಮೈ ನಡುಗಿ ಹೋಯಿತು. ಸಾವಿನೆದರು ತಪಸ್ಸಿಗೆ ಕುಳಿತ ಈ ದ್ವಿಪದಿ ಓದಿದಾಗ, ಅದರಲ್ಲಿಯ ತಳಮಳ, ನೋವು, ಸಂಕಟ, ಜೀವನಪ್ರಿತಿ ಕೇವಲ ವೈಯಕ್ತಿಕ ಮಟ್ಟದ್ದಾಗದೆ ಹದಗೊಂಡ ಜೀವನದ ಕಾವ್ಯವಾಗಿದೆ.

ಈಗಲೂ ಅಷ್ಟೇ ಊರ ಜನ ಸತ್ತ ಸುದ್ದಿ ಬಂದರೆ
ಹಲಗೆ ಬಾರಿಸುವವನ ಗೂಡಿನಲ್ಲಿ ಹೊಗೆ ಕಾಣುವುದು ||

    ಹೀಗೆ ಎಲ್ಲಾ ಬಗೆಯ ಸಾಮಾಜಿಕ ತಾರತಮ್ಯ, ಭೇದಗಳನ್ನು ಇಲ್ಲಿನ ದ್ವಿಪದಿಗಳು ಜಿಜ್ಞಾಸೆಗೆ ಒಳಪಡಿಸಿರುವುದನ್ನು ಓದುಗರು ಕಾಣಬಹುದು. ಕವಿ ತನ್ನ ಬಾಲ್ಯದಲ್ಲಿ ಕಂಡ ಸುತ್ತಲಿನ ಬಡತನ, ಕಷ್ಟ ಕಾರ್ಪಣ್ಯಗಳಿಗೆ ಈ ದ್ವಿಪದಿಯಲ್ಲಿ ಧ್ವನಿಯಾಗಿದ್ದಾರೆ.

    ಧಾರ್ಮಿಕ - ರಾಜಕೀಯ - ಸಾಮಾಜಿಕ ಒಳನೋಟಗಳು, ವರ್ತಮಾನದ ಸಂಕಟ, ಭವಿಷ್ಯದ ಕನವರಿಕೆ, ಭೂತದ ಹಳಹಳಿಕೆ ಚಿತ್ರಣಗಳು - ಹೀಗೆ ಇತ್ಯಾದಿ ಕಾವ್ಯದ ವಸ್ತು ಏನೇ ಇರಲಿ, ಎಲ್ಲ ದ್ವಿಪದಿಗಳಲ್ಲಿ ಸಮಾಜವಾದಿ ಧೋರಣೆ ವ್ಯಕ್ತವಾಗಿದೆ. ಈ ಕೃತಿಯ ದ್ವಿಪದಿಗಳಿಗೆ ಬದುಕಿಗೆ ಸಂಬಧಿಸಿದ್ದು ಯಾವುದೂ ಹೊಸತಲ್ಲ. ಎಲ್ಲವೂ ಇಲ್ಲಿ ಗಿಡವಾಗಿ, ಮರವಾಗಿ ಬೆಳೆದಿದೆ. ಅದು ತೀವ್ರವಾಗಿ ಬದುಕನ್ನು ಅನುಭವಿಸಿ ತನ್ನ ಹಾಡನ್ನು, ಪಾಡನ್ನು ಹೇಳಿಕೊಂಡ ಜೀವಿಯ ಮಾತಾಗಿ ನಮಗೆ ಕೇಳುತ್ತದೆ. ಸರಳ ದ್ವಿಪದಿಗಳಲ್ಲಿ, ಯಾವ ಸೋಗುಗಳಿಲ್ಲದೇ ಹೊಳೆಯುವ ಮಿಂಚುಗಳು ಈ ಕೃತಿಯ ಉದ್ದಕ್ಕೂ ರೇಖಾಚಿತ್ರಗಳೊಂದಿಗೆ ಇವೆ. ಬಸೂ ಅವರ ಈ ಕೃತಿಯು ಓದುಗರಲ್ಲಿ ಹೊಸ ಭರವಸೆ ಹುಟ್ಟಿಸಿದೆ. ವ್ಯಂಗ್ಯ, ವಿಷಾದ, ಬಂಡಾಯದ ದನಿಯಿದ್ದರೂ ಅಲ್ಲಿ ಆರ್ಭಟವಿಲ್ಲ. ಸಲಿಲ ನೀರಿನಂತೆ ಹರಿವ ಭಾವಲಹರಿ ವೈಚಾರಿಕತೆ, ವಾಸ್ತವತೆ, ಸಮಾನತೆ, ಅಂತರ್ಮುಖತೆಗಳು ಇಲ್ಲಿನ ದ್ವಿಪದಿಗಳ ಪ್ರಮುಖ ಗುಣಗಳಾಗಿವೆ.
-ಸಿ.ಎಸ್. ಭೀಮರಾಯ
ಆಂಗ್ಲ ಉಪನ್ಯಾಸಕರು
c/o ಸಿದ್ದಣ್ಣ ಬಿ. ಪೂಜಾರಿ
’ಅಪೂರ್ವ ನಿವಾಸ’
ಯಮುನಾ ನಗರ, ಕುಸನೂರ ರಸ್ತೆ, ಕಲಬುರಗಿ -೦೫
ಮೊ.ನಂ - ೯೦೦೮೪೩೮೯೯೩ / ೯೭೪೧೫೨೩೮೦೬

E-mail : csbhimaraya123@gmail.comWednesday, July 08, 2015

'ಸಂತೆಯೊಳಗೊಂದು ಮನೆ' ಪುಸ್ತಕದ ಮುಖಪುಟ ಯಾವುದಿರಲಿ?'ಸಂತೆಯೊಳಗೊಂದು ಮನೆ'- ದಲಿತ ಸ್ತ್ರಿವಾದಿ ಲೇಖನಗಳ ಪುಸ್ತಕ. ರಾಜಕೀಯ ಸಂಕಥನವನ್ನು ಮುಂದಿಟ್ಟುಕೊಂಡು ಮಹಿಳಾ ಸಂವೇದನೆ ಮಂಡಿಸುವ ಕನ್ನಡದ ನಾಲ್ಕಾರು ಬರಹಗಾರ್ತಿಯರಲ್ಲಿ ಒಬ್ಬರಾಗಿರುವ ಬಿ.ಯು.ಸುಮಾ ಅವರ ಈ ಪುಸ್ತಕ ನಮ್ಮಹೊಸ ಪ್ರಕಟಣೆ.  ನಮ್ಮ ಕಾಲದ ಮುಖ್ಯ ವಿಮರ್ಶಕರಾದ ಎಚ್ಚೆಸ್ ಆರ್ ಅವರು ಮುನ್ನುಡಿಯಲ್ಲಿ ಹೊಸ ಹೊಳಹುಗಳನ್ನು ತೆರೆದಿಟ್ಟಿದ್ದಾರೆ. ಈ ಪುಸ್ತಕಕ್ಕೆ ಎರಡು ಮುಖಪುಟ ಕಲಾವಿದ ಗೆಳೆಯರಾದ ಜಿ. ಅರುಣಕುಮಾರ ಮಾಡಿದ್ದಾರೆ. ಇದರಲ್ಲಿ ನಿಮ್ಮ ಆಯ್ಕೆ ಯಾವುದು?

Saturday, July 04, 2015

ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹ ಧನಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2014ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. 
 
ಅರ್ಜಿದಾರರು ಕನಿಷ್ಟ 18ರಿಂದ 35 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮ ದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. 
 
ಅಲ್ಲದೆ ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು. 
 
ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ. ಮಾಡಿಸಿದಾಗ 1/8 ಡಮ್ಮಿ ಅಳತೆಯಲ್ಲಿ ಕನಿಷ್ಟ 60 ಪುಟಗಳಿರಬೇಕು. ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ದಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು. 
 
ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ ಕೋಮು, ವೃತ್ತಿ, ಸಮುದಾಯ, ಭಾಷೆ ಆಚರಣೆ, ಪದ್ದತಿ, ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರುಗಳ ಕುರಿತಂತೆ ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಮನನೋಯಿಸುವಂತಹ ವಿಷಯವಾಗಲಿ ಇರಬಾರದು. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವಂತಹ ವಿಷಯ/ಸಂಗತಿಗಳು ಪ್ರಸ್ತಾಪವಾಗಿರಬಾರದು. 
 
ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಗಳನ್ನು/ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಆದಕಾರಣ ಹಸ್ತ ಪ್ರತಿಯ/ಡಿಟಿಪಿ ಪ್ರತಿಯ ಎರಡನೇ ಪ್ರತಿಯನ್ನು ಸಲ್ಲಿಸಲು ತಿಳಿಸಿದೆ. 
 
ಅರ್ಜಿಗಳನ್ನು ದಿನಾಂಕ 09-07-2015ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು 560 002 ಅವರಿಗೆ ಕಳುಹಿಸಿಕೊಡಬೇಕು.

Friday, July 03, 2015

ಗಾಂಧಿ ಮಲಾ ಭೇಟಲಾ -

ಮರಾಠಿ ಮೂಲ: ವಸಂತ ದತ್ತಾತ್ರೇಯ ಗುರ್ಜರ್
ಇಂಗ್ಲಿಷ್‌ಗೆ: ಕಾಮಯಾನಿ ಬಾಲಿ
 
ಕನ್ನಡಕ್ಕೆ : ಡಾ ಎಚ್ ಎಸ್ ಅನುಪಮಾ 
 
 
 

ವಸಂತ ಡಿ ಗುರ್ಜರನ ಹತ್ತೂ ಇಂಟು ಹನ್ನೆರೆಡರ ರೂಮಲ್ಲಿ
ಗಾಂಧಿ ನನ್ನ ಭೇಟಿಯಾದ
ಭಾರತೀಯರ ಬಗ್ಗೆ ಮಾತಾಡ್ತಾ ಆಡ್ತಾ ಹೇಳಿದ:
‘ಸತ್ಯ ಸೌಂದರ್ಯಕಿಂತ ಬೇರೆ ಅಲ್ಲ. ಸತ್ಯವೇ ಸೌಂದರ್ಯ.
ನಾನು ಸೌಂದರ್ಯಾನ ಸತ್ಯದ ದಾರೀಲಿ ಕಾಣ್ತೀನಿ.
ಸತ್ಯಕ್ಕೆ ಜೋತುಬಿದ್ರೆ ಸೌಂದರ್ಯಾನೂ ಕಾಣುತ್ತೆ.
ಸಂಧಾನದ ಬೆಲೆನೂ ಗೊತ್ತಾಗುತ್ತೆ.’

ಸತ್ಯ ಶಿಲೆಗಿಂತ ಗಡಸು, ಹೂವಿಗಿಂತ ಮೃದು.

ಗಾಂಧಿ ಮುಂಬೈ ಆಕಾಶವಾಣಿಯ ೫೩೭.೬ ಕಿಲೋ ಸೈಕಲ್ ತರಂಗಾಂತರದಲ್ಲಿ ಪ್ರಸಾರವಾಗೊ
ಗಾಂಧಿವಂದನ ಕಾರ್ಯಕ್ರಮದಲ್ಲಿ ಭೆಟ್ಟಿಯಾಗಿ ಹೇಳಿದ:
ಮಹಾತ್ಮನ ಪದಗಳ್ನೂ ಜ್ಞಾನದ ತಕ್ಕಡೀಲಿ ಅಳೀಬೇಕು
ಅವನ ಪದಗಳೇನಾದ್ರೂ ಫೇಲಾದ್ರೆ ಅವನನ್ನೂ ಬಿಟ್ಟುಬಿಡಬೇಕು..’
ಆಕಾಶವಾಣಿಯ ಉದ್ಘೋಷಕರು ಘೋಷಿಸಿದರು:
‘ತಾಂತ್ರಿಕ ಕಾರಣಗಳಿಂದಾಗಿ ಗಾಂಧಿ ವಂದನ ಕಾರ್ಯಕ್ರಮದಲ್ಲಿ
ಆರು ಗಂಟೆ ಐವತ್ತೈದು ನಿಮಿಷದಿಂದ ಆರು ಗಂಟೆ ಎರಡು ನಿಮಿಷದವರೆಗೆ ಅಡಚಣೆಯುಂಟಾಯಿತು.
ಅಡಚಣೆಗಾಗಿ ವಿಷಾದಿಸುತ್ತೇವೆ.’

ಗಾಂಧಿ ಗುಡಿ ಒಂದರಲ್ಲಿ ನನ್ನ ಭೇಟಿಯಾದ, ದುಡ್ಡೆಣಿಸುತ್ತಿದ್ದ ಪಕ್ಕಾ ಮಾರವಾಡಿ ಥರ. 
(ಸುತ್ತಮುತ್ತ ನೋಡೋರಿಲ್ಲ ಅಂತ ನಿಕ್ಕಿಯಾದದ್ದೇ ನೀಲಿ ನೋಟನ್ನ ಸೊಂಟಕ್ಕೆ ಸಿಗಿಸ್ದ)
ಗಾಂಧಿ ಬೌದ್ಧಮಠದಲ್ಲಿ ಸಿಕ್ಕಾಗ ಚಿಲ್ಲಿ ಬೀಫ್ ತಿಂತಿದ್ದ
ಚರ್ಚಿನಲ್ಲಿ ನೋಡಿದಾಗ ವಾರವಾರವೂ ಕ್ಷಮಿಸೋ ಏಸು ಎದುರು ಮಂಡಿಯೂರಿ ಪ್ರಾರ್ಥಿಸುತ್ತಿದ್ದ
ಬೆತ್ತಲೆ ಫಕೀರ ಗಾಂಧಿ ಮಸೀದೀಲಿ ಸಿಕ್ಕಾಗ ಮತಾಂತರಗೊಳ್ಳತಾ ಇದ್ದ

ಬಾಬಾಸಾಹೇಬರ ಜಾಗೃತ ಭಾರತದಲ್ಲಿ ಭೇಟಿಯಾಗಿ ಹೇಳ್ದ:
‘ಹರಿಜನ ಕಲ್ಯಾಣ ನನ್ನ ಉಳಿವಿನ ಇನ್‌ಸ್ಟಿಂಕ್ಟ್. ನನಗೆ ಬೇಡ ಪುನರ್ಜನ್ಮ
ಆದರೆ ಮತ್ತೆ ಹುಟ್ಟುವುದೇ ಹೌದಾದರೆ ಅಸ್ಪೃಶ್ಯನಾಗಿ ಹುಟ್ತೀನಿ 
ಅವರ ದುಃಖ ಅವಮಾನ ಯಾತನೆನ ನಾನೇ ಅನುಭವಿಸಿ ತಿಳೀತೀನಿ.
ಅಸ್ಪೃಶ್ಯತೆ ಉಳಿದುಬರೋದಾದರೆ ಅದಕಿಂತ ಹಿಂದೂಯಿಸಂ ಅಳಿಯೋದೇ ಮೇಲು.’
ಹೀಗೆ ಹೇಳಹೇಳ್ತ ಭಾರತಾಂಬೆಯ ಗುಡೀಲಿ ಮಿಂದು ಗಂಗಾನದೀಲಿ ಕಾಲಿಳಿಬಿಟ್ಟ

ಸಾಣೆ ಗುರೂಜಿಯ ಅಂತರಭಾರತಿ ಶಾಲೇಲಿ ಅಸಹಾಯಕ ಮಕ್ಳಿಗೆ
ಶ್ಯಾಮನ ಕತೆ ಹೇಳ್ತ ಗಾಂಧಿ ಭೆಟ್ಟಿಯಾದ
ಅವರು ಅವ್ವಂದಿರ ಸುಲಿದು ವಂಚಕ ಅಪ್ಪಂದಿರಿಗೆ ಜೈಜೈ ಅಂತಿದ್ರು
ಶ್ಯಾಮನ ತಾಯಿ ತಪ್ಪದೆ ನಿರೋಧ್ ಬಳಸಿ ಅಂತ ಹೇಳಿದ್ಲು 

ಜನನಿಬಿಡ ರಸ್ತೇಲಿ ಹೇಮಾಮಾಲಿನಿ ನೆನಪಲ್ಲಿ ಹಸ್ತಮೈಥುನದಲ್ಲಿ ತೊಡಗಿದ್ದ ಗಾಂಧಿ ಕಂಡ
ಅದು ದೇಶದ ಮೊದಲ್ನೆ ಬೀದಿ ನಾಟಕ
ಅಹಿಂಸೆಯ ಇನ್ನೊಂದು ಪ್ರಯೋಗ
ಟ್ಯಾಗೋರರ ಗೀತಾಂಜಲೀಲಿ ಗಾಂಧಿ ಸಿಕ್ಕ
ಗೋಲಪೀಠ ಕುರಿತು ಕವಿತೆ ಬರೀತಿದ್ದ
ಬಾಬಾ ಅಮ್ಟೆಯ, ಅಂಗವಿಕರ ಏಕಾತ್ಮ ಭಾರತ್ ಕಾರ್ಯಕ್ರಮವೊಂದರಲ್ಲಿ ಸಿಕ್ಕ
‘ಭಿಕ್ಷೆಗಾಗಿ ಕೈಚಾಚಬಾರ‍್ದು. ದಾನ ಒಬ್ಬನ್ನ ದುರ್ಬಲನನ್ನಾಗಿಸುತ್ತೆ..’
ಅನ್ನುತ್ತ ಅಮೆರಿಕನ್ ಡಾಲರುಗಳಲ್ಲಿ ಬರೆದ ಚೆಕ್ಕನ್ನು ಇಸ್ಕಂಡ

ಗಾಂಧಿನ ಕಂಡೆ
ಭಗವಾನ್ ರಜನೀಶನ ಧ್ಯಾನಕೇಂದ್ರದಲ್ಲಿ
‘ಲೈಂಗಿಕತೆಯಿಂದಲೇ ತೃಪ್ತಿ’ ಎನ್ನುತ್ತ
ಮೇಕೆ ಕಡೆ ತಿರುಗ್ತ ಇರುವಾಗ

ಗಾಂಧಿ ಭೆಟ್ಟಿಯಾದ
ಕಾರ್ಲ್ ಮಾರ್ಕ್ಸ್‌ನ ಟೊಯೊಟಾ ಡ್ರೈವ್ ಇನ್ ಥಿಯೇಟರಿನಲ್ಲಿ
‘ಜಗದ ಶ್ರಮಿಕರೇ ಒಂದಾಗಿ’ ಸಿನಿಮಾ ನೋಡಿ ಕಾಲಹರಣ ಮಾಡ್ತಿದ್ದಾಗ..

ಗಾಂಧಿ ಸಿಕ್ಕ
ಮಾವೋನ ಲಾಂಗ್ ಮಾರ್ಚ್‌ನಲ್ಲಿ
ರೈತನ ವೇಷ ಹಾಕಿ
ಹೊಲ ಬಿಟ್ಟು ಪಟ್ಣದ ಕಡೆ ಹೋಗ್ತಿದ್ದ

ಹೀಗೆ ಗಾಂಧಿ ಎಲ್ಲೆಲ್ಲೊ ಸಿಕ್ಕ
‘ಜೈ ಬಿರ್ಲಾ’ ಅಂತ ಘೋಷಣೆ ಕೂಗ್ತ ಬಟ್ಟೆ ಗಿರಣಿ ಗೋಡೆಯೇರ‍್ತ ಇರೋವಾಗ
ಕಪ್ಪು ಗಾಂಧಿಯ ಕ್ಲಿನಿಕ್ಕಿನಲ್ಲಿ ಸಾವರ್ಕರ್ ಸ್ಯಾಂಪಲ್ ಬಾಟಲನ್ನು ಮಾರ‍್ತಾ ಇರೋವಾಗ
ಅಟಲ ಬಿಹಾರಿ ವಾಜಪೇಯಿ ಗಾಂಧಿಯನ್ ಸಮಾಜವಾದನ ಹೊಗಳ್ತ ಆಳ್ತಾ ಇದ್ದಾಗ

ಗಾಂಧಿ ಭೇಟಿಯಾದ
ಚಾರು ಮುಜುಂದಾರನ ನಕ್ಸಲ್ ಬರಿಯಲ್ಲಿ
ಅವ ಘೋಷಿಸ್ತಿದ್ದ:
‘ನಮ್ಮ ಬಾರಿ, ನಿಮ್ಮ ಬಾರಿ, ಎಲ್ಲ ಬಾರಿ - ನಕ್ಸಲ್ ಬಾರಿ
ಭಾರತ ಕೆಂಪಾಗಕ್ ಹೊರಟಿದೆ ಕೆಂಪೊಕೋಟೆಯ ಮೇಲೆ..’

ನೊಬೆಲ್ ಶಾಂತಿ ಪ್ರಶಸ್ತಿನ ಬ್ರೆಝ್ನೆವ್‌ನಿಂದ ಪಡೀತಾ ಕ್ರೆಮ್ಲಿನ್‌ನಲ್ಲಿ ಗಾಂಧಿ ಭೇಟಿಯಾದ
ರೇಗನ್ನನ ಶ್ವೇತಭವನದಲ್ಲಿ ರೇಗನ್ ನ್ಯೂಟ್ರಾನನ್ನ ಆಕ್ಟಿವೇಟ್ ಮಾಡ್ತ ಸಿಕ್ಕಿದ
ಸತ್ತವರ ಚರಸ್ಥಿರಾಸ್ತಿಗಳ ಜಗತ್ತನ್ನ ವಿವರಿಸ್ತ ರೇಗನ್ನನನ್ನು ಸಂತೈಸುತ್ತಿದ್ದ ಗಾಂಧಿ 
ಛತ್ರಪತಿ ಶಿವಾಜಿ ಬೀಡಿ ಸೇದುತ್ತ ಭೇಟಿಯಾದ
ಫೋರಾಸ್ ರಸ್ತೆಯಲ್ಲಿ ರೂಂ ನಂ.೮೦ರಲ್ಲಿ ಜನತಂತ್ರವೆಂಬ ವೇಶ್ಯೆ ಜೊತೆಗೆ
ಅವಳಂದ್ಲು:
ನನಗೇನು ಚಿಕಿತ್ಸೆ ಕೊಡಿಸ್ತಿ ನೀನು?
ಯಾವ ಪ್ರಯೋಗ ಮಾಡ್ತಿ ನೀನು?
ಯಾವ ಬೆಳಕು ಚೆಲ್ಲಫನಿದ್ದಿ?

ಗಾಂಧಿ ಸಿಕ್ಕ
ಪೂಜ್ಯ ಸರಸಂಘಚಾಲಕ ಬಾಳಾಸಾಹೇಬ್ ದೇವೋರಾನ ಸಂಘಸ್ಥಾನದಲ್ಲಿ
ಅರೆ ಇಜಾರ ಹಾಕ್ಕಂಡು, ೬೧-೬೨ ಸರ್ತಿ ಉಟಬೈಸ್ ಹೊಡೀತ ಅಖಂಡ ಹಿಂದುಸ್ತಾನಕ್ಕಾಗಿ ಘೋಷಣೆ ಕೂಗ್ತ ಹೇಳ್ತಿದ್ದ:
‘ನಾನು ಹಿಂದೂ, ನನಗದರ ಬಗ್ಗೆ ಹೆಮ್ಮೆಯಿದೆ
ವಂದೇ ಮಾತರಂ.
ಕಾನ್ವೆಂಟ್ ಶಾಲೆಯ ಕಂದಮ್ಮಗಳಿಗೆ ಪಾಠ ಹೇಳುವೆ, ಅಮೆರಿಕ ಇಂಗ್ಲೆಂಡುಗಳಲ್ಲಿ ನೆಲೆಸುವಂತೆ ಮಾಡುವೆ..’

ಜಮಾತೆ ಇಸ್ಲಾಮಿಯ ಗೋಘರಿ ಮೊಹಲ್ಲಾದಲ್ಲಿ ಗಾಂಧಿ ಸಿಕ್ಕ
ಪೆಟ್ರೋಡಾಲರಿನ ಥ್ರೀ ಇನ್ ಒನ್‌ನಲ್ಲಿ ಇಂಡ್ಯಾ ಪಾಕಿಸ್ತಾನ ಕ್ರಿಕೆಟ್ ಕಾಮೆಂಟ್ರಿ ಕೇಳ್ತಿದ್ದ
ಪಾಕಿಸ್ತಾನ ಇಂಡ್ಯಾನ ಎರಡು ವಿಕೆಟ್ಟಿಂದ ಸೋಲಿಸ್ದಾಗ
ಗಾಂಧಿ ನಮಾಜು ಸಲ್ಲಿಸಿದ, ಮೊಹಲ್ಲಾದ ಹಸಿರು ಬೋರ್ಡುಗಳಿಗೆಲ್ಲ ಹಾರ ಹಾಕ್ದ

ಸದಾಶಿವ ಪೇಟೆಯ ಎನ್. ಜಿ. ಗೋರೆಯ ವಾಡೆಲೊಂದ್ಸಲ ಗಾಂಧಿ ಸಿಕ್ಕ
‘ಸ್ವತಂತ್ರ ಬಂದು ಇಷ್ಟೆಲ್ಲ ವರ್ಷಗಳಾದರೂ, ಭಾರತ ನನ್ನ ದೇಶ
ಎಲ್ಲ ಭಾರತೀಯರು ನನ್ನ ಸೋದರಸೋದರೀರು ಅಂತ ಆಣೆಯಿಡಬೇಕಾಗಿದೆ
ನನ್ನ ದೇಶ ಅಂದ್ರೆ ನಂಗೆ ಪ್ರೀತಿ, ಅದರ ಶ್ರೀಮಂತ ವೈವಿಧ್ಯಮಯ ಸಂಸ್ಕೃತಿ ಬಗ್ಗೆ ಹೆಮ್ಮೆ
ಅದ್ರ ಯೋಗ್ಯತೆಗೆ ತಕ್ಕಂತೆ ಬಾಳಕ್ಕೆ ಸದಾ ಪ್ರಯತ್ತ ಮಾಡ್ತಿನಿ 
ನನ್ನ ಪಾಲಕರು, ಗುರುಹಿರಿಯರ ಗೌರವಿಸಿ ಉದಾರವಾಗಿ ನಡಕೋತೀನಿ 
ನನ್ನ ದೇಶ, ನನ್ನ ಜನಕ್ಕೆ ಮೀಸಲು
ಇದು ನಾಚಿಕೆ ವಿಷಯ,
ಆದರೆ ಈ ಯೋಚನೆ ನಂಗೆ ಬಂದದ್ದು ಲಂಡನ್ನಿನ ಥೇಮ್ಸ್ ನದಿ ದಂಡೆ ಮೇಲೆ..’

ಇರ‍್ವಿನ್ನನ ವೈಸರಾಯ್ ಹೌಸಿನಲ್ಲಿ ಗಾಂಧಿ ಭೇಟಿಯಾದ
ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ರೊಕ್ಕ ಎಣಿಸ್ತಿದ್ದ
ಸ್ವಘೋಷಿತ ನೇತಾಜಿ ರಾಜ್ ನಾರಾಯಣರ ಕುಟುಂಬ ಕಲ್ಯಾಣ ಕೇಂದ್ರದಲ್ಲೊಮ್ಮೆ ಸಿಕ್ಕ
ನಗ್ನ ಎದೆ ಬಿಟ್ಕಂಡು ಹಾಸಿಗೆ ಮೇಲೆ ಹೊರಳಾಡ್ತಿದ್ದ, ಪಿಸ್ತ ಬಾದಾಮಿ ತಿಂತ ಮಸಾಜ್ ಮಾಡುಸ್ಕತಿದ್ದ 

ಗಾಂಧಿನ ಆಲ್ ಇಂಡಿಯಾ ಹಿಜ್ರಾ ಕಾನ್ಫರೆನ್ಸಲ್ಲಿ ನೋಡ್ದೆ
ಕುಟುಂಬ ಯೋಜನೆ ಬಗ್ಗೆ ಉಪನ್ಯಾಸ ಕೊರೀತಿದ್ದ
ಚವಾಣ್ ಖಾಲಿ ಕುರ್ಚಿ ಕಡೆ ಆಸೆಯಿಂದ ನೋಡ್ತ ಒಂದು ರಾಜಕೀಯ ಆಟ ಕಟ್ಟತಿದ್ದ.

ಜನಸಾಮಾನ್ಯನ ನೆಲದಲ್ಲಿ ಗಾಂಧಿ ಸಿಕ್ಕ
ಅನಾಥ ಮಕ್ಳ ಜೊತೆ ಗಂಡಹೆಂಡತಿ ಆಟ ಆಡ್ತಿದ್ದ
ಅವ ಹೇಳಿದ:
‘ಜಾತ್ಯತೀತ ದೇಶದ ವ್ಯಾಖ್ಯಾನ ಏನು?
ಪಾವಿತ್ರ್ಯ ಎಂಬೊ ಪದ ಮರೆತುಬಿಡು, ಅವನ್ನೆಲ್ಲ ತೆಗೆದಾಚೆ ಒಗೆದುಬಿಡು’

ಹಾಜಿ ಮಸ್ತಾನನ ಆಳ್ವಿಕೆಲ್ಲಿ ಗಾಂಧಿ ಸಿಕ್ಕ
ಪಂಚೆನೂ ಬಿಚ್ಚಾಕಿ ತನ್ನ ಘನತೆ ಕಳಕೊಂಡು.
ಅವನ ಪಂಚೆಗೆ ನಾನೇನೂ ಮರುಳಾಗಿರ‍್ಲಿಲ್ಲ
ಪಂಚೆಯೋ ಧೋತಿಯೊ ಪ್ಯಾಂಟೊ
ಸತ್ಯದೊಡನೆ ಪ್ರಯೋಗ ಹೇಗಾದ್ರೂ ಮಾಡಬೋದು 
ಕವಿತೆ ಮೂಲಕನಾದ್ರೂ 

ಬಾಟಾ ಫ್ಯಾಕ್ಟರೀಲಿ ಚಪ್ಪಲಿ ಹೊಲಿತಾ ಗಾಂಧಿ ಕಂಡ
ಬಾಬೂಜಿ ಅವನಿಗೆ ಒಬ್ಬ ಚಮಾರ ಯಾವತ್ತೂ ಈ ದೇಶದ ಪ್ರಧಾನಿಯಾಗಲಾರ ಅಂತ ಹೇಳ್ತಿದ್ರು 

ಮೊರಾರ್ಜಿಯ ಓಶಿಯಾನಾದಲ್ಲಿ ಗಾಂಧಿ ಸಿಕ್ಕ
ಸ್ವಮೂತ್ರಪಾನದಿಂದ ಮತ್ತೇರಿ ಹೇಳಿದ:
‘ಹೆಂಗಸರೆಲ್ಲ ಮೂರ್ಖರು, ವಿವೇಕಶೂನ್ಯರು
ನಾನು ಯಾರ ಬಗ್ಗೆ ಹೇಳ್ತಿದಿನಿ ಅಂತ ನಿಂಗೆ ತಿಳಿತಲ್ಲ?’

ಗಾಂಧಿ ನೆಹರುವಿನ ತೀನ್ ಮೂರ್ತಿಲಿ ಸಿಕ್ಕಿದ
ಭವಿಷ್ಯದತ್ತ ಸನ್ನೆ ಮಾಡಿ ಹೇಳಿದ:
‘ನೀನು ನಂಬಿಕಸ್ಥ, ಸಿಂಹಾಸನನ ನಿನ್ನ ನಂತ್ರ ಇಂದಿರಾಗೆ ಕೊಡು.’
ಚರಣಸಿಂಗನ ಸೂರಜ್ ಕುಂಡದಲ್ಲಿ ಸಿಕ್ಕ ಗಾಂಧಿ
ಜನರ ಕುರಿತು ಮಾತಾಡ್ದ: 
‘ನನ್ನ ಬದುಕಿನ ಗುರಿ ಈಡೇರಿದೆ’

ಗಾಂಧಿನ ಕಮಲೇಶ್ವರನ ಪರಿಕ್ರಮದಲ್ಲಿ ನೋಡಿದೆ
ಹೇಳಿದ: ವಂಚಿತರಿಗೆ, ಜನಸಾಮಾನ್ಯರಿಗೆ ಮನರಂಜನೆ ತಲುಪಿಸೋ ನನ್ನ ಕನಸು
ನಿಜವಾಗಿದೆ. (ಕ್ಯಾಮೆರಾಮನ್ ಗಾಂಧಿಯ ಪಂಚೆ ಮತ್ತು ಬೆತ್ತದ ಕೋಲನ್ನ ಫೋಕಸ್ ಮಾಡ್ತಿದ್ದ.)

ಗಾಂಧಿ ರತನ್ ಖಾತ್ರಿಯ ಅಡ್ಡಾದಲ್ಲಿ ಕಂಡ
ರಾಷ್ಟ್ರೀಯ ಏಕತೆಯ ಮೂರು ಕಾರ್ಡುಗಳನ್ನು ಮಟ್ಕಾದಲ್ಲಿ ಎಳೀತಿದ್ದ

ವಿನೋಬನ ಧಾರಾವೀಲಿ ಗಾಂಧಿ ಸಿಕ್ಕಿದ
ಎಲ್ಲ ಭೂಮಿಯೂ ಗೋಪಾಲನದು ಅಂಬೊ ಪಠಣ ಕೇಳ್ತಿತ್ತು 
ಕಂಚಿನ ಕಲಶ ಹಿಡಿದು ಹೆದ್ದಾರಿ ಬದಿ ಸಾಲಾಗಿ ನಿಂತು
ಕ್ರುಶ್ಚೇವನಿಗೆ ಗೌರವ ವಂದನೆ ಸಲ್ಲಿಸಲು ಕಾಯ್ತಿದ್ದ

ಇಂದಿರಾ ಗಾಂಧಿಯ ನಂ.೧, ಸಫ್ದರ್ ಜಂಗ್ ರಸ್ತೆಯ ನಿವಾಸದಲ್ಲಿ ಗಾಂಧಿ ಭೇಟಿಯಾದ
ಪಿತೂರಿ ಮಾಡಿ ಅವಳ ಭಟ್ಟಂಗಿಗಳು ಅವನ ಒದ್ದೋಡಿಸಿದರು
ಆಗ ಕೂಗಿದ:
ರಾಷ್ಟ್ರನೇತಾ - ಇಂದಿರಾ ಗಾಂಧಿ
ಯುವ ನೇತಾ - ಸಂಜಯ್ ಗಾಂಧಿ
ಮಕ್ಕಳ ನೇತಾ - ವರುಣ್ ಗಾಂಧಿ
ಧಿಕ್ಕಾರ ಮಹಾತ್ಮಾ ಗಾಂಧಿ

ಗಾಂಧಿ ಅಜಿತನಾಥ ರೇನ ಕೋರ್ಟ್ ರೂಮಲ್ಲಿ ಸಿಕ್ಕಿದ
ಅಪರಾಧಿಯ ಕಟಕಟೇಲಿ ನಿಂತು
ಸತ್ಯದೊಡನೆ ಪ್ರಯೋಗ ನಡೆಸಿ ದೇಶಕ್ಕೆ ಅಪಾಯ ಒಡ್ಡಿದಾನೇಂತ ವಿಚಾರಣೆ ನಡೀತಿತ್ತು. 
ದೇಶದ್ರೋಹದ ಆಪಾದನೆ ಸಾಬೀತಾಗಿ ಸಾಯೋವರೆಗು ಗಲ್ಲಿಗೇರಿಸಬೇಕು ಅನ್ನೊ ಶಿಕ್ಷೆ ಕೊಟ್ರು

ಅತ್ರೆಯ ಶಿವಶಕ್ತೀಲಿ ಗಾಂಧಿನ ನೋಡ್ದೆ
ಗಾಂಧಿ ಬಗ್ಗೆ ಒಂದು ಸಂಪಾದಕೀಯ ಬರೀತಿದ್ದ
ಗಾಂಧೀಲಿ ದೇವರನ್ನ ಕಂಡ್ವಿ 
ನಮ್ಮನ್ನು ಆಶೀರ್ವದಿಸಲಾಯ್ತು
ಈಗ, ಯುಗಗಳವರೆಗೆ ಭೂಮಿ ಮೇಲೆ ದೇವರು ಕಾಣಲಾರ
ಸ್ವದೇಶಿಯಾಗಿ ಬದುಕಿ, ಸ್ವದೇಶಿ ಬದುಕು ಬದುಕಿ
ಹೀಗೆ ಹೇಳಹೇಳ್ತ ಅವ ದೇಶಾನ ಅಪ್ಪಿಕೊಂಡ

ರಾಜಘಾಟಿನಲ್ಲಿ 
ತನ್ನ ಕೈನ ವಸಂತ ಡಿ. ಗುರ್ಜರನ ಹೆಗಲ ಮೇಲಿಟ್ಟ
ಗಾಂಧಿ ಹೇಳಿದ:
ದೇವರು ಸತ್ತಿದಾನೆ, ಒಬ್ಬ ಒಳ್ಳೆ ವ್ಯಕ್ತಿ ಸಹಾ
ಈಗ ಸೈತಾನನ ಈ ಲೋಕದಿಂದ
ಸತ್ತ ದೇವರು ಪಾರಾಗೋ ಹಾಗೇ ಇಲ್ಲ
ಉತ್ತಮ ವ್ಯಕ್ತಿಯೂ ಪಾರಾಗೋ ಹಾಗಿಲ್ಲ
ಹೀಗೆ ಹೇಳ್ತ ಕ್ಷಣಾರ್ಧದಲ್ಲಿ ಅವ ತನ್ನ ಸಮಾಧಿಯೊಳಗೆ ಹೋಗೇಬಿಟ್ಟ

 

ಮನು v/s ಅಂಬೇಡ್ಕರ್ : ಮುಖಪುಟ ಯಾವುದಿರಲಿ?

ಮನು v/s ಅಂಬೇಡ್ಕರ್ ನಮ್ಮ ಹೊಸ ಪುಸ್ತಕ. ಜಿ ಕೆ ಗೊವಿಂದರಾವ್ ಲೇಖಕರು. ನನ್ನ ಇಷ್ಟದ ಕಲಾವಿದ ಅರುಣಕುಮಾರ ಮೂರು ಚಿತ್ರ ಮಾಡಿದ್ದಾರೆ. ಹೇಳಿ ಯಾವುದಿರಲಿ?
ದಲಿತ ದೌರ್ಜನ್ಯ: ಪ್ರತಿಭಟನೆಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿ ದಿಂಗಾಲೇಶ್ವರ ಸ್ವಾಮಿಯ ಅಕ್ರಮ, ಅನ್ಯಾಯ, ಶೋಷಣೆ ಪ್ರತಿಭಟಿಸಿದ ಕಾರಣಕ್ಕಾಗಿ ದಲಿತರಾದ   ಗಂಟಿಚೋರ ಸಮುದಾಯಕ್ಕೆ ಸೇರಿದ ಜನರ ಮೇಲೆ ಪಂಚಾಯತ ಚುನಾವಣಾ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಅಲ್ಲಿನ ದಿಂಗಾಲೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಸವರ್ಣೀಯರು 07.06.15 ರಂದು ದೌರ್ಜನ್ಯ ನಡೆಸಿದ ಘಟನೆಯಲ್ಲಿ ಮರಣಾಂತಿಕ ಹಲ್ಲೆಗೊಳಾದ ಮಹಾಂತಪ್ಪ ಗುಡಗೇರಿ ಎಂಬುವವರು ಜೂನ 17 ರಂದು ಮೃತರಾಗಿದಾರು. ಘಟನೆಗೆ ಸಂಬಂದಿಸಿ ಪ್ರಮುಖ ಆರೋಪಿ ದಿಂಗಾಲೇಶ್ವರ ಸ್ವಾಮಿಯ ಬಂಧನಕ್ಕೆ ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಹಲವಾರು ಪ್ರತಿಭಟನೆಗಳು ನಡೆಸಿದರೂ ಈವರೆಗೆ ಆರೋಪಿಯನ್ನು ಬಂಧಿಸಲು ಸರ್ಕಾರ ಮುಂದಾಗುತ್ತಿಲ್ಲ. ದಲಿತನ ಸಾವಿಗೆ ಯೋಗ್ಯ ಪರಿಹಾರವನ್ನು ಜಿಲ್ಲಾಡಳಿತ ನೀಡುತ್ತಿಲ್ಲ, ಈ ಸಂಗತಿಯನ್ನು ಮುಂದಿಟ್ಟುಕೊಂಡು  02.07.15 ರಂದು ಬೆಳಗಾಯಿ ಸುವರ್ಣ ಸೌಧದ ಎದುರು ಘಂಟಿಚೋರ ಸಮುದಾಯಕ್ಕೆ ಸೇರಿದ ಸಾವಿರಾರು ಜನರು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸುರಿಯುವ ಮಳೆಯಲ್ಲಿಯೇ ಬಾರಿ ಪ್ರತಿಭಟನೆಯನ್ನು ನಡೆಸಿದರು. ಈ ಜನಹೋರಾಟವನ್ನು ಸಿಪಿಐ(ಎಂ)  ಸಿಪಿಐ ಪಕ್ಷಗಳು ಸಂಪೂರ್ಣವಾಗಿ ಬೆಂಬಲಿಸಿದ್ದವು.

ಈ ಸಮುದಾಯ ದಲಿತ ಬುಡಕಟ್ಟು ಜನಾಂಗಕ್ಕೆ ಸೇರಿದ್ದು ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರ ವಿರುದ್ಧ ಧೀರೋದ್ಧಾತ ಹೋರಾಟವನ್ನು ನಡೆಸಿದೆ. ಇಂದು ಕರ್ನಾಟಕದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳಲ್ಲಿ ಇದು ಒಂದು. ಇಂತಹ ಸಮುದಾಯದ ಮೇಲೆ ಬಲಾಡ್ಯರು ನಡೆಸುತ್ತಿರುವ ಅಮಾನುಷ ದಾಳಿಗಳು ಮುಂದಿನ ದಿನಗಳಲ್ಲಿ ನಡೆಯದಿರಲಿ. ದಲಿತರ ಸಾವಿಗೆ ನ್ಯಾಯ ಸಿಗುವವರೆಗೂ ನಡೆಯುವ ಈ ಹೋರಾಟಕ್ಕೆ ನಾಡಿನ ಜನ ಬೆಂಬಲ ನೀಡಬೇಕೆಂದು ಕೋರುವೆ.Wednesday, July 01, 2015

ವೈದ್ಯ ಸಾಹಿತಿ: ಮರದೊಳಗೆ ಮರ ಹುಟ್ಟಿ..


ಡಾ ಎಚ್ ಎಸ್ ಅನುಪಮಾ


ವೈದ್ಯರಾಗಿದ್ದು, ಲೇಖಕರಾಗಿಯೂ ಪ್ರಸಿದ್ಧರಾದ ಅನೇಕರ ಪಟ್ಟಿ ನಮ್ಮ ಮುಂದಿದೆ. ಪುರುಸೊತ್ತೇ ಸಿಗದ ವೈದ್ಯಕೀಯ ವೃತ್ತಿಯಲ್ಲಿರುವವರು ಸಮಯ ಮತ್ತು ಏಕಾಗ್ರತೆಯನ್ನು ಬೇಡುವ ಸಾಹಿತ್ಯದ ಜೊತೆಗಿನ ನಂಟನ್ನು ಹೊಂದಲು ಹೇಗೆ ಸಾಧ್ಯವಾಗುತ್ತದೆ ಎಂಬುದು ಎಲ್ಲರ ಅಚ್ಚರಿ. ವಿಜ್ಞಾನ ವಿಷಯ ಮತ್ತು ಕೊನೆಯಿರದ ಓದು ವೈದ್ಯಕೀಯ ವಿದ್ಯಾರ್ಥಿಗಳ ಅಲ್ಪ ಸ್ವಲ್ಪ ಸಾಹಿತ್ಯಾಸಕ್ತಿಯನ್ನೂ ದೂರ ಮಾಡುವಂತಿರುತ್ತದೆ. ನಂತರ ವೃತ್ತಿಯಲ್ಲಿ ನಿರತರಾದ ಹಾಗೆ ಜೀವದ ಜೊತೆಗಿನ ಹೋರಾಟದಲ್ಲಿ, ಸತತ ಜನ ಸಂಪರ್ಕದ ಗಲಾಟೆಯಲ್ಲಿ, ಖಾಸಗಿ ಸಮಯ ಕಡಿಮೆ ದೊರಕುವುದರಿಂದ ಬಹುಪಾಲು ವೈದ್ಯರು ಓದು - ಸಾಹಿತ್ಯದೆಡೆಗೆ ವಿಮುಖತೆ ಬೆಳೆಸಿಕೊಳ್ಳುತ್ತಾರೆ. ಎಷ್ಟೆಂದರೆ ಅಂಥದಕ್ಕೆಲ್ಲ ಸಮಯ ಕಳೆಯುವುದು ವ್ಯರ್ಥ ಹಾಗೂ ವೃತ್ತಿಸಂಹಿತೆಯಲ್ಲ ಎನ್ನುವಷ್ಟರ ಮಟ್ಟಿಗೆ. ಈ ತೆರನ ಆಂತರಿಕ ವಿರೋಧಗಳಿಗೆ ಹೊರತಾಗಿಯೂ ಬರೆದ/ಬರೆಯುತ್ತಿರುವ ವೈದ್ಯರ ಸಾಹಿತ್ಯ ಪ್ರೀತಿಯ ಮೂಲ ಯಾವುದು?
     
ಪ್ರಾಚೀನ ಕಾಲದಿಂದಲೂ ವೈದ್ಯಕೀಯ ಮತ್ತು ಬರಹ ಜೊತೆಗೂಡಿವೆ. ಇದು ದೇವದೇವತೆಗಳ ಜವಾಬ್ದಾರಿ ಕಲ್ಪಿಸಿಕೊಳ್ಳುವುದರಲ್ಲೂ ಕಂಡುಬರುತ್ತದೆ. ಗ್ರೀಕ್ ಪುರಾಣಗಳ ಅಪೊಲೊ ಮತ್ತು ಅಥೆನೆ ದೇವತೆಗಳು ವೈದ್ಯಕೀಯ ಮತ್ತು ಕಾವ್ಯದ ದೇವರುಗಳು. ಹಾಗೆಯೇ ಕೆಲ್ಟಿಕ್ ಜನಾಂಗದ ಬ್ರಿಗಿಟ್ ದೇವತೆಯು ಕಾವ್ಯ, ವೈದ್ಯಕೀಯ ಮತ್ತು ಶ್ರಮಿಕರ ದೇವತೆ. ಅತಿ ಹಳೆಯ ವೈದ್ಯಕೀಯ ಸಂಹಿತೆಗಳನ್ನು ಬರೆದ ಚರಕ - ಸುಶ್ರುತರೂ ಬರಹಗಾರರೇ. ಗ್ರೀಕ್ ತತ್ವಜ್ಞಾನಿ ಹಿಪ್ಪೋಕ್ರೆಟಿಸ್ ವೈದ್ಯ.

ಆಧುನಿಕ ವಿಶ್ವ ಸಾಹಿತ್ಯದಲ್ಲಿ ವೈದ್ಯ ಬರಹಗಾರ ಎಂದೊಡನೆ ಥಟ್ಟನೆ ಹೊಳೆಯುವ ಹೆಸರು ಖ್ಯಾತ ರಷಿಯನ್ ಲೇಖಕ ಆಂಟನ್ ಚೆಕಾಫ್. ಆ ಕಾಲದಲ್ಲಿ ಮಾರಣಾಂತಿಕವಾಗಿದ್ದ ಟಿಬಿಯಿಂದ ಅಕಾಲ ಮರಣಕ್ಕೀಡಾದ ವೈದ್ಯ ಸಾಹಿತಿ ಅವನು. ಅವನಲ್ಲದೇ ಅನೇಕ ಪ್ರಮುಖ ಇಂಗ್ಲಿಷ್ ಬರಹಗಾರರು ವೃತ್ತಿಯಿಂದ ವೈದ್ಯರು. ಹಲವಾರು ಹೆಸರುಗಳಿರುವ ಉದ್ದನೆಯ ಪಟ್ಟಿಯಲ್ಲಿ ಕೆಲವರನ್ನು ಹೆಸರಿಸುವುದಾದರೆ: ರಷಿಯನ್ ಲೇಖಕ ಮಿಖಾಯಿಲ್ ಬಲ್ಗಾಕೊವ್, ಸೋಮರ್‌ಸೆಟ್‌ಮಾಮ್, ‘ಕೋಮಾ’ ಖ್ಯಾತಿಯ ರಾಬಿನ್‌ಕುಕ್, ‘ಜುರಾಸಿಕ್ ಪಾರ್ಕ್’ ಖ್ಯಾತಿಯ ಮೈಕೆಲ್ ಕ್ರಿಕ್‌ಟನ್, ಷೆರ್ಲಾಕ್ ಹೋಮ್ಸ್ ಜನಕ ಸರ್ ಆರ್ಥರ್ ಕಾನನ್ ಡಾಯ್ಲ್, ಇಂಗ್ಲಿಷ್ ಕವಿ ಜಾನ್ ಕೀಟ್ಸ್, ಮಲೇರಿಯಾ ಪತ್ತೆ ಮಾಡಿದ ರೊನಾಲ್ಡ್ ರಾಸ್, ಅಮೆರಿಕದ ಪ್ರಬಂಧಕಾರ, ಕವಿ ವಿಲಿಯಂ ಕಾರ್ಲೋಸ್ ವಿಲಿಯಂ, ಆಲಿವರ್ ಗೋಲ್ಡ್‌ಸ್ಮಿತ್, ಡೇವಿಡ್ ಲಿವಿಂಗ್ ಸ್ಟೋನ್, ಡೇನಿಯಲ್ ಮ್ಯಾಸನ್, ಕ್ರಿಸ್ ಆಡ್ರಿಯನ್ ಇವರುಗಳಲ್ಲದೇ ಈಗ ಬರೆಯುತ್ತಿರುವವರಲ್ಲಿ ಆಫ್ಘನಿಸ್ತಾನ ಮೂಲದ ಅಮೆರಿಕನ್ ವೈದ್ಯ ಖಾಲಿದ್ ಹೊಸೇನಿ, ಬಾಂಗ್ಲಾದ ತಸ್ಲೀಮಾ ನಸ್ರೀನ್, ಭಾರತೀಯ ದೀಪಕ್ ಚೋಪ್ರಾ ಇವರೆಲ್ಲರೂ ವೃತ್ತಿಯಿಂದ ವೈದ್ಯರು. ಅಷ್ಟೇ ಅಲ್ಲ, ಸಾಹಿತಿ ಎಂದು ಜಗತ್ತು ಒಪ್ಪದ, ‘ಮೋಟಾರ್ ಸೈಕಲ್ ಡೈರೀಸ್’ ಎಂಬ ಪ್ರವಾಸದ ಟಿಪ್ಪಣಿಗಳಿಂದ ಹಲವರ ಮನದಲ್ಲಿ ಅಚ್ಚಳಿಯದೆ ನಿಂತ ಕ್ರಾಂತಿಕಾರಿ ಅರ್ನೆಸ್ಟೋ ಚೆಗೆವಾರ ಕೂಡಾ ವೈದ್ಯನೇ. ಕನ್ನಡದ ಮಟ್ಟಿಗೆ ಹಳೆಯ ತಲೆಮಾರಿನ ರಾಶಿ, ಅನುಪಮಾ ನಿರಂಜನ, ಬೆಸಗರಹಳ್ಳಿ ರಾಮಣ್ಣ, ಎಚ್.ಡಿ. ಚಂದ್ರಪ್ಪ ಗೌಡ ಅವರಲ್ಲದೆ ಈಗ ಕನ್ನಡದಲ್ಲಿ ಬರೆಯುತ್ತಿರುವ ಎಚ್. ವಿ. ವಾಸು, ಅಶೋಕ್ ಕುಮಾರ್ ಮೊದಲಾದ ಹಲವರಿದ್ದಾರೆ.
       ಇಷ್ಟು ದೊಡ್ಡ ಪಟ್ಟಿ ನೋಡಿದರೆ ವೈದ್ಯ ಲೇಖಕನಾಗಿ ಹೊಮ್ಮಿದ್ದು ಕೇವಲ ಆಕಸ್ಮಿಕ ಇರಲಿಕ್ಕಿಲ್ಲ ಎನಿಸುತ್ತದೆ. ಸೂಕ್ಷ್ಮ ಮನಸ್ಸಿಗೆ ವೈದ್ಯಲೋಕ ಏನೋ ಅಪರೂಪವಾದದ್ದನ್ನು ನೀಡಿ, ಬರಹಗಾರನಾಗಿ ರೂಪುಗೊಳ್ಳಲು ನೆರವಾಗಿರಬೇಕು. ಆ ಅಂಥ ಏನನ್ನು ಈ ವೃತ್ತಿ ನೀಡಬಹುದು?

ಉತ್ತಮ ವೈದ್ಯನಾಗಲು ತುಂಬ ಸೂಕ್ಷ್ಮ ಗ್ರಹಿಕೆ ಇರಬೇಕು. ಬದುಕಿನ ಬಗೆಗೆ ದೀರ್ಘ ಮುನ್ನೋಟ ಹೊಂದಿರಬೇಕು. ಒಬ್ಬನ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಲೇ ಅದರಿಂದ ದೂರ ನಿಂತು ಗಮನಿಸುವುದೂ ಗೊತ್ತಿರಬೇಕು. ಹೇಳುವುದಕ್ಕಿಂತ ಹೆಚ್ಚು ಕೇಳಲು ಕಲಿತಿರಬೇಕು. ಸಾವು ಮತ್ತು ಬದುಕುವ ಪ್ರೀತಿ ಎರಡೂ ಜೀವನದ ಅನಿವಾರ್ಯ ಗುರಿಗಳೆಂಬ ಅರಿವಿರಬೇಕು. ನಿರ್ದುಷ್ಟವಾಗಿ ಬದುಕನ್ನು ನೋಡಿ, ಇತರರ ನಡವಳಿಕೆಗಳ ಬಗೆಗೆ ಹಗುರ ತೀರ್ಮಾನಗಳನ್ನು ತಾಳದೇ, ಯಾವ ಅಭಿಪ್ರಾಯವನ್ನೂ ಹೇರದಂತೆ ಇರಬೇಕು. ಕುತೂಹಲದಿಂದ ಕೇಳುತ್ತಲೇ ನೂರು ಗುಟ್ಟುಗಳನ್ನು ಅಡಗಿಸಿಕೊಳ್ಳಬೇಕು. ಆಶಾವಾದಿಯಾಗಿರಬೇಕು ಹಾಗೆಯೇ ವಾಸ್ತವವಾದಿಯಾಗಿರಬೇಕು.

ಈ ಎಲ್ಲ ಗುಣಲಕ್ಷಣಗಳು ಉತ್ತಮ ಬರಹಗಾರನಿಗೂ ಇರಬೇಕಾಗುತ್ತದೆ ಅಲ್ಲವೇ?

ಬರಹಗಾರನಿಗೆ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಬಗೆಗೆ ಸ್ಪಷ್ಟ ಅರಿವಿರಬೇಕು. ಅಂತೆಯೇ ತನ್ನೊಳಗೆ ಏನು ನಡೆಯುತ್ತಿದೆಯೆಂದೂ ತಿಳಿದಿರಬೇಕು. ಒಳಹೊರಗಿನ ಬದಲಾವಣೆಗಳನ್ನು ಲೇಖಕ ಪ್ರಜ್ಞಾಪೂರ್ವಕ ಗಮನಿಸುತ್ತಿರುತ್ತಾನೆ. ಹಾಗೆಯೇ ವೈದ್ಯರೂ ಕೂಡಾ ತಮಗೆ ದೊರೆಯುವ ಅನಾಯಾಸ ಜನಸಂಪರ್ಕದಿಂದ ಸುತ್ತಮುತ್ತನ್ನು ಅರಿಯುವುದು ಕಷ್ಟವಲ್ಲ. ಪ್ರತ್ಯೇಕವಾಗಿ, ಏಕಾಂಗಿಯಾಗಿರಲಾರದ ವೈದ್ಯನಿಗೆ ಗುಂಪಿನೊಳಗಿನ ಪರಸ್ಪರತೆಯೂ ಅನಿವಾರ್ಯ. ಗುಂಪಿನೊಳಗಿದ್ದೂ ಆವಾಗೀವಾಗ ಮಾಡಿಕೊಳ್ಳಬೇಕಾದ ಸ್ವವಿಮರ್ಶೆಯ ಒಂದು ಭಾಗವೇ ಆಗಿ ಒಂಟಿಯಾಗುವ ವೈದ್ಯ ತನ್ನನ್ನೇ ತಾನು ಅರಿಯುವುದೂ ಅನಿವಾರ್ಯ. ಗೆಳೆಯ - ಸಂಬಂಧಿಯಲ್ಲದ ವ್ಯಕ್ತಿಯ ನೋವನ್ನು ತನ್ನದರ ಜೊತೆಗೆ ಸಮೀಕರಿಸಿಕೊಂಡು ಅದರಿಂದ ಹೊರಬರುವ ದಾರಿಯನ್ನು ತಿಳಿಸಿ ಬೀಳ್ಕೊಡುವ ಪ್ರಕ್ರಿಯೆಯಲ್ಲಿ ತನ್ನೊಳಗನ್ನೂ ತಾನು ಹೊಕ್ಕು ಬರಬೇಕಾಗುತ್ತದೆ. ಈ ಪರಕಾಯ ಪ್ರವೇಶವು ಆತನಿಗೆ ಹಲವು ಪ್ರಶ್ನೆಗಳನ್ನೊಡ್ಡಿ ಉತ್ತರ ಹೊರಡಿಸುತ್ತದೆ. ಈ ಆತ್ಮಪರೀಕ್ಷೆ ವೈದ್ಯನೊಳಗಿನ ಬರಹಗಾರನನ್ನು ಬಡಿದೆಬ್ಬಿಸಲು ಸಾಕು.

ಯಾವುದನ್ನು ಪರಿಣಾಮಕಾರೀ ಕ್ರಿಯೆಯಾಗಿಸಲು ವೈದ್ಯ ಹೆಣಗುತ್ತಾನೋ ಅದನ್ನೇ ಅಕ್ಷರ ರೂಪಕ್ಕಿಳಿಸಲು ಬರಹಗಾರ ಪ್ರಯತ್ನಿಸುತ್ತಾನೆ. ಎಂದರೆ ಆವಶ್ಯಕ ಮೂಲದ್ರವ್ಯ ಒಂದೇ ಆಗಿರುವ ಇಬ್ಬರು ಬೇರೆ ಬೇರೆ ಅಂತಿಮ ಗುರಿಯ ಕಡೆಗೆ ಚಲಿಸುತ್ತಿದ್ದಾರೆನ್ನಬಹುದು. ಬದುಕು, ಪಾತ್ರ, ಘಟನೆಗಳನ್ನು ತಾನೇ ಊಹಿಸಿಕೊಳ್ಳುತ್ತ ಸಾಹಿತ್ಯಸೃಷ್ಟಿಯಲ್ಲಿ ತೊಡಗುವ ಲೇಖಕನಿಗೂ, ಕಣ್ಣೆದುರೇ ಕುಣಿವ ಪಾತ್ರಗಳ ಒಳಹೊಕ್ಕು ಅವರ ನಡೆಗಳನ್ನು ಊಹಿಸುತ್ತ ಕೆಲವು ಬಾರಿ ಮೂಕಸಾಕ್ಷಿಯಾಗುತ್ತ, ಬದುಕಿನ ತಿರುವುಗಳನ್ನು ಗಮನಿಸುವ ವೈದ್ಯನಿಗೂ ಬಹಳಷ್ಟು ಸಾಮ್ಯವಿದೆ. ಕ್ರಿಯೆಯ ನಡುವಿನ ಈ ಸಾದೃಶ್ಯವೇ ಅನೇಕ ವೈದ್ಯರು ಬರಹಗಾರರಾಗಲಿಕ್ಕೂ, ಅನೇಕ ಬರಹಗಾರರ ಬರಹಗಳು ವೈದ್ಯರ ‘ಮದ್ದು’ ಕೊಡುವಷ್ಟೇ ಸಾಂತ್ವನ ಸಮಾಧಾನ ಕೊಡುವಂಥದು ಆಗಲಿಕ್ಕೂ ಕಾರಣವಾಗಿದೆ.ಒಬ್ಬ ಶ್ರಮಜೀವಿ. ಆತನ ದುಡಿಮೆಯೇ ಕುಟುಂಬದ ಮೂಲಾಧಾರ. ಆತನಿಗೆ ಬಿಪಿ ಶುರುವಾಗಿ ಹೃದಯ ಸಂಬಂಧೀ ಕಾಯಿಲೆ ಶುರುವಾಯಿತೆನ್ನಿ. ಅದನ್ನು ತಿಳಿಸಿದರೆ ಅದನ್ನು ಆತ ಹೇಗೆ ಸ್ವೀಕರಿಸಿಯಾನು? ಅವನ ಕುಟುಂಬ ಹೇಗೆ ಸ್ವೀಕರಿಸೀತು? ಅವರ ಹೊಟ್ಟೆಬಟ್ಟೆಯ ಗತಿಯೇನು? ರೋಗಿ ಇನ್ನುಮುಂದೆ ಶ್ರಮದ ಕೆಲಸಕ್ಕೆ ಹೋಗುವ ಹಾಗಿಲ್ಲ, ಜೀವನಶೈಲಿಯ ಬದಲಾವಣೆ ಅಗತ್ಯ ಎಂದು ಹೇಳುವ ಮೊದಲು ವೈದ್ಯ ರೋಗಿಯ ಹಿನ್ನೆಲೆ ತಿಳಿದಿರಬೇಕು ಹಾಗೂ ಆತನಿಗೆ ಒಂದು ಪರ್ಯಾಯ ಸೂಚಿಸಿ ಸಮಾಧಾನ ಒದಗಿಸುವಂತಿರಬೇಕು.

ಆಗ ರೋಗಿಯ ಮಟ್ಟದಲ್ಲಿ ನಿಂತು ಯೋಚಿಸಬೇಕಾದ ಅನಿವಾರ್ಯತೆ ವೈದ್ಯನಿಗೆ ಬದುಕಿನ ನಿಜ ಮುಖಗಳನ್ನು ತೋರಿಸುತ್ತಾ, ಜೀವನದ ಬಗೆಗಿನ ಅವನ ದೃಷ್ಟಿಕೋನವನ್ನು ರೂಪಿಸುತ್ತದೆ. ಕಾಯಿಲೆ, ಸಾವಿನಂತಹ ಅನಿವಾರ್ಯ ಅಪರಿಹಾರ್ಯ ಸುದ್ದಿಗಳನ್ನು ತಿಳಿಸುವಾಗ ಹಲವು ಪ್ರಶ್ನೆಗಳನ್ನೂ ಎದುರಿಸಬೇಕಾಗುತ್ತದೆ. ‘ಈ ದುಃಖ ತನಗೇ ಏಕೆ ಬಂತು? ಇನ್ನು ಬದುಕಿ ಏನುಪಯೋಗ? ಇದಕ್ಕೆ ಎಷ್ಟು ದುಡ್ಡು ಖರ್ಚಾದರೂ ಸರಿ, ಪರಿಹಾರವಿಲ್ಲವೆ? ಸಾವನ್ನು ಮುಂದೂಡಲು ಸಾಧ್ಯವಿಲ್ಲವೇ? ತನಗಿಂತ ದುಷ್ಟರು ಸುಖದಿಂದಿರುವಾಗ ತನಗೆ ಮಾತ್ರ ಏಕೆ ಹೀಗೆ?’ ಈ ತೆರನ ತನಗೂ ಉತ್ತರ ತಿಳಿಯದ ಪ್ರಶ್ನೆಗಳಿಗೆ ಉತ್ತರಿಸುವಾಗ ಬರಿಯ ವೈಜ್ಞಾನಿಕ ಮಾಹಿತಿ ಮತ್ತು ಜ್ಞಾನವನ್ನು ರೋಗಿಗೆ ವರ್ಗಾಯಿಸಿದರೆ ಸಾಲದು. ಅರಿವನ್ನು ಭಾವನೆಯೊಂದಿಗೆ ಬೆರೆಸಿ ಅವನಿಗೆ ತಿಳಿಸಬೇಕಾಗುತ್ತದೆ. ಭಾವನೆ ತಂತಾನೇ ಮೂಡಬೇಕಾದರೆ ವೈದ್ಯ ಪಂಚೇಂದ್ರಿಯಗಳನ್ನು ತೆರೆದು ಕುಳಿತಿರಬೇಕು. ಎಚ್ಚರಗೊಳಿಸುತ್ತಲೇ ಧೈರ್ಯ ತುಂಬಬೇಕು. ಎದುರಿರುವವರ ತಕ್ಷಣದ ಪ್ರಶ್ನೆಗಳು, ಪ್ರತಿಕ್ರಿಯೆಗಳು ಕೆಲವೊಮ್ಮೆ ವೈದ್ಯನನ್ನು ತತ್ವಜ್ಞಾನಿಯಾಗುವಂತೆ ಪ್ರೇರೇಪಿಸಿ ಸೂಕ್ಷ್ಮ ಸಂವೇದನೆಯನ್ನು ಹುಟ್ಟುಹಾಕುತ್ತವೆ.

ರೋಗಿ ಬರೀ ರೋಗಿಯಲ್ಲ. ಆತ ಯಾರದೋ ಗಂಡ/ಹೆಂಡತಿ, ಮಗ, ಮಗಳು, ಸೋದರ, ತಾಯಿ - ಹೀಗೇ. ಆ ಎಲ್ಲ ಪಾತ್ರ ನಿಭಾವಣೆಯಲ್ಲಿ ವೈದ್ಯಕೀಯವು ವ್ಯಕ್ತಿಗೆ ಸಹಾಯ ಮಾಡಬೇಕಾಗುತ್ತದೆ. ಬದುಕಿನ ಒಂದು ಭಾಗ ರೋಗ - ಔಷಧಿ ಆಗಬೇಕೇ ಹೊರತು ಬದುಕೇ ರೋಗದ ಭಾಗವಾಗಬಾರದು. ಈ ಎಚ್ಚರ ವೈದ್ಯನಿಗೆ ಮನುಷ್ಯನ ಮನಸ್ಸು, ಸಂಬಂಧಗಳ ಜಟಿಲತೆಗಳನ್ನು ಒಳಹೊಕ್ಕು ತಿಳಿಯಲು ಸಹಾಯ ಮಾಡುತ್ತದೆ. ಏನನ್ನೂ ಮುಚ್ಚಿಡದೇ ಇದ್ದದ್ದನ್ನು ಇದ್ದಿದ್ದ ಹಾಗೇ ಹೇಳುವುದು - ಅದು ರೋಗಿಗೇ ಇರಲಿ, ಅಥವಾ ಅವನ ಸಂಬಂಧಿಗಳಿಗೇ ಇರಲಿ - ವೈದ್ಯನಿಗೆ ಅನಿವಾರ್ಯ. ಆತ ಹೆಚ್ಚೆಚ್ಚು ವಾಸ್ತವವಾದೀ ಧೋರಣೆ ತಳೆಯಲು ಕೂಡಾ ಇದೇ ಕಾರಣವಾಗುತ್ತದೆ.

ಪತ್ರಕರ್ತ, ರಾಜಕಾರಣಿ, ಪುರೋಹಿತ, ನ್ಯಾಯವಾದಿ, ವಾಹನ ಚಾಲಕ - ಹೀಗೆ ಕೆಲವೇ ವೃತ್ತಿಗಳಲ್ಲಿರುವ ಜನರು ಸಮಾಜದ ಎಲ್ಲ ಸ್ತರದ, ಥರದ ಜನರನ್ನು ನೋಡುವ ಅವಕಾಶ ಹೊಂದಿರುತ್ತಾರೆ. ಅದರಲ್ಲೂ ವೈದ್ಯನಿಗಂತೂ ಬದುಕಿನ ನಾಟಕೀಯ ಕ್ಷಣಗಳಿಗೆ ಮುಖಾಮುಖಿಯಾಗಲು ಹೆಚ್ಚು ಅವಕಾಶವಿರುತ್ತದೆ.

ಹೀಗಾಗಿ ಬರೆವ ಕುಶಲತೆ ಮತ್ತು ಇಚ್ಛೆ ಇದ್ದಲ್ಲಿ ಹೇರಳ ಅನುಭವ ದ್ರವ್ಯ ಸಿಗುವ ವೈದ್ಯರಿಗೆ ವಸ್ತುವಿನ ಕೊರತೆ ಯಾವತ್ತೂ ಆಗಲಾರದು. ಇರುವ ಕೊರತೆ ಸಮಯದ್ದು. ಹಾಗಾದರೆ ವೈದ್ಯವೃತ್ತಿಯಲ್ಲಿರುವವರು ಬರವಣಿಗೆ ಹೇಗೆ ನಿಭಾಯಿಸುತ್ತಾರೆ? ಈ ಪ್ರಶ್ನೆಯನ್ನು ಸ್ವತಃ ಹಲವು ಬಾರಿ ಎದುರಿಸಿದ್ದೇನೆ: ‘ನೀವು ಡಾಕ್ಟರಾಗಿಯೂ ಬರೆಯುವುದೇ ಆಶ್ಚರ್ಯ. ಅದರಲ್ಲು ಇಷ್ಟೆಲ್ಲ ಹೇಗೆ ಬರಿತಿರಿ? ಪ್ರಾಕ್ಟೀಸ್-ಗಂಡ-ಮಕ್ಕಳು ಎಲ್ಲ ಬಂಧನಗಳನ್ನು ಬಿಟ್ಟುಬಿಟ್ಟಿದೀರೋ ಹೇಗೆ?’ ಎನ್ನುವರ್ಥದ ಪ್ರಶ್ನೆಗಳು ಎಲ್ಲ ಮೂಲೆಗಳಿಂದಲೂ ನನ್ನ ತಲುಪಿವೆ.

ಮನಸ್ಸು ಯಾವಾಗಲೂ ಮಾಡಬೇಕಾದ ಕೆಲಸಕ್ಕಿಂತ ಮಾಡದೇ ಉಳಿದಿರುವ ಕೆಲಸದ ಕಡೆಗೇ ಎಳೆಯುತ್ತಿರುತ್ತದಷ್ಟೇ. ಬಹುಪಾಲು ಸಮಯ, ಶ್ರಮವನ್ನು ರೋಗಿಗಳಿಗೇ ಮೀಸಲಿಡಬೇಕಾದ ಬರಹಗಾರ ವೈದ್ಯನಿಗೆ, ಬರವಣಿಗೆ ಎಂಬುದು ‘ಮಾಡದಿರುವ’, ಆದರೆ ಮಾಡಲೇಬೇಕಾಗಿರುವ ಕೆಲಸ. ಹೀಗಾಗಿ ಆ ಬಗೆಗೆ ಒತ್ತಡ ಹೆಚ್ಚುತ್ತ ಹೋದಹಾಗೆ ಅಕಸ್ಮಾತ್ ಸ್ವಲ್ಪ ಸಮಯ ದೊರೆತಾಗ ಮಾಡುವ ಬರವಣಿಗೆ ಥ್ರಿಲ್ ಕೊಡುತ್ತದೆ. ‘ಬಿಡುವಿಲ್ಲ’ ಎಂಬ ಪ್ರಜ್ಞೆಯೇ ಬಿಡುವು ಮಾಡಿಕೊಳ್ಳಲು, ಮಾಡಿಕೊಂಡು ಬರೆದು ಖುಷಿ ಅನುಭವಿಸಲು ಪ್ರಚೋದನೆ ನೀಡುತ್ತದೆ.

ಪ್ರವೃತ್ತಿಯ ಈ ಸೆಳೆತವನ್ನು ನಿಭಾಯಿಸುವುದು ಸುಲಭವಲ್ಲ. ಆದರೆ ವೃತ್ತಿ-ಪ್ರವೃತ್ತಿಗಳನ್ನು ವೈದ್ಯರು ಹೇಗೆ ನಿಭಾಯಿಸುತ್ತಾರೆ?

ಡೇನಿಯಲ್ ಮ್ಯಾಸನ್ ಎಂಬ ಅಮೆರಿಕನ್ ವೈದ್ಯಬರಹಗಾರ ‘ವೈದ್ಯಕೀಯವು ಬರಹಕ್ಕೆ ಹೇರಳವಾದ ವಸ್ತುವನ್ನೊದಗಿಸುವುದಕ್ಕಿಂತ ಮುಖ್ಯವಾಗಿ ಬರವಣಿಗೆಗೆ ಅಗತ್ಯವಾದ ಭಾವನಾತ್ಮಕ ಹಾಗೂ ಮಾನಸಿಕ ಒತ್ತಡವನ್ನು ಹುಟ್ಟುಹಾಕುತ್ತದೆ. ಭಿನ್ನ ವ್ಯಕ್ತಿಗಳ ಬದುಕಿನ ಕಿಂಡಿಯಲ್ಲೊಮ್ಮೆ ಇಣುಕಿ ನೋಡುವುದು ಸಾಧ್ಯವಾಗುವುದರಿಂದ ನನ್ನ ವ್ಯಕ್ತಿತ್ವಕ್ಕಿಂತ ಭಿನ್ನ ಪಾತ್ರಗಳನ್ನು ನೈಜವಾಗಿ ಸೃಷ್ಟಿಸಲು ಸಾಧ್ಯವಾಗುತ್ತದೆ. ವೈದ್ಯನಲ್ಲದಿದ್ದರೆ ನಾನು ಬರೆಯುತ್ತಿರಲಿಲ್ಲ ಎನಿಸುತ್ತದೆ. ಬರವಣಿಗೆ ಕೆಲವೊಮ್ಮೆ ಥ್ರಿಲ್ ಎನಿಸುತ್ತದೆ, ಅದರಲ್ಲೂ ಅದು ನಾನು ಮಾಡಬೇಕಾದ ಕೆಲಸ ಅಲ್ಲ ಎಂದು ತಿಳಿದ ಮೇಲಂತೂ ಮತ್ತಷ್ಟು ರೋಮಾಂಚಕಾರಿ ಎನ್ನಿಸುತ್ತಿದೆ’ ಎಂದು ಹೇಳಿದ್ದಾನೆ.

ಎಷ್ಟು ನೋಡಿದರೂ ಕಾಯಿಲೆ ಮುಗಿಯುವುದಿಲ್ಲ. ಸೇವೆ ಬಯಸುವ ರೋಗಿಗಳ ಸಂಖ್ಯೆ ಕೊನೆಯಾಗುವುದಿಲ್ಲ. ಹೀಗಿರುವಾಗ ಸ್ವಂತಕ್ಕೆಂದು, ವಿಶ್ರಾಂತಿಯೆಂದು ತನಗಾಗಿ ಸಮಯ ಮೀಸಲಿಡುವುದು ವೈದ್ಯನ ಮಟ್ಟಿಗೆ ಅಲಿಖಿತ ಅಪರಾಧ. ಅದರಲ್ಲೂ ಆತ ಬರೆವ ಕತೆ - ಕಾವ್ಯಗಳಿಂದ ಜನರ ಇವತ್ತಿನ ಕಷ್ಟಗಳಾಗಲೀ, ರೋಗರುಜಿನಗಳಾಗಲೀ ವಾಸಿಯಾಗುವುದಿಲ್ಲ. ಆದರೆ ವೈದ್ಯನೂ ಮನುಷ್ಯನೇ. ಎಲ್ಲ ಜಂಜಡಗಳ ನಡುವೆ ಸಮಯ ಉಳಿಸಿಕೊಂಡು ಓದು - ಬರಹದಲ್ಲಿ ತೊಡಗಲೋ, ವಿಶ್ರಾಂತಿ ಹೊಂದಲೋ ಬಯಸುತ್ತಾನೆ. ಕೆಲವೊಮ್ಮೆ ಇದು ಅವನ ಮನಸ್ಸಿನಲ್ಲಿ ವಿರುದ್ಧ ಭಾವನೆಗಳನ್ನು ಹುಟ್ಟುಹಾಕುತ್ತದೆ. ತೃಪ್ತಿಯ ಜೊತೆಗೇ ರೋಗಿಗೆ ಮೀಸಲಾದ ಸಮಯವನ್ನು ಬೇರೆಯದಕ್ಕೆ ಮೀಸಲಿಟ್ಟಿರುವುದು ಸಮಾಜ ಮೆಚ್ಚುವ ಕ್ರಿಯೆಯೆ ಎಂಬ ಅನುಮಾನವೂ ಹುಟ್ಟುತ್ತದೆ. ಇದು ಎಲ್ಲ ಲೇಖಕ ವೈದ್ಯರನ್ನು ಒಂದಲ್ಲ ಒಮ್ಮೆ ಕಾಡುವ ಪ್ರಶ್ನೆ. ಇದಕ್ಕೆ ಬೇರೆಬೇರೆ ಲೇಖಕರ ಪ್ರತಿಕ್ರಿಯೆ ಬೇರೆಬೇರೆ ರೀತಿಯಲ್ಲಿದೆ:

ಕ್ರಿಸ್ ಆಡ್ರಿಯನ್ ಎಂಬ ಲೇಖಕ ‘ವೈದ್ಯಕೀಯ ಮತ್ತು ಬರವಣಿಗೆ - ಈ ಎರಡರಲ್ಲಿ ಯಾವುದನ್ನು ಆಯ್ದುಕೊಳ್ಳುತ್ತೀರಿ ಎಂದು ತುಂಬ ಜನ ಕೇಳುತ್ತಾರೆ. ಇದು ಕೈಗೊಂದು ಚಮಚೆ ಕೊಟ್ಟು ನಿಮ್ಮ ಯಾವ ಕಣ್ಣಿಗೆ ಇರಿದುಕೊಳ್ಳುವಿರಿ ಎಂದು ಕೇಳಿದ ಹಾಗೆ. ಚಮಚೆ ಕೊಡಬೇಡಿ, ಫೋರ್ಕ್ ಕೊಟ್ಟುಬಿಡಿ, ಆಗ ಹೇಳುವೆ ಎಂದು ಉತ್ತರಿಸುತ್ತೇನೆ’ ಎಂದಿದ್ದಾನೆ. ಬರವಣಿಗೆಯ ಜೊತೆ ಇಷ್ಟು ತಾದಾತ್ಮ್ಯ ಸಾಧಿಸಿದ ಮೇಲೆ ವೈದ್ಯನಿಗೆ ಅದು ಅನಿವಾರ್ಯ ಕ್ರಿಯೆಯೇ ಆಗುತ್ತದೆ. ಅಲ್ಲಿ ಆಯ್ಕೆಯ ಪ್ರಶ್ನೆಯೇ ಅಸಮಂಜಸ.

ಆಂಟನ್ ಚೆಕಾಫ್ ‘ವೈದ್ಯಕೀಯ ನನ್ನ ಕೈಹಿಡಿದ ಹೆಂಡತಿಯಾದರೆ ಬರವಣಿಗೆ ಪ್ರೇಯಸಿ. ಒಬ್ಬರ ಜೊತೆಗೆ ಬೇಸರ ಬಂದರೆ ಆ ರಾತ್ರಿಯನ್ನು ಮತ್ತೊಬ್ಬರ ಜೊತೆಗೆ ಕಳೆಯುತ್ತೇನೆ. ಇದು ಅಶಿಸ್ತು ಎನಿಸಿದರೂ ಬೇಸರವಾಗುವುದಿಲ್ಲ. ಅಲ್ಲದೇ ಈ ದ್ರೋಹದಿಂದ ಇಬ್ಬರಿಗೂ ನಷ್ಟವಿಲ್ಲ’ ಎನ್ನುತ್ತಾನೆ!

ತಮಗಿಂತ ತುಂಬ ಭಿನ್ನ ವ್ಯಕ್ತಿತ್ವದ, ಭಿನ್ನ ಹಿನ್ನೆಲೆಯ ಜನರ ಕ್ರಿಯೆ ಪ್ರತಿಕ್ರಿಯೆಗಳನ್ನು ಅತಿ ಹತ್ತಿರದಿಂದ ಗಮನಿಸುವಾಗ ಅದನ್ನು ಬರೆದು ಹೇಳುವ ತೀವ್ರತೆ ಎಂದೋ ಹುಟ್ಟಬಹುದು. ವಿಲಿಯಂ ಕಾರ್ಲೋಸ್ ವಿಲಿಯಂ ಹೇಳುವ ಹಾಗೆ ‘ಎಲ್ಲ ಬರವಣಿಗೆ ಒಂದು ರೋಗ. ಅದನ್ನು ತಡೆಗಟ್ಟಲಾಗುವುದಿಲ್ಲ.’

ಹಾಗಿದ್ದರೆ ಎಲ್ಲ ವೈದ್ಯರೂ ಏಕೆ ಸಾಹಿತಿಗಳಾಗಲಾರರು ಎಂದೆನಿಸಬಹುದು. ಅದು ಎಲ್ಲ ಅಕ್ಷರಸ್ಥನೂ ಏಕೆ ಕವಿಯಾಗಲಾರ ಎಂದು ಕೇಳಿದ ಹಾಗಾಗುತ್ತದೆ. ಮೂಲತಃ ಲೇಖಕರಿಗೆ ಬೇಕಾದುದು ಸೂಕ್ಷ್ಮಜ್ಞತೆ, ಮಾನವೀಯತೆ ಮತ್ತು ಸಂವೇದನೆ. ಅದಿರುವ ವ್ಯಕ್ತಿ ವೈದ್ಯ, ವಕೀಲ, ಇಂಜಿನಿಯರ್, ರಾಜಕಾರಣಿ, ಕ್ರಾಂತಿಕಾರಿ - ಹೀಗೆ ಯಾವ ವೃತ್ತಿಯ ಮುಖವಾಡ ಧರಿಸಿದ್ದರೂ ಸಾಹಿತ್ಯದ ಒಲವು ಹೊಂದುತ್ತಾನೆ. ವೈದ್ಯರಾಗಿ ಯಂತ್ರಗಳಂತೆ ವರ್ತಿಸುವವರು, ತಕ್ಕಡಿ ಹಿಡಿದು ಗಳಿಸಿದ್ದನ್ನು ತೂಗಿನೋಡುತ್ತ ವ್ಯಾಪಾರಿಗಳಾಗಿರುವವರು, ಕ್ರಿಮಿನಲ್‌ಗಳಾದವರು, ಕಟ್ಟಾ ಬಲಪಂಥೀಯ ಮನಸ್ಸು ಹೊಂದಿ ಜನರ ಮನಸ್ಸು ಒಡೆಯುವ ಕೆಲಸ ಮಾಡುವವರು ನಮ್ಮ ಕಣ್ಣೆದುರಿದ್ದಾರೆ. ಅದೇವೇಳೆ ಸ್ಟೆತೋಸ್ಕೋಪನ್ನು ಮರೆತು ಬಂದೂಕು ಹಿಡಿದ ಚೆಗೆವಾರನೂ ಇದ್ದಾನೆ. ಈ ಎರಡು ಅತಿಗಳ ನಡುವೆ ಬರಡು ಮನಸ್ಸಿಗೂ ತಾತ್ವಿಕ ಹಾಗೂ ಮಾನವೀಯ ಸ್ಪರ್ಶ ಕೊಡುವಲ್ಲಿ ವೈದ್ಯವೃತ್ತಿ ಉಳಿದೆಲ್ಲ ವೃತ್ತಿಗಳಿಗಿಂತ ಮುಂದಿದೆ ಎಂದಷ್ಟೇ ಹೇಳಬಹುದು.ವಿಷಾದವೆಂದರೆ ಮೆಡಿಕಲ್ ಓದು ಮಾರಾಟಕ್ಕಿದೆ. ಅದೊಂದು ಹಣ ಸುಲಿಯುವ ಸದವಕಾಶ ಎಂದೇ ಭಾವಿಸಲಾಗುತ್ತಿದೆ. ಎಂದೇ ವೈದ್ಯರು/ವೈದ್ಯ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವೂ ಕಡಿಮೆಯಾಗುತ್ತಿದೆ. ವೈದ್ಯರಿಗೆ ಭಾಷೆ, ಸಾಹಿತ್ಯ, ಸಮಾಜದ ಮೇಲೆ ಒಲವು ಮೂಡುವಂತೆ ಮಾಡಲು ಏನು ಮಾಡಬೇಕು?

ಸಮಾಜ ಯೋಚಿಸಬೇಕು, ವೈದ್ಯರೂ ಸಹಾ..

ದಿಂಗಾಲೇಶ್ವರ ಬಂಧನಕ್ಕೆ ಆಗ್ರಹ


ಬೆಳಗಾವಿ ಸುವರ್ಣಸೌಧದ ಮುಂದೆ ಪ್ರತಿಭಟನೆ ಇಂದು

ದಿಂಗಾಲೇಶ್ವರ ಬಂಧನಕ್ಕೆ ಆಗ್ರಹ

ಹುಬ್ಬಳ್ಳಿ: ‘ಘಂಟಿಚೋರ್ ಸಮುದಾ ಯದ ವ್ಯಕ್ತಿಯೊಬ್ಬರ ಹತ್ಯೆಗೆ ಕಾರಣರಾಗಿ ತಲೆತಪ್ಪಿಸಿಕೊಂಡಿರುವ  ದಿಂಗಾಲೇಶ್ವರ ಸ್ವಾಮೀಜಿಯನ್ನು ಕೂಡಲೇ ಬಂಧಿಸು ವಂತೆ’ ಬಾಲೇಹೊಸೂರು ದಲಿತ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಚಾಲಕ ಬಸವರಾಜ ಸೂಳೀಭಾವಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬಾಲೇಹೊಸೂರು ದೌರ್ಜನ್ಯ ಪ್ರಕರ ಣವನ್ನು ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸ್ವತಂತ್ರ ತನಿಖೆಗೆ ಸರ್ಕಾರ ಒಪ್ಪಿಸಲಿ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ದಲಿತರೊಬ್ಬರ ಹತ್ಯೆ ನಡೆ ದರೂ ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ದವರಿಗೆ ಸಾಂತ್ವನ ಹೇಳದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ದಲಿತ ಸಮುದಾಯದ ಶಾಸಕರಾ ದರೂ ಕ್ಷೇತ್ರದಲ್ಲಿ ದಲಿತರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿರುವ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದಿಂದ ಅಮಾನತು ಮಾಡಲಿ. ಗ್ರಾಮದಲ್ಲಿ ದಿಂಗಾಲೇಶ್ವರ ಸ್ವಾಮಿ ನಡೆಸಿರುವ ದೌರ್ಜನ್ಯ, ಅಕ್ರಮಗಳನ್ನು ತನಿಖೆಗೊಳ ಪಡಿಸಬೇಕು. ಮಠವನ್ನು ಮುಟ್ಟು ಗೋಲು ಹಾಕಿಕೊಂಡು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವಂತೆ ಅವರು ಒತ್ತಾಯಿಸಿದರು.
ಬಾಲೇಹೊಸೂರನ್ನು ರಿಪಬ್ಲಿಕ್ ಮಾಡಿಕೊಂಡು ದಿಂಗಾಲೇಶ್ವರ ನಡೆಸಿ ರುವ ಎಲ್ಲಾ ಅನ್ಯಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜುಲೈ 1 ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಒಕ್ಕೂಟದ ವತಿಯಿಂದ ಪ್ರತಿ ಭಟನೆ ನಡೆಸಲಾಗುವುದು. ಜುಲೈ 7 ರಂದು ಗದಗ ನಗರ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ಎಲ್ಲಾ ಪ್ರಗತಿಪರ ಸಂಘಟನೆಗಳೂ ಬೆಂಬಲ ಸೂಚಿಸಿವೆ ಎಂದು ಹೇಳಿದರು.
ಹಲ್ಲೆಯಿಂದ ಸಾವಿಗೀಡಾದ ಮಹಾಂ ತಪ್ಪ ಗುಡಗೇರಿ ಅವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ₹ 2 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದ ಸೂಳಿಭಾವಿ, ದಿಂಗಾಲೇಶ್ವರ ಕಾವಿ ಕಳಚಿದರೆ ಸಮಾಜಕ್ಕೆ ಒಳ್ಳೆಯದು ಇಲ್ಲದಿದ್ದರೆ ಜನರೇ ಆತನ ಕಾವಿ ಕಳಚಲಿದ್ದಾರೆ ಎಂದರು.
ಘಂಟಿಚೋರ್ ಸಮುದಾಯದವರ ವಿರುದ್ಧ ಬಾಲೇಹೊಸೂರಿನಲ್ಲಿ ಅಘೋ ಷಿತ ಬಹಿಷ್ಕಾರ ಹಾಕಲಾಗಿದೆ. ಸ್ಥಳೀಯ ದಲಿತ ಸಮುದಾಯದ ಕೆಲವ ರನ್ನು ದಿಂಗಾಲೇಶ್ವರನ ಬೆಂಬಲಿಗರು ಎತ್ತಿಕಟ್ಟಿ ದ್ದಾರೆ. ಘಂಟಿಚೋರ ಸಮುದಾಯದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಕೀಲ ಅನಂತ ಕಟ್ಟಿಮನಿ, ರಾಮಚಂದ್ರ ಹಂಸನೂರ, ಎಲ್‌.ನಾರಾಯಣಸ್ವಾಮಿ, ಸಾಹಿತಿ ಸುನಂದಾ ಕಡಮೆ ಹಾಜರಿದ್ದರು.

ಲಿಂಗಾಯತ ಶ್ರೀಗಳು ಧ್ವನಿ ಎತ್ತಲಿ...
ಬಾಲೇಹೊಸೂರಿನಲ್ಲಿ ದಲಿತರ ಮೇಲೆ ದಿಂಗಾಲೇಶ್ವರ ಸ್ವಾಮೀಜಿ ನಡೆಸಿರುವ ದೌರ್ಜನ್ಯಗಳ ವಿರುದ್ಧ ಲಿಂಗಾಯತ ಸಮಾಜದ ಪ್ರಮುಖ ಮಠಾಧೀಶರಾದ ಗದಗ ತೋಂಟದಾರ್ಯ ಸ್ವಾಮೀಜಿ ಹಾಗೂ ನಿಡುಮಾಮಿಡಿ ಸ್ವಾಮೀಜಿ ಧ್ವನಿ ಎತ್ತಲಿ ಎಂದು ಬಸವರಾಜ ಸೂಳೀಭಾವಿ ಮನವಿ ಮಾಡಿದರು.

‘ಇಬ್ಬರೂ ಮಠಾಧೀಶರು ದಲಿತರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಸರ್ಕಾರದ ಕಣ್ಣು ತೆರೆಸಲು ಇಬ್ಬರೂ ಮಾತನಾಡ ಬೇಕಿದೆ ಎಂದು ಹೇಳಿದರು. ಘಂಟಿ ಚೋರರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಆದರೆ ದಿಂಗಾಲೇಶ್ವರರ ರಕ್ಷಣೆಗೆ ನಿಂತಿರುವ ಜಿಲ್ಲಾಡಳಿತ ಅವರು ದಲಿತರು ಎಲ್ಲ ಎಂಬಂತೆ ಬಿಂಬಿಸುತ್ತಿದೆ’ ಎಂದು ಪ್ರಶ್ನೆಯೊಂ ದಕ್ಕೆ ಅವರು ಪ್ರತಿಕ್ರಿಯಿಸಿದರು.


ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...