Saturday, August 29, 2015

ಗುಜರಾತ ಪಟೇಲ ಪ್ರತಿಭಟನೆ :ಇದು ಮೀಸಲಾತಿ ವಿರೋಧಿ ಚಳವಳಿ


ಬಹಿರಂಗವಾಗಿ ವಿರೋಧಿಸಲಾಗದ್ದನ್ನು ಅಂತರಂಗದ ಹುನ್ನಾರದ ಮೂಲಕ ನಾಶಪಡಿಸಲೆತ್ನಿಸುವುದು ಎಲ್ಲ ಕಾಲ-ದೇಶಗಳ ಸಂಚುಕೋರರ ಮೊಡಸ್ ಅಪರೆಂಡಿ. ಸಾಮಾಜಿಕ ನ್ಯಾಯದ ಪ್ರಮುಖ ಅಸ್ತ್ರವಾದ ಮೀಸಲಾತಿ ವಿರುದ್ಧ ಇಂತಹದ್ದೊಂದು ಸಂಚು ಗುಜರಾತ್ ರಾಜ್ಯದ ಪಟೇಲರ ಚಳವಳಿಯಲ್ಲಿ ಕಾಣಬಹುದು. ಮೀಸಲಾತಿ ನೀತಿಯನ್ನು ದೇಶದ ಯಾವ ರಾಜಕೀಯ ಪಕ್ಷ ಕೂಡಾ ಇಂದು ಬಹಿರಂಗವಾಗಿ ವಿರೋಧಿಸುವ ಸ್ಥಿತಿಯಲ್ಲಿಲ್ಲ.

ಮಂಡಲ್‌ ವರದಿಯ ಅನುಷ್ಠಾನವನ್ನು ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡವರು ಮತ್ತು ಅವರನ್ನು ಬೆಂಬಲಿಸಿದ್ದ ಪಕ್ಷ-ಪರಿವಾರಗಳ ಅಂತರಂಗದ ಚಡಪಡಿಕೆ ಏನೇ ಇರಲಿ ಅವುಗಳು ಬಹಿರಂಗವಾಗಿ ಮೀಸಲಾತಿಯನ್ನು ಸಮರ್ಥಿಸಲೇಬೇಕಾದ ಸ್ಥಿತಿಯಲ್ಲಿವೆ. ಸಂಸತ್‌ನಲ್ಲಿಯೂ ಯಾವ ಜನಪ್ರತಿನಿಧಿಯೂ ಮೀಸಲಾತಿ ವಿರುದ್ಧ ಸೊಲ್ಲೆತ್ತುವ ಸ್ಥಿತಿಯಲ್ಲಿಲ್ಲ. ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಆತ್ಮ ತಣ್ಣಗಿರಲಿ. ತಕ್ಷಣದ ರಾಜಕೀಯ ಉದ್ದೇಶ ಏನೇ ಇದ್ದರೂ ವಿ.ಪಿ.ಸಿಂಗ್, ಮಂಡಲ್ ವರದಿ ಆಧಾರದಲ್ಲಿ ಹಿಂದುಳಿದ ಜಾತಿಗಳಿಗೆ ಶಿಕ್ಷಣ- ಉದ್ಯೋಗದಲ್ಲಿ ಮೀಸಲಾತಿಯನ್ನು ಘೋಷಿಸಿದ ನಂತರ ಈ ವರ್ಗದಲ್ಲಿ ಮೂಡಿದ ಜಾಗೃತಿ ಮತ್ತು ಗಳಿಸಿಕೊಂಡ ಶಕ್ತಿ ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಿತ್ರವನ್ನೇ ಬದಲಾಯಿಸಿರುವುದು ನಿಜ.

ಆದರೆ ಬಹಿರಂಗವಾಗಿ ಮೀಸಲಾತಿಯನ್ನು ಸಮರ್ಥಿಸುವವರೆಲ್ಲರೂ ಅಂತರಂಗದಲ್ಲಿ ಮೀಸಲಾತಿಯನ್ನು ಒಪ್ಪಿಕೊಂಡಿದ್ದಾರೆಂದು ಹೇಳುವ ಹಾಗಿಲ್ಲ. ಇಂತಹ ಅಂತರಂಗದ ವಿರೋಧ  ಬೇರೆ ಬೇರೆ ಬಗೆಯ ಸಂಚಿನ ರೂಪಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ. ಮೀಸಲಾತಿಯನ್ನು ಗೇಲಿ, ಅಪಹಾಸ್ಯ ಮಾಡಿ ಅದರ ಫಲಾನುಭವಿಗಳೇ ಕೀಳರಿಮೆಯಿಂದ ಬಳಲುವಂತೆ ಮಾಡಿ ಅವರೇ ಮೀಸಲಾತಿ ವಿರೋಧಿಸುವಂತೆ ಮಾಡುವುದು ಸಂಚಿನ ಒಂದು ಭಾಗವಾದರೆ, ಮೀಸಲಾತಿ ನೀತಿಯ ಸುತ್ತ ವಿವಾದದ ದೂಳೆಬ್ಬಿಸಿ ನೋಡುವವರ ಕಣ್ಣು ಕುರುಡುಗೊಳಿಸಿ, ಅದರ ವಿರುದ್ಧ ಜನರನ್ನು ಎತ್ತಿಕಟ್ಟುವುದು ಸಂಚಿನ ಇನ್ನೊಂದು ಭಾಗ. ಗುಜರಾತಿನಲ್ಲಿ ಪಟೇಲರು ಮೀಸಲಾತಿಗಾಗಿ ನಡೆಸುತ್ತಿರುವ ಚಳವಳಿಯಲ್ಲಿಯೂ ಎರಡನೇ ಬಗೆಯ ಸಂಚಿನ ನೆರಳಿದೆ.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಹೀಗೆ ಯಾವ ಕೋನದಲ್ಲಿಟ್ಟು ನೋಡಿದರೂ ಗುಜರಾತಿನ ಪಟೇಲ್ ಸಮುದಾಯ ಹಿಂದುಳಿದ ವರ್ಗದ ಸಮೀಪ ಸುಳಿಯಲಾರದು. ಆ ರಾಜ್ಯದ ಜನಸಂಖ್ಯೆಯ ಶೇ 15ರಷ್ಟಿರುವ ಪಟೇಲರು ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಬಲಾಢ್ಯರು. ಆ ರಾಜ್ಯದ ಎಣ್ಣೆ ಗಿರಣಿಗಳು, ಉದ್ಯಮಗಳು, ಸೂರತ್‌ನ ವಜ್ರ ವ್ಯಾಪಾರ- ಎಲ್ಲೆಡೆ ಪಟೇಲರದ್ದೇ ಕಾರುಬಾರು. ಅಮೆರಿಕ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರಲ್ಲಿಯೂ ಇವ ರದ್ದೇ ಬಹುಸಂಖ್ಯೆ. ಮೂಲತಃ ಇವರು ಭೂಮಾಲಕರು.
ಮಾಧವ ಸಿನ್ಹಾ ಸೋಲಂಕಿ ನೇತೃತ್ವದ ಸರ್ಕಾರದ ಅವಧಿಯನ್ನು ಹೊರತುಪಡಿಸಿದರೆ ರಾಜಕೀಯದಲ್ಲಿಯೂ ಇವರದ್ದೇ ಪಾರಮ್ಯ. ಈಗಿನ ವಿಧಾನಸಭೆಯಲ್ಲಿನ 182 ಶಾಸಕರಲ್ಲಿ 44 ಮಂದಿ ಪಟೇಲರು, 26 ಲೋಕಸಭಾ ಸದ ಸ್ಯರಲ್ಲಿ ಐವರು  ಪಟೇಲರು, ಮೂವರು ಸಂಪುಟ ಸಚಿವರು, ನಾಲ್ವರು ರಾಜ್ಯ ಸಚಿವರು ಜತೆಗೆ ಮುಖ್ಯಮಂತ್ರಿ ಸ್ಥಾನ. ಉದ್ಯಮ, ಕೃಷಿ, ರಾಜಕೀಯ ಕ್ಷೇತ್ರಗಳಲ್ಲಿ ಈ ಮಟ್ಟದ ಆಧಿಪತ್ಯ ಹೊಂದಿರುವ ಮತ್ತೊಂದು ಜಾತಿಯನ್ನು ದೇಶದಲ್ಲೆಲ್ಲೂ ಕಾಣಲು ಸಾಧ್ಯವಿಲ್ಲ. ಈಗ ಇವರಿಗೆ ಮೀಸಲಾತಿ ಬೇಕಂತೆ.
ಒಂದು ಕಾಲದಲ್ಲಿ ಗುಜರಾತ್ ರಾಜಕೀಯ, ಪಟೇಲರ ಆಡುಂಬೊಲವಾಗಿತ್ತು. ಅದನ್ನು ಮುರಿದವರು ಗುಜರಾತ್ ರಾಜ್ಯದ ‘ದೇವರಾಜ ಅರಸು’ ಎಂದು ಕರೆಸಿಕೊಳ್ಳುವ ಮಾಧವ ಸೋಲಂಕಿ. ಅವರು ಆ ರಾಜ್ಯದ ಹಿಂದುಳಿದವರನ್ನೆಲ್ಲ ಒಗ್ಗೂಡಿಸಿ ‘ಖಾಮ್ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಮ್) ಎಂಬ ಹೊಸ ಗುಂಪನ್ನು ಸೃಷ್ಟಿಸಿದರು. 1975ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟವಾದ ನಂತರ ಸೋಲಂಕಿ ಅವರು ಪ್ರಾರಂಭಿಸಿದ ಸೋಷಿಯಲ್ ಎಂಜಿನಿಯರಿಂಗ್ ಫಲವೇ ‘ಖಾಮ್’. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 80ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಲ್ಲಿಯವರೆಗೆ ಈ ಗುಂಪಿಗೆ ನ್ಯಾಯಬದ್ಧ ರಾಜಕೀಯ ಪ್ರಾತಿನಿಧ್ಯ ಇರಲಿಲ್ಲ. ಆದರೆ ಖಾಮ್ ಪ್ರಭಾವದಿಂದಾಗಿ 1980ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್  182 ಸ್ಥಾನಗಳಲ್ಲಿ 142 ಸ್ಥಾನಗಳನ್ನು ಗಳಿಸಿತ್ತು.  ಸೋಲಂಕಿ ಮುಖ್ಯಮಂತ್ರಿಯಾದರು. ಈ ಚೈತ್ರಯಾತ್ರೆ 1985ರಲ್ಲಿಯೂ ಮುಂದುವರಿದು ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ 26ರಲ್ಲಿ 25 ಸ್ಥಾನಗಳು ಕಾಂಗ್ರೆಸ್ ಪಾಲಾಗಿತ್ತು. ಗುಜರಾತ್ ರಾಜಕೀಯ ಇತಿಹಾಸದಲ್ಲಿಯೇ ಮೊದಲ ಬಾರಿ 1980 ಮತ್ತು 1985ರ ರಾಜ್ಯ ಸಚಿವ ಸಂಪುಟದಲ್ಲಿ ಪಟೇಲ್ ಜಾತಿಗೆ ಸೇರಿದ ಒಬ್ಬರೇ ಒಬ್ಬ ಸಚಿವರಿರಲಿಲ್ಲ.

ಅಲ್ಲಿಂದ ಮತ್ತೊಂದು ಬಗೆಯ ರಾಜಕೀಯ ಮತ್ತು ಜಾತಿ ಧ್ರುವೀಕರಣ ಪ್ರಾರಂಭವಾಯಿತು. ಅಲ್ಲಿಯವರೆಗೆ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಪಟೇಲರು ಬಿಜೆಪಿ ಮತ್ತು ಚಿಮನ್‌ ಭಾಯ್ ಪಟೇಲ್ ನೇತೃತ್ವದ ಜನತಾ ಪಕ್ಷದತ್ತ ವಲಸೆ ಹೋಗಲಾರಂಭಿಸಿದರು. 1990ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, 33 ಸ್ಥಾನಗಳನ್ನಷ್ಟೇ ಗೆದ್ದು ಹೀನಾಯ ಸೋಲು ಅನುಭವಿಸಿತು. ಬಿಜೆಪಿ ಮತ್ತು ಜನತಾದಳದ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಚಿಮನ್‌ ಭಾಯ್ ಪಟೇಲ್ ಮುಖ್ಯಮಂತ್ರಿ, ಕೇಶುಭಾಯ್ ಪಟೇಲ್ ಉಪಮುಖ್ಯಮಂತ್ರಿ. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷಕ್ಕೆ ಆ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.
ಅಯೋಧ್ಯೆ ಯಾತ್ರೆ ಹೊರಟಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಬಿಹಾರದಲ್ಲಿ ಬಂಧಿಸಿದ್ದನ್ನು ಪ್ರತಿಭಟಿಸಿ ಬಿಜೆಪಿ ಬೆಂಬಲ ವಾಪಸು ಪಡೆದ ಕಾರಣದಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು. ನಂತರ ಚಿಮನ್‌ ಭಾಯ್ ಪಟೇಲ್ ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದರೂ ಪಟೇಲರು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬರಲಿಲ್ಲ. 1995ರ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದು ಕೇಶುಭಾಯ್‌ ಪಟೇಲ್ ಮುಖ್ಯಮಂತ್ರಿಯಾದರು.

ಆದರೆ ಕ್ಷತ್ರಿಯ ಜಾತಿಗೆ ಸೇರಿದ ಶಂಕರಸಿಂಗ್ ವಘೇಲಾ, ಸರ್ಕಾರದೊಳಗಿನ ‘ಪಟೇಲಗಿರಿ’ ವಿರುದ್ಧ ಬಂಡೆದ್ದ ಪರಿಣಾಮ ಬಿಜೆಪಿ ಸರ್ಕಾರ ಪತನವಾಯಿತು. ವಘೇಲಾ ಪ್ರತ್ಯೇಕ ಪಕ್ಷ ಕಟ್ಟಿ ಕಾಂಗ್ರೆಸ್ ಬೆಂಬಲದ ಜತೆಗೆ ಸರ್ಕಾರ ರಚಿಸಿದರು. 1998ರ ವಿಧಾನಸಭಾ ಚುನಾವಣೆ ಯಲ್ಲಿ ಮತ್ತೆ ಕೇಶುಭಾಯ್‌ ನೇತೃತ್ವದ ಬಿಜೆಪಿ ಬಹುಮತ ದೊಂದಿಗೆ ಅಧಿಕಾರಕ್ಕೇರಿತು. ಆಗ ಬಿಜೆಪಿಯಲ್ಲಿದ್ದ 117 ಶಾಸಕರಲ್ಲಿ 42 ಮಂದಿ ಪಟೇಲ್ ಜಾತಿಗೆ ಸೇರಿದವರಾಗಿದ್ದರು.

2001ರಲ್ಲಿ ಕೇಶುಭಾಯ್‌ ಅವರನ್ನು ಪದಚ್ಯುತಗೊಳಿಸಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು. ಅಲ್ಲಿಯವರೆಗೆ ಗುಜರಾತ್ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದ ‘ಜಾತಿ’ ಪಕ್ಕಕ್ಕೆ ಸರಿದು ಆ ಸ್ಥಾನವನ್ನು ‘ಧರ್ಮ’ ಆಕ್ರಮಿಸಿಕೊಂಡಿತು. 2002ರ ಗುಜರಾತ್ ಕೋಮು ದಂಗೆಯಿಂದ ಪ್ರಾರಂಭವಾದ ಈ ‘ಧರ್ಮ ರಾಜಕಾರಣ’ ಮೋದಿಯವರನ್ನು ಪ್ರಧಾನಿ ಪಟ್ಟದವರೆಗೆ ಕೊಂಡೊಯ್ದಿದೆ. ‘ಹಿಂದೂ ಹೃದಯ ಸಾಮ್ರಾಟ’ನಾಗಿ ತಮ್ಮನ್ನು ಬಿಂಬಿಸಿಕೊಂಡ ಮೋದಿ ಅವರು ನಾಜೂಕಾಗಿ ಕೇಶುಭಾಯ್‌ ಪಟೇಲ್ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರು. 2007 ಮತ್ತು 2012ರ ವಿಧಾನಸಭಾ ಚುನಾವಣೆಗಳಲ್ಲಿ ಅತೃಪ್ತ ಕೇಶುಭಾಯ್‌ ಪಟೇಲ್ ಎಷ್ಟೇ ಗುಡುಗಾಡಿದರೂ ಹಿಂದುತ್ವದ ಪ್ರವಾಹದಲ್ಲಿ ತೇಲಿಹೋಗಿದ್ದವರನ್ನು ಮೋದಿ ಪ್ರಭಾವದಿಂದ ಬಿಡಿಸಿ ತಮ್ಮೆಡೆ ಸೆಳೆಯಲು ಸಾಧ್ಯವಾಗಲಿಲ್ಲ.

ಹಿಂದುಳಿದ ಗಾಂಚಿ (ಗಾಣಿಗ) ಜಾತಿಗೆ ಸೇರಿರುವ ಮೋದಿ ಅವರು ಸೋಲಂಕಿ ಅವರ ‘ಖಾಮ್’ ಸೂತ್ರದಲ್ಲಿದ್ದ ಮುಸ್ಲಿಮರನ್ನು ಹೊರಗಿಟ್ಟು ಹಿಂದುತ್ವದ ಹೊಸ ಸೂತ್ರವನ್ನು ಹೆಣೆದು ಆ ರಾಜ್ಯವನ್ನು ಹನ್ನೆರಡು ವರ್ಷ ಆಳಿದರು. ಅದೇ ಚಿಮ್ಮುಹಲಗೆಯನ್ನು ಬಳಸಿ ದೆಹಲಿಗೆ ಜಿಗಿದಿದ್ದಾರೆ. ಈಗ ಪಟೇಲ್ ಸಮುದಾಯಕ್ಕೆ ಸೇರಿದ ಆನಂದಿ ಬೆನ್‌ ಪಟೇಲ್ ಮುಖ್ಯಮಂತ್ರಿಯಾದರೂ ಪಟೇಲ್ ಸಮುದಾಯಕ್ಕೆ ರಾಜಕೀಯದ ಗತವೈಭವಕ್ಕೆ ಮರಳಲು ಸಾಧ್ಯವಾಗಿಲ್ಲ. ಇವೆಲ್ಲವನ್ನೂ ಅಸಹಾಯಕರಂತೆ ನೋಡುತ್ತಾ ನರಳಾಡುತ್ತಿದ್ದ ಪಟೇಲ್ ಸಮುದಾಯಕ್ಕೆ ಹಾರ್ದಿಕ್ ಪಟೇಲ್ ಎನ್ನುವ ಪಡ್ಡೆ ಹುಡುಗನಲ್ಲಿ ರಾಜಕೀಯವಾಗಿ ತಮ್ಮನ್ನು ಪ್ರಸ್ತುತಗೊಳಿಸಬಲ್ಲ ನಾಯಕ ಕಂಡಿರಬಹುದು.

ವಿಚಿತ್ರವೆಂದರೆ 1985ರಲ್ಲಿ ಗುಜರಾತ್‌ನಲ್ಲಿ ಮೀಸಲಾತಿ ವಿರೋಧಿ ಚಳವಳಿಯ ಮುಂಚೂಣಿಯಲ್ಲಿದ್ದದ್ದು ಇದೇ ಪಟೇಲ್ ಸಮುದಾಯ. ಇತಿಹಾಸದ ಚಕ್ರ ಸಂಪೂರ್ಣವಾಗಿ ಒಂದು ಸುತ್ತು ತಿರುಗಿದೆ. ಇದು ಕೇವಲ ಪಟೇಲ್ ಸಮುದಾಯದ ಎಡಬಿಡಂಗಿತನವಲ್ಲ. ಮೀಸಲಾತಿಯ ವಿರೋಧಿಗಳಲ್ಲಿ ಬಹಳಷ್ಟು ಮಂದಿ ಸೈದ್ಧಾಂತಿಕವಾಗಿ ಅದನ್ನು ವಿರೋಧಿಸುವವರಲ್ಲ. ಅವರ ವಿರೋಧದಲ್ಲಿರುವುದು ‘ಮೀಸಲಾತಿಯ ಭಾಗ್ಯ ನಮಗಿಲ್ಲವಲ್ಲಾ’ ಎನ್ನುವ ಅಸೂಯೆ ಅಷ್ಟೇ. ಖೊಟ್ಟಿ ಜಾತಿ ಸರ್ಟಿಫಿಕೇಟ್ ಮಾಡಿಕೊಂಡು ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ– ಪಂಗಡಗಳ ಒಳಗೆ ಅಕ್ರಮವಾಗಿ ನುಸುಳುವವರು ಇದೇ ಗುಂಪಿಗೆ ಸೇರಿದವರು.

ಗುಜರಾತ್‌ನಲ್ಲಿ ಮೀಸಲಾತಿಗಾಗಿ ಪಟೇಲರು ನಡೆಸುತ್ತಿರುವ ಚಳವಳಿಗೆ ಮೇಲ್ನೋಟಕ್ಕೆ ಎರಡು ಮುಖಗಳಿರುವಂತೆ ಕಾಣಿಸುತ್ತಿದೆ. ಮೊದಲನೆಯದು ಈಗಾಗಲೇ ಚರ್ಚಿಸಿರುವ ರಾಜಕೀಯವಾದ ಮುಖ. ಈ ಚಳವಳಿಯ ಇನ್ನೊಂದು ಮುಖದ ವಿನ್ಯಾಸ ವಿಸ್ತಾರವಾದುದು. ಅದರ ಸಣ್ಣ ಸುಳಿವನ್ನು ವಿಶ್ವಹಿಂದೂ ಪರಿಷತ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ನೀಡಿದ್ದಾರೆ.

‘ಜಾತಿ ಆಧರಿತ ಮೀಸಲಾತಿ ರದ್ದಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕೆಂಬುದು ವಿಎಚ್‌ಪಿ ಬಯಕೆ. ಇದಕ್ಕಾಗಿ ಮೀಸಲಾತಿಯ ಅವಶ್ಯಕತೆಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಉಸ್ತುವಾರಿಯಲ್ಲಿ ಆಯೋಗವನ್ನು ರಚಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಸೌಲಭ್ಯ ಇರಬೇಕು…’ ಎಂದೆಲ್ಲಾ ಜೈನ್ ಹೇಳಿದ್ದಾರೆ. ಬೆಕ್ಕು ಚೀಲದಿಂದ ಹೊರಗೆ ಬಂದಿದೆ.

ಮೀಸಲಾತಿಯನ್ನು ಶೇ 50ಕ್ಕೆ ಸೀಮಿತಗೊಳಿಸಿ ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿರುವುದರಿಂದ ಮತ್ತು ರಾಜಸ್ತಾನದಲ್ಲಿ ಪಟೇಲ್ ಜಾತಿಗೆ ಸಮೀಪ ಇರುವ ಜಾಟರಿಗೆ ನೀಡಿರುವ ಮೀಸಲಾತಿಯನ್ನು ಸುಪ್ರೀಂಕೋರ್ಟ್  ರದ್ದುಗೊಳಿಸಿರುವುದರಿಂದ ತಾವು ಮೀಸಲಾತಿಯನ್ನು ಪಡೆದುಕೊಳ್ಳುವುದು ಅಸಾಧ್ಯ ಎಂದು ತಿಳಿದುಕೊಳ್ಳದಷ್ಟು ಪಟೇಲರು ದಡ್ಡರಲ್ಲ. ಪಟೇಲರ ಈಗಿನ ಚಳವಳಿಗೆ ತಮಗೆ ಮೀಸಲಾತಿಯನ್ನು ಪಡೆದುಕೊಳ್ಳುವ ಉದ್ದೇಶಕ್ಕಿಂತಲೂ ಮುಖ್ಯವಾಗಿ ಇತರ ಜಾತಿಗಳಿಗೆ ಇರುವ ಮೀಸಲಾತಿಯನ್ನು ಕಿತ್ತುಕೊಳ್ಳಬೇಕೆಂಬ ದುರುದ್ದೇಶ ಇರುವುದು ಸ್ಪಷ್ಟ.

ವಿಎಚ್‌ಪಿ ಪರೋಕ್ಷವಾಗಿ ಬೆಂಬಲಿಸುತ್ತಿರುವುದನ್ನು ನೋಡಿದರೆ ಗುಜರಾತ್‌ನಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಚಳವಳಿಯನ್ನು ನಿಧಾನವಾಗಿ ಬೇರೆ ರಾಜ್ಯಗಳಿಗೂ ಪಸರಿಸಿ ಅಂತಿಮವಾಗಿ ಅದನ್ನು ಮೀಸಲಾತಿ ವಿರೋಧಿ ಚಳವಳಿಯಾಗಿ ಪರಿವರ್ತನೆಗೊಳಿಸುವ ಹುನ್ನಾರ ಇದ್ದ ಹಾಗೆ ಕಾಣುತ್ತಿದೆ. ತಕ್ಷಣದಲ್ಲಿ ಕೇಂದ್ರ ಸರ್ಕಾರ ಮೀಸಲಾತಿಯನ್ನು ಪರಿಷ್ಕರಿಸುವಂತಹ ದುಸ್ಸಾಹಸಕ್ಕೆ ಇಳಿಯದಿದ್ದರೂ, ಇಂತಹ ಚಳವಳಿಯನ್ನೇ ನೆಪವಾಗಿಟ್ಟುಕೊಂಡು ಮೀಸಲಾತಿಯ ಅಧ್ಯಯನಕ್ಕಾಗಿ ಆಯೋಗವನ್ನು ನೇಮಿಸುವ ಮೂಲಕ ಸಾರ್ವಜನಿಕ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದು.

ದಿಢೀರನೆ ಮೀಸಲಾತಿ ಬಗ್ಗೆ ಈ ರೀತಿಯ ವಿವಾದ ಹುಟ್ಟಿಕೊಳ್ಳಲು ಇನ್ನೂ ಒಂದು ಕಾರಣ ಇದೆ. ಭರದಿಂದ ನಡೆಯುತ್ತಿರುವ ಸರ್ಕಾರಿ ಸೇವೆಗಳ ಖಾಸಗೀಕರಣದಿಂದಾಗಿ ಸರ್ಕಾರಿ ಉದ್ಯೋಗಗಳ ಸಂಖ್ಯೆ ಪಾತಾಳಕ್ಕೆ ಇಳಿದಿದೆ. ಅದೇ ರೀತಿ ಶಿಕ್ಷಣದ ಖಾಸಗೀಕರಣದಿಂದಾಗಿ ಅಲ್ಲಿಯೂ ಮೀಸಲಾತಿ ಅಪ್ರಸ್ತುತವಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ರಂಗದಲ್ಲಿಯೂ ಮೀಸಲಾತಿ ನೀಡಬೇಕೆಂಬ ಬೇಡಿಕೆ ಹೆಚ್ಚು ಬಲವಾಗಿ ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಬಗ್ಗೆ ತನ್ನ ಬದ್ಧತೆಯನ್ನು ಸಾರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ  ಕಸುವು ಪಡೆಯುತ್ತಿರುವ ಖಾಸಗಿ ರಂಗದ ಉದ್ಯಮಗಳ ನಾಯಕರು ತಮ್ಮ ಮನೆಬಾಗಿಲು ತಟ್ಟಲಿರುವ ಮೀಸಲಾತಿ ಆಕಾಂಕ್ಷಿಗಳನ್ನು ದೂರ ಅಟ್ಟಲು  ಮೀಸಲಾತಿ ವಿರೋಧಿಗಳ ಜತೆ ಷಾಮೀಲಾಗಿರುವ ಸಾಧ್ಯತೆ ಕೂಡಾ ಇದೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ ಆಧರಿತ ಮೀಸಲಾತಿಯನ್ನು ಬದಲಾಯಿಸುವ ಒಲವು ಉಳ್ಳವರೇ ಆಗಿರುವುದರಿಂದ ಮೀಸಲಾತಿ ಪರವಾಗಿರುವವರ ಮನಸ್ಸಲ್ಲಿ ಮೂಡಿರುವ ಸಂಶಯಗಳು ನಿರಾಧಾರ ಎಂದು ಹೇಳಲಾಗದು.

ಗೋ ಹತ್ಯಾ ನಿಷೇಧ ಕಾನೂನು ಮತ್ತು ಖುರೇಶಿ ಸಮುದಾಯ


ಡಾ ಎಚ್ ಎಸ್ ಅನುಪಮಾ

ಖುರೇಶಿಗಳು: ವ್ಯಾಘ್ರ ಸೇನೆಯ ಗೋ ಭಕ್ತಿಗೆ ನಲುಗಿದವರು..


ಎಲ್ಲೋ ಹಿಂಡಿದರೆ ಇನ್ನೆಲ್ಲೋ ಸುರಿಯುತ್ತದೆ. ಎಲ್ಲೋ ಒತ್ತಿದರೆ ಇನ್ನೆಲ್ಲೋ ತೆರೆಯುತ್ತದೆ. ಬಹುಸಮುದಾಯಗಳ ವೈವಿಧ್ಯಮಯ ಭಾರತದಲ್ಲಿ ಕೈಗೊಳ್ಳುವ ಯಾವುದೇ ಕ್ರಿಯೆಯೂ ಹೀಗೇ ಕೊನೆಯಾಗುವಾಗ ಒಂದು ಸಮುದಾಯವನ್ನೇ ಗುರಿಯಾಗಿಸಿ ತೆಗೆದುಕೊಳ್ಳುವ ಕ್ರಮಗಳು ಹಲವು ದುಸ್ಸಾಧ್ಯತೆಗಳನ್ನು ಸಹಜವಾಗೇ ಹೊಂದಿರುತ್ತವೆ. ಅದರಲ್ಲೂ ಆಹಾರ, ವರ್ತನೆ, ಉಡುಪುಗಳಂತಹ ದೈನಂದಿನ ಆಗುಹೋಗುಗಳು ಕಾಯ್ದೆಕಾನೂನಿಗೊಳಪಟ್ಟರೆ ಹೆಸರಿಡಲಾಗದ ಹಲವು ಸಂಕಟಗಳು ಭುಗಿಲೇಳುತ್ತವೆ.

ನಮ್ಮಲ್ಲಿ ಆಹಾರ ಕುರಿತ ಚರ್ಚೆ, ವಿವಾದ ಆಗೀಗ ಶುರುವಾಗುತ್ತ ಇರುತ್ತದೆ. ಒಂದೆಡೆ ಕೋಟ್ಯಂತರ ಮಕ್ಕಳು, ಜನರು ಹಸಿವು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ಇನ್ನೊಂದೆಡೆ ಹೊಟ್ಟೆತುಂಬಿದವರ ಖಯಾಲಿಗೆ ಸಿಕ್ಕ ಪಶುಪಕ್ಷಿಗಳು ಅಳಿವಿನಂಚಿಗೆ ಸರಿಯುತ್ತಿವೆ. ಜೊತೆಗೆ ತಿನ್ನುವುದು ಹೇಗಿರಬೇಕು? ಯಾವುದಿರಬೇಕು? ಎಂಬ ಪ್ರಶ್ನೆಗಳು ಧಾರ್ಮಿಕ ಆಯಾಮ ಪಡೆದು ಜೀವನ್ಮರಣದ ಪ್ರಶ್ನೆಗಳೋ ಎಂಬಂತೆ ಭಾವಿಸಲ್ಪಡುತ್ತಿವೆ. ಅದರಲ್ಲೂ ಗೋವು, ಗೋಮಾಂಸ ಕುರಿತಂತೆ ಕೊನೆ ಮೊದಲಿಲ್ಲದ ಚರ್ಚೆ ನಡೆದಿದೆ. ಒಂದು ವರ್ಗ ಗೋಹತ್ಯೆ ಮಾಡಬೇಡಿ, ಮುದಿ ಎತ್ತುದನಗಳ ಮಾರಲೂಬೇಡಿ, ಅದರ ಬದಲು ಗೋಮೂತ್ರ, ಸಗಣಿ ಸಂಗ್ರಹಿಸಿ ಶುದ್ಧೀಕರಿಸಿ ಮಾರಾಟ ಮಾಡಿ; ಅದು ಹಲವು ಕಾಯಿಲೆಗಳಿಗೆ ದಿವ್ಯೌಷಧ ಎನ್ನುತ್ತಿದೆ. ಅವರ ಅಬ್ಬರದಲ್ಲಿ ‘ಗೋಮಾತೆಯೆಂಬ ಕಲ್ಪನೆಯೇನೋ ಸುಂದರವಾಗಿದೆ; ಆದರೆ ಅದು ವ್ಯಾವಹಾರಿಕವಲ್ಲ’ ಎಂಬ ಕಹಿಸತ್ಯ ಹೇಳುವುದೂ ಧರ್ಮದ್ರೋಹ ಎನಿಸಿಕೊಂಡಿದೆ.

ಬಹುಸಂಖ್ಯಾತರ ಧಾರ್ಮಿಕತೆಯ ಭಾಗವೆಂದು ಗೋಹತ್ಯಾ ನಿಷೇಧ ಕಾಯ್ದೆ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ ಜಾರಿಯಾಗಿದೆ. ಆದರೆ ಅದರಿಂದ ಮಹಾರಾಷ್ಟ್ರದಾದ್ಯಂತ ಎಲ್ಲ ಧರ್ಮಗಳಿಗೆ ಸೇರಿದ ಸುಮಾರು ಹತ್ತು ಲಕ್ಷ ಜನರ ಉದ್ಯೋಗ, ವ್ಯಾಪಾರಕ್ಕೆ ಸಂಚಕಾರ ಒದಗಿದೆ. ಪ್ರಖ್ಯಾತ ಕೊಲ್ಲಾಪುರ ಚಪ್ಪಲಿ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಹಳೆ ಎತ್ತುಗಳ ಮಾರಲಾರದೆ ಹೊಸ ಜೋಡಿ ಕೊಳ್ಳಲು ಸಾಧ್ಯವಾಗದೇ ಸಣ್ಣ ರೈತರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ಒಂದಿಡೀ ಸಮುದಾಯ ತನ್ನ ಜೀವನಾಧಾರವಾದ ವೃತ್ತಿಗೆ ಒದಗಿದ ಕಂಟಕದಿಂದ ಹಿನ್ನಡೆ ಅನುಭವಿಸುತ್ತಿದೆ.

ಆ ಸಮುದಾಯವೇ ಮಹಾರಾಷ್ಟ್ರದ ಖುರೇಶಿಗಳು.

ನಿಸರ್ಗದ ಅಪಾಯದಂಚಿನಲ್ಲಿರುವ ತಳಿಯ ಪಶುಪಕ್ಷಿಗಳನ್ನು ಬೇಟೆಯಾಡಿ ಹಸಿವೆ ತಣಿಸಿಕೊಳ್ಳುವುದು ಅಪರಾಧ. ಅವುಗಳ ಉಳಿವಿಗೆ ಕಾಯ್ದೆಯ ಬೆಂಬಲ ಅಗತ್ಯ. ಆದರೆ ಸಾವಿರಾರು ವರ್ಷಗಳಿಂದಲೂ ಮಾಂಸ, ಹಾಲುಹೈನಕ್ಕೆಂದೇ ಸಾಕಲ್ಪಟ್ಟ; ವಿಶ್ವಾದ್ಯಂತ ಅರ್ಧ ಜನರ ಆಹಾರವಾಗಿರುವ ಗೋವಿಗೆ ಕಾಯ್ದೆಯ ರಕ್ಷಣೆ ಅವಶ್ಯವಿದೆಯೆ? ಗೋವಿನ ರಕ್ಷಣೆಗೆ ಕಾಯ್ದೆ ಖಂಡಿತಾ ಬೇಕಿರಲಿಲ್ಲ, ಅದು ಬೇಕಾದದ್ದು ಜನರ ಮತಗಳ ಮೇಲೆ ಕಣ್ಣಿಟ್ಟ ವ್ಯಾಘ್ರಸೇನೆಯ ಪಟ್ಟಭದ್ರತೆಗೆ. ದೇಶಾದ್ಯಂತ ಹಿಂದೂತ್ವ ಪ್ರತಿಪಾದಿಸುವ ಗೋಸುತರು ಅಧಿಕಾರಕ್ಕೆ ಬಂದು, ಮಹಾರಾಷ್ಟ್ರದಲ್ಲೂ ಕಳೆದ ಚುನಾವಣೆಯ ಬಳಿಕ ಅಧಿಕಾರ ಚುಕ್ಕಾಣಿ ಹಿಡಿದಾಗ ಇದುವರೆಗೆ ನಾನಾ ಕಾರಣಗಳಿಂದ ತಡೆಹಿಡಿಯಲ್ಪಟ್ಟಿದ್ದ ‘ಮಹಾರಾಷ್ಟ್ರ ಅನಿಮಲ್ ಪ್ರಿಸರ್ವೇಷನ್ ಅಮೆಂಡ್‌ಮೆಂಟ್ ಆಕ್ಟ್’ ಜಾರಿಗೆ ಬಂತು. ಈ ಕಾಯ್ದೆಯ ವಿರುದ್ಧ ಕೆಲವರು ಹೈಕೋರ್ಟಿಗೆ ಹೋದಾಗ ಮುಂಬೈ ಹೈಕೋರ್ಟು ಗೋಹತ್ಯಾ ನಿಷೇಧ ಕಾಯ್ದೆಯನ್ನು ಎತ್ತಿ ಹಿಡಿಯಿತು. ದನಕರು ಕಡಿಯುವುದಷ್ಟೆ ಅಲ್ಲ, ಅದರ ವ್ಯಾಪಾರ ಹಾಗೂ ದನದ ಮಾಂಸ ಹೊಂದಿರುವುದೂ ಅಪರಾಧವಾಗಿ ಐದು ವರ್ಷ ಜೈಲುವಾಸದವರೆಗೆ ಶಿಕ್ಷೆ ನಿಗದಿಯಾಯಿತು.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ ಪ್ರಕಾರ ವಿಶ್ವದಲ್ಲೇ ಅತಿ ಕಡಿಮೆ ಮಾಂಸ ಸೇವಿಸುವ; ಮೂರನೇ ಒಂದು ಭಾಗ ಜನ ಸಸ್ಯಾಹಾರಿಗಳೆಂದು ಹೇಳಿಕೊಳ್ಳುವ ದೇಶ ಭಾರತ. ೮೦% ಹಿಂದೂಗಳು ದನದ ಮಾಂಸ ತಿನ್ನುವುದಿಲ್ಲವೆಂದೇ ಲೆಕ್ಕ. ಆದರೆ ಇದು ವಿಶ್ವದಲ್ಲೇ ಅತಿ ದೊಡ್ಡ ಜಾನುವಾರು ಮಾಂಸದ ಉತ್ಪಾದಕ ದೇಶ. ಭಾರತದ ಖ್ಯಾತ ರಫ್ತು ಬಾಸ್ಮತಿ ಅಕ್ಕಿಯಲ್ಲ, ಎಮ್ಮೆ ಮಾಂಸ! ಅರಬ್ ಮತ್ತು ಪೂರ್ವ ಏಷ್ಯಾ ದೇಶಗಳಲ್ಲಿ ಭಾರತದ ಎಮ್ಮೆ ಮಾಂಸ ಬಹು ಜನಪ್ರಿಯವಾಗಿದೆ. ಕಳೆದ ವರ್ಷ ೪.೩ ಬಿಲಿಯನ್ ಡಾಲರ್ ಮೌಲ್ಯದ ಎಮ್ಮೆ ಮಾಂಸ ರಫ್ತಾಗಿದೆ. ಎಮ್ಮೆ ಪೂಜೆ ಮಾಡದ ಗೋಸುತರ ಕಾಲದಲ್ಲಿ ಎಮ್ಮೆ ಮಾಂಸ ರಫ್ತು ಕಳೆದ ವರ್ಷಕ್ಕಿಂತ ೧೬% ಹೆಚ್ಚಾಗಿದೆ! ಗೋಹತ್ಯೆ ನಿಷೇಧದ ಬಳಿಕ ಎಮ್ಮೆ ಮಾಂಸ ವ್ಯಾಪಾರ ಸ್ಥಳೀಯವಾಗಿಯೂ ಹೆಚ್ಚಾಗಿದ್ದು ಮುಂಬಯಿಯ ದೇವನಾರ್‌ನಲ್ಲೆ ಮೊದಲು ದಿನಕ್ಕೆ ೯೦ ಎಮ್ಮೆ ಕಡಿಯುತ್ತಿದ್ದರೆ ಈಗ ೩೦೦ ಎಮ್ಮೆ ಕಡಿಯಲಾಗುತ್ತಿದೆ.

ಮಹಾರಾಷ್ಟ್ರದ ಖುರೇಶಿಗಳು ಭಾರತದ ಜಾತಿವ್ಯವಸ್ಥೆಯ ಉದ್ಯೋಗ-ಜಾತಿ ಸಂಬಂಧದ ಸಿಕ್ಕುಗಳಲ್ಲಿ ಮಾಂಸ ಮಾರಾಟ, ಚರ್ಮ ಮಾರಾಟ, ಪ್ರಾಣಿಗಳ ಕೊಳ್ಳುವ ವ್ಯವಹಾರದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡ ಸಮುದಾಯವಾಗಿದ್ದಾರೆ. ದನದ ಮಾಂಸ ತಿನ್ನುವವರೇನೋ ತಮ್ಮ ಆಯ್ಕೆಯಲ್ಲಿ ನಾಲಿಗೆ ರುಚಿಯಲ್ಲಿ ಕೊಂಚ ಹೆಚ್ಚು ಕಡಿಮೆ ಮಾಡಿಕೊಂಡಾರು. ಆದರೆ ಮಾಂಸ ವ್ಯಾಪಾರವನ್ನೇ ಉದ್ಯೋಗವಾಗಿ ನಂಬಿದ ಈ ಸಮುದಾಯದ ಎದುರಿನ ಆಯ್ಕೆಗಳು ಅಷ್ಟು ಸುಲಭವಾಗಿ ಬದಲಾಗಲಾರವು. ಈಗ ಖುರೇಶಿಗಳು ಎಮ್ಮೆ ಮಾಂಸದ ವ್ಯಾಪಾರದಲ್ಲಿ ತೊಡಗಿದ್ದರೂ ಭಾರತದ ಎಮ್ಮೆಗಳ ಸಂಖ್ಯೆ (೧೩ ಕೋಟಿ) ದನಕ್ಕೆ ಹೋಲಿಸಿದರೆ (೨೮.೩ ಕೋಟಿ) ಕಡಿಮೆಯಿರುವುದರಿಂದ ವಹಿವಾಟು ಕಡಿಮೆಯಾಗಿದೆ.


ಯಾರೀ ಖುರೇಶಿಗಳು?


ಮಾಂಸ ವ್ಯಾಪಾರದ ಒಳಹೊರಗು ಅರಿತ ಸುನ್ನಿ ಮುಸ್ಲಿಮರ ಸಮುದಾಯ ಖುರೇಶಿಗಳದು. ಅವರಿಗೆ ಅವರದೇ ಜಾತಿಯ ಜಮಾತೆಯಿದ್ದು ಇದು ಭಾರತದ ಅತಿ ಹಳೆಯ ಜಮಾತೆಗಳಲ್ಲಿ ಒಂದಾಗಿದೆ. ಕಸಾಯ್ ಎಂದರೆ ಉರ್ದುವಿನಲ್ಲಿ ಕಡಿಯುವವ. (ಗಸಾಬ್ (ಅರೆಬಿಕ್) - ಕಟುಕ, ಸೀಳುವವ) ಮಾಂಸ ಕಡಿಯುವ ಕೆಲಸ ಮಾಡುವವರದು ಕಸ್ಸಾಬ್ ಪಂಗಡ. ಅವರ ಸಾಮಾನ್ಯ ಸರ್‌ನೇಮ್ ಖುರೇಶಿ. ಆದರೆ ಎಲ್ಲ ಖುರೇಶಿಗಳೂ ಕಸ್ಸಾಬ್‌ಗಳಲ್ಲ. ಅದೊಂದು ಅರಬ್ ಬುಡಕಟ್ಟು. ಪ್ರವಾದಿ ಮಹಮದರ ಅಜ್ಜ ಈ ಬುಡಕಟ್ಟು ಗುಂಪಿನ ಮುಖ್ಯಸ್ಥರೇ ಆಗಿದ್ದರು. ಭಾರತದ ಖುರೇಶಿಗಳು ದೆಹಲಿ ಸುಲ್ತಾನರ ಕಾಲದಲ್ಲಿ ವಲಸೆ ಬಂದು ಇಲ್ಲಿ ನೆಲೆಯಾದವರು. ಈಗ ಹಲವು ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ. ಅವರಲ್ಲಿ ಕೆಲ ಮತಾಂತರಗೊಂಡ ಸಮುದಾಯಗಳೂ ಇವೆ. ಅವರು ಉರ್ದು ಜೊತೆಗೆ ಸ್ಥಳೀಯ ಭಾಷೆ ಮಾತನಾಡುತ್ತಾರೆ. ಅವರಲ್ಲಿ ಕೋಳಿಕುರಿ ಕಡಿಯುವ ಚಿಕ್ವಾಗಳು (ಉತ್ತರ ಪ್ರದೇಶ), ಎಮ್ಮೆದನ ಕಡಿವ ಕಸ್ಸಾಬ್‌ಗಳು ಹಾಗೂ ವೃತ್ತಿಪರ ಅಡುಗೆಯವರಾಗಿರುವ ಬಾವರ್ಚಿ (ಲಕ್ನೊ, ಗುಜರಾತ್) ಗಳೆಂಬ ಮೂರು ಪಂಗಡಗಳಿವೆ. ಅವಧಿ ಅಡಿಗೆಯ ದಮ್ ಬಿರಿಯಾನಿ, ರುಮಾಲೆ ರೋಟಿಗಳ ಗರಿಮೆಯಲ್ಲಿ ಬಾವರ್ಚಿಗಳ ಶ್ರಮವಿದೆ. ಭಾರತದ ಖುರೇಶಿಗಳ ಒಟ್ಟೂ ಜನಸಂಖ್ಯೆ ೯.೩ ಲಕ್ಷ. ಪಾಕಿಸ್ತಾನದಲ್ಲೂ ಕಸ್ಸಾಬ್‌ಗಳಿದ್ದು ಅವರ ಮೂಲ ರಾಜಸ್ಥಾನದ ರಜಪೂತ ಬುಡಕಟ್ಟುಗಳಾಗಿವೆ. ಅವರು ಮುಖ್ಯವಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದ್ದಾರೆ. ಅವರಲ್ಲೇ ಒಂದು ಉಪಸಮುದಾಯವಾದ ‘ಪೆಂಜಾ’ ಹತ್ತಿ ಬಿಡಿಸುವ, ಮಾರುವ ವ್ಯವಹಾರದಲ್ಲೂ ತೊಡಗಿಕೊಂಡಿದೆ. ಜಮ್ಮುಕಾಶ್ಮೀರದಲ್ಲಿ ಅವರದು ಮೇಲ್ಜಾತಿ ಮುಸ್ಲಿಂ ಸಮುದಾಯ. ಮಸೂದಿ, ಬುಖಾರಿ, ಖುರೇಶಿ ಎಂಬ ಮೂರು ಸರ್‌ನೇಮ್‌ಗಳಿವೆ.

ಮಹಾರಾಷ್ಟ್ರದ ಖುರೇಶಿಗಳು ಹೈದರಾಬಾದಿನ ನಿಜಾಂ ಸೈನ್ಯದಲ್ಲಿದ್ದವರು ಅಮರಾವತಿಗೆ ಬಂದು ಮಹಾರಾಷ್ಟ್ರದಲ್ಲಿ ನೆಲೆಯಾದವರು. ಉಳಿದೆಲ್ಲ ಕಡೆಗಳಲ್ಲಿ ಹೇಗೋ ಹಾಗೆ ಇಲ್ಲಿಯೂ ಗಾಯ್ ಕಸಾಯ್ (ದನ ಕಡಿಯುವವರು) ಹಾಗೂ ಛೋಟಾ ಕಸಾಯ್ (ಕುರಿಮೇಕೆಕೋಳಿ ಕಡಿಯುವವರು) ಎಂದು ಎರಡು ಪಂಗಡಗಳಿವೆ. ಚೌಧರಿ, ಸೌದಾಗರ್, ಸಿಕ್ಕು ಎಂಬ ಸರ್‌ನೇಮ್‌ಗಳಿವೆ.

ಗೋಮಾಂಸ ಸೇವನೆ ಮತ್ತು ಭಾರತೀಯತೆ 

ಗೋಮಾಂಸ ಸೇವನೆ, ಗೋವಧೆ ಮುಸ್ಲಿಂ ದಾಳಿಕಾರರು ಭಾರತವನ್ನು ಆಕ್ರಮಿಸಿದ ಮೇಲೆ ಶುರುವಾಯಿತೆಂಬ ಜನಪ್ರಿಯ ಕಟ್ಟುಕತೆ ಚಾಲ್ತಿಯಲ್ಲಿದೆ. ಆದರೆ ಅರಬ್ಬರಿಗೆ ಗೋಮಾಂಸ ಗೊತ್ತೇ ಇರಲಿಲ್ಲ. ಅವರದು ಕುರಿ, ಆಡು ಅಥವಾ ಒಂಟೆ ಮಾಂಸದ ಆಹಾರ. ಭಾರತಕ್ಕೆ ಬಂದ ಮೇಲೆಯೇ ಅರಬ್ಬರು ಗೋಮಾಂಸ ರೂಢಿಸಿಕೊಂಡದ್ದು. ಮೊಘಲ್ ದೊರೆಗಳೂ ಗೋವಧೆ ನಿಷೇಧಿಸಿದ್ದರು. ಬಾಬರ್ ತನ್ನ ಮಗನಿಗೆ ಬರೆದಿಟ್ಟ ಸಲಹಾರೂಪದ ಉಯಿಲಿನಲ್ಲಿ ಹಿಂದೂಸ್ತಾನದ ಜನರ ಮನಸ್ಸನ್ನು ಅವರವರ ರೂಢಿ, ಧರ್ಮಗಳ ಆಚರಣೆ ಗೌರವಿಸುವ ಮೂಲಕ ಗೆಲ್ಲಬೇಕೆಂದೂ; ವಿಶೇಷವಾಗಿ ಗೋಹತ್ಯೆ ನಿಷೇಧ ಮಾಡಬೇಕೆಂದೂ ಸೂಚಿಸಿದ್ದ. ಮೈಸೂರಿನ ಹೈದರ್ ಅಲಿ ಗೋವಧೆ ಮಾಡಿದವರ ಕೈಕಡಿಯುವ ಶಿಕ್ಷೆ ನೀಡುತ್ತಿದ್ದ. ಅಕ್ಬರ್, ಜಹಾಂಗೀರ್, ಅಹ್ಮದ್ ಷಾ ಕೂಡಾ ಕೆಲಮಟ್ಟಿಗೆ ಗೋಹತ್ಯೆ ನಿಷೇಧ ಚಾಲ್ತಿಯಲ್ಲಿಟ್ಟಿದ್ದರು.

ಪಶುಸಂಗೋಪನೆ ಮತ್ತು ಕೃಷಿಯನ್ನು ಜೀವನಾಧಾರ ಕಸುಬಾಗಿ ಹೊಂದಿದ ಭಾರತ ಉಪಖಂಡದ ನಾಗರಿಕತೆ ಮೊದಲಿನಿಂದ ಗೋಮಾಂಸ ಬಳಸಿದೆ. ಪಶುಸಂಗೋಪನೆಯೇ ಮುಖ್ಯ ಕಸುಬಾಗಿದ್ದ ಆರ್ಯಕುಲಗಳು ಗೋವಧೆಗೆ ಖ್ಯಾತವಾಗಿದ್ದವು. ದೇವರಿಗೆ ಯಜ್ಞಯಾಗಗಳ ಬಲಿಯಾಗಿ ಗೋವು ಮತ್ತು ಕುದುರೆಗಳನ್ನು ವಧಿಸಿ ಅರ್ಪಿಸಲಾಗುತ್ತಿತ್ತು. ಯಾಗದ ನಂತರ ಪುರೋಹಿತರೂ ಸೇರಿದಂತೆ ಯಾರ‍್ಯಾರು ಮಾಂಸದ ಯಾವ್ಯಾವ ಭಾಗ ಹಂಚಿಕೊಳ್ಳಬೇಕೆಂದು ಶಾಸ್ತ್ರಗ್ರಂಥಗಳಲ್ಲಿ ವಿವರಿಸಲಾಗಿತ್ತು. ಗೋಮಾಂಸ ತಳಸಮುದಾಯಗಳಿಗೆ ದುರ್ಲಭವಾಗಿದ್ದರೂ ಪುರೋಹಿತ ವರ್ಗಕ್ಕೆ ಮಾತ್ರ ಒಂದಲ್ಲ ಒಂದು ಪೂಜೆ, ಯಜ್ಞದ ನೆಪದಲ್ಲಿ ಸಿಗುತ್ತಿತ್ತು. ಕ್ರಿಸ್ತಪೂರ್ವ ಕಾಲದ ಭಾರತದಲ್ಲಿ ಗೋವಧೆ ಯಾವ ಮಟ್ಟಿಗಿತ್ತು ಎಂದರೆ ಅತಿಥಿ ಬಂದರೆ ಒಂದು ಗೋವು ಕಡಿಯುವುದೇ. ಅದಕ್ಕೇ ಅತಿಥಿಯನ್ನು ‘ಗೋಘ್ನ’ನೆಂದು ಕರೆಯುತ್ತಿದ್ದರು.

ಆಗ ಯಜ್ಞಯಾಗಾದಿಗಳ ನೆಪದಲ್ಲಿ ಅಮಾಯಕ ಗೋ ಹತ್ಯೆ ನಡೆಯುವುದು ಕಂಡು ಕೆಲ ಜೀವಗಳು ಸಂಕಟಪಟ್ಟವು. ಅಮಾನವೀಯ ವಧೆಯನ್ನು ನಿಲ್ಲಿಸಬೇಕೆಂದು ಜನರ ಮನವೊಲಿಸಿದರು. ಅವರೇ ಬುದ್ಧ, ಜಿನರಾದರು. ಪೂಜೆ, ಯಾಗಗಳಿಂದ ಬೇಸತ್ತ ಜನ ಅಹಿಂಸೆ ಬೋಧಿಸುವ, ಎಲ್ಲ ಜೀವಿಗಳನ್ನು ಸಮಾನವಾಗಿ ನೋಡುವ ಬೌದ್ಧ, ಜೈನ ತತ್ವಗಳೆಡೆ ಆಕರ್ಷಿತರಾದರು. ಆಗ ಎಚ್ಚೆತ್ತ ಪುರೋಹಿತವರ್ಗ ಗೋಸುತರಾಗಿ, ಸಸ್ಯಾಹಾರಿಯಾಗಿ, ಅದೇ ತನ್ನ ಶ್ರೇಷ್ಠತೆಯೆಂದು ಸಾರತೊಡಗಿತು. ಅಂದು ಗೋಮಾಂಸ ತಿನ್ನುವುದಷ್ಟೇ ಅಲ್ಲ, ಎಲ್ಲ ರೀತಿಯ ಮಾಂಸಾಹಾರ ತ್ಯಜಿಸಿದವರೇ ಇಂದು ಗೋವು ಮಾತೆ, ಅದರ ರೋಮರೋಮಗಳಲ್ಲೂ ದೇವರಿದ್ದಾನೆ, ಭಾರತವೆಂಬ ಹಿಂದೂ ಮೆಜಾರಿಟಿ ದೇಶದಲ್ಲಿ ಜನ ಗೋಮೂತ್ರ ಕುಡಿಯಬೇಕೇ ಹೊರತು ಗೋಮಾಂಸ ತಿನ್ನಬಾರದು ಎಂಬ ಒತ್ತಾಯ ಹೇರುತ್ತಿದ್ದಾರೆ.

ದನ ಸಾಕುವಿಕೆ ಒಂದು ವ್ಯವಹಾರ. ಸಾಕಿದ ದನವನ್ನು ಪ್ರೀತಿಸಬಹುದೇ ಹೊರತು ಗೋಮಾತೆ ಎಂಬ ಭಕ್ತಿಯಿಂದ ಯಾರೂ ದನ ಸಾಕಲಾರರು. ಹಿಂಡಿ, ಬೂಸಾ, ಗೊಬ್ಬರ, ಸಗಣಿಗಳ ಲಾಭ ನಷ್ಟ ಲೆಕ್ಕಾಚಾರಗಳು ವ್ಯವಹಾರಸ್ಥ ರೈತರಿಗೆ ಗೊತ್ತಿದೆ. ಅದರಲ್ಲೂ ಬರನೆರೆಗಳಿಂದ ಕಂಗೆಟ್ಟು ತನ್ನ ಕೂಳು ತಾನು ಬೆಳೆದುಕೊಳ್ಳಲಾಗದ ರೈತನಿಗೆ ರಾಸುಗಳಿಗೆ ಮೇವೊದಗಿಸುವ, ನೀರುಣಿಸಿ ಕಾಳಜಿ ಮಾಡುವ ಕಷ್ಟ ಗೊತ್ತಿದೆ. ಹಿಂದೂಮುಸ್ಲಿಮರೆನ್ನದೆ ವಯಸ್ಸಾದ ಎತ್ತು-ದನ-ಗೊಡ್ಡು ದನಗಳನ್ನು ಮಧ್ಯವರ್ತಿಗಳಿಗೆ ಮಾರಿ ಹೊಸ ದನ, ಎತ್ತು ಕೊಳ್ಳುವುದು ಎಂದಿನಿಂದ ನಡೆದುಬಂದ ರೂಢಿಯಾಗಿದೆ. ಗೋಮಾತೆಯನ್ನು ಪೂಜಿಸುವ ಹಿಂದೂಗಳೇ ಮುದಿಯಾದ, ಗೊಡ್ಡಾದ, ಕೈಕಾಲು ಮುರಿದು ಉಪಯೋಗಕ್ಕೆ ಬಾರದ ರಾಸುಗಳನ್ನು ಸಾಕಲು ಸಾಧ್ಯವಿಲ್ಲವೆಂದು ಮಾರಿದ್ದಾರೆ. ಮಾರಿದ ದನ ಎಲ್ಲಿಹೋಗಿ ಏನಾಗುವುದೆನ್ನುವುದು ಓಪನ್ ಸೀಕ್ರೆಟ್. ಆದರೆ ಗೋವು ಸಾಕಿ ಗೊತ್ತಿಲ್ಲದ ಅತಿಭಾವುಕ ಗೋಪೂಜಕರ ತಲೆಬುಡವಿಲ್ಲದ ಗೋ ಭಕ್ತಿಗೆ ಮುದಿ ಜಾನುವಾರು ವಿಲೇವಾರಿ ಮಾಡಲಾಗದೆ; ಹೊಸ ಎತ್ತಿನ ಜೋಡಿ ಕೊಳ್ಳಲಾಗದೆ ರೈತರು ಕಂಗಾಲಾಗುತ್ತಿದ್ದಾರೆ..

ಹೊಸದಲ್ಲ

ಗೋಹತ್ಯಾ ನಿಷೇಧ ಹಿಂದುತ್ವ ಪ್ರತಿಪಾದಿಸುವವರ ಇವತ್ತಿನ ಹುನ್ನಾರವಷ್ಟೆ ಅಲ್ಲ. ಈ ನಿಷೇಧ ತರುವಲ್ಲಿ ಮಹಾರಾಷ್ಟ್ರ ಮೊದಲಿನದೂ ಅಲ್ಲ. ಸಂಪೂರ್ಣ ನಿಷೇಧ ತಂದ ಹನ್ನೊಂದನೆಯ ರಾಜ್ಯ ಅದು. ಹರ‍್ಯಾಣ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ೧೯೪೭ರಿಂದಲೂ ಈ ಕಾಯ್ದೆ ಚಾಲ್ತಿಯಲ್ಲಿದೆ. ಕೇರಳ, ತ್ರಿಪುರ, ಅರುಣಾಚಲ ಪ್ರದೇಶದಂತಹ ಕೆಲವೇ ರಾಜ್ಯಗಳನ್ನು ಹೊರತುಪಡಿಸಿ ಭಾರತದ ಒಟ್ಟು ೨೪ ರಾಜ್ಯಗಳು ಬೇರೆಬೇರೆ ರೀತಿಯ ಗೋಹತ್ಯಾ ನಿಷೇಧ ಕಾನೂನನ್ನು ಹೊಂದಿವೆ. ಸ್ವಾತಂತ್ರ್ಯ ಬಂದಾಗಿನಿಂದ ಈ ವರ್ಷದವರೆಗೆ ವಿವಿಧ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಹೋರಾಟಗಾರರು ಈ ಕಾಯ್ದೆಯನ್ನು ಬುಗುರಿಯಂತೆ ಬೇಕಾದಾಗ ಬೇಕಾದಲ್ಲಿ ಬೇಕಾದಷ್ಟು ತಿರುಗಿಸಿದ್ದಾರೆ. ಇದರಿಂದ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ವಿನೋಬಾ ಭಾವೆ ಯಾರೂ ಹೊರತಲ್ಲ. ೧೯೬೬ರಲ್ಲಿ ವಿಶ್ವಹಿಂದೂ ಪರಿಷದ್ ಗೋಹತ್ಯಾ ನಿಷೇಧ ಕಾಯ್ದೆ ತರಬೇಕೆಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತು. ಎಲ್ಲ ಒತ್ತಡಗಳ ನಡುವೆ ಇಂದಿರಾ ಕಾಯ್ದೆ ತರಲು ಸಾಧ್ಯವಿಲ್ಲವೆಂದರು. ಹತ್ತು ಸಾವಿರ ಜನ ಕಾಯ್ದೆ ಪರವಿದ್ದ ವಕೀಲರು ಸಂಸತ್ ಭವನವನ್ನು ಸುತ್ತುವರೆಯಲು ಯತ್ನಿಸಿದರು. ದೆಹಲಿ ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್ ಅವರ ಮನೆಗೆ ಬೆಂಕಿ ಹಚ್ಚಲಾಯಿತು. ಗೃಹಮಂತ್ರಿ ಗುಲ್ಜಾರಿಲಾಲ್ ನಂದಾ ರಾಜೀನಾಮೆಯಿತ್ತರು. ಆಂತರಿಕ ಮತ್ತು ಬಾಹ್ಯ ಒತ್ತಡಗಳ ಕಾರಣವಾಗಿ ಹಲವು ರಾಜ್ಯಗಳು ನಿಷೇಧ ಕಾನೂನನ್ನು ಜಾರಿಮಾಡಿದವು.

ಸಂವಿಧಾನದ ಏಳನೇ ಷೆಡ್ಯೂಲಿನಲ್ಲಿ ಜಾನುವಾರು ಹತ್ಯೆ ನಿಷೇಧಿಸಿ, ತಳಿಯನ್ನು ರಕ್ಷಿಸಲು ರಾಜ್ಯಗಳಿಗೆ ಕಾಯ್ದೆ ರೂಪಿಸುವ ಅಧಿಕಾರ ನೀಡಲಾಗಿದೆ. ಅದು ‘ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ’ಯಲ್ಲಿ ಸೇರಿದೆ. ಕೃಷಿ ಮತ್ತು ಪಶುಸಂಗೋಪನೆಯನ್ನು ಅಭಿವೃದ್ಧಿಗೊಳಿಸಿ ಜಾನುವಾರು ತಳಿ ರಕ್ಷಿಸಲು ರಾಜ್ಯಗಳಿಗಿರುವ ನಿರಪೇಕ್ಷ ಅಧಿಕಾರವನ್ನೇ ದಾಳವಾಗಿಟ್ಟುಕೊಂಡು ಹಿಂದುತ್ವ ಸಂಘಟನೆ-ಪಕ್ಷಗಳು ಚದುರಂಗ ಆಡುತ್ತಿವೆ. ಅವರ ತಾಳಕ್ಕೆ ತಕ್ಕಂತೆ ಗೋಹತ್ಯಾ ನಿಷೇಧ ಕಾಯ್ದೆಗಳು ಸಾಂವಿಧಾನಿಕವಾಗಿ ಸಿಂಧು ಎಂದು ೨೦೦೫ರಲ್ಲಿ ಸುಪ್ರೀಂಕೋರ್ಟೂ ಹೇಳಿದೆ. ಕೆಲ ರಾಜ್ಯಗಳು ‘ಹತ್ಯೆ ಮಾಡಲ್ಪಡಬಹುದಾದ’ ಗೋವು (ವಯಸ್ಸಾದ, ದುಡಿಯದ) ಎಂದು ಪ್ರಮಾಣಪತ್ರ ಪಡೆದ ಗೋವುಗಳನ್ನು ಕಡಿಯಲು ಅನುಮತಿ ನೀಡಿದರೆ ಮತ್ತೆ ಕೆಲವು ಸಂಪೂರ್ಣ ನಿಷೇಧಗೊಳಿಸಿವೆ.

ಸಂಪೂರ್ಣ ಗೋಹತ್ಯೆ ನಿಷೇಧದಿಂದ ಇದುವರೆಗೆ ಸಾಧಿಸಿರುವುದಾದರೂ ಏನು? ರಾಜಕೀಯ ಪಕ್ಷವೊಂದರ ಹಿಂದುತ್ವ ಟ್ರಂಪ್ ಕಾರ್ಡನ್ನು ಆಗಾಗ ಚಲಾವಣೆ ಮಾಡಲು; ಅಲ್ಪಸಂಖ್ಯಾತರನ್ನು ಹೆದರಿಸಿ ‘ಹದ್ದುಬಸ್ತಿನಲ್ಲಿಡಲು’ ಅಗತ್ಯ ಹತಾರವೊಂದು ಈ ಕಾಯ್ದೆಯ ರೂಪದಲ್ಲಿ ಒದಗಿದಂತಾಗಿದೆ. ಜೊತೆಗೆ ಹಿಂದೂ, ಹಿಂದೂಯೇತರರ ಗೋಮಾಂಸ ತಿನ್ನುವ ‘ಆಹಾರ ಅಲ್ಪಸಂಖ್ಯಾತ’ ಸಮುದಾಯ ತನ್ನ ಆಯ್ಕೆಯನ್ನು ಬದಲಿಸಿಕೊಳ್ಳುವಂತಾಗಿದೆ. ಹಲವು ಕಡೆ ಗೋವನ್ನು ಕದ್ದು ಸಾಗಿಸಿ ಕಡಿಯಲಾಗುತ್ತಿದೆ. ಅನುಮತಿಯಿಲ್ಲದ ಕಾನೂನು ಬಾಹಿರ ಕಸಾಯಿಖಾನೆಗಳೂ, ಗೋಶಾಲೆಗಳೂ ಹೆಚ್ಚಾಗಿವೆ.


ಯಾವುದೇ ಮಾಂಸವನ್ನೂ ತಿನ್ನಲಾರೆ ಎಂಬ ಸಸ್ಯಾಹಾರಿಗಳ ಅತಿ ಅಹಿಂಸೆಯನ್ನಾದರೂ ರುಚಿಮೀಮಾಂಸೆಯೆಂದು ಅರ್ಥಮಾಡಿಕೊಳ್ಳಬಹುದು. ಆದರೆ ದನ ತಿನ್ನಬೇಡಿ, ಹಂದಿ ತಿನ್ನಬೇಡಿ, ನಾಯಿ ತಿನ್ನಬೇಡಿ ಎಂಬಂತಹ ರುಚಿ ಮತ್ತು ಭಕ್ತಿಯ ಧಾರ್ಮಿಕ ಹೇರಿಕೆಗಳನ್ನು ಈ ಕಾಲದಲ್ಲಿ ಹೇಗೆ ಅರ್ಥಮಾಡಿಕೊಳ್ಳುವುದು? ಮಸೀದಿಮಿನಾರುಗಳು, ಬುದ್ಧಮೂರ್ತಿಗಳು, ಪ್ರಾಚ್ಯ ದೇಗುಲಗಳು ಯಾವ ನಂಬಿಕೆಯ ಹೆಸರಿನಲ್ಲಿ ವಿಶ್ವಾದ್ಯಂತ ಉದುರಿಬೀಳುತ್ತಿವೆಯೋ ಅದೇ ನಂಬಿಕೆಯ ಅತಿಯೇ ಆಹಾರ ಆಯ್ಕೆ ವಿಷಯದಲ್ಲೂ ನಿರ್ಬಂಧ ಹೇರುತ್ತಿವೆ. ಹೀಗಿರುತ್ತ ಯಾವುದನ್ನು ಬೆಂಬಲಿಸುವುದು? ದುಷ್ಟ ಮಾನವರ ದುಷ್ಟತನಗಳಿಗೊಂದು ಸಮರ್ಥನೆಯಾಗಿ ಒದಗತೊಡಗಿರುವ ಧರ್ಮಗಳನ್ನು, ಧರ್ಮಾಚರಣೆಗಳನ್ನೂ ಯಾವ ಮಾಪನದಲ್ಲಿ ಅಳೆಯುವುದು?

ಗೊತ್ತಿಲ್ಲ. ಆದರೆ ಸ್ವರ್ಗವೋ, ಜನ್ನತೋ, ಪ್ಯಾರಡೈಸೋ ಎಂಬುದೊಂದು ನಿಜವಾಗಿ ಇದ್ದರೆ ಖಂಡಿತವಾಗಿ ನಾವು ದೇವರಿಗಲ್ಲ, ಶ್ರೇಷ್ಠಕನಿಷ್ಠವರ್ಜ್ಯವೆಂದು ವಿಂಗಡಿಸಲ್ಪಟ್ಟ ಪ್ರಾಣಿಗಳಿಗೆ ಉತ್ತರಿಸಬೇಕಾಗುತ್ತದೆ. ಈ ಭೂಮಿಯಿಡೀ, ಅದರ ಮೇಲಿನ ಜೀವಸಂಕುಲವಿಡೀ ನನ್ನ ಹೊಟ್ಟೆಗೇ ಎಂದು ಭಾವಿಸಿದ ಮಾನವ ನಾಲಿಗೆಯ ಹಪಾಹಪಿಗೆ ಕಾರಣ ಕೊಡಬೇಕಾಗುತ್ತದೆ..

ತಿನ್ನುವವರ, ತಿನ್ನದವರ ಮಧ್ಯೆ ಗೋಡೆಯೊಂದು ಗೋವಿನ ರೂಪದಲ್ಲಿ ಬೆಳೆಯುತ್ತಿರುವಾಗ ಆರೋಗ್ಯಕರ ನಿಲುವು ಯಾವುದು ಎಂದು ಮನಸು ಯೋಚಿಸುತ್ತಿದೆ. ರೂಸೋ ಮಾತುಗಳನ್ನು ಅನುಸರಿಸಿ ಹೇಳುವುದಾದರೆ, ‘ನಿನ್ನ ಆಹಾರ ಆಯ್ಕೆ ನನ್ನದೂ ಆಗಿರಬೇಕಿಲ್ಲ. ಆದರೆ ನಿನ್ನ ಆಹಾರ ಆಯ್ಕೆ ನಿನ್ನ ಹಕ್ಕು ಎನ್ನುವುದನ್ನು ನಾನು ಕೊನೆತನಕ ಎತ್ತಿಹಿಡಿಯುತ್ತೇನೆ. ಎಲ್ಲ ತೆರನ ಹೇರಿಕೆಯನ್ನು ವಿರೋಧಿಸುತ್ತೇನೆ..’ ಎನ್ನುವುದು ಸೌಹಾರ್ದದ ಸಹಬಾಳ್ವೆಯ ಬೀಜಮಂತ್ರ ಎನಿಸುತ್ತಿದೆ..

Sunday, August 23, 2015

ಸಂಕ್ರಮಣ ಸಾಹಿತ್ಯ ಸ್ಪರ್ಧೆ - 2015

ನಮ್ಮ ದೇವರಾಜ ಅರಸು ಹೀಗಿದ್ದರುಸನತಕುಮಾರ ಬೆಳಗಲಿ
 ನಮ್ಮ ದೇವರಾಜ ಅರಸು ಹೀಗಿದ್ದರು

ಜಾಗತೀಕರಣದ ಇಂದಿನ ಜಾತ್ರೆಯಲ್ಲಿ ಕಳೆದ ಶತಮಾನದ ಸಮಾನತಾ ಸಿದ್ಧಾಂತಗಳೆಲ್ಲ ತತ್ತರಿಸಿ ಹೋಗಿರುವಾಗ ದೇವರಾಜ ಅರಸು ಮತ್ತೆ ನೆನಪಿಗೆ ಬಂದಿದ್ದಾರೆ. ಅವರ ಶತಮಾನೋತ್ಸವದ ಸಂದರ್ಭದಲ್ಲಿ ಮತ್ತೆ ಅರಸರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಅರಸರನ್ನು ಹೊಗಳುತ್ತಲೇ ಸಿದ್ದರಾಮಯ್ಯನವರನ್ನು ತೆಗಳಲು ಕೆಲವರು ವೇದಿಕೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗೆಂದು ಮಾಧ್ಯಮಗಳು ವರದಿ ಮಾಡುತ್ತಿವೆ. ದೇವರಾಜ ಅರಸು ಬರುವವರಿಗೆ ಕರ್ನಾಟಕದ ರಾಜಕೀಯ ಹೀಗಿರಲಿಲ್ಲ. ಕರ್ನಾಟಕದ ಎರಡು ಬಲಾಢ್ಯ ಜಾತಿಗಳ ಸಿರಿವಂತ ಭೂಮಾಲಕ ವರ್ಗದ ರಾಜಕಾರಣಿಗಳು ರಾಜ್ಯದ ಅಧಿಕಾರ ಸೂತ್ರ ಹಿಡಿಯುತ್ತ ಬಂದಿದ್ದರು. ನಿಜಲಿಂಗಪ್ಪನವರು ಎಷ್ಟೇ ಪ್ರಾಮಾಣಿಕ ರಾಜಕಾರಣಿಯಾದರೂ ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು ವೀರೇಂದ್ರ ಪಾಟೀಲರನ್ನು. ಇವರು ಜಾತ್ಯಾಂಧರಾಗಿದ್ದರೆಂದಲ್ಲ ಆದರೆ ರಾಜಕೀಯ ಅಧಿಕಾರ ದಲಿತ, ದಮನಿತ ಸಮುದಾಯಗಳಿಗೆ ಹೋಗುವುದನ್ನು ಒಪ್ಪುವ ಮನಸ್ಥಿತಿ ಅನೇಕರಿಗಿರಲಿಲ್ಲ. ಈಗಲೂ ಇಲ್ಲ. ದೇವರಾಜ ಅರಸರು ಕರ್ನಾಟಕ ರಾಜಕಾರಣದ ದಿಕ್ಕನ್ನೆ ಬದಲಿಸಿದರು. ವಂಚಿತ ಸಮುದಾಯಗಳಿಗೆ ಸೇರಿದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಬಸವಲಿಂಗಪ್ಪ, ರಂಗನಾಥ, ಕೆ.ಟಿ.ರಾಠೋಡ, ಬಂಗಾರಪ್ಪ ಹೀಗೆ ಅನೇಕರನ್ನು ರಾಜಕಾರಣದ ಮುಂಚೂಣಿಗೆ ತಂದರು. ಭೂಸುಧಾರಣಾ ಕಾನೂನು ತಂದು ಉಳುವವನಿಗೆ ಭೂಮಿ ನೀಡಿದರು. 

ಹಿಂದುಳಿದ ಸಮುದಾಯಗಳಿಗಾಗಿ ಹಾವನೂರು ಆಯೋಗ ರಚಿಸಿ ಮೇಲ್ವರ್ಗಗಳನ್ನು ಎದುರು ಹಾಕಿಕೊಂಡರು. ಹೀಗೆ ಹದಿನೇಳು ವರ್ಷ ಕಾಲ ಕರ್ನಾಟಕವನ್ನಾಳಿದ ಅರಸು ಕೊನೆಯ ದಿನಗಳಲ್ಲಿ ಒಂಟಿಯಾಗಿದ್ದರು. ಅವರಿಂದ ಮುಂದೆ ಬಂದವರೆಲ್ಲ ಕೈಕೊಟ್ಟಿದ್ದರು. ಈಗ ಅವರೇ ಅರಸರನ್ನು ಹೊಗಳುತ್ತಿದ್ದಾರೆ. ಹೀಗೆ ಒಂಟಿಯಾದ ದಿನಗಳಲ್ಲೇ ದೇವರಾಜ ಅರಸು ನರಗುಂದಕ್ಕೆ ಬಂದಿದ್ದರು. ಎಂಬತ್ತರ ದಶಕದ ನರಗುಂದ ರೈತ ಜಾಥಾಗೆ ಚಾಲನೆ ನೀಡಿದವರು ಅರಸು. ತಮ್ಮ ಹಿಂದಿನ ಒಡನಾಡಿಗಳು ಕೈಕೊಟ್ಟಿದ್ದರೂ ಎಡಪಕ್ಷಗಳು ಅರಸರ ಕೈಬಿಡಲಿಲ್ಲ. ಎಡಪಕ್ಷಗಳು ಸಂಘಟಿಸಿದ ಚಾರಿತ್ರಿಕ ರೈತ ಜಾಥಾವನ್ನು ಉದ್ಘಾಟಿಸಿದ ಅರಸು ಹತ್ತು ಕಿ.ಮೀ. ಜಾಥಾ ಜೊತೆ ನಡೆದು ಬಂದರು. ಮುಂದೆ ಸಿಪಿಐ ಮಹಿಳಾ ಸಂಘಟನೆಯ ಮಹಿಳೆಯರ ಮೇಲೆ ಹುಬ್ಬಳ್ಳಿಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಅರಸು ತುಂಬಾ ಭಾವುಕರಾಗಿದ್ದರು. ಸೋಷಲಿಸ್ಟ್ ನಾಯಕ ಶಾಂತವೇರಿ ಗೋಪಾಲಗೌಡರು ಅಸ್ವಸ್ಥದಿಂದ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಾಗ ಮುಖ್ಯಮಂತ್ರಿಯಾಗಿದ್ದ ಅರಸು ಆಸ್ಪತ್ರೆ ಬಿಲ್ ಕಟ್ಟಿ ಗೌಡರ ಅಂತ್ಯಕ್ರಿಯೆ ಮಾಡಿಸಿದ್ದರು. ದೇವರಾಜ ಅರಸು ಕೊನೆಯುಸಿರೆಳೆದಾಗಲೂ ಅವರ ಬಳಿ ಹಣವಿರಲಿಲ್ಲ. ಕುಟುಂಬವನ್ನು ನಡುರಸ್ತೆಯಲ್ಲಿ ಬಿಟ್ಟು ಹೋದರು. ಇಂಥ ವ್ಯಕ್ತಿ ವಿರುದ್ಧ ಇದೇ ಜನತಾ ಪರಿವಾರದವರು ಭ್ರಷ್ಟಾಚಾರ ಆರೋಪ ಹೊರಿಸಿ ಚಿತ್ರಹಿಂಸೆ ನೀಡಿದರು. ಈಗ ಅವರೇ ಹೊಗಳುತ್ತಿದ್ದಾರೆ. ಇಂಥ ದೇವರಾಜ ಅರಸರನ್ನು ನಾನು ಮೊದಲ ಬಾರಿ ನೋಡಿದ್ದು 1970ರ ಮಾರ್ಚ್‌ನಲ್ಲಿ. ಆಗ ನಾನಿನ್ನೂ ಹೈಸ್ಕೂಲ್ ವಿದ್ಯಾರ್ಥಿ. ಆಗ ಇಂದಿರಾ ಕಾಂಗ್ರೆಸ್ ಕಟ್ಟಲು ವಿಜಯಪುರಕ್ಕೆ ಬಂದಿದ್ದ ದೇವರಾಜ ಅರಸು ನಾನಿದ್ದ ಬಸವನ ಬಾಗೇವಾಡಿಗೆ ಬಂದು ಹೋದರು. ಬಸವೇಶ್ವರ ದೇವಾಲಯದ ಮುಂದೆ ಆ ದಿನ ನಡೆದ ಸಭೆಯಲ್ಲಿ ಬಹಳ ಜನ ಸೇರಿರಲಿಲ್ಲ. ಆದರೆ ಅರಸು ಮಾಡಿದ ಭಾಷಣ ಅದ್ಭುತವಾಗಿತ್ತು. ವಿಜಯಪುರ ಜಿಲ್ಲೆಯ ಬಲಿಷ್ಟ ಜಾತಿಗಳ ಭೂಮಾಲಕ ರಾಜಕಾರಣಿಗಳೆಲ್ಲ ಆಗ ನಿಜಲಿಂಗಪ್ಪನವರ ಕಾಂಗ್ರೆಸ್‌ನಲ್ಲಿದ್ದರು. ಅರಸು ಪರವಾಗಿ ನಿಂತವರು ಹಿಂದುಳಿದ ಲಂಬಾಣಿ ಬುಡಕಟ್ಟಿಗೆ ಸೇರಿದ ಕೆ.ಟಿ.ರಾಠೋಡ್ ಎಂಬ ಯುವ ನ್ಯಾಯವಾದಿ. ಆಗಿನ ವಾತಾವರಣ ಈಗಿನಂತಿರಲಿಲ್ಲ. 

ಬಡವರ ಕಲ್ಯಾಣಕ್ಕಾಗಿ ಇಂದಿರಾ ಗಾಂಧಿ ರೂಪಿಸಿದ ಗರೀಬಿ ಹಠಾವ್ ಕಾರ್ಯಕ್ರಮದಿಂದಾಗಿ ಜಾತಿ ಮತ ಮೀರಿ ಬಡವರೆಲ್ಲ ಇಂದಿರಾ ಪರ ನಿಂತಿದ್ದರು. ಮುಂದೆ ನಡೆದ (1972) ವಿಧಾನಸಭಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಬಹುಮತ ಗಳಿಸಿತು. ದೇವರಾಜ ಅರಸು ಮುಖ್ಯಮಂತ್ರಿಯಾದರು. ಆಗ ಅಂದರೆ 1973ರಲ್ಲಿ ವಿಜಯಪುರಕ್ಕೆ ಬಂದು ಕಲ್ಪನಾ ಹೊಟೇಲ್ ಚೌಕದಲ್ಲಿ ಅವರು ಭಾಷಣ ಮಾಡಿದ ನೆನಪು ನನಗಿನ್ನೂ ಹಸಿರಾಗಿದೆ. ಅರಸು ಭಾಷಣದಲ್ಲಿ ಕೆಲವರು ಗಲಾಟೆ ಎಬ್ಬಿಸಿದಾಗ, ಕಲ್ಲು ತೂರಿದಾಗ ತಾಳ್ಮೆ ಕಳೆದುಕೊಳ್ಳದ ಅರಸು 12ನೆ ಶತಮಾನದಲ್ಲಿ ಬಸವಣ್ಣನವರಿಗೆ ಕಲ್ಲು ತೂರಿ ಹಿಂಸೆ ಕೊಟ್ಟ ಜನರೇ ಈಗ ಗಲಾಟೆ ಮಾಡುತ್ತಿದ್ದಾರೆ ಎಂದರು. ಆಗ ಸಭೆ ಸ್ತಬ್ಧವಾಯಿತು. ಸಮಾಜ ಬದಲಾವಣೆಗೆ ಹೋರಾಟಕ್ಕೆ ಇಳಿಯುವವರೆಲ್ಲ ಪಟ್ಟಭದ್ರ ಹಿತಾಸಕ್ತಿಗಳಿಂದ ಇಂಥ ವಿರೋಧ ಎದುರಿಸಬೇಕಾಗುತ್ತದೆ. ಈಗ ತಮಗೂ ಅಂಥ ವಿರೋಧ ಎದುರಾಗಿದೆ ಎಂದು ಅರಸು ಹೇಳಿದರು. ಅರಸರನ್ನು ಮುಗಿಸಲು ಆಗಿನ ಜನತಾ ಪಕ್ಷದ ನಾಯಕರು ನಾನಾ ತಂತ್ರ ಕುತಂತ್ರ ನಡೆಸಿದರು. ಕೇಂದ್ರದ ಮೊರಾರ್ಜಿ ಸರಕಾರ ಗ್ರೋವರ್ ಆಯೋಗ ರೂಪಿಸಿ ಅರಸರನ್ನು ಹಣಿಯಲು ಯತ್ನಿಸಿತು. ದೇವೇಗೌಡ, ಬೊಮ್ಮಾಯಿ, ಹೆಗಡೆ ಇವರೆಲ್ಲ ಅರಸರ ವಿರುದ್ಧ ಕೆಂಡಕಾರುತ್ತಿದ್ದರು. ಇಂಥ ದೇವರಾಜ ಅರಸರನ್ನು ನೋಡುವ ಮಾತ್ರವಲ್ಲ, ಭೇಟಿಯಾಗುವ ಅಪರೂಪದ ಅವಕಾಶವೊಂದು ಆಗ ನನಗೆ ದೊರಕಿತ್ತು. ಕಮ್ಯುನಿಸ್ಟ್ ವಿಚಾರಗಳನ್ನೆಲ್ಲ ತಲೆತುಂಬ ತುಂಬಿಕೊಂಡು ನಾಳೆಯೇ ಕ್ರಾಂತಿ ಮಾಡಿಬಿಡಬೇಕೆಂದು ಓಡಾಡುತ್ತಿದ್ದ ನನ್ನಂಥ ಇಪ್ಪತ್ತರ ಆಜೂಬಾಜು ವಯಸ್ಸಿನ ತರುಣರು ನಮ್ಮ ಜಿಲ್ಲೆಯಲ್ಲಿದ್ದರು. ಕಮ್ಯುನಿಸಂ ಅಂದರೆ ಈಗಿನಂತೆ ಬರೀ ಟ್ರೇಡ್ ಯೂನಿಯನ್ ಚಳವಳಿ ಎಂದು ನಾವು ಭಾವಿಸಿರಲಿಲ್ಲ. ಜಾತೀಯತೆ, ಅಸ್ಪಶ್ಯತೆ ವಿರುದ್ಧ ಹೋರಾಡುವುದೂ ಕಮ್ಯುನಿಸಂ ಎಂದು ಇಂಚಗೇರಿ ಮಠದ ಪ್ರಗತಿಪರ ಸಂತ ಮಹಾದೇವಪ್ಪನವರು ನಮಗೆ ಹೇಳಿದ್ದರು.


ಆಗ ಬರೀ ಕಮ್ಯುನಿಸ್ಟ್ ಪತ್ರಿಕೆಗಳನ್ನು ಮಾತ್ರ ನಾವು ಓದುತ್ತಿರಲಿಲ್ಲ. ಲಂಕೇಶ್ ಪತ್ರಿಕೆ ಆಗ ಇರಲಿಲ್ಲ. ಆದರೆ ಕರ್ನಾಟಕ ಕಂಡ ಅಪರೂಪದ ಪತ್ರಕರ್ತ ಕಲ್ಲೆ ಶಿವೋತ್ತಮರಾಯರ ‘ಜನಪ್ರಗತಿ’ಯನ್ನು ಓದುತ್ತಿದ್ದೆವು. ಜನಪ್ರಗತಿಗೆ ನಾನು ಪ್ರತಿವಾರ ಬರೆಯುತ್ತಿದ್ದೆ. ಹೀಗೆ ಬರೆಯುತ್ತಲೇ ಕಲ್ಲೆಯವರ ಪರಿಚಯವಾಯಿತು. ಅವರನ್ನು ಭೇಟಿ ಮಾಡಲೆಂದೆ ಬೆಂಗಳೂರಿಗೆ ಬಂದಾಗ ವಿಧಾನಪರಿಷತ್ ಸದಸ್ಯರಾಗಿದ್ದ ಕಲ್ಲಣ್ಣನವರ್ ಸಿಕ್ಕಿದ್ದರು. ಲಂಕೇಶರು 80ರ ದಶಕದ ನಂತರ ತಮ್ಮ ಪತ್ರಿಕೆ ತಂದರು. 

ಹೀಗೆ ತಲೆ ತುಂಬ ಕ್ರಾಂತಿಯ ಕನಸುಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದ ನಾನು ಒಮ್ಮೆ ತಮ್ಮ ಹಳ್ಳಿ ಸಾವಳಗಿಯಲ್ಲಿ ಓಕುಳಿ ಎಂಬ ಅಮಾನವೀಯ ಹಬ್ಬವನ್ನು ನೋಡಿದೆ. ಮಾರ್ಚ್ -ಎಪ್ರಿಲ್ ತಿಂಗಳಲ್ಲಿ ನಡೆಯುವ ಈ ಓಕುಳಿಯಲ್ಲಿ ದಲಿತ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ಮೇಲ್ಜಾತಿಯ ಉನ್ಮತ್ತ ಯುವಕರು ಮೈಮೇಲೆ ನೀರು ಎರಚುತ್ತಾರೆ. ನೀರಿನ ಹೊಡೆತ ತಪ್ಪಿಸಿಕೊಳ್ಳಲು ಈ ದಲಿತ ಹುಡುಗಿಯರು ಊರ ತುಂಬ ಓಡಾಡುತ್ತಾರೆ. ಆಗ ಮೈಮೇಲಿನ ಬಟ್ಟೆಯಲ್ಲ ಅಸ್ತವ್ಯಸ್ತವಾಗಿ ಮೈಯೆಲ್ಲ ಕಾಣುತ್ತದೆ. ಆಗ ಎಲ್ಲರೂ ನೋಡಿ ಎಂಜಾಯ್ ಮಾಡುತ್ತಾರೆ. ಈ ಓಕುಳಿಯನ್ನು ಕಣ್ಣಾರೆ ಕಂಡ ನಾನು ಈ ಬಗ್ಗೆ ಪತ್ರಿಕೆಗಳಿಗೆ ಬರೆದು ಕಳಿಸಿದೆ. ಪತ್ರಿಕೆಗಳ ಓದುಗರ ವಿಭಾಗಕ್ಕೆ ಬರೆಯುವ ಅಭ್ಯಾಸವಿತ್ತು. ಹೀಗೆ ನಾನು ಬರೆದ ಪತ್ರವೊಂದು ‘ಸಂಯುಕ್ತ ಕರ್ನಾಟಕ’ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಅವರ ಕೈಯಲ್ಲಿ ಸಿಕ್ಕು ಅವರು ನನ್ನ ಪತ್ರವನ್ನು ಪತ್ರಿಕೆಯ 19-6-1975ರ ಸಂಚಿಕೆಯ ಪತ್ರಿಕೆಯ ಮುಖಪುಟದಲ್ಲಿ ‘‘ಷಂಡ ಸಮಾಜದಲ್ಲಿ ದುಶ್ಶಾಸನರ ಕೇಕೆ’’ ಎಂಬ ತಲೆಬರಹದಲ್ಲಿ ಪ್ರಕಟಿಸಿದರು. ಮಾರನೆ ದಿನ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಈ ಪತ್ರ ಓದಿ ಖಾದ್ರಿಯವರಿಗೆ ಫೋನ್ ಮಾಡಿದರು. ಓಕುಳಿಯನ್ನು ನಿಷೇಧಿಸಿ ಆದೇಶ ಹೊರಡಿಸಿದರು. ಆಗ ನಮ್ಮ ಊರಿನ ಬಿ.ಡಿ.ಜತ್ತಿ ಅವರು ಭಾರತದ ಉಪರಾಷ್ಟ್ರಪತಿ ಆಗಿದ್ದರು. ನನ್ನ ಬರಹದಲ್ಲಿ ನಾನಿದನ್ನು ಪ್ರಸ್ತಾಪಿಸಿ ‘ಉಪರಾಷ್ಟ್ರಪತಿ ಊರಿನಲ್ಲಿ ದಲಿತ ಮಹಿಳೆಗೆ ಅವಮಾನ’ ಎಂದು ಬರೆದಿದ್ದೆ. ಹೀಗಾಗಿ ಜತ್ತಿಯವರಿಗೂ ಗೊತ್ತಾಗಿ ಅವರೂ ಅರಸರಿಗೆ ಫೋನ್ ಮಾಡಿ ವಿಚಾರಿಸಿದರು. ಇದೆಲ್ಲದರ ಒಟ್ಟು ಪರಿಣಾಮವೆಂದರೆ ಓಕುಳಿ ನಿಷೇಧವಾಯಿತು. ಆಗ ಸಮಾಜ ಬದಲಾವಣೆಗಾಗಿ ತುಡಿಯುತ್ತಿದ್ದ ನನ್ನಂಥ ಯುವಕರಿಗಾಗಿ ಹುಡುಕುತ್ತಿದ್ದ ದೇವರಾಜ ಅರಸರು ನನ್ನ ಬಗ್ಗೆ ತಮ್ಮ ಆಪ್ತರ ಬಳಿ ವಿಚಾರಿಸಿದ್ದಾರೆ. ಆಗ ನಮ್ಮ ಜಮಖಂಡಿ ತಾಲೂಕಿನ ಹಿಪ್ಪರಗಿಯ ಭೀಮಣ್ಣ ಕಿತ್ತೂರು ಎಂಬ ಯುವಕ ಅರಸರ ಆಸ್ಥಾನದಲ್ಲಿ ಅಪ್ಪಾಜಿ ಎಂದು ಓಡಾಡಿಕೊಂಡಿದ್ದ. ಆತನಲ್ಲೂ ನನ್ನ ಬಗ್ಗೆ ಅರಸು ಕೇಳಿದ್ದಾರೆ. ಬೆಂಗಳೂರಿಗೆ ಕರೆಸಲು ಹೇಳಿದ್ದಾರೆ. ಆಗ ಈಗಿನಂತೆ ಮೊಬೈಲ್ ಫೋನ್ ಇರಲಿಲ್ಲ. ಎಸ್.ಟಿ.ಡಿ. ಬೂತ್‌ಗಳೂ ಇರಲಿಲ್ಲ. 

 ಬೆಂಗಳೂರಿಗೆ ಹೋಗುವುದೂ ಸುಲಭ ಇರಲಿಲ್ಲ. ಆದರೂ ವಿಜಯಪುರ ಜಿಲ್ಲೆಯ ಮಂತ್ರಿ ಕೆ.ಟಿ.ರಾಠೋಡರು ಹೇಗೋ ಮಾಡಿ ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅರಸರನ್ನು ಭೇಟಿ ಮಾಡಿಸಿದರು. ನಮ್ಮಂಥ ಯುವಕರು ಕಾಂಗ್ರೆಸ್ ಸೇರಿ ಸಾಮಾಜಿಕ ನ್ಯಾಯದ ಅವರ ಸಂಘರ್ಷದಲ್ಲಿ ಪಾಲ್ಗೊಳ್ಳಬೇಕೆಂಬುದು ಅರಸರ ಇಚ್ಛೆಯಾಗಿತ್ತು. ಆದರೆ ತಲೆ ತುಂಬ ಕಮ್ಯುನಿಸಂ ತುಂಬಿಕೊಂಡಿದ್ದ ನಾವು ಆ ಕಡೆ ಹೋಗಲಿಲ್ಲ. ಆದರೂ ರಾಠೋಡರು ನನ್ನನ್ನು ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. (ಈಗ ಶಾಸಕರಾಗಿರುವ ರಮೇಶ ಕುಮಾರ್ ಆಗ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ) ಆದರೆ ನನಗೇಕೊ ಅದು ಸರಿ ಬರಲಿಲ್ಲ. ಮುಂದೆ ಖಾದ್ರಿ ಶಾಮಣ್ಣನವರು ಸಂಯುಕ್ತ ಕರ್ನಾಟಕದಲ್ಲಿ ಕೆಲಸಕೊಟ್ಟರು. ಆಗ ನನ್ನ ದಾರಿಯೇ ಬದಲಾಯಿತು. ಆಗ ನಮ್ಮ ಸಮಾನ ಮನಸ್ಕರಾಗಿದ್ದ ವೀರಣ್ಣ ಮತ್ತಿಕಟ್ಟಿ ಈಗ ಕಾಂಗ್ರೆಸ್ ಶಾಸಕರಾಗಿದ್ದಾರೆ. ಇದನ್ನು ಬರೆದ ತಾತ್ಪರ್ಯ ಇಷ್ಟೇ, ಅರಸು ಅವರು ಈ ಸಮಾಜವನ್ನು ಮುರಿದು ಕಟ್ಟುವ ಕನಸನ್ನು ಕಂಡಿದ್ದರು. ಈ ಗುರಿ ಸಾಧನೆಗಾಗಿ ಬದ್ಧತೆ ಇರುವ ಯಾರೇ ಸಿಕ್ಕರೂ ತಮ್ಮತ್ತ ಸೆಳೆದುಕೊಳ್ಳುತ್ತಿದ್ದರು. ಎಲ್.ಜಿ. ಹಾವನೂರ ಅವರಂಥ ಹೆಸರಾಂತ ವಕೀಲರ ನೇತೃತ್ವದಲ್ಲಿ ಹಿಂದುಳಿದವರ ಆಯೋಗ ರಚಿಸಿ ಶತಮಾನಗಳಿಂದ ಕಗ್ಗತ್ತಲಲ್ಲಿದ್ದ ಹಿಂದುಳಿದ ವರ್ಗಗಳಿಗೆ ಬೆಳಕಿನ ದಾರಿ ತೋರಿಸಿದರು. ಸೋಷಲಿಸ್ಟ್ ಪಕ್ಷದಲ್ಲಿದ್ದ ಅಜೀಜ್ ಸೇಠ್, ಬಂಗಾರಪ್ಪ, ಕಾಗೋಡ್ ತಿಮ್ಮಪ್ಪರಂಥವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡರು. ಹಾಗಂತ ಅರಸರು ಜಾತಿವಾದಿಯಾಗಿರಲಿಲ್ಲ. ಸೈದ್ಧಾಂತಿಕವಾಗಿ ಮಾರ್ಕ್ಸ್‌ವಾದಕ್ಕೆ ತುಂಬ ಹತ್ತಿರದಲ್ಲಿದ್ದರು. 

ಆಗ ಮೆಜೆಸ್ಟಿಕ್‌ನಿಂದ ಸರ್ಪಭೂಷಣ ಮಠ ಆವರಣದಲ್ಲಿದ್ದ ನವಕರ್ನಾಟಕ ಪ್ರಕಾಶನದಿಂದ ಕಮ್ಯುನಿಸ್ಟ್ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದರು. ಕಮ್ಯುನಿಸ್ಟ್ ನಾಯಕ ನಂಬೂದ್ರಿಪಾದ ಉಪನ್ಯಾಸ ಕೇಳಲು ಸೆಂಟ್ರಲ್ ಕಾಲೇಜ್ ಸೆನೆಟ್ ಹಾಲ್‌ಗೆ ಬಂದಿದ್ದರು. 1974ರಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಎಂಜಿನಿಯರಿಂಗ್ ಕಾರ್ಮಿಕರ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆಗೆ ಬಂದಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ ಎಸ್.ಎ.ಡಾಂಗೆ ಅವರ ಭಾಷಣ ಕೇಳಲು ಟೌನ್ ಹಾಲ್‌ಗೆ ಬಂದಿದ್ದರು. ಎಲ್ಲ ಪ್ರತಿಗಾಮಿ ಶಕ್ತಿಗಳ ವಿರುದ್ಧ ಪ್ರಗತಿಪರ ಶಕ್ತಿಗಳನ್ನು ಒಟ್ಟುಗೂಡಿಸುವುದು ಅರಸು ಕನಸಾಗಿತ್ತು. ಅಂತಲೇ ಕಮ್ಯುನಿಸ್ಟ್ ಪಕ್ಷದ ಜೊತೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು. ದಾವಣಗೆರೆ ಮತಕ್ಷೇತ್ರವನ್ನು ಕಮ್ಯುನಿಸ್ಟ್ ಪಕ್ಷದ ಕಾರ್ಮಿಕ ನಾಯಕ ಪಂಪಾವತಿ ಅವರಿಗೆ ಬಿಟ್ಟುಕೊಡಲು ಅರಸು ನಿರ್ಧರಿಸಿದಾಗ ದಾವಣಗೆರೆಯ ಶಾಮನೂರು ಮುಂತಾದ ಸಿರಿವಂತರು, ಮಿಲ್ ಮಾಲಕರು ಇದನ್ನು ವಿರೋಧಿಸಿ ಬೆಂಗಳೂರಿಗೆ ಬಂದು ಅರಸರ ಮೇಲೆ ಒತ್ತಡ ತಂದರು. ಆದರೆ ಇದಕ್ಕೆ ಮಣಿಯದ ಅರಸು ‘ಈ ಬಾರಿ ಪಂಪಣ್ಣ ವಿಧಾನಸಭೆಗೆ ಬರಲಿ’ ಎಂದು ನಿಷ್ಠುರವಾಗಿ ಹೇಳಿದರು. ಈಗ ಕಾಲ ಬದಲಾಗಿದೆ. ಅರಸರ ಭೂಸುಧಾರಣಾ ಕಾನೂನಿನಿಂದ ಭೂಮಿ ಪಡೆದ ಫಲಾನುಭವಿಗಳ ವಂಶೋದ್ಧಾರಕರು ಬಜರಂಗ ದಳ ಸೇರಿ ಕರಾವಳಿಯ ನೆಮ್ಮದಿ ಹಾಳು ಮಾಡಿದ್ದಾರೆ. ಅರಸರಿಗೆ ಎದುರಾಗದಿದ್ದ ಜಾಗತೀಕರಣ, ಕೋಮುವಾದ, ನವ ಉದಾರೀಕರಣಗಳೆಂಬ ತ್ರಿವಳಿ ಶತ್ರುಗಳು ಸಿದ್ದರಾಮಯ್ಯನವರಿಗೆ ಎದುರಾಗಿವೆ. ಇಂಥ ಪ್ರತಿಕೂಲ ಸನ್ನಿವೇಶದಲ್ಲಿ ಸಾಮಾಜಿಕ ನ್ಯಾಯದ ಮಾತಾಡುತ್ತಿರುವ, ತಮ್ಮದು ಅಹಿಂದ ಸರಕಾರ ಎನ್ನುತ್ತಿರುವ ಸಿದ್ದರಾಮಯ್ಯನವರಲ್ಲಿ ನಾವು ಅರಸರನ್ನು ಕಾಣಬೇಕಾಗಿದೆ. ತಪ್ಪೇನಿದೇ?

ಸ್ವಾತಂತ್ರೋತ್ಸವ ಮತ್ತು ಮಾರುಕಟ್ಟೆಯ ವಿಜೃಂಭಣೆ

ನಾ ದಿವಾಕರ


ಸ್ವಾತಂತ್ರೋತ್ಸವ ಮತ್ತು ಮಾರುಕಟ್ಟೆಯ ವಿಜೃಂಭಣೆ


ದೇಶ ಅಥವಾ ರಾಷ್ಟ್ರ ಎನ್ನುವ ಪರಿಕಲ್ಪನೆಯನ್ನು ಎರಡು ಆಯಾಮಗಳಲ್ಲಿ ಕಾಣಬಹುದು. ಭೌಗೋಳಿಕ ರಾಷ್ಟ್ರ ಒಂದು ಸೀಮಿತ ದೃಷ್ಟಿಕೋನದಲ್ಲಿ ಜನಸಾಮಾನ್ಯರನ್ನು ಆಕರ್ಷಿಸುತ್ತದೆ. ಈ ಭೌಗೋಳಿಕ ಪರಿಕಲ್ಪನೆಯನ್ನೇ ರಾಷ್ಟ್ರೀಯ ಸಂವೇದನೆಯ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ದೇಶವನ್ನಾಳುವ ವರ್ಗಗಳು ಮತ್ತು ಆಳುವ ವರ್ಗಗಳ ಪಂಜರದಲ್ಲಿ ಬಂಧಿತವಾಗುವ ಪ್ರಭುತ್ವ ಈ ಭೌಗೋಳಿಕ ಸೀಮೆಯನ್ನು ರಕ್ಷಿಸುವುದನ್ನೇ ತಮ್ಮ ಪರಮಧ್ಯೇಯವೆಂದು ಪರಿಗಣಿಸುತ್ತವೆ. ಈ ಧ್ಯೇಯವನ್ನು ಆದರ್ಶಗಳ ನೆಲೆಯಲ್ಲಿ ವ್ಯಾಖ್ಯಾನಿಸಿ ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿಸಲಾಗುತ್ತದೆ. ಈ ಭಾವನೆಗಳ ಪ್ರತೀಕವಾಗಿ ದೇಶಪ್ರೇಮ, ದೇಶಭಕ್ತಿ, ರಾಷ್ಟ್ರೀಯತೆ ಮುಂತಾದ ಸೂಕ್ಷ್ಮ ಸಂವೇದನೆಗಳು ಸೃಷ್ಟಿಯಾಗುತ್ತವೆ. ಈ ಸಂವೇದನೆಗಳು ಕೆಲವು ಹಿತಾಸಕ್ತಿಗಳಿಗೆ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಚಿಮ್ಮುಹಲಗೆಯಾಗಿ ಪರಿಣಮಿಸುತ್ತದೆ. ತಮ್ಮ ವ್ಯಕ್ತಿಗತ ಮುನ್ನಡೆಗೆ ಸಹಕಾರಿಯಾಗುವ ಈ ವಿದ್ಯಮಾನಗಳನ್ನು ಆಳುವ ವರ್ಗಗಳು ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯ ರಕ್ಷಣೆಯ ಅಸ್ತ್ರಗಳಾಗಿ ಬಳಸುತ್ತವೆ. ಸ್ವಾತಂತ್ರೋತ್ಸವ ದಿನದ ಸಂದರ್ಭದಲ್ಲಿ ಈ ದನಿಗಳನ್ನು ಸ್ಪಷ್ಟವಾಗಿ ಆಲಿಸಬಹುದು. ಆಂತರಿಕ ವೈರುಧ್ಯಗಳನ್ನು ಭೌಗೋಳಿಕ ರಾಷ್ಟ್ರದ ಚೌಕಟ್ಟಿನಲ್ಲಿ ಮರೆಮಾಚುತ್ತಲೇ ರಾಷ್ಟ್ರಭಕ್ತಿಯ ಉನ್ಮಾದವನ್ನು ಸೃಷ್ಟಿಸುವುದನ್ನು ಇಲ್ಲಿ ಕಾಣಬಹುದು.

ರಾಷ್ಟ್ರ ಪರಿಕಲ್ಪನೆಯ ಮತ್ತೊಂದು ಆಯಾಮವೆಂದರೆ ಜನಸಾಮಾನ್ಯರ ಭಾವನೆ, ಸಂವೇದನೆ ಮತ್ತು ಮಾನವ ಸಹ ಸ್ಪಂದನೆಗಳಿಗೆ ಸಂಬಂಧಿಸಿದ್ದು.ಈ ನಾಗರಿಕ ಸಂವೇದನೆಗೆ ಯಾವುದೇ ಎಲ್ಲೆ ಇರುವುದಿಲ್ಲ. ಗಡಿ ಇರುವುದಿಲ್ಲ. ವಿಶ್ವಮಾನವ ಸಂದೇಶವನ್ನು ಹೊತ್ತ ಸಂವೇದನಾಶೀಲ ಮನಸ್ಸುಗಳು ಮಾನವ ಅಭ್ಯುದಯದ ಉನ್ನತ ಧ್ಯೇಯವನ್ನು ಹೊಂದಿರುತ್ತವೆ. ಈ ಪರಿಕಲ್ಪನೆಯಲ್ಲಿ ದೇಶ ಎನ್ನುವುದು ಸೀಮಿತ ಭೌಗೋಳಿಕ ಚೌಕಟ್ಟಿನಿಂದಾಚೆಗೂ ಸಾಗುತ್ತದೆ. ಈ ರಾಷ್ಟ್ರದ ಪರಿಕಲ್ಪನೆಯಲ್ಲಿ ಗಡಿ ಕಾಯುವ ಸೈನಿಕರಿಗಿಂತಲೂ ಭೂತಾಯಿಯ ಮಡಿಲಲ್ಲಿನ ಸಂಪನ್ಮೂಲಗಳನ್ನೇ ನಂಬಿ ಬದುಕುವ ಶ್ರಮಿಕ ವರ್ಗಗಳು ದೇಶವನ್ನು ಕಾಯುವ ಮಹಾನ್ ಯೋಧರಂತೆ ಕಾಣುತ್ತವೆ. ಏಕೆಂದರೆ ಎಲ್ಲೆಗಳ ಗೊಡವೆಯೇ ಇಲ್ಲದ ಈ ರಾಷ್ಟ್ರಕ್ಕೆ ಗಡಿ ಕಾಯುವ ಯೋಧರ ಅಗತ್ಯತೆ ಇರುವುದಿಲ್ಲ. ಮಾನವ ಜೀವನವನ್ನು ಭ್ರಾತೃತ್ವ, ಸೌಹಾರ್ದತೆ, ಸಹಿಷ್ಣುತೆ ಮತ್ತು ಪ್ರಾಮಾಣಿಕ ನಾಗರಿಕತೆಯ ಚೌಕಟ್ಟಿನಲ್ಲಿ ಬಂಧಿಸುವ ಈ ರಾಷ್ಟ್ರದ ಪರಿಕಲ್ಪನೆಯಲ್ಲಿ ಯಾವುದೇ ಸ್ವಹಿತಾಸಕ್ತಿ ಇರುವುದಿಲ್ಲ. ಸ್ವಾರ್ಥತೆ ಇರುವುದಿಲ್ಲ. ಕೇವಲ ಮಾನವ ಸಂಬಂಧಗಳ ಸೂಕ್ಷ್ಮಗಳು ಅಡಗಿರುತ್ತವೆ. ಇಲ್ಲಿ ಸ್ವಾತಂತ್ರೋತ್ಸವದ ಸಂದರ್ಭ ವಿಜೃಂಭಣೆಯಾಗುವುದಿಲ್ಲ. ಆತ್ಮಾವಲೋಕನದ ಸಂದರ್ಭವಾಗುತ್ತದೆ.

ಭಾರತದ ಸಂದರ್ಭದಲ್ಲಿ ಈ ಎರಡೂ ಆಯಾಮಗಳನ್ನು ಏಕಕಾಲದಲ್ಲಿ ಕಾಣಬಹುದು. ಹಾಗಾಗಿಯೇ ದೇಶದ ಸಾರ್ವಭೌಮ ಪ್ರಜೆಗಳ ದೇಹಸ್ವಾಸ್ಥಕ್ಕಾಗಿ ಹಗಲಿರುಳೂ ಶ್ರಮಿಸುವ ರೈತರು, ಕಾರ್ಮಿಕರು ಸ್ವಾತಂತ್ರೋತ್ಸವದಂದು ಪ್ರತಿಭಟನಾ ನಿರತರಾಗಿದ್ದರೆ, ದೇಶದ ಗಡಿಗಳನ್ನು ಕಾಯುವ ಯೋಧರು ಪ್ರಭುತ್ವದ ಪ್ರತಿನಿಧಿಗಳ ಆಣತಿಯಂತೆ ಆಚರಣೆಯಲ್ಲಿ ತೊಡಗಿರುತ್ತಾರೆ. ಸೆಲ್ಯೂಟ್ ಸೆಲ್ಫಿಯ ಮೂಲಕ ಗಡಿಯ ರಕ್ಷಕರಿಗೆ ಗೌರವ ಸಲ್ಲಿಸಲು ಲಕ್ಷಾಂತರ ಯುವ ಜನರು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಯೂಟ್ ಮಾಡುತ್ತಿರುವ ತಮ್ಮದೇ ಭಾವಚಿತ್ರವನ್ನು ಟ್ವಿಟರ್‌ನಲ್ಲಿ ರಾರಾಜಿಸುತ್ತಾರೆ. ಈ ಆಚರಣೆಯನ್ನು ಪ್ರಚೋದಿಸುವ ಮೊಬೈಲ್ ಕಂಪೆನಿಗಳು ಇದರಿಂದ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದು ಅನ್ಯ ವಿಚಾರ. ಆದರೆ ದಿನ ನಿತ್ಯ ಆತ್ಮಹತ್ಯೆಗೆ ಶರಣಾಗುತ್ತಿರುವ ದೇಶದ ಅನ್ನದಾತರಿಗೆ ಸೆಲ್ಯೂಟ್ ಸಮರ್ಪಿಸಲು ಯಾವ ಮೊಬೈಲ್ ಕಂಪೆನಿಯೂ ಮುಂದಾಗುವುದಿಲ್ಲ. ಏಕೆ ಇವರು ಯೋಧರಲ್ಲವೇ? ಶಸ್ತ್ರಾಸ್ತ್ರ ಹಿಡಿದವರೇ ಯೋಧರೇ? ನಿಜ ಸೇನಾ ಯೋಧರು ಭಾರತವನ್ನು ಅನ್ಯ ರಾಷ್ಟ್ರಗಳ ಆಕ್ರಮಣದಿಂದ ರಕ್ಷಿಸುವ ಮೂಲಕ ಭೌಗೋಳಿಕ ರಾಷ್ಟ್ರದ ಅಸ್ತಿತ್ವ, ಗೌರವ , ಘನತೆಯನ್ನು ಕಾಪಾಡುತ್ತಾರೆ.
ಅದೇ ವೇಳೆ ದೇಶದ ಜನತೆ ಬದುಕಲು ಅವಶ್ಯವಾದ ಆಹಾರ ಒದಗಿಸುವ ರೈತಾಪಿ ಸಮುದಾಯವೂ ರಾಷ್ಟ್ರದ ರಕ್ಷಣೆ ಮಾಡುತ್ತಿದ್ದಾರಲ್ಲವೇ ? ಸ್ವಚ್ಛ ಭಾರತದ ಕನಸು ಕಾಣುತ್ತಿರುವ ಸ್ಮಾರ್ಟ್ ಸಿಟಿಗಳ ಹಪಾಹಪಿಯಲ್ಲಿರುವ ಭಾರತದ ಜನತೆಯ ದೇಹಸ್ವಾಸ್ಥವನ್ನು ಪೌರ ಕಾರ್ಮಿಕರು ಕಾಪಾಡುತ್ತಿದ್ದಾರಲ್ಲವೇ? ಭಾರತ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ನಳನಳಿಸಲು ಅತ್ಯಾಧುನಿಕ ನಗರಗಳ ನಿರ್ಮಾಣದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಶ್ರಮಿಸುತ್ತಿದ್ದಾರಲ್ಲವೇ? ನಾಳಿನ ಚಿಂತೆಯಲ್ಲೇ ಜೀವನವಿಡೀ ಬಸವಳಿಯುವ ಈ ಶ್ರಮಜೀವಿಗಳ ಬವಣೆಯನ್ನು ಕೇಳುವವರೇ ಇಲ್ಲದಂತಾಗಿರುವ ಸಂದರ್ಭದಲ್ಲಿ ಸ್ವಾತಂತ್ರೋತ್ಸವದ ಆಚರಣೆಗಳು ಅರ್ಥ ಕಳೆದುಕೊಳ್ಳುವುದಿಲ್ಲವೇ? ವಿಪರ್ಯಾಸವೆಂದರೆ ಸಾಂಕೇತಿಕ ಆಚರಣೆಗಳೇ ಪ್ರಧಾನವಾದಾಗ ಯಾವುದೇ ಸಂದರ್ಭ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಇದು ಮಾರುಕಟ್ಟೆ ಪ್ರೇರಿತ ವಿಜೃಂಭಣೆಯಲ್ಲಿ ಸ್ಪಷ್ಟವಾಗಿ ಕಾಣುವ ನವ ಭಾರತದ ಚಿತ್ರಣ. ಭಾರತದ ತ್ರಿವರ್ಣ ಧ್ವಜದ ಆಂತರ್ಯದಲ್ಲಿ ಅಡಗಿರುವ ಮೌಲ್ಯಗಳು ದಿನೇ ದಿನೇ ಕ್ಷೀಣಿಸುತ್ತಿದೆ. ಶಾಂತಿ, ಸೌಹಾರ್ದತೆ, ಭ್ರಾತೃತ್ವ, ಅಹಿಂಸೆ ಮುಂತಾದ ಉನ್ನತ ಆದರ್ಶಗಳು ಕೇವಲ ಭಾಷಣಗಳಿಗೆ ಸೀಮಿತವಾಗುತ್ತಿವೆ.

ಶಾಂತಿ ಸೌಹಾರ್ದತೆಯ ಸಂಕೇತವಾದ ತ್ರಿವರ್ಣ ಧ್ವಜದ ಅಶೋಕ ಚಕ್ರ ಶ್ರೀಕೃಷ್ಣನ ಸುದರ್ಶನ ಚಕ್ರದಂತೆ ಭಾಸವಾಗುತ್ತದೆ. ಏಕೆಂದರೆ ಈ ಧ್ವಜಕ್ಕೆ ವಂದಿಸುವ ಪ್ರಭುತ್ವದ ಪ್ರತಿನಿಧಿಗಳು ಪ್ರತಿರೋಧದ ದನಿಗಳನ್ನು ಅಡಗಿಸಲು, ಪ್ರಜಾತಂತ್ರದ ದನಿಗಳನ್ನು ಮಟ್ಟಹಾಕಲು ಇದೇ ಸುದರ್ಶನ ಚಕ್ರವನ್ನು ಬಳಸಲು ಸಜ್ಜಾಗುತ್ತಿವೆ. ಆದರೂ ಮಾರುಕಟ್ಟೆಯಲ್ಲಿ ತ್ರಿವರ್ಣದ ವೈಭವೀಕರಣ ಅವ್ಯಾಹತವಾಗಿ ನಡೆಯುತ್ತದೆ. ಅಡಿಯಿಂದ ಮುಡಿಯವರೆಗೆ ಭಾರತದ ಪ್ರಜೆಗಳು ತಮ್ಮ ದೇಹದ ಮೇಲೆ ತ್ರಿವರ್ಣವನ್ನು ಹಲವಾರು ರೀತಿಗಳಲ್ಲಿ ಬಳಸುವಂತಹ ಪರಿಕರಗಳನ್ನು ಮಾರುಕಟ್ಟೆ ಒದಗಿಸುತ್ತಿದೆ. ನಾವು- ಅವರು - ಅನ್ಯರು- ಅಸ್ಪಶ್ಯರು-ಬಹಿಷ್ಕೃತರು ಎಂಬ ವೈರುಧ್ಯಗಳನ್ನು ಹೃದಯದಲ್ಲಿ ಹೊತ್ತುಕೊಂಡು ತಿರುಗುವವರೇ ಮೇಲ್ನೋಟಕ್ಕೆ ಸಾಂಕೇತಿಕವಾಗಿ ತ್ರಿವರ್ಣದ ಪರಿಕರಗಳನ್ನು ಧರಿಸಿ ತಮ್ಮ ದೇಶಪ್ರೇಮ ಮೆರೆಯುತ್ತಾರೆ. ಮಾರುಕಟ್ಟೆ ಇದನ್ನು ಪ್ರಚೋದಿಸುತ್ತದೆ. ದೇಶಭಕ್ತಿಯಿಂದಲ್ಲ, ಲಾಭದ ದೃಷ್ಟಿಯಿಂದ.

ಸ್ವಾತಂತ್ರೋತ್ಸವದ ಭಾಷಣಗಳಲ್ಲಿ ದೇಶ ಕಟ್ಟುವವರು ನೇಪಥ್ಯಕ್ಕೆ ಸರಿಯುತ್ತಾರೆ, ಕಟ್ಟಿದ ಕೋಟೆಯ ರಕ್ಷಕರು ರಾರಾಜಿಸುತ್ತಾರೆ. ಇದು ಇತಿಹಾಸದ ವಿಡಂಬನೆ ಎನ್ನಲು ಅಡ್ಡಿಯಿಲ್ಲ.

ಮೋದಿ ಎದುರು ಹಾಕಿಕೊಂಡರೆ ಉಳಿಗಾಲವಿಲ್ಲವೇ?
  ಡಿ ಉಮಾಪತಿ
 ಸೌಜನ್ಯ: ವಿಜಯ ಕರ್ನಾಟಕ

''ನರೇಂದ್ರ ಮೋದಿಯವರು ಯಾವುದನ್ನೂ ಸುಲಭವಾಗಿ ಮರೆಯುವುದಿಲ್ಲ. ಸಲೀಸಾಗಿ ಕ್ಷಮಿಸುವುದೂ ಇಲ್ಲ,'' ಎನ್ನುತ್ತಾರೆ ಖ್ಯಾತ ಅಂಕಣಕಾರ ಆಕಾರ್ ಪಟೇಲ್.

ಗುಜರಾತಿನ ಹಿರಿಯ ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರನ್ನು ಸೇವೆಯಿಂದ ವಜಾ ಮಾಡಿದೆ ಕೇಂದ್ರ ಸರ್ಕಾರ. 2002ರಲ್ಲಿ ಗೋಧ್ರೋತ್ತರ ಕೋಮು ದಂಗೆಗಳಲ್ಲಿ ಗುಜರಾತ್ ಹೊತ್ತಿ ಉರಿದಿತ್ತು. ಸಾವಿರಾರು ಮಂದಿ ಅಮಾಯಕರ ನರಮೇಧ ನಡೆದಿತ್ತು. ಹಿಂದೂಗಳ ಪ್ರತೀಕಾರಕ್ಕೆ ಅಡ್ಡಿ ಬರಬೇಡಿ ಎಂದು ಅಂದಿನ ಮುಖ್ಯಮಂತ್ರಿ ಮೋದಿ ಪೊಲೀಸರಿಗೆ ಸೂಚನೆ ನೀಡಿದ್ದರು ಎಂಬುದಾಗಿ ಸುಪ್ರೀಮ್ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದ್ದರು ಸಂಜೀವ ಭಟ್. ಆ ಪ್ರಮಾಣಪತ್ರಕ್ಕೆ ಅವರು ಭಾರೀ ದಂಡವನ್ನೇ ತೆತ್ತಿದ್ದಾರೆ. ಈ ಪೈಕಿ ಸೇವೆಯಿಂದ ವಜಾ ಆಗಿರುವುದು ಇತ್ತೀಚಿನದು. ಪೂರ್ವನಿದರ್ಶನಗಳನ್ನು ಗಮನಿಸಿದರೆ ಈ ದಂಡದ ಸರಣಿ ಇಲ್ಲಿಗೇ ಮುಗಿಯವ ಸೂಚನೆ ಇಲ್ಲ.

ವಜಾ ಮಾಡಿದ ಆದೇಶ ಹೊರಟ ಮರುದಿನವೇ ಗುಜರಾತಿನ ಸರ್ಕಾರ ಅವರಿಗೆ ಅಶ್ಲೀಲ ಸಿ.ಡಿ.ಯೊಂದರ ಕುರಿತು ನೋಟಿಸು ನೀಡಿದೆ. ಈ ಸಿ.ಡಿ.ಯಲ್ಲಿರುವ ವ್ಯಕ್ತಿ ನೀವೇ ಆಗಿದ್ದು, ತಕ್ಕ ಸಮಜಾಯಿಷಿ ಒದಗಿಸತಕ್ಕದ್ದು ಎಂಬುದು ಈ ನೋಟಿಸಿನ ಸಾರಾಂಶ.

ಅಂದ ಹಾಗೆ ಗುಜರಾತಿನಲ್ಲಿ ಅಶ್ಲೀಲ ಸಿ.ಡಿ.ಯ ಪರಂಪರೆ ಇಂದು ನೆನ್ನೆಯದೇನೂ ಅಲ್ಲ. ಆರೆಸ್ಸೆಸ್ ಪೂರ್ಣಾವಧಿ ಪ್ರಚಾರಕ ಸಂಜಯ ಜೋಶಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿಂಗ್ ಸೋಲಂಕಿ ಹಾಗೂ ಇದೀಗ ಸಂಜೀವ್ ಭಟ್ ಮೂವರೂ ಮೋದಿಯವರನ್ನು ಎದುರು ಹಾಕಿಕೊಂಡವರು. ಮೂವರನ್ನೂ ಆಶ್ಲೀಲ ಸಿ.ಡಿ.ಹಗರಣಗಳು ಕಾಡಿದ್ದು ಕಾಕತಾಳೀಯವೇ ಇದ್ದೀತು.

ಮೋದಿ ಅವರೊಡನೆ ದುಡಿದು 90ರ ದಶಕದಲ್ಲಿ ಗುಜರಾತಿನಲ್ಲಿ ಬಿಜೆಪಿಯನ್ನು ಕಟ್ಟಿದ್ದವರು ಸಂಜಯ ಜೋಶಿ. ಉರುಳಿದ ಕಾಲಚಕ್ರದಲ್ಲಿ ತಮ್ಮ ಪ್ರಯತ್ನವೇ ಇಲ್ಲದೆ ಘಟನಾವಳಿಗಳ ತಿರುಗಣಿಗೆ ಸಿಕ್ಕ ಅಮಾಯಕರು. ಗೆಳೆಯನ ದುರಾಗ್ರಹಕ್ಕೆ ಗುರಿಯಾದ ಅವರ ಅಜ್ಞಾತವಾಸ ಇನ್ನೂ ಮುಗಿದಿಲ್ಲ.

ಅಹ್ಮದಾಬಾದನ್ನು ತೊರೆದು ದಿಲ್ಲಿಗೆ ಬಂದರೂ ಗೆಳೆಯನ ದುರಾಗ್ರಹ ಜೋಶಿಯವರ ಬೆನ್ನು ಬಿಟ್ಟಿರಲಿಲ್ಲ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ದೊರೆತು ಮಿಂಚುತ್ತಿದ್ದ ಜೋಶಿಯವರನ್ನು ವನವಾಸಕ್ಕೆ ಅಟ್ಟಿದ್ದು ಕೂಡ ಅಶ್ಲೀಲ ಸಿ.ಡಿ.ಯೇ. 2005ರ ಬಿಜೆಪಿಯ ಬೆಳ್ಳಿ ಹಬ್ಬದ ಅಧಿವೇಶನದಲ್ಲಿ ಬಾಂಬಿನಂತೆ ಸಿಡಿದಿತ್ತು. ಯುವತಿಯೊಂದಿಗೆ ಜೋಶಿಯವರು ರಮಿಸುತ್ತಿದ್ದಾರೆ ಎನ್ನಲಾಗುವ ದೃಶ್ಯಗಳಿದ್ದವು ಈ ಸಿ.ಡಿ.ಯಲ್ಲಿ. ಆಡಂಬರ ಅಟ್ಟಹಾಸಗಳಲ್ಲಿ ಮೋದಿಯವರಿಗೆ ತದ್ವಿರುದ್ಧ ಜೋಶಿ. ಅವರ ಚಾರಿತ್ರ್ಯ-ಚಲನವಲನ ಕುರಿತು ಬಿಜೆಪಿ-ಆರೆಸ್ಸೆಸ್ ಕಾರ್ಯತರ್ತರಲ್ಲಿ ಲವಲೇಶ ಶಂಕೆಯೂ ಇರಲಿಲ್ಲ.

ಆನಂತರ ನಡೆದ ವಿಚಾರಣೆಯಲ್ಲಿ ಸಿ.ಡಿ. ನಕಲಿ ಎಂದು ರುಜುವಾಗಿ ಜೋಶಿ ಖುಲಾಸೆ ಹೊಂದಿದರೂ ಅಜ್ಞಾತವಾಸ ತಪ್ಪಲಿಲ್ಲ. ಈ ಸಿ.ಡಿ.ಯನ್ನು ಸುದ್ದಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದವರು ಮನೆಯ ಒಳಗಿನವರೇ ಎಂಬುದು ಆರೆಸ್ಸೆಸ್‌ಗೆ ನೋವಿನ ಸಂಗತಿಯಾಗಿ ಕಾಡಿತ್ತು.

ಜೋಶಿಯವರನ್ನು ಅಸಹಾಯಕ ದ್ರೌಪದಿಗೆ ಹೋಲಿಸಿತ್ತು ಬಿಜೆಪಿಯ ಮುಖವಾಣಿ ಬಿಜೆಪಿ-ಟುಡೇ. ಸಮರ್ಪಣಾ ಮನೋಭಾವದ ಜೋಶಿಯವರ ವಿನಮ್ರ ಬದುಕು ಪಕ್ಷದಲ್ಲಿನ ಕೆಲವರಿಗೆ ಸಹನೆಯಾಗಲಿಲ್ಲ. ಹೀಗಾಗಿ ಅಮಾಯಕ ಬಲಿಪಶುವಾದರು ಎಂಬುದಾಗಿ ಬಿಜೆಪಿ ಟುಡೇ ಬರೆದಿತ್ತು. ಆದರೆ ದುರ್ಯೋಧನರು ಯಾರೆಂದು ಹೆಸರಿಸುವ ಸಾಹಸಕ್ಕೆ ಈ ನಿಯತಕಾಲಿಕ ಕೈಹಾಕಲಿಲ್ಲ.

2007ರ ಗುಜರಾತ್ ಚುನಾವಣೆಗಳ ಹೊಸ್ತಿಲಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿಂಗ್ ಸೋಲಂಕಿ ಅವರ ವಿರುದ್ಧ ಸಿಡಿದದ್ದು ಇದೇ ಅಶ್ಲೀಲ ಸಿ.ಡಿ. ಈ ಸಿ.ಡಿ.ಯಲ್ಲಿರುವ ವ್ಯಕ್ತಿ ಸೋಲಂಕಿ ಅಲ್ಲವೆಂದೂ, ಸಿಬಿಐ ತನಿಖೆಯೇ ನಡೆದು ಬಿಡಲಿ ಎಂದೂ ಕಾಂಗ್ರೆಸ್ಸು ಗಂಟಲೇರಿಸಿತ್ತು. ಚುನಾವಣೆಯ ನಂತರ ಈ ಸಿ.ಡಿ.ಯ ಸೊಲ್ಲು ತಾನಾಗಿ ಅಡಗಿ ಹೋಯಿತು.

ನರೇಂದ್ರ ಮೋದಿಯವರ ರಾಜಕೀಯ ಹಗೆ ಹರೇನ್ ಪಾಂಡ್ಯ. ಮೋದಿಯವರ ಮಂತ್ರಿ ಮಂಡಲದಲ್ಲಿ ಕಂದಾಯ ಸಚಿವರಾಗಿದ್ದವರು. ಗುಜರಾತಿನ ಕೋಮು ದಂಗೆಗಳ ನಂತರ 2003ರ ಫೆಬ್ರವರಿಯ ಒಂದು ಮುಂಜಾನೆ ಆಗಂತುಕರ ಗುಂಡಿಗೆ ಬಲಿಯಾಗುತ್ತಾರೆ. ಈ ಆಗಂತುಕರು ಮುಸ್ಲಿಂ ಉಗ್ರಗಾಮಿಗಳು ಎಂಬ ಸಿಬಿಐ ವಾದವನ್ನು ಪಾಂಡ್ಯ ಅವರ ಪತ್ನಿ ಮತ್ತು ತಂದೆ ಒಪ್ಪುವುದಿಲ್ಲ. ಇದೊಂದು ರಾಜಕೀಯ ಕೊಲೆ ಎನ್ನುವ ಅವರು, ತನಿಖೆಯನ್ನು ತಪ್ಪುದಾರಿಗೆ ಎಳೆದ ಆಪಾದನೆಯನ್ನು ಸಿಬಿಐ ವಿರುದ್ಧ ಮಾಡುತ್ತಾರೆ.

ಪಾಂಡ್ಯ ಕೊಲೆ ಪ್ರಕರಣದ ಎಲ್ಲ 12 ಮಂದಿಯನ್ನು 2011ರಲ್ಲಿ ಖುಲಾಸೆ ಮಾಡಿತ್ತು ಗುಜರಾತ್ ಹೈಕೋರ್ಟು. ತನಿಖೆಯನ್ನು ಕಣ್ಣಿಗೆ ಪಟ್ಟಿಕಟ್ಟಿಕೊಂಡು ಮಾಡಿ ಕುಲಗೆಡಿಸಿದೆ ಎಂದು ಸಿಬಿಐ ಕಪಾಳಕ್ಕೆ ಬಿಗಿದಿತ್ತು ಕೂಡ. ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ತಂಡದ ಸದಸ್ಯ ವೈ.ಸಿ.ಮೋದಿ. ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ವೈ.ಸಿ.ಮೋದಿಯವರು 'ಪಂಜರದ ಗಿಣಿ' ಸಿಬಿಐನ ಹೆಚ್ಚುವರಿ ನಿರ್ದೇಶಕರು. ಕಾಲಾನುಕ್ರಮದಲ್ಲಿ ನಿರ್ದೇಶಕರೂ ಆದಾರು.

ಯುವತಿಯೊಬ್ಬಳ ಚಲನವಲನಗಳ ಮೇಲೆ ತಿಂಗಳುಗಟ್ಟಲೆ ಇಪ್ಪತ್ತನಾಲ್ಕು ತಾಸು ಗುಜರಾತಿನ ಪೊಲೀಸರು ಅಕ್ರಮ ಕಣ್ಗಾವಲು ಇರಿಸಿದ್ದ ವಿವಾದ 'ಸ್ನೂಪ್ ಗೇಟ್' ಎಂದೇ ಪ್ರಸಿದ್ಧ. ಈ ವಿವಾದದಲ್ಲಿನ ಬೇಹುಗಾರಿಕೆ ಇನ್ಸ್‌ಪೆಕ್ಟರ್ ಜನರಲ್ ಅರುಣ್ ಕುಮಾರ್ ಶರ್ಮ. ಇದೇ ಶರ್ಮ ಅವರಿಗೆ ಸಿಬಿಐನ ಆಯಕಟ್ಟಿನ ಹುದ್ದೆ ನೀಡಲಾಗಿದೆ. ಅವರು ಸಿಬಿಐನ ಜಂಟಿ ನಿರ್ದೇಶಕರು. ಈ ನೇಮಕಗಳು ಕೂಡ ಕಾಕತಾಳೀಯವೇ ಇದ್ದಾವು.

ಮೋದಿಯವರನ್ನು ಕೋಮುದಂಗೆಗಳ ಆರೋಪಗಳಲ್ಲಿ ಸಿಕ್ಕಿ ಹಾಕಿಸಲು ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪದ ಮೇರೆಗೆ ಸಂಜೀವ ಭಟ್ ಈಗಾಗಲೆ ಜೈಲಿನಲ್ಲಿದ್ದು ಹೊರ ಬಿದ್ದಿದ್ದಾರೆ. ಭಟ್ ಮಾತ್ರವೇ ಅಲ್ಲ, ಗುಜರಾತ್ ಕೋಮು ದಂಗೆಗಳ ಸತ್ಯದ ಮೇಲೆ ಪರದೆ ಎಳೆಯಲು ನಿರಾಕರಿಸುವ ಪೊಲೀಸ್ ಅಧಿಕಾರಿಗಳನ್ನು ನೀರು ನೆರಳು ನೀಡದೆ ಬೇಟೆಯಾಡಿದ್ದಾರೆ ಆಳುವವರು.

ಸೊಹ್ರಾಬುದ್ದೀನ್ ಷೇಖ್ ಮತ್ತು ತುಲಸೀರಾಂ ಪ್ರಜಾಪತಿ ಅವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದ ಪ್ರಕರಣದಲ್ಲಿ ಡಿ.ಜಿ.ವಂಜರಾ ಸೇರಿದಂತೆ ಮೂವರು ಅಧಿಕಾರಿಗಳು ಮತ್ತು ಅಮಿತ್ ಶಾ ಅವರು ಬಂಧನಕ್ಕೆ ಈಡಾಗುತ್ತಾರೆ. ಈ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದ ಸತೀಶ್ ವರ್ಮ ಮತ್ತು ರಜನೀಶ ರಾಯ್ ಎಂಬ ಐಪಿಎಸ್ ಅಧಿಕಾರಿಗಳನ್ನು ಜಾರ್ಖಂಡಕ್ಕೆ ಮತ್ತು ಶಿಲ್ಲಾಂಗಿಗೆ ವರ್ಗ ಮಾಡಲಾಗಿದೆ.

ರಾಹುಲ್ ಶರ್ಮ ಎಂಬ ಮತ್ತೊಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಕಿರುಕುಳ ಸಹಿಸಲಾರದೆ ಸ್ವಯಂ ನಿವೃತ್ತಿ ಪಡೆದು ವಕೀಲಿ ವೃತ್ತಿಗೆ ಶರಣಾಗಿದ್ದಾರೆ. ಗುಜರಾತ್ ದಂಗೆಗಳು ಭುಗಿಲೇಳುವ ಕೇವಲ 13 ದಿನಗಳಿಗೆ ಮುನ್ನ ಭಾವನಗರ ಜಿಲ್ಲಾ ಪೊಲೀಸ್ ಅಧಿಕಾರಿಯಾಗಿ ನಿಯುಕ್ತರಾಗುತ್ತಾರೆ ಶರ್ಮ. ಅತ್ಯಂತ ಕಡಿಮೆ ಸಂಖ್ಯೆಯ ಸಿಬ್ಬಂದಿ ಇದ್ದರೂ ಎದೆಗುಂದದೆ ಭಾವನಗರದಲ್ಲಿ ದಂಗೆಗಳನ್ನು ಯಶಸ್ವಿಯಾಗಿ ಹತ್ತಿಕ್ಕುತ್ತಾರೆ. ದಂಗೆಗಳ ಪ್ರಯತ್ನಗಳ ವಿಚಾರಣೆಗೆ ಕೈ ಹಾಕುವ ಅವರನ್ನು ಎತ್ತಂಗಡಿ ಮಾಡಲಾಗುತ್ತದೆ. ಅಹ್ಮದಾಬಾದಿನ ಪೊಲೀಸ್ ಕಂಟ್ರೋಲ್ ರೂಮಿನ ಡಿ.ಸಿ.ಪಿ.ಯಾಗಿ ನಿಯುಕ್ತಿ ಮಾಡಲಾಗುತ್ತದೆ. ದಂಗೆಯ ದಿನಗಳಲ್ಲಿ ಅಹ್ಮದಾಬಾದ್ ನಗರದಲ್ಲಿ ಮಾಡಲಾದ ಎಲ್ಲ ದೂರವಾಣಿ ಕರೆಗಳ ಮಾಹಿತಿಯನ್ನು ಕಲೆ ಹಾಕುತ್ತಾರೆ. ಈ ಮಾಹಿತಿಯ ವಿಶ್ಲೇಷಣೆಗೆ ಕೈ ಹಾಕಿದ ಅವರನ್ನು ಪುನಃ ವರ್ಗ ಮಾಡಲಾಗುತ್ತದೆ. ಐದು ತಿಂಗಳಲ್ಲಿ ಎರಡನೆಯ ವರ್ಗಾವಣೆ. ಈ ವರ್ಗಾವಣೆಗೆ ಡಿಜಿಪಿ ಎತ್ತುವ ಆಕ್ಷೇಪಕ್ಕೂ ಸೊಪ್ಪು ಹಾಕುವುದಿಲ್ಲ.

ಶರ್ಮ ಅವರು ಕಲೆ ಹಾಕಿದ ಮೊಬೈಲ್ ದೂರವಾಣಿ ಕರೆಗಳ ಈ ಮಾಹಿತಿಯು ಮೋದಿ ಸರ್ಕಾರಕ್ಕೆ ಮುಳ್ಳಾಗುತ್ತದೆ. ಅವರ ಮಂತ್ರಿ ಮಾಯಾ ಕೊಡ್ನಾನಿ, ಬಾಬು ಭಜರಂಗಿ ಮತ್ತು ಇತರೆ 29 ಮಂದಿಗೆ ನರೋಡ ಪಾಟ್ಯ ನರಮೇಧ ಪ್ರಕರಣದಲ್ಲಿ ಆಜೀವ ಜೈಲು ವಾಸದ ಶಿಕ್ಷೆಯಾಗುತ್ತದೆ. 33 ಮಕ್ಕಳು ಮತ್ತು 32 ಮಹಿಳೆಯರು ಸೇರಿದಂತೆ 97 ಮಂದಿಯನ್ನು ತರಿದು ಹಾಕಿದ ಪ್ರಕರಣವಿದು. ಈ ದೂರವಾಣಿ ಕರೆಗಳ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ನೀಡದೆ ನಾನಾವತಿ ವಿಚಾರಣಾ ಆಯೋಗಕ್ಕೆ ನೀಡಿದ ಶರ್ಮ ಅವರ ನಡೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಇಲಾಖಾ ತನಿಖೆಗೆ ಗುರಿ ಮಾಡುತ್ತದೆ. ಸ್ವಇಚ್ಛಾ ನಿವೃತ್ತಿಗೆ ಅನುಮತಿ ನೀಡಿದರೂ ತನಿಖೆ ಮುಂದುವರೆದಿದೆ.

ಕಾಗುಣಿತದ ತಪ್ಪುಗಳು, ಚಾಲಕರಿಗೆ ನಗದು ಬಹುಮಾನ ನೀಡಿದಂತಹ ಕ್ಷುಲ್ಲಕ ಕಾರಣಗಳಿಗೂ ನೋಟಿಸು ಕೊಡಲಾಗುತ್ತದೆ. ಹೀಗೆ ದುರ್ನಡತೆಗಾಗಿ ಶರ್ಮ ಅವರಿಗೆ ಕೊಟ್ಟ ನೋಟಿಸುಗಳು ಮತ್ತು ಪತ್ರಗಳ ಸಂಖ್ಯೆ 52. ಪದಕ ತೊಡಿಸಬೇಕಿದ್ದ ಎದೆಗೆ ಅವಹೇಳನ ಮತ್ತು ಕಿರುಕುಳದ ಕತ್ತಿಯನ್ನು ಇರಿಯಲಾಗುತ್ತದೆ.

ಸಂಜೀವ ಭಟ್ ವಜಾ ಆಗಿದ್ದಾರೆ. ರಾಹುಲ್ ಶರ್ಮ ಸ್ವಯಂ ನಿವೃತ್ತಿ ಪಡೆಯುತ್ತಾರೆ. ಸತೀಶ್ ವರ್ಮ ಮತ್ತು ರಜನೀಶ್ ರಾಯ್ ಕಿರುಕುಳದಲ್ಲಿ ನರಳುತ್ತಿದ್ದಾರೆ. ನರಮೇಧದಲ್ಲಿ ಬದುಕಿ ಉಳಿದವರಿಗೆ ನ್ಯಾಯ ಬೇಡುತ್ತಿರುವ ತೀಸ್ತಾ ಶೀತಲ್ವಾಡ್ ಅವರನ್ನು ಬಗೆ ಬಗೆಯ ಕೇಸುಗಳ ಬಲೆಯಲ್ಲಿ ಕೆಡವಿ ಅವರ ರಕ್ತಕ್ಕಾಗಿ ತಹ ತಹಿಸಲಾಗುತ್ತಿದೆ.

ಮಾಯಾ ಕೊಡ್ನಾನಿ ಮತ್ತು ಬಾಬು ಭಜರಂಗಿಯನ್ನು ಜೈಲಿಗೆ ಕಳಿಸಿದ ನ್ಯಾಯಾಧೀಶೆ ಜ್ಯೋತ್ಸ್ನಾ ಯಾಜ್ಞಿಕ್ ಅವರಿಗೆ ರಾಶಿ ಬೆದರಿಕೆ ಪತ್ರಗಳು ಮತ್ತು ಲೆಕ್ಕವಿಲ್ಲದಷ್ಟು ಖಾಲಿ ದೂರವಾಣಿ ಕರೆಗಳು ಬರುತ್ತಿವೆ. ಅಂತ್ಯ ಅಲ್ಲವಿದು, ಕೇವಲ ಆರಂಭ.

Saturday, August 22, 2015

ನಾನು ಹೋರಾಡುತ್ತೇನೆ

ಸಂಜೀವ್ ಭಟ್


(ಗುಜರಾತ್‌ನಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂಜೀವ್ ಭಟ್ ೨೦೦೨ರ ಗುಜರಾತ್ ಮಾರಣಹೋಮದಲ್ಲಿ ನರೇಂದ್ರ ಮೋದಿಯ ಪಾತ್ರವಿದೆ ಎಂದು ಆರೋಪಿಸಿದ್ದರು. ಅಷ್ಟೆ ಅಲ್ಲ, ಮುಖ್ಯಮಂತ್ರಿಯವರ ಮನೆಯಲ್ಲಿ ನಡೆದ ಪೊಲೀಸ್ ಉನ್ನತಾಧಿಕಾರಿಗಳ ಸಭೆಯಲ್ಲಿ ಹಿಂದೂಗಳಿಗೆ ತಮ್ಮ ಆಕ್ರೋಶ ತೀರಿಸಿಕೊಳ್ಳಲು ಅನುವು ಮಾಡಿಕೊಡಿ ಎಂದು ಮೋದಿಯೇ ಹೇಳಿದ್ದರೆಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಕೂಡ ಸಲ್ಲಿಸಿದ್ದರು. ಅವರನ್ನು ೨೦೧೨ರಲ್ಲಿ ಸೇವೆಯಿಂದ ಅಮಾನತುಗೊಳಿಸಿದ ಸರ್ಕಾರ ಈಗ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಸತ್ಯದ ದನಿಯೆತ್ತಿದವರಿಗೆ ಭವಿಷ್ಯದ ಭಾರತದಲ್ಲಿ ಕಾದಿರುವ ಗತಿ ಎಂತಹದೆಂಬುದನ್ನು ತೀಸ್ತಾ ಮತ್ತು ಸಂಜೀವ್ ಭಟ್ ಅವರಿಗೊದಗಿದ ಪರಿಸ್ಥಿತಿಯೇ ಹೇಳುತ್ತಿರುವಂತಿದೆ. ಇದರ ನಡುವೆ ಫೇಸ್‌ಬುಕ್‌ನಲ್ಲಿ ಸಂಜೀವ್ ಭಟ್ ಹಂಚಿಕೊಂಡ ಕವಿತೆಯ ಅನುವಾದ ಇದು:}

‘ನನಗೆ ನನದೇ ತತ್ವವಿದೆ, ಅಧಿಕಾರವಿಲ್ಲ
ನಿನ್ನ ಬಳಿ ಅಧಿಕಾರವಿದೆ ತತ್ವವಿಲ್ಲ
ನೀನು ನೀನೇ
ನಾನು ನಾನೇ
ರಾಜಿ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ
ಹಾಗಾಗಿ ಶುರುವಾಗಲಿ ಹೋರಾಟ..

ನನ್ನ ಬಳಿ ಸತ್ಯವಿದೆ, ಬಲವಿಲ್ಲ
ನಿನ್ನ ಬಳಿ ಬಲವಿದೆ, ಸತ್ಯವಿಲ್ಲ
ನೀನು ನೀನೇ
ನಾನು ನಾನೇ
ರಾಜಿ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ
ಹಾಗಾಗಿ ಶುರುವಾಗಲಿ ಹೋರಾಟ..

ನೀನು ನನ್ನ ತಲೆಬುರುಡೆಯ ಒಡೆಯಬಹುದು
ನಾನು ಹೋರಾಡುತ್ತೇನೆ
ನೀನು ನನ್ನೆಲುವುಗಳ ಪುಡಿಪುಡಿಯಾಗಿಸಬಹುದು
ನಾನು ಹೋರಾಡುತ್ತೇನೆ
ನನ್ನ ಜೀವಂತ ದಹಿಸೀಯೆ ನೀನು
ಆದರೂ ನಾ ಹೋರಾಡುತ್ತೇನೆ
ನರನಾಡಿಗಳಲಿ ಸತ್ಯ ಹರಿಯುತಿರುವಾಗ
ನಾನು ಹೋರಾಡುತ್ತೇನೆ
ಶಕ್ತಿಯ ಪ್ರತಿ ಕಣದಿಂದ ನಿನ್ನೊಡನೆ
ನಾನು ಹೋರಾಡುತ್ತೇನೆ
ಉಸಿರಿನ ಕೊನೆಯ ಚಣದವರೆಗು
ನಾನು ಹೋರಾಡುತ್ತೇನೆ

ಸುಳ್ಳುಗಳಿಂದ ಕಟ್ಟಿದ
ನಿನ್ನರಮನೆಯು ಕುಸಿದು ಬೀಳುವವರೆಗು
ನಾನು ಹೋರಾಡುತ್ತೇನೆ
ನಿನ್ನ ಸುಳ್ಳುಗಳಿಂದ ನೀ ಪೂಜಿಸಿದ ದೆವ್ವವು
ನನ್ನ ಸತ್ಯದೇವತೆಯೆದುರು ಮಂಡಿಯೂರುವವರೆಗು
ನಾ ಹೋರಾಡುತ್ತೇನೆ..’

ಅನುವಾದ: ಹೆಚ್.ಎಸ್.ಅನುಪಮಾ

ನಂಬಿಕೆಗಳು, ತಾಣಗಳು, ನೆನಪು ಇತ್ಯಾದಿ...


ಶೂದ್ರ ಶ್ರೀನಿವಾಸ್ನಂಬಿಕೆಗಳು, ತಾಣಗಳು, ನೆನಪು ಇತ್ಯಾದಿ...

ನಮ್ಮ ನಮ್ಮ ಬಾಲ್ಯ ಕಾಲದ ತಾಣಗಳನ್ನು ಸುಮ್ಮನೆ ನೆನಪು ಮಾಡಿಕೊಂಡರೆ ಸಾಕು; ಒಂದು ರೀತಿಯ ಕತ್ತಲು ಆವರಿಸಿಕೊಂಡ ಭಾವನೆ ದಟ್ಟವಾಗುತ್ತ ಹೋಗುವುದು. ಆಗ ಮನಸ್ಸು ವಿಲವಿಲನೆ ಒಂದು ಕ್ಷಣ ಒದ್ದಾಡಿ ಬಿಟ್ಟಿರುತ್ತದೆ. ಅಥವಾ ಅವ್ಯಕ್ತ ಶೂನ್ಯತೆಯು ಕಾಡತೊಡಗಿರುತ್ತದೆ. ಈ ನೆಲೆಯಲ್ಲಿ ನಾವೆಲ್ಲ ಒಂದಲ್ಲ ಒಂದು ವಿಧದಲ್ಲಿ ಅನಾಥರೇ ಅನ್ನಿಸುತ್ತದೆ.

ಹಿಂದಿನ ರೀತಿಯ ಅನನ್ಯ ಸಂಬಂಧಗಳೂ ಕೂಡ ಅಸ್ತಿತ್ವವನ್ನು ಕಳೆದುಕೊಳುತ್ತಿವೆ. ಎಲ್ಲವನ್ನೂ ವ್ಯವಹಾರದ ಚೌಕಟ್ಟಿನಲ್ಲಿಯೇ ನೋಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಕುಟುಂಬ ವ್ಯವಸ್ಥೆಯ ಸುತ್ತಲೂ ಶ್ರೀಮಂತವಾಗಿದ್ದ ಸಂಗತಿಗಳೆಲ್ಲ ‘ಕೃತಕ’ ಮಾಡಿಟ್ಟಿದ್ದೇವೆ. ಇದರಿಂದ ಇಲ್ಲಿ ನಾನು ಆಡಿ ಬೆಳೆದ ಮನೆ, ಆಟದ ಮೈದಾನ, ಕೆರೆ, ಕುಂಟೆ, ಬಾವಿ ಎಲ್ಲವೂ ನಾಪತ್ತೆಯಾಗಿ ಬಿಟ್ಟಿವೆ. ‘ಅಸ್ಮಿತೆ’ ಎಂಬುದು ನಾವು ಕನವರಿಸಿಕೊಳ್ಳುವುದಕ್ಕೆ ಇರುವ ಶಬ್ದವಾಗಿ ಬಿಟ್ಟಿದೆ. ಎಷ್ಟೋ ವರ್ಷಗಳಿಂದ ಊರಿಗೆ ಹೋದಾಗಲೆಲ್ಲ; ಎಂತೆಂಥದೋ ಧ್ಯಾನದ ಕೇಂದ್ರಗಳಿಗೆ ನಮಸ್ಕರಿಸುತ್ತಿದ್ದೆವು. ಇಂದು ಅದೂ ಇಲ್ಲ. ಸುಮ್ಮನೆ ಬಿಕೋ ಎಂಬ ಭಾವನೆ ಆವರಿಸಿಕೊಳ್ಳುವ ರೀತಿಯಲ್ಲಿ ಆಗಿಬಿಟ್ಟಿದೆ. ಅರ್ಥಾತ್ ಆಧುನಿಕ ಕೊಳಚೆ ಪ್ರದೇಶವಾಗುವುದಕ್ಕೆ ಏನೇನು ಬೇಕೋ ಅದೆಲ್ಲ ನಡೆದು ಹೋಗಿ ಬಿಟ್ಟಿದೆ. ಕೊನೆಗೂ ಹೀಗೆ ನಾಲ್ಕು ಸಾಲು ವಿಷಾದದಿಂದ ಬರೆದು ನಮ್ಮ ಮಾನಸಿಕ ತೆವಲನ್ನು ತೀರಿಸಿಕೊಂಡು ಬಿಡುತ್ತಿದ್ದೇವೆ ಎಂಬ ಯೋಚನೆಯೂ; ಮನಸ್ಸನ್ನು ಅಸ್ಥಿರಗೊಳಿಸಿಬಿಡಲು ಸಾಧ್ಯ. ಹಾಗಾದರೆ; ಅನನ್ಯತೆಯನ್ನು ಆಪ್ತಗೊಳಿಸುವ ಸಂಗತಿ ಯಾವುದು? ಎಂಬ ಗಾಢವಾದ ಪ್ರಶ್ನೆಯು ಮುಖಾಮುಖಿಯಾಗುವುದು. ಅದೇ ಸಮಯಕ್ಕೆ ಇಂಥ ‘ಅಸ್ಮಿತೆ’ಗಳೇ ಇಲ್ಲದ ಲಕ್ಷಾಂತರ ಅಲೆಮಾರಿಗಳನ್ನು ಯಾವ ಹಂತದಲ್ಲಿ ಅರ್ಥೈಸಿಕೊಳ್ಳುವುದು ಅನ್ನಿಸುತ್ತದೆ. 

ಈ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಮೊನ್ನೆ ಮೊನ್ನೆಯಾದ ಭೂಕಂಪದಿಂದ ಎಲ್ಲವನ್ನು ಕಳೆದುಕೊಂಡು ‘ಶೂನ್ಯ’ತೆಯ ಕಡೆಗೆ ಮುಖ ಮಾಡಿದವರನ್ನು ನಾವು ಹೇಗೆ ಗ್ರಹಿಸಿಕೊಳ್ಳುವುದು. ಒಟ್ಟು ನಾಗರಿಕತೆಯ ಏಳುಬೀಳುಗಳಲ್ಲಿ; ಕೂಡಿ ಗುಣಿಸಲಾಗದಷ್ಟು ಅವಘಡಗಳು ನಡೆದು ಹೋಗಿಬಿಟ್ಟಿವೆ. ಈ ನೆಲೆಯಲ್ಲಿ ನಮ್ಮೆಲ್ಲ ಪ್ರೇಮದಿಂದ ಕೂಡಿದ ಮಾತುಗಳು; ಹುಸಿ ಅನ್ನಿಸಿದರೂ ಜೀವತುಂಬಿಕೊಂಡು ಸಂಬಂಧಗಳಿಗೆ ಭಾವನೆಗಳನ್ನು ದಟ್ಟಗೊಳಿಸುತ್ತಲೇ ಹೋಗುವುದು. ಒಂದು ಕಳೆದು ಹೋದರೆ; ಅದರ ಜಾಗದಲ್ಲಿ ‘ತದ್ರೂಪಿ’ಗಳನ್ನು ನಿರ್ಮಾಣ ಮಾಡಿ ಸಮಾಧಾನವನ್ನು ಅನುಭವಿಸಲು ಪ್ರಯತ್ನ ಪಡುತ್ತೇವೆ. ಒಮ್ಮಿಮ್ಮೆ ಆಕಸ್ಮಿಕವಾಗಿ ನಮ್ಮ ಭಾವಚಿತ್ರಗಳಿಗೂ ಮಸಿ ಬಳಿದು ಬಿಟ್ಟಿದ್ದರೆ; ದೊಡ್ಡ ಆಘಾತವಾದವರಂತೆ ಒದ್ದಾಡಿ ಬಿಟ್ಟಿರುತ್ತೇವೆ. ಈ ದೃಷ್ಟಿಯಿಂದ ನಮ್ಮ ನಮ್ಮ ವಸ್ತುಗಳ ಬಗ್ಗೆ ಎಂಥದೋ ತಾದಾತ್ಮತೆ ಬೆಳೆದು ಬಿಟ್ಟಿರುತ್ತದೆ. ಇದರ ರೂಪಕಗಳು ನಾನಾ ಮುಖಗಳಲ್ಲಿ ಅರ್ಥವಂತಿಕೆಯನ್ನು ತುಂಬಿಕೊಳ್ಳುತ್ತ ಹೋಗಬಹುದು. ಆದರೆ ಅದು ಹೀಗೆಯೇ ಎಂದು ಹೇಳಲು ಆಗುವುದೇ ಇಲ್ಲ. ಎಂದೋ ಯಾರನ್ನೋ ಪ್ರೀತಿಯಿಂದ ಮಾತಾಡಿಸಿದ್ದರೆ; ಆ ನೆನಪಿನಿಂದ ಮತ್ತೆಂದೊ ಸಿಕ್ಕಿದಾಗ; ಆತ್ಮೀಯ ದೃಷ್ಟಿ ವಿಸ್ತಾರಗೊಂಡಿರುತ್ತದೆ. ಹಾಗೆ ನೋಡಿದರೆ; ನಾನಾ ಕಾರಣಗಳಿಗಾಗಿಯೇ ನಮ್ಮ ನಮ್ಮ ಅಸ್ಮಿತೆಗಳು ನಮ್ಮನ್ನು ಒಟ್ಟು ನಡಾವಳಿಯ ರೂಪದಲ್ಲಿ ಮೃದುಗೊಳಿಸಿರುತ್ತದೆ. ಒಂದು ವೇಳೆ ಈ ನೆನಪೆಂಬುದೇ ಇಲ್ಲದಿದ್ದರೆ; ನಾಗರಿಕತೆ ಎಂಬುದು ಹೇಗೆ ಮುಂದುವರಿಯುತ್ತಿತ್ತು ಎಂದು ತಮಾಷೆಗೆ ಯೋಚಿಸಿದರೂ ಸಹ; ಸಣ್ಣ ಪ್ರಮಾಣದ ಗಾಬರಿಯಾಗದಿರದು. ಆದ್ದರಿಂದ ನಾವು ಬೆಳೆದು ಬಂದ ಜಾಗಗಳೆಲ್ಲ; ಒಂದು ವಿಧದಲ್ಲಿ ಅನುಭವದ ಕಣಜಗಳೇ ಆಗಿರುತ್ತವೆ. ಬೇಕಾದಾಗ ಅಲ್ಲಿಂದ ಎಂತೆಂಥದ್ದನ್ನೋ ತೆಗೆದುಕೊಂಡು ಊಟದಷ್ಟೇ ಪ್ರಿಯವಾಗಿ ಮೆಲುಕು ಹಾಕುತ್ತಿರುತ್ತೇವೆ. ಎಷ್ಟೋ ಬಾರಿ ಪಕ್ಕಕ್ಕೆ ತಳ್ಳಿ ಬದುಕಲಾಗದಷ್ಟು ದಟ್ಟವಾಗಿರುತ್ತವೆ.

 ಇವೆಲ್ಲ ಸಂಸ್ಕೃತಿ, ಸಮಾಜ ಶಾಸ್ತ್ರ ಎಲ್ಲದಕ್ಕೂ ವೇದಿಕೆಯಂತೆ ಪ್ರೇರಣಾ ಸ್ವರೂಪವನ್ನು ಪಡೆದಿರುತ್ತದೆ. ಪ್ರಕೃತಿಯ ಅಗಣಿತ ವೃಕ್ಷಸಂಕಲದಂತೆ, ಸಸ್ಯ ಸಮೃದ್ಧಿಯಂತೆ, ವರ್ಣಮಯ ಪಕ್ಷಿ ಸಂಕುಲದಂತೆ ಮನುಷ್ಯನ ಸ್ವರೂಪ ಒಂದೇ ಅಲ್ಲ. ಆದರೆ ಭಾವನೆಗಳು ದುಃಖ-ದುಮ್ಮಾನಗಳನ್ನು ಮುಂದಿಟ್ಟುಕೊಂಡು ಚಡಿಪಡಿಸುತ್ತಿರುತ್ತವೆ. ಈ ಎಲ್ಲ ಚಡಪಡಿಕೆಗಳೇ ಕಾವ್ಯಾನುಸಂಧಾನದ ಮೂಲ ಸಾಮಗ್ರಿಯಾಗಿರಬಹುದು. ಹುಡುಕುತ್ತ ಬಹುದೂರ, ಅರಿವಿನ ದಾಹದಿಂದಲೋ ಸಾಗುವ ಪರಿಯೂ ಕೂಡ; ನಂಬಿಕೆಯ ದಟ್ಟತೆಯಿಂದಲೇ ಅನಾವರಣಗೊಂಡಿರುತ್ತದೆ. ಅರ್ಥಾತ್ ನಾವೇ ಸೃಷ್ಟಿಸಿದ ಅಥವಾ ನಾವೇ ನಾಮಕರಣ ಮಾಡಿದ ದೇವರ ಪರಿಕಲ್ಪನೆಯು ಅಮೋಘವಾದದ್ದು. ಒಂದು ಪಕ್ಷಿಯಾಗಲಿ, ಪ್ರಾಣಿಯಾಗಲಿ ತನ್ನ ಆಹಾರದ ಹುಡುಕಾಟದಲ್ಲಿ ಹಾರುವ, ನಡೆಯುವ ಕ್ರಿಯೆಯಲ್ಲಿ ಅದಮ್ಯತೆಯನ್ನು ಕಳೆದುಕೊಂಡಿರುವುದಿಲ್ಲ.

ನಮ್ಮೆಲ್ಲ ಪೂರ್ವಸೂರಿಗಳು ಕಾಲಘಟ್ಟಕ್ಕೆ ನಂಬಿಕೆಯ ಸೇತುವೆಯನ್ನು; ಕಾಲ್ಪನಿಕವಾಗಿಯೂ ಅದರ ಮುಂದುವರಿದ ಭಾಗವಾಗಿ ವಾಸ್ತವತೆಯು ಜೀವವನ್ನು ಮೈದುಂಬಿಸಿಕೊಂಡಿರುತ್ತದೆ. ಕಲ್ಪನೆಯು ಮನಸ್ಸಿನಲ್ಲಿ, ಎದೆಯಾಳದಲ್ಲಿ ಅಂಕುರಗೊಳ್ಳುವ ಪರಿಯೇ ರೋಮಾಂಚಕಾರಿಯಾದದ್ದು. ಇಲ್ಲದಿದ್ದರೆ ಈ ಬಣ್ಣಗಳ ವೈವಿಧ್ಯಯತೆ ಯಾಕೆ ಜೀವಪಡೆಯುತ್ತಿತ್ತು. ಇಲ್ಲಿ ಅತೃಪ್ತಿಯೆಂಬುದು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತ ಹೋಗುವ ಕ್ರಮವೇ ಸೋಜಿಗವಾದದ್ದು. ಹಾಗೆ ನೋಡಿದರೆ ನಮ್ಮೆಲ್ಲ ಆವಿಷ್ಕಾರಗಳು ಕುತೂಹಲ ಮತ್ತು ಅತೃಪ್ತಿಯಿಂದಲೇ ಪಾಕಗೊಂಡಿರುವುದು. ನಾಲಿಗೆಯ ರುಚಿ, ಕಣ್ಣಿನ ರುಚಿ, ದೇಹದ ರುಚಿಯು ಅದರದೇ ಆಯಾಮಗಳನ್ನು ಮುಂದುವರಿಸುತ್ತ ಹೋಗುವುದು. 

ನಿರಾಕಾರ ಜ್ಞಾನ ಪಡೆಯುವುದಕ್ಕೂ ನಂಬಿಕೆಯೆಂಬುದು ಮನದಾಳದಲ್ಲಿ ದಟ್ಟಗೊಳ್ಳುತ್ತಲೇ ಹೋಗುತ್ತಿರುತ್ತದೆ. ಮರುಕ, ಕರುಣೆ, ದಯಾಮಯತೆ ಎಂಬುದೂ ಕೂಡ; ಆನಂದ ಮಯತೆಯ ಸಂಕೇತವೇ ಆಗಿರುತ್ತದೆ. ಯಾವುದೋ ಅಮೂಲ್ಯವಾದದ್ದನ್ನು ಪಡೆಯಲು ಯಾವ ಮಹನೀಯನೂ ಕಣಿ ಕೇಳಲು ಹೋಗಲಿಲ್ಲ. ಸುಮ್ಮನೆ ಹೊರಟರು. ನಂಬಿಕೆಯ ಮೂಲಗಳು ಯಾವುವು ಎಂದು ಹೋಗುತ್ತಲೇ ಮುಂದಿನ ಪೀಳಿಗೆಗೆ ಎಲ್ಲ ಗುಣಾತ್ಮಕ ದಾರಿಗಳನ್ನು ಸುಗಮಗೊಳಿಸಿದವರು. ಅವರು ಎಂದೂ ವ್ಯವಹಾರಸ್ಥರಾಗಿರಲಿಲ್ಲ. ಜೀವರಾಶಿಗಳಿಗೆ ಸಮಾಧಾನಕರವಾದದ್ದು ಎಂಬುದು ಒಂದು ಇದೆ; ಅದು ಯಾವುದು ಎಂದು ಶೋಧನೆಗೆ ತೊಡಗಿದವರು. ಇಲ್ಲದಿದ್ದರೆ; ನಮಗೆ ಪ್ರಾಪ್ತವಾಗಿರುವ ಸಮೃದ್ಧತೆಯು ಗೋಚರಿಸುತ್ತಲೇ ಇರುತ್ತಿರಲಿಲ್ಲ. ಹೀಗೆ ಬರೆಯುವ ಕಾಲಕ್ಕೆ; ಒಮ್ಮೆಮ್ಮೆ ಬೇಡವೆಂದರೂ; ಕುತೂಹಲವೆಂಬುದು ಅಚ್ಚರಿಯ ಮುಖವನ್ನು ಪಡೆಯುತ್ತ ಹೋಗುವುದು. ಒಂದು ಸರಳ ಉದಾಹರಣೆಯೆಂದರೆ; ಬರೆಯುವ ಲೇಖನಿ, ಅದರ ಆಕಾರಗಳು, ಮಸಿಯ ಸ್ವರೂಪ, ಮೂಡುವ ಅಕ್ಷರಗಳು, ಅವು ಧ್ವನಿಸುವ ನಾದ ಎಲ್ಲವೂ ಅಪ್ರತಿಮವಾದದ್ದೇ. ಒಮ್ಮೆಮ್ಮೆ ಆಕಾರವಿಲ್ಲದ ಆನಾದದ ಧ್ವನಿಯನ್ನು ಅಥವಾ ಕೂಗಿನ ಜಾಡನ್ನು ಹಿಡಿದು ಮಗುವಿನಿಂದ ಮೊದಲ್ಗೊಂಡು ದೊಡ್ಡವರ ತನಕ ಪರ್ಯಟಣೆ ಮುಂದುವರಿದಿರುತ್ತದೆ. ಮುಂದೆ ಇರುವ ಬದುಕು ತೀವ್ರವಾದ ದುರ್ಗಮತೆಯನ್ನು ಹೊಂದಿದೆಯೆಂದು ತಿಳಿದರೂ; ಅದನ್ನು ಅರಿಯಲು ಮತ್ತು ಅದಕ್ಕೆ ಮಾರ್ಗಸೂಚಿಗಳನ್ನು ಕಂಡುಕೊಳ್ಳಲು ಎಂದೂ ಹಿಂದೆ ಸರಿಯಲಿಲ್ಲ. 

ಈ ಹಂತಗಳಲ್ಲಿ ಸಾಗಿದ ಒಬ್ಬೊಬ್ಬರ ಕಥೆಯೂ ನಿಗೂಢವಾದದ್ದೆ. ಇಲ್ಲಿ ಏನೇನೋ ಇದೆ; ನೋಡುವುದಕ್ಕೆ ನಂಬಿಕೆ ಬೇಕು ಮತ್ತು ತಾಳ್ಮೆ ಬೇಕು. ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಸಹನೆಯೆಂಬುದು ಎಷ್ಟು ಪ್ರಮಾಣಬದ್ಧವಾಗಿ ಕೆಲಸ ಮಾಡುತ್ತಿರುತ್ತದೆ. ಬಹಳ ಆಶ್ಚರ್ಯ ಸಂಗತಿಯೆಂದರೆ; ಕಲಿಸಿದೆನು, ಕಲಿತೆನು ಎಂಬುದರ ಮಧ್ಯೆ ಯಾವುದೇ ರೀತಿಯ ವ್ಯಾವಹಾರಿಕ ಕಂದರವಿರುವುದಿಲ್ಲ. ಆ ಕ್ಷಣದ ಸಂತೃಪ್ತಿ ಮುಂದಿನದಕ್ಕೆ ದಾರಿಯಾಗುತ್ತ ಹೋಗುವುದು. ನಮ್ಮೆಲ್ಲ ಪೂರ್ವಸೂರಿಗಳು ಕಂಡುಕೊಂಡ ಸಂತೃಪ್ತಿಯೇ; ವೈವಿಧ್ಯಮಯವಾದ ಆವಿಷ್ಕಾರಗಳಿಗೆ ನಾಂದಿಯಾಯಿತು. ಅವರೆಲ್ಲ ಆಡಂಬರದಿಂದ ಬಹು ದೂರ ಉಳಿದವರು. ಒಂದು ದೃಷ್ಟಿಯಿಂದ ನಾಗರಿಕತೆ ಮುಂದುವರಿದದ್ದೇ ಹೀಗೆ. ಕ್ರೌರ್ಯವನ್ನು ಕಂಡು, ಅಸಮಾನತೆಯನ್ನು ಕಂಡು, ವಿಕೃತತೆಗೆ ಬೇಸತ್ತು; ಜ್ಞಾನದ ಮೂಲಗಳನ್ನು ಹುಡುಕುತ್ತಲೇ; ಪ್ರೀತಿ, ಪ್ರೇಮ, ಕರುಣೆ, ಮರುಕ, ಅಹಿಂಸೆ, ಸಹನಾಮಯತೆ ಮುಂತಾದ ಅಮೂಲ್ಯ ಪದಸಮುಚ್ಚಯಗಳಿಗೆ ಅರ್ಥ ವ್ಯಾಪ್ತತೆಯನ್ನು ಹಿಗ್ಗಿಸಿದವರು. ನಾವು ಮತ್ತೆ ಮತ್ತೆ ಉಚ್ಚರಿಸುವ ನ್ಯಾಯ, ಸತ್ಯ ಮತ್ತು ನಿಜ ಎಂಬುದಕ್ಕೆ ನೀರೆರೆಯುತ್ತಲೇ; ಎಲ್ಲರಿಂದ ಎಲ್ಲದರಿಂದ ಕಲಿ ಮತ್ತು ಪ್ರತಿಯೊಂದನ್ನೂ ಗೌರವಿಸುತ್ತ ಹೋಗು ಎಂಬ ಧ್ವನಿಗೆ ಆಯಾಸವೆಂಬುದು ಬರಲೇ ಇಲ್ಲ. ಅದು ಅಕ್ಷರಗಳಿಂದ ಪ್ರತಿಧ್ವನಿಸಬಹುದು, ನಾದಮಯತೆಯ ಆಲಾಪನೆಯಿಂದ ಗುನುಗುನಿಸಬಹುದು.

ನಮ್ಮೆಲ್ಲ ಸ್ಥಳನಾಮಗಳೂ ಆರೋಗ್ಯಪೂರ್ಣ ಪಾರಂಪರಿಕತೆಯನ್ನು ಹೇಳುತ್ತಲೇ ಬರುತ್ತಿದೆ. ನಮ್ಮ ಬಾಲ್ಯಕಾಲದ ತಾಣಗಳೆಲ್ಲ ಏನೇನೋ ಕಲಿಸಿದೆ. ಇಂದು ಅವು ಪ್ರಾರಂಭದಲ್ಲಿ ಪ್ರಸ್ತಾಪಿಸಿದಂತೆ ನಾಪತ್ತೆಯಾಗಿರಬಹುದು. ಆದರೆ ಮನೋಲೋಕದ ‘ಅಸ್ಮಿತೆ’ಗಳ ನೆಲೆತಯಲ್ಲಿ ‘ಹಾಯ್’ ಎಂಬ ಕೂಗು ಎಂದೆಂದಿಗೂ ಆಪ್ತತೆಯನ್ನು ಕಳೆದುಕೊಳ್ಳುವುದಿಲ್ಲ. ಎಲ್ಲರ ಮತ್ತು ಎಲ್ಲದರ ಕೂಗು ಒಂದೆ: ನಾವು ಬದುಕಬೇಕಾಗಿದೆ; ಸಹಾಯ ಮಾಡದಿದ್ದರೂ ಚಿಂತೆಯಿಲ್ಲ ತೊಂದರೆ ಕೊಡಬೇಡಿ ಎಂಬುದು ವೌಲಿಕಗೊಳ್ಳುತ್ತಲೇ ಹೋಗುತ್ತಿದೆ. ಇತ್ತೀಚೆಗೆ ಆಕಸ್ಮಿಕವಾಗಿ ಎರಡು ಅಮೂಲ್ಯ ಕೃತಿಗಳನ್ನು ಓದಿದೆ. ಒಂದು ಹಿಂದಿಯ ಪ್ರಸಿದ್ಧ ಕಥೆಗಾರ, ಕಾದಂಬರಿಕಾರ ಕಮಲೇಶ್ ಅವರ ‘ಎಷ್ಟೊಂದು ಪಾಕಿಸ್ತಾನಗಳು’. ಮತ್ತೊಂದು ಸಯೀದ್ ಅಖ್ತರ್ ಮಿರ್ಝಾ ಎಂಬ ಬಹುದೊಡ್ಡ ಲೇಖಕನ ‘ಅಮ್ಮಿ’ ಎಂಬುದು. ಎರಡೂ ಕಾದಂಬರಿಗಳ ಮೂಲ ಪ್ರೇರಣೆ: ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದರ ಹಿಂದಿರುವ ಹಿಂಸೆ; ಹೇಗೆ ವೇದನೆಯನ್ನು ದ್ವಿಗುಣಗೊಳಿಸುತ್ತ ಹೋಗುತ್ತದೆ ಎಂಬುದು. ಬಾಬರಿ ಮಸೀದಿಯನ್ನು ಕೆಡವದಿದ್ದರೆ; ಅದು ಸುಮ್ಮನೆ ಒಂದು ಚಾರಿತ್ರಿಕ ತಾಣವಾಗಿ ಉಳಿದುಬಿಡುತ್ತಿತ್ತು. ಮತೀಯ ವಾದಿಗಳ ಕ್ರೌರ್ಯ ಮತ್ತು ಅಸಹನೆಯಿಂದ; ಅದು ಲಕ್ಷಾಂತರ ಸಹನಾಮಯಿಗಳಲ್ಲಿ ಒಂದು ಅಮೂಲ್ಯ ‘ಅಸ್ಮಿತೆ’ಯಾಗಿ ಆಕಾರ ಪಡೆಯುತ್ತಲೇ ಹೋಗುತ್ತಿದೆ.

Thursday, August 20, 2015

ಕನ್ನಡ ಕಟ್ಟುವ ಬಗೆಜಿ.ಪಿ.ಬಸವರಾಜು

 ತೀ.ನಂ.ಶ್ರೀ ಅವರ ’ಭಾರತೀಯ ಕಾವ್ಯ ಮೀಮಾಂಸೆ’ಗೆ (೧೯೫೩ರಲ್ಲಿ) ಮುನ್ನುಡಿಯನ್ನು ಬರೆದ ಕುವೆಂಪು ಅವರು ಒಂದು ಮಾತನ್ನು ಹೇಳಿದರು: ಕನ್ನಡ ಸಾಹಿತ್ಯ ನವೋದಯ ತನ್ನ ಹಲವು ಶಾಖೆಗಳಲ್ಲಿ ಚಿಗುರಿ ಬೆಳೆದು ಮುಂಬರಿಯುತ್ತಿದೆ. ಆದರೆ ಕಾವ್ಯ ಮೀಮಾಂಸೆಯ ಮತ್ತು ಸಾಹಿತ್ಯ ವಿಮರ್ಶೆಯ ಶಾಖೆಗಳು ಅಲ್ಲಲ್ಲಿ ಕಣ್ಣೊಡೆದಂತೆ ತೋರಿದರೂ, ಒಟ್ಟಿನಲ್ಲಿ ಬರಲು ಬರಲಾಗಿಯೆ ತೋರುತ್ತಿವೆ. ಅದರಲ್ಲೂ  ಸಾಹಿತ್ಯ ವಿಮರ್ಶೆಯ ಭಾಗಕ್ಕಿಂತಲೂ ಕಾವ್ಯ ಮೀಮಾಂಸೆಯ ಭಾಗ ತುಂಬ ರಿಕ್ತ ಸ್ಥಿತಿಯಲ್ಲಿದೆ.

ನಮ್ಮ ಕಾವ್ಯ ಮೀಮಾಂಸೆಯ ಸ್ಥಿತಿ ಇವತ್ತಿಗೂ ಬದಲಾದಂತೆ ತೋರುವುದಿಲ್ಲ. ತೀನಂಶ್ರೀ, ಡಾ.ಕೆ. ಕೃಷ್ಣಮೂರ್ತಿ, ಎನ್. ಬಾಲಸುಬ್ರಹ್ಮಣ್ಯ, ಪುತಿನ, ಕುವೆಂಪು, ಇನಾಂದಾರ್, ಜಿ.ಎಸ್. ಶಿವರುದ್ರಪ್ಪ, ಕೆ.ವಿ. ನಾರಾಯಣ ಮೊದಲಾದವರು, ನಾವು ಸುಲಭವಾಗಿ ಎಣಿಸಬಹುದಾದಷ್ಟು ಜನ ಮಾತ್ರ, ಈ ಕ್ಷೇತ್ರದಲ್ಲಿ ಚಿಂತಿಸಿ ಕೃತಿ ರಚಿಸಿರುವುದನ್ನು ಬಿಟ್ಟರೆ ಹೆಚ್ಚಿನ ಪ್ರಗತಿ ಕಾಣಿಸುವುದಿಲ್ಲ. ಕಾವ್ಯ ಮೀಮಾಂಸೆಯ ಅಲಂಕಾರ ಶಾಸ್ತ್ರ, ಛಂದಶ್ಶಾಸ್ತ್ರಗಳು ಈ ಕಾಲದ ಫ್ಯಾಷನ್ ಅಲ್ಲ. ಆದರೆ ನಮ್ಮ ಕಾವ್ಯ ಮೀಮಾಂಸೆಯ ತಿರುಳೆಂದು ಭಾವಿಸಿರುವ, ’ರಸ, ಧ್ವನಿ, ಔಚಿತ್ಯ’ಗಳನ್ನು ಬಿಟ್ಟುಕೊಟ್ಟು ವಿಮರ್ಶೆ ಬದುಕಲಾರದು. ಹೀಗಿದ್ದೂ ಕಾವ್ಯ ಮೀಮಾಂಸೆಯ ಬಗ್ಗೆ ಗಂಭೀರ ಚಿಂತನೆಗಳು ನಡೆಯದಿರುವುದು ಸೋಜಿಗ ಹುಟ್ಟಿಸುತ್ತದೆ.

ಇಂಥ ಸನ್ನಿವೇಶದಲ್ಲಿ ಹೊಸದೊಂದು ಆಶಾಕಿರಣದಂತೆ ಗಿರಿ (ಡಾ.ಎಂ.ಎನ್. ಹೆಗಡೆ) ಅವರ ಕಾವ್ಯಮೀಮಾಂಸೆಯನ್ನು ಕುರಿತ ಹೊತ್ತಗೆಯೊಂದು ಹೊರಬರುತ್ತಿದೆ. ’ಸಾಹಿತ್ಯದ ಮೀಮಾಂಸೆ ಮತ್ತು ವರ್ತನ ವಿಜ್ಞಾನ’ ಎಂಬ ಹೆಸರಿನ ಈ ಕೃತಿ ಸದ್ಯದಲ್ಲೇ ಓದುಗರ ಕೈಸೇರಲಿದೆ. ಅನೇಕ ಕಾರಣಗಳಿಗಾಗಿ ಈ ಕೃತಿ ಬಹಳ ಮಹತ್ವದ ಕೃತಿಯಾಗಿ ಕಾಣಿಸುತ್ತಿದೆ; ವಿದ್ವತ್ ವಲಯದಲ್ಲಿ ಗಂಭೀರ ಚಿಂತನೆಗೆ ದಾರಿಮಾಡಿಕೊಡುವ ಸಾಧ್ಯತೆಯನ್ನೂ ಇದು ತೋರಿಸುತ್ತಿದೆ.

ಕಾವ್ಯ ಮೀಮಾಂಸೆ ಎಂದರೆ ಸಾಹಿತ್ಯದ ಚರ್ಚೆ, ಚಿಂತನೆ, ವಿಶ್ಲೇಷಣೆ, ಸಂಶೋಧನೆ. ಸಾಹಿತ್ಯದ ಮುಖ್ಯ ಅಂಶಗಳಾದ ಕಾವ್ಯ, ಓದುಗ, ಕವಿ, ಪ್ರಯೋಜನ, ಸೃಜನಶೀಲ ಕ್ರಿಯೆ, ಹಾಗೆಯೇ ರಸ, ಧ್ವನಿ, ಔಚಿತ್ಯ ಇತ್ಯಾದಿ ಅನೇಕ ಅಂಶಗಳನ್ನು ಚರ್ಚಿಸುವುದು, ಶೋಧಿಸುವುದು, ಚಿಂತಿಸುವುದು. ಪ್ರಾಚೀನ ಚಿಂತಕರು ಕಾವ್ಯ ಮೀಮಾಂಸೆಯ ಪ್ರಮುಖ ಅಂಶಗಳನ್ನು ಚರ್ಚಿಸಿದ್ದು, ವಿಶ್ಲೇಷಿಸಿದ್ದು ಮತ್ತು ಕೆಲವು ತೀರ್ಮಾನಗಳಿಗೆ ಬಂದದ್ದು ತತ್ವಶಾಸ್ತ್ರ, ತರ್ಕಶಾಸ್ತ್ರ, ಪಾಂಡಿತ್ಯವಾದದ ತಳಹದಿಯ ಬೆಳಕಿನಲ್ಲಿ. ಪ್ಲೇಟೊ, ಅರಿಸ್ಟಾಟಲ್, ಆನಂದವರ್ಧನ, ಅಭಿನವಗುಪ್ತ  ಮೊದಲಾದವರ ಚಿಂತನೆ ನಡೆದದ್ದು ಹೀಗೆಯೇ. ಮುಂದೆ ವಿಜ್ಞಾನ ಬೆಳೆದಂತೆ ಈ ತಳಹದಿ ಜ್ಞಾನ ಶಾಖೆಗಳು ಕೂಡ ಹೆಚ್ಚುತ್ತ ಹೋದವು. ಮನೋವಿಜ್ಞಾನ, ಭಾಷಾ ವಿಜ್ಞಾನ, ವರ್ತನ ವಿಜ್ಞಾನ, ನರವಿಜ್ಞಾನ ಮೊದಲಾದ ನೆಲೆಗಳಿಂದಲೂ ಕಾವ್ಯ ಮೀಮಾಂಸೆಯ ಮುಖ್ಯ ಅಂಶಗಳನ್ನು ಪರೀಕ್ಷೆಗೆ ಒಡ್ಡುವ ಪರಿಪಾಠವೂ ಬೆಳೆಯಿತು. ಪಡುವಣದಲ್ಲಂತೂ ಇದು ಹೆಚ್ಚಾಗಿಯೇ ನಡೆಯಿತು.

’ಇಂದ್ರಿಯಾನುಭವಕ್ಕೆ ಬರುವ ಪ್ರಪಂಚ ನಿಜವಲ್ಲ; ನಿಜವಾದದ್ದರ ಅನುಕರಣೆ. ನಿಜವಾದ ಪ್ರಪಂಚ [ದೇವರ ಮನಸ್ಸಿನಲ್ಲಿ]ಎಲ್ಲೋ ಇದೆ’ ಎಂದ ಪ್ಲೇಟೊ. ಶಂಕರಾಚಾರ್ಯರೂ ಸೇರಿದಂತೆ ಅನೇಕ ಭಾರತೀಯರ ಚಿಂತಕರ ಚಿಂತನೆಯೂ ಇದೇ ಮಾದರಿಯದೇ. ’ಈ ಜಗತ್ತು ಮಿಥ್ಯೆ’ ಎಂದದ್ದರ ಹಿಂದಿರುವ ಚಿಂತನೆಯೇ ಇದು. ಎಲ್ಲ ದೇಶಗಳಲ್ಲೂ ಇಂಥ ಕಲ್ಪನೆ ಇದೆ ಎನ್ನುತ್ತಾರೆ ಗಿರಿ. ’ಸ್ವರ್ಗದ ಸುಖ’ ಎಲ್ಲ ಸಮಾಜಗಳ ಕನಸು. ಕಾವ್ಯ ಮೀಮಾಂಸೆಯ ಇಂಥ ಅನೇಕ ಸಂಗತಿಗಳನ್ನು, ತಮ್ಮ ಅಪಾರವಾದ ಓದು ಮತ್ತು ಹರಿತ ವಿಶ್ಲೇಷಣೆಯ ಮೂಲಕ ಚರ್ಚೆಗೆ ಒಡ್ಡುವ ಗಿರಿ ಮೂಡಣ ಮತ್ತು ಪಡುವಣ ರಾಷ್ಟ್ರಗಳ ಅನೇಕ ಚಿಂತಕರ ವಿಚಾರಗಳನ್ನು ಮರುಪರಿಶೀಲನೆಗೆ ಒಳಗು ಮಾಡಿದ್ದಾರೆ.

ವಿಜ್ಞಾನಿಯಾಗಿರುವ ಗಿರಿ ಅವರಿಗೆ ಸಹಜವಾಗಿಯೇ ಪ್ರಯೋಗಕ್ಕೆ ಒಳಪಡಿಸಿ, ಆ ಮೂಲಕ ತೀರ್ಮಾನಕ್ಕೆ ಬರುವ ಕುತೂಹಲ. ಇದಕ್ಕೆ ಅಗತ್ಯವಾದ ಸಿದ್ಧತೆಯೂ ಅವರಲ್ಲಿದೆ. ಭಾಷಾ ವಿಜ್ಞಾನ, ಮನೋವಿಜ್ಞಾನ, ಮನೋವಿಶ್ಲೇಷಣೆ, ನರವಿಜ್ಞಾನ, ವರ್ತನ ವಿಜ್ಞಾನ ಕ್ಷೇತ್ರಗಳಲ್ಲಿ ಈ ಸಂಬಂಧದಲ್ಲಿ ಆಗಿರುವ ಬೆಳವಣಿಗೆಯ ಆಳ ಅಧ್ಯಯನದ ಹಿನ್ನೆಲೆಯೂ ಗಿರಿಯವರಿಗಿದೆ. ಫ್ರಾಯ್ಡ್, ಯೂಂಗ್, ಸ್ಕಿನ್ನರ್, ಚಾಮ್‌ಸ್ಕಿ ಹೀಗೆ ಈ ಕ್ಷೇತ್ರಗಳಲ್ಲಿ ಮಹತ್ವದ ಕೆಲಸವನ್ನು ಮಾಡಿರುವ ಚಿಂತಕರ ತೀರ್ಮಾನಗಳನ್ನು ಗಿರಿ ದಿಟ್ಟವಾಗಿ ಪ್ರಶ್ನಿಸುತ್ತಾರೆ. ನಿರಾಕರಿಸುವ ಅಂಶಗಳನ್ನು ಮುಲಾಜಿಲ್ಲದೆ ನಿರಾಕರಿಸುತ್ತ, ಒಪ್ಪುವ ವಿಚಾರಗಳಿಗೆ ತಮ್ಮ ಸಮರ್ಥನೆಯನ್ನು ನೀಡುತ್ತ ಕಾವ್ಯ ಮೀಮಾಂಸೆಯ ನಿಲುವುಗಳನ್ನು ಗಟ್ಟಿಗೊಳಿಸಲು ನೋಡುತ್ತಾರೆ.

ಮನಸ್ಸು, ಆತ್ಮ, ಸ್ಪೂರ್ತಿ, ಸಂವೇದನೆ, ಪ್ರಚೋದನೆ, ವರ್ತನೆ, ಕನಸು, ಕಲ್ಪನೆ ಇತ್ಯಾದಿ ಅನೇಕ ಅಮೂರ್ತ ಸಂಗತಿಗಳನ್ನು ಚರ್ಚಿಸುವುದು ಹೇಗೆ? ’ಅಪ್ಪಟ ಆಲೋಚನೆಗೆ ಎಲ್ಲ ಹೊಳೆಯುತ್ತದೆ, ಬೇರೆ ಯಾವ ಪರೀಕ್ಷೆಯೂ ಬೇಕಾಗಿಲ್ಲ’ ಎಂದು ಪ್ಲೇಟೊ ಹೇಳಿದ್ದರೂ, ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇವತ್ತು ವಿಜ್ಞಾನ ಇಲ್ಲ. ಹಿಂದಿನ ವಿಜ್ಞಾನಿಗಳೂ ಇಂಥ ಸಂಗತಿಗಳನ್ನು ಪರೀಕ್ಷೆಗೆ ಒಡ್ಡಲು ಪ್ರಯತ್ನಿಸಿದ್ದಾರೆ. ಸಾಹಿತ್ಯದ ಉಗಮವನ್ನು ಕುರಿತಂತೆ ಫ್ರಾಯ್ಡ್ ಮತ್ತು ಯೂಂಗ್ ನಡೆಸಿದ ಪ್ರಯೋಗಗಳು ಇಂಥ ಪ್ರಯತ್ನದ ಫಲವೇ. ’ಮನಸ್ಸು ಒಂದು ಖಾಲಿ ಹಲಗೆ(ಪಾಟಿ)’ ಎಂಬ ನಂಬಿಕೆ ತತ್ವಜ್ಞಾನಿ ಅರಿಸ್ಟಾಟನದು. ಆಧುನಿಕ ತತ್ವಜ್ಞಾನಿ ಮತ್ತು ಮನೋವಿಜ್ಞಾನಿ ರನೆ ಡಕಾರ್ಟ್, ’ಮೆದುಳಿನ ಆಳದಲ್ಲಿ ಹುದುಗಿರುವ ಶಂಕು ಗ್ರಂಥಿಯೊಳಗೆ ಮನಸ್ಸು ಅಥವಾ ಆತ್ಮ ಇರುತ್ತದೆ’ ಎಂದು ನಂಬಿದ್ದ. ಇಂಥ ಬಿಡಿಸಲಾಗದ ಸಂಗತಿಗಳನ್ನು ವರ್ತನ ವಿಜ್ಞಾನ ಇನ್ನೊಂದು ನೆಲೆಯಿಂದ ನೋಡಲು ಪ್ರಯತ್ನಿಸುತ್ತದೆ. ಸಾಹಿತ್ಯ ರಚನೆಯ ಕಾರಣಗಳು, ಪರಿಣಾಮಗಳು ಇತ್ಯಾದಿ ಅಂಶಗಳನ್ನು ಕುರಿತು ವರ್ತನ ವಿಜ್ಞಾನ ಚಿಂತಿಸುತ್ತದೆ. ಈ ಎಲ್ಲ ಸಂಗತಿಗಳನ್ನು ಪರಿಶೀಲಿಸುವ ಗಿರಿ ಅವರು, ಇಂಥ ವಿಚಾರಗಳಲ್ಲಿ ಪೂರ್ವದ ತತ್ವಜ್ಞಾನ ಮತ್ತು ಪಶ್ಚಿಮದ ವಿಜ್ಞಾನಗಳು ತಳೆದಿರುವ ನಿಲುವನ್ನು, ತೀರ್ಮಾನಗಳನ್ನು ನಮ್ಮ ಮುಂದಿಡುತ್ತಾರೆ. ಬರೆಯುವುದರ ಹಿಂದಿನ ಪ್ರೇರಣೆಗಳನ್ನು ಕುರಿತಂತೆ ಕನ್ನಡದ ಪ್ರಮುಖ ಲೇಖಕರು ನೀಡಿರುವ ವಿವರಣೆಗಳು ಹೇಗೆ ವರ್ತನ ವಿಜ್ಞಾನದ ಸತ್ಯಗಳಿಗೆ ಹತ್ತಿರವಾಗಿವೆ ಎಂಬುದನ್ನು ಗಿರಿಯವರು ತೋರಿಸಿಕೊಡುತ್ತಾರೆ.

ಭಾಷೆ, ಅರ್ಥ, ಅರ್ಥದ ಅರ್ಥ, ವ್ಯಾಕರಣ, ಧ್ವನಿ, ರಸ ಇತ್ಯಾದಿ ಸಂಗತಿಗಳೂ ಕಾವ್ಯ ಮೀಮಾಂಸೆಯ ಚೌಕಟ್ಟಿನಲ್ಲಿಯೇ ಬರುತ್ತವೆ. ಚಾಮ್‌ಸ್ಕಿ ಮೊದಲಾದವರು ಭಾಷೆಯನ್ನು ಕುರಿತಂತೆ ನಡೆಸಿದ ಚಿಂತನೆಗಳನ್ನು ಪರೀಕ್ಷೆಗೆ ಒಡ್ಡುವ ಗಿರಿ, ’ವ್ಯಾಕರಣವೇ ಭಾಷೆಯ ಮುಖ್ಯ ಅಂಗ’ ಎಂಬ ಚಾಮ್‌ಸ್ಕಿ ವಾದವನ್ನು ತಳ್ಳಿಹಾಕುತ್ತಾರೆ. ಭಾಷೆ ಮತ್ತು ಅನುಭವ ಎಂಬ ವಿಂಗಡಣೆಯೇ ಅಸಂಗತ ಎನ್ನುತ್ತಾರೆ ಗಿರಿ. ವರ್ತನ ವಿಜ್ಞಾನಿ ಸ್ಕಿನ್ನರ್ ಪ್ರಯೋಗಗಳ ಮೂಲಕವೇ ಸಿದ್ಧಾಂತಗಳನ್ನು ರೂಪಿಸಿದವರು. ಅವು ಒಪ್ಪಬಹುದಾದ ಸಿದ್ಧಾಂತಗಳು. ಆದರೆ ಚಾಮ್‌ಸ್ಕಿ ಸಿದ್ಧಾಂತಗಳನ್ನು ಮಾತ್ರ ಹೇಳುತ್ತಿದ್ದಾರೆ, ಅವುಗಳಿಗೆ ಪ್ರಯೋಗಗಳ ಆಧಾರವಿಲ್ಲ-ಎಂಬುದು ಗಿರಿಯವರ ವಾದ. ಅವರ ನಿಲುವು ಸ್ಕಿನ್ನರ್‌ನ ಸಿದ್ಧಾಂತಗಳ ನಿಲುವು.
ಇದೇನೇ ಇರಲಿ, ಗಿರಿ ಅವರ ದಶಕಗಳ ಪ್ರಯತ್ನದ ಫಲವಾಗಿ ಮೂಡಿರುವ ಈ ಕೃತಿ ಅನೇಕ ಪ್ರಶ್ನೆಗಳಿಗೆ ಪ್ರೇರಣೆ ನೀಡಲಿದೆ; ಗಂಭೀರ ಚರ್ಚೆಗೆ ಅವಕಾಶ ಕಲ್ಪಿಸಲಿದೆ.

ಗಿರಿ ಅವರು ಕನ್ನಡ ನಾಡನ್ನು ತೊರೆದು ನಾಲ್ಕಾರು ದಶಕಗಳೇ ಕಳೆದಿವೆ. ಅವರದು ವಿಜ್ಞಾನ ಕ್ಷೇತ್ರ. ಪ್ರಾಯೋಗಿಕ ಮನೋವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ, ಅನಂತರ ಬೆಂಗಳೂರು ವಿಶ್ವವಿದ್ಯಾನಿಯದಿಂದ ವೈದ್ಯಕೀಯ ಮನೋವಿಜ್ಞಾನದಲ್ಲಿ ಡಿಪ್ಲೊಮಾ, ಮುಂದೆ ಇಲಿನಾಯ್ಸ್ ವಿಶ್ವವಿದ್ಯಾನಿಲಯದ ಡಾಕ್ಟರೇಟ್. ಫ್ರೆಸ್ನೊದ ಕ್ಯಾಲಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಗಿರಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರು ರಚಿಸಿರುವ ೨೫ಕ್ಕೂ ಹೆಚ್ಚು ಕೃತಿಗಳು ಪಠ್ಯಗಳಾಗಿ, ಪರಾಮರ್ಶನ ಗ್ರಂಥಗಳಾಗಿ ಮೆಚ್ಚುಗೆ ಗಳಿಸಿವೆ. ಅನೇಕ ಕ್ಲಿನಿಕ್‌ಗಳಲ್ಲಿ ಇವುಗಳ ಬಳಕೆಯೂ ಅಗುತ್ತಿದೆ. ಹಲವಾರು ಅಂತರ ರಾಷ್ಟ್ರೀಯ ಪ್ರಶಸ್ತಿಗಳು ಗಿರಿ ಅವರಿಗೆ ಲಭಿಸಿವೆ. ಗಿರಿ ಬಹು ಎತ್ತರದಲ್ಲಿ ಬೆಳಗುತ್ತಿರುವ ಕನ್ನಡಿಗ. ಕನ್ನಡದಲ್ಲಿ ೭೦ರ ದಶಕದಲ್ಲಿ ಗಿರಿ ಅವರು ರಚಿಸಿದ ’ಗತಿಸ್ಥಿತಿ’ ಕಾದಂಬರಿ ದಶಕದ ಕಾದಂಬರಿ ಎಂದು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತು. ಇತ್ತೀಚಿನ ಅವರ ಇನ್ನೊಂದು ಕಾದಂಬರಿ ಮತ್ತು ಕೆಲವು ಕತೆಗಳನ್ನು ಒಳಗೊಂಡ ’ಗತಿಸ್ಥಿತಿ ಮತ್ತೆಲ್ಲ’ ಓದುಗರ ಮೆಚ್ಚುಗೆ ಗಳಿಸಿದೆ. ಅವರ ಬರಲಿರುವ ಕಾವ್ಯ ಮೀಮಾಂಸೆಯನ್ನು ಕುರಿತ ಈ ಕೃತಿ ಅವರ ಮಹತ್ವದ ಕೃತಿ.
ಕನ್ನಡ ನಾಡಿನ ಹೊರಗಿದ್ದೂ ಕನ್ನಡವನ್ನು ಕಟ್ಟುವುದು ಮತ್ತು ಬೆಳೆಸುವುದು ಅಂದರೆ ಇದೇ ಅಲ್ಲವೇ?

-ಜಿ.ಪಿ.ಬಸವರಾಜು
೯೪೮೦೦ ೫೭೫೮೦

ಜನರ ನೋವಿಗೆ ಮಿಡಿದ ಪ್ರಾಣಮಿತ್ರ


ಸೌಜನ್ಯ  :ಪ್ರಜಾವಾಣಿಹೊಸ ಸಮಾಜ ಕಟ್ಟಲು ಈ ನಾಡಿನಲ್ಲಿ ಭದ್ರ ಬುನಾದಿ ಹಾಕಿದ ಮುಂದಾಳುಗಳಲ್ಲಿ ಡಿ. ದೇವರಾಜ ಅರಸರಿಗೆ ಮಹತ್ವದ ಸ್ಥಾನವಿದೆ. ನಮಗೆ ಇನ್ನೊಬ್ಬರ ಪ್ರೀತಿ ಬೇಕಾದರೆ ಮೊದಲು ನಾವು ಅವರನ್ನು ಪ್ರೀತಿಸಬೇಕು ಎನ್ನುತ್ತಿದ್ದ ಅರಸರು ಮುಖ್ಯಮಂತ್ರಿಗಳಾಗಿದ್ದಾಗ ಕರ್ನಾಟಕದಲ್ಲಿ ಅವರು ಅಡಿ ಇಡದ ನೆಲ ಉಳಿದಿರಲಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದ ಅವರನ್ನು ಹಿಂಬಾಲಿಸುತ್ತಿದ್ದ ಅಧಿಕಾರಿ ಸಿಬ್ಬಂದಿ ಪಡೆಯಲ್ಲಿ ಕ್ಯಾಮರಾ ಹಿಡಿದು ಬಹಳ ಸಮಯ ಇದ್ದವರು ಎಸ್‌.ಆರ್‌. ಪುಟ್ಟಸ್ವಾಮಿ.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದ ಪುಟ್ಟಸ್ವಾಮಿ ‘ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌’ನಲ್ಲಿ ಛಾಯಾಗ್ರಹಣ ಕಲಿತರು. ಆನಂತರ ವಾರ್ತಾ ಇಲಾಖೆಯಲ್ಲಿ ಛಾಯಾಗ್ರಾಹಕರಾಗಿದ್ದು, ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಅವರು ದೇವರಾಜ ಅರಸರ ವ್ಯಕ್ತಿತ್ವವನ್ನು ಬಹುಮಗ್ಗಲುಗಳಿಂದ ಹೇಳಬಲ್ಲವರು.


‘ಶಿಸ್ತಿನ ಸಿಪಾಯಿಯಂತಿದ್ದ ಅರಸರಿಗೆ ಸ್ವಾತಂತ್ರ್ಯವೂ ಅಷ್ಟೇ ಅಗತ್ಯವೆಂದು ನಂಬಿದ್ದರು. ನಾವು ಮೆಟ್ಟಿಲು ಇಳಿದು ಜನರ ಹತ್ತಿರ ಹೋಗದ ಹೊರತು ಜನ ನಮ್ಮ ಹತ್ತಿರ ಮೆಟ್ಟಿಲು ಹತ್ತಿ ಬರುವುದಿಲ್ಲ ಎನ್ನುವುದು ಅರಸರ ನಂಬಿಕೆಯಾಗಿತ್ತು. ಆ ಕಾರಣದಿಂದಲೇ ಅವರು ಯಾರನ್ನೂ ಅಲಕ್ಷಿಸುತ್ತಿರಲಿಲ್ಲ, ದೂರ ತಳ್ಳುತ್ತಿರಲಿಲ್ಲ. ಹೀಗಾಗಿ ನಮ್ಮ ಜೊತೆ ವ್ಯಕ್ತಿಯಾಗಿ ವರ್ತಿಸುತ್ತಿದ್ದರೇ ಹೊರತು ಅಧಿಕಾರಸ್ಥರಾಗಿ ಅಲ್ಲ’ ಎನ್ನುತ್ತಾರೆ ಪುಟ್ಟಸ್ವಾಮಿ.

‘‘ಯಾರೇ ಗಣ್ಯರು ಕರ್ನಾಟಕಕ್ಕೆ, ಬೆಂಗಳೂರಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಅವರೊಡನೆ ಆತ್ಮೀಯವಾಗಿ ಒಡನಾಡುವುದನ್ನು ಅರಸರು ತಪ್ಪಿಸುತ್ತಿರಲಿಲ್ಲ. ಹಾಗೆಯೇ ಬೀದಿಬದಿ ಕುಳಿತವರು ಹಾಗೂ  ಹೊಲಗದ್ದೆಗಳಲ್ಲಿ ದುಡಿಯುವವರೊಂದಿಗೆ ಶಿಷ್ಟಾಚಾರ ಬಿಟ್ಟು ಮಾತನಾಡುವುದನ್ನು, ಸಾಧ್ಯವಾದಷ್ಟು ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸುವುದನ್ನು ಅರಸರು ಎಂದೂ ಮರೆಯುತ್ತಿರಲಿಲ್ಲ. ಅವರದು ಸಿಂಹ ಗಂಭೀರ ಪ್ರವೃತ್ತಿ. ಧನಾಡ್ಯ–ಬಲಾಡ್ಯರಿಗಿಂತ ದೀನದಲಿತ ಬಡಜನತೆಯ ಕೂಗಿಗೆ ಓಗೊಡುವುದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿಯಿತ್ತು.

ಜನ ಸಾಮಾನ್ಯರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದ ಅರಸರು ವಾಸ್ತವ ಸಂಗತಿಗಳನ್ನು ಅರಿಯಲು ಅಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದನ್ನು ಎಂದೂ ತಡ ಮಾಡುತ್ತಿರಲಿಲ್ಲ. ಭೂ ಸುಧಾರಣೆ ಕ್ರಮಗಳು, ಗೇಣಿದಾರರಿಗೆ ಹಕ್ಕು, ಜೀತ ವಿಮುಕ್ತಿ, ಮಲ ಹೊರುವ ಪದ್ಧತಿ ರದ್ಧತಿ ಮೊದಲಾದ ಮಹತ್ವದ ಕಾರ್ಯಗಳು ಅರಸರ ಕಾಲದಲ್ಲಿ ಜಾರಿಗೊಂಡವು. ತಾವು ಮಾಡಿರುವ, ಮಾಡುತ್ತಿರುವ ಕೆಲಸಗಳು ಜನರನ್ನು ಮುಟ್ಟುತ್ತಿವೆಯೇ ಎಂಬುದನ್ನು ತಿಳಿದುಕೊಳ್ಳಲು ಅರಸರು ತಮ್ಮ ಪ್ರವಾಸ ಕಾಲದಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದರು’’ ಎನ್ನುವ ಪುಟ್ಟಸ್ವಾಮಿ, ಪಟ್ಟಿಯಲ್ಲಿ ಇಲ್ಲದ ವಿಷಯಗಳನ್ನು ಪತ್ತೆಹಚ್ಚಿ ಅವುಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ತಿಳಿಸಲು ಅಧಿಕಾರಿಗಳು ಪಟ್ಟ ಪಡಿಪಾಟಲುಗಳನ್ನು ನೆನಪಿಸಿಕೊಂಡು ನಗುತ್ತಾರೆ.

‘‘ನಾಡಿನ ಬಡವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಅವಿರತ ದುಡಿಮೆಗಾರರಾಗಿದ್ದರು. ರಾತ್ರಿ ಹನ್ನೊಂದರವರೆಗೂ ಸಭೆ, ವಿಚಾರ ವಿನಿಮಯಗಳಲ್ಲಿ ತೊಡಗಿದ್ದು ನಮ್ಮನ್ನು ಬಿಳ್ಕೊಡುತ್ತಿದ್ದರು. ಮುಂಜಾನೆ ನಾವು ಬರುವ ಹೊತ್ತಿಗೆ ವಾಕಿಂಗ್‌, ವ್ಯಾಯಾಮ ಮುಗಿಸಿ ಶುಭ್ರ ಶ್ವೇತ ವಸ್ತ್ರಾಧಾರಿಗಳಾಗಿ ನಮ್ಮ ಆಗಮನಕ್ಕೆ ಕಾಯುತ್ತಿದ್ದಿದ್ದು ಸಾಮಾನ್ಯವಾಗಿತ್ತು’’ ಎಂದು ನೆನಪಿಸಿಕೊಳ್ಳುತ್ತಾರೆ ಪುಟ್ಟಸ್ವಾಮಿ.
ಅರಸು ಅಧಿಕಾರಾವಧಿಯಲ್ಲಿ ಛಾಯಾಗ್ರಾಹಕರಾಗಿ, ಮೂವಿ ಕ್ಯಾಮರಾಮನ್‌ ಆಗಿ ಸೇವೆ ಸಲ್ಲಿಸಿದ ಎಸ್‌.ಆರ್‌. ಪುಟ್ಟಸ್ವಾಮಿ ಅವರು ಕ್ಲಿಕ್ಕಿಸಿರುವ ಚಿತ್ರಗಳು ಲೆಕ್ಕವಿಲ್ಲ. ಅವರು ತೆಗೆದಿರುವ ಕೆಲವು ಅಪರೂಪದ ಚಿತ್ರಗಳು ಡಿ.ವಿ.ಡಿ. ರೂಪದಲ್ಲಿಯೂ ಹೊರಬಂದಿದೆ.

ಎಂಥ ಮಾಂತ್ರಿಕ, ಈ ಅರಸು!

ಪ್ರೊ. ಹಿ. ಶಿ. ರಾಮಚಂದ್ರೇಗೌಡ


ಆಗ ನನಗೆ ಕಾಂಗ್ರೆಸ್ ಕಂಡರೆ ಆಗುತ್ತಿರಲಿಲ್ಲ. ಲೋಹಿಯಾವಾದಿಯಾಗಿದ್ದು ಒಂದು ಕಾರಣವಾದರೆ, ಕಾಂಗ್ರೆಸ್ ಆಸೆ ತೋರಿಸಿ ದೋಸೆ ತಿನ್ನಿಸುತ್ತದೆ ಎಂಬ ನಂಬಿಕೆ ಇನ್ನೊಂದು ಕಾರಣವಾಗಿತ್ತು. ಇರುವ ಕೆಲಸ ಬಿಟ್ಟು ತುರ್ತು ಪರಿಸ್ಥಿತಿ ವಿರುದ್ಧ ಭೂಗತ ಹೋರಾಟ ಮಾಡಬೇಕು ಎಂಬುದು ನನ್ನ ಇಚ್ಛೆಯಾಗಿತ್ತು. `ಹುಚ್ಚ ಭೂಗತರಾದವರು ಈ ದೇಶದಲ್ಲಿ ಭೂಗತರಾಗಿಯೇ ಹೋಗುತ್ತಾರೆ, ಜನರ ಮಧ್ಯೆ ಕೆಲಸ ಮಾಡು, ಎಲ್ಲವೂ ಜನರಿಂದಲೇ ತೀರ್ಮಾನ ವಾಗಬೇಕು. ಅದೇ ಪ್ರಜಾಪ್ರಭುತ್ವಕಿ ಎಂದರು ಹಿರಿಯರೊಬ್ಬರು. ಹೌದಲ್ಲವೆ, ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವ ವಿರೋಧಿಯಾದರೆ, ಭೂಗತ ಚಟುವಟಿಕೆಯೂ ಪ್ರಜಾಪ್ರಭುತ್ವ ವಿರೋಧಿಯೇ ಅಲ್ಲವೆ!

ಕರ್ನಾಟಕಕ್ಕೆ ತುರ್ತು ಪರಿಸ್ಥಿತಿಯೇ ಬರಲಿಲ್ಲವಲ್ಲ!! ಅದು ಎಲ್ಲೊ ಬಂದು ಎತ್ತಲೋ ಹೋಗಿಬಿಟ್ಟಿತು ಅನ್ನುವಂತೆ ಕರ್ನಾಟಕ ಮಾತ್ರ ಸಾಧುವಾಗಿಯೆ ಇತ್ತು. ಇದೇನಿದು ಆಶ್ಚರ್ಯ! ಕರ್ನಾಟಕದಲ್ಲೊಬ್ಬ ಮಾಂತ್ರಿಕನಿದ್ದ, ಮಹಾ ಮಾಂತ್ರಿಕ. ಉತ್ತರದಿಂದ ಬಂದ ರಕ್ಕಸಿಯನ್ನು `ಛೂ' ಮಂತ್ರ ಮಾಡಿ ನೊಂದವರ ಕಣ್ಣೊರೆಸುವ ತಾಯಿಯನ್ನಾಗಿ ಮಾಡಿದನಲ್ಲ!!!

ಇದನ್ನೇ ಅಲ್ಲವೆ ದೇವತ್ವ ಎನ್ನುವುದು. ನಮ್ಮಲ್ಲಿ ಮಾರಿ ಮಸಣಿಯರೂ ಇದ್ದಾರೆ, ಸಪ್ತಮಾತೃಕೆಯರೂ ಇದ್ದಾರಲ್ಲ. ಜಗತ್ತಿನ ಆಟದಲ್ಲಿ ಕೆಡುಕು-ಒಳಿತು ಎರಡೂ ಇವೆ. ಆಯ್ಕೆ ಜನರದು. ಜನರು ಮೈಮರೆತು ಕುಳಿತಿದ್ದಾರೆ. ಒಳಿತನ್ನು ಜನನಾಯಕ ಆಯ್ಕೆ ಮಾಡಿಕೊಳ್ಳಬೇಕು. ಮೊದಲಾಗಿ ಆ ಜನನಾಯಕ ಇರಬೇಕು. ಕರ್ನಾಟಕದ ಅದೃಷ್ಟ. ಆ ನಾಯಕ ಆ ಕಾಲದ ಕರ್ನಾಟಕದ ಮುಖ್ಯಮಂತ್ರಿ ಡಿ.ದೇವರಾಜ ಅರಸು. ಅವರಲ್ಲಿ ಸಂಭವಿಸಿದ ನಾಲ್ವಡಿ ಕೃಷ್ಣದೇವರಾಜ ಒಡೆಯರಲ್ಲಿ ಇದ್ದನಂತೆ. ಮತ್ತೆ ಅದೇ ಅರಸು ಮನೆತನದಲ್ಲಿ ಡಿ.ದೇವರಾಜ ಅರಸು ಸಂಭವಿಸಿಬಿಟ್ಟರಲ್ಲ! ಇಪ್ಪತ್ತು ಅಭಿವೃದ್ಧಿ ಅಂಶಗಳ ಇಂದಿರಾಜಿ ಬೇರೆ, ತುರ್ತು ಪರಿಸ್ಥಿತಿ ಇಂದಿರಾಜಿ ಬೇರೆ. ಆ ಇಪ್ಪತ್ತು ಅಂಶಗಳ ಸಾತ್ವಿಕ ಸ್ವರೂಪವೇ ಡಿ.ದೇವರಾಜ ಅರಸು ಇರಬಹುದೆ?


ನಾಲ್ವಡಿಯವರು ನನ್ನ ಪ್ರಜೆಗಳು ಹೇಗಿದ್ದಾರೆಂದು ಪರೀಕ್ಷಿಸಲು ಮಾರುವೇಷದಲ್ಲಿ ಕುದುರೆಯ ಮೇಲೆ ಹೊರಟರಂತೆ, ರಾಗಿ ಮುದ್ದೆ ಹುಳಿ ಸಾರು ತಿನ್ನುತ್ತಿದ್ದ ಬರಡು ನಾಡು ಮಂಡ್ಯಕ್ಕೆ. ಮುಗ್ಧ ಒಕ್ಕಲಿಗರನ್ನು ಅಲ್ಲಿ ಬಿಸಾಡಿದ್ದರಂತೆ. ಬಾಕಿ ಹೊಲ ಕೆರ್ಕಂಡು, ರಾಗಿ-ಹುರುಳಿ ಬೆಳ್ಕೊಂಡು; ಹಿಟ್ಟುಂಡು ಗಟ್ಟಿಯಾಗಿ ಬಿಸಿಲಿನಲ್ಲಿ ಬೇಯುತ್ತಾ ಇದ್ದವಂತೆ. ಅಲ್ಲಿ, ಹೊಲದಲ್ಲಿ ರೈತನೊಬ್ಬ ಬಡಕಲು ದನ ಹೂಡಿಕೊಂಡು ಬೆಳಗಿನ ಬೇಸಾಯ ಮಾಡುತ್ತಿದ್ದನಂತೆ. ಹೆಂಡತಿ ಹಿಟ್ಟು ಸಾರು ತಂದಿದ್ದಳಂತೆ, ಗಂಡನಿಗೂ ತನಗೂ ಕೂಡಿ ಉಣ್ಣೋಣ ಅಂತ. 


ಅಲ್ಲಿಗೆ ನಾಲ್ವಡಿಯವರು ಹಾಜರು. ’ನನಗೂ ಹೊಟ್ಟೆ ಹಸಿದಿದೆ. ಏನಾದರೂ ಕೊಡಬಹುದೆ?' ಎಂದು ಕೇಳಿದರಂತೆ. `ಅಯ್ಯೋ ಸ್ವಾಮಿ, ಇಬ್ಬರಿಗೆ ಅಂತ ಎರಡು ಮುದ್ದೆ ತಂದಿದ್ದೀನಿ. ಹಂಚಿಕೊಂಡು ಉಣ್ಣೋಣ ಬನ್ನಿ ಸ್ವಾಮಿ. ಹಸಿವು, ಬಡತನ ಯಾರಿಗಿಲ್ಲ' ಎಂದು ರೈತನ ಹೆಂಡತಿ ಅಕ್ಕರೆಯಿಂದ ಕರೆದಳು. ಅಲ್ಲಿ ತಾಯಿ ಕರುಳನ್ನು ದರ್ಶಿಸಿದರು ನಾಲ್ವಡಿಯವರು. ಅರಮನೆಗೆ ಬಂದ `ಆ ಅರಸು' ತನ್ನ ಪತ್ನಿಗೆ ನಡೆದ ಘಟನೆಯನ್ನು ವಿವರಿಸಿದರು. ಆಕೆ ಕನ್ನಂಬಾಡಿ ಅಣೆಕಟ್ಟೆ ಕಟ್ಟಲು ತನ್ನ ಮೈಮೇಲಿನ ಒಡವೆಗಳನ್ನೇ ಬಾಂಬೆಯ ಚಿನಿವಾರ ಪೇಟೆಯಲ್ಲಿ ಹರಾಜಿಗಿಟ್ಟು ಹಣ ಕೊಟ್ಟರು. ತಾಯಿಯರು ತಾಯಿಯರೆ. ಎಂಥ ಸೃಜನಶೀಲತೆ!


ಡಿ.ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ಕರ್ನಾಟಕದ ಅರಸರೇ ಆಗಿದ್ದರು: ಕರ್ನಾಟಕದ ರಾಜಕುಮಾರ! ಕರ್ನಾಟಕದ ಅರಸು. ಈ ಅರಸು ಬೆಳಗಿನ ಉಪಾಹಾರವೊಂದಕ್ಕೆ ಹೋದದ್ದು ಎಲ್ಲಿಗೆ? ಉತ್ತರ ಕರ್ನಾಟಕದ ದಾಸಯ್ಯನ ಮನೆ ಉಪ್ಪಿಟ್ಟಿಗೆ. 


ಅರಸರಿಂದಲೇ ಎಲ್ಲವೂ ಸಾಧ್ಯ. ಮತ್ತೆ ಮತ್ತೆ ಅರಸರೆ ನಮ್ಮ ಉದ್ಧಾರಕ್ಕಾಗಿ ಹುಟ್ಟಿ ಬರಬೇಕು ಎಂಬ ಭಗವದ್ಗೀತೆ ತತ್ವವನ್ನು ಪುನರ್ ಪ್ರತಿಪಾದಿಸುತ್ತಿಲ್ಲ. ಅರಸರಲ್ಲಿ ಆಳರಸರೂ ಬೀಳರಸರೂ ಬಂದು ಹೋಗಿದ್ದಾರೆ. ಸಾಧನೆಯಲ್ಲಿ, ಸಾರ್ಥಕತೆಯಲ್ಲಿ ಅರಸರಾಗಿ ಬಾಳಿದವರು ಕೆಲವೇ ಮಂದಿ.


ಸೌಜನ್ಯ : ಆಂದೋಲನ ಮೈಸೂರು ೨೦.೮.೨೦೧೫

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...