Sunday, August 23, 2015

ಸ್ವಾತಂತ್ರೋತ್ಸವ ಮತ್ತು ಮಾರುಕಟ್ಟೆಯ ವಿಜೃಂಭಣೆ

ನಾ ದಿವಾಕರ


ಸ್ವಾತಂತ್ರೋತ್ಸವ ಮತ್ತು ಮಾರುಕಟ್ಟೆಯ ವಿಜೃಂಭಣೆ


ದೇಶ ಅಥವಾ ರಾಷ್ಟ್ರ ಎನ್ನುವ ಪರಿಕಲ್ಪನೆಯನ್ನು ಎರಡು ಆಯಾಮಗಳಲ್ಲಿ ಕಾಣಬಹುದು. ಭೌಗೋಳಿಕ ರಾಷ್ಟ್ರ ಒಂದು ಸೀಮಿತ ದೃಷ್ಟಿಕೋನದಲ್ಲಿ ಜನಸಾಮಾನ್ಯರನ್ನು ಆಕರ್ಷಿಸುತ್ತದೆ. ಈ ಭೌಗೋಳಿಕ ಪರಿಕಲ್ಪನೆಯನ್ನೇ ರಾಷ್ಟ್ರೀಯ ಸಂವೇದನೆಯ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ದೇಶವನ್ನಾಳುವ ವರ್ಗಗಳು ಮತ್ತು ಆಳುವ ವರ್ಗಗಳ ಪಂಜರದಲ್ಲಿ ಬಂಧಿತವಾಗುವ ಪ್ರಭುತ್ವ ಈ ಭೌಗೋಳಿಕ ಸೀಮೆಯನ್ನು ರಕ್ಷಿಸುವುದನ್ನೇ ತಮ್ಮ ಪರಮಧ್ಯೇಯವೆಂದು ಪರಿಗಣಿಸುತ್ತವೆ. ಈ ಧ್ಯೇಯವನ್ನು ಆದರ್ಶಗಳ ನೆಲೆಯಲ್ಲಿ ವ್ಯಾಖ್ಯಾನಿಸಿ ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿಸಲಾಗುತ್ತದೆ. ಈ ಭಾವನೆಗಳ ಪ್ರತೀಕವಾಗಿ ದೇಶಪ್ರೇಮ, ದೇಶಭಕ್ತಿ, ರಾಷ್ಟ್ರೀಯತೆ ಮುಂತಾದ ಸೂಕ್ಷ್ಮ ಸಂವೇದನೆಗಳು ಸೃಷ್ಟಿಯಾಗುತ್ತವೆ. ಈ ಸಂವೇದನೆಗಳು ಕೆಲವು ಹಿತಾಸಕ್ತಿಗಳಿಗೆ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಚಿಮ್ಮುಹಲಗೆಯಾಗಿ ಪರಿಣಮಿಸುತ್ತದೆ. ತಮ್ಮ ವ್ಯಕ್ತಿಗತ ಮುನ್ನಡೆಗೆ ಸಹಕಾರಿಯಾಗುವ ಈ ವಿದ್ಯಮಾನಗಳನ್ನು ಆಳುವ ವರ್ಗಗಳು ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯ ರಕ್ಷಣೆಯ ಅಸ್ತ್ರಗಳಾಗಿ ಬಳಸುತ್ತವೆ. ಸ್ವಾತಂತ್ರೋತ್ಸವ ದಿನದ ಸಂದರ್ಭದಲ್ಲಿ ಈ ದನಿಗಳನ್ನು ಸ್ಪಷ್ಟವಾಗಿ ಆಲಿಸಬಹುದು. ಆಂತರಿಕ ವೈರುಧ್ಯಗಳನ್ನು ಭೌಗೋಳಿಕ ರಾಷ್ಟ್ರದ ಚೌಕಟ್ಟಿನಲ್ಲಿ ಮರೆಮಾಚುತ್ತಲೇ ರಾಷ್ಟ್ರಭಕ್ತಿಯ ಉನ್ಮಾದವನ್ನು ಸೃಷ್ಟಿಸುವುದನ್ನು ಇಲ್ಲಿ ಕಾಣಬಹುದು.

ರಾಷ್ಟ್ರ ಪರಿಕಲ್ಪನೆಯ ಮತ್ತೊಂದು ಆಯಾಮವೆಂದರೆ ಜನಸಾಮಾನ್ಯರ ಭಾವನೆ, ಸಂವೇದನೆ ಮತ್ತು ಮಾನವ ಸಹ ಸ್ಪಂದನೆಗಳಿಗೆ ಸಂಬಂಧಿಸಿದ್ದು.ಈ ನಾಗರಿಕ ಸಂವೇದನೆಗೆ ಯಾವುದೇ ಎಲ್ಲೆ ಇರುವುದಿಲ್ಲ. ಗಡಿ ಇರುವುದಿಲ್ಲ. ವಿಶ್ವಮಾನವ ಸಂದೇಶವನ್ನು ಹೊತ್ತ ಸಂವೇದನಾಶೀಲ ಮನಸ್ಸುಗಳು ಮಾನವ ಅಭ್ಯುದಯದ ಉನ್ನತ ಧ್ಯೇಯವನ್ನು ಹೊಂದಿರುತ್ತವೆ. ಈ ಪರಿಕಲ್ಪನೆಯಲ್ಲಿ ದೇಶ ಎನ್ನುವುದು ಸೀಮಿತ ಭೌಗೋಳಿಕ ಚೌಕಟ್ಟಿನಿಂದಾಚೆಗೂ ಸಾಗುತ್ತದೆ. ಈ ರಾಷ್ಟ್ರದ ಪರಿಕಲ್ಪನೆಯಲ್ಲಿ ಗಡಿ ಕಾಯುವ ಸೈನಿಕರಿಗಿಂತಲೂ ಭೂತಾಯಿಯ ಮಡಿಲಲ್ಲಿನ ಸಂಪನ್ಮೂಲಗಳನ್ನೇ ನಂಬಿ ಬದುಕುವ ಶ್ರಮಿಕ ವರ್ಗಗಳು ದೇಶವನ್ನು ಕಾಯುವ ಮಹಾನ್ ಯೋಧರಂತೆ ಕಾಣುತ್ತವೆ. ಏಕೆಂದರೆ ಎಲ್ಲೆಗಳ ಗೊಡವೆಯೇ ಇಲ್ಲದ ಈ ರಾಷ್ಟ್ರಕ್ಕೆ ಗಡಿ ಕಾಯುವ ಯೋಧರ ಅಗತ್ಯತೆ ಇರುವುದಿಲ್ಲ. ಮಾನವ ಜೀವನವನ್ನು ಭ್ರಾತೃತ್ವ, ಸೌಹಾರ್ದತೆ, ಸಹಿಷ್ಣುತೆ ಮತ್ತು ಪ್ರಾಮಾಣಿಕ ನಾಗರಿಕತೆಯ ಚೌಕಟ್ಟಿನಲ್ಲಿ ಬಂಧಿಸುವ ಈ ರಾಷ್ಟ್ರದ ಪರಿಕಲ್ಪನೆಯಲ್ಲಿ ಯಾವುದೇ ಸ್ವಹಿತಾಸಕ್ತಿ ಇರುವುದಿಲ್ಲ. ಸ್ವಾರ್ಥತೆ ಇರುವುದಿಲ್ಲ. ಕೇವಲ ಮಾನವ ಸಂಬಂಧಗಳ ಸೂಕ್ಷ್ಮಗಳು ಅಡಗಿರುತ್ತವೆ. ಇಲ್ಲಿ ಸ್ವಾತಂತ್ರೋತ್ಸವದ ಸಂದರ್ಭ ವಿಜೃಂಭಣೆಯಾಗುವುದಿಲ್ಲ. ಆತ್ಮಾವಲೋಕನದ ಸಂದರ್ಭವಾಗುತ್ತದೆ.

ಭಾರತದ ಸಂದರ್ಭದಲ್ಲಿ ಈ ಎರಡೂ ಆಯಾಮಗಳನ್ನು ಏಕಕಾಲದಲ್ಲಿ ಕಾಣಬಹುದು. ಹಾಗಾಗಿಯೇ ದೇಶದ ಸಾರ್ವಭೌಮ ಪ್ರಜೆಗಳ ದೇಹಸ್ವಾಸ್ಥಕ್ಕಾಗಿ ಹಗಲಿರುಳೂ ಶ್ರಮಿಸುವ ರೈತರು, ಕಾರ್ಮಿಕರು ಸ್ವಾತಂತ್ರೋತ್ಸವದಂದು ಪ್ರತಿಭಟನಾ ನಿರತರಾಗಿದ್ದರೆ, ದೇಶದ ಗಡಿಗಳನ್ನು ಕಾಯುವ ಯೋಧರು ಪ್ರಭುತ್ವದ ಪ್ರತಿನಿಧಿಗಳ ಆಣತಿಯಂತೆ ಆಚರಣೆಯಲ್ಲಿ ತೊಡಗಿರುತ್ತಾರೆ. ಸೆಲ್ಯೂಟ್ ಸೆಲ್ಫಿಯ ಮೂಲಕ ಗಡಿಯ ರಕ್ಷಕರಿಗೆ ಗೌರವ ಸಲ್ಲಿಸಲು ಲಕ್ಷಾಂತರ ಯುವ ಜನರು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಯೂಟ್ ಮಾಡುತ್ತಿರುವ ತಮ್ಮದೇ ಭಾವಚಿತ್ರವನ್ನು ಟ್ವಿಟರ್‌ನಲ್ಲಿ ರಾರಾಜಿಸುತ್ತಾರೆ. ಈ ಆಚರಣೆಯನ್ನು ಪ್ರಚೋದಿಸುವ ಮೊಬೈಲ್ ಕಂಪೆನಿಗಳು ಇದರಿಂದ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದು ಅನ್ಯ ವಿಚಾರ. ಆದರೆ ದಿನ ನಿತ್ಯ ಆತ್ಮಹತ್ಯೆಗೆ ಶರಣಾಗುತ್ತಿರುವ ದೇಶದ ಅನ್ನದಾತರಿಗೆ ಸೆಲ್ಯೂಟ್ ಸಮರ್ಪಿಸಲು ಯಾವ ಮೊಬೈಲ್ ಕಂಪೆನಿಯೂ ಮುಂದಾಗುವುದಿಲ್ಲ. ಏಕೆ ಇವರು ಯೋಧರಲ್ಲವೇ? ಶಸ್ತ್ರಾಸ್ತ್ರ ಹಿಡಿದವರೇ ಯೋಧರೇ? ನಿಜ ಸೇನಾ ಯೋಧರು ಭಾರತವನ್ನು ಅನ್ಯ ರಾಷ್ಟ್ರಗಳ ಆಕ್ರಮಣದಿಂದ ರಕ್ಷಿಸುವ ಮೂಲಕ ಭೌಗೋಳಿಕ ರಾಷ್ಟ್ರದ ಅಸ್ತಿತ್ವ, ಗೌರವ , ಘನತೆಯನ್ನು ಕಾಪಾಡುತ್ತಾರೆ.
ಅದೇ ವೇಳೆ ದೇಶದ ಜನತೆ ಬದುಕಲು ಅವಶ್ಯವಾದ ಆಹಾರ ಒದಗಿಸುವ ರೈತಾಪಿ ಸಮುದಾಯವೂ ರಾಷ್ಟ್ರದ ರಕ್ಷಣೆ ಮಾಡುತ್ತಿದ್ದಾರಲ್ಲವೇ ? ಸ್ವಚ್ಛ ಭಾರತದ ಕನಸು ಕಾಣುತ್ತಿರುವ ಸ್ಮಾರ್ಟ್ ಸಿಟಿಗಳ ಹಪಾಹಪಿಯಲ್ಲಿರುವ ಭಾರತದ ಜನತೆಯ ದೇಹಸ್ವಾಸ್ಥವನ್ನು ಪೌರ ಕಾರ್ಮಿಕರು ಕಾಪಾಡುತ್ತಿದ್ದಾರಲ್ಲವೇ? ಭಾರತ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ನಳನಳಿಸಲು ಅತ್ಯಾಧುನಿಕ ನಗರಗಳ ನಿರ್ಮಾಣದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಶ್ರಮಿಸುತ್ತಿದ್ದಾರಲ್ಲವೇ? ನಾಳಿನ ಚಿಂತೆಯಲ್ಲೇ ಜೀವನವಿಡೀ ಬಸವಳಿಯುವ ಈ ಶ್ರಮಜೀವಿಗಳ ಬವಣೆಯನ್ನು ಕೇಳುವವರೇ ಇಲ್ಲದಂತಾಗಿರುವ ಸಂದರ್ಭದಲ್ಲಿ ಸ್ವಾತಂತ್ರೋತ್ಸವದ ಆಚರಣೆಗಳು ಅರ್ಥ ಕಳೆದುಕೊಳ್ಳುವುದಿಲ್ಲವೇ? ವಿಪರ್ಯಾಸವೆಂದರೆ ಸಾಂಕೇತಿಕ ಆಚರಣೆಗಳೇ ಪ್ರಧಾನವಾದಾಗ ಯಾವುದೇ ಸಂದರ್ಭ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಇದು ಮಾರುಕಟ್ಟೆ ಪ್ರೇರಿತ ವಿಜೃಂಭಣೆಯಲ್ಲಿ ಸ್ಪಷ್ಟವಾಗಿ ಕಾಣುವ ನವ ಭಾರತದ ಚಿತ್ರಣ. ಭಾರತದ ತ್ರಿವರ್ಣ ಧ್ವಜದ ಆಂತರ್ಯದಲ್ಲಿ ಅಡಗಿರುವ ಮೌಲ್ಯಗಳು ದಿನೇ ದಿನೇ ಕ್ಷೀಣಿಸುತ್ತಿದೆ. ಶಾಂತಿ, ಸೌಹಾರ್ದತೆ, ಭ್ರಾತೃತ್ವ, ಅಹಿಂಸೆ ಮುಂತಾದ ಉನ್ನತ ಆದರ್ಶಗಳು ಕೇವಲ ಭಾಷಣಗಳಿಗೆ ಸೀಮಿತವಾಗುತ್ತಿವೆ.

ಶಾಂತಿ ಸೌಹಾರ್ದತೆಯ ಸಂಕೇತವಾದ ತ್ರಿವರ್ಣ ಧ್ವಜದ ಅಶೋಕ ಚಕ್ರ ಶ್ರೀಕೃಷ್ಣನ ಸುದರ್ಶನ ಚಕ್ರದಂತೆ ಭಾಸವಾಗುತ್ತದೆ. ಏಕೆಂದರೆ ಈ ಧ್ವಜಕ್ಕೆ ವಂದಿಸುವ ಪ್ರಭುತ್ವದ ಪ್ರತಿನಿಧಿಗಳು ಪ್ರತಿರೋಧದ ದನಿಗಳನ್ನು ಅಡಗಿಸಲು, ಪ್ರಜಾತಂತ್ರದ ದನಿಗಳನ್ನು ಮಟ್ಟಹಾಕಲು ಇದೇ ಸುದರ್ಶನ ಚಕ್ರವನ್ನು ಬಳಸಲು ಸಜ್ಜಾಗುತ್ತಿವೆ. ಆದರೂ ಮಾರುಕಟ್ಟೆಯಲ್ಲಿ ತ್ರಿವರ್ಣದ ವೈಭವೀಕರಣ ಅವ್ಯಾಹತವಾಗಿ ನಡೆಯುತ್ತದೆ. ಅಡಿಯಿಂದ ಮುಡಿಯವರೆಗೆ ಭಾರತದ ಪ್ರಜೆಗಳು ತಮ್ಮ ದೇಹದ ಮೇಲೆ ತ್ರಿವರ್ಣವನ್ನು ಹಲವಾರು ರೀತಿಗಳಲ್ಲಿ ಬಳಸುವಂತಹ ಪರಿಕರಗಳನ್ನು ಮಾರುಕಟ್ಟೆ ಒದಗಿಸುತ್ತಿದೆ. ನಾವು- ಅವರು - ಅನ್ಯರು- ಅಸ್ಪಶ್ಯರು-ಬಹಿಷ್ಕೃತರು ಎಂಬ ವೈರುಧ್ಯಗಳನ್ನು ಹೃದಯದಲ್ಲಿ ಹೊತ್ತುಕೊಂಡು ತಿರುಗುವವರೇ ಮೇಲ್ನೋಟಕ್ಕೆ ಸಾಂಕೇತಿಕವಾಗಿ ತ್ರಿವರ್ಣದ ಪರಿಕರಗಳನ್ನು ಧರಿಸಿ ತಮ್ಮ ದೇಶಪ್ರೇಮ ಮೆರೆಯುತ್ತಾರೆ. ಮಾರುಕಟ್ಟೆ ಇದನ್ನು ಪ್ರಚೋದಿಸುತ್ತದೆ. ದೇಶಭಕ್ತಿಯಿಂದಲ್ಲ, ಲಾಭದ ದೃಷ್ಟಿಯಿಂದ.

ಸ್ವಾತಂತ್ರೋತ್ಸವದ ಭಾಷಣಗಳಲ್ಲಿ ದೇಶ ಕಟ್ಟುವವರು ನೇಪಥ್ಯಕ್ಕೆ ಸರಿಯುತ್ತಾರೆ, ಕಟ್ಟಿದ ಕೋಟೆಯ ರಕ್ಷಕರು ರಾರಾಜಿಸುತ್ತಾರೆ. ಇದು ಇತಿಹಾಸದ ವಿಡಂಬನೆ ಎನ್ನಲು ಅಡ್ಡಿಯಿಲ್ಲ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...