Monday, August 03, 2015

ಮೋದಿಯವರ ಅಭಿವೃದ್ಧಿಯ ಹಿಂದಿರುವ ಹುನ್ನಾರ

ರಘೋತ್ತಮ ಹೊ.ಬಮೋದಿಯವರ ಅಭಿವೃದ್ಧಿಯ ಹಿಂದಿರುವ ಹುನ್ನಾರ


ಟಿವಿಯಲ್ಲಿ ಈಚೆಗೆ ಜಾಹೀರಾತೊಂದು ಬರುತ್ತಿದೆ. ಅಡುಗೆ ಅನಿಲ ಸಬ್ಸಿಡಿ ಬಿಡುವಂತೆ ಕೋರುವ ಜಾಹೀರಾತು ಅದು. ‘ಗಿವ್ ಇಟ್ ಅಪ್’(ಬಿಟ್ಟು ಬಿಡಿ) ಶೀರ್ಷಿಕೆಯಲ್ಲಿ ಬರುವ ಆ ಜಾಹೀರಾತಿನಲ್ಲಿ ಯುವಕನೋರ್ವ ‘‘ಹಳ್ಳಿಯ ಮಹಿಳೆಯರ ಕಣ್ಣ ನೀರು ಒರೆಸಲು, ಹೊಗೆಯಿಂದ ಅವರ ಮುಖ ಕಪ್ಪಗಾಗುವುದನ್ನು ತಪ್ಪಿಸಲು ತಾನು ಎಲ್‌ಪಿಜಿ ಸಬ್ಸಿಡಿ ಬಿಡುತ್ತಿದ್ದೇನೆ’’ ಎನ್ನುತ್ತಾನೆ. ಅಂದರೆ ಆತ ಬಿಟ್ಟುಬಿಡುವ ಭಿಕ್ಷೆಯಿಂದ ಬಡವರು ಗ್ಯಾಸ್ ಖರೀದಿಸಬೇಕಿದೆ ಎಂದು ಇದರರ್ಥವಲ್ಲವೇ? ಆಶ್ಚರ್ಯವೆಂದರೆ ಅದರ ಹಿನ್ನೆಲೆಯಲ್ಲಿಯೇ ಪ್ರಧಾನಿ ಮೋದಿಯವರ ಅದೇ ಮಾದರಿಯ ‘ಮನ್ ಕೀ ಬಾತ್’ ಭಾಷಣ! ಈ ಜಾಹೀರಾತು ಎಲ್‌ಪಿಜಿ ಸಬ್ಸಿಡಿ ಹಿಂದೆಗೆಸುವ ನಿಟ್ಟಿನಲ್ಲಿ ಪರಿಣಾಮಕಾರಿ. ಆದರೆ ‘ಹಳ್ಳಿ ಹೆಂಗಸರ ಕಣ್ಣೊರೆಸುವ’ ಅದರ ಸಂದೇಶ? ಶ್ರೀಮಂತರ ದಾಕ್ಷಿಣ್ಯದಲ್ಲಿ ಬಡವರು ಬದುಕಬೇಕಿದೆ ಎಂದಾಗುತ್ತದೆ. ದುರಂತವೆಂದರೆ ಹೀಗೆ ಭಿಕ್ಷೆ ನೀಡುವುದೇ ಕೇಂದ್ರದ ದೃಷ್ಟಿಯಲ್ಲಿ ಅಭಿವೃದ್ಧಿ! ವಾಸ್ತವವೆಂದರೆ 200-250 ರೂ.ಗಳ ಎಲ್‌ಪಿಜಿ ಸಬ್ಸಿಡಿ ಬಿಟ್ಟುಕೊಟ್ಟರೆ ಸರಕಾರಕ್ಕೆ ಲಕ್ಷ ಕೋಟಿಯಷ್ಟು ದುಡ್ಡು ಉಳಿಯುತ್ತದೆ. ಆದರೆ ಅಂತಹ ಉಳಿಕೆಯನ್ನು ಕೇಂದ್ರ ಸರಕಾರ ಬಡಬಗ್ಗರಿಗೆ ಖರ್ಚು ಮಾಡುತ್ತದೆ ಎನ್ನುವುದಕ್ಕೆ ಗ್ಯಾರಂಟಿ? ಅಂದಹಾಗೆ ಈ ಸಂದರ್ಭದಲ್ಲಿ ಇದುವರೆಗೂ ಸರಕಾರ ಹಳ್ಳಿಗಳ ಬಡಬಗ್ಗರಿಗೆ ಅನಿಲ ಒದಗಿಸಿಲ್ಲ ಕಾರಣ, ಶ್ರೀಮಂತರ ಇಂತಹ ‘ಗಿವ್ ಇಟ್ ಅಪ್’ನ ಭಿಕ್ಷೆ ಸಿಕ್ಕಿಲ್ಲ ಎಂಬ ಅಪಮಾನಕಾರಿ ಭಾವ?. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ‘ಗಿವ್ ಇಟ್ ಅಪ್’ ಯೋಜನೆ ಮೂಲಕ ಶ್ರೀಮಂತರ ಹಂಗಿನಲ್ಲಿ ಬಡವರು ಬದುಕಬೇಕಾಗಿದೆ ಆದ್ದರಿಂದ ಶ್ರೀಮಂತರು ಸಬ್ಸಿಡಿ ಬಿಟ್ಟುಬಿಡಿ ಎಂಬ ಅಸಮಾನತೆಯ ಭಾವವನ್ನು ಎಗ್ಗಿಲ್ಲದೆ ಬಿತ್ತುತ್ತಿದೆ. ದುರಂತವೆಂದರೆ ಇದನ್ನು ಈ ಪರಿ ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ ಮತ್ತು ಅಂತಹ ಆಚರಣೆಗೆ ಹಳ್ಳಿ ಮಹಿಳೆಯರ ಅಭಿವೃದ್ಧಿಯ ಬಣ್ಣ! ಈ ಹಿನ್ನೆಲೆಯಲ್ಲಿ ಬಡವರ ಬದುಕನ್ನು ಸಾರ್ವಜನಿಕವಾಗಿ ಹೀಗೆ ಅಣಕಿಸುವ ಕೇಂದ್ರ ಸರಕಾರದ ಈ ಯೋಜನೆ ಹೇಯವಾದುದು, ಅಸಂವಿಧಾನಿಕ ಕ್ರಮದ್ದು. ಯಾಕೆಂದರೆ ಕೊಡುವವರು ಎಂದೂ ಕೂಡ ಇನ್ನೊಬ್ಬರಿಂದ ಕಿತ್ತು ಕೊಡುವುದಿಲ್ಲ. ಕೊಡುವುದಿದ್ದರೆ ಶ್ರೀಮಂತರ ಮೇಲೆ ಮತ್ತಷ್ಟು ತೆರಿಗೆ ಹಾಕಿ ಅಥವಾ ಸಬ್ಸಿಡಿಯನ್ನು ತೆಗೆದುಹಾಕಿ ನೇರ ಬಡವರಿಗೆ ಅನುಕೂಲ ಮಾಡಿಕೊಡಬೇಕು. ಖಂಡಿತ ಅದು ದಿಟ್ಟತನದ ಮತ್ತು ನೇರ ಕ್ರಮವಾಗುತ್ತದೆ ಮತ್ತು ಅದರಿಂದ ಯಾರಿಗೂ ಅಪಮಾನವಾಗುವುದಿಲ್ಲ. ಆಶ್ಚರ್ಯವೆಂದರೆ ಬಡವರಿಗೆ ಹೀಗೆ ಅಪಮಾನವಾಗುತ್ತಿದೆ ಎಂದು ಯಾರೂ ಪ್ರಶ್ನಿಸದಿರುವುದು! ಈ ಹಿನ್ನೆಲೆಯಲ್ಲಿ ಇಂತಹ ಮೌನ ಕೂಡ ಇನ್ನೂ ಕೂಡ ಹೇಯವಾದುದು. ಈ ಕಾರಣಕ್ಕಾಗಿ ಬಡವರ ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರ ನಡೆಸುತ್ತಿರುವ ಇಂತಹ ಆಘಾತಕಾರಿ ಪ್ರಚಾರವನ್ನು ತಡೆಯಬೇಕಿದೆ.

ಆತಂಕದ ವಿಚಾರವೆಂದರೆ ಮತ್ತೊಂದು ನಡೆಯೂ ನರೇಂದ್ರ ಮೋದಿಯವರ ಕೇಂದ್ರ ಸರಕಾರದಿಂದ ಬರುತ್ತಿದೆ. ಅದು ರೈತರ ಭೂಮಿಯನ್ನು ಕಿತ್ತುಕೊಳ್ಳುವ ನೂತನ ಭೂಸ್ವಾಧೀನ ಮಸೂದೆ. ಅಂದಹಾಗೆ ಈ ಮಸೂದೆಯ ಮೂಲಕ ದೇಶದ ಅಭಿವೃದ್ಧಿಯ ಹೆಸರಿನಲ್ಲಿ, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ, ರೈತರ ಜಮೀನನ್ನು ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆಯೆಂದರೆ... ಅಭಿವೃದ್ಧಿ, ಅದು ಯಾರ ಅಭಿವೃದ್ದಿ? ಅದು ಎಂಥ ಅಭಿವೃದ್ದಿ? ಎಂಬ ಸಹಜ ಪ್ರಶ್ನೆಯನ್ನು ಈ ಸಂದರ್ಭ ಹುಟ್ಟುಹಾಕುತ್ತದೆ ಮತ್ತು ಈ ಸಂಬಂಧ ಕೇಂದ್ರ ಸಚಿವ ವೆಂಕಯ್ಯನಾಯ್ಡುರವರ ‘‘ಒಂದಿಂಚು ಜಮೀನನ್ನು ವಶಪಡಿಸಿಕೊಳ್ಳಲು ಬಿಡೆವು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಹಾಗೆಂದರೆ ಒಂದಿಂಚು ಅಭಿವೃದ್ಧಿಗೂ ಅವಕಾಶ ಕೊಡಬಯಸುವುದಿಲ್ಲ ಎಂದರ್ಥ’’ ಎಂಬ ಹೇಳಿಕೆಯೇ ಕೇಂದ್ರದ ಅಭಿವೃದ್ಧಿ ಮಾದರಿ ಬಗ್ಗೆ ಆತಂಕ ಸೃಷ್ಟಿಸುತ್ತದೆ. ಯಾಕೆಂದರೆ ರೈತನ ಬಳಿ ಭೂಮಿ ಇದ್ದರೆ ಅದೂ ಕೂಡ ದೇಶದ ಅಭಿವೃದ್ಧಿ ತಾನೇ? ರೈತ ಬೆಳೆಯುವ ಅನ್ನ, ಅದನ್ನು ತಿನ್ನುವ ಸರ್ವರೂ, ಆ ಮೂಲಕ ಆ ರೈತ ಕಾಣುವ ಲಾಭ... ನೆಮ್ಮದಿ... ಇದೂ ಕೂಡ ಈ ದೇಶದ ಆರ್ಥಿಕ ಅಭಿವೃದ್ಧಿಯ ಭಾಗವೇ ಅಲ್ಲವೇ? ಆದರೆ ನರೇಂದ್ರ ಮೋದಿಯವರಿಗೆ ಇದು ಅರ್ಥವಾಗುವುದಿಲ್ಲ ರೈತರ ಆತ್ಮಹತ್ಯೆಯೂ ಅರ್ಥವಾಗುವುದಿಲ್ಲ. ಅವರದೇನಿದ್ದರೂ ಕೈಗಾರಿಕೆ, ಬುಲೆಟ್ ರೈಲು, ಬಂಡವಾಳಶಾಹಿ ಕುಳಗಳಿಗೆ ಭೂಮಿ ಒದಗಿಸುವುದು ಇದೇ ಅಭಿವೃದ್ಧಿ ಮತ್ತು ಈ ಸಂಬಂಧ ಭೂಸ್ವಾಧೀನ ಮಸೂದೆ ಜಾರಿಗೆ ತರಲು ಟೊಂಕಕಟ್ಟಿ ನಿಲ್ಲುವುದು! ಹಾಗಿದ್ದರೆ ಯಾರೂ ಕೂಡ ಇದನ್ನು ಪ್ರಶ್ನಿಸುವಂತಿಲ್ಲವೇ? ಪ್ರಶ್ನಿಸುವಂತಿಲ್ಲ. ಯಾಕೆಂದರೆ ಅವರು ಅಭಿವೃದ್ಧಿಯ ವಿರೋಧಿಗಳು!
 ಒಟ್ಟಾರೆ ಅಭಿವೃದ್ಧಿಯ ಬಣ್ಣದ ಲೇಪ. ದೇಶಾಭಿ ಮಾನದ ಹೆಸರಲ್ಲಿ ದೇಶದ ಅಭಿವೃದ್ಧಿಗಾಗಿ ಮಸೂದೆ ತರಲು ಹೊರಟಿದ್ದೇವೆ ಎನ್ನುವುದು... ಅದೇ ಸಮಯಕ್ಕೆ ಅದೇ ದೇಶದ ರೈತನ ಜಮೀನನ್ನು ಕಿತ್ತುಕೊಳ್ಳುವುದು... ವಿರೋಧಿಸುವವರನ್ನು ದೇಶದ ಅಭಿವೃದ್ಧಿ ವಿರೋಧಿಗಳು ಎನ್ನುವುದು. ಸ್ವಂತ ಲಾಭಕ್ಕಾಗಿ ವಿಷಯಗಳನ್ನು ಭಾವನಾತ್ಮಕಗೊಳಿಸುವುದು... ಅಂತಹ ಭಾವನೆಗಳಲ್ಲಿ ಬೇಳೆಬೇಯಿಸಿಕೊಳ್ಳುವುದು... ಈ ನಿಟ್ಟಿನಲ್ಲಿ ‘ಗಿವ್ ಇಟ್ ಅಪ್’ ಇರಲಿ, ‘ಭೂಸ್ವಾಧೀನ ಮಸೂದೆ’ ಇರಲಿ ‘ಕಳೆದುಕೊಳ್ಳುವವರು’ ಮಾತ್ರ ದೇಶದ ಸಾಮಾನ್ಯ ಜನರು. ಬಣ್ಣ ಬಣ್ಣದ ಜಾಹೀರಾತು, ಬಣ್ಣ ಬಣ್ಣದ ‘ಮನ್ ಕೀ ಬಾತ್’, ದುಡ್ಡಿಲ್ಲದೆ ಯೋಜನೆಗಳನ್ನು ಜಾರಿಗೊಳಿಸುವುದು, ಹಳೇ ಯೋಜನೆಗಳಿಗೆ, ಸಂಸ್ಥೆಗಳಿಗೆ ಹೊಸ ಹೆಸರು ಇಡುವುದು! ಅಂಗೈಯಲ್ಲಿ ಆಕಾಶ... ಆಕಾಶವನ್ನೇ ಇನ್ನೇನು ಧರೆಗಿಳಿಸಿದೆವು ಎನ್ನುವುದು...! ವಾಸ್ತವ? ಆ ಅಂಗೈನ ಹಿಂದಿರುವ ದೃಶ್ಯ? ಲಕ್ಷ ಕೋಟಿ ಕಪ್ಪುಹಣವಿರಲಿ, ನಯಾ ಪೈಸೆಯೂ ಕೂಡ ಭಾರತಕ್ಕೆ ಬರಲಿಲ್ಲ. ಜನಧನ್ ಯೋಜನೆ ಖಾತೆಗೆ ಇನ್ನೂ ಬಿಡಿಗಾಸು ಬಂದಿಲ್ಲವೆಂದರೆ... ಅಂದಹಾಗೆ ಜನರೇನು ಪೆದ್ದರೇ? ಅಕೌಂಟ್ ಚೆಕ್ ಮಾಡುತ್ತಾರೆ! ಈ ನಿಟ್ಟಿನಲ್ಲಿ ಸಾಮಾಜಿಕ ಯೋಜನೆಗಳಾದ ಶಿಕ್ಷಣ, ಆರೋಗ್ಯ, ವಸತಿಗೆ ಹಿಂದೆಲ್ಲೂ ಇಲ್ಲದಂತೆ ಅನುದಾನ ಕಡಿತಗೊಳಿಸಲಾಗಿದೆಯೆಂದರೆ... ರಾಜ್ಯ ಸರಕಾರಗಳಿಗೂ ಕೇಂದ್ರದ ಪಾಲನ್ನು ಕಡಿಮೆಗೊಳಿಸಲಾಗಿದೆಯೆಂದರೆ... ಖಂಡಿತ, ಈ ದೇಶದ ಕೆಲವೇ ಕೆಲವು ಬಂಡವಾಳಶಾಹಿ ಕಾರ್ಪೊರೇಟ್ ಶ್ರೀಮಂತ ಕುಳಗಳ ಅಭಿವೃದ್ಧಿಯಷ್ಟೇ ಸದ್ಯಕ್ಕೆ ನರೇಂದ್ರ ಮೋದಿಯವರ ಅಭಿವೃದ್ಧಿ ಅಜೆಂಡಾ ಎನ್ನುವುದು ಈಗೀಗ ಭಾಸವಾಗುತ್ತಿದೆ. ಹಾಗೆಯೇ ಮೋದಿಯವರ ಬಗೆಗಿನ ಜನರ ಭ್ರಮೆಯ ಪೊರೆಯೂ ಕೂಡ ನಿಧಾನವಾಗಿ ಕಳಚುತ್ತಿದೆ. ಯಾಕೆಂದರೆ ಇಂತಹ ಅಭಿವೃದ್ಧಿ ಸೋಗಿನ ಹಿಂದೆ ‘ವ್ಯಾಪಂ’ನಂತಹ ವ್ಯಾಪಕ ಭ್ರಷ್ಟಾಚಾರ, ಲಲಿತ್ ಮೋದಿಯಂತಹ ಮೋಸ್ಟ್ ವಾಂಟೆಡ್‌ಗಳಿಗೆ ಒಳಗೊಳಗೆ ಸಹಕಾರ. ಒಟ್ಟಾರೆ ಶ್ರೀಮಂತರಿಗೆ ಹಳ್ಳಿಯ ರೈತರ ಜಮೀನನ್ನು ಕಿತ್ತುಕೊಡುವುದು ಅಥವಾ ಅಗ್ಗದ ದರದಲ್ಲಿ ಕೊಡಿಸುವುದು... ಖಾಸಗಿ ತೈಲ ಕಂಪೆನಿಗಳಿಗೆ ‘ಅನಿಲ ಸಬ್ಸಿಡಿ ಬಿಟ್ಟು ಬಿಡಿ’ ಯೋಜನೆ ಮೂಲಕ ಲಾಭ ಮಾಡಿಕೊಡುವುದು... ಸರಕಾರಿ ತೈಲ ಕಂಪೆನಿಗಳನ್ನು ನಿಧಾನಕ್ಕೆ ಮುಚ್ಚಿಸುವುದು. ಇದು ಮೋದಿಯವರ ಅಭಿವೃದ್ಧಿ ಅಜೆಂಡಾದ ಹಿಂದಿರುವ ಸತ್ಯದ ಹುನ್ನಾರ. ದುರಂತವೆಂದರೆ ಇಂತಹ ಹುನ್ನಾರಗಳು ಸಾರ್ವಜನಿಕರಿಗೆ ಅರ್ಥವಾಗುವುದೇ ಇಲ್ಲ. ಅರ್ಥವಾಗುವ ಹೊತ್ತಿಗೆ ಸಮಯವೂ ಮೀರಿರುತ್ತದೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...