Wednesday, September 30, 2015

ಶಿಷ್ಟಾಚಾರ ಮರೆತ ಅನಿವಾಸಿ ಪ್ರದಾನಿ ಮೋದಿಯ ವಿದೇಶಿ ಬಾಷಣಗಳು!
ಅನಿತಾ ಕು.ಸ.ಮಧುಸೂದನ್ ನಾಯರ್

ತಲೆ ತಗ್ಗಿಸಬೇಕಾದ ಇಂಡಿಯಾ!

ಕೆಲವು ವಿಷಯಗಳೇ ಹಾಗೆ, ಅವುಗಳಿಗೆ ಯಾವ ಲಿಖಿತ ಕಾನೂನಾಗಲಿ,ನಿಯಮಾವಳಿಗಳಾಗಲಿ ಇರುವುದಿಲ್ಲ. ಆದರೆ ಈ ನಾಡಿನ ಪ್ರತಿಯೊಬ್ಬ ರಾಜಕಾರಣಿಯೂ ಅದನ್ನು ಪಾಲಿಸುತ್ತಾ ಬಂದಿದ್ದಾರೆ.ಇಂತಹದೊಂದು ಸೌಜನ್ಯಪೂರ್ಣ ನಡವಳಿಕೆಗಳ ಕಾರಣದಿಂದಾಗಿಯೇ,ತನ್ನೆಲ್ಲ ಮಿತಿಗಳ ಹೊರತಾಗಿಯೂ ಇಂಡಿಯಾದ ಪ್ರಜಾಪ್ರಭುತ್ವ ವಿಶ್ವದಲ್ಲಿ ಒಂದು ಗೌರವಪೂರ್ಣ ಸ್ಥಾನ ಪಡೆದುಕೊಂಡಿದೆ.

  ಆದರೀಗ ಅಂತಹದೊಂದು ಗೌರವಕ್ಕೆ ಚ್ಯುತಿ ಬಂದೊದಗುತ್ತಿದೆ.  ಇಂತಹ ಚ್ಯುತಿ ತರುವಲ್ಲಿ ಯಾರೊ ಒಬ್ಬ ಸಾಮಾನ್ಯ ರಾಜಕಾರಣಿ ಕಾರಣವಾಗಿದ್ದರೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರಿಂತಹ  ಕೆಲಸಕ್ಕೆ ಕೈ ಹಾಕಿರುವುದು ಈದೇಶದ ಸರ್ವೋಚ್ಚನಾಯಕರು ಮತ್ತು ನಮ್ಮ ಪ್ರದಾನ ಮಂತ್ರಿಯೂ ಆದ ಶ್ರೀ ನರೇಂದ್ರ ಮೋದಿಯವರು ಎನ್ನುವುದೇ ವಿಷಾದನೀಯ ವಿಷಯವಾಗಿದೆ.

೨೦೧೪ರ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟಬಹುಮತ ಪಡೆದು ಅಧಿಕಾರಕ್ಕೇರಿದ ಕೂಡಲೆ, ಇಂತಹ ಅವಕಾಶಕ್ಕಾಗಿ ಕಾದಿದ್ದವರಂತೆ ಪ್ರದಾನಿಯವರು ವಿದೇಶ ಪ್ರವಾಸಗಳ ಸರಣಿಯನ್ನು ಪ್ರಾರಂಬಿಸಿಬಿಟ್ಟರು. ಕಳೆದ ಹದಿನೆಂಟು ತಿಂಗಳ ಅವಧಿಯಲ್ಲಿ ಅವರು ಬಹುತೇಕ ಪ್ರಪಂಚದ ಮುಕ್ಕಾಲು ಭಾಗವನ್ನು, ಅಷ್ಟೂ ಖಂಡಗಳನ್ನೂ ಸುತ್ತಿದ್ದಾರೆ, ಇನ್ನು ಸುತ್ತುತ್ತಲೇ ಇದ್ದಾರೆ. ಹೀಗೆ ವಿದೇಶಯಾತ್ರೆಗಳನ್ನು ನಡೆಸುತ್ತಿರುವ ಅವರು ಇದಕ್ಕೆ ನೀಡುವ ಕಾರಣಮಾತ್ರ ವಿಶೇಷವಾದದ್ದು. ಈ ದೇಶಕ್ಕೆ ದೊಡ್ಡಮೊತ್ತದ ಬಂಡವಾಳವನ್ನು ತರವುದು ಮತ್ತು ಅಂತರರಾಷ್ಟ್ರೀ ಮಟ್ಟದಲ್ಲಿ ಮೇಕ್ ಇನ್ ಇಂಡಿಯಾದ ಪರಿಕಲ್ಪನೆಯನ್ನು ಪ್ರಚಾರ ಪಡಿಸುವುದಾಗಿದೆ.ಆದರೆ ಇದರ ಒಳ ಮರ್ಮವೇ ಬೇರೆಯದಿದೆ. ಹೋದ ಕಡೆಯಲ್ಲೆಲ್ಲ ತನ್ನ  ಅನಿವಾಸಿ ಭಾರತೀಯ ಭಟ್ಟಂಗಿಗಳ ಸಹಾಯದಿಂದ ಅಲ್ಲಿ ಬಾರಿ ಜನಸ್ತೋಮ ಸೇರುವಂತೆ ಮಾಡಿ ದೇಶದ  ಅಭಿವೃದ್ದಿಯ ಬಗ್ಗೆ, ಅದಕ್ಕಾಗಿ ತಾನು ಮಾಡಿದ ಮತ್ತು ಮಾಡುತ್ತಿರುವ ಮತ್ತು ಮುಂದೆ ಮಾಡಲಿರುವ ತ್ಯಾಗದ ಬಗ್ಗೆ ಉದ್ದುದ್ದ ಬಾಷಣ ಬಿಗಿಯುವುದು. ಮತ್ತು ತನ್ಮೂಲಕ ತನ್ನ ಇಮೇಜನ್ನು ವೃದ್ದಿಸಿಕೊಳ್ಳುವುದಾಗಿದೆ.ಅಂತರ ರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಒಬ್ಬ ನಾಯಕನನ್ನಾಗಿ ಬಿಂಬಿಸಿಕೊಳ್ಳುವುದಷ್ಟೇ ಮೋದಿಯ ಒಳಹುನ್ನಾರವಾಗಿದೆ. ಇದರ ಜೊತೆಗೆ ತಮ್ಮ ಸ್ವದೇಶಿ ಕಾರ್ಪೂರೇಟ್ ಕುಳಗಳಿಗೆ ವಿದೇಶಿ ಒಪ್ಪಂದಗಳ ಮೂಲಕ ಬಾರಿ ಲಾಭ ಮಾಡಿಸಿಕೊಡುವ ಹುನ್ನಾರವೂ ಇದೆ. ಹೀಗಾಗಿಮೋದಿ ಹೋದ ಕಡೆಗೆಲ್ಲ ಅವರ ಉದ್ಯಮ ಮಿತ್ರರುಗಳು ಸಹ ಹೋಗುತ್ತಿದ್ದಾರೆ.

ದೇಶದ ಪ್ರದಾನಿಯೊಬ್ಬರು ವಿದೇಶ ಪ್ರವಾಸ ಮಾಡಬೇಕಾದರೆ ಅದಕ್ಕೊಂದು ರೂಪುರೇಷೆ ಮತ್ತು  ಪೂರ್ವನಿಗದಿತ ಅಜೆಂಡಾ ಇರುತ್ತದೆ. ಆದರೀಗ ಯಾವುದೇ ಅಂತಹ ಪೂರ್ವ ಸಿದ್ದತೆ ಕಾಣುತ್ತಿಲ್ಲ.ವಿದೇಶಾಂಗ ಸಚಿವರೊಬರ‍್ಬ ಅಗತ್ಯವೇ ತಮಗಿಲ್ಲವೆಂಬಂತೆ ಪ್ರದಾನಿ ನಡೆದುಕೊಳ್ಳುತ್ತಿದ್ದಾರೆ. ಹಿಂದೆಲ್ಲ ನಡೆಯುತ್ತಿದ್ದ ದೇಶ ದೇಶಗಳ ನಡುವಿನ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ವಿದೇಶಾಂಗ ಸಚಿವರೆಂದರೆ ದೆಹಲಿಯ ಕಛೇರಿಯಲ್ಲಿ ಕೂತು ಹೇಳಿಕೆಗಳನ್ನು ಕೊಡುವುದಕ್ಕೆ ಮಾತ್ರ ಎನ್ನುವಂತಾಗಿದೆ.

   ಇವೆಲ್ಲವನ್ನೂ ಬದಿಗೊತ್ತಿ ನೋಡಿದರೂ ಮೋದಿಯವರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಯನ್ನು ಹರಾಜಿಗಿಡುವ ರೀತಿಯಲ್ಲಿ ವತಿಸುತ್ತಿದ್ದಾರೆ. ದೇಶದ ಆಂತರೀಕ ರಾಜಕೀಯ ಬೆಳವಣಿಗೆಗಳ ಬಗ್ಗೆ ಮತ್ತು ಇಲ್ಲಿನ ಭಿನ್ನಮತಗಳ ಬಗ್ಗೆ ಬೇರೊಂದು ರಾಷ್ಟ್ರದಲ್ಲಿ ಯಾರೂ ಹೇಳಿಕೆಯನ್ನು ನೀಡಬಾರದೆನ್ನುವ ಅಲಿಖಿತ ನಿಯಮವೊಂದು ಹಿಂದಿನಿಂದಲೂ ಜಾರಿಯಲ್ಲಿದೆ. ಇದುವರೆಗೂ ನಮ್ಮ ದೇಶದ ಯಾವ ನಾಯಕರೂ ಇಂತಹದೊಂದು ನಿಯಮವನ್ನು ಎಂತಹ ಕಠೋರ ಸನ್ನಿವೇಶದಲ್ಲಿಯೂ ಮುರಿದವರಲ್ಲ. ಉದಾಹರಣೆಗೆ ಶ್ರೀಮತಿ ಇಂದಿರಾ ಗಾಂದಿಯಂರಹ ಬಲಿಷ್ಠ ನಾಯಕಿ ಸಹ ಯಾವತ್ತೂ ವಿದೇಶಗಳಲ್ಲಿ ದೇಶದೊಳಗಿನ ತನ್ನ ರಾಜಕೀಯ ವಿರೋಧಿಗಳ ಬಗ್ಗೆಯಾಗಲಿ, ದೇಶದ ಆಂತರೀಕ ರಾಜಕಾರಣದ  ಬಗ್ಗೆಯಾಗಲಿ ಎಂದೂ ಮಾತಾಡಿಲ್ಲ. ಆದರೆ ನರೇಂದ್ರಮೋದಿಯವರು ಇಂತಹ ಸತ್ ಸಂಪ್ರದಾಯಗಳನ್ನೆಲ್ಲ ಮುರಿಯುತ್ತ ಬರುತ್ತಿದ್ದಾರೆ.  ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದಾಗಿದೆ.

   ತೀರಾ ಮೊನ್ನಮೊನ್ನೆ ಅಮೇರಿಕಾಕ್ಕೆ ಹೋದ ಮೋದಿಯವರು ಅಲ್ಲಿ ನೆರೆದಿದ್ದ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತಾಡುತ್ತ, ನಮ್ಮ ದೇಶದ ಭ್ರಷ್ಟಾಚಾರವನ್ನು ಮುಖ್ಯ ವಿಷಯವನ್ನಾಗಿ ಮಾಡಿ ಮಾತಾಡಿದರು. ಹೀಗೆ ಮಾತಾಡುತ್ತ, ನಮ್ಮ ದೇಶದಲ್ಲಿ ಕೆಲವರು ೫೦ಕೋಟಿ ಲೂಟಿ ಮಾಡಿದರೆ, ಯಾರದೊ ಮಗ ೨೫೦ ಕೋಟಿ ಲೂಟಿ ಮಾಡುತ್ತಾನೆ. ಇನ್ಯಾರದೊ ಮಗಳು ೫೦೦ ಕೋಟಿ ಲೂಟಿ ಹೊಡೆಯುತ್ತಾಳೆ ಎನ್ನುತ್ತಾರೆ. ಮದ್ಯೆ ಸ್ವಲ್ಪ ಮೌನವಾಗಿ ನಂತರ ಯಾರದೊ ಅಳಿಯನೊಬ್ಬ ೧೦೦೦ ಕೋಟಿಯನ್ನು ಲೂಟಿ ಹೊಡೆಯುತ್ತಾನೆ. ಅಧಿಕಾರಸ್ಥರ ಸಂಬಂದಿಗಳು ಹೀಗೆ ದೇಶದ ಹಣವನ್ನು  ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ಎಸಗುತ್ತಿದ್ದಾರೆ. ನಾನೀಗ ನಿಮ್ಮ ಮದ್ಯೆ ಬಂದು ನಿಂತಿದ್ದೇನೆ. ಹೇಳಿ ನನ್ನ ಬಂದುಗಳೆ, ನಾನು ಭ್ರಷ್ಟಾಚಾರ ಮಾಡಿದ್ದೇನಾ? ಅದಕ್ಕೆ ಉತ್ತರವಾಗಿ ಜನ ಇಲ್ಲ ಎಂದು ಕೂಗುತ್ತಾರೆ. ಮತ್ತೆ ಮಾತಾಡುವ ಮೋದಿ ಇವೆಲ್ಲದರಿಂದ ನಿಮಗೆ ಬೇಸರವೆನಿಸಿಲ್ಲವೆ?ಎನ್ನುತ್ತಾ ನೆರೆದಿದ್ದ ಗುಂಪನ್ನು ಸಮ್ಮೋಹಿನಿಗೊಳಿಸುತ್ತ ಹೋಗುತ್ತಾರೆ.

   ಇಲ್ಲಿ ಮUಳು, ಮಗ, ಅಳಿಯ ಎಂಬುದನ್ನು ಯಾರನ್ನು ಉದ್ದೇಶಿಸಿ  ಮಾತಾಡಿದ್ದೆಂಬುದರ ಬಗ್ಗೆ ಮೂರನೆ ತರಗತಿಯ ಪುಟ್ಟ ಮಗುವಿಗೂ ಗೊತ್ತಾಗುವಂತಹ ವಿಷಯ. ಹೀಗೆ ವಿದೇಶಿ ನೆಲದಲ್ಲಿ ನಿಂತು ದೇಶದ ಆಂತರೀಕ ರಾಜಕೀಯ ವಿಚಾರಗಳನ್ನು ಮಾತಾಡುತ್ತ ವಿರೋಧಪಪಕ್ಷದ ನಾಯಕರುಗಳ ಮತ್ತು ಅವರ ಕುಟುಂಬದವರ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುತ್ತಾ ಮೋದಿ ಈ ನೆಲದ ಶಿಷ್ಟಾಚಾರವನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಬಹುಶ: ಇಂಡಿಯಾದ ಇತಿಹಾಸದಲ್ಲಿ ಪ್ರದಾನಿಯೊಬ್ಬರು ಇದೇ ಮೊದಲ ಬಾರಿಗೆ ಪರದೇಶಿ ನೆಲದಲ್ಲಿ ರಾಜಕಾರಣ ಮಾಡಿದ್ದು.

  ಆದರೆ ನರೇಂದ್ರ ಮೋದಿಯವರು ರಾಜಕೀಯ ಶಿಷ್ಟಾಚಾರವನ್ನು  ಕೈಬಿಟ್ಟು ರಾಜಕಾರಣದ ನೈತಿಕತೆಯನ್ನು ಮೀರಿ  ಆಂತರೀಕ ರಾಜಕಾರಣದ ಬಗ್ಗೆ ವಿದೇಶಿ ನೆಲದಲ್ಲಿ ಮಾತಾಡಿದ್ದು ಇದೇ ಮೊದಲೇನಲ್ಲ.

  ಬದಲಿಗೆಮೋದಿ ಜರ್ಮನಿಗೆ ಬೇಟಿ ಇತ್ತಾಗಲೂ ಸಹ ವಿರೋದಪಕ್ಷಗಳನ್ನು ಬಿಡಿ ನಮ್ಮ ರಾಷ್ಟ್ರದ ಮರ್ಯಾದೆಯನ್ನೆ ಪ್ರಪಚದ ಮುಂದೆ ಹರಾಜಾಗುವಂತೆ ಮಾತಾಡಿದ್ದರು.    ಇದುವರೆಗು ಭಾರತ ಬಿಕ್ಷೆ ಬೇಡುತ್ತಿತ್ತು, ಆದರಿನ್ನು ಮುಂದೆ ಬಿಕ್ಷೆ ಬೇಡುವುದಿಲ್ಲ ಎಂಬರ್ಥದ ಮಾತುಗಳನ್ನಾಡಿ ಇಂಡಿಯಾದ ನೂರೂ ಚಿಲ್ಲರೆ ಕೋಟಿ ಜನರ ಸ್ವಾಬಿಮಾನಕ್ಕ ಅವಮಾನ ಮಾಡಿದ್ದರು.

   ಮತ್ತೊಮ್ಮ ಕೆನಡಾ ದೇಶಕ್ಕೆ ಬೇಟಿ ನೀಡಿ ಬಾಷಣ ಮಾಡುವಾಗ ನಾನು ಪ್ರದಾನಿಯಾಗುವವರೆಗು ಭಾರತ ಕೇವಲ ಭಾರತವಾಗಿರದೆ, ಹಗರಣಗಳ ಭಾರತವಾಗಿತ್ತು. ಈಗ ಕಾಲ ಬದಲಾಗಿ ಭಾರತ ಹಗರಣಗಳ ಮುಕ್ತ ಭಾರತವಾಗಿದೆ ಎಂದು ಕೊಚ್ಚಿಕೊಂಡು ನಮ್ಮ ಮರ್ಯಾದೆಯನ್ನು ಮಣ್ನುಪಾಲು ಮಾಡಿದ್ದರು.

   ಚೀನಾ ದೇಶಕ್ಕೆ ಅವರು ನೀಡಿದ ಮೊದಲ ಬೇಟಿಯಲ್ಲಿ ಮಾತಾಡುತ್ತ ಒಂದು ಕಾಲದಲ್ಲಿ ಭಾರತದಲ್ಲಿ ಜನಿಸುವುದೇ ದುರದೃಷ್ಠಕರವೆಂಬ ಅನಿಸಿಕೆಯಿತ್ತು, ಭಾರತೀಯನೆಂದು ಕರೆಸಿಕೊಳ್ಳಲು ಅವಮಾನವಾಗುತ್ತಿತ್ತು ಎಂಬ ಹೇಳಿಕೆ  ನೀಡಿ ವಿಶ್ವದೆದುರು ಇಂಡಿಯಾ ತಲೆತಗ್ಗಿಸುವಂತೆ ಮಾಡಿದ್ದರು.

  ಅದೇರೀತಿ ಕೆಲತಿಂಗಳುಗಳಹಿಂದೆ ಅರಬ್ ರಾಷ್ಟ್ರಗಳಿಗೆ ಬೇಟಿ ಇತ್ತಾಗ ಮಾತಾಡುತ್ತಾ, : ನಾನು ಅಧಿಕಾರ ವಹಿಸಿಕೊಳ್ಳುವತನಕ ನಮ್ಮವ್ಯವಸ್ಥೆ ಜಡ್ಡುಗಟ್ಟಿ ಯಾವುದು ಸುಲಭವಾಗಿ ಮುಂದುವರೆಯದ ಪರಿಸ್ಥಿತಿ ಇತ್ತು. ಆದರೀಗ ನಾನು ಬಂದ ಮೇಲೆ ಪರಿಸ್ಥಿತಿ ಸುದಾರಿಸುತ್ತಿದೆ: ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

  ಹೀಗೆ ಪ್ರದಾನಿ ನರೇಂದ್ರ ಮೋದಿಯವರು ತಮ್ಮ ವಿದೇಶಿ ಪ್ರವಾಸಗಳಲ್ಲಿ ನಮ್ಮ ಆಂತರೀಕ ರಾಜಕೀಯದ ವೈರಿಗಳನ್ನು ಟೀಕಿಸುತ್ತ ನೈತಿಕತೆಯನ್ನು ಮೀರುತ್ತಿದ್ದರೆ, ಇನ್ನೊಂದೆಡೆ ನಮ್ಮ ವ್ಯವಸ್ಥೆಯನ್ನು ಜಡವೆಂದು ಹೇಳುವುದರ ಮೂಲಕ  ಅರವತ್ತು ವರ್ಷಗಳ ನಮ್ಮ ಯಶಸ್ವಿ ಪ್ರಜಾಪ್ರಭುತ್ವದ ಬುನಾದಿಯನ್ನು ಅಲುಗಾಡಿಸುವಂತಹ ವಿದ್ರೋಹದ ಕೆಲಸ ಮಾಡುತ್ತಿದ್ದಾರೆ.

ಇದರ ಹಿಂದಿರುವುದು ನರೇಂದ್ರ ಮೋದಿಯವರ ಸರ್ವಾಧಿಕಾರಿ ಮನಸ್ಥಿತಿ, ಜೊತೆಗೆ ವಿಶ್ವದಲ್ಲಿ ತಾನೊಬ್ಬ ಪ್ರಾಮಾಣಿಕ ನಾಯಕ ಮತ್ತು ಮಹಾ ಮುತ್ಸದ್ದಿಯೆಂದು ಬಿಂಬಿಸಿಕೊಳ್ಳುವ ಮನೋಬಾವನೆ.   ಆದರೆ ವಿಶ್ವವೇನು ಕಣ್ಮುಚ್ಚಿ ಕೂತಿಲ್ಲ. ಅದೀಗ ತೆರೆದ ಕಣ್ಣುಗಳಿಂದ ಇಂಡಿಯಾವನ್ನು ಎಚ್ಚರದಿಂದ  ಗಮನಿಸುತ್ತಿದೆ.  ಆರಂಬಿಕ ಉನ್ಮಾದದ ಹೊರತಾಗಿಯೂ ಅದಕ್ಕೆ ಮೋದಿಯವರ ಮೂಲಭೂತ ರಾಜಕಾರಣದ  ಉದ್ದೇಶ ಮತ್ತು  ಅವರು ನಡೆಯಲಿರುವ  ಹಾದಿಗಳೆರಡೂ ಅದಕ್ಕೆ ಅರ್ಥವಾಗುತ್ತಿದೆ. ಮೋದಿಯವರ ಇಂತಹ ನಡವಳಿಕೆಯಿಂದ ಸದ್ಯಕ್ಕಂತು ಇಂಡಿಯಾದ  ಅಂತರರಾಷ್ಟ್ರೀಯ ಮಟ್ಟದ ಘನತೆ ಕುಗ್ಗುತ್ತಿದೆ.

       ಆದರಿವತ್ತು ಇಂಡಿಯಾವನ್ನು ತಮ್ಮ ಮಾರುಕಟ್ಟೆಯನ್ನಾಗಿ ನೋಡುವ ಪಶ್ಚಿಮದ ಬಂಡವಾಳಶಾಹಿ ಶಕ್ತಿಗಳು ಮೋದಿಯವರ ಮಾತಿಗೆ ಮೆಚ್ಚುಗೆ ಸೂಸುವಂತೆ ನಾಟಕವಾಡುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವ ತರಾತುರಿಯಲ್ಲಿರುವುದು,ಇಂಡಿಯಾದ ಜನತೆಗೆ ಮಾತ್ರವಲ್ಲ, ವಿಶ್ವದ ಎಲ್ಲರಿಗು ಅರ್ಥವಾಗುತ್ತದೆ:    ಕೆಲವರಿಗೆ ಬೇಗ, ಇನ್ನು ಕೆಲವರಿಗೆ ಸ್ವಲ್ಪ ತಡವಾಗಿ! ಅಷ್ಟೇ!!

Tuesday, September 29, 2015

3 ಮತ್ತು 4 ಅಕ್ಟೋಬರ್ ಹಂಪಿ- ನಾವು ನಮ್ಮಲ್ಲಿ 2015 ' ಸಂವಿಧಾನ ಭಾರತ' ವಿಚಾರಸಂಕಿರಣ

ವೈಚಾರಿಕ ಉಪಕ್ರಮಗಳನ್ನು ಹತ್ತಿಕ್ಕುವ ಅಸಾಂಸ್ಕೃತಿಕ ನಡೆ
ಡಾ.ವಡ್ಡಗೆರೆ ನಾಗರಾಜಯ್ಯ

ವೈಚಾರಿಕ ಉಪಕ್ರಮಗಳನ್ನು ಹತ್ತಿಕ್ಕುವ ಅಸಾಂಸ್ಕೃತಿಕ ನಡೆ


ಕರ್ನಾಟಕ ಸಾಹಿತ್ಯ ಅಕಾಡಮಿಯು, ಪ್ರೊ.ಕೆ.ಎಸ್.ಭಗವಾನ್ ಅವರಿಗೆ ಜೀವಮಾನದ ಸಾಹಿತ್ಯ ಸಾಧನೆಯನ್ನು ಪರಿಗಣಿಸಿ 2013ನೆ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದ ನಂತರದಲ್ಲಿ ವ್ಯಾಪಕವಾದ ವಾದ-ವಿವಾದಗಳು, ಖಂಡನೆ-ಸಮರ್ಥನೆಗಳು ನಡೆಯುತ್ತಿವೆ. ಭಗವಾನರ ಸಾಹಿತ್ಯದ ಕೊಡುಗೆಯ ನೆಲೆ-ಬೆಲೆಗಳನ್ನು ಚರ್ಚಿಸದೆ ಸಾಮಾಜಿಕ ಕ್ಷೋಭೆಯನ್ನು ಹುಟ್ಟಿಹಾಕುವ ವ್ಯಕ್ತಿಗತ ತೇಜೋವಧೆಯ ಅಸಾಂಸ್ಕೃತಿಕ ಕ್ರೋಧ ಮಾತ್ರವೇ ವ್ಯಕ್ತವಾಗುತ್ತಿರುವ ಬಿರುಸನ್ನು ನೋಡಿ ಸಾಹಿತ್ಯ ಅಕಾಡಮಿಯ ಸದಸ್ಯನಾದ ನಾನು ಅತೀವ ದುಗುಡದಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಸಾಹಿತ್ಯ ಅಕಾಡಮಿಯು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಗೌರವ ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆಯ ಮುನ್ನ ಅರ್ಹ ಲೇಖಕರನ್ನು ಸೂಚಿಸುವಂತೆ ರಾಜ್ಯದ 25 ಹಿರಿಯ ಸಾಹಿತಿಗಳ ಅಭಿಪ್ರಾಯ ಪಡೆದುಕೊಳ್ಳಲಾಗಿತ್ತು. ಅತೀ ಹೆಚ್ಚು ಸಾಹಿತಿಗಳು ಭಗವಾನರ ಹೆಸರು ಸೂಚಿಸಿದ್ದರು. ನಂತರದಲ್ಲಿ ಅ.19ರಂದು ನಡೆದ ಅಕಾಡಮಿ ಸರ್ವ ಸದಸ್ಯರ ಸಭೆಯಲ್ಲಿ ನಡೆದ ಚರ್ಚೆಗಳಲ್ಲಿಯೂ ಹಿರಿಯ ಸಾಹಿತಿ ಭಗವಾನರ ಸಾಹಿತ್ಯ ಸಾಧನೆಯ ಕುರಿತು ಒಮ್ಮತದ ಸಾಮೂಹಿಕ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸದರಿ ಹೆಸರನ್ನು ಅಂತಿಮಗೊಳಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡಮಿಯು ಸ್ಥಾಪನೆಯಾಗಿ ಐವತ್ತು ವರ್ಷ ಗಳ ಸುದೀರ್ಘ ಇತಿಹಾಸದಲ್ಲಿ ಜ್ಞಾನಪೀಠ ಪುರಸ್ಕೃತ ಕನ್ನಡದ ಬಹು ದೊಡ್ಡ ಲೇಖಕರೂ ಅಧ್ಯಕ್ಷರಾಗಿ ಅಕಾಡಮಿಯನ್ನು ಮುನ್ನಡೆಸಿದ್ದಾರಲ್ಲದೆ ನಾಡಿನ ಅಪಾರ ಸಾಹಿತಿಗಳು ಅಕಾಡಮಿಯ ಗೌರವಕ್ಕೆ ಪಾತ್ರರಾಗಿ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಹೀಗಿರಲು ಮಾಜಿ ಸಚಿವ ಸಿ.ಟಿ.ರವಿಯವರು ಅಕಾಡಮಿ ಪ್ರಶಸ್ತಿಯನ್ನು ಕುರಿತು ಅಡ್ನಾಡಿ ಪ್ರಶಸ್ತಿ ಎಂದು ಕರೆದಿರುವ ವಿವೇಕಶೂನ್ಯ ನಡವಳಿಕೆಯು ಖಂಡನೀಯ ಸಂಗತಿ. 

ಸಾಮಾಜಿಕ ಜಾಲತಾಣಗಳಲ್ಲಿ ಏಕಮುಖ ಜನಾಭಿಪ್ರಾಯ ರೂಪಿಸುತ್ತಿರುವ ಕೆಲವು ಯಥಾಸ್ಥಿತಿವಾದಿಗಳು, ಭಗವಾನ್‌ರವರು ರಾಮಾಯಣ ಮಹಾಭಾರತ(ಭಗವದ್ಗೀತೆ)ಗಳನ್ನು ಟೀಕಿಸುವ ಮೂಲಕ ಹಿಂದೂಧರ್ಮ ಮತ್ತು ಹಿಂದೂಧಾರ್ಮಿಕ ನಾಯಕರ ವಿರುದ್ಧ ಅವಹೇಳನ ಮಾಡುತ್ತಿದ್ದಾರೆಂಬ ವಾದವನ್ನು ಮುಂದೊಡ್ಡಿ ಭಗವಾನರಿಗೆ ಗೌರವ ಪ್ರಶಸ್ತಿ ನೀಡಿರುವ ಔಚಿತ್ಯವೇನೆಂಬುದನ್ನು ಪ್ರಶ್ನಿಸುತ್ತಿದ್ದಾರೆ. ವಾಸ್ತವವಾಗಿ ಆರ್ಯಪ್ರಣೀತ ವೈದಿಕಶಾಹಿ ಪಠ್ಯಗಳು ಮತ್ತು ನಡೆಗಳನ್ನು ವಿರೋಧಿಸುವ ಭೌತವಾದೀ ಚಿಂತನೆಗಳು ಚಾರ್ವಾಕರ ಕಾಲದಿಂದಲೂ ದರ್ಶನಶಾಸ್ತ್ರ ಪರಂಪರೆಯಾಗಿ ಮುಂದುವರೆದು ಬಂದಿವೆ. ಜಾನಪದ ಮೂಲದ ರಾಮಾಯಣ, ಮಹಾಭಾರತ ಮುಂತಾದ ಕಾವ್ಯಗಳಿಗೆ ಹಿಂದೂ ಶಾಸ್ತ್ರಕಾರರು ಪ್ರಕ್ಷಿಪ್ತಗಳನ್ನು ಸೇರಿಸಿ, ಜನಸಾಮಾನ್ಯರನ್ನು ಶೋಷಿಸಲು ಇದೇ ಪಠ್ಯಗಳನ್ನು ಬಳಸಲುತೊಡಗಿದಂತೆ ಅವುಗಳ ವಿರುದ್ಧ ಭೌತವಾದೀ ದರ್ಶನದ ಠೀಕುಗಳು- ಹವಣಿಕೆಗಳು- ಆಚರಣೆಗಳು ವ್ಯಕ್ತಗೊಳ್ಳತೊಡಗಿದವು. ಈ ಭೌತವಾದೀ ತತ್ವದರ್ಶನಕ್ಕೆ ಚಾರ್ವಾಕರ ನಂತರದಲ್ಲಿ ಗೌತಮ ಬುದ್ಧ, ಬಸವಾದಿ ಪ್ರಮಥ ವಚನಕಾರರು, ಕನಕದಾಸರಂತಹ ಭಕ್ತಿಪಂಥದ ಅನುಭಾವಿ ಕವಿಗಳು, ಸರ್ವಜ್ಞ, ದೇಶಿ ಯೋಗಿಗಳಾದ ವೇಮನ ಮತ್ತು ಪೋತಲೂರು ವೀರಬ್ರಹ್ಮೇಂದ್ರಸ್ವಾಮಿ, ಸ್ವಾಮಿ ವಿವೇಕಾನಂದ, ಕುವೆಂಪು ಮುಂತಾದವರು ತಮ್ಮದೇ ಚಿಂತನೆಗಳನ್ನು ಧಾರೆಯೆರೆದು ರಾಮಾಯಣ ಮಹಾಭಾರತಗಳಲ್ಲಿರುವ ಜೀವವಿರೋಧಿ ಅಂಶಗಳನ್ನು ಓತಪ್ರೋತ ಟೀಕಿಸಿದ್ದಾರೆ. ಹಾಗೂ ತಮ್ಮದೇ ಉಪಕ್ರಮಗಳಿಂದ ಪರಿಷ್ಕರಿಸಿ ಸೃಜನಶೀಲ ಆಕೃತಿಗಳಲ್ಲಿ ಮರುರೂಪಿಸಿದ್ದಾರೆ, ಅವರೆಲ್ಲರ ಪಠ್ಯಗಳನ್ನು ಇಂದು ಬಹಿಷ್ಕರಿಸಲಾದೀತೆ? ಆಧುನಿಕ ಕಾಲದಲ್ಲಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್‌ರವರು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಮೂಲಕ ಹಿಂದೂ ದೇವಾನುದೇವತೆಗಳ ಚಿತ್ರಪಟಗಳನ್ನು ಸಾರ್ವಜನಿಕವಾಗಿ ಸುಡುವ ಮೂಲಕ ಹಿಂದೂ ಧಾರ್ಮಿಕ ವ್ಯಕ್ತಿತ್ವಗಳನ್ನು ತೀವ್ರ ಟೀಕೆಗೆ ಗುರಿಪಡಿಸಿದರು. 

ಭಾರತದ ಸಂವಿಧಾನ ಕರ್ತೃ ಡಾ.ಅಂಬೇಡ್ಕರ್‌ರವರು 'ರಾಮ ಆ್ಯಂಡ್ ಕೃಷ್ಣ ಮತ್ತು ರಿಡಲ್ಸ್ ಇನ್ ಹಿಂದೂಯಿಸಂ' ಕೃತಿಗಳಲ್ಲಿ ಹಾಗೂ ಅವರ ಭಾಷಣಗಳಲ್ಲಿ ಹಿಂದೂಧರ್ಮವನ್ನು ಮತ್ತು ಹಿಂದೂ ಶಾಸ್ತ್ರಗ್ರಂಥಗಳನ್ನು ಕಟುವಾಗಿ ಟೀಕಿಸಿದ್ದಾರೆ. ಅವೆಲ್ಲವನ್ನು ಈಗ ಬಹಿಷ್ಕರಿಸಲಾದೀತೆ? ಪ್ರೊ.ಕೆ.ಎಸ್. ಭಗವಾನ್‌ರವರ ಚಿಂತನೆಗಳು ಇದೇ ಭೌತವಾದಿ ತತ್ವದರ್ಶನದ ಓದು ಹಾಗೂ ಸ್ವಾಮಿ ವಿವೇಕಾನಂದ ಮತ್ತು ಅಂಬೇಡ್ಕರ್‌ರವರ ಚಿಂತನೆಗಳ ಓದಿನ ಹಿನ್ನೆಲೆಯಲ್ಲಿ ರೂಪಿತವಾಗಿವೆ. ಇದರರ್ಥ ನಾನು ಭಗವಾನರನ್ನು ಸಮರ್ಥಿಸಿಕೊಳ್ಳುತ್ತಿದ್ದೇನೆಂದಲ್ಲ. ಅವರು ಕಳೆದ ನಲವತ್ತು ವರ್ಷಗಳಿಂದ ವಿಮರ್ಶೆ, ಅನುವಾದ, ವೈಚಾರಿಕ ಸಾಹಿತ್ಯ ಪ್ರಕಾರಗಳಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಹಾಗೂ ಚಿಂತನಶೀಲವಾದ ಅನೇಕ ಲೇಖನಗಳನ್ನು ನೀಡುವ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಅಕಾಡಮಿಯು ಅವರ ಸಾಹಿತ್ಯ ಸಾಧನೆಯನ್ನು ಮಾತ್ರ ಪರಿಗಣಿಸಿದೆ.
   

ವಿಚಾರವಾದಿ ಚಿಂತಕರಾದ ನರೇಂದ್ರ ದಾಭೋಲ್ಕರ್, ಗೋವಿಂದರಾವ್ ಪನ್ಸಾರೆ ಮತ್ತು ಪ್ರೊ.ಎಂ.ಎಂ.ಕಲಬುರ್ಗಿಯವರ ಹತ್ಯೆಯ ನಂತರದಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಬಲಪಂಥೀಯ ಶಕ್ತಿಗಳ ಹತ್ಯಾಸಂಸ್ಕೃತಿಯ ಚಿಂತನೆಗಳು ಅತ್ಯಂತ ವ್ಯಕ್ತರೂಪದಲ್ಲಿಯೇ ಪ್ರಕಟಗೊಳ್ಳುತ್ತಲಿವೆ. ವೈಚಾರಿಕವಾಗಿ ಮಾತನಾಡುವ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರ ಮನೋಸ್ಥೈರ್ಯವನ್ನು ಕುಂದಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಜೀವ ಬೆದರಿಕೆಯನ್ನೊಡ್ಡಿ ಭಯ ಮೂಡಿಸುವ ಯಥಾಸ್ಥಿತಿವಾದಿಗಳು ಸಂಘಟಿತಗೊಳ್ಳುತ್ತಿದ್ದಾರೆ. ಗನ್ನಿನ ತುದಿಮೊನೆಯಲ್ಲಿ ಪೆನ್ನಿನ ಅಕ್ಷರಗಳನ್ನು ಮೂಡಿಸುವ ಭಯಭೀತ ಪರಿಸ್ಥಿತಿ ಇಂದಿನ ಲೇಖಕರಿಗೆ ಎದುರಾಗಿದೆ. ಸಾಮಾಜಿಕ ಹೊಣೆಗೇಡಿತನದ ಅನೇಕ ಸುದ್ಧಿ ಮಾಧ್ಯಮಗಳೂ ಬಲಪಂಥೀಯರ ಉಪಟಳಕ್ಕೆ ಕುಮ್ಮಕ್ಕು ನೀಡುತ್ತಿವೆ. ದಲಿತರ ಮಾರಣಹೋಮ, ಮಹಿಳೆಯರ ಮೇಲೆ ಅತ್ಯಾಚಾರ, ಜಾತೀಯತೆ, ಅಸ್ಪಶ್ಯತೆ, ಧಾರ್ಮಿಕ ಕಂದಾಚಾರ, ರೈತರ ಆತ್ಮಹತ್ಯೆ, ಮಸೀದಿ- ಚರ್ಚ್‌ಗಳ ನಾಶ, ಮರ್ಯಾದೆಗೇಡು ಹತ್ಯೆಯಂತಹ ಮೌಢ್ಯಗಳಿಂದ ನೊಂದುಕೊಳ್ಳದ ಹಿಂದೂ ಧರ್ಮೀಯ ಮನಸ್ಸುಗಳು ಪ್ರೊ.ಭಗವಾನ್‌ರವರ ಮಾತುಗಳಿಂದ ನೊಂದುಕೊಳ್ಳುತ್ತವೆ! 

ಇಲ್ಲಿ ಭಗವಾನ್‌ರವರಿಗೆ ಗೌರವ ಪ್ರಶಸ್ತಿ ನೀಡಿರುವುದರ ವಿರುದ್ಧ ಮೇಲ್ಜಾತಿ ವಲಯಗಳ ಸಂಪ್ರದಾಯನಿಷ್ಠ ಪುರುಷರು ಮಾತ್ರ ವಿರೋಧಿಸುತ್ತಿದ್ದಾರೆ. ಮಹಿಳೆಯರು, ಕೆಳಜಾತಿಗಳ ಶೂದ್ರರು, ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು ಮುಂತಾದವರು ವಿರೋಧಿಸುತ್ತಿಲ್ಲವೇಕೆ? ಅವರ್ಯಾರೂ ಸಾಹಿತ್ಯದ ಗಂಭೀರ ಓದುಗರಲ್ಲವೇ? ಕೆಳಜಾತಿಗಳ ಮಹಿಳೆಯರನ್ನು, ದಲಿತರನ್ನು, ಅನ್ಯ ಧರ್ಮೀಯರನ್ನು ಹೀಯಾಳಿಸಿ ಸಾಹಿತ್ಯವನ್ನು ಸೃಷ್ಟಿಸುವ ಮೂಲಕ ಕೋಮುವಾದದ ಕಿಚ್ಚು ಹಚ್ಚುವ ಎಸ್.ಎಲ್.ಭೈರಪ್ಪನವರ ಕೃತಿಗಳನ್ನು ಕುರಿತು ಕೃತಿಗಳ ಬಿಡುಗಡೆಗೂ ಮುನ್ನ ಪತ್ರಿಕೆಗಳು ರೀಮುಗಟ್ಟಳೆ ಬರೆಯುವಂತೆ ನೋಡಿಕೊಳ್ಳುವುದರ ಹಿಂದಿನ ರಾಜಕಾರಣವೇನು? ಭೈರಪ್ಪನವರ ಸಾಹಿತ್ಯ ಸಾಧನೆಗೆ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಬೊಬ್ಬಿಡುವ ಜನ ಭೈರಪ್ಪನವರ ವಿರುದ್ಧ ಸಮಾಜದ ಎಲ್ಲಾ ವಲಯಗಳಿಂದ ವ್ಯಾಪಕ ವಿರೋಧ ವ್ಯಕ್ತವಾದರೂ ಭೈರಪ್ಪನವರ ಪರ ವಕ್ತಾರಿಕೆ ವಹಿಸುವುದರ ಮರ್ಮವೇನು? ಈಗ ವೈಚಾರಿಕ ಸಾಹಿತ್ಯ ಸೃಜನೆಯ ಮೂಲಕ ಬುದ್ಧಗುರು, ವಚನಕಾರರು, ಕನಕದಾಸನಂತಹ ಕೀರ್ತನಕಾರರು, ವೇಮನನಂತಹ ದೇಶಿ ಯೋಗಿಗಳು, ಸ್ವಾಮಿ ವಿವೇಕಾನಂದ, ಪೆರಿಯಾರ್, ಅಂಬೇಡ್ಕರ್, ಕುವೆಂಪು ಮುಂತಾದವರ ವಿಚಾರ ಸಾಹಿತ್ಯದ ಸಸಿಗೆ ನೀರೆರೆಯುವ ಮೂಲಕ ಶೋಷಿತರ ಪರವಾಗಿ ಮಿಡಿಯುವ ಪ್ರೊ.ಕೆ.ಎಸ್.ಭಗವಾನ್ ಅವರ ವೈಚಾರಿಕ ಉಪಕ್ರಮಗಳನ್ನು ಹತ್ತಿಕ್ಕುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಮಾತ್ರವಲ್ಲದೆ ಬಲಪಂಥೀಯರ ಭೌದ್ಧಿಕ ದಾರಿದ್ರ್ಯವನ್ನು ಎತ್ತಿ ತೋರಿಸುತ್ತದೆ.

ಆರೋಪಕ್ಕೊಳಗಾದ ಕಾವಿಧಾರಿಗಳ ರಕ್ಷಣೆಗೆ ಸ್ತ್ರೀಪಡೆ

   


ಸುರೇಶ ಭಟ್ ಬಾಕ್ರಬೈಲ್
ರ್ಮ ಹಾಗೂ ಧರ್ಮಗುರುಗಳ ನಾಶಕ್ಕೆ ಮುಂದಾಗಿರುವ ಶಕ್ತಿಗಳನ್ನು ಮಟ್ಟಹಾಕುವ ಉದ್ದೇಶ ತನ್ನದೆಂದು ಹೇಳಿಕೊಳ್ಳುವ ಸಂಘಟನೆಯೊಂದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವುದಾಗಿ ವರದಿಯಾಗಿದೆ. ನಾರಿ ಸುರಕ್ಷಾ ವೇದಿಕೆ ಎಂಬ ಹೆಸರಿನ ಈ ಸಂಘಟನೆ ಇದೇ ಸಪ್ಟಂಬರ್ 4ರಂದು ಬೆಂಗಳೂರಿನಲ್ಲಿ ಸ್ವಸ್ಥ ಸಮಾಜಕ್ಕಾಗಿ ಮಹಿಳಾ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿತ್ತು. ಅಂದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಲವು ಮಹಿಳೆಯರು ಅತ್ಯಾಚಾರಕ್ಕೊಳಗಾದ ಸೋದರಿಯರ ಹಕ್ಕುಗಳನ್ನು ಎತ್ತಿಹಿಡಿಯುವ ಬದಲು ಅವರನ್ನು ನಿಂದಿಸಿರುವ ವಿಲಕ್ಷಣ ಘಟನೆ ನಡೆದಿದೆ! ಸದರಿ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಮತ್ತು ಆಯೋಗದ ಹಾಲಿ ಸದಸ್ಯೆ ಸುಮನ್ ಹೆಗಡೆ ಇಬ್ಬರೂ ನಿರ್ದಿಷ್ಟವಾಗಿ ರಾಘವೇಶ್ವರ ಸ್ವಾಮಿ ಆರೋಪಿಯಾಗಿರುವ ಎರಡು ಅತ್ಯಾಚಾರ ಪ್ರಕರಣಗಳಲ್ಲಿನ ಸಂತ್ರಸ್ತ ಮಹಿಳೆಯರ ಬಗ್ಗೆ ತೀರ ಕೇವಲವಾಗಿ ಮಾತನಾಡಿದ್ದಾರೆ. ಸುಮನ್ ಹೆಗಡೆಯವರ ಪ್ರಕಾರ ಪ್ರಚಾರಕ್ಕೋಸ್ಕರ, ಪ್ರತಿಷ್ಠಿತರ ಚಾರಿತ್ರ್ಯವಧೆಗೋಸ್ಕರ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆಯಂತೆ. ಮುಂದುವರಿದು ಆಕೆ ಪುರುಷ ಮತ್ತು ಮಹಿಳೆಯ ಸಮ್ಮತಿಯಿಂದ ಮಾತ್ರ ಲೈಂಗಿಕ ಸಂಪರ್ಕ ನಡೆಯಲು ಸಾಧ್ಯ. ಇದನ್ನು ಬಲಾತ್ಕಾರ ಎನ್ನಲಾಗುವುದಿಲ್ಲ. ನಿರಂತರವಾಗಿ ಅತ್ಯಾಚಾರ ಎಸಗಲು ಸಾಧ್ಯವೆ ಇಲ್ಲ ಎಂದು ತೀರ್ಮಾನಿಸಿದ್ದಾರೆ!


ನೇಸರ್ಗಿಯವರಂತೂ ವಿವೇಚನೆ ಇಲ್ಲದವರಂತೆ ನಾಲಿಗೆ ಹರಿಯಬಿಟ್ಟಿದ್ದಾರೆ. ಧರ್ಮ ಹಾಗೂ ಧರ್ಮಗುರುಗಳನ್ನು ನಾಶ ಮಾಡಲು ಶೂರ್ಪನಖಿಯರು ಜನ್ಮತಾಳಿದ್ದು ಇವರಿಂದ ಸ್ವಾಮೀಜಿಯನ್ನು ರಕ್ಷಿಸಲು ಮಹಿಳೆಯರು ಸೇನೆಯೊಂದನ್ನು ಕಟ್ಟಬೇಕಿದೆ....... ಎಂದ ಆಕೆ, ಕಾವಿ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವ ಸಂಘಟನೆಗಳನ್ನು ಬೇರು ಸಮೇತ ಕಿತ್ತೊಗೆಯಲು ಕರೆಕೊಟ್ಟಿದ್ದಾರೆ. 


ಮಹಿಳಾ ಆಯೋಗದಲ್ಲಿ ಹಿಂದೆ ಇದ್ದವರು ಮತ್ತು ಈಗ ಇರುವವರೇ ಈ ತೆರನಾಗಿ ಪೂರ್ವಗ್ರಹಪೀಡಿತರಾದರೆ ಆಯೋಗದ ತನಿಖೆಗಳು ನಿಷ್ಪಕ್ಷಪಾತವಾಗಿರುತ್ತವೆ, ದೂರುದಾರರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಳ್ಳುವುದಾದರೂ ಹೇಗೆ? ಮಾಜಿ ಅಧ್ಯಕ್ಷೆಯ ರಾಜಕೀಯ ಒಲವುಗಳು ರಾಘವೇಶ್ವರ ಸ್ವಾಮಿಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ರಾಜಕೀಯ ಪಕ್ಷದ ಕಡೆಗೇ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಮಾನ್ಯರು ಸದ್ಯ ಆಯೋಗದ ಪದಾಧಿಕಾರಿಯಲ್ಲ ಎಂದುಕೊಂಡರೂ ಆಯೋಗದ ಹಾಲಿ ಸದಸ್ಯೆಯಾದ ಸುಮನ್‌ರವರು ಹೀಗೆ ಪೂರ್ವಗ್ರಹಪೀಡಿತರಂತೆ ಮಾತಾಡಲು ಕಾರಣವೇನು? ಬಹುಶಃ ಇದನ್ನು ಎರಡು ವಿಧಗಳಲ್ಲಿ ಅರ್ಥೈಸಿಕೊಳ್ಳಬಹುದು. ಒಂದು, ಇದು ಅವರ ವೈಯಕ್ತಿಕ ಅಭಿಪ್ರಾಯ ಆಗಿರಬಹುದು. ಆದರೆ ಆಯೋಗದ ಸದಸ್ಯೆಯಾಗಿರುವ ಆಕೆಗೆ ವಿಚಾರಣೆಗೆ ಬಾಕಿ ಇರುವ ಪ್ರಕರಣದ ಕುರಿತು ತನ್ನ ವೈಯಕ್ತಿಕ, ಪಕ್ಷಪಾತೀಯ ನಿಲುವನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸುವ ಅಧಿಕಾರ ಇಲ್ಲ. ಆದುದರಿಂದಲೆ ಆಕೆಯ ಈ ರೀತಿಯ ಹೇಳಿಕೆಗಳನ್ನು ಓದಿದ ಅನೇಕರು ಆಕೆ ಪರೋಕ್ಷವಾಗಿ ಆಯೋಗದ ಅರ್ಥಾತ್ ಸರಕಾರದ ನಿಲುವುಗಳನ್ನು ಪ್ರತಿಬಿಂಬಿಸುತ್ತಿದ್ದಾರೆಯೇ ಎಂಬ ಸಂದೇಹವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹದೊಂದು ಸಂದೇಹ ಸಂಪೂರ್ಣ ನಿರಾಧಾರವೆಂದು ಹೇಳಲಾಗುವುದಿಲ್ಲ.

ಏಕೆಂದರೆ ಮೊದಲನೆ ಸಂತ್ರಸ್ತೆ ಪ್ರೇಮಲತಾರ ದೂರು ಸ್ವೀಕರಿಸಲು ವಿಳಂಬಿಸಿರುವುದರಿಂದ ಆರಂಭಿಸಿ, ದಂಪತಿ ವಿರುದ್ಧವೇ ಪ್ರಕರಣ ದಾಖಲಾಗಿರುವುದು; ಪೊಲೀಸರು ಚಾತುರ್ಮಾಸ್ಯದ ನೆಪವನ್ನು ಮಾನ್ಯಮಾಡಿ ಸ್ವಾಮಿಯನ್ನು ಬಂಧಿಸದಿರುವುದು; ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿದಿರುವುದು; ವೈದ್ಯಕೀಯ ಪರೀಕ್ಷೆಯಲ್ಲಿ ಸಂತ್ರಸ್ತೆಯ ಬಟ್ಟೆಯ ಮೇಲೆ ಇದ್ದುದು ಸ್ವಾಮಿಯ ವೀರ್ಯವೇ ಎಂದು ಸಾಬೀತಾಗಿದ್ದರೂ, ಇದೀಗ ಮತ್ತೋರ್ವ ಸಂತ್ರಸ್ತೆಯೂ ಅತ್ಯಾಚಾರದ ದೂರು ದಾಖಲಿಸಿದರೂ ಆರೋಪಿಯನ್ನು ಇದುವರೆಗೆ ಬಂಧಿಸದಿರುವುದು; ಸಿಐಡಿ ತನಿಖೆಯಲ್ಲಿ ಆಗುತ್ತಿರುವ ವಿಳಂಬ; ಇನ್ನೂ ಆರೋಪಪಟ್ಟಿ ಸಲ್ಲಿಸದಿರುವುದು ಇವೇ ಮೊದಲಾದ ವಿದ್ಯಮಾನಗಳು ಇದನ್ನೆಲ್ಲ ಗಮನಿಸುತ್ತಿರುವ ಜನರ ಮನಸ್ಸಿನಲ್ಲಿ ಸರಕಾರವೇ ಸ್ವಾಮಿಯ ಬೆಂಬಲಕ್ಕೆ ನಿಂತಿದೆಯೇನೋ ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತಿವೆ. ಆದುದರಿಂದ ಇಂತಹ ಅನುಮಾನಗಳಿಗೆ ಆಸ್ಪದವಿರದಂತೆ ತನ್ನ ನಿಷ್ಪಕ್ಷಪಾತತೆಯನ್ನು ಮತ್ತು ನ್ಯಾಯಪರತೆಯನ್ನು ರಾಜ್ಯದ ಜನತೆಗೆ ತೋರ್ಪಡಿಸುವ ಗುರುತರ ಹೊಣೆಗಾರಿಕೆ ಸರಕಾರದ ಮೇಲಿದೆ. ಇಲ್ಲವಾದರೆ ಮತದಾರ ಜನತೆಯ ಅನುಮಾನಗಳು ಹೆಚ್ಚುತ್ತಾ ಹೆಚ್ಚುತ್ತಾ ಗಾಢನಂಬಿಕೆಗಳಾಗಿ ಪರಿವರ್ತನೆಗೊಳ್ಳಬಹುದು. ಇದರ ಅಂತಿಮ ಪರಿಣಾಮ ಏನೆಂದು ಸರಕಾರ ಯೋಚಿಸಬೇಕು.
**********

30 ಸೆ ಬೆಂಗಳೂರ : ಕೇಂದ್ರ ಸಾಹಿತ್ಯ ಅಕಾಡಮಿ-ಡಾ ಕಲಬುರ್ಗಿ ನುಡಿನಮನInline image 1


Inline image 1

ಅ 2 ಕವಲಕ್ಕಿ ಟು ಹೊನ್ನಾವರ್ - ‘ನಮ್ಮ ನಡಿಗೆ, ಸ್ವಾಯತ್ತ-ಸ್ವಚ್ಛ ಗ್ರಾಮದೆಡೆಗೆ’ಬಂಧುಗಳೇ,

 
ಮೋಹನದಾಸ ಕರಮಚಂದ ಗಾಂಧಿ ಗ್ರಾಮಸ್ವರಾಜ್ಯದ ಕನಸು ಕಂಡವರು. ಆರ್ಥಿಕವಾಗಿ ಅಷ್ಟೇ ಅಲ್ಲ, ಸಾಮಾಜಿಕ ಹಾಗೂ ರಾಜಕೀಯ ಅಧಿಕಾರದ ದೃಷ್ಟಿಯಿಂದ ಪ್ರತಿ ಗ್ರಾಮವೂ ಸ್ವತಂತ್ರವಾಗಿ, ಸ್ವಾಯತ್ತವಾಗಿ, ಸುಸ್ಥಿರ ಬದುಕನ್ನು ಹೊಂದಬೇಕೆಂದು ಬಯಸಿದವರು. ಭ್ರಷ್ಟಾಚಾರ ಮುಕ್ತ ಪ್ರಾಮಾಣಿಕ ಬದುಕನ್ನು ಕೇವಲ ಸಾರ್ವಜನಿಕ ಪ್ರತಿಪಾದನೆಯಾಗಿಸದೆ ಅದರಂತೆಯೇ ಬದುಕಿ ತೋರಿಸಿದ ಅಪರೂಪದ ರಾಜಕೀಯ ನಾಯಕ. ವೈಯಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡುತ್ತಿದ್ದ; ಸರಳ ಹಾಗೂ ಶ್ರಮದ ಬದುಕನ್ನು ಪ್ರತಿಪಾದಿಸುತ್ತಿದ್ದ ಅವರ ಜೀವನ ರೀತಿ ಮಾರುಕಟ್ಟೆ ಯುಗದ ಈ ದಿನಗಳಲ್ಲಿ ಬಹು ಅನುಕರಣೀಯ.

ಆದರೆ ನಾವೀಗ ಅವರು ಹುಟ್ಟಿದ, ತೀರಿಕೊಂಡ ದಿನಗಳನ್ನು ನೆನಪಿಸಿಕೊಂಡು ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತೇವೆ; ನಿಜದ ಗಾಂಧಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಸೋತಿದ್ದೇವೆ. ಮತ್ತೊಂದು ಅಕ್ಟೋಬರ್ ೨ ಬರುತ್ತದೆ. ಪ್ರತಿ ವರ್ಷದಂತೆ ಗಾಂಧಿ ಕುರಿತು ನಾಲ್ಕು ಮಾತನಾಡಿ ಅದೂ ಮುಗಿದು ಹೋಗುತ್ತದೆ. ಕೋಟ್ಯಂತರ ರೂಪಾಯಿಯ ಯೋಜನೆಗಳು ಘೋಷಿಸಲ್ಪಡುತ್ತವೆ, ನಂತರ ಅವೂ ಕಡತದಲ್ಲಿ ಕಳೆದುಹೋಗುತ್ತವೆ. ಸಾರ್ವಜನಿಕ ಉದ್ದಿಮೆಗಳು ಒಂದಾದ ಮೇಲೊಂದು ಕಣ್ಮುಚ್ಚುತ್ತ ಬಹುರಾಷ್ಟ್ರೀಯ ಕಂಪನಿಗಳಿಗೆ ನಮ್ಮ ನೆಲ, ಜಲ ಮಾರಿಕೊಳ್ಳುತ್ತಿರುವ ನಾವು ಅಪ್ಪಟ ಸ್ಥಳೀಯತೆಯನ್ನು ಪ್ರೋತ್ಸಾಹಿಸುತ್ತಿದ್ದ ಸ್ವದೇಶಿ ಗಾಂಧಿಗೆ ರಾಷ್ಟ್ರಪಿತನೆಂಬ ಬಿರುದು ಕೊಟ್ಟು ಚೌಕಟ್ಟಿನಲ್ಲಿ ಬಂಧಿಸಿಟ್ಟಿದ್ದೇವೆ. 

ಇದರ ನಡುವೆ ನಿಜವಾದ ಗಾಂಧಿ ಮೌಲ್ಯಗಳು ಜೀವಂತ ಇರುವುದಾದರೂ ಎಲ್ಲಿ? ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಅವನ್ನು ನಾವು ಅಳವಡಿಸಿಕೊಂಡಿದ್ದೇವೆಯೇ ಎಂದು ನೋಡಹೊರಟರೆ ನಿರಾಸೆಯಾಗುತ್ತದೆ. ಅದರಲ್ಲೂ ಸ್ವತಂತ್ರ ಭಾರತದಲ್ಲಿ ಸ್ವಾಯತ್ತ ಗ್ರಾಮಗಳಿರಬೇಕೆಂಬ ಗಾಂಧಿ ಕನಸಿನ ಗ್ರಾಮಗಳಾದರೋ ಇವತ್ತು ನಿರುದ್ಯೋಗ ಸಮಸ್ಯೆ, ಜಾತೀಯತೆ, ರಾಜಕೀಯ ಗುಂಪುಗಾರಿಕೆ, ಅಭಿವೃದ್ಧಿ ಯೋಜನೆಗಳಿಂದಾದ ಪರಿಸರ ನಾಶದ ಕಾರಣವಾಗಿ ಸರಳ, ಸ್ವಾಯತ್ತ, ಸಹಬಾಳ್ವೆಯ ಜೀವನಶೈಲಿಯನ್ನು ಕಳೆದುಕೊಳ್ಳುತ್ತಿವೆ.

ಹೀಗಿರುತ್ತ ಗ್ರಾಮಗಳು ಗಾಂಧಿ ವಿಚಾರಗಳನ್ನು ಅರಿಯಲು; ಗ್ರಾಮಗಳೊಡನೆ ನಗರವಾಸಿಗಳೂ ಸಹಾ ಸರಳ, ಸ್ವಚ್ಛ ಬದುಕಿನ ಜೀವನ ರೀತಿಗಳನ್ನು ಅಳವಡಿಸಿಕೊಳ್ಳಲು; ಗಾಂಧಿ ಕನಸಿನಾಚೆಗೂ ವಿಸ್ತರಿಸಿಕೊಂಡ ಆರೋಗ್ಯಕರ ಗ್ರಾಮ ಸಮಾಜ ಸಾಕಾರಗೊಳ್ಳಲು ಜನಜಾಗೃತಿ ಮೂಡಿಸುವ ಆಶಯದಿಂದ ‘ಕವಲಕ್ಕಿ ಮಹಿಳಾ ಮತ್ತು ನಾಗರಿಕರ ವೇದಿಕೆ’ಯು ಕವಲಕ್ಕಿ ಊರಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸುತ್ತಮುತ್ತಲ ಊರಿನ ಗ್ರಾಮಸ್ಥರು, ಸಂಘಟನೆಗಳ ಸಹಾಯದಿಂದ ‘ನಮ್ಮ ನಡಿಗೆ, ಸ್ವಾಯತ್ತ-ಸ್ವಚ್ಛ ಗ್ರಾಮದೆಡೆಗೆ’ ಕಾಲ್ನಡಿಗೆ ಜಾಥಾವನ್ನು ಆಯೋಜಿಸುತ್ತಿದೆ. ಅಕ್ಟೋಬರ್ ೨ನೇ ತಾರೀಖು ಕವಲಕ್ಕಿಯ ಸುತ್ತಮುತ್ತಲ ಊರುಗಳಾದ ಅಳ್ಳಂಕಿ, ಹಡಿನಬಾಳ, ನಗರೆ, ನಿರ್ವತ್ತಿಕೊಡ್ಲ ಮತ್ತಿತರ ಗ್ರಾಮಗಳ ನಾಗರಿಕರು ಬೆಳಿಗ್ಗೆ ೬.೩೦ಕ್ಕೆ ಕಾಲ್ನಡಿಗೆಯಲ್ಲಿ ಜಾಥಾ ಹೊರಟು ಬಾಳೆಗದ್ದೆ, ಭಾಸ್ಕೆರಿ, ಶೇಡಿಬಾಳ, ಬಂಕನಹಿತ್ಲ, ಆರೊಳ್ಳಿ, ಕುಳಕೋಡದ ಸಂಘಟನೆಗಳು ಹಾಗೂ ಗ್ರಾಮಸ್ಥರೊಡನೆ ಸೇರಿಕೊಂಡು ಹೊನ್ನಾವರ ತಲುಪಲಿದ್ದಾರೆ. ಬಜಾರದ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಪಟ್ಟಣ ಪಂಚಾಯತ್‌ನ ಟಪ್ಪರ್ ಹಾಲಿನಲ್ಲಿ ಸಮಾವೇಶಗೊಂಡು, ಹೊನ್ನಾವರದ ಗಣ್ಯರಾದ ಜಿ. ಯು. ಭಟ್, ಹುಸೇನ್ ಖಾದ್ರಿ, ಶಾಂತಿ ನಾಯಕ ಮತ್ತಿತರರ ಜೊತೆ ಸಂವಾದ ನಡೆಸಿ ನಂತರ ತಹಶೀಲ್ದಾರ್ ಆಫೀಸಿಗೆ ತೆರಳಿ ಜ್ಞಾಪಕ ಪತ್ರ ಸಲ್ಲಿಸಲಿದ್ದಾರೆ. 

ಗಾಂಧಿ ಜಯಂತಿಯಂದು ಗ್ರಾಮಸ್ಥರು ನಡೆಸಲು ಉದ್ದೇಶಿಸಿರುವ ಈ ಶಾಂತಿಯುತ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಿ ಪ್ರೋತ್ಸಾಹಿಸಬೇಕಾಗಿ ಕವಲಕ್ಕಿ ಊರ ನಾಗರಿಕರು ಮನವಿ ಮಾಡಿದ್ದಾರೆ. 

ಇದಕ್ಕೆ ನಿಮ್ಮ ಬೆಂಬಲವೂ ಇದೆಯೆಂದೆ ಭಾವಿಸಿದ್ದೇವೆ.
                      

- ಕವಲಕ್ಕಿ ಮಹಿಳಾ ಮತ್ತು ನಾಗರಿಕರ ವೇದಿಕೆ
                                                                         ಕವಲಕ್ಕಿ, ಹೊನ್ನಾವರ ತಾ. ಉ.ಕ. ಜಿಲ್ಲೆ.

ಅಕ್ಟೊಬರ್ 1ಕೊಪ್ಪಳ : ಕಲಬುರ್ಗಿ ಹತ್ಯೆ ಖಂಡಿಸಿ ರ್ಯಾಲಿ ಮತ್ತು ಸಭೆ

Monday, September 28, 2015

ಸೆ 30 ಚಿತ್ರದುರ್ಗ : ಡಾ ಕಲಬುರ್ಗಿ ಹತ್ಯೆ ಖಂಡಸಿ ಧರಣಿ ಸತ್ಯಾಗ್ರಹ
ಸೆ 30, ಬೆಂಗಳೂರು : ಡಾ. ಕಲಬುರ್ಗಿ ಹತ್ಯೆ ಖಂಡಿಸಿ ಪ್ರತಿಭಟನೆ

ಸೆ 29 ರಾಣೇಬೆನ್ನೂರು : 'ಯುವ ಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್' ವಿಚಾರಗೋಷ್ಟಿ
ವಿಜಯ ಕರ್ನಾಟಕ ತಿರಸ್ಕರಿಸಿದ ಅಬ್ದುಲ್ ರಷೀದ್ ಕಾಲಂ ಬರೆಹ 'ಕಾಲುಚಕ್ರ'ನೈತಿಕ ಪೋಲೀಸರಿಗೆ ಮಂಗಳೂರಿನ ಜನ ಮಾತ್ರ ಹೆದರಿ ಹೈರಾಣಾಗಿದ್ದಾರೆ ಅಂತ ಅಂದುಕೊಂಡಿದ್ದೆ.ಆದರೆ ಬೆಂಗಳೂರಿನ ಪತ್ರಿಕಾಲಯಗಳಲ್ಲೂ ಅದು ಇದೆ ಎಂದು ವಾರ ಗೊತ್ತಾಯಿತು.

ಕಾರಣಕ್ಕಾಗಿಯೇ ವಾರ ನಾನು ಬರೆದ ಕಾಲುಚಕ್ರ ಅಂಕಣ ಪತ್ರಿಕೆಯೊಂದರಲ್ಲಿ ಪ್ರಕಟವಾಗಲಿಲ್ಲ ಎಂದು ಗೊತ್ತಾದಾಗ ನಮ್ಮ ಮುಂದಿನ ದಿನಗಳ ಕುರಿತು ಈಗಾಗಲೇ ಇರುವ ಆತಂಕಗಳು ಇನ್ನೂ ಹೆಚ್ಚಾದವು

ನಾನು ಬರೆದ ಅಂಕಣವನ್ನು ಕೆಳಗೆ ಹಾಗೇ ಹಾಕುತ್ತಿರುವೆ.

ಇದರಲ್ಲಿ ಅಡಕವಾಗಿರುವ ಯಾವ ಕಾರಣಕ್ಕಾಗಿ ಅದು ಪ್ರಕಟವಾಗಿರಲ್ಲಿಕ್ಕಿಲ್ಲ ಎಂದು ಯಾರಾದರೂ ಜಾಣರು ಹೇಳಿದರೆ ಕೃತಜ್ಜನಾಗಿರುವೆ.ಕಳೆದ ವರ್ಷಗಳಿಂದ ಬರೆಯುತ್ತಿದ್ದ ಅಂಕಣವನ್ನು ಇನ್ನು ಮುಂದೆ ದಯವಿಟ್ಟು ಬರೆಯಲಾರೆ ಎಂದು ತಿಳಿಸಿರುವೆ.
ಶುಭಂ ಮಂಗಳಂ!!

-ಅಬ್ದುಲ್ ರಷೀದ್


ಕಾಲುಚಕ್ರ 

ಒಂದು ಒಳ ಉಡುಪಿನ ಚಿಂತನೆ

ಮಂಗಳೂರಿನ ಕಡೆ ಬರುವುದೇ ಇಲ್ಲಯಾಕೆ?.ಕಡಲನ್ನಾದರೂ ಕಾಣಬೇಕೆಂದು ಅನಿಸುವುದಿಲ್ಲವಾ? ಎಷ್ಟು ಕ್ರೂರಿ ನೀನು! ಎಂದು ಅವಳು ಸುಳ್ಳುಸುಳ್ಳೇ ಉಲಿಯುತ್ತಿದ್ದಳು.

ಬಹಳ ಹಳೆಯ ಕಾಲದ ಗೆಳತಿ.ನಡುನಡುವೆ ಬೇಕುಬೇಕಾದಾಗ ಮರೆತೂ ಬಿಡುತ್ತಿದ್ದವಳು
ಬೇಡಾ ಮಾರಾಯ್ತಿ ನಿನ್ನ ಮಂಗಳೂರಿನ ಸಹವಾಸವೂ ಸಾಕು ನಿನ್ನ ಒಯ್ಯಾರವೂ ಸಾಕುಅಂತ ಗೊಣಗಿದೆ
ನಿನಗೆ ವಯಸ್ಸಾಗಿರುವುದು ಈಗ ಗೊತ್ತಾಯಿತುಎಂದು ಛೇಡಿಸಿದಳು
ಇದು ವಯಸ್ಸಿನ ಪ್ರಶ್ನೆ ಅಲ್ಲ.ಒಳ ಉಡುಪಿನ ಪ್ರಶ್ನೆಅಂದೆ
ಬಿಡಿಸಿ ಹೇಳು ಗುರುವೇಅಂದಳು.

ನೋಡು ನೀನು ಸ್ತ್ರೀ, ನಾನು ಪ್ರುರುಷ.ನಿನ್ನ ಹೆಸರು ಕೇಳಿದರೆ ಒಂದು ಧರ್ಮದ ಹೆಸರು ಗೊತ್ತಾಗುವುದು.ನನ್ನ ಹೆಸರು ಕೇಳಿದರೆ ಇನ್ನೊಂದು ಧರ್ಮದ ಹೆಸರು ಗೊತ್ತಾಗುವುದು.ನಾವಿಬ್ಬರೂ ಮಂಗಳೂರಲ್ಲಿ ಒಂದು ಕಡೆ ಕುಳಿತು ಐಸ್ ಕ್ರೀಂ ತಿಂದರೂ ಸಾಕು.ಎನ್ನಯ ಹೊರ ಉಡುಪನ್ನು ಬಿಚ್ಚಿ ಕಂಬಕ್ಕೆ ಕಟ್ಟಿಹಾಕಿ ಬರಿಯ ಒಳ ಉಡುಪಿನಲ್ಲಿ ನಿಲ್ಲಿಸುವರು. ನೂರಾರು ಪ್ರಶ್ನೆಗಳನ್ನು ಕೇಳಿ ಹಂಗಿಸಿ ಅಳಿಸುವರು.ಆಗ ನಾನು ಕೇವಲ ಒಳ ಉಡುಪಿನಲ್ಲಿಯೇ ಅದನ್ನೆಲ್ಲ ಕೇಳಿಕೊಂಡು ರಣರಣ ಬಿಸಿಲಿನಲ್ಲಿ ನಿಲ್ಲಬೇಕಾಗುತ್ತದಲ್ಲಾ.ಆಗ ನಮಗಿಬ್ಬರಿಗೂ ಇಷ್ಟವಾದ ಯಾವ ಸಂಗೀತವೂ, ಸಾಹಿತ್ಯವೂ, ಕಡಲೂ, ಮಳೆಯೂ, ಬಂಗುಡೆ ಮೀನೂ, ಕುಚ್ಚಲಕ್ಕಿ ಅನ್ನವೂ ನೆರವಿಗೆ ಬರಲಾರದು.ಕೇವಲ ಒಳ ಉಡುಪೊಂದೇ ಜಗದ ಕಣ್ಣಿಗೆ ಎದ್ದು ತೋರುವುದುಎಂದು ಸ್ವಲ್ಪ ಜಾಸ್ತಿಯೇ ನಾಟಕೀಯವಾಗಿ ಅಂದೆ.
ನಿಂಗೆ ಅರೆ ಮರ್ಲುಅಂದಳು

ಮರ್ಲು ಅಂದರೆ ತುಳುವಿನಲ್ಲಿ ಹುಚ್ಚು ಎಂದು ಅರ್ಥ.

ಅರೆ ಮರ್ಲು ಅಂದರೆ ಅರ್ದ ಹುಚ್ಚು ಅಂತ.
ಅರ್ದ ಹುಚ್ಚು ಇರುವುದರಿಂದಲೇ ನಮ್ಮಂತವರು ಸ್ವಾಸ್ತ್ಯವಾಗಿರುವುದು ಅಂತಲೂ ಕೆಲವೊಮ್ಮೆ ಅವಳೇ ಅನ್ನುತ್ತಿದ್ದಳು.

ಇಂತಹ ಹುಚ್ಚಿನ ನನ್ನ ಹಿಂದೆ ಕರು ಹಿಂಬಾಲಿಸುವ ಹಾಗೆ ಅಂಬಾ ಅಂತ ಹಿಂಬಾಲಿಸುವೆಯಲ್ಲಾ ನಿನಗೆ ಪೂರ್ತಿ ಹುಚ್ಚುಎಂದು ನಾನೂ ರೇಗಿಸುತ್ತಿದ್ದೆ.
ಅವಳಿಗೆ ಕಡಲಿನ, ಹಸಿರಿನ ಮತ್ತು ಮರಳಿನ ಹುಚ್ಚು. ಅವಳ ಮೆದುಳು ಕೋಶದ ಯಾವುದೋ ಒಂದು ಪುಟ್ಟ ಕೋಣೆಯಲ್ಲಿ ಒಂದು ದೊಡ್ಡ ಶೋಕಸಾಗರ ಅಡಗಿದೆಯೆಂದೂ, ಅದರ ರೌಧ್ರ ಮೊರೆತ ಅರ್ಥವಾಗುವುದು ಇನ್ನೊಂದು ಕಡಲಿಗೆ ಮಾತ್ರವೆಂದೂ, ಅವಳ ತಲೆಯೊಳಗಿನ ಶೋಕಸಾಗರದ ಮೊರೆತವನ್ನು ಅರಬೀ ಕಡಲಿನ ನಡು ಮಧ್ಯಾಹ್ನದ ಅಲೆಗಳಿಗೆ ಕೇಳಿಸಬೇಕೆಂದೂ ಅದಕ್ಕಾಗಿ ಕಡಲ ಕೋಡಿಗೆ ಕರೆದುಕೊಂಡು ಹೋಗೆಂದು ದುಂಬಾಲು ಬೀಳುತ್ತಿದ್ದಳು.
ನನಗಲ್ಲ ಮರ್ಲು ನಿನಗೆ ಮರ್ಲುಎಂದು ಒಬ್ಬರಿಗೊಬ್ಬರು ಬೈದುಕೊಂಡೇ ಹಳೆಯ ಬಂದರಿನಲ್ಲಿ ದೋಣಿ ಹತ್ತಿ ಕಡಲ ಕಡೆ ಹೋಗುತ್ತಿದ್ದೆವು.

ಸುಮಾರು ಮೂವತ್ತು ವರ್ಷಗಳ ಹಿಂದೆ.

ಅರಬೀ ಕಡಲೂ, ಗುರುಪುರ ನದಿಯೂ ಆಕಾಶದ ನೀಲಿ ಅನಂತವನ್ನು ಸೇರುವ ಬೆಂಗರೆ. ಒಣಗಿಸಲೆಂದು ಮರಳಲ್ಲಿ ಹುಗಿದಿಟ್ಟ ಒಣಮೀನ ರಾಶಿಯ ಮೇಲೆ ರಾಚುವ ಬಿಸಿಲು ಮತ್ತು ಕೆಟ್ಟ ಪರಿಮಳ, ಬಿಸಿಲಲ್ಲಿ ಹೊಳೆಯುವ ಮರಳು ಮತ್ತು ಕಣ್ಣು ಕತ್ತಲಾಗುವಷ್ಟು ಕೋರೈಸುವ ಅಸಾಧ್ಯ ಬಿಸಿಲು.
ನಾನು ಒಬ್ಬಳೇ ಮರಳಲ್ಲಿ ಉಂಗುಷ್ಟದ ಗುರುತನ್ನು ಒದ್ದೆ ಮರಳಲ್ಲಿ ಮೂಡಿಸುತ್ತಾ ನಡೆಯಬೇಕು.ನೀನು ಹಿಂದಿನಿಂದ ದೂರದಿಂದಲೇ ಹಿಂಬಾಲಿಸಿಕೊಂಡು ಬರಬೇಕು. ಲೋಕದಲ್ಲಿ ಗಂಡಸರು ಸರಿಯಿಲ್ಲ.ಅದಕ್ಕಾಗಿ ನಿನ್ನ ಕಣ್ಗಾವಲು’ 
ಇದು ಅವಳ ಷರತ್ತು.
ನನಗೆ ಬಿಸಿಲಲ್ಲಿ ಕಡಲನ್ನು ನೋಡುವ ಹುಚ್ಚು.ಅವಳಿಗೆ ನಡು ಮಧ್ಯಾಹ್ನ ತನ್ನ ತಲೆಯೊಳಗಿನ ಮೊರೆತಗಳನ್ನ ಕಡಲಿಗೆ ಕೇಳಿಸುವ ಕಿಂಕರ್ತವ್ಯ.
ಯಾರೂ ಇಲ್ಲದ ಕಡಲ ಮರಳಲ್ಲಿ ತಾವೇ ಜಗದ ಮೊದಲ ಸೃಷ್ಟಿಗಳು ಎಂಬಂತೆ ಚಲಿಸುವ ಕಿರಿ ಏಡಿಗಳು ಮತ್ತು ಬೆಳ್ಳನೆಯ ಹಕ್ಕಿಗಳು ತೇಲಿ ಬರುವ ಗಾಳಿ ಮತ್ತು ಎಂತದೋ ಸಂಗೀತವನ್ನು ಕೇಳಿಸಿಕೊಂಡು ಯಾರೂ ಅಲ್ಲದ ಅವಳನ್ನು ಅನತಿ ದೂರದಲ್ಲಿ ಹಿಂಬಾಲಿಸಿಕೊಂಡು ನಡೆಯುತ್ತಿರುವ ನಾನು.

ಬಬ್ಬರ್ಯ ಬಂಟನ ಭೂತಸ್ಥಾನ ಕಳೆದು, ಜುಮ್ಮಾ ಮಸೀದಿ ಕಳೆದು,ವಿಷ್ಣು ವಿಠೋಭ ಬಜನಾ ಮಂದಿರ ಕಳೆದು, ಫಾತಿಮಾ ಚರ್ಚ್ ಕಳೆದರೂ ಅದು ಯಾವುದರ ಪರಿವೆಯೂ ಇಲ್ಲದೆ ತಣ್ಣೀರು ಬಾವಿಯ ಕಡಲ ತೀರದೆಡೆಗೆ ನಾವು ನಡೆದು ಹೋಗುತ್ತಿದ್ದೆವು. ನಡುವಲ್ಲಿ ದಣಿವಾದಾಗ ಒಂದು ನೆರಳು ಸಿಕ್ಕರೆ ಕುಳಿತುಕೊಳ್ಳುತ್ತಿದ್ದವು.

ಆದರೆ ಮಂಗಳೂರಿನ ನೈತಿಕ ಪೋಲೀಸರ ಪರಿಕರಗಳು ಈಗಿರುವಷ್ಟು ಹರಿತವಾಗಿರಲಿಲ್ಲ.

ನೀವು ಯಾರು ಎಂದು ಕೇಳುತ್ತಿದ್ದರು
ಹೇಳುತ್ತಿದ್ದೆವು
ಗಂಡ ಹೆಂಡತಿಯರಾ ಎಂದು ಕೇಳುತ್ತಿದ್ದರು
ಇಲ್ಲ ಎನ್ನುತ್ತಿದ್ದೆವು
ಒಡ ಹುಟ್ಟಿದವರಾ ಎಂದು ಕೇಳುತ್ತಿದ್ದರು
ಇಲ್ಲ ಎನ್ನುತ್ತಿದ್ದೆವು
ಲವ್ವರ್ಸಾ ಎಂದು ಕೇಳುತ್ತಿದ್ದರು
ಅಯ್ಯೋ ದೇವರೇ ಇಲ್ಲ ಎನ್ನುತ್ತಿದ್ದೆವು
ಮತ್ತೆ ಯಾಕೆ ಇಲ್ಲಿ ಹೊತ್ತಲ್ಲಿ ನೀವು ಇಬ್ಬರೇ ಎಂದು ಕೇಳುತ್ತಿದ್ದರು
ನಡು ಮಧ್ಯಾಹ್ನದ ಹೊತ್ತು ಕಡಲ ಮರಳಿನ ಮೇಲೆ ನಡೆಯುತ್ತಾ ಸ್ವಲ್ಪ ಕೊರಳೆತ್ತಿ ಕಣ್ಣು ಮಿಚ್ಚಿಕೊಂಡು ಕಿವಿಕೊಟ್ಟರೆ ಆಕಾಶದಲ್ಲಿ ದೈವಗಳೂ, ದೇವತೆಯರೂ, ಜಿನ್ನುಗಳೂ, ದೇವದೂತರೂ ಸಾಲುಸಾಲಾಗಿ ನಡೆದುಕೊಂಡು ಹೋಗುವ ಸದ್ದು ಕೇಳಿಸುವುದು ಬೇಕಾದರೆ ಕೇಳಿ ಎಂದು ಅವಳು ನಾಟಕೀಯವಾಗಿ ನೈತಿಕ ಪೋಲೀಸರಿಗೆ ಸುಳ್ಳು ಹೇಳುತ್ತಿದ್ದರು.
ಅವರೇನೂ ನಂಬುತ್ತಿರಲಿಲ್ಲ

ಆದರೆ ಈಗಿನ ಹಾಗೆ ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿ ಹಾಕುತ್ತಿರಲಿಲ್ಲ.
ಹಾಗಾಗಿ ಹಾಕಿಕೊಂಡಿರುವುದು ಹರಿದು ಚಿಂದಿಯಾದ ಒಳ ಉಡುಪಾ ಅಥವಾ ಡಿಸೈನರ್ ಒಳ ಉಡುಪಾ ಎಂದು ನನಗೂ ಆತಂಕ ಆಗುತ್ತಿರಲಿಲ್ಲ.
ಅವರು ಹೇಳುತ್ತಿದ್ದುದು ಇಷ್ಟೇ
ನೋಡಿ ನಾವು ಒಳ್ಳೆ ಜನ ನಿಮಗೇನೂ ಮಾಡುವುದಿಲ್ಲ.ಬೇಕಾದರೆ ಸ್ವಲ್ಪ ಹೊತ್ತು ಕೂತು ಹೋಗಿ.ಆದರೆ ಆಚೆ ಕಡೆ ನೆರಳಿದೆಯಲ್ಲ ಅಲ್ಲಿ ಕೂರಬೇಡಿ ಅವರು ಒಳ್ಳೆಯವರಲ್ಲ.ನಿಮಗೆ ತೊಂದರೆ ಕೊಡಬಹುದು.
ಕಡೆಯ ನೆರಳಿನವರೂ ಕಡೆಯವರ ಕುರಿತು ಹೀಗೇ ಹೇಳುತ್ತಿದ್ದರು.
ನೋಡಿ ನಾವು ಒಳ್ಳೆ ಜನ ನಿಮಗೇನೂ ಮಾಡುವುದಿಲ್ಲ.ಬೇಕಾದರೆ ಸ್ವಲ್ಪ ಹೊತ್ತು ಕೂತು ಹೋಗಿ.ಆದರೆ ಆಚೆ ಕಡೆ ನೆರಳಿದೆಯಲ್ಲ ಅಲ್ಲಿ ಕೂರಬೇಡಿ ಅವರು ಒಳ್ಳೆಯವರಲ್ಲ.ನಿಮಗೆ ತೊಂದರೆ ಕೊಡಬಹುದು
ಏಕೆಂದರೆ ಅವರಿಬ್ಬರ ದೇವರುಗಳೂ ಮತ್ತು ಪ್ರಾರ್ಥನಾ ಮಂದಿರಗಳೂ ಬೇರೆ ಬೇರೆಗಾಗಿದ್ದವು.ಅವರಿಗೆ ತಾವು ಒಳ್ಳೆಯವರು ಮತ್ತು ಕಡೆಯವರು ಕೆಟ್ಟವರು ಎಂಬುದು ಖಚಿತವಾಗಿ ಗೊತ್ತಿತ್ತು,
ಏಕೆಂದರೆ ಅವರವರ ದೇವರುಗಳು ಅವರವರಿಗೆ ಹಾಗೆ ಹೇಳಿಕೊಟ್ಟಿದ್ದರು.

ಹಾಗಾಗಿ ತಾವು ಸುಳ್ಳು ಹೇಳಿದರೂ ತಮ್ಮ ದೇವರುಗಳು ಸುಳ್ಳು ಹೇಳಲಾರರು ಎಂಬ ಅನುಪಮ ಭಕ್ತಿ ಅವರುಗಳದಾಗಿತ್ತು.

ಆದರೆ ನಮಗಿಬ್ಬರಿಗೆ ನಾವು ಒಳ್ಳೆಯವರೋ ಕೆಟ್ಟವರೋ ಎಂದು ಖಚಿತವಾಗಿ ಗೊತ್ತಾಗುತ್ತಿರಲಿಲ್ಲ.ಅವಳಿಗೆ ಅವಳ ತಲೆಯೊಳಗಿನ ಅನೂಹ್ಯ ಶೋಕಸಾಗರದ ಚಿಂತೆ. ಎನಗೆ ನಡುಬಿಸಿಲಲ್ಲಿ ಕಡಲ ಮರಳಿಂದ ಕೇಳಿಸುವ ಸುಳ್ಳುಸುಳ್ಳೇ ಸಂಗೀತದ ಚಿಂತೆ.

ಸುಮ್ಮನೇ ನಡೆದು ತಣ್ಣೀರುಬಾವಿಯಲ್ಲಿ ಬಸ್ಸು ಹತ್ತಿ ನಮ್ಮನಮ್ಮ ಮನೆ ಸೇರುತ್ತಿದ್ದೆವು.
ಅವಳಿಗೆ ಇನ್ನೂ ನೈತಿಕ ವಿವೇಕ ಬಂದಿಲ್ಲ. ಹಾಗಾಗಿ ಹಾಗೇ ಚಂದವಾಗಿ ಹಾಡಿಕೊಂಡು ಬದುಕುತ್ತಿದ್ದಾಳೆ.
ನನಗೋ ಒಳ ಉಡುಪಿನ ಚಿಂತೆ.

ಹಾಗಾಗಿ ಮಂಗಳೂರಿನ ಕಡೆ ತಲೆ ಹಾಕಲಾರೆ ಎಂದಿದ್ದೇನೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...