Tuesday, September 29, 2015

ಅ 2 ಕವಲಕ್ಕಿ ಟು ಹೊನ್ನಾವರ್ - ‘ನಮ್ಮ ನಡಿಗೆ, ಸ್ವಾಯತ್ತ-ಸ್ವಚ್ಛ ಗ್ರಾಮದೆಡೆಗೆ’ಬಂಧುಗಳೇ,

 
ಮೋಹನದಾಸ ಕರಮಚಂದ ಗಾಂಧಿ ಗ್ರಾಮಸ್ವರಾಜ್ಯದ ಕನಸು ಕಂಡವರು. ಆರ್ಥಿಕವಾಗಿ ಅಷ್ಟೇ ಅಲ್ಲ, ಸಾಮಾಜಿಕ ಹಾಗೂ ರಾಜಕೀಯ ಅಧಿಕಾರದ ದೃಷ್ಟಿಯಿಂದ ಪ್ರತಿ ಗ್ರಾಮವೂ ಸ್ವತಂತ್ರವಾಗಿ, ಸ್ವಾಯತ್ತವಾಗಿ, ಸುಸ್ಥಿರ ಬದುಕನ್ನು ಹೊಂದಬೇಕೆಂದು ಬಯಸಿದವರು. ಭ್ರಷ್ಟಾಚಾರ ಮುಕ್ತ ಪ್ರಾಮಾಣಿಕ ಬದುಕನ್ನು ಕೇವಲ ಸಾರ್ವಜನಿಕ ಪ್ರತಿಪಾದನೆಯಾಗಿಸದೆ ಅದರಂತೆಯೇ ಬದುಕಿ ತೋರಿಸಿದ ಅಪರೂಪದ ರಾಜಕೀಯ ನಾಯಕ. ವೈಯಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡುತ್ತಿದ್ದ; ಸರಳ ಹಾಗೂ ಶ್ರಮದ ಬದುಕನ್ನು ಪ್ರತಿಪಾದಿಸುತ್ತಿದ್ದ ಅವರ ಜೀವನ ರೀತಿ ಮಾರುಕಟ್ಟೆ ಯುಗದ ಈ ದಿನಗಳಲ್ಲಿ ಬಹು ಅನುಕರಣೀಯ.

ಆದರೆ ನಾವೀಗ ಅವರು ಹುಟ್ಟಿದ, ತೀರಿಕೊಂಡ ದಿನಗಳನ್ನು ನೆನಪಿಸಿಕೊಂಡು ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತೇವೆ; ನಿಜದ ಗಾಂಧಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಸೋತಿದ್ದೇವೆ. ಮತ್ತೊಂದು ಅಕ್ಟೋಬರ್ ೨ ಬರುತ್ತದೆ. ಪ್ರತಿ ವರ್ಷದಂತೆ ಗಾಂಧಿ ಕುರಿತು ನಾಲ್ಕು ಮಾತನಾಡಿ ಅದೂ ಮುಗಿದು ಹೋಗುತ್ತದೆ. ಕೋಟ್ಯಂತರ ರೂಪಾಯಿಯ ಯೋಜನೆಗಳು ಘೋಷಿಸಲ್ಪಡುತ್ತವೆ, ನಂತರ ಅವೂ ಕಡತದಲ್ಲಿ ಕಳೆದುಹೋಗುತ್ತವೆ. ಸಾರ್ವಜನಿಕ ಉದ್ದಿಮೆಗಳು ಒಂದಾದ ಮೇಲೊಂದು ಕಣ್ಮುಚ್ಚುತ್ತ ಬಹುರಾಷ್ಟ್ರೀಯ ಕಂಪನಿಗಳಿಗೆ ನಮ್ಮ ನೆಲ, ಜಲ ಮಾರಿಕೊಳ್ಳುತ್ತಿರುವ ನಾವು ಅಪ್ಪಟ ಸ್ಥಳೀಯತೆಯನ್ನು ಪ್ರೋತ್ಸಾಹಿಸುತ್ತಿದ್ದ ಸ್ವದೇಶಿ ಗಾಂಧಿಗೆ ರಾಷ್ಟ್ರಪಿತನೆಂಬ ಬಿರುದು ಕೊಟ್ಟು ಚೌಕಟ್ಟಿನಲ್ಲಿ ಬಂಧಿಸಿಟ್ಟಿದ್ದೇವೆ. 

ಇದರ ನಡುವೆ ನಿಜವಾದ ಗಾಂಧಿ ಮೌಲ್ಯಗಳು ಜೀವಂತ ಇರುವುದಾದರೂ ಎಲ್ಲಿ? ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಅವನ್ನು ನಾವು ಅಳವಡಿಸಿಕೊಂಡಿದ್ದೇವೆಯೇ ಎಂದು ನೋಡಹೊರಟರೆ ನಿರಾಸೆಯಾಗುತ್ತದೆ. ಅದರಲ್ಲೂ ಸ್ವತಂತ್ರ ಭಾರತದಲ್ಲಿ ಸ್ವಾಯತ್ತ ಗ್ರಾಮಗಳಿರಬೇಕೆಂಬ ಗಾಂಧಿ ಕನಸಿನ ಗ್ರಾಮಗಳಾದರೋ ಇವತ್ತು ನಿರುದ್ಯೋಗ ಸಮಸ್ಯೆ, ಜಾತೀಯತೆ, ರಾಜಕೀಯ ಗುಂಪುಗಾರಿಕೆ, ಅಭಿವೃದ್ಧಿ ಯೋಜನೆಗಳಿಂದಾದ ಪರಿಸರ ನಾಶದ ಕಾರಣವಾಗಿ ಸರಳ, ಸ್ವಾಯತ್ತ, ಸಹಬಾಳ್ವೆಯ ಜೀವನಶೈಲಿಯನ್ನು ಕಳೆದುಕೊಳ್ಳುತ್ತಿವೆ.

ಹೀಗಿರುತ್ತ ಗ್ರಾಮಗಳು ಗಾಂಧಿ ವಿಚಾರಗಳನ್ನು ಅರಿಯಲು; ಗ್ರಾಮಗಳೊಡನೆ ನಗರವಾಸಿಗಳೂ ಸಹಾ ಸರಳ, ಸ್ವಚ್ಛ ಬದುಕಿನ ಜೀವನ ರೀತಿಗಳನ್ನು ಅಳವಡಿಸಿಕೊಳ್ಳಲು; ಗಾಂಧಿ ಕನಸಿನಾಚೆಗೂ ವಿಸ್ತರಿಸಿಕೊಂಡ ಆರೋಗ್ಯಕರ ಗ್ರಾಮ ಸಮಾಜ ಸಾಕಾರಗೊಳ್ಳಲು ಜನಜಾಗೃತಿ ಮೂಡಿಸುವ ಆಶಯದಿಂದ ‘ಕವಲಕ್ಕಿ ಮಹಿಳಾ ಮತ್ತು ನಾಗರಿಕರ ವೇದಿಕೆ’ಯು ಕವಲಕ್ಕಿ ಊರಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸುತ್ತಮುತ್ತಲ ಊರಿನ ಗ್ರಾಮಸ್ಥರು, ಸಂಘಟನೆಗಳ ಸಹಾಯದಿಂದ ‘ನಮ್ಮ ನಡಿಗೆ, ಸ್ವಾಯತ್ತ-ಸ್ವಚ್ಛ ಗ್ರಾಮದೆಡೆಗೆ’ ಕಾಲ್ನಡಿಗೆ ಜಾಥಾವನ್ನು ಆಯೋಜಿಸುತ್ತಿದೆ. ಅಕ್ಟೋಬರ್ ೨ನೇ ತಾರೀಖು ಕವಲಕ್ಕಿಯ ಸುತ್ತಮುತ್ತಲ ಊರುಗಳಾದ ಅಳ್ಳಂಕಿ, ಹಡಿನಬಾಳ, ನಗರೆ, ನಿರ್ವತ್ತಿಕೊಡ್ಲ ಮತ್ತಿತರ ಗ್ರಾಮಗಳ ನಾಗರಿಕರು ಬೆಳಿಗ್ಗೆ ೬.೩೦ಕ್ಕೆ ಕಾಲ್ನಡಿಗೆಯಲ್ಲಿ ಜಾಥಾ ಹೊರಟು ಬಾಳೆಗದ್ದೆ, ಭಾಸ್ಕೆರಿ, ಶೇಡಿಬಾಳ, ಬಂಕನಹಿತ್ಲ, ಆರೊಳ್ಳಿ, ಕುಳಕೋಡದ ಸಂಘಟನೆಗಳು ಹಾಗೂ ಗ್ರಾಮಸ್ಥರೊಡನೆ ಸೇರಿಕೊಂಡು ಹೊನ್ನಾವರ ತಲುಪಲಿದ್ದಾರೆ. ಬಜಾರದ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಪಟ್ಟಣ ಪಂಚಾಯತ್‌ನ ಟಪ್ಪರ್ ಹಾಲಿನಲ್ಲಿ ಸಮಾವೇಶಗೊಂಡು, ಹೊನ್ನಾವರದ ಗಣ್ಯರಾದ ಜಿ. ಯು. ಭಟ್, ಹುಸೇನ್ ಖಾದ್ರಿ, ಶಾಂತಿ ನಾಯಕ ಮತ್ತಿತರರ ಜೊತೆ ಸಂವಾದ ನಡೆಸಿ ನಂತರ ತಹಶೀಲ್ದಾರ್ ಆಫೀಸಿಗೆ ತೆರಳಿ ಜ್ಞಾಪಕ ಪತ್ರ ಸಲ್ಲಿಸಲಿದ್ದಾರೆ. 

ಗಾಂಧಿ ಜಯಂತಿಯಂದು ಗ್ರಾಮಸ್ಥರು ನಡೆಸಲು ಉದ್ದೇಶಿಸಿರುವ ಈ ಶಾಂತಿಯುತ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಿ ಪ್ರೋತ್ಸಾಹಿಸಬೇಕಾಗಿ ಕವಲಕ್ಕಿ ಊರ ನಾಗರಿಕರು ಮನವಿ ಮಾಡಿದ್ದಾರೆ. 

ಇದಕ್ಕೆ ನಿಮ್ಮ ಬೆಂಬಲವೂ ಇದೆಯೆಂದೆ ಭಾವಿಸಿದ್ದೇವೆ.
                      

- ಕವಲಕ್ಕಿ ಮಹಿಳಾ ಮತ್ತು ನಾಗರಿಕರ ವೇದಿಕೆ
                                                                         ಕವಲಕ್ಕಿ, ಹೊನ್ನಾವರ ತಾ. ಉ.ಕ. ಜಿಲ್ಲೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...