Friday, September 25, 2015

ಕಲಬುರ್ಗಿಯವರನ್ನು ಅರ್ಥಮಾಡಿಕೊಳ್ಳುವತ್ತ..

ಷ. ಶೆಟ್ಟರ್ *
 
ಕನ್ನಡಕ್ಕೆ: ಆರ್. ಶೋಭಾ


ಭಾರತದಂತಹ ಭಾವೋದ್ವೇಗಕ್ಕೆ ಒಳಗಾಗುವ ರಾಷ್ಟ್ರದಲ್ಲಿ ಒಬ್ಬ ಸಂಶೋಧಕನ ಪಯಣ ಸುಗಮವಾದುದಲ್ಲ. ಏಕೆಂದರೆ ಕಹಿಯಾದ ಸತ್ಯವನ್ನು ನುಡಿಯಬೇಡ ಎಂಬ ನಾಣ್ಣುಡಿಯ ವಾರಸುದಾರರಿಗೆ ಕಟುಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗದು. ಹಾಗಾಗಿ ಸಂಶೋಧಕನಾದವನು ಆಗಾಗ್ಗೆ ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಬುದ್ದಿವಂತಜನ ಸತ್ಯಾನ್ವೇಷಕನ ಹೆಸರಿಗೆ ಮಸಿ ಬಳಿಯಲು- ವಾಸ್ತವದಲ್ಲಿ ಸತ್ಯವನ್ನೇ ಕಳೆಗುಂದಿಸಲು- ಅಮಾಯಕರನ್ನು ಬಳಸಿಕೊಳ್ಳುತ್ತಾರೆ.; ಅವನ ಕಾಲಡಿಯಲ್ಲಿ ಅಗ್ನಿಕುಂಡಗಳನ್ನು ತೋಡಿಸಿ ತಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸುತ್ತಾರೆ. ಕರ್ನಾಟಕಕ್ಕೆ ಸೀಮಿತಗೊಳಿಸಿ ಹೇಳಬಹುದಾದರೆ ಈ ಜನ ನನ್ನ ಸಮಕಾಲೀನರ ಕಾಲಡಿಯಲ್ಲಿ ತೋಡಿರುವ ಅಗ್ನಿಕುಂಡಗಳಿಗಿಂತ ನನ್ನ ಕಾಲಡಿಯಲ್ಲಿ ತೋಡಿರುವ ಅಗ್ನಿಕುಂಡವು ದೊಡ್ಡದೇ. ನನ್ನ ಕಾಲಡಿಯಲ್ಲಿ ಉರಿವ ಜ್ವಾಲೆಗಿಂತ ಕಣ್ಣೆದುರು ಬೆಳಗುವ ಸತ್ಯವೇ ನನಗೆ ಮುಖ್ಯ. ಈ ಬದ್ಧತೆಯೇ ನಾನು ಈ ಮಟ್ಟಕ್ಕೆ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ.

೧೯೮೮ರ ತಮ್ಮ ೫೦ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ’ಮಾರ್ಗ’ ಎಂಬ ಶೀರ್ಷಿಕೆಯಡಿ ಎರಡು ಸಂಪುಟಗಳಲ್ಲಿ ಸಂಕಲಿಸಿದ ತಮ್ಮ ಸಂಶೋಧನಾ ಲೇಖನಗಳ ಎರಡನೇ ಆವೃತ್ತಿಗೆ ಬರೆದ ಮುನ್ನುಡಿಯಲ್ಲಿ ಕಲಬುರ್ಗಿಯವರು ಹೀಗೆ ಬರೆದಿದ್ದರು. ೧೯೯೮ರ ಅವರ ೬೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಎರಡನೇ ಸಂಪುಟ ಪ್ರಕಟವಾಯಿತು. ಆಗಿಂದಾಗ್ಗೆ ಎದುರಾಗುವ ಬೆಂಕಿಯ ಕುಂಡಗಳನ್ನು ದಾಟುತ್ತಾ, ಆರು ಸಂಪುಟಗಳ ಪ್ರಕಟಣೆಯನ್ನು ಬರೆದು ಮುಗಿಸಿದರು. ೪೦೦೦ ಪುಟಗಳ ೬೩೩ ಲೇಖನಗಳನ್ನು ಒಳಗೊಂಡಿರುವ ಈ ಸಂಪುಟಗಳು ೨೦೧೦ರಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಯಾದವು. ಅವರಲ್ಲಿ ಸೂಕ್ಷ್ಮ ಸಂಶೋಧನೆಯ ಗುರುವನ್ನು ಕಂಡ ನಾನು, ಕಳೆದ ೧೫೦ ವರ್ಷಗಳಲ್ಲಿ ಬಹಳಷ್ಟು ವಿಷಯಗಳ ಮೇಲೆ ಈ ಪ್ರಮಾಣದಲ್ಲಿ ಬರೆದಿರುವವರು ಕರ್ನಾಟಕದಲ್ಲಿ ಮತ್ತೊಬ್ಬರಿಲ. ವಿಷಯ, ವಸ್ತು ಮತ್ತು ಲಕ್ಷಣಗಳಲ್ಲಿ ಅವು ನಿಜಕ್ಕೂ ವಿಶ್ವಕೋಶದಂತಿವೆ. ಆದರೂ ಅವರು ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಬಗ್ಗೆ ಮೈಮರೆಯದ ಸಂಶೋಧಕರಾಗಿದ್ದಾರೆ ಎಂದು ಆ ಸಂದರ್ಭದಲ್ಲಿ ಹೇಳಿದ್ದೆ. ಬಾಗಿಲ ಹೊರಬದಿಯಲ್ಲಿ ತನ್ನ ಹಳೆಯ ವಿದ್ಯಾರ್ಥಿ ಎಂದು ಹೇಳಿಕೊಂಡ ಅನಾಮಧೇಯನ ಕರೆಗೆ ಮನೆಯ ಬಾಗಿಲನ್ನು ತೆಗೆದ ತತ್‌ಕ್ಷಣ ನೇರವಾಗಿ ಎರಡು ಗುಂಡುಗಳನ್ನು ಹಾರಿಸಿ ೭೭ರ ವಯಸ್ಸಿನ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರನ್ನು ಕೊಲ್ಲಲಾಯಿತು. ಈ ಘಟನೆ ನಡೆದದ್ದು ೩೦ ಆಗಸ್ಟ್ ೨೦೧೫ರ ಬೆಳಗ್ಗೆ ೮.೪೫ ವೇಳೆಗೆ.

ಬೋಧಕರಾಗಿ

ಮಧ್ಯಕಾಲೀನ ಆದಿಲ್ ಶಾಹಿ ಸುಲ್ತಾನರ ಆಡಳಿತದ ಹೃದಯಭಾಗವಾದ ಬಿಜಾಪುರ ಜಿಲ್ಲೆಯ ಒಂದು ಚಿಕ್ಕ ಹಳ್ಳಿಯಲ್ಲಿನ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಕಲಬುರ್ಗಿಯವರು ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪದವಿ, ಮತ್ತು ಸ್ನಾತಕೋತ್ತರ ಅಧ್ಯಯನ ಪೂರೈಸಲು ಬಿಜಾಪುರಕ್ಕೆ ಮತ್ತು ನಂತರದಲ್ಲಿ ಧಾರವಾಡಕ್ಕೆ ಆಗಮಿಸಿದರು. ೧೯೬೨ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗವನ್ನು ಸೇರಿದ ಅವರು ಬಸವ ಅಧ್ಯಯನ ಪೀಠದ ಅಧ್ಯಕ್ಷರಾದರು, ನಂತರ ಕನ್ನಡ ವಿಭಾಗದ ಮುಖ್ಯಸ್ಥರಾದರು. ೧೯೯೮ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಅಧಿಕಾರವಹಿಸಿಕೊಳ್ಳುವವರೆಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮುಂದುವರೆಸಿದರು.

ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಲಬುರ್ಗಿಯವರು ಕ್ರಿಯಾಶೀಲ ಬರಹಗಾರ ರಾಗಿಯೂ ಬೆಳೆದರು. ಕರ್ನಾಟಕ ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯ ಮತ್ತು ಹಲವು ಸಂಬಂಧಿತ ಕ್ಷೇತ್ರಗಳು ಅವರ ಆಸಕ್ತ ಅಧ್ಯಯನ ಕ್ಷೇತ್ರಗಳಾಗಿದ್ದವು. ಶಾಸನಗಳು, ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಬರಹಗಳು, ಕೈಫಿಯತ್ತುಗಳು, ಹಸ್ತಪ್ರತಿಗಳು, ಜಾನಪದ ಮತ್ತು ಸ್ಮಾರಕಶಿಲೆಗಳು- ಹೀಗೆ ಎಲ್ಲವನ್ನೂ ಯಥೇಚ್ಛವಾಗಿ ಬಳಸಿಕೊಂಡು ೬೦೦ ಲೇಖನಗಳನ್ನು ಪ್ರಕಟಿಸಿದರು. ಲಭ್ಯವಿರುವ ಕನ್ನಡದ ಅತ್ಯಂತ ಪ್ರಾಚೀನ ಗ್ರಂಥವಾದ ಕವಿರಾಜಮಾರ್ಗದ (೮ನೇ ಶತಮಾನ) ರಚನೆಗೆ ಮೂಲಾಧಾರದಂತಿರುವ ಹಿಂದಿನ ಕನ್ನಡ ಸಾಹಿತ್ಯವನ್ನು ಕುರಿತ ಅವರ ಪ್ರೌಢಪ್ರಬಂಧವು ಅವರ ಸಾಹಿತ್ಯಿಕ ಜೀವನದ ಒಂದು ಮೈಲಿಗಲ್ಲು.

ಶಾಸನಗಳ ಅಧ್ಯಯನ

ಆಗಿನ ರಾಜಕೀಯ ವ್ಯವಸೆಯ ಪರಿಣಾಮವಾಗಿ ಕರ್ನಾಟಕದಲ್ಲಿ ಶಾಸನಗಳ ಅಧ್ಯಯನ ಗಣನೀಯವಾಗಿ ಸೊರಗಿಹೋಗಿತ್ತು. ಮೈಸೂರು ಒಡೆಯರ ಅಧಿಕಾರದಲ್ಲಿ ದಕ್ಷಿಣ ಕರ್ನಾಟಕವು ಈ ಕ್ಷೇತ್ರದಲ್ಲಿ ಶ್ಲಾಘನೀಯ ಪ್ರಗತಿ ಸಾಧಿಸುತ್ತಿದ್ದರೂ ಮುಂಬೈ, ಮದ್ರಾಸ್, ಮತ್ತು ಹೈದರಾಬಾದ್ ಪ್ರಾಂತ್ಯಗಳಿಗೆ ಸೇರಿದ್ದ ಕರ್ನಾಟಕದ ಭಾಗಗಳಲ್ಲಿ ಈ ಕ್ಷೇತ್ರದ ಪ್ರಗತಿಯು ಕುಂಠಿತವಾಗಿತ್ತು. ಇದನ್ನು ಅರಿತ ಕಲಬುರ್ಗಿಯವರು ಆದ್ಯತೆಯ ಮೇಲೆ ಈ ಕ್ಷೇತ್ರದಲ್ಲಿ ಅನ್ವೇಷಣೆ ಮಾಡಲು ತಮ್ಮನ್ನು ತೊಡಗಿಸಿಕೊಂಡು ಆರು ಏಕವಿಷಯಕ-ಪ್ರಬಂಧಗಳನ್ನು ಪ್ರಕಟಿಸಿದರು.  ಅವರ ಈ ಸಂಶೋಧನೆಗಳ ಫಲವಾಗಿ ೧೨ನೇ ಶತಮಾನದ ಬಸವೇಶ್ವರ ಮತ್ತು ಅವನ ಸಮಕಾಲೀನರ ಐತಿಹಾಸಿಕತೆಯನ್ನು ಸಂಸ್ಥಾಪಿಸುವಲ್ಲಿ ಅತ್ಯಮೂಲ್ಯ ಸಾಹಿತ್ಯವು ದೊರಕಿದಂತಾಯಿತು. ಅವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದಾಗ ಹಲವಾರು ಸಂಶೋಧಕರನ್ನು ಈ ಕ್ಷೇತ್ರದ ಸಂಶೋಧನೆಯಲ್ಲಿ ತೊಡಗಿಸಿ ದಾಖಲೆಗಳನ್ನು ಸಂಗ್ರಹಿಸಲು, ಸಂಪಾದಿಸಲು ಮತ್ತು ಪ್ರಕಟಿಸಲು ಪ್ರೋತ್ಸಾಹಿಸಿದರು.

ಅಗಾಧ ಸಾಹಿತ್ಯ ಸೃಷ್ಟಿ

ಕಲಬುರ್ಗಿಯವರು ಪ್ರಾದೇಶಿಕ ಇತಿಹಾಸದ ಪ್ರತಿಯೊಂದು ಐತಿಹಾಸಿಕ ದಾಖಲೆಗಳ ಮತ್ತು  ಅಂಶಗಳ ಬಗ್ಗೆ ಅನ್ವೇಷಣಾಶೀಲ ಪ್ರವೃತ್ತಿಯನ್ನುಳ್ಳವರಾಗಿದ್ದರು. ೧೮ನೇ ಶತಮಾನದ ಅಂತ್ಯ ಮತ್ತು ೧೯ನೇ ಶತಮಾನದ ಪ್ರಾರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಯಾಗಿದ್ದ ಕರ್ನಲ್ ಮೆಕನ್ಜಿಯವರು ಮಾಡಿದ್ದ ಕೆಲಸವನ್ನು ಮುಂದುವರಿಸಿದ ಅವರು ೧೯೯೪ರಲ್ಲಿ ೩೫೦ಕ್ಕೂ ಹೆಚ್ಚು ಸ್ಥಳೀಯ ಚಾರಿತ್ರಿಕ ದಾಖಲೆಗಳನ್ನು ಒಳಗೊಂಡ ಕರ್ನಾಟಕದ ಖೈಫಿಯತ್ತುಗಳು ಎಂಬ ಬೃಹತ್ ಸಂಪುಟವನ್ನು ಹೊರತಂದರು. ಇದು ಇತಿಹಾಸಜ್ಞರು ಮತ್ತು ಜಾನಪದಜ್ಞರಿಗೆ ಅಧ್ಯಯನ ಮಾಹಿತಿಗಳ ಗಣಿಯಾಯಿತು. ಅವುಗಳ ಲಾಭ ಪಡೆದವರಲ್ಲಿ ನಾನೂ ಒಬ್ಬ. ೧೯೬೦ರಲ್ಲಿ ಆರಂಭವಾದ ವಚನ ಸಾಹಿತ್ಯದೊಂದಿಗಿನ ಅವರ ನಂಟು ಸಾವಿನವರೆಗೂ ಮುಂದುವರಿಯಿತು. ಈ ಉದ್ದೇಶಕ್ಕಾಗಿ ಅವರು ಸುಮಾರು ಆರು ಲಿಂಗಾಯತ ಮಠಗಳನ್ನು ಅಧ್ಯಯನ ಕೇಂದ್ರಗಳನ್ನಾಗಿ ಪರಿವರ್ತಿಸಿ ಆ ಮಠಗಳಲ್ಲಿ ವಚನ ಸಾಹಿತ್ಯದ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಕಾರಣರಾದರು. ಅಂತಹ ಕೇಂದ್ರಗಳಲ್ಲಿ ಒಂದಾದ ಗದಗದ ಮಠದಲ್ಲಿ ೨೪೨ ವಚನಕಾರರುಗಳ ೨೧ ಸಾವಿರ ವಚನಗಳನ್ನೊಳಗೊಂಡ ೧೫ ಸಂಪುಟಗಳನ್ನೂ ಲಿಂಗಾಯತ ಸಮುದಾಯದ ಉತ್ತಮ ಸಾಧಕರ ಜೀವನ ಚರಿತ್ರೆಗಳ ೧೦೦ ಸಂಪುಟಗಳನ್ನೂ ಕೇವಲ ಹತ್ತು ವರ್ಷಗಳಲ್ಲಿ ಪ್ರಕಟಿಸಿದರು. ನಂತರ ಆಯ್ದ ೧,೭೦೦ ವಚನಗಳನ್ನು ೨೩ ಭಾರತೀಯ ಭಾಷೆಗಳಿಗೆ ಭಾಷಾಂತರಿಸುವ ಜತನದ ಕೆಲಸದಲ್ಲಿ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡರು. ನಂತರ ಇವನ್ನು ಬೋಡೋ, ನೇಪಾಳಿ, ಫ್ರೆಂಚ್, ಚೀನಿ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಭಾಷಾಂತರಿಸುವ ಯೋಜನೆಯನ್ನು ಪ್ರಾರಂಭಿಸಿದರು. ಈ ಬ್ರಹತ್ ಯೋಜನೆ ಅವರನ್ನು ದೇಶದ ಮೂಲೆ ಮೂಲೆಗೆ ಕರೆದೊಯ್ಯಿತು, ವಚನಗಳ ಭಾಷಾಂತರವು ಮೂಲಕ್ಕೆ ನಿಷ್ಠವಾಗಿದೆ ಎಂಬುದನ್ನು ಮನದಟ್ಟುಮಾಡಿಕೊಳ್ಳಲು ಅನುವಾದಕರೊಂದಿಗೆ ಚರ್ಚಿಸುತ್ತಾ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರ ಭಾಷಾಂತರಗಳನ್ನು ಪರಿಶೀಲಿಸುತ್ತಾ, ಪರಿಷ್ಕರಿಸುತ್ತಾ ಹಲವಾರು ದಿನಗಳ ಕಾಲ ದೇಶವನ್ನು ಸುತ್ತಾಡಿದರು. ಇದೇ ವೇಳೆ ಬಸವರಾಜ ಕಟ್ಟೀಮನಿಯವರ ಎಲ್ಲ ಕಾದಂಬರಿಗಳನ್ನು ಹದಿಮೂರು ಸರಣಿ ಸಂಪುಟಗಳಲ್ಲಿ ಸಂಪಾದಿಸಿ ಪುನರ್‌ಮುದ್ರಿಸಿದರು. ಕನ್ನಡ ಸಾಹಿತ್ಯದಲ್ಲಿ ’ಚರಿತೆ’ ಎಂದು ಕರೆಯಲಾಗುವ ಪ್ರಕಾರದ ಕೃತಿಗಳನ್ನು ಹದಿನೆಂಟು ಸಂಪುಟಗಳಲ್ಲಿ ಮತ್ತು ಬಿಜಾಪುರದ ಆದಿಲ್‌ಶಾಹಿ ವಂಶಕ್ಕೆ ಸೇರಿದ ಪರ್ಷಿಯನ್ ಮತ್ತು ಅರೇಬಿಕ್ ಕಡತಗಳನ್ನು ಭಾಷಾಂತರಿಸಿ ಆರು ಸಂಪುಟಗಳಲ್ಲಿ ಪ್ರಕಟಿಸಿದರು. ಮುದ್ರಣಾಲಯಕ್ಕೆ ಕಳುಹಿಸುವ ಮುನ್ನ ಹಸ್ತಪ್ರತಿಯನ್ನು ಖುದ್ದಾಗಿ ಓದುವ ಮತ್ತು ಖುದ್ದಾಗಿ ಕರಡನ್ನು ಪರಿಶೀಲಿಸುವ ಹವ್ಯಾಸ ಅವರದಾಗಿತ್ತು.

ಕಲಬುರ್ಗಿಯವರು ಕನ್ನಡ ಸಂಶೋಧನೆಯ ಕ್ಷೇತ್ರದಲ್ಲಿ, ವಿಶೇಷವಾಗಿ ಕನ್ನಡದ ಶ್ರೇಷ್ಠಕೃತಿಗಳ ಸಂಶೋಧನೆಯಲ್ಲಿ ದೈತ್ಯಶಕ್ತಿಯಾಗಿ ಬೆಳೆದರು. ತಮಗೆ ಒಪ್ಪಿಗೆಯಾಗದ ಯಾವುದೇ ಪ್ರಾಚೀನ ಅಥವಾ ವರ್ತಮಾನದ ಶ್ರೇಷ್ಠ ಬರಹಗಾರರ ಕೃತಿಗಳಿಗೆ ಮುಖಾಮುಖಿಯಾಗಲು ಅವರು ಎಂದೂ ಹಿಂಜರಿದವರಲ್ಲ. ಅಂತಹವರಲ್ಲಿ ಕೇಶಿರಾಜನ ಶಬ್ದಮಣಿದರ್ಪಣದ ಸಂಪಾದಕರೂ ’ನಡೆದಾಡುವ ವಿಶ್ವಕೋಶ’ ಎಂದು ಪ್ರಸಿದ್ಧರಾಗಿದ್ದ ಮೈಸೂರು ವಿಶ್ವವಿದ್ಯಾಲಯದ ಡಿ.ಎಲ್.ನರಸಿಂಹಚಾರ‍್ಯರೂ ಒಬ್ಬರು. ಅವರ ಸಮಕಾಲೀನರಾಗಿದ್ದ ಕನ್ನಡ ಸಾಹಿತ್ಯ ಲೋಕದ ದಂತಕತೆಗಳಾದ ರಾಷ್ಟ್ರಕವಿ ಗೋವಿಂದ ಪೈ, ಬಿ.ಎಂ.ಶ್ರೀ, ಪು.ತಿ.ನ, ತೀ.ನಂ.ಶ್ರೀ. ಅವರನ್ನೂ ಕಲಬುರ್ಗಿ ನಿರ್ದಾಕ್ಷಿಣ್ಯ ವಿಮರ್ಶೆಗೊಳಪಡಿಸಿ ಬರೆಯುತ್ತಿದ್ದರು. ಹಿರಿಯ ವಿದ್ವಾಂಸರೊಂದಿಗೆ ಅವರಿದ್ದ ಭಿನ್ನಮತಕ್ಕಿಂತಲೂ ಚಿದಾನಂದಮೂರ್ತಿ, ಅನಂತಮೂರ್ತಿ ಮತ್ತು ಭೈರಪ್ಪ ನವರಂತಹ ಸಮಕಾಲೀನ ಸಾಹಿತಿಗಳೊಂದಿಗೆ ಅವರಿಗಿದ್ದ ಭಿನ್ನಮತಕ್ಕೆ ಮಾಧ್ಯಮಗಳು ಹೆಚ್ಚು ಪ್ರಚಾರ ನೀಡಿದವು. ಆಧುನಿಕ ಕನ್ನಡ ಸಾಹಿತ್ಯದ ಆದ್ವರ್ಯು ಎಂದು ಸಾಮಾನ್ಯವಾಗಿ ಗುರುತಿಸಲಾಗುವ ಬಿ.ಎಂ.ಶ್ರೀಯವರ ಬರವಣಿಗೆಗಳಲ್ಲಿ ಅಂತಹ ಶ್ಲಾಘನಾರ್ಹ ಮಹತ್ವದ ಗುಣವೇನೂ ಇಲ್ಲ ಎಂಬುದು ಅವರ ಅಭಿಮತವಾಗಿತ್ತು. ಈ ಸಂಗತಿಗಳು ಅವರ ಪಾಂಡಿತ್ಯಕ್ಕೆ ಪ್ರಶಂಸೆಯನ್ನೂ ವ್ಯಕ್ತಿನೆಲೆಯಲ್ಲಿ ವಿರೋಧಿಗಳನ್ನೂ ಹುಟ್ಟುಹಾಕಿದವು.

ಹೀಗೆ ದೈತ್ಯಕಾರವಾಗಿ ಬೆಳೆದ ಕಲಬುರ್ಗಿಯವರನ್ನು ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಜೊತೆಗೆ, ಪ್ರತಿಷ್ಠಿತ ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಬಸವ ಪ್ರಶಸ್ತಿ ಮತ್ತು ರನ್ನ ಪ್ರಶಸ್ತಿಗಳೂ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಕನ್ನಡ ವಿಶ್ವವಿದ್ಯಾಲಯದ ’ನಾಡೋಜ’ ಪ್ರಶಸ್ತಿಗಳೂ ಅರಸಿಕೊಂಡು ಬಂದವು. ಪ್ರಶಸ್ತಿಗಳು ಮಾತ್ರವೇ ಅಲ್ಲದೆ ಅವರ ಸಮಕಾಲೀನರು ಅಸೂಯೆ ಪಡುವಂತಹ ಲಕ್ಷಾಂತರ ರೂಪಾಯಿಗಳ ಭಾರಿ ಮೊತ್ತದ ಪ್ರಶಸ್ತಿಗಳೂ ದೊರೆತವು. ಅಂತಹವುಗಳಲ್ಲೊಂದು ಬಹು-ಶ್ಲಾಘನೆಯ ಜ್ಞಾನಪೀಠ ಪ್ರಶಸ್ತಿಗೆ ನೀಡುವ ಮೊತ್ತವನ್ನೂ ಮೀರಿಸುವುದಾಗಿತ್ತು.

ವೈಯಕ್ತಿಕ ನಂಟು


ನಾನು ಕಲಬುರ್ಗಿಯವರನ್ನು ಭೇಟಿಯಾದ್ದು ೧೯೬೦ರ ದಶಕದಲ್ಲಾದರೂ ನಮ್ಮ ನಡುವೆ ಸಮಾನ ಸಂಶೋಧನಾಸಕ್ತಿಗಳಿರುವುದನ್ನು ಗುರುತಿಸಿಕೊಂಡದ್ದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹದ್ಯೋಗಿಗಳಾಗಿದ್ದ ೧೯೭೦ರ ದಶಕದಲ್ಲಿ. ಆ ದಿನಗಳಲ್ಲಿ ಇಬ್ಬರು ಜೊತೆಯಾಗಿ ವೀರೋಪಾಸನೆ ಕುರಿತು ಲೇಖನ ಬರೆದೆವು. ಅದು ೧೯೮೨ರಲ್ಲಿ ಮೆಮೋರಿಯಲ್ ಸ್ಟೋನ್ಸ್ (ವೀರಗಲ್ಲುಗಳು) ಎಂಬ ಹೆಸರಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದಲೂ ಜರ್ಮನಿಯ ಹಿಡಲ್‌ಬರ್ಗ್ ವಿಶ್ವವಿದ್ಯಾಲಯದಿಂದಲೂ ಪ್ರಕಟಗೊಂಡಿತು. ಈ ವಿಷಯದ ಮೇಲೆ ನಾವಿಬ್ಬರು ಪ್ರತ್ಯೇಕವಾಗಿ ಬರವಣಿಗೆ ಮುಂದುವರಿಸಿದೆವು. ಆದರೆ ಮುಂದಿನ ಎರಡು ದಶಕಗಳಲ್ಲಿ ಕಲಬುರ್ಗಿಯವರು ವೀರೋಪಾಸನೆಯ ಬೆಳಕುಕಾಣದ ಅಯಾಮಗಳನ್ನು ಅನ್ವೇಷಿಸಿ ಕನಿಷ್ಟ ಒಂಬತ್ತು ಲೇಖನಗಳನ್ನೂ ಎರಡು ಏಕವಿಷಯಕ-ಪ್ರಬಂಧಗಳನ್ನೂ ಪ್ರಕಟಿಸಿದರು, ಈ ಕ್ಷೇತ್ರದಲ್ಲಿ ಅಧ್ಯಯನ ಮಾಡಲು ಸುಮಾರು ಆರು ಸಂಶೋಧನಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ೧೯೮೦ರ ದಶಕದಲ್ಲಿ ನಾನು ಕನ್ನಡದ ಶ್ರೇಷ್ಠ ಕೃತಿಗಳ ಅಧ್ಯಯನದಲ್ಲಿ ಮುಳುಗಿದ್ದಾಗ ಎದುರಾಗುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವರನ್ನು ಅವಲಂಬಿಸುತ್ತಿದ್ದೆ.  ಜೈನರ ಸಲ್ಲೇಖನ ವ್ರತದ ಪರಿಕಲ್ಪನೆಯ ಮೇಲೆ ನಾನು ನಡೆಸಿದ ಸಂಶೋಧನೆಗಳು ೧೯೮೬ರಲ್ಲಿ ಇನ್‌ವೈಟಿಂಗ್ ಡೆತ್ ಮತ್ತು ೧೯೯೦ರಲ್ಲಿ ಪರ್‌ಸೂಯಿಂಗ್ ಡೆತ್ ಗ್ರಂಥಗಳಾಗಿ ಪ್ರಕಟವಾದವು. ಕಲಬುರ್ಗಿಯವರು ನನ್ನೊಂದಿಗೆ ಇಲ್ಲದಿದ್ದರೆ ಇದು ಸುಲಭದಲ್ಲಾಗುವ ಕೆಲಸವಾಗಿರಲಿಲ್ಲ. ನನ್ನಿಂದ ಅವರು ಅವರಿಂದ ನಾನು ಏನನ್ನು ಪಡೆದುಕೊಂಡೆವೋ, ಈ ಕೊಡು-ಕೊಳೆಗಳು ಸ್ಪಷ್ಟವಾಗಿ ಇಬ್ಬರಿಗೂ ಗೊತ್ತಿಲ್ಲ. ಆದರೆ ನಮ್ಮ ದಾರಿಗಳು ಆಗಾಗ್ಗೆ ಬದಲಾಗುತ್ತಿದ್ದುದೂ ಉಂಟು. ಆದರೂ ನನ್ನ ಏನ್‌ಷಿಯಂಟ್ ಕನ್ನಡ ಸ್ಕ್ರಿಪ್ಟ್, ಸ್ಕ್ರೈಬ್ ಅಂಡ್ ದ ಕಲ್ಟಿವೇಷನ್ ಆಫ್ ಲೆಟರ‍್ಸ್ ಕೃತಿಯು ಪೂರ್ಣಗೊಂಡಾಗ (೨೦೧೪) ಅವರು ಅತ್ಯಂತ ಸಂತೋಷದಿಂದ, ಸ್ವ-ಇಚ್ಛೆಯಿಂದ ಮುನ್ನುಡಿ ಬರೆದು ವಿಷಯವನ್ನು ಓದುಗರಿಗೆ ನನಗಿಂತಲೂ ಉತ್ತಮವಾಗಿ ಪರಿಚಯಿಸಿದರು. ಅವರ ಹತ್ಯೆಯ ಕೆಲವು ದಿನಗಳ ಹಿಂದೆ ಪುಸ್ತಕವೊಂದರ ಬಿಡುಗಡೆಗಾಗಿ ನನ್ನನ್ನು ಧಾರವಾಡಕ್ಕೆ ಅಹ್ವಾನಿಸಿದ್ದರು ಮತ್ತು ಜಂಟಿಯಾಗಿ ಓದುವ ಸಲುವಾಗಿ ನನ್ನ ಮೊದಲ ಶತಮಾನದ ಕನ್ನಡ ಶಾಸನಗಳ ಎಂಟು ಸರಣಿ ಸಂಪುಟಗಳ ಹಸ್ತಪ್ರತಿಯನ್ನು ತರಲು ಹೇಳಿದ್ದರು ಮತ್ತು ಅದಕ್ಕಾಗಿ ಅತಿ ಕಾತರದಿಂದ ಕಾಯುತ್ತಿದ್ದರು ಕೂಡಾ. ಈ ಸರಣಿ ಸಂಪುಟಕ್ಕೆ ಮನ್ನುಡಿಯನ್ನು ಬರೆಯುವ ಆದರ್ಶಪ್ರಾಯ ಪಾಂಡಿತ್ಯ ಅವರದಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಸಮುದಾಯದೊಂದಿಗಿನ ವಿವಾದಗಳು

ಕಲಬುರ್ಗಿಯವರಿಗೆ ಹಿಂದೂ ಮೂಲಭೂತವಾದಿಗಳಿಗಿಂತ ತಮ್ಮದೇ ಸಮುದಾಯದ ಸದಸ್ಯರೊಂದಿಗೆ ಹೆಚ್ಚಿನ ಹಣಾಹಣಿಯಿತ್ತು. ವಚನಕಾರರ ಬದುಕು ಮತ್ತು ಬೋಧನೆಗಳಿಗೂ ಸಮುದಾಯದ ಪ್ರಚಲಿತ ವಿಕೃತಗಳಿಗೂ ಇದ್ದ ಅಂತರವನ್ನು ಕುರಿತು ಅವರು ಆಕ್ರೋಶದಿಂದ ಬರೆದರು. ತತ್ವಗಳ ಮತ್ತು ಆಚರಣೆಯ ನಡುವೆ ಬಹುದೊಡ್ಡ ಅಂತರವನ್ನು ಸೃಷ್ಟಿಸಿದ, ಕಳೆದ ೮೦೦ ವರ್ಷಗಳ, ರಾಜಿಸಂಧಾನಗಳನ್ನು ಪ್ರಶ್ನಿಸಿದರು. ಇತ್ತೀಚಿನ ದಶಕಗಳಲ್ಲಿ ವೀರಶೈವ-ಲಿಂಗಾಯತ ಎಂಬ ಪದಗಳು ಒಂದೇ ಚಳುವಳಿಯ ಭಾಗವೋ ಅಥವಾ ಎರಡು ವಿಭಿನ್ನ ಚಳುವಳಿಗಳೋ ಎಂಬ ವಿಚಾರದಲ್ಲಿ ಭಿನ್ನಮತ ಮೂಡಿತು. ವೀರಶೈವ ಎಂಬುದು ಬಸವ-ಪೂರ್ವ ಕಾಲಮಾನಕ್ಕೆ ಸೇರಿದ್ದು, ೧೨ನೇ ಶತಮಾನದಲ್ಲಿ ಬಸವೇಶ್ವರರು ಪ್ರಾರಂಭಿಸಿದ ಚಳುವಳಿಗೂ ಇದಕ್ಕೂ ಸಂಬಂಧವಿಲ್ಲ ಎಂಬ ವಾದವನ್ನು ಒಂದು ಗುಂಪು ಮುಂದಿಟ್ಟಿತು. ಕಲಬುರ್ಗಿಯವರು ಈ ಪದಗಳ ಬಳಕೆಯ-ಇತಿಹಾಸವನ್ನು ಕುರಿತು ಸಂಶೋಧನೆ ನಡೆಸಿ ಈ ವಿವಾದವು ಅಪ್ರಸ್ತುತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಪ್ರಕಟಿಸಿದ ಮಾರ್ಗ ಗ್ರಂಥದ ಆರು ಸಂಪುಟಗಳ ೬೦೦ ಸಾಂದರ್ಭಿಕ ಲೇಖನಗಳಲ್ಲಿ ಸುಮಾರು ೨೮೦ ಲೇಖನಗಳು, ವಚನಗಳು ಮತ್ತು ಅವು ಪ್ರತಿಪಾದಿಸಿದ ಜೀವನಶೈಲಿಯ ವಿಶ್ಲೇಷಣೆಯ ಜೊತೆಗೆ ಈ ವಿಷಯವನ್ನು ಕುರಿತಾದ ಚರ್ಚೆಯನ್ನೂ ಒಳಗೊಂಡಿವೆ.

ಕಲಬುರ್ಗಿಯವರಿಗೆ ಏಕೆ ಹಲವಾರು ಅಕ್ಯಾಡೆಮಿಕ್ ವೈರಿಗಳಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಆದರೆ ಒಬ್ಬ ಕೊಲೆಗಾರನಿಗೆ ಅವರ ಮೇಲಿದ್ದಿರಬಹುದಾದ ವೈರತ್ವಕ್ಕೆ ಕಾರಣವನ್ನು ಕಲ್ಪಿಸಿಕೊಳ್ಳುವುದು ನನಗೆ ಸಾಧ್ಯವಾಗದು. ಬೌದ್ಧ, ಜೈನ ಮತ್ತು ಸಿಖ್‌ಧರ್ಮಗಳಂತೆಯೇ ವೀರಶೈವಧರ್ಮವೂ ಹಿಂದೂಧರ್ಮದ ಭಾಗವಾಗಿರದೆ ಭಾರತದ ಒಂದು ಸ್ವತಂತ್ರ ಧರ್ಮ ಎಂದು ಕಲಬುರ್ಗಿಯವರು ಪ್ರಬಲವಾಗಿ ವಾದಿಸಿದಾಗ್ಯೂ ವೈದಿಕ ಹಿಂದೂಧರ್ಮದೊಂದಿಗೆ ಅವರು ಎಂದೂ ಸಂಘರ್ಷಕ್ಕಿಳಿದವರಲ್ಲ. ೧೨ನೇ ಶತಮಾನದ ಸಮಾಜ ಸುಧಾರಕರು ಪ್ರತಿಪಾದಿಸಿದ ಮೌಲ್ಯಗಳು ವೈದಿಕ ಹಿಂದೂಧiಕ್ಕಿಂತ ಭಿನ್ನವಾಗಿದ್ದವು. ವೇದಗಳು ಮತ್ತು ಭಗವದ್ಗೀತೆಯನ್ನು ಪ್ರಮಾಣಗ್ರಂಥಗಳೆಂದು ಅವರು ಒಪ್ಪಿಕೊಂಡಿರಲಿಲ್ಲ; ವರ್ಣವ್ಯವಸ್ಥೆಯನ್ನು ಪುರಸ್ಕರಿಸಲಿಲ್ಲ; ಆಗಮಗಳನ್ನು ಆದರಿಸಲಿಲ್ಲ; ದೇವರು ದೇವಾಲಯಗಳಲ್ಲಿರುತ್ತಾನೆ ಎಂಬುದನ್ನು ನಂಬಲಿಲ್ಲ; ಕರ್ಮ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ ಇಡಲಿಲ್ಲ ಎಂಬ ಸತ್ಯವನ್ನು ಕಂಡುಕೊಳ್ಳಲು ವಚನಗಳ ಅಧ್ಯಯನವು ಅವರಿಗೆ ಸಹಕಾರಿಯಾಯಿತು.

     ದೇವರ ಅಥವಾ ಪ್ರೇತಗಳ ವಿಗ್ರಹಗಳ ಮೇಲೆ (ಆಕಸ್ಮಿಕವಾಗಿ?) ಮೂತ್ರ ವಿಸರ್ಜನೆ ಮಾಡಿದಾಗಲೂ ನನಗೆ ಯಾವ ತೊಂದರೆಯೂ ಆಗಲಿಲ್ಲ ಎಂಬ ಯು.ಆರ್.ಅನಂತಮೂರ್ತಿಯವರ ಹೇಳಿಕೆಯನ್ನು ಕಲಬುರ್ಗಿಯವರು ಬೆಂಬಲಿಸಿದಾಗಲೂ ಅವರು ಕೇವಲ ವಿಗ್ರಹಾರಾಧನೆಯ ಬಗ್ಗೆ ವಚನಕಾರರು ಹೇಳಿದ್ದನ್ನೇ ಧೃಢೀಕರಿಸಿ ಹೇಳುತ್ತಿದ್ದರು. ಉಗ್ರ ಹಿಂದೂ ಮೂಲಭೂತವಾದಿಗಳ ಒಂದು ಗುಂಪು ಈ ಹೇಳಿಕೆಯನ್ನು ಬಹುಶಃ ತಪ್ಪಾಗಿ ಅರ್ಥೈಸಿಕೊಂಡು ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಿತು. ಈಗ ಅವರನ್ನು ಮೌನವಾಗಿಸುವ ವಾತಾವರಣವನ್ನು ಸೃಷ್ಟಿಸಿ ಶಾಶ್ವತ ನೀರವತೆಗೆ ತಳ್ಳಿತು.


ಸೌಜನ್ಯ: ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ಸೆಪ್ಟೆಂಬರ್ ೧೯, ೨೦೧೫
----------------------------------------
*ಲೇಖಕರು: ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ ಮಾಜಿ ಅಧ್ಯಕ್ಷರು ಮತ್ತು ಸಧ್ಯ ಬೆಂಗಳೂರಿನಲ್ಲಿರುವ ಉನ್ನತ ಅಧ್ಯಯನಗಳ ರಾಷ್ಟೀಯ ಸಂಸ್ಥೆಯಲ್ಲಿ ಎಮಿರಿಟಸ್ ಪ್ರಾಧ್ಯಾಪಕರು.

ಕನ್ನಡಕ್ಕೆ: ಆರ್. ಶೋಭಾ, ಇಂಗ್ಲಿಷ್ ಉಪನ್ಯಾಸಕಿ. ಸರ್ಕಾರಿ ಪದವಿ-ಪೂರ್ವ ಕಾಲೇಜು, ಗೌರಿಬಿದನೂರು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...