Sunday, September 06, 2015

ಇದು ಸಂಘಪರಿವಾರದ ಸಂಚುಸನತ್‌ಕುಮಾರ ಬೆಳಗಲಿ

ಇದು ಸಂಘಪರಿವಾರದ ಸಂಚು


ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಒಳಗೊಂಡ ಹಿಂದೂರಾಷ್ಟ್ರ ನಿರ್ಮಾಣದ ದೀರ್ಘಕಾಲೀನ ಗುರಿ ಹೊಂದಿರುವ ಆರೆಸ್ಸೆಸ್‌ಗೆ ಬಹಿರಂಗ ಅಜೆಂಡಾ ಮತ್ತು ರಹಸ್ಯ ಅಜೆಂಡಾಗಳೆಂಬ ಎರಡು ಕಾರ್ಯಸೂಚಿಗಳಿವೆ. ಬಹಿರಂಗ ಕಾರ್ಯಸೂಚಿಯಲ್ಲಿ ಗೋಹತ್ಯೆ ನಿಷೇಧ, ಸಮಾನ ನಾಗರಿಕ ಸಂಹಿತೆ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 356ನೆ ಕಲಂನ ರದ್ದತಿ ಇವು ಮೇಲ್ನೋಟಕ್ಕೆ ಎದ್ದು ಕಾಣುವ ಅಂಶಗಳು. 

ಇನ್ನು ಗುಪ್ತ ಅಜೆಂಡಾದಲ್ಲಿ ಇರುವ ಅಂಶಗಳು ಭಯಾನಕವಾಗಿವೆ. ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಒದಗಿಸಿದ ಮೀಸಲು ವ್ಯವಸ್ಥೆ ರದ್ದತಿ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬದಲಿಗೆ ಅಧ್ಯಕ್ಷ ಮಾದರಿ ಸೋಗಿನಲ್ಲಿ ಏಕವ್ಯಕ್ತಿ ಸರ್ವಾಧಿಕಾರ, ಏಕಧರ್ಮದ ಪ್ರತಿಷ್ಠಾಪನೆ, ಶ್ರೇಣೀಕೃತ ಜಾತಿ ಪದ್ಧತಿಗೆ ಪುನಶ್ಚೇತನ ಹೀಗೆ ನೂರಾರು ಕಾರ್ಯಸೂಚಿಗಳು ಗುಪ್ತ ಅಜೆಂಡಾದಲ್ಲಿವೆ.

ಈ ಪೈಕಿ ಗುಪ್ತ ಅಜೆಂಡಾದ ಒಂದು ಅಸ್ತ್ರ ಪ್ರಯೋಗಿಸಲ್ಪಟ್ಟಿದೆ. ಮೀಸಲಾತಿಗಾಗಿ ಗುಜರಾತ್‌ನ ಪಟೇಲರು ಆರಂಭಿಸಿದ ಚಳವಳಿಯ ಹಿಂದಿರುವುದು ಸಂಘಪರಿವಾರ. ಜಾತಿ ಆಧರಿತ ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಆರೆಸ್ಸೆಸ್ ವಕ್ತಾರ ಎಂ.ಜಿ.ವೈದ್ಯ ಈಗಾಗಲೇ ಬಹಿರಂಗವಾಗಿ ಹೇಳಿದ್ದಾರೆ. ದಿನೇಶ್ ಅಮೀನ್ ಮಟ್ಟು ಅವರು ವ್ಯಾಖ್ಯಾನಿಸಿರುವಂತೆ ‘‘ಇದು ಮೀಸಲಾತಿ ಹೆಸರಿನಲ್ಲಿ ಮೀಸಲಾತಿ ವಿರುದ್ಧ ಆರಂಭವಾದ ಚಳವಳಿ’’. ಇಂದು ಇಲ್ಲಿ, ನಾಳೆ ಇದನ್ನು ದೇಶದ ತುಂಬ ಹಬ್ಬಿಸಿ ಸಾಮಾಜಿಕ ಮೀಸಲಾತಿಯನ್ನು ರದ್ದುಗೊಳಿಸಲು ಒತ್ತಡ ಹೇರುವುದು ಇದರ ಹಿಡನ್ ಅಜೆಂಡಾ.

 ಎಂಬತ್ತರ ದಶಕದಲ್ಲಿ ವಿ.ಪಿ.ಸಿಂಗ್ ಸರಕಾರ ಹಿಂದುಳಿದವರಿಗೆ ಮೀಸಲಾತಿಯನ್ನು ನೀಡುವ ಮಂಡಲ್ ಆಯೋಗದ ಜಾರಿಗೆ ಮುಂದಾದಾಗ ಅದನ್ನು ವಿರೋಧಿಸಲು ಸಂಘಪರಿವಾರ ಕಮಂಡಲ ರಾಜಕಾರಣ ಆರಂಭಿಸಿತು. ಅಡ್ವಾಣಿಯವರನ್ನು ರಥಾರೂಢರನ್ನಾಗಿ ಮಾಡಿ ದೇಶಾದ್ಯಂತ ಕೋಮು ರಕ್ತಪಾತ ಮಾಡಿತು. ಮಂಡಲ್ ಆಯೋಗದ ವಿರುದ್ಧ ಆಗ ನಡೆದ ಚಳವಳಿ ಹೆಸರಿನ ಉನ್ಮಾದ ಪ್ರದರ್ಶನ ನನಗಿನ್ನೂ ನೆನಪಿದೆ.

 ಮಂಡಲ್ ಆಯೋಗದ ವಿರುದ್ಧ ಆಗ ದೇಶವ್ಯಾಪಿ ನಡೆದ ಉದ್ರೇಕಕಾರಿ ಚಳವಳಿಯಲ್ಲಿ ಕೆಲವರು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು. ಆಗ ನಾನು ಹುಬ್ಬಳ್ಳಿಯಲ್ಲಿದ್ದೆ. ಧಾರವಾಡ-ಹುಬ್ಬಳ್ಳಿಯಲ್ಲಿ ಆಗ ಮಂಡಲ್ ಆಯೋಗದ ವಿರುದ್ಧ ನಡೆದ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳೇ ಪಾಲ್ಗೊಂಡಿದ್ದರು. ಸಂಘಪರಿವಾರದ ಕಾರ್ಯಕರ್ತರು ಈ ತರುಣರನ್ನು ದಾರಿತಪ್ಪಿಸಿದ್ದರು. ಆಗ ಮಂಡಲ ಆಯೋಗದ ಪರವಾಗಿ ಚಂಪಾ, ಸಿದ್ದನಗೌಡ ಪಾಟೀಲ ಮುಂತಾದವರೆಲ್ಲ ಸೇರಿ ಕರಪತ್ರವೊಂದನ್ನು ಮುದ್ರಿಸಿ ಹಂಚಿದ್ದರು. ಈ ಕರಪತ್ರದಲ್ಲಿ ಮಂಡಲ್ ಆಯೋಗದ ಮೀಸಲು ವ್ಯವಸ್ಥೆಯಲ್ಲಿ ಯಾವ್ಯಾವ ಜಾತಿಗಳು ಸೌಕರ್ಯ ಪಡೆಯುತ್ತವೆ ಎಂಬುದನ್ನು ಜಾತಿಗಳ ಪಟ್ಟಿಸಹಿತ ವಿವರಿಸಲಾಗಿತ್ತು. ಈ ಕರಪತ್ರವನ್ನು ಓದಿದ ಹಿಂದುಳಿದ ಜಾತಿ ವರ್ಗಗಳ ವಿದ್ಯಾರ್ಥಿಗಳು ಮತ್ತೆ ಆ ಮಂಡಲ್ ವಿರೋಧಿ ಚಳವಳಿಯತ್ತ ಸುಳಿಯಲಿಲ್ಲ. ಆಗ ಮಂಡಲ್ ಆಯೋಗದ ವಿರುದ್ಧ ಚಳವಳಿ ನಡೆಸಿ ವಿಫಲಗೊಂಡ ಸಂಘಪರಿವಾರ ಈಗ ಹೊಸ ಷಡ್ಯಂತ್ರ ರೂಪಿಸಿದೆ. ಈಗಿರುವ ಜಾತಿ ಮೀಸಲಾತಿಯನ್ನು ರದ್ದುಪಡಿಸಿ, ಆರ್ಥಿಕವಾಗಿ ಯಾರು ಹಿಂದುಳಿದಿದ್ದಾರೋ ಅವರಿಗೆ ಮೀಸಲಾತಿ ನೀಡಬೇಕೆಂಬುದು ಅದರ ಉದ್ದೇಶವಾಗಿದೆ. ಇದರಿಂದ ಅದರ ಹಿಂದು ರಾಷ್ಟ್ರ ನಿರ್ಮಾಣ ಗುರಿ ಸಾಧನೆಗೆ ಅನುಕೂಲವಾಗಲಿದೆ. ಜಾತಿಗಳ ಹೆಸರಿನಲ್ಲಿ ಬೇರ್ಪಟ್ಟ ಹಿಂದುಗಳನ್ನೆಲ್ಲ ಭಗವಾಧ್ವಜದ ಅಡಿಯಲ್ಲಿ ತರುವುದು ಅದರ ಗುರಿಯಾಗಿದೆ. ಸಂಘಪರಿವಾರ ಬಹಿರಂಗವಾಗಿ, ನೇರವಾಗಿ ಮೀಸಲಾತಿಯನ್ನು ವಿರೋಧಿಸುವುದಿಲ್ಲ. ಅದರ ಬದಲಾಗಿ ಸಾಮಾಜಿಕವಾಗಿ ಮುಂದುವರಿದ ಜಾತಿಗಳನ್ನು ಪ್ರಚೋದಿಸಿ ಹೋರಾಟಕ್ಕಿಳಿಸುತ್ತಿದ್ದೆ. ಗುಜರಾತಿನಲ್ಲಿ ಪಟೇಲರು, ರಾಜಸ್ತಾನದಲ್ಲಿ ಜಾಟರು, ಮಹಾರಾಷ್ಟ್ರದಲ್ಲಿ ಮರಾಠರು, ಕರ್ನಾಟಕದಲ್ಲಿ ಲಿಂಗಾಯತರು ಹೀಗೆ ಎಲ್ಲರನ್ನು ಹುರಿದುಂಬಿಸಿ ಬೀದಿಗೆ ಇಳಿಸಿ ತನ್ನ ಗುರಿಸಾಧಿಸಲು ಅದು ಹೊರಟಿದೆ. ಈಗ ಗುಜರಾತಿನಲ್ಲಿ ಪಟೇಲ ಸಮುದಾಯದ ನೇತೃತ್ವ ವಹಿಸಿರುವ ಇಪ್ಪತ್ತೆರಡರ ಯುವಕ ಹಾರ್ದಿಕ ಪಟೇಲ್ ಸಂಘ ಪರಿವಾರದ ಸೃಷ್ಟಿ. ಈತ ಕರೆದರೆ ಲಕ್ಷಾಂತರ ಜನ ರಸ್ತೆಗೆ ಇಳಿಯುತ್ತಾರೆಂದರೆ ಅದೇನು ಪವಾಡವಲ್ಲ. ಈತನನ್ನು ಮುಂದಿಟ್ಟುಕೊಂಡು ಆರೆಸ್ಸೆಸ್ ಈ ಚಳವಳಿಯನ್ನು ಸಂಘಟಿಸಿದೆ. ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರವೀಣ ತೊಗಾಡಿಯಾರಿಗೆ ಈ ಹಾರ್ದಿಕ ಪಟೇಲ ನಿಕಟವರ್ತಿ ಎಂಬುದು ಆಕಸ್ಮಿಕವಲ್ಲ.

ಮೀಸಲಾತಿಗಾಗಿ ಗುಜರಾತಿನಲ್ಲಿ ಪಟೇಲರು ಬೀದಿಗಿಳಿಯುತ್ತಿದ್ದಂತೆ ಹೇಳಿಕೆಯೊಂದನ್ನು ನೀಡಿದ ವಿಶ್ವ ಹಿಂದೂ ಪರಿಷತ್ತಿನ ಜಂಟಿ ಪ್ರಧಾನಕಾರ್ಯದರ್ಶಿ ಸುರೇಂದ್ರ ಜೈನ್, ಜಾತಿ ಆಧರಿತ ಮೀಸಲಾತಿ ರದ್ದಾಗಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಮೀಸಲಾತಿಯ ಆವಶ್ಯಕತೆಯನ್ನು ಅಧ್ಯಯನ ಮಾಡಲು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನ ಉಸ್ತುವಾರಿಯಲ್ಲಿ ಆಯೋಗ ರಚಿಸಬೇಕೆಂದು ಈ ಸುರೇಂದ್ರ ಜೈನ್ ಹೇಳಿದ್ದಾರೆ.

ಇದು ವಿಶ್ವ ಹಿಂದೂ ಪರಿಷತ್ ನಾಯಕನ ತಕ್ಷಣದ ಪ್ರತಿಕ್ರಿಯೆಯಾಗಿರಬಹುದು ಎಂದು ಕಡೆಗಣಿಸುವಂತಿಲ್ಲ. ಹಿಂದುಗಳನ್ನು ಪ್ರತ್ಯೇಕಿಸುವ ಮೀಸಲಾತಿಯನ್ನು ರದ್ದುಗೊಳಿಸಬೇಕೆಂಬುದು ಆರೆಸ್ಸೆಸ್‌ನ ಹಿಡನ್ ಅಜೆಂಡಾದ ಮುಖ್ಯ ಅಂಶವಾಗಿದೆ. ಸಂಘದ ಸರಂಸಂಘಚಾಲಕರಾಗಿದ್ದ ಗೋಳ್ವಲ್ಕರ್ ಅವರು ಅನೇಕ ಬಾರಿ ಇದನ್ನು ವ್ಯಕ್ತಪಡಿಸಿದ್ದಾರೆ. ಆದರೆ ಚುನಾವಣಾ ರಾಜಕಾರಣದ ದೃಷ್ಟಿಯಿಂದ ಇದನ್ನು ಅವರು ಬಹಿರಂಗವಾಗಿ ಹೇಳುತ್ತಿಲ್ಲ.

ದೇಶದಲ್ಲಿ ಜಾಗತೀಕರಣದ ಶನಿ ವಕ್ಕರಿಸಿದಾಗ ಅದಕ್ಕೆ ಪೂರಕವಾಗಿ ಹಿಂದುತ್ವ ರಾಜಕಾರಣ ತೀವ್ರತೆ ಪಡೆಯಿತು. ಈಗ ನವ ಉದಾರೀಕರಣದ ಹಂತ. ದೇಶದ ಸಂಪತ್ತನ್ನು ದೋಚಲು ದೇಶ ವಿದೇಶದ ಕಾರ್ಪೊರೇಟ್ ಕಂಪೆನಿಗಳು ತುದಿಗಾಲ ಮೇಲೆ ನಿಂತಿವೆ. ಈ ದರೋಡೆಯ ವಿರುದ್ಧ ಜನ ತಿರುಗಿ ಬೀಳಬಾರದು ಎಂದು ಜನರನ್ನು ಅಡ್ಡ ಹಾದಿಗೆಳೆಯಲು ಈಗ ಪಟೇಲ್ ಮೀಸಲಾತಿ ಆಂದೋಲನ ಆರಂಭವಾಗಿದೆ. ಇದನ್ನು ರಾಷ್ಟ್ರವ್ಯಾಪಿ ವಿಸ್ತರಿಸುವ ಯತ್ನವೂ ನಡೆದಿದೆ.

ಈಗ ತಕ್ಷಣ ಮೀಸಲಾತಿಗೆ ಗಂಡಾಂತರ ಬರಲಿಕ್ಕಿಲ್ಲ. ಆದರೆ ಸಂಘಪರಿವಾರ ಇಂಥದೊಂದು ಚಳವಳಿಯನ್ನು ಹುಟ್ಟು ಹಾಕಿ ಅದರ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಇದು ತಿರುಗುಬಾಣವಾಗುವುದಾದರೆ ಅದು ಹಿಂದೆ ಸರಿಯುತ್ತದೆ. ಇದರಿಂದ ಅನುಕೂಲವಾಗುವುದಾದರೆ ನೇರವಾಗಿ ಕಾರ್ಯಾಚರಣೆಗೆ ಇಳಿಯುತ್ತದೆ. ಈ ಹಿಂದೆ ಅರುಣ್ ಶೌರಿಗೆ ಪ್ರಚೋದನೆ ನೀಡಿ ಡಾ.ಅಂಬೇಡ್ಕರರ ಚಾರಿತ್ರ ವಧೆ ಮಾಡುವ ಪುಸ್ತಕವೊಂದನ್ನು ಪ್ರಕಟಿಸಿದ ಸಂಘಪರಿವಾರ ಅದರ ವಿರುದ್ಧ ದಲಿತ ದಮನಿತ ವರ್ಗಗಳು ತಿರುಗಿಬಿದ್ದಾಗ ಹಿಂದೆ ಸರಿಯಿತು. ಆ ನಂತರ ಸ್ವಾಮಿ ವಿವೇಕಾನಂದರಂತೆ ಬಾಬಾ ಸಾಹೇಬರನ್ನು ಹೈಜಾಕ್ ಮಾಡಲು ಯತ್ನಿಸುತ್ತ ಬಂದಿದೆ.

ಪಟೇಲರ ಮೀಸಲಾತಿ ಚಳವಳಿ ಮೇಲ್ನೋಟಕ್ಕೆ ನರೇಂದ್ರ ಮೋದಿಗೆ ಇಕ್ಕಟ್ಟು ತಂದಿದೆ ಎಂಬಂತೆ ಕಾಣುತ್ತಿದ್ದರೂ ಇದರ ಗುರಿ ಮೋದಿಯ ಉಚ್ಚಾಟನೆಯಲ್ಲ. ಜಾತಿ ಆಧಾರಿತ ಮೀಸಲಾತಿಯೇ ಇದರ ಅಂತಿಮ ಗುರಿಯಾಗಿದೆ. ಅಂತಲೇ ಶಿವಸೇನೆಯ ಉದ್ಧವ ಠಾಕ್ರೆ, ರಾಜ್ ಠಾಕ್ರೆ ಅಂಥವರು ಈ ಚಳವಳಿಗೆ ಬೆಂಬಲ ನೀಡಿದ್ದಾರೆ. ಇದನ್ನು ರಾಷ್ಟ್ರವ್ಯಾಪಿ ವಿಸ್ತರಿಸುವ ಇಂಗಿತವನ್ನು ಹಾರ್ದಿಕ ಪಟೇಲ್ ವ್ಯಕ್ತಪಡಿಸಿದ್ದಾರೆ.

ಡಾ.ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಬದಿಗೊತ್ತಿ ಆರೆಸ್ಸೆಸ್ ಕಾರ್ಯಸೂಚಿಯನ್ನು ಜಾರಿಗೆ ತರಲು ಕೇಂದ್ರದ ನರೇಂದ್ರ ಮೋದಿ ಸರಕಾರ ಆತುರವಾಗಿದೆ. ಇದೇ ಸಂದರ್ಭದಲ್ಲಿ ಜಾತಿ ಜನಗಣತಿ ಬದಲಿಗೆ ದೇಶದಲ್ಲಿ ಯಾವ ಧರ್ಮದ ಜನರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿರುವ ಕೇಂದ್ರ ಸರಕಾರ ಬಹುಸಂಖ್ಯಾತರನ್ನು ದಾರಿತಪ್ಪಿಸಲು ಹೊರಟಿದೆ. ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬ ತಳಬುಡವಿಲ್ಲದ ಅಂಕಿ-ಅಂಶ ಪ್ರಕಟಿಸಿ ತೊಗಾಡಿಯಾ, ಮುತಾಲಿಕರಂಥವರ ಕೈ ಬಲಪಡಿಸಲು ಹೊರಟಿದೆ.

ಇಂಥ ಅಪಾಯಕಾರಿ ಸನ್ನಿವೇಶದಲ್ಲಿ ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹೋರಾಡುತ್ತಿರುವವರ ಧ್ವನಿ ಯಾಕೋ ಕ್ಷೀಣಿಸುತ್ತಿದೆ. ಸಂಘ ಪರಿವಾರ ಎಲ್ಲರನ್ನೂ ಗೊಂದಲದ ಮಡುವಿಗೆ ತಳ್ಳಿ ತನ್ನ ಫ್ಯಾಶಿಸ್ಟ್ ಕಾರ್ಯಸೂಚಿ ಜಾರಿಗೆ ಷಡ್ಯಂತ್ರ ರೂಪಿಸಿದೆ. ಹಾರ್ದಿಕ್ ಪಟೇಲರಂಥವರ ಹೋರಾಟಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ಆತುರವಾಗಿ ಬೆಂಬಲ ವ್ಯಕ್ತಪಡಿಸಿದರು. ತಮ್ಮ ಹೇಳಿಕೆಯ ದೂರಗಾಮಿ ಪರಿಣಾಮಗಳ ಅರಿವು ಅವರಿಗಿದ್ದಂತಿಲ್ಲ. ಇದು ಶತಮಾನಗಳಿಂದ ನಡೆದ ಹೋರಾಟ. ಜ್ಯೋತಿಬಾ ಫುಲೆ, ಆಗರಕರ್, ಶಾಹು ಮಹಾರಾಜರು ಆರಂಭಿಸಿದ ದಮನಿತ ಜನವರ್ಗಗಳ ಹೋರಾಟ. ಡಾ.ಅಂಬೇಡ್ಕರ್ ಕಾಲದಲ್ಲೂ ಇದು ಉತ್ತುಂಗಕ್ಕೇರಿತು. ಈ ಹೋರಾಟವನ್ನು ಮೂಲೆಗುಂಪು ಮಾಡಲು 1925ರಲ್ಲಿ ಹುಟ್ಟಿದ ಆರೆಸ್ಸೆಸ್ ಈ ಮೀಸಲಾತಿ ವಿರುದ್ಧ ಸಂಚುರೂಪಿಸಿದೆ. ಈ ಸಂಚನ್ನು ವಿಫಲಗೊಳಿಸದಿದ್ದರೆ, ದೇಶಕ್ಕೆ ಅಪಾಯ ಕಾದಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...