Friday, September 18, 2015

ಮೈಥಿಲಿಯ ಪತ್ರ


ಶೂದ್ರ ಶ್ರೀನಿವಾಸ


ಮೈಥಿಲಿಯ ಪತ್ರ ಬಂತು.ಎಲ್ಲವೂ ಅಸ್ಪಷ್ಟ. ತನ್ನ ದುಃಖ ವನ್ನೆಲ್ಲವನ್ನು ಹೇಳುವುದಕ್ಕೆ ಭಾಷೆಯಿರಲಿಲ್ಲ. ತನ್ನ ಹರುಕು-ಮುರುಕು ಇಂಗ್ಲಿಷಿನಲ್ಲಿ ಏನನ್ನೋ ಹೇಳಲು ಪ್ರಯತ್ನಿಸಿದ್ದಳು. ಕೊನೆಗೆ ಪ್ರತಿಯೊಂದೂ ಶಬ್ದವನ್ನು ವಾಕ್ಯವನ್ನಾಗಿ ಪರಿವರ್ತಿಸಿಕೊಂಡು ಅರ್ಥ ತುಂಬಲು ಹೋದೆ. ಆದರೆ ಆ ಶಬ್ದಗಳಿಗೆಲ್ಲ ವಿಷಾದವಿತ್ತೇ ವಿನಹ ಮನದಟ್ಟು ಮಾಡುವ ಪೂರ್ಣತೆ ಇರಲಿಲ್ಲ. ಪತ್ರ ಬರೆಯಬೇಕೆನ್ನಿಸಿತು. ಅವಳ ಪತ್ರದಲ್ಲಿ ವಿಳಾಸ ಬರೆದಿರಲಿಲ್ಲ. ನಾನು ಅವಳ ವಿಳಾಸವನ್ನು ಕಳೆದುಕೊಂಡಿದ್ದೆ. ಕೇವಲ ಅವಳ ವಿಳಾಸವನ್ನೇ ಅಲ್ಲ, ಅದರ ಜೊತೆಗೆ ಸುಮಾರು ನೂರಕ್ಕೂ ಮೇಲ್ಪಟ್ಟು ವಿಳಾಸಗಳನ್ನು ಕಳೆದುಕೊಂಡಿದ್ದೆ. ಅವು ಯಾರ ವಿಳಾಸಗಳೆಂದು ಕೇಳಬೇಡಿ. ಕಳೆದುಕೊಂಡ ಮೇಲೆ ಅವರ ವಿಳಾಸ ಹೇಳಿದರೂ ಈ ಬೀದಿಯನ್ನು ಬಿಟ್ಟು ಮತ್ತೊಂದು ಬೀದಿಗೆ ಹೋಗಿರುತ್ತೇವೆ. ಹಾಗೆ ನೋಡಿದರೆ ಮನುಷ್ಯ ಸಂಬಂಧಗಳ ಸ್ವಾರಸ್ಯವಿರುವುದು ನಾವು ತಪ್ಪುವ ದಾರಿಯಲ್ಲಿಯೇ. ನೇರ ದಾರಿಯಲ್ಲಿ ಸಾಗುವವನಿಗೆ ಜೀವನವೇ ಇರುವುದಿಲ್ಲ. ಎಲ್ಲವೂ ಕರಾರುವಾಕ್ಕು; ಬೆಳಗ್ಗೆ ಕಾಫಿ-ತಿಂಡಿ, ಊಟ, ಸಂಜೆಯ ವಾಕು ಮತ್ತೆ ಊಟ, ನಿದ್ದೆ, ಕನಸುಗಳಿಲ್ಲದ ಬದುಕು. ಹೀಗೆಲ್ಲ ಬರೆಯುವಾಗ ನನ್ನ ತಲೆ ತುಂಬ ರೈಲುಗಾಲಿಗಳ ನಿನಾದ ತುಂಬಿದೆ. ರೈಲು ಗಾಲಿಗಳ ನಿನಾದ ಅವ್ಯಕ್ತ. ಅಷ್ಟೇ ನಿಗೂಢ. ಅಥವಾ ಧ್ವನಿಗಳಿಗೆ ನಾವು ಸ್ಪಂದಿಸುವ ಕ್ರಮ ಈ ರೀತಿಯದ್ದಾಗಿರಬಹುದು.


ಈ ಮೈಥಿಲಿ ಎಂಬ ಹುಡುಗಿ (ಮದುವೆಯಾಗಿದ್ದರೆ ಹೆಣ್ಣಾಗಿರುತ್ತಿದ್ದಳು) ಪರಿಚಯವಾಗಿದ್ದು ಆಕಸ್ಮಿಕ. ಬಟ್ಟಲುಗಣ್ಣಿನ ಹುಡುಗಿ. ಅದರ ತುಂಬ ನೋವು ತುಂಬಿಕೊಂಡಿದ್ದ ಹುಡುಗಿ. ಇಡೀ ದೇಹದಲ್ಲಿ ಸರಿಯಾಗಿ ನಾಲ್ಕು ಕೆ.ಜಿ. ಮಾಂಸವಿರಲಿಲ್ಲ. ಆದರೂ ಅವಳಲ್ಲಿ ಸೌಂದರ್ಯವಿತ್ತು ಅಥವಾ ಅವಳು ಶರತ್‌ಬಾಬು ಹಾಗೂ ರವೀಂದ್ರನಾಥ ಠಾಗೂರರ ಕೃತಿಗಳಲ್ಲಿ ಬರುವ ಪಾತ್ರದಂತಿದ್ದಳು. ಹಾಗೆ ನೋಡಿದರೆ ಬೆಂಗಾಲಿಯ ಯಾವುದೋ ಹೆಣ್ಣನ್ನು ಪರಿಚಯ ಮಾಡಿಕೊಂಡರೂ ವಿಷಾದ ತುಂಬಿದ ಹೆಣ್ಣುಗಳಾಗಿರುತ್ತಾರೆ. ಅವರ ಕಣ್ಣುಗಳ ಸುತ್ತ ನೋವು ಮಡುಗಟ್ಟಿ ಕಪ್ಪಾಗಿರುತ್ತದೆ. ಆದರೆ ಬೆಂಗಾಲಿಯ ಗಂಡಸರು ಒರಟು ಜನ ಮತ್ತು ಹಳೆಯ ವೈಭವವನ್ನು ನೆನಪು ಮಾಡಿಕೊಂಡು ಜಂಬಪಡುವ ಜನ. ಇದನ್ನು ಸಾರ್ವತ್ರೀಕರಿಸುತ್ತಿಲ್ಲ. ಆದರೆ ಜನ ಪ್ರಕೃತಿಯೇ ಆ ರೀತಿಯದ್ದಾಗಿರಬಹುದು. ಹೋಗಲಿ ಮೈಥಿಲಿಯ ವಿಷಯಕ್ಕೆ ಬರುವೆ. ನನಗೆ ಚರಿತ್ರೆಯಲ್ಲಿಯ ಮೈಥಿಲಿ, ಆವಂತಿ, ಪ್ರಿಯಂವದೆ ತುಂಬ ಅಚ್ಚುಮೆಚ್ಚಿನ ಹೆಸರುಗಳು.


1986ರ ಡಿಸೆಂಬರ್‌ನಲ್ಲಿ ಕಲ್ಕತ್ತೆಯಿಂದ ವಾಪಸ್ಸು ಬರುತ್ತಿದ್ದೆ. ರೈಲಿನಲ್ಲಿ ಟಿಕೆಟ್ ರಿಸರ್ವ್ ಮಾಡಿಸಿರಲಿಲ್ಲ. ವೈಟಿಂಗ್ ಲಿಸ್ಟ್‌ನಲ್ಲಿ ಸಿಗಬಹುದು ಎಂಬ ಖಾತ್ರಿಯಿಂದ ಕೋರಮಂಡಲ ಎಕ್ಸ್‌ಪ್ರೆಸ್‌ಗೆ ನುಗ್ಗಿದೆ. ಅಷ್ಟರಲ್ಲಿ ಬಹಳ ಸಮಯದಿಂದ ಹೊರಗಡೆಯೇ ನಿಂತಿದ್ದ ಒಬ್ಬಾತ ನನ್ನನ್ನು ನೋಡಿ ‘‘ನೀವು ಇದೇ ಬೋಗಿಯಲ್ಲಿ ಹೋಗ್ತೀರಾ? ಮದ್ರಾಸಿಗೆ ಹೋಗ್ತಿರಾ?’’ ಎಂದು ಕೇಳಿದರು. ‘‘ಹೌದು’’ ಎಂದೆ. ‘‘ದಯವಿಟ್ಟು ಈಕೆ ನನ್ನ ಹೆಂಡತಿ, ಮದ್ರಾಸಿಗೆ ತಲುಪಿಸಿಬಿಡಿ’’ ಎಂದರು. ಆಗಲಿ ಎಂದು ಸುಮ್ಮನಾದೆ. ರೈಲು ಚಲಿಸಿದಾಕ್ಷಣ ಆತ ಕೈ ಬೀಸುತ್ತಲೇ ಇದ್ದರು. ಸುಮಾರು ಹದಿನೆಂಟು ದಿನ ಆತ್ಮೀಯ ಒಡನಾಡಿಯಾಗಿದ್ದ ಕಲ್ಕತ್ತೆಯ ನ್ಯಾಷನಲ್ ಲೈಬ್ರರಿಯ ಕುಮಾರಪ್ಪ ಕೈ ಬೀಸುತ್ತಲೇ ಇದ್ದರು. ತುಂಬು ಉತ್ಸಾಹದ ಕುಮಾರಪ್ಪ ಹತ್ತು ಜನ ಗೆಳೆಯರಿದ್ದಂತೆ. ಮಗುವಿನ ಸ್ವಭಾವದ ಗಡಿಬಿಡಿಯ ವ್ಯಕ್ತಿ.


ರೈಲು ಎಂದಾಕ್ಷಣ ದೊಡ್ಡ ಊರು ಇದ್ದಂತೆ. ಅದರಲ್ಲಿ ಬೋಗಿಗಳು ಒಂದು ಬೀದಿ ಇದ್ದಂತೆ ಅಥವಾ ದೊಡ್ಡ ಕುಟುಂಬಗಳು ನೂರಾರು ವರ್ಷಗಳಿಂದ ಒಂದೇ ಕುಟುಂಬದ ಕವಲುಗಳಿದ್ದಂತೆ ಆತ್ಮೀಯರಾಗಿರುತ್ತಾರೆ. ಯಾವುದೋ ಮದುವೆ-ಮುಂಜಿಯ ಸಮಯದಲ್ಲಿ ಸೇರಿದಂತೆ. ಆದರೆ ಜಾಗ್ರತೆ ಪ್ರತ್ಯೇಕವಾಗ್ತಾರೆ. ಇದರಲ್ಲೂ ಕೆಲವರು ಕೊನೆಯವರೆಗೂ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ.

ನಾನು ಕೂತಿದ್ದ ಜಾಗದಲ್ಲಿ ಎರಡು ಬಂಗಾಳಿ ಸಂಸಾರಗಳಿದ್ದವು. ಒಂದು ಸಂಸಾರ ದಕ್ಷಿಣ ಭಾರತದ ಪ್ರವಾಸಕ್ಕೆ ಹೊರಟಿತ್ತು. ಇನ್ನೊಂದು ಸಂಸಾರ ವೆಲ್ಲೂರಿಗೆ ಹೊರಟಿತ್ತು. ಈ ವೆಲ್ಲೂರಿಗೆ ಹೊರಟಿದ್ದ ಸಂಸಾರದ ಸದಸ್ಯೆ ಮೈಥಿಲಿ. ಇವಳ ಅಮ್ಮ ಮತ್ತು ತಮ್ಮ ಪರಿಚಯವಾಗಿದ್ದೆ ಆಕಸ್ಮಿಕ. ನನ್ನ ಪಕ್ಕದಲ್ಲಿ ಮೈಥಿಲಿಯ ತಮ್ಮ ಅಜಿತನಾಥರಾಯ್ ಕೂತಿದ್ದ. ಸುಮಾರು ಇಪ್ಪತ್ತೆರಡು ವರ್ಷ ವಯಸ್ಸಿನ ಯುವಕ. ಅವನು ತನ್ನ ಉತ್ಸಾಹದ ಮಾತಿನ ಚಕಮಕಿಗೆ ಎಲ್ಲರೂ ಮರುಳಾಗುವಂತೆ ಮಾಡುತ್ತಿದ್ದ. ಆದರೆ ಇಂಥ ಯೌವನದ ಹುಡುಗನ ಹೃದಯದಲ್ಲೂ ದುರಂತ ಅಡಕವಾಗಿದೆಯೆಂದು ಗೊತ್ತಾದಾಗ ಗಾಬರಿಯಾಯಿತು. ಇದಕ್ಕಿಂತ ಮೊದಲು ಇವರು ಪರಿಚಯವಾದ ಸಂದರ್ಭವೇ ಒಂದು ರೀತಿಯ ವೇದನೆಯಿಂದ ಕೂಡಿತ್ತು. ಮೈಥಿಲಿಯ ತಾಯಿ ಸ್ವಲ್ಪ ಸಮಯ ಮಗನ ತೊಡೆಯ ಮೇಲೆ, ಸ್ವಲ್ಪ ಸಮಯ ಮಗಳ ತೊಡೆಯ ಮೇಲೆ ಮಲಗಿರುತ್ತಿದ್ದಳು. ಆಗ ಅವರು ಒಂದೇ ಸಮನೆ ಆಕೆಯ ತಲೆಯ ಕೂದಲಲ್ಲಿ ಬೆರಳಾಡಿಸುತ್ತಿದ್ದರು. ಕೂದಲನ್ನು ಜೋರಾಗೆಳೆದಂತೆ. ಇದನ್ನು ಎರಡು ಮೂರು ಗಂಟೆ ನೋಡಿದ ಮೇಲೆ ವಿಷಯ ಏನೆಂದು ಕೇಳಿದೆ. ತಲೆನೋವಿಗೆ ಎಂದಳು. ಆಗ ನಾನು ಒಂದಷ್ಟು ಸಮಯ ಆ ತಾಯಿಯ ತಲೆಯಲ್ಲಿ ಬೆರಳಾಡಿಸಲು ಕೇಳಿದೆ. ಅಕ್ಕ ತಮ್ಮ ತಾಯಿಗೆ ಗೊತ್ತಾಗದಂತೆ ನಗುತ್ತ ಬಿಟ್ಟುಕೊಟ್ಟರು. ಐದಾರು ನಿಮಿಷಗಳಲ್ಲಿ ಬೆರಳುಗಳಿಗೆ ನೋವಾಗತೊಡಗಿತ್ತು. ಬೆರಳುಗಳ ಚಲನೆ ಸ್ವಲ್ಪ ನಿಧಾನವಾದರೂ ಆಕೆ ವಿಚಿತ್ರ ವೇದನೆಯಿಂದ ನರಳುತ್ತಿದ್ದಳು. ಆದರೆ ನನ್ನ ಬೆರಳುಗಳ ನೋವನ್ನು ಸ್ವಾಭಿಮಾನದಿಂದ ತೋರಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಒಮ್ಮೆ ಮೈಥಿಲಿ ‘‘ಸಾಕಾಯಿತಾ’’ ಎಂದು ಕೇಳಿದಳು. ಆಗಿದ್ದರೂ ಇಲ್ಲವೆಂದಿದ್ದೆ. ಆ ಹುಡುಗನಂತೂ ನಗುತ್ತಾ ‘‘ಫನಿಷ್‌ಮೆಂಟ್’’ ಎಂದು ‘‘ಅಮ್ಮ ನಿನ್ನ ತಲೆಯಲ್ಲಿ ಯಾರು ಬೆರಳಾಡಿಸುವುದು ಗೊತ್ತಾ’’ ಎಂದು ಬೆಂಗಾಲಿಯಲ್ಲಿ ಕೇಳಿದ. ಆಕೆ ನಕ್ಕು ತನ್ನ ಮಗನ ತುಂಟತನದ ಮಾತಿಗೆ ಗಮನ ಕೊಡಲಿಲ್ಲ. ಆದರೆ ಮೈಥಿಲಿ ಹೇಳಿದಾಕ್ಷಣ ಆಕೆ ನೋಡಿದಳು. ನನ್ನನ್ನು ನೋಡಿದಾಕ್ಷಣ ನಾಚಿಕೆಯಿಂದ ‘‘ಕ್ಷಮಿಸಿ’’ ಎಂದು ಎದ್ದೇಳಲು ಪ್ರಯತ್ನಿಸಿದಳು. ನಾನು ಬೇಡವೆಂದು ಹಾಗೆಯೇ ಮಲಗಿಸಿದೆ. ಇದಾದ ಸ್ವಲ್ಪ ಸಮಯದ ನಂತರ ಮೈಥಿಲಿ ಬೆರಳಾಡಿಸಲು ಬಂದಿದ್ದಳು. ಇದೇ ಸಮಯಕ್ಕೆ ಅಲ್ಲಿ ಕೂತಿದ್ದವರೆಲ್ಲ ಒಂದೇ ಕುಟುಂಬದವರಾಗಿಬಿಟ್ಟಿದ್ದೆವು. ಮದ್ರಾಸಿನ ಆ ಹೆಂಗಸು ನಮಗೆಲ್ಲ ಎರಡು ಬಾರಿ ಮನೆಯಿಂದ ಮಾಡಿಕೊಂಡು ತಂದಿದ್ದ ತಿಂಡಿಯನ್ನು ಕೊಟ್ಟಿದ್ದಳು. ತಿಂಡಿಯ ವಿನಿಮಯಕ್ಕೆ ಕೊರತೆ ಇರಲಿಲ್ಲ. ಈ ನಡುವೆ ಮೈಥಿಲಿಗೆ ಅವಳ ತಾಯಿಗೆ ಎಷ್ಟು ದಿನಗಳಿಂದ ಈ ತಲೆನೋವಿದೆ ಎಂದೆ. ಮೊದಲಿನಿಂದಲೂ ಇದೆ, ಈಗ ಜಾಸ್ತಿಯಾಗಿದೆ ಎಂದಳು. ಹೀಗೆ ಹೇಳುವಾಗಲೇ ತನ್ನ ಮನೆಯ ಒಟ್ಟು ಕಥೆಯನ್ನು ಹೇಳಿದ್ದಳು.

ನನ್ನ ತಂದೆ ರೂರ್ಕೆಲಾ ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದ. ಇತ್ತೀಚೆಗೆ ತಾನೇ ನಿವೃತ್ತಿಯಾದ. ಐದು ಮಂದಿ ಮಕ್ಕಳು, ಮೂರು ಹೆಣ್ಣು, ಎರಡು ಗಂಡು. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಅಕ್ಕನಿಗೂ ಮದುವೆಯಾಗಿದೆ. ಅವನು ಬೇರೆ ಇದ್ದಾನೆ. ಅಪ್ಪ ಮೊದಲಿನಿಂದಲೂ ಮುತುವರ್ಜಿ ತೋರಿಸಲಿಲ್ಲ. ಈ ಕಾರಣಕ್ಕಾಗಿಯೇ ನಾನು ಮದುವೆಯೇ ಆಗಿಲ್ಲ. ಅಮ್ಮನ ಸೇವೆಗಾಗಿ ಎಂದಾಗ ಅವಳ ಬಡಕಲು ದೇಹದಲ್ಲಿಯೂ ಕಾಂತಿಯುತ ಬಟ್ಟಲುಗಣ್ಣುಗಳಲ್ಲಿ ನೀರು ತುಂಬಿತ್ತು. ನಂತರ ಅವಳು ನಾವು ಯಾಕೆ ವೆಲ್ಲೂರಿಗೆ ಹೋಗುತ್ತಿದ್ದೇವೆ ಗೊತ್ತಾ? ಎಂದು ಪ್ರಶ್ನೆ ಹಾಕಿದಳು. ಅಜಿತನಾಥನಿಗೆ ಆಪರೇಶನ್ ಮಾಡಿಸಬೇಕು. ಸದಾ ಎದೆ ನೋವಿನಿಂದ ನರಳ್ತಾನೆ. ಅವನ ಎದೆಯಲ್ಲಿ ಏನೋ ಗಡ್ಡೆಯಿದೆಯಂತೆ ಎನ್ನುವಾಗ ಮತ್ತಷ್ಟು ಕಣ್ಣೀರು ತುಂಬಿತ್ತು. ಆ ಕತ್ತಲು ಬೆಳಕಿನ ರೈಲು ಬೋಗಿಯ ಕೊಠಡಿಯಲ್ಲಿ ಅವಳ ಕಣ್ಣೀರನ್ನು ನನ್ನ ಎದುರು ಕೂತಿದ್ದ ಮದ್ರಾಸಿನ ಹೆಣ್ಣು ಗಮನಿಸಿದ್ದಳು. ಅಷ್ಟೊತ್ತಿಗೆ ಮೈಥಿಲಿಯ ಒಟ್ಟು ಕಥೆಯ ಸೂಕ್ಷ್ಮ ಪರಿಚಯ ಆಕೆಗೆ ಆಗಿತ್ತೆಂದು ಕಾಣುತ್ತೆ. ಕನಿಕರ ತುಂಬಿದ ವಿಷಾದದಿಂದ ನೋಡುತ್ತಿದ್ದಳು.

ಅಜಿತನಾಥನ ಎದೆನೋವಿನ ವಿಷಯ ತಿಳಿದಾಕ್ಷಣ ಒಮ್ಮೆ ಅವನ ಕಡೆ ನೋಡಿದೆ. ಅವನು ತನ್ನೆಲ್ಲ ನೋವನ್ನು ಮರೆತು ಒಂದೆರಡು ವರ್ಷದ ಮಗುವನ್ನೆತ್ತಿಕೊಂಡು ಆಟವಾಡಿಸುತ್ತಿದ್ದ. ಆ ಮಗು ನಮ್ಮ ಜೊತೆಯಲ್ಲಿ ಕೂತಿದ್ದ ಸಿಂಧಿ ಹುಡುಗನ ಮಗನಾಗಿದ್ದ. ಆ ಸಿಂಧಿ ಹುಡುನಿಗೆ ಸುಮಾರು ಇಪ್ಪತ್ತು ವರ್ಷವಾಗಿರಬಹುದು. ಅವನ ಹೆಂಡತಿಯು ಅಷ್ಟೇ ಪುಟ್ಟದಾದ ಚಿಕ್ಕ ಹುಡುಗಿ. ಅವರನ್ನು ನೊಡಿದರೆ ಹೈಸ್ಕೂಲಿನಲ್ಲಿ ಓದುವ ಹುಡುಗ ಹುಡುಗಿಯರಂತೆ ಕಾಣುತ್ತಿದ್ದರು.

ಮೈಥಿಲಿ ತನ್ನ ತಮ್ಮನ ಆರೋಗ್ಯದ ವಿಷಯ ತಿಳಿಸಿದಾಕ್ಷಣ, ಅವನ ಹತ್ತಿರ ಮತ್ತಷ್ಟು ಮಾತಾಡಬೇಕೆನಿಸಿತು. ಆದರೆ ಅವನ ತುಂಟತನ ಮತ್ತು ಉತ್ಸುಕತೆಯ ಮಾತುಗಾರಿಕೆಯನ್ನು ಕೇವಲ ಗಮನಿಸುತ್ತಾ ಕೂರುವಂತಾಯಿತು. ಹೀಗೆ ಕೂರುತ್ತಲೇ ಸಾಕಷ್ಟು ಕತ್ತಲಾಯಿತು. ಕಿಟಕಿಯ ಪಕ್ಕದಲ್ಲಿ ಕೂತೆ. ನನಗೆ ಪ್ರಿಯವಾದ ಕತ್ತಲು ಭೀಕರವಾಗಿತ್ತು. ಅದನ್ನು ಮುರಿಯಲೆಂದೇನೋ ಆಗಾಗ ವಿದ್ಯುತ್ ದೀಪಗಳು ಕಾಣಿಸಿಕೊಂಡು ನಾಪತ್ತೆಯಾಗುತ್ತಿತ್ತು. ರಾತ್ರಿ ಹತ್ತಾಯಿತು. ನನಗೆ ಮಲಗಲು ಬರ್ತ್ ಇರಲಿಲ್ಲ. ಅಜಿತಾನಾಥ ತನ್ನ ಬರ್ತ್‌ನಲ್ಲಿಯೇ ಮಲಗಲು ಕರೆದ. ಆದರೆ ಅವನ ಎದೆ ನೋವು ನೆನಪಿಗೆ ಬಂದು ಹಾಗೂ ಬರ್ತ್‌ನ ಜಾಗ ಒಬ್ಬರಿಗೆ ಮಾತ್ರ ಸಾಕಾಗುತ್ತಿದ್ದುದರಿಂದ ಬೇಡವೆಂದೆ. ಮೊದಲನೆಯ ಬಾರಿಗೆ ಟ್ರೈನಿನಲ್ಲಿ ಕೆಳಗೆ ಮಲಗಿದ್ದೆ. ಮಧ್ಯರಾತ್ರಿಯಲ್ಲಿ ಗಾಲಿಗಳ ಶಬ್ದಗಳು ತಲೆಯ ಮೆದುಳು ಕಿತ್ತು ಬರುವಂತಿತ್ತು. ನಂತರ ರೈಲು ಅಡ್ಡಾದಿಡ್ಡಿ ತೂಗುವುದಕ್ಕೆ ಮೈ ಕೈ ನೋವು ಜಾಸ್ತಿಯಾಗಿತ್ತು. ಎದ್ದು ‘ದಿ ಸಿಟಿ ಆಫ್ ಜಾಯ್’ (ಕಲ್ಕತ್ತೆಯ ಬಗ್ಗೆ ಡೊಮಿನಿಕ್ಕು-ಲೆಪೈರೆ ಬರೆದಿರುವ ಅತ್ಯುತ್ತಮ ಪುಸ್ತಕ) ಓದುವ ಅನ್ನಿಸಿತು. ಆದರೆ ದೀಪ ಹಾಕಿದರೆ ಎಲ್ಲರಿಗೂ ನಿದ್ರೆಗೆ ತೊಂದರೆಯಾಗುತ್ತದೆಂದು ಎದ್ದು ಕೂತೆ. ಮೈಥಿಲಿಯ ತಾಯಿ ನಿದ್ದೆ ಬರುತ್ತಿಲ್ಲವಾ ಎಂದು ಕೇಳಿದಳು. ಆಕೆಯ ಮಾತಿಗೆ ಮೈಥಿಲಿ ಎಚ್ಚರಗೊಂಡು ಯಾಕೆ? ಎಂದು ಕೇಳಿದಳು. ಏನೂ ಇಲ್ಲ ಎಂದು ಮಲಗಿದೆ. ಶಬ್ದ ಭೀಕರ ಅನ್ನಿಸಿತು. ಮೆಲ್ಲಗೆ ಎದ್ದು ಬಾತ್‌ರೂಮಿದ್ದ ಕಡೆ ಹೋದೆ.


ಒಬ್ಬಾತ ಅಲ್ಲಿಯೇ ಕೆಳಗೆ ಮಲಗಿದ್ದ. ಅಲ್ಲಿ ಬೆಳಕಿತ್ತು. ಓದುತ್ತಾ ಕೂತೆ. ತಲೆ ಸಿಡಿಯುತ್ತಿತ್ತು. ಎಷ್ಟು ಬಾರಿ ಮುಖದ ಮೇಲೆ ತಣ್ಣೀರು ಹಾಕಿಕೊಂಡರೂ ತಲೆನೋವು ಕಡಿಮೆಯಾಗಲಿಲ್ಲ. ಇಷ್ಟಾದರೂ ‘ದಿ ಸಿಟಿ ಆಫ್ ಜಾಯ್’ನಲ್ಲಿಯ ಕಲ್ಕತ್ತೆಯ ಬದುಕಿನಲ್ಲಿ ಕರಗಿಹೋಗಿದ್ದೆ. ಅಲ್ಲಿಯೂ ಮೈಥಿಲಿ, ಅವಳ ತಾಯಿ ಮತ್ತು ತಮ್ಮಂದಿರಂತಹವರೇ ತುಂಬಿಕೊಳ್ಳುತ್ತಿದ್ದರು.
 ಬೆಳಗ್ಗೆ ಆರು ಗಂಟೆಯಾಯಿತು. ಮೈಥಿಲಿ ಮೇಲೆ ಹೋಗಿ ಮಲಗಿ ಎಂದಳು. ಒಂಬತ್ತು ಗಂಟೆಯವರೆಗೆ ಮಲಗಿದೆ. ಹಾಯ್ ಅನ್ನಿಸಿತು. ಬಾತ್‌ರೂಮಿನ ನಲ್ಲಿಗೆ ತಲೆ ಕೊಟ್ಟು ಸ್ನಾನ ಮಾಡಿದೆ. ತಿಂಡಿಯಾಯಿತು. ಊಟವಾಯಿತು. ಮತ್ತೆ ಒಂದರ್ಧ ಗಂಟೆ ನಿದ್ದೆಯಾಯಿತು. ಕೆಳಗೆ ಬಂದು ಕೂತೆ. ಆ ತಾಯಿಯ ತಲೆಯಲ್ಲಿ ಬೆರಳಾಡಿಸಬೇಕೆನ್ನಿಸಿತು. ನಗುತ್ತಲೇ ಕೇಳಿದೆ. ಆಕೆ ಬೇಡವೆಂದಳು. ಅಷ್ಟರಲ್ಲಿ ಸಿಂಧಿಯ ಹುಡುಗ ಏನನ್ನೋ ಹುಡುಕುತ್ತಿದ್ದ. ಹೆಂಡತಿಯ ಮೇಲೆ ಸಿಟ್ಟು ತೋರಿಸುತ್ತಿದ್ದ. ಕಾರಣ ಅವನ ಹೊಸದಾದ ಬೂಟನ್ನು ಯಾರೋ ರಾತ್ರಿ ಕದ್ದಿದ್ದರು. ಇದರ ಮೂಲಕ ಒಂದು ಗಂಟೆ ರೈಲಿನಲ್ಲಿಯ ಕಳ್ಳತನಗಳ ಬಗ್ಗೆ ಸ್ವಾರಸ್ಯಕರ ಮಾತುಕತೆಗಳು ಸಾಗಿದ್ದವು. ಹೀಗೆ ಮಾತುಕತೆ ಸಾಗಿರುವಾಗಲೇ ಪಕ್ಕದ ಬೋಗಿಯಲ್ಲಿಯ ಇಬ್ಬರು ಸೈನಿಕರ ಎರಡು ಸೂಟ್‌ಕೇಸ್‌ಗಳು ನಾಪತ್ತೆಯಾಗಿದ್ದವು.

ಮದ್ರಾಸ್ ಹತ್ತಿರವಾದಂತೆಲ್ಲ ನನ್ನ ವಿಳಾಸ ತೆಗೆದುಕೊಂಡರು. ನಾನು ಅವರ ವಿಳಾಸ ತೆಗೆದುಕೊಂಡೆ. ಮೈಥಿಲಿ, ಅವಳ ಅಮ್ಮ ಮತ್ತು ತಮ್ಮ ನನ್ನನ್ನು ವೆಲ್ಲೂರಿಗೆ ಬರಲು ಒತ್ತಾಯಿಸಿದರು. ಬೆಂಗಳೂರಿಗೆ ಹೋಗಿ ಬರುವೆ ಎಂದೆ. ನಂಬಿದರು. ಹೋಗಲು ಮನಸ್ಸಿದ್ದರೂ ನನ್ನ ಸ್ಟುಪಿಡ್ ಕೆಲಸಗಳಲ್ಲಿ ಆಗುವುದೇ ಇಲ್ಲವೆಂಬುದು ಗೊತ್ತಿತ್ತು. ಮದ್ರಾಸಿನಲ್ಲಿ ಅವಳ ಚಿಕ್ಕಪ್ಪನ ಮಗ ಕೆಲಸದಲ್ಲಿದ್ದ. ಆತ ಬಂದು ತನ್ನ ಮನೆಗೆ ಕರೆದುಕೊಂಡು ಹೋಗುವನು ಎಂದು ಹೇಳಿದರು. ಇಲ್ಲದಿದ್ದರೆ ಜೊತೆಯಲ್ಲಿರಿ ಎಂದೆ. ಯಾಕೆಂದರೆ ಅಂದು ಮದ್ರಾಸಿನಲ್ಲಿದ್ದು ಗೆಳೆಯ ಅಗ್ರಹಾರನ ಜೊತೆಯಲ್ಲಿ ಒಂದು ದಿನ ಕಳೆದು ಬರುವ ಮನಸ್ಸಿತ್ತು.
ರೈಲು ನಿಲ್ದಾಣಕ್ಕೆ ಬಂದಾಗ ಅವಳ ಚಿಕ್ಕಪ್ಪನ ಮಗ ಬಂದಿದ್ದ. ಪರಿಚಯ ಮಾಡಿಕೊಟ್ಟರು. ಮದ್ರಾಸಿನ ಆಕೆ ನಮಗೆಲ್ಲ ವಂದಿಸಿ ಅವರ ಅಣ್ಣನ ಜೊತೆ ಹೋದರು. ನಾನು ಅವರನ್ನು ಬೀಳ್ಕೊಂಡು ಹೊರಗೆ ಬಂದೆ. ಇದಾದ ಒಂದು ವಾರಕ್ಕೆ ಮೈಥಿಲಿಯಿಂದ ಪತ್ರ ಬಂತು. ಅಲ್ಲಿ ಕೇವಲ ಶಬ್ದಗಳು ಮಾತ್ರ ಇದ್ದುವು. ವಾಕ್ಯಗಳು ಇರಲಿಲ್ಲ. ಆ ಪತ್ರದಲ್ಲಿ ವೆಲ್ಲೂರಿಗೆ ಬರಲು ಪತ್ರ ಬರೆದಿದ್ದಳು. ನನ್ನ ಸೋಮಾರಿತನದಿಂದ ಉತ್ತರಿಸಲಿಲ್ಲ.


ಮೈಥಿಲಿಯ ಈಗ ಬಂದ ಪತ್ರ, ಊರಿನಿಂದ ಬಂದದ್ದು. ಮತ್ತೆ ಅದರಲ್ಲಿ ಅವಳು ವಿಳಾಸ ಬರೆದಿಲ್ಲ. ಅದೇ ಸ್ಪೆಲಿಂಗ್ ತಪ್ಪಿನ ಬಿಡಿಬಿಡಿ ಶಬ್ದಗಳು. ಅವಳ ತಮ್ಮ ಅಜಿತನಾಥರಾಯ್‌ಗೆ ಆರೋಗ್ಯ ಸುಧಾರಿಸಿಲ್ಲವಂತೆ, ತಾಯಿಗೆ ಅದೇ ತಲೆನೋವು. ತಂದೆ ಮೊದಲಿನಂತೆ ಎಂಬ ಅರ್ಥಗಳ ಶಬ್ದಗಳ ಮೂಲಕ ಮೈಥಿಲಿ ಕಣ್ಣೀರು ಸುರಿಸಿದ್ದಳು. ಈ ಬಾರಿ ಉದ್ದನೆಯ ಪತ್ರ ಬರೆಯಬೇಕೆನ್ನಿಸಿತು. ಆದರೆ ವಿಳಾಸ...? ಮತ್ತೆ ಸಿಟ್ಟಿನಿಂದ ಅಥವಾ ಬೇಸರದಿಂದ ಪತ್ರ ಬರೆಯುತ್ತಾಳೆ. ಅಂದೂ ವಿಳಾಸವಿಲ್ಲದಿದ್ದರೆ; ಆಗ ಅವಳ ಹೃದಯದ ಮತ್ತು ಮನಸ್ಸಿನ ಪರಿಸ್ಥಿತಿಯನ್ನು ಯೋಚಿಸುತ್ತಾ ಹೋಗುವೆ. ಅಥವಾ ಸಿಟ್ಟಿನಿಂದ ಇಲ್ಲವೆ ವಿಷಾದದಿಂದ ಪತ್ರ ಬರೆಯುವುದನ್ನು ನಿಲ್ಲಿಸಿಬಿಡಬಹುದು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...