Friday, September 11, 2015

ಡಾ. ಎಂ. ಎಂ. ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ : ಪತ್ರಿಕಾಗೋಷ್ಟಿ
ಪ್ರಖರಚಿಂತನೆಗೆ ಹೆಸರಾದ ಡಾ. ಎಂ.ಎಂ. ಕಲಬುರ್ಗಿ ಅವರು ಸಾಂಸ್ಕೃತಿಕರಂಗದಲ್ಲಿ ಎಷ್ಟೇ ಪ್ರತಿರೋಧ ಹುಟ್ಟಿಕೊಂಡರೂ ಅವರು ನಂಬಿಕೊಂಡ ಸತ್ಯವನ್ನು ಪ್ರತಿಪಾದಿಸುತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧರಾದವರು. ಧರ್ಮಾಂಧತೆ, ಕೋಮುವಾದ, ಮನುವಾದ ನಿತ್ಯ ಬದುಕಿನಲ್ಲಿ ಅವರು ವಿರೋಧಿಸಿದ ವಿಚಾರಗಳು. ಅಂಥವರನ್ನು ಕೊಲ್ಲುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ವಿಚಾರವಾದವನ್ನು, ವೈಚಾರಿಕತೆಯನ್ನು ನಾಶ ಮಾಡುವ ಪ್ರಯತ್ನಗಳು ಕರ್ನಾಟಕದಲ್ಲಿ ಹುಟ್ಟಿಕೊಂಡಿರುವುದು ಒಂದು ರೀತಿಯ ಸಾಂಸ್ಕೃತಿಕ ಭಯೋತ್ಪಾದನೆಯೇ ಆಗಿದೆ. ಅದು ವೈಚಾರಿಕ ಭಿನ್ನಾಭಿಪ್ರಾಯವನ್ನು ಸಹಿಸದ ಮನಸ್ಥಿತಿಗಳು ಅದನ್ನು ಹಿಂಸೆಯಿಂದ ಎದುರಿಸಲು ಮುಂದಾಗಿದ್ದು ಕಲಬುರ್ಗಿಯವರ ಹತ್ಯೆಯೇ ಸಾಕ್ಷಿಯಾಗಿದೆ. ಇದು ಕನ್ನಡ ಸಾಂಸ್ಕೃತಿಕ ಲೋಕದ ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿರುವ ಈ ವಿದ್ಯಮಾನ ಮತೀಯ ಭಯೋತ್ಪಾದನೆಯ ವಿರಾಟ ರೂಪಕ್ಕೆ ಸಾಕ್ಷಿಯಾಗಿದೆ. ಕಲಬುರ್ಗಿಯವರ ಹತ್ಯೆ ನಾಗರಿಕತೆಯನ್ನು ಅಲುಗಾಡಿಸುವ ಕೆಲಸವಾಗಿದೆ. ಹತ್ಯೆಯ ತನಿಖೆಯನ್ನು ತೀವ್ರಗೊಳಿಸಿ   ಒಂದು ಕಾಲಮಿತಿ ಹಾಕಿಕೊಂಡು ಹತ್ಯಾಕೋರರನ್ನು ಬಂಧಿಸಲು ಸರಕಾರದ ಮೇಲೆ ಒತ್ತಡ ತರಲು ಧಾರವಾಡದ ಹಿರಿಯ ಸಾಹಿತಿಗಳು, ಪ್ರಗತಿಪರ ಸಂಘಟನೆಗಳು, ಕಲಾವಿದರು, ವಿದ್ಯಾರ್ಥಿ- ಯುವಜನ- ಮಹಿಳಾ ಸಂಘಟನೆಗಳು ಸಭೆ ಸೇರಿ ಚರ್ಚಿಸಿ ಡಾ. ಎಂ. ಎಂ. ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ ಅಸ್ಥಿತ್ವಕ್ಕೆ ಬಂದಿದೆ. ವೇದಿಕೆ ಕ್ರಿಯಾ ಸಮಿತಿ ಮತ್ತು ಸಲಹಾ ಸಮಿತಿಯ ಅಡಿಯಲ್ಲಿ ಕೆಲಸ ಮಾಡಲಿದೆ. ವೇದಿಕೆಯು ಹತ್ಯಾಕೋರರನ್ನು ಬಂಧಿಸುವದಲ್ಲದೆ ಕೊಲೆಯ ಹಿಂದಿನ ಕಾರಣಗಳನ್ನು ಬಯಲಿಗೆಳೆಯಲು ಆಗ್ರಹಿಸುತ್ತದೆ.

ಈ ಕೊಲೆಯ ಹಿಂದೆ ಮತೀಯ ಹಿಂಸೆ ಮತ್ತು ಹುಸಿ ಧಾರ್ಮಿಕ ಶಕ್ತಿಗಳು ವಿಚಾರವಾದ ನಾಶ ಮಾಡುವ ವಿಶಾಲ ಕ್ಯಾನ್ವಾಸ ಹೊಂದಿರುವಂತಿದೆ. ಸರಕಾರ ಈ ವಿಷಯದಲ್ಲಿ ದಿಟ್ಟತನದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು. ಈ ದುರಂತವನ್ನು ಸರಕಾರ ಹಗುರವಾಗಿ ಪರಿಗಣಿಸಬಾರದು. ಹತ್ಯೆಗೆ ಪೊಲೀಸ ವ್ಯವಸ್ಥೆಯ ವೈಪಲ್ಯತೆ, ಗುಪ್ತಚಾರ ಇಲಾಖೆಯು ದಿಕ್ಕೆಟ್ಟುಹೋಗಿರುವದಕ್ಕೆ ಸಾಕ್ಷಿಯಾಗಿದೆ. ಸರಕಾರ ಈಗಲಾದರೂ ಈ ಲೋಪಗಳನ್ನು ಸರಿಪಡಿಸಿ ಚುರುಕುತನ ತೋರದೇ ಹೋದರೆ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುವದೆಂಬ ವಿಶ್ವಾಸ ನಾಗರಿಕರಲ್ಲಿ ಹೊರಟುಹೋಗುತ್ತದೆ. ಕಲಬುರ್ಗಿವರ ಹತ್ಯೆಗೆ ಡಿಸಿ, ಮತ್ತು ಎಸ್ಪಿಯನ್ನು ಹೊಣೆಗಾರರನ್ನಾಗಿ ಮಾಡಬೇಕು.

ಪ್ರಕರಣದ ನಂತರದ ಸರಕಾರ ಸಾಹಿತಿಗಳಿಗೆ ರಕ್ಷಣೆಗೆ ಮುಂದಾಗಿದೆ. ಅದರ ಜೊತೆಗೆ ಭಯ ಹುಟ್ಟಿಸುತ್ತಿರುವ, ಹತ್ಯೆಯ ಬೆದರಿಕೆ ಒಡ್ಡುತ್ತಿರುವ ಮತೀಯ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ವೇದಿಕೆ ಆಗ್ರಹಿಸುತ್ತದೆ.


ಸರಕಾರ ಹತ್ಯಾಕಾರರ ಮಾಹಿತಿ ನೀಡುವವರಿಗೆ ನಗದು ಬಹುಮಾನ ಘೋಷಣೆ ಮಾಡಬೇಕು. ಮಾಹಿತಿದಾರರ ವಿವರಗಳನ್ನು ಗುಪ್ತವಾಗಿ ಇಡಬೇಕು.


ಡಾ. ಎಂ ಎಂ ಕಲಬುರ್ಗಿಯವರ ಹೆಸರಿನಲ್ಲಿ ಧಾರವಾಡ ಸಂಶೋಧನಾ ಕೇಂದ್ರ ಆರಂಭಿಸಲು ಮುಂದಾಗಬೇಕು. ವಿವಿಯಲ್ಲಿ ಕಲಬುರ್ಗಿಯವರ ಅಧ್ಯಯನ ಪೀಠವನ್ನು ಆರಂಭಿಸಬೇಕು.ಸೆಪ್ಟೆಂಬರ್ ೧೪ ರಂದು ಕಲಬುರ್ಗಿಯವರ ಹತ್ಯೆ ಖಂಡಿಸಿ ವೇದಿಕೆ ಬೃಹತ್ ಪ್ರತಿಭಟನೆಯನ್ನು ಸಂಘಟಿಸಿದೆ. ರಾಜ್ಯದ ನಾನಾ ಭಾಗಗಳಿಂದ ಹಿರಿಯ ಸಾಹಿತಿಗಳು, ಕಲಾವಿದರು, ವಿದ್ಯಾರ್ಥಿ ಯುವಜನರು ನಾಗರಿಕರು ಪಾಲ್ಗೊಳ್ಳಲು ಬರಲಿದ್ದಾರೆ. ಈ ಪ್ಯಾಶಿಷ್ಟ ಹತ್ಯೆ ಖಂಡಿಸಿ ನಾನಾ ಅಕಾಡಮಿಗಳ ಅಧ್ಯಕ್ಷರು, ರಂಗಾಯಣದ ನಿರ್ದೇಶಕರು, ನೂರಾರು ಪ್ರಗತಿಪರ ಸಂಘಟನೆಗಳ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪ್ರತಿಭಟನಾ ಮೆರವಣಿಗೆ ಧಾರವಾಡದ ಕಡಪಾ ಮೈದಾನದಲ್ಲಿ ೧೦ ಗಂಟೆಗೆ ಜಮೆಯಾಗಿ ಮೆರವಣಿಗೆ ೧೧ ಗಂಟೆಗೆ ಮೆರವಣಿಗೆ ಹೊರಡುವುದು. ನಗರದ ಮುಖ್ಯಬೀದಿಗಳಲ್ಲಿ ಸಂಚರಿಸಿ ಕಡಪಾ ಮೈದಾನಕ್ಕೆ ಹಿಂತಿರುಗಿ ಪ್ರತಿಭಟನಾ ಸಮಾವೇಶವಾಗಿ ಏರ‍್ಪಡುವುದು.ಹತ್ಯೆಯನ್ನು ವಿರೋಧಿಸಿ ನೂರಾರು ಕಲಾವಿದರು ಮೈದಾನದಲ್ಲಿ ೫೦ ಅಡಿ ವಿಸ್ತಾರದ ಕ್ಯಾನ್ವಾಸ್ ಮೇಲೆ ಚಿತ್ರರಚನೆ ಮಾಡುವರು. ಸಂಗೀತಗಾರರು ಹಾಡುಗಳನ್ನು ಹಾಡುವರು.ಪ್ರತಿಭಟನಾ ಸಮಾವೇಶದ ನಂತರ ೧೫ರಂದು ಹಿರಿಯ ಸಾಹಿತಿಗಳ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳನ್ನೊಂಡ ನಿಯೋಗ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ತನಿಖೆಯನ್ನು ತೀವ್ರಗೊಳಿಸಲು ಒತ್ತಾಯಿಸುವುದು.

ಡಾ. ಗುರಿಲಿಂಗ ಕಾಪ್ಸೆ                          ಶಂಕರ ಹಲಗತ್ತಿ               ಬಸವರಾಜ ಸೂಳಿಭಾವಿ    ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ
ಡಾ. ಬಾಳಣ್ಣ ಸೀಗಿಹಳ್ಳಿ                        ಬಿ. ಐ. ಈಳಗೇರ             ರಾಚಪ್ಪ ಹಡಪದ              ಶಂಕರಗೌಡ ಸಾತ್ಮಾರ      
ಗಂಗಾಧರ ಬಡಿಗೇರ                           ಬಿ. ಮಾರುತಿ                   ಲಕ್ಷ್ಮಣ ಬಕ್ಕಾಯಿ              ಹೇಮಂತ ರಾಮಡಗಿ
              

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...