Saturday, October 31, 2015

ಬೆಂಕಿಯ ಹೂವುಕಥೆ

ರೇಣುಕಾ ನಿಡಗುಂದಿ

ರೇಣುಕಾ ನಿಡಗುಂದಿ ಧಾರವಾಡದಲ್ಲಿ ಹುಟ್ಟಿದ್ದು ಕಳೆದ ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸವಾಗಿದ್ದಾರೆ. ಖಾಸಗೀ ಕಂಪನಿಯೊಂದರಲ್ಲಿ ಕಾರ್ಯದರ್ಶಿಯಾಗಿ ಉದ್ಯೋಗ ಮಾಡುತ್ತಿದ್ದಾರೆ. ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ  ಜಂಟಿಕಾರ್ಯದರ್ಶಿಯಾಗಿ, ಸಂಘದ ಮುಖವಾಣಿಅಭಿಮತ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ.  ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ.  ಮೊದಲ ಕವನ ಸಂಕಲನ " ಕಣ್ಣ ಕಣಿವೆಕೆಂಡಸಂಪಿಗೆ ವೆಬ್ಪೋರ್ಟಲ್ ನಲ್ಲಿ ಬರೆಯುತ್ತಿದ್ದ ಯಮುನಾತೀರೆ ಅಂಕಣ ಬರಹಗಳ  "ದಿಲ್ಲಿ ಡೈರಿಯ ಪುಟ", ಅಮೃತಾ ಪ್ರೀತ್ಂ ಸಂಗಾತಿ ಇಮರೋಜ್ ಕುರಿತು ಬರೆದ ಬರಹ, ಅನುವಾದಿಸಿದ ಕವಿತೆ ಅಮೃತಾ ನೆನಪುಗಳು” ಅವರ ಪ್ರಕಟಿತ ಕೃತಿಗಳಾಗಿವೆ. ಮನಸೇ" ದ್ವೈಮಾಸಿಕದಲ್ಲಿ ರಾಜಧಾನಿ ಮೇಲ್ ಅಂಕಣ ಬರೆಯುತ್ತಿದ್ದಾರೆ

raynuka@gmail.com


09717461669
  
ಮಳೆ ಜಿಟಿ ಜಿಟಿ ಎಂದು ಶುರುವಾದದ್ದು ಇನ್ನೂ ಬಿಟ್ಟಿಲ್ಲ. ಹಾಳಾದ್ದು ಧಾರವಾಡದ ಮಳೆಯೆ ಹೀಗೆ. ಮಣ್ಣೆತ್ತಿನ ಅಮವಾಸ್ಯೆಯಿಂದ ಹಿಡಿದು ಮಹಾನವಮಿಯವರೆಗೂ ಹೀಗೆ ಒಮ್ಮೆ ಜೋರು, ಒಮ್ಮೆ ಸಣ್ಣಗೆ ರವೆ ಜರಡಿ ಹಿಡಿದಂತೆ ಸದಾ ಚಿಟಿ-ಛಿಟಿ ಅಂತಿರುತ್ತದೆ. ಬಟ್ಟೆ ಒಣಗದೇ ಮನೆತುಂಬ ಗಳದ ಮೇಲೆ ಹರವಿಕೊಂಡಿರುತ್ತವೆ. ಭಾಗಮ್ಮ ಮಡಿಕೋಲಿನಿಂದ ಆಚೀಚೆ ಮಾಡಿ ಪುನಃ ಬೇರೆಯವನ್ನು ಹಾಕಿ, ಮೊದಲಿನ ಅರೆಬರೆ ಒಣಗಿದ್ದುವನ್ನು ನೀರೊಲೆಯ ಹಂಡೆಯ ಮೇಲೊ ಅಡುಗೆಮನೆಯ ಗಳದ ಮೇಲೋ ಹಾಕಿ ಒಣಗಿಸಿದ್ದೆ ಒಣಗಿಸಿದ್ದು. ಹಳೇ ಕಾಲದ ಕರೇಹೆಂಚಿನ ಮನೆ ಸೋರಿ ತಟಗುಡುತ್ತದೆ. ಅದನ್ನು ಆಳಿಗೆ ಹಚ್ಚಿ ಹೆಂಚು ಹೊದಿಸಬೇಕು. ಕುಂಬಾರನಿಗೆ ಹೆಂಚು ತಯಾರಿಡಲೂ ಹೇಳಿದರೆ ಅವನೇ ನಿಂತು ಮಾಡಿಸುತ್ತಾನೆ. ಸ್ವಲ್ಪವಾದರೂ ಬಿಸಿಲು ಬಿದ್ದರೆ ಸೈ. ಇಲ್ಲದಿದ್ರೆ ಮಳೆಗೆ ನೆನೆದ ಹೆಂಚುಗಳು ಪುಡಿಪುಡಿಯಾದಾವೇ.!! ಮನೆಯಲ್ಲಿ ಶಾಲೆಗೆ ಹೋಗುವ ಒಬ್ಬ ಮಗ, ಮಗಳು, ಕಾಲೇಜಿಗೆ ಹೋಗುವ ಇನ್ನೊಬ್ಬಳು, ಮೂವರು ಮಕ್ಕಳ ಸಂಸಾರದ ನೊಗ ಹೊತ್ತು, ಇಪ್ಪ್‌ತ್ತು ವರ್ಷಗಳಿಂದ ಒಬ್ಬಳೇ ಹೆಣಗುವ ಭಾಗಮ್ಮ, ಅಕ್ಕ ಪಕ್ಕದವರಿಗೆ ಬೇಕಾಗಿದ್ದ ಹೆಣ್ಣುಮಗಳು.

ಅವಳು ಊರಿಗೆ ಮದುವೆಯಾಗಿ ಬಂದಾಗಿನಿಂದ ನೋಡಿದವರಿಗಷ್ಟೆ ಗೊತ್ತು ಹೆಂಗಸಿನ ಪಾಡುಪಟ್ಟ ಬದುಕು, ಕಷ್ಟಸಹಿಷ್ಣುತೆ. ಗಂಡನೆನ್ನುವ ಪ್ರಾಣಿ ಸುಬ್ಬಾಚಾರೀ ಉದರ ಪೋಷಣೆಗೆ ದೂರದ ಮುಂಬೈ ಹತ್ತಿರ ಯಾವುದೋ ಹಳ್ಳಿಯಲ್ಲಿ. ಖಾದೀ ಗ್ರಾಮೊದ್ಯೋಗದ ಒಂದು ಯಾವುದೋ ವಿಭಾಗ. ಭಾಗಮ್ಮ ಮಾತ್ರ ಇಲ್ಲಿ ಮಕ್ಕಳೊಂದಿಗೆ. ಹೇಳಿಕೊಳ್ಳಲು ಇದ್ದ ಊರಿನಲ್ಲಿಯೇ ತವರಿನವರಿದ್ದರೂ ಇದ್ದಿಯಾ? ಸತ್ತೆಯಾ? ಎಂದೂ ಕೇಳದ ಅಣ್ಣ-ತಮ್ಮಂದಿರು. ಏಳೇ ಮಕ್ಕಳ ಲಾಲನೆ-ಪಾಲನೆ, ನಂತರ ಶಾಲೆ, ಪುಸ್ತಕ, ಬಟ್ಟೆ ಬರೆ, ಜಡ್ಡು ಜಾಪತ್ರೆ, ನೆಂಟರು, ಕೊಡು-ತಗೊಳ್ಳುವ ವ್ಯವಹಾರ ನೂರು ತಾಪತ್ರಯಗಳನ್ನೂ ಒಬ್ಬಳೇ ಈಜಿದ್ದಾಳೆ. ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಇಷ್ಟು ವರ್ಷಗಳನ್ನು ಒಂಟಿಯಾಗಿ ಸಂಸಾರಕ್ಕಾಗಿ ಜೀವ ತೇದ ಭಾಗಮ್ಮ, ಇನ್ನೇನು ರಾಯರೊಬ್ಬರು ನೌಕರಿ ಮುಗಿಸಿ ಮನೆಗೆ ಬಂದರೆ ಸಾಕು, ಹೆಣ್ಣುಮಕ್ಕಳ ಮದುವೆ ಮಾಡಬೇಕೆಂದು ಅನ್ನುತ್ತಿರುವುದರಲ್ಲೇ ಮಹಾಪುಣ್ಯಾತ್ಮ ಗಂಡ ಊರಿಗೆ ಬರುವದರ ಜತೆಗೆ ತನ್ನ ಖಾಯಿಲೆಯನ್ನೂ ತಗೊಂಡೇ ಬರಬೇಕೆ ? ಎಂಥ ಕೆಟ್ಟ ಹಣೆಬರಹ ಭಾಗಮ್ಮನದು ! ಮದುವೆಯಾಗಿ ಯಾವ ಸುಖವನ್ನೂ ಕಾಣದ ಜೀವ. ಬರೀ ದುಡಿಯುವದರಲ್ಲೇ ಕಳೆಯಿತು. ಗಂಡ ಕಳಿಸುವ ಮನಿಯಾರ್ಡರಿನ ದಾರಿ ಕಾಯುವದು, ಮನೆಗೆ ಗಂಡಸಿನಂತೆಯೇ ಎಲ್ಲ ಸಾಮಾನು ಸರಂಜಾಮು ಜೋಡಿಸುವದು, ಮಕ್ಕಳೊಂದಿಗೆ ಗಾಣದ ಎತ್ತಿನಂತೆ ಏಗುವುದೆ ಆಯಿತು ಜೀವನವೆಂಬ ಸರ್ಕಸ್ಸು. ಪಾಪದ ಮಕ್ಕಳು ತಾಯಿಯಾಂದಿಗಿನ ಬದುಕು, ಕಷ್ಟಗಳನ್ನು ಉಂಡಿದ್ದಾರೆ. ಪ್ರತಿಯಾಂದಕ್ಕೂ ತಾವೇ ಓಡಾಡಿಕೊಂಡು ಅಗತ್ಯದ ಕೆಲಸ ಪೂರೈಸುವದನ್ನು ಕಲಿತಿದ್ದಾರೆ. ದೊಡ್ಡವಳು ಶಾರದೆಯೆ ತನ್ನ ತಂಗಿಯ ಹೈಸ್ಕೂಲು ದಾಖಲೆ, ತಮ್ಮನ ಸ್ಕೂಲಿನ ದಾಖಲೆ ಮಾಡಿಸಿ, ತಮ್ಮ ಸ್ಕಾಲರ್ಶಿಪ್‌ ಗಾಗಿ ಅರ್ಜಿಯನ್ನು ಬರೆಯುವುದು, ಅವರಿಗೆ ಬುಕ್ಸು, ಫೀಸು ಎಲ್ಲ ಶಾರದೆಯೆ ಮಾಡುವದು. ನೀರಿನ ಬಿಲ್ಲು , ಲೈಟಿನ ಬಿಲ್ಲು ತುಂಬುವದು ಅವಳೇ, ಈಗೀಗ ಚಿಕ್ಕವಳು ಸುಮನಳಿಗೂ ಹೇಳಿಕೊಡುತ್ತಾಳೆ.

ಭಾಗಮ್ಮನ ಸರೀಕರು, ನೆರೆಹೊರೆಯ ಹೆಂಗಸರು ಇನ್ನೂ ಚಿಕ್ಕವರಂತೆ ಕಾಣುತ್ತಾರೆ, ಭಾಗಮ್ಮ ಅವರ ಅಜ್ಜಿಯಂತಾಗಿದ್ದಾಳೆ. ಭಾಗಮ್ಮನ ಬೆಳಗಿನ ವೇಳೆ ಮಕ್ಕಳನ್ನು ಶಾಲೆ- ಕಾಲೇಜಿಗೆ ಕಳಿಸುವದರಲ್ಲೇ ಕಳೆಯುತ್ತದೆ. ಇನ್ನು ಮಡಿಯಲ್ಲಿ ಅಡುಗೆ ಮಾಡುವದಾದರೂ ಯಾತಕ್ಕಾಗಿ, ಮಡಿ ಹಬ್ಬ ಹರಿದಿನಗಳಿಗಷ್ಟೇ. ಆಗ ಮಕ್ಕಳೂ ಹಾಗೇ ಉಪವಾಸವಿದ್ದು, ತಂಗಳು ಇದ್ದುದನ್ನು ತಿಂದುಕೊಂಡು ಹೋಗುತ್ತಾರೆ. ಭಾಗಮ್ಮ ತನ್ನ ಪೂಜೆ -ಅಡಿಗೆ ಎಲ್ಲ ಮುಗಿಸಿ, ತಾನೇ ನೈವೇದ್ಯವಿಟ್ಟು, ಮಕ್ಕಳಿಗಾಗಿ ಕಾಯುತ್ತಾ, ಅವು ಬಂದ ನಂತರವೇ ಉಣ್ಣುತಾಳೆ ಅವರೊಟ್ಟಿಗೆ. ಯಜಮಾನನಿಲ್ಲದ ಮನೆಯೆಂದು ಯಾರೂ ಬೊಟ್ಟುಮಾಡಿ ತೋರಿಸದಂತೆ ಸಾತ್ವಿಕವಾದ ಸರಳ ಮರ್ಯಾದೆಯ ಜೀವನ ಅವರದು. ಎಲ್ಲಿಗೂ ಹೋಗುವಂತಿಲ್ಲ- ಬರುವಂತಿಲ್ಲ. ಏನಾದರೂ ಅರಿಸಿನ ಕುಂಕುಮಕ್ಕೆ, ನಾಮಕರಣಕ್ಕೆ , ಮದುವೆ-ಮುಂಜಿಗೆ ಅಂತಾ ಹೋದರೆ ಆಯಿತು. ನಾಲ್ಕು ಜನರಲ್ಲಿ ಗೌರವಾದರಗಳನ್ನು ಇವೇ ಮನೆತನಸ್ಥ ಗೃಹಿಣಿಗೆ ಹೆಸರು ತಂದುಕೊಡುತ್ತವೆ. ಮನೆಯಲ್ಲಿ ಗಂಡಸರಿಲ್ಲವೆಂದು ಯಾವ ಪೂಜೆ-ಪುನಸ್ಕಾರ, ಹಬ್ಬಗಳನ್ನೂ ಬಿಡುವದಿಲ್ಲ ಭಾಗಮ್ಮ. ಮಕ್ಕಳಿಗಾಗಿ, ಅವುಕ್ಕಾದರೂ ಹೇಗೆ ಗೊತ್ತಾಗಬೇಕು? ನಾನು ಮಾಡಿದರೆ ತಾನೆ ಅನ್ನುತ್ತಾಳೆ. ಎಲ್ಲವೂ ಕ್ರಮವಾಗಿಯೇ ನಡೆಯಬೇಕು. ಈಗ ಹೆಣ್ಣುಮಕ್ಕಳು ಶಾರದ ಬಿ.. ಒಂದನೇ ವರ್ಷದಲಿ ್ಲ, ಸುಮನ ಹತ್ತನೇತರಗತಿ, ಮಗ ಗೋಪಾಲ ಏಳನೇ ಇಯತ್ತೆ. ಭಾಗಮ್ಮನಿಗೆ ಮಕ್ಕಳೇ ಆಸ್ತಿ. ಅದೇ ಲೋಕ.. ಅವನ್ನು ಒಂದು ದಂಡೆಗೆ ತಲುಪಿಸಿದರೆ ತನ್ನ ಜನ್ಮ ಸಾರ್ಥಕವೆಂದುಕೊಂಡಿದ್ದಾಳೆ. ಬೇರೇತಕ್ಕೂ ಬಯಸದ ಜೀವ ಅವಳದು. ಬೇರೆ ಯಾರೂ ಅವರ ನೆರವಿಗೆ ಬರದೇ ದೂರದಲ್ಲೇ ಇರುತ್ತಾರೆ. ಸುಬ್ಬಾಚಾರಿಯ ಮನಿಯಾರ್ಡರಿನ ಮೇಲಿನ ಕಣ್ಣು, ಎಲ್ಲರಿಗೂ ಗೊತ್ತಿದ್ದುದರಿಂದಲೋ ಏನೋ ಯಾರೂ ತಲೆಕೆಡಿಸಿಕೊಳ್ಳುವದಿಲ್ಲ. ದೊಡ್ದ ಗಂಟೇ ಸುಬ್ಬಾಚಾರಿ ಭಾಗಮ್ಮನಿಗೆ ಕಳುಹುತ್ತಾನೆಂದೇ ಅವರ ಲೆಕ್ಕ. ಆದರೆ ಭಾಗಮ್ಮ- ಮಕ್ಕಳಿಗೇ ಗೊತ್ತು. ಅವರಿಗೆ ದಾಕ್ಷಿಣ್ಯಕ್ಕಾದರೂ ಹೆಗಲುಕೊಟ್ಟು ನಿಲ್ಲುವ, ಸುಖ-ದುಃಖ ಕೇಳುವರ್ಯಾರೂ ಇಲ್ಲ ಅವರ ಪಾಲಿಗೆ.

ನೌಕರಿ ಮುಗಿಸಿ ರಿಟೈರ್ಡ ಆಗಿ ರಾಯರು ಊರಿಗೆ ಬಂದು ಎರಡು ತಿಂಗಳಾಗಿರಬಹುದು. ಮನೆಯಲ್ಲಿ ಅವರಿಗೆ ಕಟ್ಟಿಹಾಕಿದಂತಾಗುತ್ತಿತ್ತೋ ಏನೋ, ಬೆಳೆದ ಮಗಳನ್ನು ಕಂಡು ಚಿಂತೆಯೋ, ಯಾವದಕ್ಕೂ ಮಾತಾಡದೇ ಮೂಕ ಬಸವಣ್ಣನಂತೆ ಕುಳಿತರೆ ಆಯಿತು. ಹನ್ನೆರಡು ವರ್ಷದ ವನವಾಸ ಮಾಡಿ ಬೇಸತ್ತ ಭಾಗಮ್ಮ ಸಂತೋಷದಿಂದ ಈಗಲಾದ್ರೂ ಸ್ವಲ್ಪ ನೆಮ್ಮದಿಯಿಂದ ಉಸುರಾಡಬಹುದು, ಬಂದ್ರಲ್ಲ ಸಂಸಾರದ ಭಾರ ಈಗ ಅವರೇ ಹೊರಲಿ ಅಂದುಕೊಂಡರೆ, ಆಗಿದ್ದು ಬೇರೆಯೇ,

12 ವರ್ಷಗಳ ಸ್ವೇಚ್ಛಾಚಾರಿಯಾದವರಿಗೆ ಸಂಸಾರ ಒಂದು ಬಂಧನವೆನಿಸಿದ್ದು ಯಾಕೋ? ನಿವೃತ್ತ ಜೀವನ ಎಲ್ಲರಿಗೂ ಬರುವಂಥದೇ ಆದರೆ ಸುಬ್ಬಾಚಾರೀಗೆ ಮಾತ್ರ ಎತ್ತೆತ್ತಲೋ ಹರಿದು ಹಂಚಿಹೋದ ಬದುಕಿನ ತುಂಡುಗಳನ್ನು ಎಲ್ಲಿಂದ , ಯಾವ ತುದಿಯಿಂದ, ಯಾವ ಕೊನೆಹಿಡಿದು ಸಾಗಬೇಕೆಂದೇ ಅರ್ಥವಾಗುತ್ತಿರಲಿಲ್ಲ. ಬೆಳಿಗ್ಗೆ ಸ್ನಾನ-ಸಂಧ್ಯಾವಂದನೆಗಳನ್ನೇ ಮರೆತುಹೋಗಿದ್ದ ಅವರಿಗೆ ಈಗ ನೆನಪಿಸಿಕೊಂಡು ಮಾಡಬೇಕಾಗಿದೆ. ಅಲ್ಲಿ ಮುಂಬೈನಲ್ಲಿ ಜನಿವಾರವನ್ನು ಒಂದು ಗೂಟಕ್ಕೆ ನೇತಾಡಿಸಿ, ಊರಿಗೆ ಮಾತ್ರ ಬರುವಾಗ ಹೊಸದೊಂದು, ಮತ್ತೊಂದು ಧರಿಸಿಬರುತ್ತಿದ್ದ ಸುಬ್ಬಾಚಾರಿ ಜಾತಿ-ಕುಲಗೆಟ್ಟವನೆಂದು ಭಾಗಮ್ಮನಿಗೇನು ಗೊತ್ತು? ಅವರು ಊರು ಬಿಟ್ಟು ಹೋದಾಗ ಶಾರದೆಗೆ 9-ವಯಸ್ಸು, ಸುಮನಳು 5 ಮತ್ತು ಗೋಪಾಲ 8 ತಿಂಗಳ ಮಗು. ಕೈಗೂಸು. ಅವರಿಗೆ ದೂರದ ಠಾಣೆಗೆ ವರ್ಗವಾದಾಗ ಹೊಟ್ಟೆಪಾಡಿಗೆ ಯಾವ ದಾರಿಕಾಣದೇ ಹೋಗುವಂಥ ಪರಿಸ್ಥಿತಿ. ಭಾಗಮ್ಮ ಎದೆಗುಂದದೇ ಪತಿಯನ್ನು ಕಳಿಸಿಕೊಟ್ಟಿದ್ದಳು, ನೋಡಿ ಎಲ್ಲ ಹೊಂದಾಣಿಕೆಯಾದ ಮೇಲೆ ಬೇಕಾದರೆ ತನ್ನನ್ನೂ ಮಕ್ಕಳನ್ನೂ ಕರೆದೊಯ್ಯಬಹುದೆಂದುಕೊಂಡಿದ್ದು ಅವಳಿಗೆ ಕನಸಾಗಿಯೇ ಉಳಿಯಿತು. ಅವರನ್ನು ಕರೆದೊಯ್ಯುವದಿರಲಿ, ಬೇಸಿಗೆಯ ರಜೆಗೆ ಮಕ್ಕಳುಅಪ್ಪಾ , ನಮಗೂ ಮುಂಬೈ ತೋರಿಸುಎಂದು ಹಲುಬಿದರೂ ಯಾವದಕ್ಕೂ ಸೊಪ್ಪು ಹಾಕಿದವರಲ್ಲಾ. ‘ ನಿಮ್ಮನ್ನೆಲ್ಲಾ ಕಟ್ಟಿಕೊಂಡು ಹೋಗಿ ಎನು ಮಾಡಲಿ? ಇರಲು ದೊಡ್ಡ ಮನೆ ಬೇಡವೇ? ಅಡಿಗೆ ಊಟಕ್ಕೆ ಪಾತ್ರೆ-ಪಗಡಿ ಬೇಡವೇ? ಅದೊಂದು ಹಳ್ಳಿ, ಆದಿವಾಸಿಗಳಂಥ ಜನರಿರುವ ಹಳ್ಳಿ. ನಾನೇನು ಮುಂಬೈಯಲ್ಲಿ ಚೈನಿ ಹೊಡೆಯಲು ಹೋಗಿದ್ದೇನೆ ಅಂದುಕೊಂಡ್ರಾ?’ ಅಂತ ದಬಾಯಿಸಿದ್ದಕ್ಕೆ ಮಕ್ಕಳೂ ಯಾವತ್ತೂ ಅವರನ್ನು ಮುಂಬೈ ತೋರಿಸುವ ಬಗ್ಗೆ ಕಾಡಿಸಲಿಲ್ಲ, ಅವರು ತಾವಾಗಿಯೂತೋರಿಸುತ್ತೇನೆ ಬನ್ನಿಅನ್ನಲಿಲ್ಲ.

ವರ್ಷಕ್ಕೆ ಎರಡುಬಾರಿ ತಿಂಗಳೊ, ಹದಿನೈದೋ ದಿನ ರಜೆಗೆ ಬಂದು ಹೋದರೆ ಮುಗಿಯಿತು ಸುಬ್ಬಾಚಾರಿಗೆ. ಆಗಲೇ ಅವರಿಗೆ ಹೆಂಡತಿಗೆ ಕಳಿಸುವ ಮನಿಯಾರ್ಡರಿನ ವಿವರಣೆ ಸಿಗುತ್ತದೆ. ಇಲ್ಲಿಯವರಿಗೆ ತಮ್ಮ ಸಂಬಳವೆಷ್ಟೆಂದು ಭಾಗಮ್ಮನಿಗೆ ಹೇಳಿಲ್ಲ, ಅವಳಿಗೆ ಕಳಿಸುವದು ಮಾತ್ರ 450 ರುಪಾಯಿ ಮಾತ್ರ. ಅದರಲ್ಲೇ ದುಡ್ಡು ಹೇಗೆ ಖರ್ಚಾಯಿತೆಂದು ಭಾಗಮ್ಮ ನೋಟಬುಕ್ಕಿನಲ್ಲಿ ಬರೆದು ಇಟ್ಟಿರುತ್ತಾಳೆ. ಅಷ್ಟೇ ದುಡ್ಡಿನಲ್ಲಿ ಮಕ್ಕಳ ಓದು, ಪುಸ್ತಕ ಬಟ್ಟೆ, ಮನೆಗೆ ಬೇಕಾಗುವ ದಿನಸಿ, ಕಾಳು-ಕಡ್ಡಿ, ಉರುವಲಕ್ಕೆ ಕಟ್ಟಿಗೆ, ಸೀಮೆಯೆಣ್ಣೆ, ರೇಶನ್ನಿಂದ ಸಕ್ಕರೆ, ಅಕ್ಕಿ ಎಲ್ಲಾ ನಡೆಸಿಕೊಂಡು ಮತ್ತೆ ಉಳಿಸಿ ಹೆಣ್ಣುಮಕ್ಕಳಿಗೆ ಕಿವಿಯೋಲೆ, ಕಾಲಿನಚೈನು ಎಲ್ಲ ಮಾಡಿರುತ್ತಾಳೆ, ಅಂಥ ಜಾಯಮಾನ ಆಗಿನದು. ಅದು ಸಾಲದೆಂಬಂತೆ ದೇವರು ದಿಂಡರು ಎಂದರೆ ಭಕ್ತಿ, ವಿಶ್ವಾಸ ಅಪಾರ ಅವಳಿಗೆ.

ಈಗ ಧುತ್ತೆಂದು ಅಪ್ಪ ಮನೆಗೆ ಬಂದು ಕುಳಿತಿದ್ದಾನೆ, ಮಕ್ಕಳಿಗೆ ಮುಜುಗರ, ನಾಚಿಕೆ ಏನೋ ಅಪರಿಚಿತ ಭಾವನೆ ಇನ್ನೂ ಹೋಗಿಲ್ಲ. ಇದ್ದುದರಲ್ಲೇ ಸುಮನ ಅಪ್ಪನಿಗೆ ಹೊಂದಿಕೊಂಡಿದ್ದಾಳೆ. ಗೋಪಾಲನಂತೂ ಕೂಸಿದ್ದಾಗಿನಿಂದ ಅಷ್ಟೊ, ಇಷ್ಟೊ ಬಂದಾಗೊಮ್ಮೆ ನೋಡಿದ್ದು ಅಪ್ಪನನ್ನು, ಬರು-ಹೋಗುವ ನೆಂಟರಂತೆ. ಈಗ ಸದಾ ಎದುರು ಕುಳಿತಿರುವ, ಅಷ್ಟಷ್ಟಕ್ಕೆ ಬೈಯುವ, ಸಿಟ್ಟುಮಾಡುವ ಅಪ್ಪನನ್ನು ನೋಡಿದರೆ ಭಯಪಟ್ಟುಕೊಳ್ಳುತ್ತಾನೆ. ಏನು ಬೇಕೆಂದರೂ ಅಮ್ಮನೇ ಆಗಬೇಕು. ಎಲ್ಲಿಯಾದರೂ ಹೋಗುವದಿದ್ದರೆಅಮ್ಮಾ....ಹೋಗಿ ಬರ್ತೀವಿಅಂತಾರೆ ಹೊರತು ಎದುರಿಗೆ ಆರಾಮ ಕುರ್ಚಿಯಲ್ಲಿನ ಅಪ್ಪನಿಗೆ ಏನು ಹೇಳಬೇಕೆಂದು ತೋಚದೇ ನಕ್ಕು ಹೋಗುತ್ತವೆ. ಹೊರಗಿನಿಂದ ಬಂದರೂ ನೇರವಾಗಿ ಅಮ್ಮನ ಹಿಂದೆಯೇ.

ಸುಬ್ಬಾಚಾರೀಗೆ ನೋಡಿ, ನೋಡಿ ಜೀವ ರೋಸಿ ಹೋಗುತ್ತಿದೆ. ತಮ್ಮ ಮೇಲೆ ಸಿಟ್ಟು ಬರುತ್ತದೆ. ತಮ್ಮ ಸಂಸಾರ ಎಲ್ಲರಂತಲ್ಲ , ಎಲ್ಲೋ ತಪ್ಪಿದೆ ಅನಿಸುತ್ತದೆ ಅವರಿಗೆ. ಯಾರಿಗೆ ಹೇಳಬಹುದು? ಭಾಗಿಗೆ ? ಅವಳಿಗೆ ಪುರುಸೊತ್ತೆ ಇಲ್ಲ , ಹತ್ತಿರ ಬಂದು ಕುಳಿತು ಮಾತಾಡಲು. ಅವಳು ಮಾತನಾಡಲು ಬಂದರೂ. ಇದೇ ಮನೆ ಮಕ್ಕಳ ಸುದ್ದಿ ಬಿಟ್ಟರೆ ಬೇರೆಯೇನಿದೆ? ಯಾಕೋ ತಾವು ಎಲ್ಲರಿಂದಲೂ ದೂರವಾಗಿದ್ದೇನೆ ಅನ್ನಿಸುತ್ತಿದೆ ಸುಬ್ಬರಾಯರಿಗೆ, ತಾವು ಹೊಟ್ಟೆಪಾಡಿಗಾಗಿ ದೂರದ ಮುಂಬೈಗೆ ಹೋಗಲೇಬಾರದಿತ್ತು. ಛೇ !! ಹೋಗದಿದ್ದರೆ ಹ್ಯಾಗೆ ಮಕ್ಕಳನ್ನು ಸಾಕುವದು? ಊರಲ್ಲಿ ಯಾರು ಕರೆದು ಉದ್ಯೋಗ ಕೊಡುವವರು? ಮತ್ತು ಹೋಗದಿದ್ದರೆ ತಮಗೆ ಮೋಗ್ರಿ ಸಿಗುತ್ತಿದ್ದಳೇ ? ಅನಿಸಿ ಅವಳ ನೆನಪಿನಿಂದ ಸ್ವಲ್ಪ ಮನಸ್ಸು ಅರಳುತ್ತದೆ. ತಾವು ಬರುವಾಗ ಅಳುತ್ತಿದ್ದ ಮೋಗ್ರಿಯನ್ನು ನೋಡಿ, ಹನ್ನೆರಡು ವರ್ಷದ ಹಿಂದೆ ಹೀಗೆಯೇ ಭಾಗಮ್ಮ ಗೋಪಾಲನನ್ನು ಕಂಕುಳಲ್ಲಿ ಎತ್ತಿಕೊಂಡು, ಶಾರದೆ- ಸುಮನ್ನ ಕೈ ಕೈ ಹಿಡಿದುಕೊಂಡು, ಧಾರವಾಡ ಬಸ್‌ ಸ್ಟ್ಯಾಂಡಿನ ವರೆಗು ಬಂದು ತಮ್ಮನ್ನು ಮುಂಬೈ ಬಸ್ಸಿಗೆ ಹತ್ತಿಸಿದ್ದು ನೆನಪಾಗಿ ಕಣ್ಣು ತೇವವಾಗಿದ್ದವು. ಆಗ ಅವರಿಗೆ ಕೊಡಲು ಆಶ್ವಾಸನೆಯಾದರೂ ಇತ್ತು, ಈಗ ಮೋಗ್ರಿಗೆ ತಾವು ಏನನ್ನೂ ಕೊಡಲಾರದ ಸ್ಥಿತಿಯಲ್ಲಿದ್ದರು. ಇದ್ದ ನೌಕರಿಯನ್ನೂ ಮುಗಿಸಿ ಇದ್ದ ಬಿದ್ದ ದುಡ್ದನ್ನು ಮೋಗ್ರಿಗೆ ಕೊಟ್ಟಿದ್ದಾರೆ, ಮೋಗ್ರಿಯ ಮಗಳಿಗೆ ಮದುವೆಗೆಂದು. ಕೋಣೆಯಲ್ಲಿನ ಸಾಮಾನುಗಳೂ ಅವಳಿಗೇನೆ. 12 ವರ್ಷದ ಹಿಂದೆ ಹೇಗೆ ಒಂದು ಟ್ರಂಕನ್ನು ಹಿಡಿದು ಬಂದಿದ್ದರೋ, ಹಾಗೇ ಹೊರಟಿದ್ದಾರೆ ಮರಳಿ. ಬರಿ ಕೈಯಲ್ಲಿ. ಖಾಲೀ ಮನಸ್ಸಿನಿಂದ. ಯಾವುದೇ ಭಾವನೆಗಳಿಲ್ಲದ ನಿರ್ವಿಕಾರತೆ ಮನೆಮಾಡಿದೆ. ಜತೆಗೆ ಅನಾರೋಗ್ಯ ಬೇರೆ.

ಮೋಗ್ರಿ !! ತಮಗೆ ಠಾಣೆಯಲ್ಲಿದ್ದಷ್ಟೂ ದಿನ ಹೊಟ್ಟೆಗೆ ಬಿಸಿ ಬಿಸಿ ಊಟ ಮಾಡಿಕೊಡುತ್ತಿದ್ದವಳು, ಬೇಕೆನಿಸಿದಾಗ ತಮ್ಮೊಂದಿಗೇ ಕುಳಿತು ಬೀಡಿ ಸೇದುವ ಮೋಗ್ರಿ ಬೆಸ್ತರವಳು. ಇಡೀದಿನ ಕಡಲ ತೀರದಲ್ಲೇ ಅವಳ ಬದುಕು. ಸಂಜೆಯಿಂದ ರಾತ್ರಿವರೆಗೆ ಮೀನು ಮಾರಿ ಖಾಲೀ ಬುಟ್ಟಿ ಆಚೆಗೆಸೆದು, ತನ್ನ ಗುಡಿಸಲು ಸೇರಿ , ಹತ್ತಿರದ ಭಾವಿಮೇಲೆ ಯಾರೋ ಪ್ರವಾಸಿಗರು ಕೊಟ್ಟ ಫೊರಿನ್‌ ಯಾರ್ಡ್ಲೆ ಸಾಬುನು ಹಾಕಿ, ಉಜ್ಜಿ ಉಜ್ಜಿ ಮೈ ತೊಳೆದು, ಅಡ್ಡ ಸೀರೆಸುತ್ತಿಕೊಂಡು, ತನ್ನ ದಪ್ಪ ತುರುಬಿಗೆ ಹೂ ಮುಡಿದು, ಕಣ್ಣಿಗೆ ಕಪ್ಪಿಟ್ಟುಕೊಂಡರೆ ಆಯಿತು ಅವಳ ಸಿಂಗಾರ. ಆಗಲೇ ಅಲ್ಲವಾ ಸುಬ್ಬಾಚಾರಿಯ ಕಣ್ಣಿಗೆ ಮೋಗ್ರಿ ಮೇನಕೆಯಂತೆ ಕಂಡಿದ್ದು. ಎಲ್ಲಿ ಸಿಕ್ಕರೋ, ಹೇಗೆ ಭೆಟ್ಟಿಯಾದರೋ. ಅವರ ಖಾದೀ ಇಂಡಸ್ಟ್ರೀಸ್‌ ಇರುವದು ಠಾಣೆಯ ಹತ್ತಿರದ ಹಳ್ಳಿ, ದಹನುವಿನಲ್ಲಿ. ಅವಳು ಸಿಕ್ಕಿದ್ದು ಹೇಗೋ ದೇವರಿಗೆ ಗೊತ್ತು. ಬ್ರಾಹ್ಮಣಜಾತಿಯ ಸುಬ್ಬಾಚಾರಿಗೆ ಇಂಥ ಕಚ್ಚೆಹರಕು ಬುದ್ಧಿ ಯಾಕೆ ಬಂತೋ ? ದನ ಕರುಗಳ ಗಂಜಲಿಗೇ ಹೊಟ್ಟೆ ತೊಳಸಿಕೊಳ್ಳುತ್ತಿದ್ದವರು, ಸುಗಂಧಿಕಾ ಸ್ತ್ರೀಗೆ ಮರುಳಾದದ್ದು ಅವರೊಂದಿಗೇ ಉದರಪೋಷಣೆಗೆಂದು ಒಂದೇ ಊರಿನಿಂದ ವಲಸೆ ಬಂದ ಗೆಳೆಯ ರಾಮಕೃಷ್ಣನಿಗೆ ಹಿಡಿಸಿದ್ದಿಲ್ಲ. ರಾಮಕೃಷ್ಣ ಸುಬ್ಬಾಚಾರಿಯಾಂದಿಗೆ ಒಂದೇ ರೂಮಿನಲ್ಲಿರುತ್ತಿದ್ದರು. ಇಬ್ಬರಿಗಾಗುವ ಅನ್ನ ಸಾರು, ಹುಳಿಗಳನ್ನು ಇಬ್ಬರೂ ಸೇರಿ ಬೇಯಿಸಿಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಅನುವು-ಆಪತ್ತಿಗಾಗುತ್ತಾರೆಂದು ಭಾಗಮ್ಮನಿಗೂ ಗೊತ್ತಿತ್ತು. ಆದರೆ ಪರದೇಶಕ್ಕೆ ಹೋಗಿ ಇಬ್ಬರೂ ಅಗಲಿರುವ ಬಗ್ಗೆ ಆಕೆಗೆ ಏನೂ ಗೊತ್ತಿಲ್ಲ. ಬದುಕೇ ಹಾಗೆ, ನಾವು ತಿಳಿದುಕೊಂಡಿದ್ದವರ ಬಗ್ಗೆ ನಮ್ಮ ವಿಚಾರಗಳೇ ಬೇರೆ, ವಾಸ್ತವತೆಯೇ ಬೇರೆ, ಅವರ ಇನ್ನೊಂದು ಮುಖದ ಪರಿಚಯವಾಗುವವರೆಗೆ. ಗೊತ್ತಾದರೆ ಮಾತ್ರ ಮನಸ್ಸಿಗೆ ಈಟಿಯಿರಿದಂಥಾ ನೋವುಂಟಾಗುತ್ತದೆ. ಇದ್ದ ಪ್ರೇಮ-ಭಕ್ತಿಗಳೂ ಮಾಯವಾಗುತ್ತವೆ.

ಮಧ್ಯೆ ಮೋಗ್ರಿಯ ಒಡನಾಟದಿಂದ ಹೇಸಿಗೆಪಟ್ಟು ರಾಮಕೃಷ್ಣ ಬೇರೊಂದು ಕೋಣೆ ಹುಡುಕಬೇಕಾಯಿತು. ಬಗ್ಗೆ ಸುಬ್ಬಾಚಾರಿಗೆ ಇನ್ನೂ ಒಳ್ಳೇದೆ ಆಯಿತು. ಕಳೆದುಕೊಂಡ ಗೆಳೆಯನಿಗಿಂತ ದೊರೆತ ಗೆಳತಿಯ ಸಂಗವೇ ಅಂದವಾಗಿತ್ತು. ಆದರೆ ವಿಷಯವನ್ನು ಊರಿಗೆ ರಜೆಗೆ ಹೋದಾಗ, ಸುಬ್ಬಾರಾಯರ ಮನೆಗೆ, ಮಕ್ಕಳನ್ನೂ, ಅತ್ತಿಗೆಯನ್ನೂ ನೋಡಿಬರಲು ಹೋದರೂ ಹೇಳುವ ಬಾಯಿ ಬಾರದೇ ಹಾಗೇ ವಾಪಸ್ಸು ಬಂದಿದ್ದಾನೆ ರಾಮಕೃಷ್ಣ. ಸಾಧ್ವಿಯ ಎದುರಿಗೆ ಹೇಳಿ ನಾಲಿಗೆ ಹೊಲಸುಮಾಡಿ, ಅವರ ಮನಸ್ಸನ್ನೂ ಕಲಕುವ ಹೀನ ಕೆಲಸ ಬೇಡವೆಂದು ಸಜ್ಜನರು ಹೇಳಲಿಲ್ಲ.

ಸುಬ್ಬರಾಯರಿಗೇನು? ಸಂಬಳದ 450 ಮಾತ್ರ ಹೆಂಡತಿಗೆ, ಉಳಿದದ್ದು ಬಾಡಿಗೆಗೆ, ಬೀಡಿಗೆ, ಸ್ವಲ್ಪ ಸ್ವಲ್ಪ ಕುಡಿಯಲೂ ಪ್ರಾರಂಭಿಸಿದ್ದರಂತೆ. ಅದು ಊರಲ್ಲಿರುವ ಭಾಗಮ್ಮನಿಗೆ, ಮಡಿಯುಟ್ಟು ಗೌರಿ-ಗಣೇಶನ ಹಬ್ಬಕ್ಕೆ, ಮತ್ತೆಂತಕ್ಕೋ ಮಕ್ಕಳೊಂದಿಗೆ ಮನೆ ಸಾರಿಸಿ , ರಂಗವಲ್ಲಿ ಇಟ್ಟು, ಪೂಜೆ ಅಡುಗೆ ಮಾಡಿ, ನೈವೇದ್ಯ ಹಿಡಿಸಿ, ಆರತಿ ಬೆಳಗುವ ಭಾಗಮ್ಮನಿಗಾಲೀ, ಮುದ್ದು ಮಕ್ಕಳಿಗಾಗಲೀ ಹೇಗೆ ಗೊತ್ತಾದೀತು? ಅಂದು ಭಾಗಮ್ಮನಿಗೆ ಗಂಟಲಲ್ಲಿ ಊಟವೂ ಇಳಿಯುವುದಿಲ್ಲ. ನಾವಿಲ್ಲಿ ಹಬ್ಬದೂಟ ಮಾಡುತ್ತಿದ್ದೇವೆ, ಅವರೇನು ತಿಂದಿದ್ದಾರೋ, ಉಪವಾಸವಿದ್ದಾರೋ ಎಂದು ಯೋಚಿಸಿ, ಕಣ್ಣು ಹನಿಗೂಡುತ್ತವೆ.

ಉಣ್ಣಮ್ಮಾ, ಯಾಕೆ ಕೂತೆ?’ ಮಗಳು ಉಪಚರಿಸಿದಾಗಇಲ್ಲಮ್ಮಾ, ನಿಮ್ಮ ಅಪ್ಪನ ನೆನಪಾಯಿತು, ನಾವಿಲ್ಲಿ ಹಬ್ಬದೂಟ ಮಾಡುತ್ತಿದಯೇವೆ, ಅವರಿಗಿದೆಲ್ಲ ಮಾಡೋರಾರು?.. ’

ರಾಮಕೃಷ್ಣ ಚಿಕ್ಕಪ್ಪ ಇದ್ದಾರಲ್ಲಾ ? ಏನಾದರೊಂದು ಪಾಯಸ ಮಾಡಿರಬಹುದುಮಗಳು ಸಮಾಧಾನ ಹೇಳುತ್ತಾಳೆ. ಅವಳಿಗೂ ಅಪ್ಪನ ನೆನಪಾಗಿ ಬರುವ ದಿನಗಳನ್ನು ಮನ ಎಣಿಸತೊಡಗುತ್ತದೆ.

ಸುಬ್ಬರಾಯರಿಗಿದೆಲ್ಲ ನೆನಪಿದ್ದರಲ್ಲವೇ? ದೀಪಾವಳಿಗೆ ಊರಿಗೆ ಹೋಗುವದು, ನಂತರ ಮತ್ತೆ ಮೇ ರಜೆಗೆ. ಮಧ್ಯೆ ಪತ್ರಗಳ ಮುಖಾಂತರ ಉಭಯಕುಶಲೋಪರಿ. ಗಂಡ ಹೆಂಡತಿಗೆ ಬರೆಯುವಂಥಾ ಯಾವ ಪ್ರೇಮಪತ್ರವಲ್ಲ. ಸಾಧಾರಣ ಪತ್ರಗಳು, ಮಕ್ಕಳೂ ಅಪ್ಪನ ಪತ್ರವೆಂದು ಓದುತ್ತಾರೆ. ಅಪ್ಪಿ ತಪ್ಪಿಯೂ ಅದರಲ್ಲಿ ಪ್ರೇಮಪೂರಿತ ಮಾತುಗಳಿರುವದಿಲ್ಲ. ಮಕ್ಕಳ ಬಗ್ಗೆ, ತಾನು ಕ್ಷೇಮ, ನಿಮ್ಮ ಕ್ಷೇಮದ ಬಗ್ಗೆ ತಿಳಿಸುತ್ತಿರು ಎಂಬಲ್ಲಿಗೇ ಮುಕ್ತಾಯ. ಆಗಲೂ ಭಾಗಮ್ಮನಿಗೇ ಏನೂ ಅನ್ನಿಸಿದ್ದಿಲ್ಲ ಯಾಕೆ? ಅರ್ಥವೇ ಆಗುವದಿಲ್ಲ ಅಮ್ಮ ಎಂದು ಶಾರದೆಗೂ ಅನಿಸುತ್ತದೆ? ನೆರೆಹೊರೆಯಲ್ಲಿ ಟೆಲಿಫೋನುಗಳೂ ಇವೆ. ಅಪ್ಪ ಒಂದು ಫೋನಾದರೂ ಮಾಡಬಹುದಲ್ಲವಾ? ಭಾಗಮ್ಮನಿಗೆ ಇಂಥವೆಲ್ಲ ತಲೇಗೆ ಹೊಳೆಯುವದಿಲ್ಲ. ಅಂಥಾ ಮುಗ್ಧ ಹೆಂಗಸು. ತಮಾಷೆಗಾಗಿ ಮಕ್ಕಳ ಬಾಯಿಂದ ಎಷ್ಟೋ ಸಾರಿನೋಡಮ್ಮಾ, ಅಲ್ಲಿ ಅಪ್ಪನಿಗೆ ಇನ್ನೊಬ್ಬ ಹೆಂಡತಿ ಮಕ್ಕಳಿದಾರೆಯೇ ? ಆಮೇಲೆ ಅವರ ಇನ್ನೊಂದು ಸಂಸಾರಾನೂ ಕರೆದುಕೊಂಡು ಬಂದ್ರೆ, ನೋಡುಅಂತಾ ಶಾರದ- ಸುಮನಾ ನಕ್ಕಿದ್ದಾರೆ. ‘ಏನು ಕೆಟ್ಟ ಮಕ್ಕಳಪ್ಪಾ. ಬರಲಿಬಿಡುಅನ್ನುವಷ್ಟಕ್ಕೆ ಮಾತು ಮುಗಿಸಿದ್ದಾಳೆ ಭಾಗಮ್ಮ. ಆಗಲೂ ಅವಳಿಗೆ ತಮಗೆ ಕುಂಕುಮಭಾಗ್ಯವನ್ನೂ, ಸೌಭಾಗ್ಯವನ್ನೂ, ಮುದ್ದು ಮಕ್ಕಳನ್ನೂ ಕೊಟ್ಟ ಪತಿಯ ಬಗ್ಗೆ ಅಪಾರ ಪ್ರೀತಿ, ವಿಶ್ವಾಸ. ಯಾವದಕ್ಕೂ ಕೆಟ್ಟದಾಗಿ ಯೋಚಿಸಿಲ್ಲ ಭಾಗಮ್ಮ.

ಊರಿಗೆ ಬಂದ ನಂತರ ಸುಬ್ಬಾಚಾರಿಗೆ ಮನೆಯಲ್ಲಿ ದಿನವೂ ಹಬ್ಬದೂಟ. ಒಂದುದಿನ ಹೆಸರುಬೇಳೆ ಪಾಯಸ, ಮತ್ತೊಮ್ಮೆ ತಾವೇ ಮನೆಯಲ್ಲಿ ಮಕ್ಕಳೊಂದಿಗೆ ಮಾಡಿದ ಪರಡಿಯ ಪಾಯಸ, ಬಿಸಿಬೇಳೆಭಾತು, ಸಂಡಿಗೆ ಹೀಗೆ ಭಾಗಮ್ಮ ಉಪಚರಿಸಿ ಉಣ್ಣಿಸುತ್ತಾಳೆ. ಆಗೆಲ್ಲ ಸುಬ್ಬಾಚಾರಿಗೆ ಇರಿಸು ಮುರಿಸು. ರುಚಿಯಾದ ಅಡುಗೆಯನ್ನು ಹೊಗಳಬೇಕಾ? ಏನಾದರೂ ಹೇಳಬೇಕು ಅನ್ನುವದನ್ನೇ ಮರೆಯುತ್ತಾರೆ. ಉಣ್ಣುತ್ತಿದ್ದರೂ ಧ್ಯಾನ ಎಲ್ಲೋ. ಅವರಿಗೆ ಸಾಕಾ ಬೇಕಾ ಅಂತಲೂ ನಾಲ್ಕು ಸಾರಿ ಕೇಳಿದಾಗ ಕೇಳುತ್ತದೆ. ಅಗೆಲ್ಲ ಭಾಗಮ್ಮನ ಮೇಲೇ ಹರಿಹಾಯುವದು.

ನನ್ನ ಏನಂತ ತಿಳಿದಿ? ನಾನೇನು ದುಡಿದು ದೊಡ್ಡ ಗಂಟು ತಂದಿದ್ದೇನೆಂದು ನೀನು ತಿಳಿದಿದ್ದೀಯಾ? ನಿಮಗಾಗಿ ಅಲ್ಲಿ ನಾನು ಅರೆಹೊಟ್ಟೆ ತಿಂದು , ಹಣ ಕಳಿಸುತ್ತಿದ್ದೆ. ಇನ್ನೂ ಉಳಿಸುವದೆಲ್ಲಿಂದ ಬಂತು? ಈಗ ಬರುತ್ತದಲ್ಲ ಫಂಡಿನ ಹಣ, ಅದರಲ್ಲಿ ಮಕ್ಕಳ ಮದುವೆ ಮುಗಿಸಬೇಕು’. ‘ಭಾಗೀ, ನಿನಗ್ಯಾರು ದಿನಾ ಪಾಯಸ ಮಾಡಲು ಹೇಳಿದ್ದು? ಇಷ್ಟು ವರ್ಷ ನೀನು ಬೇಕಿದ್ದರೆ ಹಣ ಉಳಿಸುತ್ತಿದ್ದೆ, ಎಲ್ಲಾ ಗೊತ್ತಾಯಿತು. ಹೀಗೆ ತಿಂದು ಹೇತು ಹಾಳುಮಾಡಿದ್ದೀರಿ!! ’

ಭಾಗಮ್ಮನಿಗೆ ಗಂಟಲುಬ್ಬಿ ಅಳು ತಡೆಯದಾಗಲಿಲ್ಲ, ‘ ದೇವರಂತೊಬ್ಬನಿದ್ದರೆ, ಅವನಿಗೆ ಗೊತ್ತು, ನಾನು ಹ್ಯಾಗೆ ಮಕ್ಕಳನ್ನು ಕಟ್ಟಿಕೊಂಡು ಸಂಸಾರ ಸಾಗಿಸಿದೆ ಅಂತಾ. ನೀವು ಕಳಿಸುವ ದುಡ್ಡು ಇಷ್ಟು ಮಕ್ಕಳ ಹೊಟ್ಟೆ ಬಟ್ಟೆಗೆ ಸಾಲ್ತಿತ್ತಾ ?ನನಗೆ ಬಂದ ಕಸೂತಿಯನ್ನೇ ಹಗಲು ರಾತ್ರಿ ಕುಳಿತು ಹಾಕಿ ನಾಲ್ಕು ಕಾಸು ಕೈಗೂಡಿಸಿಕೊಂಡು, ಸಂಸಾರದ ಗಾಡಿಯನ್ನು ನಡೆಸಿಕೊಂಡಿದ್ದೆನೆ’ . ಹೆಚ್ಚು ಮಾತನಾಡದ ಭಾಗಮ್ಮ ಊಟವನ್ನೇ ಬಿಟ್ಟು ಕೈತೊಳೆದು ಎದ್ದರು.

ಅದನ್ನೆಲ್ಲ ನೋಡುತ್ತಿದ್ದ ಶಾರದೆಗೆ ತಡೆಯಲಾಗಲಿಲ್ಲ, ಏನಪ್ಪಾ ಹೀಗೆ ಮಾತಾಡೋದು? ಅವಳು ನಮಗಾಗಿ , ಮನೆಗಾಗಿ ಮಾಡಿದ ತ್ಯಾಗ ಏನೂಂತಾ ನಾವು ಹೇಳಿಕೊಡ್ಬೇಕಾ? ನಿಮಗೆ ನಾವ್ಯಾವತ್ತಾದರೂ ಕೇಳಿದ್ದೀವಾ, ನಿಮ್ಮ ಸಂಬಳವೆಷ್ಟು ? ನೀವು ಎಷ್ಟು ಖರ್ಚು ಮಾಡುತ್ತೀರಿ? ಉಳಿಸಿದ್ದೀರಾ? ನೀವು ಕೊಟ್ಟಷ್ಟರಲ್ಲಿ ಮನೆ ನಡೆಸಿಕೊಂಡು ಹೋದವರು ನಾವು. ನಮಗೆ ಗೊತ್ತಪ್ಪಾ, ನಾವು ಹೇಗೆ ಓದುತ್ತೇವೆಂತಾ, ನಮ್ಮ ಕಾಲೇಜಿನ ಯಾವ ಪುಸ್ತಕಾನೂ ಕೊಳ್ಳದೆ ಬೇರೆಯವರ ಮಕ್ಕಳಿಂದ ಒಂದು ರಾತ್ರಿಗಾಗಿ ಕಡ ತಂದು ಓದಿ, ಮರುದಿನ ವಾಪಸು ಕೊಡುತ್ತೇವೆ. ಇದೆಲ್ಲಾ ನಿಮಗೆ ಗೊತ್ತಿಲ್ಲಾ, ಅಮ್ಮನನ್ನು ಮಾತ್ರ ಏನೂ ಅನ್ನಕೂಡದು.

ಶಾರದೆಯ ಖಡಾಖಡಿ ನುಡಿಗಳು ರಾಯರನ್ನು ಮೆತ್ತಗೆ ಮಾಡಿದರೂ, ಇದೆಲ್ಲ ತಮ್ಮ ಹುಳುಕನ್ನು ಇನ್ನೂ ಕೆರೆದು ತೋರಿಸಿದಂತಾಯಿತು. ಸುಮ್ಮನೆ ಎದ್ದು ಹೊರಗೆ ಹೊರಟರು. ತುಂಬಾ ಹೊತ್ತಿನ ಮೇಲೆ ಬಂದವರು ಹಾಗೆಯೇ ಹಾಸಿಗೆ ಉರುಳಿಸಿಕೊಂಡು ಮಲಗಿಬಿಟ್ಟರು. ಅಂದಿನಿಂದ ಮನೆಯಲ್ಲಿ ಅನ್ನ ಸಾರು ಬಿಟ್ಟು ವಿಶೇಷ ಅಡುಗೆಬಗ್ಗೆ ಭಾಗಮ್ಮನಾಗಲೀ ಮಕ್ಕಳಾಗಲೀ ತಲೆ ಕೆಡಿಸಿಕೊಳ್ಳಲಿಲ್ಲ. ಯಾವದಾದರೂ ಒಂದಾದರೆ ಸಾಕು ಮಕ್ಕಳಿಗೆ. ಅವರೆಲ್ಲ ಸ್ಕೂಲು-ಕಾಲೇಜಿಗೆ ಹೊರಟುಹೋದರೆ ಮನೆಯಲ್ಲಿ ಭಾಗಮ್ಮ- ಸುಬ್ಬಾಚಾರಿ ಇಬ್ಬರೇ. ಹೆಚ್ಚಿನ ವೇಳೆ ಮನೆಗೆಲಸ, ಮಧ್ಯಾಹ್ನದ ಹೊತ್ತು ಸಣ್ಣ ನಿದ್ದೆ. ಸಂಜೆಯಾಗತೊಡಗಿದಂತೆ ಮಕ್ಕಳು ಬರುವದು, ಮತ್ತೆ ಕಾಫಿ , ಸಂಜೆ ಅಡುಗೆ. ರಾಯರು ಹೊರಗಿನ ಕೋಣೆಯಲ್ಲೇ ಮಲಗುತ್ತಾರೆ. ಶಾರದೆ ಒಳಗಿನ ಕೋಣೆಯಲ್ಲಿ ಓದುತ್ತಿರುತ್ತಾಳೆ. ಮಧ್ಯರಾತ್ರಿ, ಕೆಲವುಸಾರಿ ಬೆಳಗಿನ 3ರವರೆಗೂ ಬರೆದುಕೊಳ್ಳುತ್ತಿರುತ್ತಾಳೆ. ಭಾಗಮ್ಮ, ಗೋಪಾಲ, ಸುಮನ ನಡುಮನೆಯಲ್ಲಿ. ಬೆಳೆದ ಮಕ್ಕಳೊಂದಿಗೆ ಭಾಗಮ್ಮ - ರಾಯರ ದಾಂಪತ್ಯ 12 ವರ್ಷದ ಹಿಂದೆ ಬಿಟ್ಟುಹೋದಾಗ ಹೇಗಿತ್ತೋ ಹಾಗೇ ಇದೆ. ತಮಗೆ ಎಚ್ಚರಾದಾಗ, ಮಕ್ಕಳೆಲ್ಲ ಮಲಗಿದ್ದು ಖಾತ್ರಿಯಾದರೆ ಮಾತ್ರ, ಭಾಗಮ್ಮನಿಗೆ ಸನ್ನೆಯಲ್ಲಿ ಕರೆಯುತ್ತಾರೆ ರಾಯರು. ಇಲ್ಲಾಂದರೆ ಇಲ್ಲ. ಪತಿಯ ಮರಳುವಿಕೆ, ಭಾಗಮ್ಮನಿಗೆ ಯಾವ ಸುಖ ಸಂತೋಷವನ್ನೂ ತಂದಿಲ್ಲಾ, ಬದಲಾಗಿ ಏನಾದರೂ ಕಾರಣಕ್ಕೆ ಮಕ್ಕಳೊಂದಿಗೆ, ರಾಯರಿಗೆ ಸಣ್ಣ ವಾಗ್ಯುಗ್ಧವಾಗುತ್ತವೆ. ತಾಯಿಯಾಂದಿನ ಸಲುಗೆ ತಂದೆಯಾಂದಿಗಿಲ್ಲ . ತಾಯಿಯನ್ನು ಏನಾದರೂ ಅಂದರೆ ಮಕ್ಕಳು ಸಹಿಸರು. ಮಕ್ಕಳ ಮಾತನ್ನು ತಾಯಿ ಅರ್ಥಮಾಡಿಕೊಳ್ಳುತ್ತಾಳೆ. ತಂದೆಗೆ ಎಲ್ಲವೂ ತಪ್ಪು. ಶಾರದೆ ಕಾಲೇಜಿಗೆ ಹೋಗುವದೂ ತಪ್ಪು. ಸುಮನಳ ಚೆಲ್ಲುತನ ತಪ್ಪು. ಗೋಪಾಲನ ಆಟ-ಪಾಠಗಳೂ ತಪ್ಪು. ಹೊಂದಾಣಿಕೆ ಇಲ್ಲದೇ ಮನೆಯಲ್ಲಿ ಅಶಾಂತಿ ಮನೆಮಾಡತೊಡಗಿತು. ಭಾಗಮ್ಮ ಇಬ್ಬಂದಿಯಲ್ಲಿ ನುಜ್ಜು ಗುಜ್ಜಾಗತೊಡಗಿದಳು.

ಮಕ್ಕಳಿಗೆ ಅಪ್ಪನ ಬೀಡಿ ಇಷ್ಟವಾಗುವದಿಲ್ಲ. ಸುಮನ ಏನಪ್ಪಾ ಇದು ಎಂದು ಕಿತ್ತೆಸೆಯುತ್ತಾಳೆ. ಅದನ್ನು ಬಿಟ್ಟುಬಿಡುವ ಭಾಷೆಯನ್ನೂ ತೆಗೆದುಕೊಂಡಿದ್ದಾಳೆ. ಸುಬ್ಬಾಚಾರಿಗೆ ಸುಮನಳಲ್ಲಿ ಮೋಗ್ರಿಯ ಮಗಳು ಕಾಣುತ್ತಾಳೆ. ಸುಮನಳ ಬಗ್ಗೆ ಅಪಾರ ಪ್ರೀತಿ. ಪಾಪ ಗೋಪಾಲನನ್ನು ಎತ್ತಿ ಆಡಿಸಿಯೂ ಇಲ್ಲಾ, ಈಗಲಾದರೂ ತಂದೆ ಮಗ ಹತ್ತಿರ ಬರಲಿ ಎಂದು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗಿದೆ. ಅವನಿಗೆ ತಮ್ಮ ತಿಳಿಯಾದ ಕೊಳದಂಥ ಬದುಕಿನಲ್ಲಿ ಯಾರೋ ಏನೋ ಕಲ್ಲೆಸೆದಂತಾಗುತ್ತದೆ. ಇತ್ತ ಸುಬ್ಬಾಚಾರಿಗೂ ತಾನೇ ಹೊರಗಿನವನೇನೋ ಎಂಬ ಭಾವನೆ ದಿನೆದಿನೇ ಬೆಳೆಯತೊಡಗಿತು. ಯಾಕೋ ಇತ್ತೀಚೆಗೆ ಅವರ ಊಟ ಕಡಿಮೆಯಾಗಿದೆ. ಸುಮ್ಮನೆ ಕೂಡ್ರುವದು ಜಾಸ್ತಿಮಾಡಿದ್ದಾರೆ. ಭಾಗಮ್ಮನಿಗೆ ಇನ್ನೊಂದು ಚಿಂತೆ. ರಾಯರಿಗೆ ಏನಾಗಿರಬಹುದು? ಹುಷಾರಿಲ್ಲವ? ಡಾಕ್ಟರಲ್ಲಾದರೂ ಹೋಗೋಣವೆಂದರೆ ಅದಕ್ಕೂ ಬರರು.

ಎಷ್ಟಾದರೂ ತುಂಬ ವರ್ಷದ ಮೇಲೆ ಅಲ್ಲವೇ ಪುನಃ ಊರು ಸೇರಿದ್ದು. ಇಲ್ಲಿನ ಹವೆ , ನೀರು ವ್ಯತ್ಯಾಸವಾಗಿ ಹಾಗೆ ಆಗಿದೆಯಾ? ಇದೇ ಚಿಂತೆಯಲ್ಲಿ ತಿಂಗಳೊಳಗೆ ರಾಯರ ಸ್ವಾಸ್ಥ್ಯ ಏಕದಂ ಕೆಟ್ಟು ಹೋಗಿತ್ತು. ಹತ್ತಿರದ ಸಂಬಂಧಿಯಲ್ಲೇ ಒಬ್ಬ ಡಾಕ್ಟರಲ್ಲಿ ತೋರಿಸಿದಾಗ 3-4 ಟೆಸ್ಟ್‌ಗಳನ್ನು ಬರೆದರು. ಅದಕ್ಕೂ ರಾಯರಿಗೆ ಒಪ್ಪಿಗೆಯಿಲ್ಲ. ಹೊಟ್ಟೆ ಬಾವು ಬರತೊಡಗಿತು. ಗಾಬರಿಯಾದ ಭಾಗಮ್ಮ, ಮಕ್ಕಳು ತಂದೆಯನ್ನು ಕಟ್ಟಿಕೊಂಡು ದೊಡ್ದ ಆಸ್ಪತ್ರೆಗೆ ತೋರಿಸಿದರು. ಶಾರದೆ ಸುಮನರಿಗೆ ಓಡಾಟ, ಮನೆಯಿಂದ ಗಂಜಿ, ಊಟ ಭಾಗಮ್ಮ ಮಾಡಿ ತರುತ್ತಿದ್ದರು. ಅವರನ್ನು ತಪಾಸಿಸಿದ ಡಾಕ್ಟರು, ಬೆನ್ನಲ್ಲಿ ನೀರು ತುಂಬಿದೆಯೆಂದೂ ತೆಗೆಯುವ ವ್ಯವಸ್ಥೆ ಮಾಡಿದರು. ನೀರು ತೆಗೆದಾದರೂ ಡಿಸ್ಚಾರ್ಜ್‌ ಮಾಡಲಿಲ್ಲ. ಭಾಗಮ್ಮ ಮೈದುನನನ್ನು ಕರೆಸಿಕೊಂಡಳು. ಅವನೇ ಓಡಾಡಿ ಡಾಕ್ಟರಲ್ಲಿ ವಿಚಾರಿಸಿದಾಗ, ಅದು ಕಾಮಾಲೆಯೆಂದೂ, ಮೂರನೇ ಸ್ಟೇಜು ಎಂದು ಏನೇನೊ ಹೇಳಿ ಇಲ್ಲಿಂದ ತಗೆದುಕೊಂಡು ಹೋಗಲು ತಿಳಿಸಿ, ಬೇರೆ ಖಾಸಗಿ ನರ್ಸಿಂಗ್‌ ಹೋಮಲ್ಲಿ ದಾಖಲು ಮಾಡಿದರು. ಭಾಗಮ್ಮನಿಗೆ ಕೈಕಾಲೇ ಉಡುಗಿಹೋಗಿವೆ. ಮಕ್ಕಳೂ ಭಯಪಟ್ಟಿವೆ. ತಂದೆಯ ಮಮತೆಯನ್ನಂತೂ ಕಾಣಲಿಲ್ಲ, ಈಗ ಉದ್ಯೋಗದಿಂದ ನಿವೃತ್ತಿಹೊಂದಿ ಬಂದರಲ್ಲ , ಹೊಂದಿಕೊಳ್ಳಲು ಸಮಯವಾದರೂ ನಮ್ಮೊಂದಿಗೇ ಇದ್ದಾರಲ್ಲ ಎನ್ನುವ ಭರವಸೆಯೂ ಕುಂದತೊಡಗಿತು.

ರಾಯರ ದೃಷ್ಟಿ ಎಲ್ಲೋ ಇರುತ್ತದೆ. ಮಾತೂ ಆಡುವದಿಲ್ಲ, ಎಲ್ಲರನ್ನೂ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತಿರುತ್ತಾರೆ. ಏನೂ ಹೇಳುವದಿಲ್ಲ. ಯಾಕೆ ಹೇಳಬಾರದು? ತಮ್ಮ ಮನಸ್ಸಿನಲ್ಲಿದ್ದುದನ್ನಾದರೂ ನಮ್ಮೊಂದಿಗೆ ಹೇಳಬಹುದಲ್ಲವೇ? ಶಾರದೆಗೆ ನೂರು ಪ್ರಶ್ನೆಗಳು. ಯಾವುದಕ್ಕೂ ಉತ್ತರವಿಲ್ಲ. ಯಾರಲ್ಲಿ ಕೇಳಬಹುದು? ಭಾಗಮ್ಮನೂ ದಿಕ್ಕುತೋಚದಂತಾಗಿದ್ದಾಳೆ.

ಹೀಗೇ ಸುಬ್ಬಾಚಾರಿಯ ಅನಾರೋಗ್ಯದಲ್ಲಿ ಓಡಾಟ ಸಾಗಿದೆ. ಯಾವ ಸುಧಾರಣೆಯೂ ಕಾಣುತ್ತಿಲ್ಲ. ಮಕ್ಕಳಿಗೆ ಪರೀಕ್ಷೆಗಾಗಿ ಓದಿಕೊಳ್ಳಬೇಕು. ಭಾಗಮ್ಮ , ಏನು ಕಷ್ಟ ನೀಡುತ್ತಿದ್ದಿ ಶ್ರಿಹರೀ, ಕೊಟ್ಟದ್ದು ಸಾಕಾಗದೇ ಇನ್ನೂ ಪರೀಕ್ಷಿಸುತ್ತಿದ್ದಿಯಾ? ಎಂದು ತಮ್ಮ ಅಳಲನ್ನು ದೇವರಲ್ಲಿ ಮೊರೆಯಿಡುತ್ತಾರೆ. ಹಾಯಾಗಿದ್ದೇವೆಂದರೆ ಯಾರ ಕೆಟ್ಟ ದೃಷ್ಟಿ ತಾಗಿತೋ ಎಂದು ಕೊರಗುತ್ತಿದ್ದಾಳೆ ಭಾಗಮ್ಮ.

ಒಂದುದಿನ ಇದ್ದಕ್ಕಿದ್ದಂತೆ ರಾಮಕೃಷ್ಣ ಕಾಣಿಸಿಕೊಂಡ. ಅದೆ ಖಾದೀ ಬುಷ್‌ ಶರಟು, ಪ್ಯಾಂಟು, ಪ್ರಶಾಂತ ಮುಖಮುದ್ರೆ, ಹಣೆಯಲ್ಲಿ ಪುಟ್ಟದಾಗಿ ಚಂದನ ತಿಲಕ. ಆಸ್ಪತ್ರೆಗೆ ಹೋಗಲು ಅಣಿಯಾಗಿದ್ದ ಭಾಗಮ್ಮ ಸಡಗರದಿಂದ ಚಾಪೆ ಹಾಕಿ ಉಪಚರಿಸಿದಳು. ಶಾರದೆಗೆ ಕಾಫಿಗಿಡಲು ಹೇಳಿ, ಭಾಗಮ್ಮ ಕಣ್ಣಿರುತುಂಬಿ ಎಲ್ಲವನ್ನೂ ಅವನ ಮುಂದೆ ವಿವರಿಸಿ ಕೈ ಹೊತ್ತು ಕುಳಿತಿದ್ದಾರೆ. ರಾಮಕೃಷ್ಣ ಕಾಫೀ ಕುಡಿದು ಮುಗಿಸಿ-

ಬನ್ನಿ ಅತ್ತಿಗೇ, ನಾನೂ ಬರುತ್ತೇನೆ ಆಸ್ಪತ್ರೇಗೆ. ಸುಬ್ಬನ್ನ ನೋಡಿಕೊಂಡು ಬರುವೆಎಂದು ಜತೆಯಾದ. ದಾರಿಯಲ್ಲಿ ಮಕ್ಕಳ ಬಗ್ಗೆ, ಓದಿನ ಬಗ್ಗೆ ಎಲ್ಲ ತಿಳಿದ ರಾಮಕೃಷ್ಣ ಹೇಳಲೋ, ಬೇಡವೋ ಅನ್ನುವಂತೆ ಯೋಚನೆಯಲ್ಲಿದ್ದ. ಬಾಯಿಬಾರದು. ಹೇಳದಿದ್ದರೆ ಪಾಪದ ಜೀವಗಳು ಸಾಲ-ಸೋಲವನ್ನದರೂ ಮಾಡಿ ಅವನನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ರಾಮಕೃಷ್ಣನಿಗೂ ತಿಳಿಯುತ್ತಿಲ್ಲ. ಆಯ್ಯೋ ದೇವರೆ? ಏನು ಮಾಡಲಿ? ಜೀವ ರೋದಿಸುತ್ತಿದೆ. ಭಾಗಮ್ಮನ ಮಾತುಗಳಾವವೂ ಕಿವಿಗೆ ಹೋಗಿಲ್ಲ. ಉತ್ತರ ಬಾರದೇ ಭಾಗಮ್ಮ ಕ್ಷಣನಿಂತು,

ಯಾಕೇ ರಾಮಕೃಷ್ಣ? ಎಲ್ಲಿದೆ ಧ್ಯಾನ? ಏನೋ ಹೇಳಬೇಕೆಂದಿದೆಯಾ ನಿನ್ನ ಮನಸ್ಸಿನಲ್ಲಿ ? ಹೇಳಿಬಿಡು’.

ತನ್ನ ಮನಸ್ಸಿನ ಗೊಂದಲವನ್ನು ಊಹಿಸಿದಂತೆ ಭಾಗಮ್ಮ ಮಾತನಾಡಿದಾಗ, ರಾಮಕೃಷ್ಣನಿಗೆ ಅಳುವೇ ಗಂಟಲಿಗೆ ನುಗ್ಗಿಬಂತು. ಇನ್ನು ತಾಳಲಾರೆ ಅನಿಸಿ ಎಲ್ಲವನ್ನೂ ಅತ್ತಿಗೆಯೆದುರು ಅರುಹಿ, ಹಿಡಿಯಾದ ಹೃದಯದಿಂದಲೇ

ಇಂಥ ಅನ್ಯಾಯ ಮಾತ್ರ ಆಗಬಾರದಿತ್ತು ಅತ್ತಿಗೆ. ನಿಮ್ಮ ಬದುಕು ಹೀಗಾಗಬಾರದಿತ್ತು. ಮಕ್ಕಳಿಗೆ ಇನ್ನಾದರೂ ಅಪ್ಪನ ಪ್ರೀತಿ-ಆಶ್ರಯಗಳು ಸಿಗುವಂತಾಗಬೇಕುಏನೇನೋ ಮಾತಾನಾಡುತ್ತಿದ್ದರೂ ಭಾಗಮ್ಮನ ಚೂರಾದ ಮನಮಾತ್ರ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ.

ಇಬ್ಬರೂ ಆಸ್ಪತ್ರೆ ತಲುಪಿದಾಗ ಸುಬ್ಬಾಚಾರಿ ಮಲಗಿಯೇ ಇದ್ದ. ಮೈದುನನೂ ಎಲ್ಲೋ ಬರೆದುಕೊಟ್ಟ ಇಂಜೆಕ್ಷನ್ನೋ ಮಾತೆನೋ ತರಲು ಹೋಗಿದ್ದನೇನೋ. ನರ್ಸೊಬ್ಬಳು ಹತ್ತಿರಬಂದು ರಾಮಕೃಷ್ಣನಿಗೆ ತಗ್ಗಿದ ದನಿಯಲ್ಲಿ - ಸುಬ್ಬಾಚಾರಿ ಕೋಮಾದಲ್ಲಿ ಹೋಗಿರುವದಾಗಿಯೂ, ಯಾವದಕ್ಕೂ ದೊಡ್ಡ ಡಾಕ್ಟರು ಬರುವವರೆಗೆ ಕಾಯಬೇಕೆಂದೂ ತಿಳಿಸಿ ಹೊರಟುಹೋದಳು. ‘ಕೋಮಾಅಂದರೆ ತಿಳಿಯದ ಭಾಗಮ್ಮ ಅವರು ಎದ್ದ ಮೇಲೆ ಗಂಜಿ ಕೇಳಿದರಾಯಿತು ಅಂದುಕೊಂಡು ಅಲ್ಲೇ ಬೆಂಚಿಗೆ ಒರಗಿ ಕುಳಿತುಕೊಂಡಳು. ರಾಮಕೃಷ್ಣನಿಗೆ ಅಲ್ಲಿರಲು ಕಾಲುಗಳೇ ಬರವು, ಕಣ್ಣು ತುಂಬಿ ತುಂಬಿ ಬರುತ್ತಿವೆ. ಭಾಗಮ್ಮನ ಮುಗ್ಧತೆಗೆ ಮೂಕನಾಗಿ ನಡುವಿನ ಸಾಲೆಯನ್ನು ದಾಟಿ ಹೊರಗಡೆ ಹೊರಟು ಹೋದ. ಮರಳಿಬಾರದ ಲೋಕಕ್ಕೆ ಸಾಗುವ ತಯಾರಿಯಲ್ಲಿನ ಗೆಳೆಯನಿಗೂ ಒಂದುಬಾರಿ ಅರಿವಿರುವಾಗ ಕಾಣುವ ಭಾಗ್ಯವೂ ಇಲ್ಲದ್ದಕ್ಕೆ ಪರಿತಪಿಸುತ್ತಾ. ಇದನ್ನೆಲ್ಲಾ ತಾನು ತಪ್ಪಿಸಬಹುದಿತ್ತು. ತಾನು ಸುಬ್ಬಾಚಾರಿಯ ಬಗ್ಗೆ ಮೊದಲೇ ಭಾಗಮ್ಮನವರಿಗೆ ತಿಳಿಸಿದ್ದರೆ.... ಅವರನ್ನು ಹೇಗಾದರೂ ಹೆಣ್ಣುಮಗಳು ಕರೆಯಿಸಿಕೊಳ್ಳುತ್ತಿದ್ದಳು, ಉಳಿಸಿಕೊಳ್ಳುತ್ತಿದ್ದಳು. ಮಕ್ಕಳ ತಲೆಮೇಲೆ ತಂದೆಯ ನೆರಳಾದರೂ ಇರುತ್ತಿತ್ತು ಎಂದು ರಾಮಕೃಷ್ಣ ಪಶ್ಚಾತಾಪದಲ್ಲಿ ಬೆಂದುಹೋದ. ಭಾಗಮ್ಮ ಆತ ಹೋದ ದಾರಿಯಲ್ಲೇ ನೋಡುತ್ತ ಕುಳಿತಳು ಸುಬ್ಬಾಚಾರಿ ಏಳುವದನ್ನೆ ಕಾಯುತ್ತಾ

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...