Wednesday, October 28, 2015

ಮೂವರು ಗಣ್ಯರ ಕೊಲೆ ಹಾಗೂ ಮತ್ತೊಂದು ಹತ್ಯೆರಾಮ್ ಪುನಿಯಾನಿ

ಪ್ರಾಣಿ ಜಗತ್ತಿನ ನಿಸರ್ಗದ ಕಾನೂನನ್ನು ಮಾನವ ಸಮಾಜಕ್ಕೆ ನೇರವಾಗಿ ಅನ್ವಯಿಸುವಂತಿಲ್ಲ. ಆದರೂ, ಕೆಲವೊಮ್ಮೆ ಸಾಮಾಜಿಕ ದುರಂತಗಳನ್ನು ಸಮರ್ಥಿಸಿಕೊಳ್ಳಲು ಇಲ್ಲವೇ ವಿವರಣೆಯನ್ನು ನೀಡುವುದಕ್ಕಾಗಿ ಇದನ್ನು ಬಳಸಿಕೊಳ್ಳುವುದುಂಟು. ‘ಬೃಹತ್ ಮರವೊಂದು ಉರುಳಿದಾಗ ಭೂಮಿಯೇ ನಡುಗುವಂತೆ, (1984ರ ಸಿಖ್ ವಿರೋಧಿ ಹತ್ಯಾಕಾಂಡ) ಹಾಗೂ ಪ್ರತಿಯೊಂದು ಘಟನೆಗೂ ಸಮಾನವಾದ ಮತ್ತು ವಿರೋಧಿ ಪ್ರತಿಕ್ರಿಯೆ (2002ರ ಗುಜರಾತ್ ಗಲಭೆ) ಇರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಾಗ ಇಲ್ಲವೇ ಸಿಖ್ ವಿರೋಧಿ ಹಿಂಸಾಚಾರ ನಡೆದಾಗ ಇಲ್ಲವೇ ಕಾಶ್ಮೀರಿ ಪಂಡಿತರು ಸಾಮೂಹಿಕ ವಲಸೆ ಹೋದಾಗ ಇಲ್ಲವೇ ಮುಂಬೈ ರೈಲಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿ ನೂರಾರು ಅಮಾಯಕರು ಮೃತಪಟ್ಟಾಗ ಸಾಹಿತಿಗಳು-ಲೇಖಕರು ಯಾಕೆ ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡಲಿಲ್ಲ ಎಂದು ಅವರನ್ನು ಪ್ರಶ್ನಿಸಲಾಗುತ್ತಿದೆ. ಈ ವಿಚಾರವು ಕಳೆದ ಒಂದು ತಿಂಗಳು ಇಲ್ಲವೇ ಹೆಚ್ಚಿನ ಸಮಯದಿಂದ ನನ್ನ ಮನಸ್ಸನ್ನು ಕೊರೆಯುತ್ತಿದೆ. ಭೌತಶಾಸ್ತ್ರದಲ್ಲಿ ‘ಗುಣಾತ್ಮಕ ರೂಪಾಂತರ’ (ಕ್ವಾಲಿಟೆಟೀವ್ ಟ್ರಾನ್ಸ್‌ಫಾರ್ಮೇಶನ್) ಎಂಬ ಸಿದ್ಧಾಂತವಿದೆ. ನೀರನ್ನು ಕಾಯಿಸಿದಾಗ ಇಲ್ಲವೇ ತಂಪುಗೊಳಿಸಿದಾಗ ತಾಪಮಾನವು ಹಾಗೆಯೇ ಇರುತ್ತದೆ. ಆದರೆ ನೀರು ಉಷ್ಣ ಇಲ್ಲವೇ ಮಂಜುಗಡ್ಡೆಯ ರೂಪವನ್ನು ಪಡೆದುಕೊಳ್ಳುತ್ತದೆ. ಹೀಗೆ, ನನಗೆ ಈ ಸಿದ್ಧಾಂತವನ್ನು ನೆನಪಿಸಿಕೊಳ್ಳುವಂತಾಯಿತು.


 ಡಾ.ದಾಭೋಲ್ಕರ್, ಕಾಮ್ರೆಡ್ ಪನ್ಸಾರೆ ಮತ್ತು ಪ್ರೊ.ಎಂ.ಎಂ.ಕಲಬುರ್ಗಿ ಕೊಲೆ ನಡೆದಾಗ, ಅಪಾಯದ ಮುನ್ಸೂಚನೆಗಳು ಕಾಣಿಸಲಾರಂಭಿಸಿದವು. ಆದರೆ, ಗೋಮಾಂಸದ ಕಾರಣದಿಂದ ಮುಹಮ್ಮದ್ ಅಖ್ಲಾಕ್ ಹತ್ಯೆ ನಡೆದಾಗ, ಸಮಾಜದಲ್ಲಿ ಏನೋ ತೀವ್ರ ತರದ ಬದಲಾವಣೆಯಾಗಿದೆ ಎಂಬ ಸಂದೇಶವನ್ನು ನೀಡಿತು. ಜೊತೆಗೆ, ಸಾಹಿತ್ಯ ಅಕಾಡಮಿ, ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ವಾಪಸ್ ಮಾಡುವ ಪ್ರಕ್ರಿಯೆಗೆ ಹೇತುವಾಯಿತು. ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ಧದ ಪ್ರತಿಭಟನೆ ಇದಾಗಿತ್ತು. ಇನ್ನು ಪ್ರಶಸ್ತಿ ವಾಪಸಾತಿಗೆ ಸಮಾನಾಂತರವಾಗಿ ನಡೆದ ಘಟನೆಗಳು ಅಷ್ಟೇ ಆಘಾತಕಾರಿಯಾಗಿದ್ದವು. ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾನೆಂದು ಭಾವಿಸಿ ಲಾರಿ ಚಾಲಕನ ಹತ್ಯೆ; ಕಾಶ್ಮೀರ ವಿಧಾನಸಭೆಯಲ್ಲಿ ಪಕ್ಷೇತರ ಶಾಸಕನ ಮೇಲೆ ಬಿಜೆಪಿ ಶಾಸಕರಿಂದ ಹಲ್ಲೆ; ಗೋಮಾಂಸ ಸೇವನೆಯ ಕಾರಣದಿಂದ ಕೆಲವೆಡೆಗಳಲ್ಲಿ ಮುಸ್ಲಿಮರ ಮೇಲೆ ದಾಳಿಯಂತಹ ಘಟನೆಗಳು ಇಲ್ಲಿ ಪ್ರಮುಖವಾದವುಗಳಾಗಿವೆ. ಗೋಮಾಂಸ ಎಂದು ಹೇಳಿಕೊಂಡು ಯಾರೂ ಕೂಡ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವಂತಹ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ರಸ್ತೆಗಳಲ್ಲಿ ವಾಹನ, ಜನಸಂಚಾರಕ್ಕೆ ಅಡ್ಡಿಯಾಗಿರುವ ದನವನ್ನು ‘ಶೂ’ ಎಂದು ಓಡಿಸಲಾಗದಂತಹ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ.

ಕೇಂದ್ರದಲ್ಲಿ ಎನ್‌ಡಿಎ ಸರಕಾರವು ಅಧಿಕಾರಕ್ಕೆ ಬಂದ ನಂತರ ದ್ವೇಷವನ್ನು ಕಾರುವ ಶಕ್ತಿಗಳು ಅವಿರತವಾಗಿ ಕೆಲಸ ಮಾಡಲಾರಂಭಿಸಿವೆ. ಅಲ್ಪಸಂಖ್ಯಾತರ ಅಭದ್ರತೆಯ ವಾತಾವರಣ ಬಹಳಷ್ಟು ಹೆಚ್ಚಿದೆ. ಒಬ್ಬ ಅಕ್ಬರುದ್ದೀನ್ ಉವೈಸಿಗೆ ಪ್ರತಿಯಾಗಿ ಸಾಕ್ಷಿ ಮಹಾರಾಜ್, ಸಾಧ್ವಿಗಳು, ಯೋಗಿಗಳ ಸೇನೆಯೇ ಇದೆ. ಕೇಸರಿ ಧಿರಿಸಿನ ಈ ಸೇನೆಗೆ ಸಂಘ ಪರಿವಾರವೆಂದು ಹೆಸರು. ಮಹಾತಾಯಿ ಹಸುವಿನ ರಕ್ಷಣೆಗೆ ಹಿಂದೂ ಯುವಕರು ಮಹಾರಾಣಾ ಪ್ರತಾಪರಿಂದ ಪ್ರೇರಣೆ ಪಡೆಯಬೇಕೆಂದು ಸ್ವತಃ ಪ್ರಧಾನಿಯವರೇ ಚುನಾವಣೆಯ ಸಮಯದಲ್ಲಿ ಅಪ್ಪಣೆ ನೀಡಿದ್ದರು. ಕಳೆದ ಒಂದು ವರ್ಷದ ಅವಧಿಯಲ್ಲಿ ‘ಹರಾಮ್‌ಜಾದೇ’ (ಅಕ್ರಮ ಸಂತಾನ) ಎಂಬ ಶಬ್ದ ಲೆಕ್ಕವಿಲ್ಲದಷ್ಟು ಸಲ ಬಳಕೆಯಾಗಿದೆ.

ಕೇವಲ ಶಂಕೆಯ ಮೇಲೆ ಪುಣೆಯ ಟೆಕ್ಕಿ ಮೊಹ್ಸಿನ್ ಶೇಖ್ ಅವರನ್ನು ಹತ್ಯೆ ಮಾಡಲಾಗಿದೆ. ಚರ್ಚ್‌ಗಳ ಮೇಲಿನ ದಾಳಿಯನ್ನು ಕಳವು ಪ್ರಕರಣವೆಂದು ನಿರೂಪಿಸಲಾಗಿದೆ. ಲವ್ ಜಿಹಾದ್ ಎಂಬ ಶಬ್ದವನ್ನು ಜೀವಂತವಾಗಿರಿಸಲಾಗಿದೆ. ಮುಸ್ಲಿಮನೊಬ್ಬ ಓರ್ವ ಹಿಂದೂ ಯುವತಿಯನ್ನು ವಿವಾಹವಾದಲ್ಲಿ, ಹಿಂದೂಗಳು ನೂರು ಮುಸ್ಲಿಂ ಯುವತಿಯರನ್ನು ಕೊಂಡು ತರಬೇಕು ಎಂದು ಉತ್ತರ ಪ್ರದೇಶದ ಹಿರಿಯ ಬಿಜೆಪಿ ಧುರೀಣ ಯೋಗಿ ಆದಿತ್ಯನಾಥ್‌ನಂತಹ ವ್ಯಕ್ತಿಗಳು ಕರೆ ನೀಡುತ್ತಾರೆ. ನವರಾತ್ರಿಯಂತಹ ಉತ್ಸವಗಳಿಂದ ಮುಸ್ಲಿಂ ಯುವಕರನ್ನು ಹೊರಗಿಡಲಾಗುತ್ತಿದೆ.

ಗೋಮಾಂಸ ತಿನ್ನಬೇಕೆನ್ನುವವರು ಪಾಕಿಸ್ತಾನಕ್ಕೆ ಹೋಗಿ ಎಂದು ಬಿಜೆಪಿಯ ಮುಸ್ಲಿಂ ಮುಖವಾಡದಂತಿರುವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳುತ್ತಾರೆ. ಮಹಾತ್ಮ ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯ ವೈಭವೀಕರಣ ಹೆಚ್ಚುತ್ತಿದೆ. ಆತನ ಸ್ಮರಣಾರ್ಥ ಮಂದಿರಗಳನ್ನು ನಿರ್ಮಿಸಲಾಗುತ್ತಿದೆ. ಗೋಡ್ಸೆಯ ನಿರ್ಧಾರ ಸರಿ ಇತ್ತು, ಆದರೆ, ಆತ ತಪ್ಪು ವ್ಯಕ್ತಿಯನ್ನು (ಹತ್ಯೆಗೆ) ಆರಿಸಿಕೊಂಡ ಎಂದು ಕೇರಳದ ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ. ಈ ಎಲ್ಲ ಕಾರಣಗಳಿಂದ ಕಳೆದ ವರ್ಷಗಳಿಂದೀಚೆಗೆ ಕೋಮು ಹಿಂಸಾಚಾರದ ವಾತಾವರಣ ಉಲ್ಬಣಗೊಂಡಿದೆ.

ಸಾಹಿತಿಗಳು-ಲೇಖಕರು ಪ್ರಶಸ್ತಿಗಳನ್ನು ವಾಪಸ್ ಮಾಡಿದಾಗ, ಬಿಜೆಪಿಯ ಅಗ್ರ ಪಂಕ್ತಿಯ ಧುರೀಣರು ಅವರನ್ನು ಕ್ಷುಲ್ಲಕವಾಗಿ ಕಂಡಿದ್ದಾರೆ. ಈ ಬೆಳವಣಿಗೆಯನ್ನು ಉಪೇಕ್ಷೆ ಮಾಡಿದ್ದಾರೆ. ಸಾಹಿತಿಗಳನ್ನು ಲೇವಡಿ ಮಾಡುವ ಉದ್ದೇಶದಿಂದಲೇ ‘ಬುದ್ಧಿ ಶುದ್ಧಿ ಪೂಜಾಪಾಠ’ವನ್ನು ಸಂಘಟಿಸಲಾಗಿದೆ. ಟಿವಿ ಸಂದರ್ಶನ- ಮಾತುಕತೆಗಳಲ್ಲಿ ಬಿಜೆಪಿ ವಕ್ತಾರರು ಸಾಹಿತಿಗಳನ್ನು ಅವಮಾನಿಸಿದ್ದಾರೆ. ಇದಕ್ಕೆಲ್ಲ ಮುಕುಟವಿಟ್ಟಂತೆ ಹರ್ಯಾಣ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಗೋಮಾಂಸ ಸೇವನೆ ತ್ಯಜಿಸಿದಲ್ಲಿ ಮಾತ್ರ ಮುಸ್ಲಿಮರು ಭಾರತದಲ್ಲಿ ವಾಸಿಸಬಹುದು ಎಂದು ಅವರು ಅಪ್ಪಣೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇವರಿಗೆಲ್ಲ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆಂದು ವರದಿಯಾಗಿದೆ. ಆದರೆ, ಇವೆಲ್ಲ ಕಣ್ಕಟ್ಟಿನಂತೆ ಕಾಣುತ್ತಿವೆ. ಬಿಜೆಪಿಯ ಯಾವುದೇ ಧುರೀಣರು ತಾವು ಆಡಿರುವ ತಪ್ಪು ಮಾತುಗಳಿಗೆ ಯಾವುದೇ ಬಗೆಯಲ್ಲಿ ಕ್ಷಮಾಪಣೆ ಕೋರಿದ್ದನ್ನು ನಾವೆಲ್ಲ ಕಂಡಿಲ್ಲ, ಕೇಳಿಲ್ಲ.

 ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮೂರು ಸಲ ಬಹುತ್ವ ಮತ್ತು ಸಹಿಷ್ಣುತೆಯನ್ನು ಎತ್ತಿ ಹಿಡಿಯಬೇಕಾದ ಅಗತ್ಯದ ಮಾತುಗಳನ್ನು ಆಡಿದ್ದಾರೆ. ದೇಶದ ನಾಗರಿಕರ ಜೀವಿಸುವ ಹಕ್ಕನ್ನು ಕಾಪಾಡಬೇಕಾದುದು ಸರಕಾರದ ಕರ್ತವ್ಯವಾಗಿದೆ ಎಂದು ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ನೆನಪಿಸಿ ಕೊಟ್ಟಿದ್ದಾರೆ. ದೇಶದ ಇಬ್ಬರು ಪ್ರಮುಖ ನಾಗರಿಕರ ಮಾತುಗಳಲ್ಲಿ ಬದಲಾಗುತ್ತಿರುವ ಸಾಮಾಜಿಕ ವಾತಾವರಣವು ಪ್ರತಿಬಿಂಬಿತವಾಗಿದೆ. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಜ್ಯೂಲಿಯೊ ರೆಬೆರೊ ಕೂಡ ತಮ್ಮ ನೋವು ಮತ್ತು ಆಕ್ರೋಶವನ್ನು ಹಂಚಿಕೊಂಡಿದ್ದಾರೆ. ‘ಓರ್ವ ಕ್ರೈಸ್ತನಾಗಿ ನನ್ನದೇ ದೇಶದಲ್ಲಿ ಹಠಾತ್ ಆಗಿ ಅಪರಿಚಿತನ ಅನುಭವವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ. ಖ್ಯಾತ ನಟ ನಾಸಿರುದ್ದೀನ್ ಶಾ ಅವರಿಗಾದ ಅನುಭವವೇ ಬೇರೆ. ‘ಈವರೆಗೆ ನನಗೆ ಮುಸ್ಲಿಮನಾಗಿ ನನ್ನ ವ್ಯಕ್ತಿತ್ವವು ಅರಿವಿಗೆ ಬಂದಿರಲಿಲ್ಲ’ ಎಂದು ಅವರು ನೋವಿನಿಂದ ಹೇಳಿಕೊಂಡಿದ್ದಾರೆ.

ಈಗ ಕಾಲ ಎಂದಿನಂತಿಲ್ಲ. ಬಹುತ್ವ ಮತ್ತು ಸಹಿಷ್ಣುತೆಯ ವೌಲ್ಯಗಳನ್ನು ಬದಿಗೆ ಸರಿಸಲಾಗಿದೆ. ಈ ಸರಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ಕೋಮು ರಾಜಕೀಯದ ಎಲ್ಲ ರೆಕ್ಕೆಗಳು -ಆರೆಸ್ಸೆಸ್, ಅದರ ಅಂಗಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಸಕ್ರಿಯಗೊಂಡಿವೆ. ಕೋಮುವಾದವೆಂದರೆ, ಹಿಂಸಾಚಾರದಿಂದ ಸತ್ತವರ ಸಂಖ್ಯೆಯಷ್ಟೇ ಅಲ್ಲ, ಅದಕ್ಕಿಂತಲೂ ಅದು ಹೆಚ್ಚಿನದಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಕುರಿತಾದ ಗ್ರಹಿಕೆಗಳು ರೂಪುಗೊಂಡಂದಿನಿಂದಲೇ ಈ ಹಿಂಸಾಚಾರಕ್ಕೆ ಅಡಿಗಲ್ಲು ಬಿದ್ದಿದೆ. ಈ ಗ್ರಹಿಕೆಗಳು ಇತಿಹಾಸವನ್ನು ಆಧರಿಸಿರುತ್ತವೆ. ಜೊತೆಗೆ, ಪ್ರಸಕ್ತ ಸಮಾಜದ ಕೆಲವೊಂದು ಆಯ್ದ ಅಂಶಗಳು ಮಾನವ ವಿರೋಧಿ ತಿರುವು ಮತ್ತು ವಿವರಣೆಯನ್ನು ನೀಡುತ್ತವೆ. ಇದನ್ನು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಸೃಷ್ಟಿಸಲು ಬಳಸಲಾಗುತ್ತದೆ. ಅಲ್ಲಿಂದ ಕೋಮವಾದಿ ಶಕ್ತಿಗಳು ಗುಜರಾತ್ ಇಲ್ಲವೇ ಮುಂಬೈ ಇಲ್ಲವೇ ಭಾಗಲ್ಪುರ ಇಲ್ಲವೇ ಮುಝಫ್ಫರ್‌ನಗರ ಇಲ್ಲವೇ ದಾದ್ರಿಯಲ್ಲಿ ಸಂಭವಿಸಿದಂತಹ ಹಿಂಸಾಚಾರದ ಕೃತ್ಯಗಳ ಪ್ರಚೋದನೆಗೆ ಕುಮ್ಮಕ್ಕು ನೀಡುತ್ತವೆ. ಇದು ಸಮಾಜದಲ್ಲಿ ಒಡಕನ್ನು ಮೂಡಿಸುತ್ತದೆ. ಬಹುಕಾಲದವರೆಗೆ ಸಮಾಜದ ಧ್ರುವೀಕರಣಕ್ಕೆ ಕಾರಣವಾಗುತ್ತದೆ. ಧರ್ಮದ ಹೆಸರಿನಲ್ಲಿ ಚುನಾವಣಾ ಶಕ್ತಿಯನ್ನು ಬಲಪಡಿಸಿಕೊಳ್ಳಲು ಬಯಸುವ ರಾಜಕೀಯ ಪಕ್ಷಕ್ಕೆ ಈ ಧ್ರುವೀಕರಣವೇ ಅಡಿಗಲ್ಲಾಗಿದೆ. ಯೇಲ್ ವಿಶ್ವವಿದ್ಯಾನಿಲಯದ ಅಧ್ಯಯನವೊಂದರ ಪ್ರಕಾರ, ಕೋಮು ಹಿಂಸಾಚಾರದ ಮಾರ್ಗದಿಂದಲೇ ಬಿಜೆಪಿಯ ಚುನಾವಣಾ ಶಕ್ತಿಯಲ್ಲಿ ವರ್ಧನೆಯಾಗಿದೆ.

ಭಾರತದಲ್ಲಿ ಸುಮಾರು ಒಂದೂವರೆ ಶತಮಾನದ ಹಿಂದೆಯೇ ಕೋಮುವಾದದ ಬೀಜ ಬಿತ್ತನೆಯಾಗಿದೆ. ಬ್ರಿಟಿಷರ ಒಡೆದು ಆಳುವ ನೀತಿಯಲ್ಲಿ ಕೋಮು ಇತಿಹಾಸವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲಾ ಗಿದೆ. ಇತಿಹಾಸದ ವಿವರಣೆಯನ್ನು ತಮಗೆ ಬೇಕಾದಷ್ಟೇ ಎತ್ತಿಕೊಳ್ಳುವ ಕೋಮುವಾದಿ ಸಂಘಟನೆಗಳು, ಅವುಗಳಿಗೆ ಹಿಂದೂ ಇಲ್ಲವೇ ಮುಸ್ಲಿಂ ವಿರೋಧಿ ತಿರುವು ನೀಡಿವೆ. ಪ್ರತಿಯೊಂದು ಹಿಂಸಾಚಾರದ ಘಟನೆಯ ನಂತರ ಇದು ಇನ್ನಷ್ಟು ಬಲಗೊಂಡಿದೆ. ಪ್ರಸಕ್ತ ಹಂತದಲ್ಲಿ ಕೋಮುವಾದವು ತನ್ನ ಈ ಹಿಂದಿನ ಎಲ್ಲ ಮಿತಿಗಳನ್ನು ದಾಟಿದೆ. ದೇವಾಲಯಗಳ ಧ್ವಂಸ, ಲವ್ ಜಿಹಾದ್‌ನಂತಹ ವಿಷಯಗಳ ಸುತ್ತಮತ್ತ ರೂಪುಗೊಂಡಿರುವ ದ್ವೇಷಕ್ಕೆ ಈಗ ಗೋಮಾಂಸವನ್ನು ಪೂರಕವಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ರಾಜಕೀಯದ ಕೇಂದ್ರ ಬಿಂದುವಿನಲ್ಲಿರುವ ವಿಭಜಕ ಶಕ್ತಿಗಳಿಗೆ ತಾವು ಹೆಚ್ಚು ಸುರಕ್ಷಿತ ಮತ್ತು ಸುಭದ್ರ ಎಂಬುದು ಚೆನ್ನಾಗಿ ಗೊತ್ತಿದೆ. ಯಾಕೆಂದರೆ, ಸರಕಾರವು ಹೊರನೋಟಕ್ಕೆ ತೋರ್ಪಡಿಸುವ ನಿಲುವು ಏನೇ ಇದ್ದರೂ, ಪ್ರಸಕ್ತ ಸರಕಾರಕ್ಕೂ ಇಂತಹ ಬೆಳವಣಿಗೆಗಳು ಒಳಗೊಳಗೆ ಬೇಕೇ ಆಗಿದೆ. ಹಿಂದೂ ರಾಷ್ಟ್ರೀಯವಾದದ ಸಿದ್ಧಾಂತದಿಂದ ಮಾರ್ಗದರ್ಶನ ಪಡೆದಿರುವ ಸರಕಾರ ಹಾಗೂ ಅಂತಹದೇ ಸಿದ್ಧಾಂತವನ್ನು ಹೊಂದಿರುವ ಸಹ ಶಕ್ತಿಗಳ ಪ್ರಸಕ್ತ ಜೋಡಿಗೆ ವ್ಯಾಪಕ ಮಟ್ಟದ ಜಾಲವಿದೆ ಹಾಗೂ ಬಹು ವಿಸ್ತಾರವನ್ನು ಅವು ತಲುಪಬಲ್ಲದು. ಸ್ಥಳೀಯ ಮಟ್ಟದಲ್ಲಿ ತನ್ನ ಹೆಸರನ್ನು ಕೆಡಿಸಿಕೊಳ್ಳಬೇಕಾದ ಪ್ರಮೇಯ ಬಿಜೆಪಿಗೆ ಇಲ್ಲ. ಸಮಾಜವನ್ನು ಒಡೆಯುವ ಸ್ಥಳೀಯ ಕೆಲಸವನ್ನು ಮಾಡಬಹುದಾದ ಹಲವು ಶಕ್ತಿಗಳು ಇದರ ಬಳಿ ಇವೆ. ಈ ಸಹ ಶಕ್ತಿಗಳು ಈ ಕೇಂದ್ರ ಬಿಂದುವನ್ನು ಆಕ್ರಮಿಸಿಕೊಂಡಿದ್ದು, ‘ಗುಣಾತ್ಮಕ ಬದಲಾವಣೆಯ’ ಇಂದಿನ ಪರಿಸ್ಥಿತಿಗೆ ಕಾರಣವಾಗಿವೆ.

ಸಮಾಜದಲ್ಲಿ ಆಳವಾಗಿ ಬೇರೂರುತ್ತಿರುವ ಕೋಮವಾದದ ಕಾರಣದಿಂದ ಉಂಟಾಗಿರುವ ಪರಿಸ್ಥಿತಿಯನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಸ್ ಮಾಡಲಾಗುತ್ತಿದೆ. ಹೆಚ್ಚುತ್ತಿರುವ ಅಸಹಿಷ್ಣುತೆ, ಬಹುತ್ವದ ಮೇಲಿನ ದಾಳಿ ಮತ್ತು ಅಲ್ಪಸಂಖ್ಯಾತರಲ್ಲಿ ಅಭದ್ರತೆ -ಇವೆಲ್ಲ ಈ ಹಿಂದಿನ ಎಲ್ಲ ಮಿತಿಗಳನ್ನು ಮೀರುತ್ತಿವೆ. ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಸಂವಿಧಾನದ ವೌಲ್ಯಗಳನ್ನು ಎತ್ತಿ ಹಿಡಿಯುವುದಾದರೂ ಹೇಗೆ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.

ಪ್ರೊ. ರಾಮ್ ಪುನಿಯಾನಿ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಲೇಖಕರು

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...