Wednesday, October 21, 2015

ಹಾರೋಹಳ್ಳಿ ರವೀಂದ್ರ ಎರಡು ಕವಿತೆಗಳು

ಕನ್ನಡಕ

ನನ್ನವ್ವ ನನಗೆ
ಕನ್ನಡಕ
ಲೋಕದಾ ಶಬುದ
ಅವಳ ಕಣ್ಣಲ್ಲಿ ಕಾಣುತ್ತಿದೆ

ದುಡಿದು ಧಣಿದು
ಮೈಯ ಕಸರತ್ತಿನಿಂದ
ತೊಟ್ಟಿಕ್ಕುವ ಬೆವರ ಒಂದೊಂದು ಹನಿಗಳು
ಒಂದೊಂದು ವಚನ ಹೇಳುತ್ತವೆ
ನನ್ನವ್ವ ನನಗೆ
ಕನ್ನಡಕ

ಒಣಗಿದ ಮರದ ತುಂಡುಗಳಿಗೆ
ಮಡಿಕೆಯ ಅಂಡು ಸುಟ್ಟು
ಬೆಂದು ಮಿಂದ ಅನ್ನದ ಅಗುಳುಗಳಲ್ಲಿ
ಅಲ್ಲಮ
ಬಸವ
ಮಾದಾರ
ಕಾಣುತ್ತಾರೆ
ನನ್ನವ್ವ ನನಗೆ
ಕನ್ನಡಕ

ಬ್ಯಾಗಕೊಟ್ಟು ಸ್ಲೇಟನಿಟ್ಟು
ಹೋಗಲೊಲ್ಲದವನಿಗೆ
ಚಡಿಏಟುಕೊಟ್ಟು
ಅಕ್ಷರದರಮನೆಗೆ
ಎಳೆದೊಯ್ದ ಕೈಗಳು
ಸಾವಿತ್ರಿ ಭಾ, ಫುಲೆಯ ಸ್ಪರ್ಶ
ಉಸಿರಾಡುತ್ತಿತ್ತು
ನನ್ನವ್ವ ನನಗೆ
ಕನ್ನಡಕ

ಅವದೊಡ್ಡವ
ಇವ ಚಿಕ್ಕವ
ಅವ ಮೇಲು
ಇವ ಕೀಳೆನ್ನದೆ
ಎಲ್ಲರಿಗೂ ಬೆಚ್ಚನೆಯ
ಕಂಬಳಿಕೊಟ್ಟ ಒಲವು
ಶಾಹು, ನಾಲ್ವಡಿಯ ನಿಲುವಿನ
ಸಾಮಾಜಿಕ ನ್ಯಾಯ ಹರಿದಾಡುತ್ತಿತು
ನನ್ನವ್ವ ನನಗೆ
ಕನ್ನಡಕ

ರಗುತಕ್ಕಂಟಿದ
ಮರಿ ರಗುತಗಳಿಗೆ
ಸಂಪತ್ತೇಕೆ? ಎನ್ನುವವರ ನಡುವೆ
ಸಮನಾಗಿ ತೆವರಿ ಹಾಕಿ
ತೋರು ಬೆರಳಲ್ಲಿ ಕಲ್ಲು ನೆಡಿಸಿ
ಒಡೆತನ ನೀಡಿದವಳ ಕಣ್ಣಲ್ಲಿ
ಅಂಬೇಡ್ಕರ್ ಒಡಮೂಡಿದ್ದಾರೆ
ನನ್ನವ್ವ ನನಗೆ
ಕನ್ನಡಕ

ವರುಷದಲ್ಲಿ ಹರುಷಬೇಡ
ಕಹಿಯೂ ಇರಲಿ
ಸಿಹಿಯೂ ಇರಲಿ
ಹೊನ್ನೇರು ಕಟ್ಟಿ
ಶಕೆಯಾರಂಭಿಸುವ
ಪ್ರಕೃತಿಗೆ ಕೈ ಎತ್ತಿ ಮುಗಿದು
ಮನತುಂಬಿಕೊಳ್ಳುವ ಹೃದಯದಲ್ಲಿ
ಬುದ್ದ ನೆಲೆಯಾಗಿದ್ದಾನೆ
ನನ್ನವ್ವ ನನಗೆ
ಕನ್ನಡಕ

***


ಬೆತ್ತಲಾಗಿದ್ದಾಳೆ

ಪರಕೀಯರ ಗುಂಡಿಗೆ ನಡುಗಲಿಲ್ಲ
ಜಗ್ಗಲಿಲ್ಲ
ಕುಗ್ಗಲಿಲ್ಲ
ಕಂಡವರ ಹಜಾರದಲ್ಲಿವೆ ಮಕ್ಕಳೆಂದು
ತೊಟ್ಟಿಮನೆ ಕಟ್ಟಿ
ತಲೆಗೆ ತಂಪಿಟ್ಟ ಮಹಾತಾಯಿ
ಬೀದಿಯಲ್ಲಿ ಮಾನಕ್ಕಾಗಿ
ಅಂಗಲಾಚುತ್ತಿದ್ದಾಳೆ
ಭಾರತಾಂಭೆ
ಭಾರತೀಯರ ಕೈಯಲ್ಲಿ
ಬೆತ್ತಲಾಗಿದ್ದಾಳೆ

ಮುಟ್ಟೊತ್ತಿ ಅದರಿ
ತಿಟ್ಟತ್ತಿ ಬೆವರಿ
ಎದೆತೊಟ್ಟ ಕೊಟ್ಟವಳ
ಮುಕ್ಕಾದವಳೆಂದು
ಮೂರು ಕಾಸಿಗೆ ಮಾರುವ
ಖದೀಮ ಮಕ್ಕಳು
ನಮ್ಮೊಡನೆ ಇದ್ದಾರೆ
ಹೊತ್ತುಟ್ಟಿ ಮೀಯುವಷ್ಟರಲ್ಲಿ
ಇಡಿಗಂಜಿ ಕೊಟ್ಟು
ಪುಡಿಗಾಸ ಹಿಡಿ ಮಾಡಲು
ನೆಲತಟ್ಟಿ ಪಾದ ಸವೆಸಿ
ಒಲೆಯೂದುತ್ತಲೇ
ಕತ್ತಲಲ್ಲಿದ್ದಾಳೆ
ಭಾರತಾಂಭೆ
ಭಾರತೀಯರ ಕೈಯಲ್ಲಿ
ಬೆತ್ತಲಾಗಿದ್ದಾಳೆ

ಮೊದಲಿಗ
ಮಧ್ಯಮ
ಅಂತ್ಯಜ
ಎನ್ನುತ್ತ ಶಪಿಸದ ಜೀವ
ಕಡೆ. ಮಧ್ಯೆ, ಮೊದಲಿಗರ
ಕೋಲಾಹಲದ ನಡುನಿಂತು
ಸುತ್ತ ತಿರುಗಿ ನೋಡುತ್ತಿದ್ದಾಳೆ
ಒಬ್ಬ ಮೇಲೆ
ಮತ್ತೊಬ್ಬ ಕೆಳಗೆ
ಸಿಕ್ಕ ಸಿಕ್ಕದ್ದನೆಲ್ಲಾ
ಎಳೆಯುತ್ತಿದ್ದಾರೆ
ಹೊತ್ತಿಲ್ಲದಾ ಹೊತ್ತಿನಲ್ಲು
ಸತ್ತುಟ್ಟುತ್ತಿದ್ದಾಳೆ
ಭಾರತಾಂಭೆ
ಭಾರತೀಯರ ಕೈಯಲ್ಲಿ
ಬೆತ್ತಲಾಗಿದ್ದಾಳೆ

ಒಬ್ಬ ಮುಖ ಹೊಕ್ಕ
ಮತ್ತೊಬ್ಬ ತೋಳೊಕ್ಕ
ಮತ್ತೊಬ್ಬ ತೊಡೆ ಹೊಕ್ಕ
ಮಗದೊಬ್ಬ ಪಾದ ಹೊಕ್ಕ
ಹುಟ್ಟನ್ನರಿಯದ ಹುಟ್ಟು
ಗಡಿ ತುಂಬೆಲ್ಲಾ ನಡುಗುತ್ತಿದೆ
ಅವಳೆದೆ ನಡುಗುತ್ತಿದೆ
ಬತ್ತಿ ಹೋದ ಕಂಗಳು ಬಿತ್ತುತ್ತಿವೆ
ಛಲವೂ ಇದೆ
ಬಲವೂ ಇದೆ
ಸ್ವರವಿಲ್ಲದೆ ಶರಣಾಗಿದ್ದಾಳೆ
ಭಾರತಾಂಭೆ
ಭಾರತೀಯರ ಕೈಯಲ್ಲಿ
ಬೆತ್ತಲಾಗಿದ್ದಾಳೆ

ಉಣ್ಣುವ ಮಡಿಕೆಯ ಮಾರಿದ್ದಾರೆ
ಲಂಗ, ರವಿಕೆಗಳ ಹೂತಿದ್ದಾರೆ
ಹೂಡಲು ಬಂದವನ ಪಾದವ ಸೀರೆ ಸೇರಿದೆ
ಮುಚ್ಚಿ ಹೋಗುವ ಭಯಕ್ಕೆ ನೀರಳ್ಳಗಳ ಮೌನ
ಭೂಮಿ ನಿತ್ಯದಲಿ ಧ್ಯಾನ
ಬಿರುಕುಟ್ಟ ಮನೆಯ ಜಂತಿಯ
ನೊರ್ ಎನ್ನುವ ಶಬುದಕ್ಕೆ
ಮಕ್ಕಳು ಮೂಗು ಮುರಿಯುತ್ತಿದ್ದಾರೆ
ಸೊರಗಿ ಹೋಗಿದ್ದಾಳೆ
ಬಾಯ ಅದುಮಿಕೊಂಡಿದ್ದಾಳೆ
ಭಾರತಾಂಭೆ
ಭಾರತೀಯರ ಕೈಯಲ್ಲಿ
ಬೆತ್ತಲಾಗಿದ್ದಾಳೆ


ನ್ಯಾಯವೆತ್ತು ಕೊಟ್ಟವಳು
ನ್ಯಾಯಕ್ಕಾಗಿ
ಕಟಕಟೆಯ ಹತ್ತಿದ್ದಾಳೆ
ನ್ಯಾಯಗಾರರೆಂಬುವರು
ಅನ್ಯಾಯಕಾರರಾಗಿ
ಕಣ್ಣು ಕಿತ್ತುಕೊಂಡರು
ಮೂಗು ಮುಂದಲೆಯ ಹಿಡಿದರು
ಕೂಗಿ ಕೊಂಡಳು
ತನ್ನೆದೆಯ ತಾನೆ ಹೊಡೆದುಕೊಳ್ಳುತ್ತಾ
ಚಿಂದಿ ಚಿಂದಿ ಮಾಡಿದಳು
ಭಾರತಾಂಭೆ
ತನಗೆ ತಾನೆ ಬೆತ್ತಲಾದಳು
ಒಡಲೊಳಗಿನ ಮುಳ್ಳ ತಿವಿತಕ್ಕೆ
ಕೆಂಪಾದಳು
ತಾ ಕೆಂಪಾದಳು
***

ಹಾರೋಹಳ್ಳಿ ರವೀಂದ್ರ  ವೈಚಾರಿಕ ಬರವಣಿಗೆಯಿಂದಾಗಿ ಸಾಕಷ್ಟು ವಿವಾದವನ್ನು ಹಿಂದೂ ಮೂಲಭೂತವಾದಿಗಳಿಂದ ಬೆದರಿಕೆಯನ್ನು ಎದುರಿಸುತ್ತಿರುವ ಯುವ ತಲೆಮಾರಿನ ಬರಹಗಾರರಾದ ರವೀಂದ್ರ ಹಾರೋಹಳ್ಳಿ ಮೈಸೂರು ತಾಲ್ಲೂಕಿನ ವರುಣಾ ಹೋಬಳ್ಳಿಗೆ ಹೊಂದಿಕೊಂಡಿರುವ ಹಾರೋಹಳ್ಳಿ ಎಂಬ ಗ್ರಾಮದವರು. ಹುಟ್ಟಿದ್ದು ೨೭-೦೧-೧೯೮೬ ರಂದು ಅವ್ವ ಮಹದೇವಮ್ಮ, ಅಪ್ಪ ಅಂದಾನಿ . ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣ ಹುಟ್ಟೂರಿನಲ್ಲೆ ಮುಗಿಸಿ ಪದವಿಪೂರ್ವ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ  ಓದಿದ್ದಾರೆ.  ಮೈಸೂರು ವಿಶ್ವವಿದ್ಯಾನಿಲಯದಿಂದ   ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮನದ ಚೆಲುವು ಮುದುಡಿದಾಗ (ಕವನ ಸಂಕಲನ) ೨೦೧೨,   ಹಿಂದುತ್ವದೊಳಗೆ ಭಯೋತ್ಪಾಧನೆ - ೨೦೧೪,
ಹಿಂದೂಗಳಲ್ಲದ ಹಿಂದೂಗಳು - ೨೦೧೫ ಇದುವರೆಗಿನ  ಅವರ ಪ್ರಕಟಿತ ಕೃತಿಗಳಾಗಿವೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...