Friday, October 09, 2015

ಜಾನುವಾರು ಸಾಕಣೆ ಒಂದು ವ್ಯಾವಹಾರಿಕ ವಿಚಾರ


ಶ್ರೀನಿವಾಸ ಕಾರ್ಕಳ, ಮಂಗಳೂರು

‘‘ಗೋವು ಉಳಿದರೆ ಭಾರತೀಯ ಸಂಸ್ಕೃತಿ ಉಳಿದಂತೆ, ನಮಗೆ ಬೇಕಾದ್ದನ್ನೆಲ್ಲ ನೀಡುವ ಗೋವನ್ನು ಮಾನವೀಯ ದೃಷ್ಟಿಯಿಂದ ರಕ್ಷಿಸಬೇಕು, ಗೋವಿನ ಸಂರಕ್ಷಣೆ ಮಾಡಬೇಕು ಎಂದು ಸಂವಿಧಾನದಲ್ಲಿಯೇ ಇದೆ. ಹಾಗಾಗಿ ಸಂವಿಧಾನವನ್ನು ಗೌರವಿಸುವ ಎಲ್ಲರೂ ಗೋವನ್ನು ಸಂರಕ್ಷಿಸಬೇಕು’’ ಎಂಬ ಪೇಜಾವರ ಸ್ವಾಮೀಜಿ ವಿಶ್ವೇಶ ತೀರ್ಥರ ಮಾತುಗಳನ್ನು ಗೌರವಿಸುತ್ತಲೇ ಅವರಿಗೆ ಹೀಗೊಂದು ಸಲಹೆ ನೀಡಬಹುದೇನೋ


ರೈತನೊಬ್ಬ ಜಾನುವಾರನ್ನು ಸಾಕುವುದು ಅದು ದೇವರು ಎಂಬ ಕಾರಣಕ್ಕಾಗಿಯಲ್ಲ ಅಥವಾ ಸಂವಿಧಾನದಲ್ಲಿ ಅದನ್ನು ಸಂರಕ್ಷಿಸಬೇಕು ಎಂದು ಹೇಳಿದೆ ಎಂಬ ಕಾರಣಕ್ಕಾಗಿಯೂ ಅಲ್ಲ. ಅದು ಆತನ ಕೃಷಿ ಕೆಲಸಗಳಿಗೆ ಅತ್ಯಗತ್ಯ ಮತ್ತು ಅನುಕೂಲಕರ ಎಂಬ ಕಾರಣಕ್ಕಾಗಿ ಅಷ್ಟೆ. ಹಾಗಾಗಿ ಆತನ ಮಟ್ಟಿಗೆ ಜಾನುವಾರು ಸಾಕಣೆ ಸ್ಪಷ್ಟವಾಗಿ ಒಂದು ವ್ಯಾವಹಾರಿಕ ವಿಚಾರ. ರೈತ ಹಾಲಿಗಾಗಿ ದನ, ಎಮ್ಮೆ ಸಾಕುತ್ತಾನೆ, ಹೊಲ ಉಳುವುದಕ್ಕಾಗಿ ಎತ್ತು, ಕೋಣ ಸಾಕುತ್ತಾನೆ. ಅವು ಗೊಬ್ಬರಕ್ಕೆ ಅಗತ್ಯವಾದರೂ ಕೇವಲ ಸೆಗಣಿಗಾಗಿ ಕೂಡಾ ಯಾವ ರೈತನೂ ಅವುಗಳನ್ನು ಸಾಕುವುದಿಲ್ಲ. ಈ ಅಗತ್ಯಗಳಾಚೆಗೆ ಆತನಿಗೆ ಅವು ನಿರುಪಯುಕ್ತ. ಉಪಯುಕ್ತ ಜಾನುವಾರುಗಳಿಗೇ ಮೇವು ಇಲ್ಲದ ಪರಿಸ್ಥಿತಿ ಇರುವಾಗ, ನಿರುಪಯುಕ್ತ ಜಾನುವಾರನ್ನು ‘ದೇವರು’ ಎಂದು ಮೇವು ಹಾಕಿ (ಇಲ್ಲದಿದ್ದರೆ ಖರೀದಿಸಿ) ಸಾಕಲು ಆಗುವುದಿಲ್ಲ ಎನ್ನುವುದು ವಾಸ್ತವ. ಮೇಲಾಗಿ, ಕೃಷಿಗೆ ಮಳೆಯನ್ನು ಪೂರ್ತಿಯಾಗಿ ಅವಲಂಬಿಸಿದ, ಬೆಳೆಗೆ ಅನಿರೀಕ್ಷಿತವಾಗಿ ಕೀಟಬಾಧೆ ವಕ್ಕರಿಸಿ ಬಂದು, ಬೆಳೆದ ಬೆಳೆಯೂ ಕೈಗೆ ಬಾರದಿರುವ ಬಹುತೇಕ ರೈತಾಪಿ ವರ್ಗದ್ದು ಯಾವತ್ತೂ ಒಂದು ಅನಿಶ್ಚಿತ ಬದುಕು. ಬರದಂತಹ ಪರಿಸ್ಥಿತಿ ನಿರ್ಮಾಣವಾದಾಗಲಂತೂ ಕೇಳುವುದೇ ಬೇಡ. ತನ್ನನ್ನು ತಾನು ಬದುಕಿಸಿಕೊಳ್ಳುವುದೇ ಅಸಾಧ್ಯವಾದ ಪರಿಸ್ಥಿತಿ. ಆಗ ಆತ ಹಾಲನ್ನೂ ಕೊಡದ, ಉಳಲೂ ಬಾರದ ಜಾನುವಾರನ್ನು ಇಟ್ಟುಕೊಂಡು ಕೂರಲಾಗುತ್ತದೆಯೇ? ಈ ಎಲ್ಲ ಸಂದರ್ಭಗಳಲ್ಲಿ ತಾನು ಬದುಕುಳಿಯಬೇಕಾದರೆ, ಅಥವಾ ಬೇರೆ ಜಾನುವಾರನ್ನು ಕೊಂಡು ಕೃಷಿ ಕೆಲಸ ಮುಂದುವರಿಸಬೇಕಾದರೆ ಆತ ಅವನ್ನು ಮಾರಲೇ ಬೇಕಾಗುತ್ತದೆ. ಭಾವನಾತ್ಮಕ ಸಂಗತಿ ಎಂದು ಎಷ್ಟೇ ಬೊಬ್ಬೆ ಹೊಡೆದರೂ, ಕೃಷಿಯೇ ಒಂದು ಲಾಭ ನಷ್ಟದ ವ್ಯವಹಾರವಾಗಿರುವಾಗ ಕೃಷಿಯೊಂದಿಗೆ ಸಂಬಂಧ ಹೊಂದಿರುವ ಜಾನುವಾರು ಸಹಿತ ಎಲ್ಲ ಬಾಬತ್ತುಗಳೂ ರೈತಾಪಿ ವರ್ಗದ ಮಟ್ಟಿಗೆ ಲಾಭನಷ್ಟದ ಲೆಕ್ಕಾಚಾರವೇ.

ಜಾನುವಾರನ್ನು ಸಾಕದವರಿಗೆ, ಜಾನುವಾರನ್ನು ಸಾಕುವುದರ ಹಿನ್ನೆಲೆಯ ಅರಿವಿಲ್ಲದೆ ವೇದಿಕೆಯಲ್ಲಿ ಭಾಷಣ ಬಿಗಿಯುವವರಿಗೆ, ಫೇಸ್‌ಬುಕ್‌ನಲ್ಲಿ ಗೋಮಾತೆ ಎಂದು ಅರಚಿಕೊಳ್ಳುವವರಿಗೆ ಇವೆಲ್ಲ ಅರ್ಥವಾಗುವುದು ಕಷ್ಟ. ಹಾಗೆ ಅರ್ಥವಾಗದಿರಲು ಇನ್ನೊಂದು ಕಾರಣ ದನದ ಮೇಲಿನ ಅವರ ಪ್ರೀತಿಯ ಹಿಂದೆ ಇರುವ ಬೇರೆಯದೇ ಒಂದು ರಾಜಕೀಯ ಅಜೆಂಡಾ. ಆ ವಿಚಾರ ಬೇರೆ.

ಹಾಗಾಗಿ ರೈತನೊಬ್ಬ ಜಾನುವಾರನ್ನು ಸಾಕುವುದರ ಹಿಂದೆಯಾಗಲಿ, ಅದನ್ನು ಮಾರುವುದರ ಹಿಂದೆಯಾಗಲಿ ವ್ಯಾವಹಾರಿಕ ಉದ್ದೇಶ ಹೊರತು ಪಡಿಸಿದರೆ ಯಾವುದೇ ಅನ್ಯ ಉದ್ದೇಶವಿರುವುದಿಲ್ಲ. ಮಾರುವಾಗಲೂ ಒಳ್ಳೆಯ ಬೆಲೆ ಸಿಗುವುದನ್ನು ಆತ ನೋಡುತ್ತಾನೆಯೇ ಹೊರತು, ಕೊಳ್ಳುವಾತ ಯಾವ ಮತಕ್ಕೆ ಸೇರಿದವನು, ಕೊಂಡು ಕೊಂಡ ಮೇಲೆ ಆತ ಅದನ್ನು ಏನು ಮಾಡಿಯಾನು ಎಂದೆಲ್ಲ ಯೋಚಿಸುತ್ತಾ ಕೂರುವುದಿಲ್ಲ. ಭಾವನಾತ್ಮಕವಾಗಿ ಅದನ್ನೆಲ್ಲ ಯೋಚಿಸುತ್ತಾ ಕೂತರೆ ಆತನ ಕೃಷಿ ಕೆಲಸ ನಡೆಯುವುದು ಸಾಧ್ಯವೇ?

ಹಾಗಾಗಿ ಇಲ್ಲಿ ದನದ ಮೇಲೆ ಅಪರಿಮಿತ ಪ್ರೀತಿ ಇರುವ ಪೇಜಾವರ ಸ್ವಾಮೀಜಿಗಳಂಥವರು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ, ‘‘ರೈತರೇ ನಿಮಗೆ ದನ ಬೇಡವೆನಿಸಿದರೆ, ಬೇರೆ ಯಾರಿಗೂ ಅದನ್ನು ಮಾರಬೇಡಿ, ನಮಗೆ ಕೊಡಿ, ನಾವು ನಿಮಗೆ ನ್ಯಾಯಸಮ್ಮತ (ಮಾರುಕಟ್ಟೆ) ಬೆಲೆಯನ್ನೇ ನೀಡಿ ಕೊಂಡುಕೊಳ್ಳುತ್ತೇವೆ’’ ಎಂದು ಹೇಳಿ, ಯಾರು ಜಾನುವಾರು ಮಾರಲು ಬಯಸುತ್ತಾರೋ ಅವರಿಂದ ಅವುಗಳನ್ನು ಖರೀದಿಸಿ ಗೋಶಾಲೆಗಳನ್ನು ಸ್ಥಾಪಿಸಿ ಅವುಗಳನ್ನು ನೋಡಿಕೊಳ್ಳುವುದು. ಆಗ ಒಳ್ಳೆಯ ಬೆಲೆ ಸಿಕ್ಕಂತಾಗಿ ರೈತರಿಗೂ ಸಮಸ್ಯೆ ಇರುವುದಿಲ್ಲ, ಪೇಜಾವರರ ಬಳಗದ ವಾದಕ್ಕೆ, ನಿಲುವಿಗೆ ಒಂದು ಅರ್ಥವೂ ಬರುತ್ತದೆ. ಹಾಗೆಯೇ ಸ್ವಾಮೀಜಿಗಳು ತಮ್ಮ ನಿಲುವಿನೊಂದಿಗೆ ಸಹಮತ ಹೊಂದಿರುವ ಹಿಂದೂ ಬಾಂಧವರೆಲ್ಲರ ನೆರವು ಪಡೆದುಕೊಂಡು ಇಲ್ಲಿ ಮಾತ್ರವಲ್ಲ, ಇಡಿಯ ದೇಶದಲ್ಲಿಯೇ ಈ ಅಭಿಯಾನವನ್ನು ಮಾಡಿದರೆ, ದೇಶದಲ್ಲಿ ದನದ ಮಾಂಸದ ವಿಚಾರದಲ್ಲಿ ನಡೆಯುವ ಗಲಭೆ, ಹಿಂಸಾಚಾರಗಳೂ ನಿಂತಾವು. ಕನಿಷ್ಠಪಕ್ಷ ದನದ ವಿಚಾರದಲ್ಲಿ ಹಿಂದೂ ಮುಸ್ಲಿಮರು ನೆಮ್ಮದಿಯಿಂದ ಸಹಬಾಳ್ವೆ ನಡೆಸಲು ಸಾಧ್ಯವಾದೀತು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...