Friday, October 23, 2015

ಸ್ವಾಮಿ ಪೊನ್ನಾಚಿ ಎರಡು ಕವಿತೆಗಳು
ಈ  ರಾತ್ರಿ

ಹಗಲಿಗೆ ಜೋಗುಳವಾಡಿ ತೊಟ್ಟಿಲು ತೂಗುವ ಕತ್ತಲು
ಬೆಳಕಿನ ಬಟ್ಟೆ ಕಿತ್ತೆಸೆದು ಬರಿದೇ ಬೆತ್ತಲು

ಈ ರಾತ್ರಿ ಬೆಕ್ಕಿನ ಕಣ್ಣೊಂದು ಫಳ್ಳನೆ ಮಿನುಗಿ
ಜೀರುಂಡೆಯ ಚೀರ್ ಶಬ್ಧಕೆ ಮೈ ಸಣ್ಣಗೆ ಬೆವರಿ
ಮಬ್ಬಿನ ಮಸುಕಲಿ ಹಾರುವುದು ಹಕ್ಕಿಯೋ ಬಾವಲಿಯೋ
ಕುಣಿದು ಕುಪ್ಪಳಿಸಿ ಕಾಲು ಇಳಿಬಿಟ್ಟ ಮರ
ತರೆದೆದೆಗೆ ಗಾಳಿ ಹಾಕುತ್ತಾ ಅರ್ಧಬಾಗಿಲು ತೆರೆದಿಟ್ಟು
ಇನಿಯನಿಗೆ ಕಾದುಕುಂತ ಕಾಮಿನಿ
ಈ ಕತ್ತಲಿಗೂ ತನಗೂ  ಸಂಬಂಧವಿಲ್ಲವೆಂದ ಭಗ್ನ ಪ್ರೇಮಿ
ನಡುರಸ್ತೆಯಲಿ ಒಡೆದ ಡಬ್ಬ ಝಾಡಿಸುತ್ತಾ
ಸಿಗರೇಟಿಗೆ ಉರಿ ತಗಲಿಸುತ್ತಾನೆ

ಹೆಡೆಯೆತ್ತಿ ಬುಸುಗುಡುವ ಕರಿನಾಗರ
ಕಬ್ಬಿಣದ ಕಡಲೆ ಮೇಯಲು ಹೊರಟ ಕಲ್ಲು ಗೂಳಿ
ಕಲ್ಲೂ ನೀರೂ ಕರಗುವ ಹೊತ್ತು
ಕೊಳ್ಳಿದೆವ್ವಗಳು ಸ್ವಚ್ಛಂದ ವಿಹರಿಸಿ ರೆಕ್ಕೆ ಸುಡುತ್ತವೆ
ಬೇಕಾಬಿಟ್ಟಿ ಹಾರುವ ಕನಸುಗಳಿಗೆ ಡಿಕ್ಕಿ ಹೊಡೆದು
ಜಗತ್ತಿನ ಮುಸುಕೆಳೆದು ತೊಗಲುಗೊಂಬೆಯಾಟ ಆರಂಭವಾಗಿ
ಬೆಳಗಿನವರೆಗೂ
ದೂರದಲ್ಲಿ ಯಾರೋ ಹೆಂಗಸು ಕಿರುಚಿದ ಶಬ್ಧ
ನಸುಕಿನ ಚಳಿಗೆ ರಗ್ಗು ಮತ್ತಷ್ಟು ಮೇಲೇರುತ್ತದೆ

ರಸ್ತೆಯ ಹೊಕ್ಕಳಿಗೆ ಕಚಗುಳಿ ಇಟ್ಟು 
ಕರಿ ಮೈ ಮೂಸಿ ಮತ್ತೇರಿಸಿಕೊಳ್ಳುವ
ಹುಲು ಜೀವಿಗಳು ಲಾರಿ ಟೈರುಗಳಿಗೆ ಸಿಕ್ಕಿ  ಗರಮಾಗರಂ
ಕಳ್ಳದಂದೆಯ ಕಾಳರಾತ್ರಿ ಬುಸುಗುಟುವ ವಿಷಸರ್ಪ
ಕತ್ತು ತುಂಡರಿಸಿಕೊಂಡು ರೈಲ್ವೇ ಕಂಬಿಯ ಮೇಲಿದ್ದ ಹೆಣ
ಬೆಳಿಗ್ಗೆ ಸೀಮೆಸುಣ್ಣ ಹಿಡಿದು ಮಹಜರು ಮಾಡುವ ಪೋಲೀಸರು
ನಿರುಮ್ಮಳರಾಗುತ್ತಾರೆ ಅನಾಥ ಶವದ ಲಿಸ್ಟಿಗೆ ಸೇರಿಸುತಾ ಮತ್ತೊಂದನು
 ***


ಅವಳು ಹೊರಬಿದ್ದ ಗಳಿಗೆ

ಅವಳು ಮನೆಯಿಂದ ಹೊರಬಿದ್ದ ಗಳಿಗೆಯಲಿ
ಬಂದೂಕು ಕಣ್ಣುಗಳು ಹಿಂಬಾಲಿಸುತ್ತವೆ

ಕುಂಟಾಬಿಲ್ಲೆಯಾಡುವ ಹುಡುಗಿಯಂತೆ ನಡೆಯುತಿದ್ದರೆ
ಸಾವಿರ ನಕ್ಷತ್ರಗಳು ಮರೆಯಲ್ಲಿ ಮಿನುಗುತ್ತವೆ
ಎಗರಿಬೀಳುವ ಮೊಲೆಗಳನು ನೋಡಲಾಗದೆ ತತ್ತರಿಸಿ
ಬಿದಿರ ಜಳ್ಳೆಯೊಂದು ಚಳುಕಿದಂತೆ ಬಳುಕುವ ಸೊಂಟದ ಲಯಕೆ
ಬೊಚ್ಚುಬಾಯಿಗಳ ತುಟಿಗಳು ಅದುರತೊಡಗುತ್ತವೆ
ಕುಣಿಯುವ ನಿತಂಬಗಳಿಗೆ ಸರಿಸಾಟಿಯಾಗಿ
ಮನಸು ಹುಚ್ಚೆದ್ದು ಕುಣಿಯುತ್ತದೆ

ಜನನಿಬಿಡ ರಸ್ತೆಗಳಲಿ ಜಂಬದ ಕೋಳಿಯಂತೆ ಓಡಾಡುವ
ಇವಳ ಅಂಗಸ್ಪರ್ಶದಿಂದ ಅದೆಷ್ಟೋ ಹುಡುಗರ ಶಾಪವಿಮೋಚನೆ
ನೀಲಿಕಣ್ಣ ಕೊಳದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ
ಅಮಾಸಿ ಕೂದಲಿನ ಕಡುಕಪ್ಪಿನಲಿ ತಲೆಮರೆಸಿಕೊಳ್ಳುವ
ಹಸಿಹುಡುಗರನ್ನು ಕನಸಿನಲ್ಲಿಯೂ ಬಿಡದ ಅವಳ
ಬಿಳಿ ಮೈಯ ಮುಟ್ಟಲು ಬೆಚ್ಚಿ ಬೀಳುತ್ತಾರೆ

ಯುವಕಣ್ಣು ಮುದಿಕಣ್ಣು ಕನ್ನಡಕದ ಕಣ್ಣುಗಳಿಂದ
ಪದೇಪದೇ ಅತ್ಯಾಚಾರಕ್ಕೆ ಒಳಪಡುವ ಇವಳು
ಯಾರ ಮೇಲೂ ಕೇಸು ದಾಖಲಿಸುವುದಿಲ್ಲ
ಸುಮ್ಮನೆ ಒಮ್ಮೆ ಕದ್ದು ನೋಡುವಾಸೆ ಸುಖಿಸುವಾಸೆ
ಕರೆದರೆ ಕನಸಿಗೆ ಬರಲು ಒಪ್ಪುವ ಇವಳ
ನೆನೆಸಿಕೊಂಡರೆ ನಿದ್ದೆ ಬರುವುದೇ ಇಲ್ಲ

ಅವಳು ಹಿಡಿದ ಕಂದೀಲಿನ ಸುತ್ತ
ಹಾರಾಡುವ ಪತಂಗ ನಾವು


***


ಸ್ವಾಮಿ ಪೊನ್ನಾಚಿ ಅವರು .ಚಾಮರಾಜನಗರ ಜಿಲ್ಲೆ ,ಕೊಳ್ಳೇಗಾಲ ತಾಲ್ಲೂಕು ,ಪೊನ್ನಾಚಿಯೆಂಬ ಗುಡ್ಡಗಾಡು ಊರಿನವರು. ಓದಿದ್ದು ಕೊಳ್ಳೇಗಾಲ, ಕನಕಪುರ, ಮೈಸೂರಿನಲ್ಲಿ. ಸದ್ಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ .ಕತೆ, ಕವನ, ಕಾದಂಬರಿಯೆಂದರೆ ಅವರಿಗೆ  ಇಷ್ಟದ ಕ್ಷೇತ್ರಗಳು. .ಕನ್ನಡದ ಎಲ್ಲಾ ಲೇಖಕರು ಒಂದಲ್ಲಾ ಒಂದು ಕಾರಣಕ್ಕೆ ಇಷ್ಟ ಅವರಿಗೆ ತೇಜಸ್ವಿ ಎಂದರೆ ವಿಶೇಷ ಪ್ರೀತಿ.

swamyponnachi123@gmail.com
9980871863No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...