Wednesday, October 14, 2015

ಸ್ಫೂರ್ತಿ ಹರವು : ಎರಡು ಕವಿತೆಗಳು.








                       

ಕೆಂಪು ಗೀತೆ


ಯಾವ ಗುರುತು, ಯಾರ ಮತವೂ
ಗೆದ್ದ ಮೇಲೆ ನಾವು ಯಾರು
ಮತವ ಪಡೆದು ಬದುಕ ಕಳೆದು
ಪ್ರಶ್ನೆಸಿ ನಿಲ್ಲುವರು ನೀವು ಯಾರು
ಕಾಡ ಕಣಿವೆಯಲಿ ಗುಡಿಸಲ ಕಟ್ಟಿ
ಉತ್ತಿ-ಬಿತ್ತಿ ಬದುಕ ಕಂಡ ಜೀವ ನಾವು
ಹುಲಿಯೇ ಇಲ್ಲದ ಸಂರಕ್ಷಿತ ಅರಣ್ಯವೆಂದು
ಕಿತ್ತು ಒದರಿದಿರೀ ಪುಟ್ಟ ಗುಡಿಸಲ ನೀವು
ಕಟ್ಟಿದ ಬದುಕ ಕೆಡವಿ ಹೋದವರೆ
ಕರಾವಳಿಯ ಕಾಣದ ಕಾನನ ಕಂಡಿರೇ ನೀವು
ಕೆಂಪು ಬಣ್ಣವ ಮುಖಕ್ಕೆ ಬಳಿದು
ಬಣ್ಣವಿಲ್ಲದ ಕತ್ತಲಲ್ಲಿ ಕೂರಿಸಿ ಕೇಳುವಿರಿ
ಕೆಂಪು ಹುಡುಗ ನೀನು ಯಾರು

ಕೆಂಪು ಹುಡುಗ ನಾನು ಯಾರು
ಎಂದ ಮೇಲೆ ಹಿಡಿದೆ ಕೆಂಪು ಬಾವುಟ
ಗೇರು ಬೀಜದ ಸೊನೆಯ ಕೋಪ
ಗುಳೆ ಹೊರಟ ನನ್ನವರ ತಾಪ
ತಿನ್ನುವ ಅನ್ನ ಮಣ್ಣಿಗೆ ಸುರಿದಿರಿ
ಸಿಡಿದು ಹಿಡಿಯ ಬಾರದೆ ಬಂದೂಕು
ಕನಸ ಬೆರಸಿ ನೆಟ್ಟ ಅಡಿಕೆಗೆ
ಬೆಂಕಿಯಿಟ್ಟು ಕೇಕೆ ಹಾಕುವ ಪಡೆಯೇ
ಹಾಡಬಾರದೇ ಕ್ರಾಂತಿ ಗೀತೆಯ ನಾನು
ನಾನು ಮಲೆ ಕುಡಿಯ.. ನಾನು ಮಲೆಕುಡಿಯ..
ಹುಲಿಯು ನನ್ನದೇ ಮಲೆಯು ನನ್ನದೆ
ಸಂರಕ್ಷಿತ ಅರಣ್ಯವೂ ನನ್ನದೇ
ಬಿಟ್ಟು ತೊಲಗಿರಿ ನೀವು..
***

೨ 

ಧ್ಯಾನದೊಳಗಿಂದ..


ಮುತ್ತಿನ ಶಬ್ದ ಓಂಕರಿಸಿ
ತಣ್ಣಗೆ ರಸಜ್ವಾಲೆ ಹರಿದು
ನುಸುಳಿ ತೂರಿ ತೀರದೆ
ಬೆವರಿನ ರುಚಿ ನೋಡುವ
ನೆಪದಲಿ ಕಚ್ಚಿದ್ದಕ್ಕೆ
ಸುಳ್ಳು ಸುಳ್ಳೇ ಮುಸಿಕೋಪದಿಂದ
ಬುಜ ಹಾರಿಸಿ ಮಗ್ಗಲು ತಿರುವಿ
ಕೂದಲನ್ನೆಲ್ಲ ಮುಖದ ಮೇಲೆ ಎಸೆದು
ಮತ್ತೆ ಸರಸಕ್ಕೆ ಬರುವ ದಾರಿ ತೋರಿ
ಕೂದಲ ಅಮಲು ಹಿಡಿದು
ಮುದಗೊಂಡು, ಬೆನ್ನ ಮುದ್ದಿಸುತ್ತಾ
ಕುತ್ತಿಗೆ ಕಚ್ಚುವೆ
ಮುಖ ತಿರುಗಿಸಲಾಗದೆ ಹೆಣಗಿ
ನಡು ನಡುವೆ ಕೈ ಬಳಸಿ
ಬಾಹುವಿಗೆ ಒತ್ತಿ, ಸುತ್ತಿ
ನೀಳ ಕಾಲುಗಳೊಗೆ ಬಚ್ಚಿ
ನಿದ್ದೆ ಬರುವುದರೊಳಗೆ
ಮೆತ್ತಗೆ ಹೊರಳಿಸಿ
ಬೆಚ್ಚಗೆ ಬಿಗಿಯಾಗುವೆ
ತೋಳಿಗೆ ತೋಳು ಬೆಸೆದು
ಕೆನ್ನೆ ಮೇಲೆ ಕೆನ್ನೆ ಇರಿಸಿ
ನಿದ್ದೆಯು; ಮುದ್ದು ಇಳಿದೂ
ಚುಚ್ಚಿ ಕಾಡಿಸುವ ಗಡ್ಡವೇ ಇಲ್ಲ
ನೀ ನನ್ನವನೇ ಅಲ್ಲ ಎನಿಸಿ
ಮುದ್ದಿನ ಧ್ಯಾನ ಆವಿ ಆಯ್ತು
***



ಸ್ಫೂರ್ತಿ ಹರವು (೧೯೮೯) ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಹರವೂ ಗ್ರಾಮದವರು. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ, ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಬ್ಬು, ಕೋಳಿಅಂಕ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಜನಶ್ರೀ, ಬಿಗ್ ಬಾಸ್ , ಸೂಪರ್ ಮಿನಿಟ್ ರಿಯಾಲಿಟಿ ಶೋ, ಪ್ರಜಾ ಟಿವಿಯಲ್ಲಿ ಕೆಲಸ ಮಾಡಿದ್ದಾರೆ. ಸಧ್ಯ ಬೆಂಗಳೂರಿನ ಕನ್ನಡಪ್ರಭ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಣಸೆ ಹೂ ಎಂಬ ಕವನ ಸಂಕಲನ ಪ್ರಕಟವಾಗಿದೆ. 

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...