Friday, October 30, 2015

ರುಖಿಯಾ ರಝಾಕ ಎರಡು ಕವಿತೆಗಳು




ಅಛ್ಛೇದಿನ್ ಎಂದರೆ....

ಅಛ್ಛೇದಿನ್ ಎಂದರೆ...
ಸುಟ್ಟು ಕರಕಲಾದ ದಲಿತ..?
ರಕ್ತ ಸಿಕ್ತ ಮ್ಲೇಛ್ಛ.. ?
ಉಸಿರು ನಿಲ್ಲಿಸಿದ ನ್ಯಾಯ..?
ಬೆತ್ತಲಾದ ಮಾನಿನಿಯರ ಮಾನ..?
ಭಸ್ಮವಾದ ಮನುಜ ಹಕ್ಕು..?

ಅಚ್ಛೇದಿನ್ ಎಂದರೆ...
ಕತ್ತು ಹಿಸುಕಲ್ಪಟ್ಟ ಆಹಾರ ಹಕ್ಕು,
ಜೀವಿತದ ಸ್ವಾತಂತ್ರ್ಯ...?
ಅತೃಪ್ತ ಆತ್ಮಗಳ
ಅಸಹನೀಯ ಆಲಾಪ..?

ಅಛ್ಛೇದಿನ್..?
ಅದು ಬೇಕಿಲ್ಲ..
ಇಂದೂ ಮುಂದೂ, ಇನ್ನೆಂದೂ..
ಸಾಕು ನಮಗೆ
ನಮ್ಮದೇ ಹಳೇ ದಿನ..
ನೆತ್ತರ ಕೆಂಪಿನಿಂದ ತೊಯದ,
ಡಿಜಿಟಲಿನ ಕೃತಕ ಬಣ್ಣಬಳಿಯದ,
ಕಪ್ಪುಬಿಳುಪಿನಲ್ಲೂ
ಬಣ್ಣದ ಕನಸು ಕಂಡ,
ತೀರಾ ಸಾಮಾನ್ಯ ದಿನ..
ನಮ್ಮ ದಿನ....
 ***



ಹೌದು, ಅಪರಾಧಿ ನಾನು...

ಅವಳು ಅಳುತ್ತಿದ್ದಾಳೆ ಮತ್ತೆ ಮತ್ತೆ
ಕಣ್ಣುಜ್ಜಿ, ಮೂಗೊರೆಸಿ ಕೆನ್ನೆತೀಡಿ...
ನನ್ನೆದೆ ಮಿಡಿತ ಸ್ತಬ್ಧಿಸುವಂತೆ;
ಆತ್ಮವನ್ನು ಹಿಂಡಿ ಹಿಸುಕುವಂತೆ
ಬಿಕ್ಕಳಿಸುತ್ತಿದ್ದಾಳವಳು ಮತ್ತೆ ಮತ್ತೆ..

ಕಂಬನಿಯೊರೆಸುವ ತ್ರಾಣಕಳಕೊಂಡ
ನಡುಗುವ ಕರಗಳು ನನ್ನದು...
ಅವಳ ಪ್ರಶ್ನಿಸುವ ಪ್ರಖರ
ನೋಟಗಳ ಎದುರಿಸಲಾಗದ
ನಿಸ್ತೇಜ ಬಾಗಿದ ಕಂಗಳು ನನ್ನದು..
ಅವಳ ಮುರಿದ ಬೊಂಬೆಯ
ಜೋಡಿಸಲಾಗದ;
ಅವಳ ಒಡೆದ ಬಳೆಗಳ
ಕೂಡಿಸಲಾಗದ ಅಸಹನೀಯ
ಅಸಹಾಯಕತೆ ನನ್ನದು...

ವಿಕೃತನ ಕೈಯಲ್ಲಿ ನಲುಗಿ,
ನಡುಗಿ ಛಿದ್ರವಿಛಿದ್ರ ವಾದ
ದೇಹದೆಡೆಯಿಂದೊಸರಿದ
ನೆತ್ತರ ಹರಿವು, ನುಚ್ಚುನೂರಾದ
ಕನಸಿನರಮನೆಯ ಕಂಡು
ಮೌನ ನಿಟ್ಟುಸಿರಿಡುವ
ಮೂಕ 'ಅಪರಾಧಿ' ನಾನು..
ಕ್ಷಮೆಯಿರಲಿ ಮಗು..

(ಅಪ್ರಾಪ್ತ ನಿರ್ಭಯಾರೇ ಕ್ಷಮೆಯಿರಲಿ... )

ರುಖಿಯಾ ರಝಾಕ ಕವಿಯತ್ರಿ ಪತ್ರಕರ್ತೆ ಆಗಿರುವ ಉಡುಪಿ ನಿವಾಸಿಯಾಗಿದ್ದಾರೆ. ನ್ಯೂಸ್ ಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಸುದ್ಧಿ ಸಂಪಾದಕಿಯೂ, ಅದೇ ಪತ್ರಿಕೆಯ "ರೆಬೆಲ್ ಟಾಕ್" ಅಂಕಣಕಾರ್ತಿಯೂ ಆಗಿದ್ದಾರೆ. ಕವನ ಬರೆಯುವುದು ಅವರ ಹವ್ಯಾಸ.

ruqiarazak54@gmail.com

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...