Friday, October 16, 2015

ನಾನು ಕಂಡ ರಹಮತ್ ಸರ್

                                                                ಸಂವರ್ಥ ಸಾಹಿಲ್

ನಾನು ಪುಣೆಯ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಸೇರಿದ ಒಂದೆರಡು ತಿಂಗಳಲ್ಲಿ ಗುರುಗಳಾದ ರಹಮತ್ ತರೀಕೆರೆ ಅವರು ಆಮೀರಬಾಯಿ ಕರ್ನಾಟಕಿ ಪುಸ್ತಕಕ್ಕೆ ಅಗತ್ಯ ಇದ್ದ ಒಂದೆರಡು ಸಂದರ್ಶನ ನಡೆಸಲು ಮತ್ತು ನ್ಯಾಷನಲ್ ಫಿಲಂ ಆರ್ಕೈವ್ಸ್ ಲೈಬ್ರರಿಯಲ್ಲಿ ರೆಫರ್ ಮಾಡಲು ಪುಣೆಗೆ ಬಂದಿದ್ದರು. ಬಂದಾಗ ನಮ್ಮ ಹಾಸ್ಟೆಲ್ ಅಲ್ಲಿಯೇ ಉಳಿದುಕೊಂಡು ನನ್ನ ಸಂಭ್ರಮ ಹೆಚ್ಚಿಸಿದ್ದರು. ಅವರೊಂದಿಗೆ ಒಂದಿಷ್ಟು ಓಡಾಟ ಒಂದಿಷ್ಟು ಮಾತುಕತೆ ನನ್ನನ್ನು ಮತ್ತಷ್ಟು ಶ್ರೀಮಂತಗೊಳಿಸಿತ್ತು. ತೀರದ ಜ್ಞಾನ ದಾಹ ಇರುವ ನನಗೆ ಬೇಕಾಗಿದ್ದಿದ್ದು ಸಹ ಅದೇ. ಕೊನೆಯ ದಿನ ಹೊರಡುವ ಮುನ್ನ ಗುರುಗಳು ನನ್ನ ಕೈಯಲ್ಲಿ ನಾಲ್ಕಂಕೆ ಮೊತ್ತದ ಹಣ ಇಟ್ಟು "ಬೇಡ ಅನ್ನಬಾರದು" ಎಂದು ಆಜ್ಞೆ ಹೊರಡಿಸಿದರು. "ತುಂಬಾ ಆಸೆ ಇಟ್ಟುಕೊಂಡು ಕೆಲಸ ಬಿಟ್ಟು ಮತ್ತೆ ಕಲಿಲಿಕ್ಕೆ ಬಂದಿದಿ..." ಎಂದು ಅವರು ಹೇಳಿದ್ದು ನೆನಪಿದೆ. ಗುರುಗಳು ಕಲಿಯಲು ಸಹಾಯ ಆಗಲಿ ಎಂದು ಕೊಟ್ಟ ದುಡ್ಡನ್ನು ಕಲಿಯಲಿಕ್ಕೆ ಮಾತ್ರ ಉಪಯೋಗಿಸುತ್ತೇನೆ ಎಂದು ನನಗೆ ನಾನೇ ಹೇಳಿಕೊಂಡಿದ್ದೆ. ಊಟ ವಸತಿ ಇತ್ಯಾದಿಗೆ ನನ್ನ ಬಳಿ ಹಣ ಇದ್ದಿತ್ತು. ಅಂದು ಸಂಜೆ ಪುಸ್ತಕದ ಅಂಗಡಿಗೆ ಹೋಗಿ ಬೇಕಾದ ಒಂದಿಷ್ಟು ಪುಸ್ತಕ ಕೊಂಡು ಬಂದಿದ್ದೆ. 

ಇದಾಗಿ ಕೆಲವು ತಿಂಗಳಲ್ಲಿ ಅಮೀರ್ಬಾಯಿ ಕರ್ನಾಟಕಿ ಪುಸ್ತಕ ಬಿಡುಗಡೆ ಆಯಿತು. ಒಂದು ಪ್ರತಿ ಕಳಿಸಿ ಕೊಟ್ಟರು ಗುರುಗಳು. ಆಗ ಆದ ಸಂತೋಷ ಅಷ್ಟಿಷ್ಟಲ್ಲ. ಪುಸ್ತಕದಲ್ಲಿ ನನಗೂ ಅವರಿಗೂ ಆದ ಒಂದು ವಿಚಿತ್ರ ಅನುಭವವನ್ನು ಅವರು ದಾಖಲಿಸಿದ್ದು ಇನ್ನಷ್ಟು ಖುಷಿ ನೀಡಿತ್ತು. 
ಮುಂದೆ ನನ್ನ ಅಭ್ಯಾಸಾವಧಿ ಮುಗಿಯುವ ಸಮಯ ರಹಮತ್ ಸರ್ ಮತ್ತೆ ಪುಣೆಗೆ ಬಂದಿದ್ದರು. ಅಲ್ಲಿಯ ಸಾಂಸ್ಕೃತಿಕ ಕೇಂದ್ರವೊಂದು ಅಮೀರ್ಬಾಯಿ ಕರ್ನಾಟಕಿ ಕುರಿತಾಗಿ ಒಂದು ಸಂವಾದ ಗೋಷ್ಠಿ ಆಯೋಜಿಸಿದ್ದರು. ಆಗ ಬಂದು ಮತ್ತೆ ಒಂದು ದಿನ ಈ ಬಾಲಿಶ ಅಧಿಕಪ್ರಸಂಗಿಯೊಂದಿಗೆ ಕಳೆಯುತ್ತಾ, "ಮುಂದೆ ಏನು ಕೋರ್ಸ್ ಮಾಡ್ತಿ? ನಿಮ್ಮಜ್ಜ ಹೇಳಿದ್ದು ಸರಿ. ನಿನಗೊಂದು ಅಜ್ಜನ ಕೋಲು ಬೇಕು," ಎಂದು ಕೀಟಲೆ ಮಾಡಿದ್ದರು ನಾನು ನನ್ನ ಅಜ್ಜನ ಬಗ್ಗೆ ಬರೆದಿದ್ದ ಒಂದು ಲೇಖನದಿಂದ ಅಜ್ಜನ ಮಾತುಒಂದನ್ನು ಉಲ್ಲೇಖಿಸುತ್ತಾ. 

ಇದಾಗಿ ಒಂದು ವಾರದಲ್ಲಿ ಸರ್ ಇಂದ ನನಗೊಂದು ಪೋಸ್ಟ್ ಬಂತು. ಲಕೋಟೆ ಒಡೆದು ನೋಡಿದರೆ ಮತ್ತೆ ನಾಲ್ಕು ಅಂಕೆಯ ಮೊತ್ತದ ಒಂದು ಚೆಕ್ಕು. ಹಿಂದಿನ ಬಾರಿ ನೀಡಿದ ಮೊತ್ತಕ್ಕಿಂತ ಹೆಚ್ಚಿನ ದುಡ್ಡು. ಜೊತೆಯಲ್ಲಿ ಒಂದು ಪತ್ರ. "ಕೋರ್ಸ್ ಮುಗಿತ ಬಂತು. ಏನಾದರು ಖರ್ಚು ಇರುತ್ತದೆ. ಇಟ್ಟುಕೋ. ಬೇಕಿದ್ದರೆ ಸಾಲ ಎಂದೇ ತಿಳಿ. ಆದರೆ ನಾನೇ ಕೇಳುವ ತನಕ ಮರಳಿಸುವ ಅಗತ್ಯ ಇಲ್ಲ." ಕಣ್ಣು ತುಂಬಿ ಬಂದದ್ದು ಸುಳ್ಳಲ್ಲ. ಆ ಸಮಯಕ್ಕಾಗಲೇ ಕೂಡಿಟ್ಟಿದ್ದ ಹಣ ಖಾಲಿ ಆಗಿ ಹೋಗಿತ್ತು. ಅಪ್ಪನ ಬಳಿ ಹಣ ಕೇಳಿಯೂ ಆಗಿತ್ತು. ಮತ್ತೆ ಕೇಳಲು ನಾಚಿಕೆಯೂ ಆಗ ಹತ್ತಿತ್ತು. ಪುಣೆಯಲ್ಲಿ ಕಳೆದ ಕೊನೆಯ ಎರಡು ತಿಂಗಳು ರಹಮತ್ ಸರ್ ನೀಡಿದ ಆ ದುಡ್ಡಿನಲ್ಲೇ.

ಇದನ್ನೆಲ್ಲಾ ಬಾಯಿ ಬಡುಕ ನಾನು ಯಾವತ್ತೂ ಎಲ್ಲಿಯೂ ಹೇಳಿಕೊಂದಿದ್ದಿಲ್ಲ. ಈಗ ಇಲ್ಲಿ ಬರೆದುಕೊಂಡ ವಿಷಯ ಗುರುಗಳಿಗೆ ತಿಳಿದರೆ ಅವರಿಗೆ ಇಷ್ಟ ಆಗಲಿಕ್ಕಿಲ್ಲ. ಆದರೂ ಇಲ್ಲಿ ಬರೆಯುತ್ತಿರುವುದು ಯಾಕೆಂದರೆ ಕನ್ನಡ ಲೋಕ ಕಂಡ ಅಪರೂಪದ ಲೇಖಕ ಚಿಂತಕ ರಹಮತ್ ತರೀಕೆರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹೊದಿಸಿದ ಶಾಲು ಮತ್ತು ಹಣದೊಂದಿಗೆ ಹಿಂದಿರುಗಿಸಿದಾಗಲೂ ಅದೆಷ್ಟೋ ಮಂದಿ ಅವರನ್ನು ಅಣಕಿಸುತ್ತಾ, ಆ ಪ್ರಶಸ್ತಿ ಅವರಿಗೆ ಸಿಕ್ಕಿದ್ದೇ ತಪ್ಪು ಎಂದೆಲ್ಲ ಹೇಳುತ್ತಾ, "ದುಡ್ಡು ಸಹ ವಾಪಿಸ್ ಕೊಡ್ತಾರಾ?" ಎಂದು ಕೊಂಕು ಮಾತನಾಡುತ್ತಿರುವುದನ್ನು ನೋಡಿ ತುಂಬಾ ನೋವಾಗಿದೆ.
ರಹಮತ್ ಸರ್ ಎಂಥಾ ಮನುಷ್ಯ ಎಂದರೆ ಶುದ್ಧ ಅಧಿಕಪ್ರಸಂಗಿಯಾದ ನಾನು ಇದ್ದ ಕೆಲಸ ಬಿಟ್ಟು ಕಲಿಯಲು ಹೋದಾಗ ತನ್ನ ಕೈಲಾದ ಸಹಾಯ ಮಾಡಿದ್ದರು ನನ್ನ ಅಗತ್ಯವನ್ನು ನಾನು ಹೇಳದೆ ಹೋದಾಗಲೂ. ಇಂಥಾ ವಿಶಾಲ ಹೃದಯ ಇರುವ ವ್ಯಕ್ತಿಯ ಬಗ್ಗೆ ಒಂದಿಷ್ಟು ಮಂದಿ ಅವರು ದುಡ್ಡಿನ ಆಸೆ ಹೊಂದಿದ ವ್ಯಕ್ತಿ ಎಂಬಂತೆ ಚಿತ್ರಿಸುತ್ತಾ ಅತ್ಯಂತ ಕಳಪೆ ಭಾಷೆ ಉಪಯೋಗಿಸಿ ಕೀಳು ಅಭಿರುಚಿಯ ಮಾತು ಆಡುತ್ತಿರುವ ಈ ಸಂದರ್ಭದಲ್ಲಿ ರಹಮತ್ ಸರ್ ಎಂಥಾ ವ್ಯಕ್ತಿ ಎಂದು ನನ್ನದೇ ಬದುಕಿನ ಒಂದೆರಡು ಪುಟದಿಂದ ಹೇಳಬೇಕು ಎಂದೆನಿಸಿತು. ಅಷ್ಟೇ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...