Wednesday, October 21, 2015

ಅಭದ್ರತೆಯಲ್ಲಿ ದಲಿತರು
ವಾರ್ತಾಭಾರತಿ ಸಂಪಾದಕೀಯ

ದಲಿತ ಮಕ್ಕಳ ಸಜೀವ ದಹನ: ಸಿಬಿಐ ತನಿಖೆಗೆ ಶಿಫಾರಸು


ಗುಜರಾತ್‌ನಲ್ಲಿ ಪಟೇಲರು, ರಾಜಸ್ಥಾನದಲ್ಲಿ ಜಾಟರು, ಹಾಗೆಯೇ ಮಗದೊಂದೆಡೆ ಗುಜ್ಜರರು ದಲಿತರ ಮೀಸಲಾತಿಯ ವಿರುದ್ಧ ಒಂದಾಗಿದ್ದಾರೆ. ಮತ್ತು ಇವರಿಗೆ ಹಿಂದಿನಿಂದ ಸಂಘಪರಿವಾರ ಕುಮ್ಮಕ್ಕು ನೀಡುತ್ತಿದೆ. ಹರ್ಯಾಣದಲ್ಲಿ ದಲಿತರನ್ನು ಸುಟ್ಟು ಕೊಂದವರು ಠಾಕೂರರೇ ಆಗಿದ್ದಾರೆ. ಅಂದರೆ ದೇಶಾದ್ಯಂತ ಬಲಿಷ್ಠ ಜಾತಿಗಳು ದಲಿತರ ವಿರುದ್ಧ ಅಸಹನೆಯ ಚಳವಳಿ ಆರಂಭಿಸಿರುವುದು ಕಾಣುತ್ತಿದೆ. ನರೇಂದ್ರ ಮೋದಿ ವೌನವಾಗಿದ್ದಾರೆ. ಗೃಹಸಚಿವರು ಅಸಹಿಷ್ಣುತೆಯ ಹರಿಕತೆ ಹೇಳುತ್ತಿದ್ದಾರೆ. ಇವೆಲ್ಲದರ ವಿರುದ್ಧ ದಲಿತ ನಾಯಕರಿಂದ ತೀವ್ರವಾದ ಪ್ರತಿಭಟನೆ ವ್ಯಕ್ತವಾಗುತ್ತಿಲ್ಲ.
ಇತ್ತೀಚೆಗೆ ಸಿರಿಯಾದ ಪುಟ್ಟಮಗುವೊಂದು ಸಾಗರದ ತಟದಲ್ಲಿ ಹೆಣವಾಗಿ ಮಲಗಿರುವುದನ್ನು ಕಂಡು ಇಡೀ ವಿಶ್ವ ಮರುಗಿತು. ಸಿರಿಯಾದ ನಿರಾಶ್ರಿತ ಕಂದಮ್ಮಗಳ ಕಣ್ಣೀರ ಕತೆ ಜಗಜ್ಜಾಹೀರಾಯಿತು. ಭಾರತದ ಚಿಂತಕರೂ, ಪತ್ರಕರ್ತರೂ ಇವುಗಳ ಬಗ್ಗೆ ಲೇಖನಗಳನ್ನು, ಕವಿತೆಗಳನ್ನು ಬರೆದು ಕಣ್ಣೀರು ಮಿಡಿದರು. ಮೂಲಭೂತವಾದಿಗಳು ಮತ್ತು ಅಮೆರಿಕ ಶಕ್ತಿಗಳ ಬಾಂಬು, ಕೋವಿಗಳ ಕ್ರೌರ್ಯಕ್ಕೆ ಈ ಮಕ್ಕಳು ಬಲಿಯಾಗುತ್ತಿರುವುದನ್ನು ಇಡೀ ವಿಶ್ವ ಖಂಡಿಸಿತು. ಇದೇ ಸಂದರ್ಭದಲ್ಲಿ ಯಾವುದೇ ಶತ್ರುಗಳ ಬಾಂಬುಗಳು, ಕ್ಷಿಪಣಿಗಳು ಇಲ್ಲದೆಯೇ ಹರ್ಯಾಣದಲ್ಲಿ ಎರಡು ಹಸು ಕಂದಮ್ಮಗಳು ಬಲಿಯಾಗಿವೆ. ಅವುಗಳು ಮಾಡಿರುವ ತಪ್ಪಾದರೂ ಏನು? ತೀರಾ ಕೆಳಜಾತಿಯಲ್ಲಿ, ದಲಿತ ಕುಟುಂಬದಲ್ಲಿ ಹುಟ್ಟಿದ್ದೇ ಆ ಮಕ್ಕಳು ಮಾಡಿದ್ದ ತಪ್ಪು. ಮೇಲ್ಜಾತಿಯ ಜನರು ರಾತ್ರೋರಾತ್ರಿ ದಲಿತ ಕುಟುಂಬವಿರುವ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಆ ಮನೆಯೊಳಗೆ ಎರಡು ಎಳೆ ಕಂದಮ್ಮಗಳು ತೊಟ್ಟಿಲಲ್ಲಿ ಮಲಗಿವೆ ಎನ್ನುವುದೂ ಅವರ ಕಣ್ಣುಗಳಿಗೆ ಕಾಣಲಿಲ್ಲ. ಘಟನೆ ನಡೆದ ಬೆನ್ನಿಗೇ ರಾಜಕಾರಣಿಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಹರ್ಯಾಣ ಸರಕಾರ ಕುಟುಂಬಕ್ಕೆ ಪರಿಹಾರ ಘೋಷಿಸಿದೆ. ಹಾಗೆಯೇ ಘಟನೆಯ ಕುರಿತಂತೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ. ಸಿಬಿಐ ಸಂಸ್ಥೆಯು ತನಿಖೆಯ ನೆಪದಲ್ಲಿ ಒಂದೆರಡು ವರ್ಷ ಕಾಲಹರಣ ಮಾಡಿ, ಒಂದಿಬ್ಬರನ್ನು ತಪ್ಪಿತಸ್ಥರೆಂದು ಘೋಷಿಸಿ ಕೈ ತೊಳೆದುಕೊಳ್ಳಬಹುದು. ಆದರೆ ಈ ಹತ್ಯೆಯ ಹಿಂದಿರುವ ಸಾಮಾಜಿಕ ಕಾರಣಗಳನ್ನು ಅರಿತುಕೊಂಡು ಅದಕ್ಕೆ ಔಷಧಿ ಹುಡುಕದೇ ಇದ್ದರೆ ಇಂತಹ ಘಟನೆಗಳು ಪದೇ ಪದೇ ನಡೆಯುವುದರಲ್ಲಿ ಯಾವ ಅನುಮಾನವೂ ಇಲ್ಲ.

 ಕಳೆದ ಗಾಂಧೀಜಯಂತಿಯ ದಿನ ಉತ್ತರ ಪ್ರದೇಶದಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಿದ ಒಂದೇ ಕಾರಣಕ್ಕಾಗಿ ದಲಿತ ವೃದ್ಧನೊಬ್ಬನನ್ನು ಜೀವಂತ ದಹಿಸಿ ಕೊಂದು ಹಾಕಲಾಯಿತು. ಇಲ್ಲಿ ನಡೆದಿರುವುದು ಕೊಲೆ ಮಾತ್ರವಲ್ಲ. ಆ ಕೊಲೆಯ ಕಾರಣವೂ ಮುಖ್ಯವಾಗುತ್ತದೆ. ದಲಿತರು ದೇವಸ್ಥಾನ ಪ್ರವೇಶಿಸುವುದನ್ನು ವಿರೋಧಿಸಿ ಈ ಕೊಲೆಯನ್ನು ಮಾಡಲಾಗಿದೆ. ಅಂದರೆ, ಇದು ಕೊಲೆಯಾದ ದಲಿತನೊಬ್ಬನ ಸಮಸ್ಯೆಯಲ್ಲ. ಆ ವೃದ್ಧನ ಸ್ಥಾನದಲ್ಲಿ ಈ ದೇಶದ ಎಲ್ಲ ದಲಿತರು ಒಂದಲ್ಲ ಒಂದು ದಿನ ನಿಲ್ಲಬೇಕಾಗುತ್ತದೆ. ಆದುದರಿಂದ ನಾವು ಮಾತನಾಡಬೇಕಾದುದು ದಲಿತರ ಕೊಲೆಗಳನ್ನಷ್ಟೇ ಅಲ್ಲ, ಆ ಕೊಲೆಗಳನ್ನು ನಡೆಸುವವರ ಮನಸ್ಥಿತಿಯೂ ಚರ್ಚೆಗೊಳಪಡಬೇಕಾಗಿದೆ. ಉತ್ತರಪ್ರದೇಶದಲ್ಲಿ ದಲಿತನನ್ನು ಕೊಂದ ಮನಸ್ಥಿತಿಯೇ ಹರ್ಯಾಣದಲ್ಲಿ ಹಸುಳೆಗಳನ್ನು ಬೆಂಕಿ ಹಚ್ಚಿ ಕೊಂದಿದೆ. ಇವೆರಡೂ ಘಟನೆಗಳು ಬೇರೆ ಬೇರೆ ಅಲ್ಲ. ಇಬ್ಬರ ದೃಷ್ಟಿಯಲ್ಲೂ ದಲಿತರು ಮನುಷ್ಯರೇ ಅಲ್ಲ ಎಂಬ ಭಾವನೆಗಳಿವೆ. ದಲಿತರ ಕುರಿತಂತೆ ನಿಕೃಷ್ಟವಾದ ಧೋರಣೆಯಿದೆ. ಆ ಧೋರಣೆಯೇ ದಲಿತರನ್ನು ಕೊಲ್ಲುವುದಕ್ಕೆ ಅವರಿಗೆ ಪ್ರೇರಣೆ ನೀಡಿದೆ. ಈ ಧೋರಣೆಯ ವಿರುದ್ಧ ಪೊಲೀಸರಿಗಿಂತ ಸರಕಾರ ಮಾತನಾಡಬೇಕಾಗಿದೆ. ಮುಖ್ಯವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಾಯಿ ತೆರೆಯಬೇಕಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಪ್ರಕರಣವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದಿದ್ದರೆ, ಅದು ಹರ್ಯಾಣದಲ್ಲಿ ಮರುಕಳಿಸುತ್ತಿರಲಿಲ್ಲವೇನೋ?

ದಲಿತರನ್ನು ಬೆಂಕಿ ಹಚ್ಚಿ ಸುಟ್ಟು ಹಾಕುವುದನ್ನು ಒಂದು ಪರಂಪರೆಯಂತೆ ಈ ದೇಶ ಪೋಷಿಸಿಕೊಂಡು ಬಂದಿದೆ. ಕಂಬಾಲಪಳ್ಳಿ, ಖೈರ್ಲಾಂಜಿಯಲ್ಲಿ ದಲಿತರನ್ನು ಸಾಮೂಹಿಕವಾಗಿ ದಹಿಸಲಾಯಿತು. ಇಂದಿಗೂ ಸಂತ್ರಸ್ತರಿಗೆ ನ್ಯಾಯ ದೊರಕಿಲ್ಲ. ದಲಿತರ ಪರವಾಗಿ ಕಾನೂನುಗಳಿದ್ದರೂ, ದೌರ್ಜನ್ಯದ ಸಂದರ್ಭದಲ್ಲಿ ಪೊಲೀಸರು ಈ ಕಾನೂನುಗಳನ್ನು ಬಳಸುತ್ತಲೇ ಇಲ್ಲ. ದಲಿತರಿಗೆ ನ್ಯಾಯ ಕೊಡಿಸುವವರು ಮೇಲ್ವರ್ಗದ ಜನರೇ ಆಗಿರುವುದರಿಂದ ನ್ಯಾಯವೆನ್ನುವುದು ಮರೀಚಿಕೆಯಾಗುತ್ತಿದೆ. ಸದ್ಯದ ಸಂದರ್ಭದಲ್ಲಿ, ಸಂಘಪರಿವಾರಕ್ಕೂ ದಲಿತರು ಅಪಥ್ಯವಾಗುತ್ತಿದ್ದಾರೆ. ಅವರ ಘರ್ ವಾಪಸಿ, ಗೋರಕ್ಷಣೆ, ವೈದಿಕ ವೌಲ್ಯಗಳ ಪುನರ್ ಸ್ಥಾಪನೆಗೆ ದಲಿತರು ಬಹುದೊಡ್ಡ ಸವಾಲಾಗಿದ್ದಾರೆ. ಜೊತೆಗೆ ಮೀಸಲಾತಿ, ದಲಿತರ ವಿರುದ್ಧ ಮೇಲ್ವರ್ಗದ ಜನರಲ್ಲಿ ವ್ಯಾಪಕ ಅಸಹನೆಯನ್ನು ಹುಟ್ಟಿಸಿ ಹಾಕುತ್ತಿದೆ. ಗುಜರಾತ್‌ನಲ್ಲಿ ಈಗಾಗಲೇ ಈ ಅಸಹನೆ ಸ್ಫೋಟಿಸಿದೆ. ಗುಜರಾತ್‌ನಲ್ಲಿ ಪಟೇಲರು, ರಾಜಸ್ಥಾನದಲ್ಲಿ ಜಾಟರು, ಹಾಗೆಯೇ ಮಗದೊಂದೆಡೆ ಗುಜ್ಜರರು ದಲಿತರ ಮೀಸಲಾತಿಯ ವಿರುದ್ಧ ಒಂದಾಗಿದ್ದಾರೆ. ಮತ್ತು ಇವರಿಗೆ ಹಿಂದಿನಿಂದ ಸಂಘಪರಿವಾರ ಕುಮ್ಮಕ್ಕು ನೀಡುತ್ತಿದೆ. ಹರ್ಯಾಣದಲ್ಲಿ ದಲಿತರನ್ನು ಸುಟ್ಟು ಕೊಂದವರು ಠಾಕೂರರೇ ಆಗಿದ್ದಾರೆ. ಅಂದರೆ ದೇಶಾದ್ಯಂತ ಬಲಿಷ್ಠ ಜಾತಿಗಳು ದಲಿತರ ವಿರುದ್ಧ ಅಸಹನೆಯ ಚಳವಳಿ ಆರಂಭಿಸಿರುವುದು ಕಾಣುತ್ತಿದೆ. ನರೇಂದ್ರ ಮೋದಿ ವೌನವಾಗಿದ್ದಾರೆ. ಗೃಹಸಚಿವರು ಅಸಹಿಷ್ಣುತೆಯ ಹರಿಕತೆ ಹೇಳುತ್ತಿದ್ದಾರೆ. ಇವೆಲ್ಲದರ ವಿರುದ್ಧ ದಲಿತ ನಾಯಕರಿಂದ ತೀವ್ರವಾದ ಪ್ರತಿಭಟನೆ ವ್ಯಕ್ತವಾಗುತ್ತಿಲ್ಲ. ಒಂದೆಡೆ ತನ್ನ ಕೃತ್ಯಗಳಿಗೆ ಸಮರ್ಥನೆಯಾಗಿ ವೇದಗಳನ್ನು ಸಂಘಪರಿವಾರ ನೀಡುತ್ತಿದೆ. ಗೋವುಗಳನ್ನು ಹತ್ಯೆ ಮಾಡಿದವರನ್ನು ಕೊಂದು ಹಾಕಬೇಕು ಎಂದು ವೇದಗಳು ಹೇಳಿವೆ ಎಂದು ಸಂಘಪರಿವಾರ ಬಹಿರಂಗವಾಗಿ ಹೇಳುತ್ತಿದೆ. ಇದೇ ಸಂದರ್ಭದಲ್ಲಿ ದಲಿತರ ಕುರಿತಂತೆಯೂ ವೇದಗಳಲ್ಲಿ ಅಷ್ಟೇ ಕ್ರೂರವಾದ ಉಲ್ಲೇಖಗಳಿವೆ. ಬಹುಶಃ ದಲಿತರ ಮೇಲಿನ ಹಲ್ಲೆಗಳನ್ನೂ ಮುಂದೊಂದು ದಿನ, ಸಂಘಪರಿವಾರ ವೇದಗಳನ್ನು ಮುಂದಿಟ್ಟು ಸಮರ್ಥಿಸಿಕೊಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಸಂಘಪರಿವಾರದ ಸಂಚನ್ನು ಎದುರಿಸಲು ಇರುವುದು ಒಂದೇ ದಾರಿ. ಈ ದೇಶದ ಶೋಷಿತ ಸಮುದಾಯಗಳು ಒಂದಾಗುವುದು. ಅಲ್ಪಸಂಖ್ಯಾತ, ಶೋಷಿತ, ಹಿಂದುಳಿದ ಮತ್ತು ದಲಿತ ವರ್ಗಗಳು ಪರಸ್ಪರ ಕೈ ಜೋಡಿಸಿ ಅವರ ಯೋಜನೆಗಳನ್ನು ವಿಫಲಗೊಳಿಸಬೇಕಾಗಿದೆ. ಅಹಿಂದ ವರ್ಗದ ನಾಯಕರು ಸಣ್ಣ ಲಾಭಕ್ಕಾಗಿ ತಮ್ಮ ವರ್ಗವನ್ನು ಬಲಿಕೊಡುವ ಪ್ರವೃತ್ತಿಯನ್ನು ಬಿಟ್ಟು, ದೂರಗಾಮಿ ದೃಷ್ಟಿಯ ಹೋರಾಟಕ್ಕೆ ಚಾಲನೆಯನ್ನು ನೀಡಬೇಕಾದ ಅಗತ್ಯವಿದೆ.
No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...