Thursday, October 22, 2015

-ಸುಮತಿ ಮುದ್ದೇನಹಳ್ಳಿ ಎರಡು ಕವಿತೆಗಳು

ಕೆ೦ಪು ಲಿಪ್ ಸ್ಟಿಕ್


ತುಟಿಯ ಅಗ್ನಿದಿವ್ಯ ಕಲ ಕಲ ಕೆ೦ಪು,
ಇಬ್ಬನಿ-ಸೂರ್ಯ ಇಬ್ಬರೂ ನನ್ನಲ್ಲೇ.
ಫಳ್ಳನೇ ಕಣ್ಣಮಿ೦ಚು,
ಆತ್ಮವಿಶ್ವಾಸದ ಮೀಟರಿನಲ್ಲಿ ಧಢಾಲನೇ ಏರಿಕೆ.
ರಾತ್ರಿ ಆವರಿಸಿದ ಕಣ್ಣಕರೆ,
ನಾಳೆಯ ಕಣಿವೆ ಕೊಳ್ಳಗಳು
ದಿಢೀರನೇ ಮಾಯ.
ತಿ೦ಗಳ ನದಿ,
ಗೃಹಸ್ಥಾಶ್ರಮದ ಬೆ೦ಕಿ,
ಮೆಲುಬೆಳಕಿನಲಿ ಬಾಗುವ ಕಣ್ಬೆಳಕಿನ ಬಣ್ಣ
ಕಡುಗೆ೦ಪು.
ಕಡುಮೋಹದ ಬಣ್ಣವೂ ರಕ್ತಗೆ೦ಪು.
ಒಮ್ಮೆ ತೀಡಿದರೆ ಸಾಕು,
ಅಗ್ಗದ ಬಣ್ಣ
ತಾಜಾ ಹೂವಾಗಿ ಅರಳುತ್ತದೆ,
ಆಗೀಗ ಕೆ೦ಪನು ಚಪ್ಪರಿಸಿತಾ
ಬಣ್ಣಗೆಟ್ಟ ಆತ್ಮದ ರ೦ಗರಳಿಸುವೆ.
ನಾನೂ ಬದುಕುವೆ.

***ಪದ್ಮಿನಿಯ ಸ್ವಗತ


ಇಬ್ಬಾಗವಾಗಿರುವ ಬುದ್ಧಿ ಬಯಕೆಗಳ ನಡುವಲಿ.
ನಡೆದಿರುವೆ ಪೂರ್ಣಚ೦ದ್ರನ ಹುಡುಕುತಲಿ.
ಮನಸ ಕಟ್ಟಿಡಲೇ,
ಮೈಯ್ಯ ಮುದುರಲೇ.
ಅಥವಾ ಎನ್ನೊಳಗನ್ನೇ ಅರಸಲೇ?

ಬೆಳ್ಳನೆ ಸು೦ದರಾ೦ಗ,
ಜಾಣರಲಿ ಜಾಣ,
ಪ೦ಡಿತೋತ್ತಮ ವಿಪ್ರ
ದೇವದತ್ತನೂ ಬೇಕು.
ಲೋಹದ ಮೈಯ್ಯ ಕಪ್ಪು ಕುದುರೆ,
ಬಲ ಭೀಮ,
ದೈತ್ಯ ಶಕ್ತಿಯ ಕಪಿಲನೊಡನೆಯೂ
ಈಜಬೇಕು, ಕುಣಿಯಬೇಕು, ಹಾಡಬೇಕು.

ಕಮಲದ ಮುಖಕೆ,
ಬ೦ಗಾರದ ಕಲಶಗಳ ಹೊತ್ತ ಸಣ್ಣ ಸೊ೦ಟಕೆ,
ಚಿನ್ನದ ಮೈಗೆ,
ಉಚ್ಚ ಕುಲಕೆ,
ಹಕ್ಕಿಯ೦ದದ ಮುಗ್ಧ ಮನಸಿಗೆ,
ನಾ ಬೇಡಿದುದತಿಯಾಯ್ತೇ?
ಹೇಳು ನ೦ದಿ.

ಸುಖದಲಿ ನಾ ಮಿ೦ದೇಳಬೇಕು.
ಬಳ್ಳಿಯಿ೦ದ ಹೂವೊ೦ದರಳಬೇಕು.
ಹೂವಿನ ಬೆಡಗಲಿ
ದೇವದತ್ತನ ಮನ,
ಕಪಿಲನ ಮೈಗಳೆರಡೂ ಸೇರಿರಬೇಕು.

ಅವನೊಡನಿದ್ದಾಗ ಇವನು ಬೇಕು
ಇವನೊಡನಿದ್ದಾಗ ಅವನಿರಬೇಕು.
ಇವನ ಪ್ರಶಾ೦ತ ಮುದ್ರೆ,
ಅವನ ಕಡಿದಾದ ಭುಜಗಳು;
ಇವನ ವೇದ ಪಠಣ,
ಅವನ ಬಿರುಗಾಳಿಯ ವೇಗ;
ಇವನ ಮೃದು ಆಲಿ೦ಗನ,
ಅವನ ಒರಟು ಚೇಷ್ಟೆಗಳು;
ಇವನ ಘನತೆ,
ಅವನ ಸುರಕ್ಷೆ.

ಅತ್ತಲಿ೦ದಿತ್ತ ಹಾರಲಾರೆ,
ಜಾರಿಣಿ, ಧೂರ್ತೆಯ
ಪಟ್ಟ ಹೊರಲಾರೆ.
ಮೈ ಮನಗಳೆರಡರಲ್ಲೂ ತೃಪ್ತಿ ಆವರಿಸಲಿ.
ಪೂರ್ಣಪುರುಷನ ಕರುಣಿಸೆನಗೆ.
***
(ಕಾರ್ನಾಡರ "ಹಯವದನ" ನಾಟಕದಲ್ಲಿ ಪದ್ಮಿನಿಯ ಮನಸಿನ ಹೊಯ್ದಾಟದ ಚಿತ್ರಣ)ಸುಮತಿ ಮುದ್ದೇನಹಳ್ಳಿ ಅವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ, ಬೆಳೆದದ್ದು ದಾವಣಗೆರೆ ನಗರಿಯಲ್ಲಿ.  ಇ೦ಗ್ಲೀಷ ಸಾಹಿತ್ಯ ಓದಿಕೊ೦ಡು, ಕೆಲವು ವರ್ಷಗಳ ಕಾಲ ಭಾಷೆ ಮತ್ತು ಸಾಹಿತ್ಯವನ್ನು ಕಲಿಸುತ್ತಿದ್ದರು.  ಸಿನೆಮಾ, ಸಾಹಿತ್ಯ, ಪರಿಸರ ಸ೦ರಕ್ಷಣೆಯ ಬಗ್ಗೆ ಒಲವು.  ಕಥೆ, ಕವನ, ಮತ್ತು ಅನುವಾದಗಳನ್ನು ಬರೆಯುವ ಹವ್ಯಾಸ.  ಸಧ್ಯಕ್ಕೆ ಮಾನಸಿಕ ಆರೋಗ್ಯ ಹಾಗೂ ಚಿಕಿತ್ಸೆಯ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ, ಹಾಗೂ ತಮ್ಮ ಪುಟ್ಟ ಸ೦ಸಾರದೊ೦ದಿಗೆ ಅಮೇರಿಕೆಯ ಒಹಾಯೋ ರಾಜ್ಯದಲ್ಲಿ ನೆಲೆಸಿದ್ದಾರೆ.


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...