Saturday, October 31, 2015

ಡಾ. ಕಲಬುರ್ಗಿ ನೆನಪಿನಲ್ಲಿ ಡಾ. ದಾಭೋಲ್ಕರ್ ಮರುನೆನಪು
ನಿಖಿಲ್ ಕೋಲ್ಪೆ
ವಾರ್ತಾಭಾರತಿ


ಡಾ. ಕಲಬುರ್ಗಿ ನೆನಪಿನಲ್ಲಿ ಡಾ. ದಾಭೋಲ್ಕರ್ ಮರುನೆನಪು

ಡಾ. ನರೇಂದ್ರ ಅಚ್ಯುತ ದಾಭೋಲ್ಕರ್ 

 

 ಡಾ. ಎಂ.ಎಂ. ಕಲಬುರ್ಗಿ

 
ವಿಚಾರವಾದಿ ಚಿಂತಕ, ಲೇಖಕ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಮತ್ತು ವಿರೋಧಿಗಳ ಬಾಯಿ ಮುಚ್ಚಿಸುವ ಬಲಪಂಥೀಯ ಕರ್ಮಠರ ಕೃತ್ಯಗಳು ಹೊಸದೇನಲ್ಲ. ಇಂಥವುಗಳು ನಡೆಯುತ್ತಲೇ ಬಂದಿವೆ ಮತ್ತು ಇನ್ನೂ ನಡೆಯ ಬಹುದು. ಅದು ಗಾಂಧೀಜಿಯವರ ಕೊಲೆಯಿಂದಲೇ ಆರಂಭವಾಯಿತು ಎನ್ನು ವಂತಿಲ್ಲ; ಕಲಬುರ್ಗಿಯವರ ಕೊಲೆಯಲ್ಲಿಯೇ ಅಂತ್ಯವಾಗುತ್ತದೆ ಎನ್ನುವಂತಿಲ್ಲ. ಕಲಬುರ್ಗಿ ಅವರ ಕೊಲೆಗಡುಕರನ್ನು, ಅದಕ್ಕಿಂತಲೂ ಹೆಚ್ಚಾಗಿ ಈ ವ್ಯವಸ್ಥಿತ ಸಂಚಿನ ಹಿಂದಿರುವವರನ್ನು ಹಿಡಿಯುವಲ್ಲಿ ವ್ಯವಸ್ಥೆ ತೋರಿರುವ ವೈಫಲ್ಯ ಎಲ್ಲರ ಕೋಪಕ್ಕೆ ಕಾರಣವಾಗಿದೆ ಮತ್ತು ರಾಜಕಾರಣಿಗಳು ಒಬ್ಬರನ್ನೊಬ್ಬರು ದೂರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬುರ್ಗಿ ಅವರಂತೆಯೇ ತನ್ನ ವಿಚಾರಗಳಿಗಾಗಿ ಅದೇ ರೀತಿಯಲ್ಲಿ ಕೊಲೆಯಾದ ವಿಚಾರವಾದಿ ಚಿಂತಕ, ಬರಹಗಾರ, ಪತ್ರಕರ್ತ ಡಾ. ನರೇಂದ್ರ ಅಚ್ಯುತ ದಾಭೋಲ್ಕರ್ ಅವರನ್ನು ನೆನಪಿಸುವುದು ಸೂಕ್ತ. ಅವರು ಬದುಕಿದ್ದರೆ, ಇಂದಿಗೆ (ನವೆಂಬರ್ 1) ಅವರಿಗೆ 70 ವರ್ಷಗಳು ತುಂಬುತ್ತಿದ್ದವು. ಆಗಸ್ಟ್ 20, 2013ರಂದು ಬೆಳ್ಳಂಬೆಳಗ್ಗೆ 7:20ರ ಸುಮಾರಿಗೆ ಪುಣೆ ನಗರದ ನಡುರಸ್ತೆಯಲ್ಲಿ ಅವರನ್ನು ಕೊಲ್ಲಲಾಯಿತು. ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ತಲೆ ಮತ್ತು ಎದೆಗೆ ಎರಡು ಗುಂಡು ಹೊಡೆದು ಕೊಂದುಹಾಕಿದರು. ತೀರಾ ಕಲಬುರ್ಗಿಯವರ ಪ್ರಕರಣದಲ್ಲಿ ನಡೆದಂತೆಯೇ. ಹಿಂದೂ ಸಂಸ್ಕೃತಿಯ ರಕ್ಷಕರೆಂದು ಹೇಳುವವರು ಇದನ್ನು ಮಾಡಿದ್ದು, ಪುಣೆಯ ಓಂಕಾರೇಶ್ವರ ದೇವಾಲಯದ ಮುಂದೆ. ದೇವರು ಬಹುಶಃ ಈ ದುಷ್ಕೃತ್ಯವನ್ನು ನೋಡಿ ಕಣ್ಣುಮುಚ್ಚಿ ಕುಳಿತಿರಬೇಕು. ವ್ಯವಸ್ಥೆಯೂ ಹಾಗೆಯೇ ಕಣ್ಣುಮುಚ್ಚಿ ಕುಳಿತಿದೆಯೋ ಏನೋ! ದಾಭೋಲ್ಕರ್ ಅವರ ಕೊಲೆಗೆ ಕಾರಣಗಳೇನೆಂದು ಹೇಳಲು ಪಂಚಾಂಗ ಬೇಕಿಲ್ಲ. ಕಲಬುರ್ಗಿಯವರಂತೆ ಅವರು ಯಾವುದೇ ವೈಯಕ್ತಿಕ ದ್ವೇಷಗಳಿಲ್ಲದೆಯೇ ತಮ್ಮ ವಿಚಾರಗಳಿಂದ ಮೂಲಭೂತವಾದಿಗಳನ್ನು ಸಿಟ್ಟಿಗೆಬ್ಬಿಸಿದ್ದರು.


1945ರ ನವೆಂಬರ್ 1ರಂದು ಅಚ್ಯುತ ಮತ್ತು ತಾರಾಬಾಯಿ ದಾಭೋಲ್ಕರ್ ಅವರ ಹತ್ತು ಮಕ್ಕಳಲ್ಲಿ ಕೊನೆಯವರಾಗಿ ಹುಟ್ಟಿದ್ದ ನರೇಂದ್ರ ದಾಭೋಲ್ಕರ್‌ಅವರಿಗೆ ಉತ್ತಮ ಶಿಕ್ಷಣವೇ ದೊರೆತಿತ್ತು. ಕಾರಣ ಈ ಮಕ್ಕಳಲ್ಲಿ ಮೊದಲನೆಯವರಾದ ದೇವದತ್ತ ದಾಭೋಲ್ಕರ್ ಪ್ರಖ್ಯಾತ ಗಾಂಧೀವಾದಿ ಮತ್ತು ಶಿಕ್ಷಣ ತಜ್ಞರಾಗಿದ್ದರು. ಅವರ ಶಿಕ್ಷಣ ಮಹಾರಾಷ್ಟ್ರದ ಸತಾರದ ನ್ಯೂ ಇಂಗ್ಲಿಷ್ ಸ್ಕೂಲ್, ಸಾಂಗ್ಲಿಯ ವೆಲ್ಲಿಂಗ್ಟನ್ ಕಾಲೇಜ್ ಮತ್ತು ಮೀರಜ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಯಿತು. ಅವರು ಮರಾಠವಾಡ ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ನಾಯಕರೂ ಆಗಿದ್ದರು. ಅಂದರೆ, ದೈಹಿಕವಾಗಿ ಮತ್ತು ಶೈಕ್ಷಣಿಕವಾಗಿ ಅವರು ಸದೃಢರಾಗಿದ್ದರು. ಪತ್ನಿ ಶೈಲ ಮತ್ತು ಇಬ್ಬರು ಮಕ್ಕಳು ಹಮೀದ್ ಮತ್ತು ಮುಕ್ತಾ. ಅವರ ವೈಯಕ್ತಿಕ ಜೀವನದ ಬಗ್ಗೆ ಬರೆಯುವುದು ಈ ಲೇಖನದ ಉದ್ದೇಶವಲ್ಲ. ಅವರು ಅತ್ಯಂತ ಧೈರ್ಯಶಾಲಿಯಾಗಿದ್ದರು ಎಂಬುದು ಅವರು ತನ್ನ ಮಗನಿಗೆ ಮಹಾರಾಷ್ಟ್ರದ ಹೆಸರಾಂತ ಸಮಾಜ ಸುಧಾರಕ ಹಮೀದ್ ದಳವಾಯಿ ಅವರ ನೆನಪಿನಲ್ಲಿ ನಾಮಕರಣ ಮಾಡಿ ಕರ್ಮಠರ ವಿರೋಧ ಕಟ್ಟಿಕೊಂಡಿದ್ದರು ಎಂಬುದರಿಂದ ಗೊತ್ತಾಗುತ್ತದೆ. ಮನೆಯನ್ನು ಕಟ್ಟಿದಾಗ ವಾಸ್ತುಶಾಸ್ತ್ರಕ್ಕೆ ವಿರೋಧವಾಗಿ ಕಟ್ಟಿದ್ದರು; ಅದ್ದೂರಿ ವಿವಾಹಗಳ ವಿರೋಧಿಯಾಗಿದ್ದ ಅವರು ಮಕ್ಕಳ ಮದುವೆಯ ಮುಹೂರ್ತಕ್ಕೆ ಪಂಚಾಂಗ ನೋಡಲಿಲ್ಲ; ಸರಳವಾಗಿ ಮದುವೆ ನಡೆದಿತ್ತು ಎಂಬುದು ಅಂತಹ ದೊಡ್ಡ ವಿಷಯವೇನಲ್ಲ. ಆದರೆ ಅದು ಕರ್ಮಠರ ಕಣ್ಣು ಕೆಂಪಾಗಿಸಿತ್ತು. 12 ವರ್ಷಗಳ ಕಾಲ ವೈದ್ಯಕೀಯ ವೃತ್ತಿ ನಡೆಸಿದ ಈ ಎಂಬಿಬಿಎಸ್ ವೈದ್ಯ, ಸಾಮಾಜಿಕ ಚಳವಳಿಗಳಿಗೆ ಧುಮುಕಿದರು. (ಸ್ವತಃ ವೈದ್ಯನಾಗಿದ್ದು ಕ್ಯೂಬಾದ ಕ್ರಾಂತಿಯಲ್ಲಿ ಪಾಲುಗೊಂಡು ನಂತರ ಎಲ್ಲೆಡೆ ಎಡಪಂಥೀಯ ಹೋರಾಟದ ಕಿಚ್ಚು ಹಚ್ಚಿಸಿ ಕೊನೆಗೆ ಬೊಲಿವಿಯಾದಲ್ಲಿ ಮಡಿದ ಅರ್ಜೆಂಟೀನಾದ ಕ್ರಾಂತಿಕಾರ ಅರ್ನೆಸ್ಟೋ ಚೆ ಗೆವಾರ ಹೇಳಿದ ಮಾತುಗಳು ನೆನಪಿಗೆ ಬರುತ್ತವೆ. ‘‘ಬಡತನದ ಬೇಗೆಯಲ್ಲಿ ಬೆಂದು, ಅನ್ನಾಹಾರಗಳಿಗೂ ಗತಿಯಿಲ್ಲದ, ಔಷಧಿ-ಚಿಕಿತ್ಸೆಗಳನ್ನು ಕೊಳ್ಳಲು ಶಕ್ತಿಯಿಲ್ಲದ ಅನಾರೋಗ್ಯ ಪೀಡಿತ ಜನರ ನಡುವೆ, ಅವರ ಪರಿಸ್ಥಿತಿಯನ್ನು ಸುಧಾರಿಸದ ಹೊರತು ವೈದ್ಯನಾಗಿದ್ದು ಏನು ಪ್ರಯೋಜನ?’’). ಅವರು ಸಮಾಜ ಸುಧಾರಕ ಬಾಬಾ ಅಥವ್ ಅವರ ‘ಒಂದು ಹಳ್ಳಿ-ಒಂದು ಬಾವಿ’ ಆಂದೋಲನದಲ್ಲಿ ಪಾಲುಗೊಂಡರು. 


ವಿಚಾರವಾದಿ ಸನಲ್ ಎಡಮುರುಕು ಅವರ ನಿಕಟವರ್ತಿ ಯಾಗಿದ್ದ ಅವರು, ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿಯ ಸ್ಥಾಪನೆ ಮಾಡಿ ಅದರ ಅಧ್ಯಕ್ಷರೂ ಆಗಿದ್ದರು. ಅವರು ರಾಷ್ಟ್ರೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷರೂ ಆಗಿದ್ದರು. 1990-2010ರ ನಡುವೆ ಅವರು ದಲಿತ ಚಳವಳಿಗಳಲ್ಲಿಯೂ ತೀರಾ ಸಕ್ರಿಯರಾಗಿದ್ದರು. ಜಾತಿ ಹಿಂಸೆ, ಜಾತಿ ಅಸಮಾನತೆಗಳು, ಶೋಷಿತ ವರ್ಗಗಳನ್ನು ಕಾಡುತ್ತಿರುವ ಮೂಢನಂಬಿಕೆಗಳ ಸಮಸ್ಯೆ ಇತ್ಯಾದಿಗಳ ಬಗ್ಗೆ ಅವರು ಕೆಲವು ಪುಸ್ತಕಗಳನ್ನೂ ಬರೆದಿದ್ದಾರೆ ಮತ್ತು 3,000ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ್ದಾರೆ. ಸತಾರದಲ್ಲಿ ‘ಪರಿವರ್ತನಾ’ ಎಂಬ ಸಾಮಾಜಿಕ ಸಂಘಟನೆಯನ್ನೂ ಸ್ಥಾಪಿಸಿದ್ದಾರೆ. ಪತ್ರಕರ್ತರೂ ಆಗಿದ್ದ ಅವರು, ಸಮಾಜ ಸುಧಾರಕ ಸಾಣೆ ಗುರೂಜಿ ಅವರು ಸ್ಥಾಪಿಸಿದ್ದ ಹೆಸರಾಂತ ಮರಾಠಿ ವಾರಪತ್ರಿಕೆಯ ಸಂಪಾದಕರೂ ಆಗಿದ್ದರು.
ತಾಂತ್ರಿಕರು, ಮಂತ್ರವಾದಿಗಳು ಮತ್ತು ಸ್ವಯಂಘೋಷಿತ ದೇವಮಾನವರನ್ನು ಅವರು ಬಯಲಿಗೆಳೆದು ಟೀಕಿಸುತ್ತಿದ್ದರು. ಇದಕ್ಕಾಗಿಯೇ ಅವರಿಗೆ ಧರ್ಮ ವಿರೋಧಿ ಎಂಬ ಹಣೆಪಟ್ಟಿ ಹಚ್ಚಲಾಯಿತು. ಅವರು ನಾಸ್ತಿಕರಾಗಿದ್ದರೂ, ಉಳಿದವರ ನಂಬಿಕೆ ಗಳನ್ನು, ಧರ್ಮಗಳನ್ನು ಪ್ರಶ್ನಿಸುತ್ತಿರಲಿಲ್ಲ. ಮೂಢ ನಂಬಿಕೆಗಳಿಂದ ಜನರ ಶೋಷಣೆಯಾಗುತ್ತಿರುವುದನ್ನು ತಡೆಯಲು ಯತ್ನಿಸುತ್ತಿದ್ದರು. ಉದಾಹರಣೆಯಾಗಿ, ಈ ಸಂದರ್ಭವನ್ನು ಇಲ್ಲಿ ನಮೂದಿಸ ಬಹುದು. ಅವರು ಒಂದು ಮೂಢನಂಬಿಕೆ ವಿರೋಧಿ ಕಾನೂನನ್ನು ತರಬೇಕೆಂದು 1989ರಿಂದಲೇ ಪ್ರಯತ್ನ ಮಾಡುತ್ತಿದ್ದರು. 2010ರಲ್ಲಿ ಅವರು ಜಾದುಟೋನ (ಮಂತ್ರವಾದ) ಬಿಲ್ ಎಂದು ಕರೆಯಲಾಗುವ ಒಂದು ಕರಡು ಮಸೂದೆಯನ್ನು ರಚಿಸಿ ಸರಕಾರಕ್ಕೆ ಒಪ್ಪಿಸಿದ್ದರು. ಅದನ್ನು ಬಿಜೆಪಿ, ಶಿವಸೇನೆಯಂತಹ ರಾಜಕೀಯ ಪಕ್ಷಗಳು ವಿರೋಧಿಸಿದ್ದವು. ಮಹಾರಾಷ್ಟ್ರದಲ್ಲಿ ಪ್ರಭಾವಿಗಳಾಗಿರುವ ವಾರ್ಕರಿ ಪಂಥದವರೂ ಅದನ್ನು ವಿರೋಧಿಸಿದ್ದರು. ಹಿಂದೂ ಧರ್ಮದ ಆಚರಣೆ ಮತ್ತು ಸಂಸ್ಕೃತಿಗಳಿಗೆ ಅದು ವಿರೋಧವಾಗುತ್ತದೆ ಎಂಬುದು ಇಂತವರ ವಾದವಾಗಿತ್ತು. ಆದರೆ, ದಾಭೋಲ್ಕರ್ ಅವರು ಫ್ರೆಂಚ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ: ‘‘ಈ ಕರಡು ಮಸೂದೆ ಯಲ್ಲಿ ದೇವರು ಮತ್ತು ಧರ್ಮದ ಬಗ್ಗೆ ಒಂದು ಶಬ್ದವೂ ಇಲ್ಲ. ಭಾರತೀಯ ಸಂವಿಧಾನವು ಅವುಗಳನ್ನು ನಂಬುವ ಅವಕಾಶ ಮಾಡಿಕೊಟ್ಟಿದೆ. ಅದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ.’’
ಅವರು ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಸಾವಿರಾರು ಹಿಂಬಾಲಕರನ್ನು ಹೊಂದಿರುವ ಅಸಾರಾಂ ಬಾಪು ಅವರನ್ನು ಎದುರು ಹಾಕಿಕೊಂಡಿದ್ದರು. 2013ರ ಮಾರ್ಚ್‌ನಲ್ಲಿ ಆರೆಸ್ಸೆಸ್ ಕೇಂದ್ರ ಸ್ಥಾನವಾದ ನಾಗಪುರದಲ್ಲಿ ಹೋಳಿ ಹಬ್ಬ ಆಚರಣೆಗೆ ಅಲ್ಲಿನ ನಗರಪಾಲಿಕೆಯ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರನ್ನು ಬಳಸಿಕೊಂಡಾಗ ಅವರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಹಲವಾರು ಭಾಗಗಳು, ಮುಖ್ಯವಾಗಿ ವಿದರ್ಭ ಬರದ ಕರಿನೆರಳಿನಲ್ಲಿದ್ದವು. ಮಹಾರಾಷ್ಟ್ರ ಸರಕಾರವೂ ಕೊನೆಗೂ ಮೂಢನಂಬಿಕೆ ಮತ್ತು ಮಾಟ ವಿರೋಧಿ ಅಧ್ಯಾದೇಶವೊಂದನ್ನು ಜಾರಿಗೊಳಿಸಿತು. ಅದು ಯಾವಾಗ ಎಂದರೆ, ದಾಭೋಲ್ಕರ್‌ಅವರ ಕೊಲೆಯಾದ ಒಂದು ದಿನದ ಬಳಿಕ. ಇನ್ನೊಂದು ವಿಶೇಷವೆಂದರೆ, ಸಾಯುವುದಕ್ಕೆ ಕೆಲ ವಾರಗಳ ಹಿಂದೆ ಅವರು ಒಂದು ಸುದ್ದಿಗೋಷ್ಠಿ ಕರೆದು, ‘‘ಮೂಢನಂಬಿಕೆ ವಿರೋಧಿ ಮಸೂದೆಯು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಏಳು ಬಾರಿ ಮಂಡನೆಯಾಗಿದ್ದರೂ, ಅದರ ಬಗ್ಗೆ ಚರ್ಚೆ ನಡೆದಿಲ್ಲ’’ ಎಂದು ದೂರಿದ್ದರು. ಹೀಗಿದ್ದರೂ ಈ ಮಸೂದೆ ಕಾನೂನಾಗಲು ಕೇಂದ್ರದ ಅಂಗೀಕಾರ ಬೇಕು. ಧರ್ಮದ ಹೆಸರಿನಲ್ಲಿ ಎಡೆಬಿಡಂಗಿ, ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಸಂಸದರಿರುವ ಮೋದಿ ಅವಧಿಯಲ್ಲಿ ಅದಾಗುವುದು ಬೆಕ್ಕಿಗೆ ಕೊಂಬು ಬಂದಂತೆ.


ದಾಭೋಲ್ಕರ್ ಅವರಿಗೆ 1983ರಿಂದಲೂ ಹಲ್ಲೆ ಮತ್ತು ಕೊಲೆ ಬೆದರಿಕೆಗಳು ಹೊಸದಲ್ಲ. ಅವರು ಪೊಲೀಸ್ ರಕ್ಷಣೆಯನ್ನು ನಿರಾಕರಿಸಿದ್ದರು. ‘‘ನನ್ನದೇ ದೇಶದಲ್ಲಿ, ನನ್ನದೇ ಜನರಿಂದ ನಾನು ಪೊಲೀಸ್ ರಕ್ಷಣೆ ಪಡೆಯಬೇಕು ಎಂದಾದರೆ, ನನ್ನಲ್ಲೇ ಏನೋ ತಪ್ಪಿರಬೇಕು. ನಾನು ಭಾರತೀಯ ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದೇನೆ. ಅದು ಯಾರ ವಿರುದ್ಧವೂ ಅಲ್ಲ; ಎಲ್ಲರಿಗಾಗಿ ಇದೆ’’ ಎಂದು ಅವರು ಹೇಳಿದ್ದರು.


ಅವರು ತನ್ನ ದೇಹದಾನ ಮಾಡಿದ್ದರು. ಆದರೆ, ಮರಣೋತ್ತರ ಪರೀಕ್ಷೆಯ ಬಳಿಕ ಅವರ ಜರ್ಝರಿತ ದೇಹವು ವೈದ್ಯಕೀಯ ಅಧ್ಯಯನಕ್ಕೆ ಸೂಕ್ತವಲ್ಲ ಎಂದು ತಿರಸ್ಕರಿಸಲಾಯಿತು. ಅವರ ಅಂತ್ಯಕ್ರಿಯೆ ಯಾವುದೇ ಧಾರ್ಮಿಕ ಕ್ರಿಯೆಗಳಿಲ್ಲದೆ, ಸತಾರದ ಸ್ಮಶಾನದಲ್ಲಿ ನಡೆಯಿತು. ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ಮಗಳು ಮುಕ್ತಾ ಅವರು ಚಿತೆಗೆ ಬೆಂಕಿ ಹಚ್ಚಿದರು. ಬೂದಿಯನ್ನು ಅವರ ಸಾವಯವ ಕೃಷಿ ಭೂಮಿಯಲ್ಲಿ ಚೆಲ್ಲಲಾಯಿತು. (ನನ್ನ ದೇಹದ ಬೂದಿ ಗಾಳಿಯಲಿ ತೇಲಿಬಿಡಿ, ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ... ಎಂಬ ದಿನಕರ ದೇಸಾಯಿಯವರ ಸಾಲುಗಳು ನೆನಪಾಗುತ್ತವೆ.)


ಈ ಕೊಲೆ ವ್ಯವಸ್ಥಿತವಾಗಿತ್ತು ಎಂಬುದನ್ನು ಪೊಲೀಸರೇ ಒಪ್ಪಿಕೊಂಡಿದ್ದಾರೆ. ದಾಭೋಲ್ಕರ್ ಸೋಮವಾರ ಮತ್ತು ಮಂಗಳವಾರ ಮಾತ್ರ ಪುಣೆಯಲ್ಲಿರುತ್ತಾರೆಂಬ ವಿಷಯ ಹಂತಕರಿಗೆ ಮತ್ತು ಅವರ ಸೂತ್ರದಾರರಿಗೆ ಗೊತ್ತಿತ್ತು. ಮುಖ್ಯಮಂತ್ರಿಯಾಗಿದ್ದ ಪ್ರಥ್ವಿರಾಜ್ ಚೌಹಾಣ್ ಅವರು ಆರೋಪಿಗಳ ಸುಳಿವಿಗೆ ಹತ್ತು ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು. ಏಳು ಸಿ.ಸಿ. ಕ್ಯಾಮರಾಗಳಲ್ಲಿ ಹಂತಕರ ಚಿತ್ರಣ ದಾಖಲಾಗಿದೆ. ಅದನ್ನು ವಿಶ್ಲೇಷಣೆಗಾಗಿ ಲಂಡನ್‌ನ ಪ್ರಯೋಗಶಾಲೆಯೊಂದಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದರು. ಪೊಲೀಸರು ಒತ್ತಡದ ಪರಿ ಣಾಮವಾಗಿ ಇಬ್ಬರನ್ನು ಬಂಧಿಸಿದರು ಕೂಡಾ.


ಕೇತನ್ ತಿರೋಡ್ಕರ್ ಎಂಬ ಸಾಮಾಜಿಕ ಕಾರ್ಯಕರ್ತ ಮುಂಬೈ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದರು. ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ)ದಿಂದ ತನಿಖೆಯಾಗಬೇಕೆಂದು ಅವರು ಕೋರಿದ್ದರು. ಎನ್‌ಐಎ, ‘‘ಇದು ಭಾರತೀಯ ದಂಡ ಸಂಹಿತೆಯ ವ್ಯಾಪ್ತಿಗೆ ಸೇರಿದ ಅಪರಾಧ’’ ಎಂದು ಕೈ ತೊಳೆದುಕೊಂಡಿತು. ಕೇತನ್ ತಿರೋಡ್ಕರ್ ಅವರು ಮರಳಿ ಪರಿಷ್ಕೃತ ಅರ್ಜಿ ಸಲ್ಲಿಸಿದ ಬಳಿಕ 2014ರ ಮೇ 9ರಂದು ಮುಂಬಯಿ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತು. ಏನೇ ಆಗಿರಲಿ, ಡಾ. ಕಲಬುರ್ಗಿ ಹತ್ಯೆಯನ್ನೂ ಹಿಂದಿಟ್ಟುಕೊಂಡು ಈ ಪೊಲೀಸ್ ತನಿಖೆ ಏನು, ಸಿಬಿಐ ತನಿಖೆ ಏನು, ಅಥವಾ ಇತ್ತೀಚಿನ ಎನ್‌ಐಎ ತನಿಖೆ ಏನು, ವ್ಯತ್ಯಾಸವೇನು? ಸೂತ್ರದಾರರು ಯಾರು ಎಂಬುದನ್ನು ನಾವು ಯೋಚಿಸಿನೋಡಬೇಕು.


ಅವೆಲ್ಲ ಇರಲಿ, ಕಲಬುರ್ಗಿಯವರ ಪ್ರಕರಣದಲ್ಲಿ ಸಾಹಿತಿಗಳನೇಕರು ಪ್ರಶಸ್ತಿ ಮರಳಿಸಿದ್ದಾರೆ. ದಾಭೋಲ್ಕರ್‌ಅವರಿಗೂ 2014ರಲ್ಲಿ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ದೊರೆತಿತ್ತು. ಕಲಬುರ್ಗಿಯವರಿಗೂ ಇನ್ನಷ್ಟು ಪ್ರಶಸ್ತಿಗಳು ಸಿಗಬಹುದು. ಆದರೆ, ನೊಬೆಲ್ ಪ್ರಶಸ್ತಿಯೇ ಸೂಕ್ಷ್ಮ ರಾಜಕೀಯದ ಚದುರಂಗದ ಕಣವಾಗಿರುವ ಹೊತ್ತಿನಲ್ಲಿ ನಮ್ಮ ಸಾಹಿತಿಗಳು, ಚಿಂತಕರ ಜೀವಗಳು, ಸತ್ಯ ಮತ್ತು ಪ್ರಶಸ್ತಿಗಳನ್ನು ತುಲನೆ ಮಾಡಬೇಕಾಗಿದೆ. ಜೀವನವಿಲ್ಲದೆ ಸಾಹಿತ್ಯವಿದೆಯೆ? ಹೋರಾಟವಿಲ್ಲದೆ ಜೀವನವಿದೆಯೆ? ದಾಭೋಲ್ಕರ್, ಕಲಬುರ್ಗಿ, ಪನ್ಸಾರೆಯಂತಹವರನ್ನು ಹುಡುಕಿಕೊಂಡು ಬಂದವರು ನಮ್ಮ ನಿಮ್ಮನ್ನೂ ಹುಡುಕಿಕೊಂಡು ಬರಬಹುದು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...