Thursday, October 22, 2015

ಕಾಜೂರು ಸತೀಶ್ ಎರಡು ಕವಿತೆಗಳು




ರೊಟ್ಟಿ



-೧-
ರೊಟ್ಟಿ ತಟ್ಟುವ ಅವ್ವನಿಗೆ
ಹೆಬ್ಬೆಟ್ಟಿನ ಸಹಿ ಬಲು ಸುಲಭ

ಅವ್ವ ರೊಟ್ಟಿ ತಟ್ಟಿ
ಜ್ಯಾಮಿತಿಯ ವೃತ್ತಕ್ಕೆ ದ್ರೋಹ ಬಗೆಯುವುದಿಲ್ಲ

ನನ್ನ ಹೊಟ್ಟೆಗಿಳಿದ ರೊಟ್ಟಿ
ಅವಳ ಹೆಬ್ಬೆಟ್ಟು ಸಹಿಗಳ ಜೀರ್ಣಿಸಿ
ಕವಿತೆಗಳ ಜನನ

-೨-
ನಾ ತಟ್ಟುವ ರೊಟ್ಟಿ
ಭೂಪಟಗಳ ನೆನಪಿಸುವುದು
ನನ್ನ ನಾಯಿಗೆ ಕಿತ್ತು ಕೊಡುವಾಗಲೂ
ಗಡಿ ಉಲ್ಲಂಘನೆಯಾಗುವುದಿಲ್ಲ
ಯುದ್ಧ ಸಂಭವಿಸುವುದಿಲ್ಲ

-೩-
ಅವ್ವಂದಿರ ತಪ್ಪಾಗಿ ಅರ್ಥೈಸಿದ ಸೂರ್ಯ
ರೊಟ್ಟಿ ಸುಡುತ್ತಿದೆ ನೆಲದ ಕಾವಲಿಯಲ್ಲಿ
ನೇಗಿಲ ಸೌದೆ ಎಷ್ಟು ಚೆನ್ನಾಗಿ ಉರಿಯುತ್ತದೆ

ಅದು ತಿಂದುಳಿದು
ಇಟ್ಟ
ರೊಟ್ಟಿ
ಮರಗಟ್ಟಿ
ಮರುಭೂಮಿಗಳಾಗಿವೆ

ಕುಣಿಕೆಗಳ ಎಸೆದರೆ ಸೂರ್ಯ ಮುಟ್ಟಿಯೂ ನೋಡುತ್ತಿಲ್ಲ
ಸುಲಭಕ್ಕೆ ಸಿಗುವ ಗೆಲ್ಲುಗಳೂ ಸೌದೆಗಳಾಗುತ್ತಿಲ್ಲ

-೪-
ನರಿ ಹೊಂಚು ಹಾಕುತಿದೆ
ಕಾಗೆ ಇನ್ನೇನು ಹಾಡಲಿದೆ.
***




ಕಿರುಗವಿತೆಗಳು


-೧-
ಮರ ಹತ್ತುವಾಗ ಒಂದು ಹಾವು ಸಿಕ್ಕಿತು
ಹಿಡಿದು ಎಸೆದುಬಿಟ್ಟೆ ಜೀವಭಯದಿಂದ

ಹಾವು ಸತ್ತಿತು
ಹಡೆದ ಅಷ್ಟೂ ನನ್ನ ಕವಿತೆಗಳೂ.

-೨-
ಇವತ್ತು ಅಮವಾಸ್ಯೆ
ಟಾರ್ಚಿಲ್ಲದೆ ನಡೆದುಬಂದೆ

ಕತ್ತಲು ಕೂಡ ಮುಖಕ್ಕೆ ಮಸಿಬಳಿಯಲಿಲ್ಲ.

-೩-
ಬೆಳಕ ಝರಿ ಹರಿದು
ಕಡಲ ಸೇರಿದೆ

ಮರುಭೂಮಿಗಳು ಹೆಚ್ಚುತ್ತಲೇ ಇವೆ.

-೪-
ತಲೆಯಾಡಿಸುವ ನಾಯಿಯ ಕಿವಿಗಳ ಸದ್ದು
ಗಡಿಯಾರದ ಮುಳ್ಳು ಮೈಮುರಿವ ಸದ್ದು
ನಿನ್ನ ಹೃದಯದ ಹೂವರಳುವ ಸದ್ದು
ಕೇಳುತ್ತಿಲ್ಲವೆಂದರೆ

ದಯವಿಟ್ಟು
ಕವಿತೆ ಹಡೆಯುವುದ ನಿಲ್ಲಿಸಿಬಿಡು.
***


ಕಾಜೂರು ಸತೀಶ್ ಕವಿ ಮತ್ತು ಚಿತ್ರಕಲಾವಿದರಾದ ಸತೀಶ್ ಕೊಡಗು ಜಿಲ್ಲೆಯವರು. ಕೇರಳ ಗಡಿ ಪ್ರದೇಶವಾದ ಕರಿಕೆ ಗ್ರಾಮದಲ್ಲಿ ಶಿಕ್ಷಕರಾಗಿದ್ದಾರೆ  ’ಗಾಯದ ಹೂವುಗಳು’ ಅವರ ಪ್ರಕಟಿತ ಕವನ ಸಂಕಲನ. ಈ ಸಂಕಲನಕ್ಕೆ ಕಡೆಂಗೋಡ್ಲು ಪ್ರಶಸ್ತಿ ದೊರೆತಿದೆ.

sathishkajooru@gmail.com

9483825215

3 comments:

  1. ಹೃದಯಸ್ಪರ್ಶಿ.....

    ReplyDelete
  2. ಬಹಳ. ಅರ್ಥ ವತ್ತಾದ ಕವಿತೆಗಳು
    ಸಂಗೀತ ರವಿರಾಜ್

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...