Wednesday, October 21, 2015

ಶುಭಲಕ್ಷ್ಮಿ ಕಡೆಕಾರ್ - ಎರಡು ಕವಿತೆ


ಬೇಸರವಾಗುವುದು

ಬೇಸರವಾಗುವುದು
ವೃತ್ತಿ ಧರ್ಮವ ಮರೆತು
ಕಪಟಿಗಳೆದುರು ಕೈಚಾಚುವವರ ಕಂಡಾಗ
ಹೆಸರು, ಹಣ, ಪ್ರಚಾರಕ್ಕಾಗಿ
ದುರುಳರ ಹಿಂದೆ ಅಲೆಯುವವರ ಕಂಡಾಗ
ರಾಜಕೀಯದ ಮೋಸದಾಟಕೆ
ಮುಗ್ಧ ಮನಸುಗಳ ಬಲಿಯಾಗಿಸುವಾಗ
ಹೃದಯ ವೈಶಾಲ್ಯತೆ ಮರೆತು
ಮೊಂಡುತನ ತೋರುವವರ ಕಂಡಾಗ
ಬೇಸರವಾಗುವುದು
ಸತ್ಯ ಎದುರಿದ್ದರೂ
ಕುರುಡರಂತೆ ವರ್ತಿಸುವವರ ಕಂಡಾಗ
ಪ್ರಚೋದಿಸಿ, ಪ್ರಚೋದನೆಗೊಳಪಟ್ಟು
ಸಮರ್ಥಿಸುವವರ ಕಂಡಾಗ
ಸಂಶಯದ ಕೊಳಕ ಶಿರದಲಿ ಹೊತ್ತು
ನಟಿಸುವವರ ಕಂಡಾಗ
ಬೇಧ - ಭಾವದ ಉಧ್ವೇಗದ ಘೋ‍ಷಣೆ ಕೂಗುವವರ ಕಂಡಾಗ
ಬೇಸರವಾಗುವುದು
***ಚಕ್ರವ್ಯೂಹ

ಧರ್ಮವೆಂಬ ಸಂಕೋಲೆಯಿಂದ
ದೂರ ನಡೆಯಬೇಕಾಗಿದೆ
ಜಾತಿ - ಧರ್ಮದ ವಾದವ ಹೊತ್ತು
ಸಾಗುವುದರಿಂದೇನು ಲಾಭವಿದೆ
ಭವಿಷ್ಯವ ನೆಮ್ಮದಿಯಿಂದ ಕಳೆಯಬೇಕಾದರೆ
ವರ್ತಮಾನವ ಸಹನೆಯಿಂದ ಹೆಣೆಯಬೇಕಾಗಿದೆ
ಸಂಸ್ಕೃತಿ ಎನ್ನುವವರ ಬಾಯಲ್ಲಿ
ಆಕ್ರೋಷಭರಿತ ಪದ ಸರಿಯೇ
ಮತ್ತೊಮ್ಮೆ ಒತ್ತಿ ಹೇಳುತ್ತೇನೆ
ನನಗೆ ನನ್ನ ಧರ್ಮದಿಂದ ದೂರ ಸಾಗಬೇಕಾಗಿದೆ
ಅಂಧಶೃದ್ಧೆಗಳೆಂಬ
ಕಟ್ಟುಪಾಡುಗಳ ಮೀರಿ ನಿಲ್ಲಬೇಕಾಗಿದೆ
ಸೌಹಾರ್ಧತೆಯ ಜ್ಯೋತಿ ಬೆಳಗಬೇಕಾಗಿದೆ
ಆದರೂ ಮತ್ತೆ ಮತ್ತೆ ಅದರಲ್ಲೇ
ಹೊರಳಾಡುತ್ತಿದ್ದೇನೆ
ಗೊತ್ತಿದೆ ನಾ ಸತ್ತರೂ ನನ್ನಿಂದ
ಜಾತಿ - ಧರ್ಮದ ಪೊರೆ ಕಳಚದೆಂದು
ಚಕ್ರವ್ಯೂಹವಿದು ಇದರಲ್ಲೇ ಗಿರಕಿ ಹೊಡೆಯುತ್ತಿದ್ದೇನೆ.
***ಶುಭಲಕ್ಷ್ಮಿ ಕಡೆಕಾರ್ ಹುಟ್ಟೂರು ಉಡುಪಿ ಜಿಲ್ಲೆ ಉಡುಪಿ ತಾಲೂಕಿನ ಕಡೆಕಾರು ಗ್ರಾಮ. ಬಾಲ್ಯ ಕಳೆದದ್ದು ಹಾರಾಡಿ ಗ್ರಾಮದ ಹೊನ್ನಾಳದಲ್ಲಿ. ನ್ಯೂಸ್ ಕನ್ನಡ ಡಾಟ್ ಇನ್ ಅಂತರ್ಜಾಲ ಪತ್ರಿಕೆಯಲ್ಲಿ ಸುದ್ದಿಪ್ರತಿ ಸಂಪಾದಕಿಯಾಗಿದ್ದಾರೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...