Friday, October 23, 2015

ಸುಧಾ ಚಿದಾನಂದ ಗೌಡ ಮೂರು ಕವಿತೆಗಳು

ಅವನ ಪ್ರೀತಿಯ ದಯೆ


ಪ್ರೀತಿ ತಂಪಿನಂತೆ, ಹಿಮದಂತೆ, ಹೂವಂತೆ
ಅಂದುಕೊಂಡಿದ್ದೇ ಬಂತು, ನಿಜದಲ್ಲಿ
ನೇರ ಬೆಂಕಿಗೆ ತಳ್ಳಿತು, ಉರಿವ ಸುಖವ ನೀಡಿ
ಜ್ವಾಲೆಗಳಲಿ ಮತ್ತೆ ಮತ್ತೆ ಆಹ್ವಾನಿಸಿತು.

ಸಾವನ್ನೂ ಬದುಕನ್ನೂ ನರಕನಾಕವನ್ನೂ ಬಿಸಿಯುಸಿರು ಬೆವರನ್ನೂ
ಹಂಚಿಕೊಳ್ಳುವ ಹಂಬಲಿಕೆಯಲೊಂದು ಬಯಕೆ  ಕತ್ತಲಿನಷ್ಟು
ಹೂಮಂಚದ ಹೊಂಬೆಳಕ ನಡುವಿನ ಕಳೆದುಕೊಳ್ಳುವ ಭಯ
ಎಷ್ಟೆಂದರೆ ಪಡೆದುಕೊಳುವುದನೆ ಮುಂದೂಡಿಬಿಡುವಷ್ಟು

ನಡುಗುವ ಆತ್ಮವೆ, ನಿತ್ತರಿಸು, ಧೈರ್ಯ ತಂದುಕೋ
ಶರಣಾಗತಿಯೇ ನಿಯತಿಯೆಂದಪ್ಪಿಕೋ
ಯಾವುದೋ ಬಾಡಿದ ಹೂವಿನ ದಳ, ಅಪರಚಿತ ಕೇಶದ ಛಾಯೆ
ಇದೆಯಲ್ಲ ಒರೆಸಿಹಾಕಲು ನವಿಲಗರಿಯ ಮಾಯೆ

ಕಳೆದುಕೊಂಡಷ್ಟೂ ಆನಂದ, ಸುಟ್ಟುಕೊಂಡಷ್ಟೂ ಆಹ್ಲಾದ
ಅದಕ್ಕಿಂತ ಅದ್ಭುತ ಯಾವಂಬಲ್ಲ..!
ಹಿಮವೂ, ಬೆಂಕಿಯೂ ಆಗತಾನೆಂಬ ನಿರೀಕ್ಷೆಯಲಿ ಜೀವವೆ,
ಅವನ ಪ್ರೀತಿಯ ದಯೆ ಮೊಲೆವಾಲೆ ಆಯಿತಲ್ಲ..!
*** 

ಏನೆಂದು ಪ್ರಾರ್ಥಿಸಲಿ..?


ಅವಳೊಳಗಿನಿಂದ ಸೊಬಗ ಹೊರ ತೆಗೆದಿರಿಸಿದರು
ಸರ್ವಾಂಗ ಸುಂದರಿ ಅಮ್ಮನ ಮಾಡಿದರು
ಅವಳ ಎದೆಯ ಒಳಗಿನಿಂದ ಧೈರ್ಯವ ಹೊರಗೆ ಎಳೆದರು
ದುರ್ಗಿಯ ರುಂಡಮಾಲೆಗೆ ಹೂವಿರಿಸಿ ಕೈ ನಡುಗಿಸಿದರು

ಅವಳ ಕರುಳಿಗೆ ಕೈಯಿರಿಸಿ ಹಿಡಿದೆಳೆದರು ತಾಯ್ತನವ
ಅನ್ನಪೂರ್ಣೆ ಮೈದಳೆದು ಹಸಿವಿನ ಭಯಕೆ ಅನ್ನವಾದಳು
ಆವಳ ಆಸೆಗಳ ಹೊರಗಿಟ್ಟು ಪರಿಮಳಕೆ ಕೈಕೋಳ
ಅತೃಪ್ತೆ ಪಾಪಿಗಳ ತೊಗಲಿನ ಸಿಡುಬಾಗಿ ಕಂಗೊಳಿಸಿದಳು

ಅವಳ ಪೌರುಷಕೆ ಉಡಿತುಂಬಿದಂದು ಅಸಹಾಯಕ ಶರಣಾಗತಿ
ಅವನ ನೆನಪಿನಲಿ ಬಾಗಿನವಾದರೆ ಬೆನ್ನಲ್ಲಿ ಚೂರಿ
ಅವಳ ಮಡಿಲು ಅಕ್ಷಯವೆಂದು ಸಂಭ್ರಮಿಸುವ ಜಾಗೆಯಲ್ಲಿ
ಅಸೂಯೆಯ ಮೊಟ್ಟೆಯೊಡೆದು ವಿಕಲಾಂಗ ಛಿದ್ರಶಿಶುಜನನ

ಇನ್ನು ಪೂಜೆಯ ಸರತಿಯೂ ಅವಳದೇ
ಹೃದಯದುಂಬಿದ ರೋದನ- ಏನ ಪೂಜಿಸಲಿ
ಚಾಮುಂಡಿಯಲಿ ದುರ್ಗೆ ಮಾರಿ ಹೆಮ್ಮಾರಿಯಲಿ
ಏನೆಂದ ಕೇಳಿಕೊಳಲಿ- ನಿಮ್ಮ ಶಕ್ತಿಯ ಕೊಡಿರೆಂದೇ..?
ನನ್ನದನ್ನು ನನಗೆ ಕೊಡಿರೆಂದೇ..??


ಈ ಪ್ರೀತಿಯೆಷ್ಟು ನಿಕೃಷ್ಟ....!ಸೆಟೆದು ನಿಲಬೇಕೆನಿಸಿದಾಗ
ಗುಲಾಮಳಾಗಿಸಿತು
ರೋಷವುಕ್ಕುವಾಗ ಕಣ್ಣೀರಾಯಿತು
ಜನುಮ ಮೊಳೆಯುವಾಗ ನೆತ್ತರು ಕಾರಿತು
ಸಸಿಯಾಗುವಾಗ ಕೊಡಲಿಯ ಕಾವಾಯಿತು
ಹಸಿರು ಟಿಸಿಲೊಡೆಯುವಾಗ
ಬಡಬಾನಲವೇ ಆಗಿಬಿಟ್ಟಿತು
ಮುಗಿಲು ಮುಟ್ಟಬೇಕೆನುವಾಗ
ಬುಡ ಕಡಿದು ದಾರುಣವಾಯ್ತು

ಸನಾತನವೇ,
ನಿನ್ನ ನಿಕೃಷ್ಟ ಕಣ್ಣಿಗೆ
ಈ ಪ್ರೀತಿಯೆಷ್ಟು ನಿಕೃಷ್ಟ.... !

ಆಸರೆಯಾಗುವಾಗ ಉಸಿರು ತಿರುಗಿತು
ಧಾರೆಯೆರೆಯುವಾಗ ಅಸೂಯೆ ಮೊರೆಯಿತು
ಅಪರೂಪಕೆ ದೊರೆಯುವ
ಅನುರಾಗದ ಹರಿವು ಕೆಂಪುರಗುತವಾಯ್ತು
ಚಂದದ ಸಂಸಾರವಾಗುವಾಗ
ಮರ್ಯಾದೆಯ ಮುಸುಕು ಹೊದೆಯಿತು
ಆತ್ಮಗಳ ಹತ್ಯೆಯಾಯಿತು

ಸನಾತನವೇ,
ನಿನ್ನ ನಿಕೃಷ್ಟ ತೀರ್ಪಿಗೆ
ಈ ಪ್ರೀತಿಯೇ ನಿಕೃಷ್ಟವಾಯಿತೇ....?!
ಸುಧಾ ಚಿದಾನಂದ ಗೌಡ (೧೯೭೦) ಓದು ಬರಹಗಳೆಡೆಗೆ ತೀವ್ರ ತುಡಿತ ಇರುವ ಕವಿ. ಶೇಕ್ಸ್‌ಪಿಯರ್ ಕುರಿತು ಎಂಫಿಲ್ ಮಾಡಿರುವ ಸುಧಾ ಮೂರು ಕಥಾ ಸಂಕಲನಗಳು, ಒಂದು ಕವನ ಸಂಕಲನ, ಒಂದು ಪ್ರಬಂಧ ಸಂಕಲನ ಹಾಗೂ ಒಂದು ಸಂಶೋಧನಾ ಕೃತಿಯನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿದ್ದಾರೆ. ಸೇಡಂನ ಅಮ್ಮ ಪ್ರಶಸ್ತಿ, ಕವನಸಂಕಲನಕ್ಕೆ ಕರ್ನಾಟಕ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ ಮೊದಲಾದ ಮನ್ನಣೆಗಳನ್ನು ಗಳಿಸಿದ್ದಾರೆ.

ವಿಳಾಸ: ಉಪನ್ಯಾಸಕರು, ಇಂಗ್ಲಿಷ್ ವಿಭಾಗ, ಸರ್ಕಾರಿ ಪಪೂ ಕಾಲೇಜು, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ.

nrsudhachi@gmail.com

9481566894
No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...