Friday, October 30, 2015

ಕೇರಳದಲ್ಲಿ ಬೀಫ್ ಸರ್ವ ವ್ಯಾಪಿ- ಬಿನೂ ಕೆ. ಜಾನ್

ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಜಂತರ್-ಮಂತರ್ ರಸ್ತೆಯು ಮಾಧ್ಯಮಗಳ ಗಮನ ಸೆಳೆಯುವ ಸ್ಥಳವಾಗಿರುತ್ತದೆ. ಪ್ರತಿಭಟನೆ ಮಾಡಬಯಸುವ ದೇಶಾದ್ಯಂತದ ಜನರು ಈ ಜನಪ್ರಿಯ ಪ್ರತಿಭಟನಾ ಸ್ಥಳದಲ್ಲಿ ಸೇರಿ ಸರಕಾರದ ಗಮನ ಸೆಳೆಯುತ್ತಾರೆ. ಆದರೆ, ಸಂಸತ್ತಿನ ಅಧಿವೇಶನ ನಡೆಯದ ದಿನಗಳಲ್ಲೂ ದಿಲ್ಲಿಯ ಹೆಚ್ಚಿನ ಪತ್ರಕರ್ತರನ್ನು ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತಿನಲ್ಲಿ ಈ ಸ್ಥಳದಲ್ಲಿ ಕಾಣಬಹುದು. ಜಂತರ್ ಮಂತರ್ ರಸ್ತೆಯ ಮಧ್ಯ ಬಿಂದುವಿನಲ್ಲಿ ಕೇರಳ ಭವನವಿದೆ.

ಪತ್ರಕರ್ತರು ಮತ್ತು ದಕ್ಷಿಣ ಭಾರತೀಯರು ನೇರವಾಗಿ ಭವನದ ಹಿಂಭಾಗದಲ್ಲಿರುವ ಸಿಬ್ಬಂದಿ ಕ್ಯಾಂಟೀನ್‌ಗೆ ಹೋಗುತ್ತಾರೆ. ಅಲ್ಲಿ ಅತ್ಯಂತ ಮಿತ ದರದಲ್ಲಿ ಬೀಫ್ ಮತ್ತು ಮೀನಿನ ಖಾದ್ಯಗಳನ್ನು ಪೂರೈಸಲಾಗುತ್ತದೆ. (ವಿಐಪಿಗಳು ಮತ್ತು ಕೇರಳ ಭವನದ ನಿವಾಸಿಗಳಿಗಾಗಿ ಮೀಸಲಾಗಿರುವ ಪ್ರಧಾನ ಕ್ಯಾಂಟೀನ್‌ನಲ್ಲಿ ಸಾಮಾನ್ಯವಾಗಿ ಬೀಫ್ ಪೂರೈಸಲಾಗುವುದಿಲ್ಲ). ಅಲ್ಲಿ ಗಡದ್ದಾಗಿ ಬೀಫ್ ಊಟ ಮಾಡಿದ ಬಳಿಕ ಪತ್ರಕರ್ತರು ಐಎನ್‌ಎಸ್ ಕಟ್ಟಡದಲ್ಲಿರುವ ತಮ್ಮ ಕಚೇರಿಗಳಿಗೆ ಹಿಂದಿರುಗುತ್ತಾರೆ ಹಾಗೂ ಅಲ್ಲಿ ಸಣ್ಣ ನಿದ್ದೆ ಮಾಡುತ್ತಾರೆ.


ಇದೇ ಕೇರಳ ಭವನದ ಖಾದ್ಯಗಳ ಪಟ್ಟಿಯಲ್ಲಿ ದನದ ಮಾಂಸವಿದೆ ಎಂಬ ದೂರಿನ ಆಧಾರದಲ್ಲಿ ಸೋಮವಾರ ದಿಲ್ಲಿ ಪೊಲೀಸರು ಅಲ್ಲಿಗೆ ದಾಳಿ ನಡೆಸಿದರು. ಈ ಭವನ ಈಗ ಆಹಾರ ನಿಷೇಧದ ಹೊಸ ಸಂಕೇತವಾಗಿದೆ. ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕೇರಳ ಭವನಕ್ಕೆ ಪೊಲೀಸರು ಪ್ರವೇಶಿಸಿದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ದೂರು ಪತ್ರವೊಂದನ್ನು ಬರೆದಿದ್ದಾರೆ.

ಹೆಚ್ಚಿದ ಪ್ರತಿಭಟನೆ

ಅವರು ಈ ವಿಷಯದ ಬಗ್ಗೆ ಪ್ರತಿಭಟಿಸಿದ ಮೊದಲ ಮಲಯಾಳಿಯಲ್ಲ. ದಿಲ್ಲಿ ಪೊಲೀಸ್ ಕಮಿಶನರ್ ಬಿ.ಎಸ್. ಬಸ್ಸಿ ಆರೆಸ್ಸೆಸ್‌ನ ‘ಬಿ’ ತಂಡ ಎಂಬುದಾಗಿ ಕೇರಳದ ಸಂಸದರು ಬಣ್ಣಿಸಿದ್ದಾರೆ. ಹಿಂದುತ್ವ ಸಂಘಟನೆ ಆರೆಸ್ಸೆಸ್, ದೇಶಾದ್ಯಂತ ಬೀಫ್ ನಿಷೇಧಕ್ಕಾಗಿ ಒತ್ತ್ತಾಯಿಸುತ್ತದೆ.


ಕೇರಳದ ಮಾಜಿ ಮುಖ್ಯಮಂತ್ರಿ ಎ.ಕೆ. ಆ್ಯಂಟನಿ ಯವರ ದಿಲ್ಲಿಯ ಮನೆ ಕೇರಳ ಭವನದ ಪಕ್ಕದಲ್ಲೇ ಇದೆ. ಪೊಲೀಸರ ಕ್ರಮವನ್ನು ಖಂಡಿಸಿದ ಸಸ್ಯಾಹಾರಿ ಆ್ಯಂಟನಿ, ‘‘ಇತರರು ಏನು ತಿನ್ನಬೇಕೆಂಬುದನ್ನು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ’’ ಎಂದು ಹೇಳಿದ್ದಾರೆ.

ಅವರ ಪ್ರತಿಭಟನೆಯಲ್ಲಿ ಅಚ್ಚರಿಯೇನಿಲ್ಲ. ಯಾಕೆಂದರೆ ಮಲಯಾಳಿಗಳು ಯಾವುದೇ ಧರ್ಮಕ್ಕೆ ಸೇರಿರಲಿ ಬೀಫ್ ಯಾವತ್ತೂ ಅವರ ಪ್ರಧಾನ ಆಹಾರವಾಗಿದೆ. ಅದೂ ಅಲ್ಲದೆ, ಒಂದು ಕೆಜಿ ಬೀಫ್‌ಗೆ 235 ರೂಪಾಯಿ ದರವಿದ್ದು, ಮಟನ್‌ಗಿಂತ ಅಗ್ಗವಾಗಿದೆ. ಮಟನ್‌ಗೆ ಕೇರಳದಲ್ಲಿ ಕೆಜಿಗೆ 500 ರೂ. ಬೆಲೆ ಇದೆ. ಮದುವೆ ಅಥವಾ ಇತರ ವಿಶೇಷ ಸಮಾರಂಭಗಳಲ್ಲಿ ಹೆಚ್ಚಾಗಿ ಮಟನ್ ಬಳಸಲಾಗುತ್ತದೆ ಹಾಗೂ ಸಾಮಾನ್ಯ ದಿನಗಳಲ್ಲಿ ಮಲಯಾಳಿಗರು ಬೀಫ್ ತಿನ್ನುತ್ತಾರೆ. ಒಂದು ಪ್ಲೇಟ್ ಬೀಫ್ ಸುಕ್ಕ ಯಾವುದೇ ರೆಸ್ಟೋರೆಂಟ್‌ನಲ್ಲಿ 50ರಿಂದ 75 ರೂ. ಬೆಲೆಯಲ್ಲಿ ಲಭಿಸುತ್ತದೆ. ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ, ಮಲಯಾಳಿಗರು ಸಾಮಾನ್ಯವಾಗಿ ‘‘ಬೆಸ್ಟ್ ಬೀಫ್’’ ಎಂಬುದಾಗಿ ಉದ್ಗರಿಸುತ್ತಾರೆ!

ಕೇರಳ ಬೀಫ್ ಕರಿ ಅತ್ಯಂತ ಸ್ವಾದಯುಕ್ತವಾಗಿದೆ ಎಂಬ ವಿಚಾರವೂ ಇದೆ. ಅದರಲ್ಲೇ ಎರಡು ವಿಧಗಳಿವೆ: ಬೀಫ್ ವಳತಿಯತ್ ಮತ್ತು ಬೀಫ್ ಕರಿ. ಈ ಎರಡು ಖಾದ್ಯಗಳು ಕೇರಳದ ಅಭಿವೃದ್ಧಿ ಸೂಚ್ಯಂಕಕ್ಕೆ ತಾವು ನೀಡಿದ ದೇಣಿಗೆ ಎಂಬುದಾಗಿ ರಾಜ್ಯದ ಸಿರಿಯನ್ ಕ್ರೈಸ್ತರು ಹೇಳಿಕೊಳ್ಳುತ್ತಾರೆ.

ಈ ಎರಡು ಅಮೂಲ್ಯ ಖಾದ್ಯಗಳ ಜೊತೆಗೆ ಕಳೆದ ಶತಮಾನದ ಮಧ್ಯ ಭಾಗದ ಹೊತ್ತಿಗೆ ರಾಜ್ಯಾದ್ಯಂತ ಹೊಸ ಆವಿಷ್ಕಾರಗಳು ನಡೆದವು. ಈ ಆವಿಷ್ಕಾರಗಳ ಹಿಂದೆ ಇದ್ದಿದ್ದು ಮೂವರು ಸಿರಿಯನ್ ಕ್ರೈಸ್ತ ಮಾತೆಯರು. ಅವರೆಂದರೆ ಬಿ.ಎಫ್. ವರ್ಗೀಸ್, ಕೆ.ಎಂ. ಮ್ಯಾಥ್ಯೂ ಮತ್ತು ತಂಗಮ್ ಫಿಲಿಪ್. ಅವರು ತಮ್ಮ ಅಡುಗೆ ಪುಸ್ತಕಗಳು ಮತ್ತು ಮ್ಯಾಗಝಿನ್ ಅಂಕಣಗಳ ಮೂಲಕ ಅರ್ಧ ಶತಮಾನಗಳಿಗೂ ಹೆಚ್ಚು ಅವಧಿಯಲ್ಲಿ ಹಲವಾರು ತಲೆಮಾರುಗಳ ಕೇರಳೀಯರಿಗೆ ಅಡುಗೆ ಮಾಡುವುದು ಹೇಗೆಂಬುದನ್ನು ಕಲಿಸಿಕೊಟ್ಟರು. ಈ ಎರಡು ಕರಿಗಳ ಜೊತೆಗೆ ಅವರು ಬೀಫ್ ಕಟ್ಲೆಟ್, ಬೀಫ್ ಬಾಲ್ ಕರಿ ಮತ್ತು ಚಿಲ್ಲಿ ಬೀಫ್ ಖಾದ್ಯಗಳನ್ನು ಜನಪ್ರಿಯಗೊಳಿಸಿದರು.

ಸಂಪ್ರದಾಯದ ಆಧುನೀಕರಣ

ಈ ಸಂಪ್ರದಾಯವನ್ನು ಜೀವಂತವಾಗಿರಿಸಲು ಎನ್ನುವಂತೆ, ಲತಿಕಾ ಜಾರ್ಜ್ ಬರೆದಿರುವ ನೂತನ ಸುರಿಯಾನಿ ಅಡುಗೆ ಪುಸ್ತಕ ಈ ಖಾದ್ಯಗಳಿಗೆ ಹೊಸ ರೂಪ ನೀಡಿದೆ. ಜಾರ್ಜ್ ತನ್ನ ಪುಸ್ತಕದಲ್ಲಿ ಹೆಚ್ಚು ಆಧುನಿಕ ಚಿಲ್ಲಿ ಬೀಫ್, ಬೀಫ್ ಲಿವರ್ ಫ್ರೈ ಮತ್ತು ಖಾರ ಬೀಫ್ ಪಾಟ್ ರೋಸ್ಟ್‌ಗಳನ್ನು ಸೇರಿಸಿದ್ದಾರೆ.

ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿರಿಯನ್ ಕ್ರೈಸ್ತರು ಮತ್ತು ಮುಸ್ಲಿಮರು ವಾಸಿಸುತ್ತಿರುವುದರಿಂದ ಅಲ್ಲಿನ ಖಾದ್ಯ ಪಟ್ಟಿಯಲ್ಲಿ ಬೀಫ್ ಪ್ರಮುಖ ಸ್ಥಾನ ಗಳಿಸಿದೆ. ಅದೇ ವೇಳೆ, ಕೇರಳದಲ್ಲಿ ಹಿಂದೂ ಕಟುಕರು ಮತ್ತು ಹಿಂದೂಗಳ ಮಾಲಕತ್ವದ ಬೀಫ್ ಅಂಗಡಿಗಳೂ ಕಾಣಸಿಗುತ್ತವೆ. ಇತರೆಡೆಗಳಂತೆ ಕೇರಳದಲ್ಲೂ ಹಿಂದೂಗಳು ಐತಿಹಾಸಿಕವಾಗಿ ಆಕಳುಗಳನ್ನು ಬಲಿಕೊಡುತ್ತಾ ಬಂದಿದ್ದಾರೆ. ಪ್ರಸಿದ್ಧ ಇತಿಹಾಸಕಾರ ಎಂ.ಜಿ.ಎಸ್. ನಾರಾಯಣನ್ ಹೀಗೆ ಬರೆಯುತ್ತಾರೆ: ‘‘ವೇದ ಯುಗದಲ್ಲಿ ಬಲಿಗಾಗಿ ಪ್ರಾಣಿಗಳ ಹತ್ಯೆ ಸಾಮಾನ್ಯವಾಗಿತ್ತು. ಬಲಿಕೊಡುವ ಪ್ರಾಣಿಯನ್ನು ಪಶು ಎಂದು ಕರೆಯಲಾಗುತ್ತಿತ್ತು. ಈ ಪದವನ್ನು ಕೇರಳದಲ್ಲಿ ದನವನ್ನು ಕರೆಯಲು ಬಳಸಲಾಗುತ್ತದೆ’’.
 ಅಕ್ಕಿ ಮತ್ತು ತರಕಾರಿಗಳು ಮುಂತಾದ ಇತರ ಪ್ರಮುಖ ಆಹಾರ ವಸ್ತುಗಳಿಗಾಗಿ ಕೇರಳ ನೆರೆಯ ತಮಿಳುನಾಡನ್ನು ಆಶ್ರಯಿಸಿದಂತೆ, ಅದು ಬೀಫ್‌ಗಾಗಿಯೂ ಆ ರಾಜ್ಯವನ್ನು ಅವಲಂಬಿಸಿದೆ. ಆಕಳುಗಳು, ಅದರಲ್ಲೂ ಮುಖ್ಯವಾಗಿ ದನಗಳ ಹಿಂಡುಗಳನ್ನ್ನು ನಡೆಸಿಕೊಂಡು ಅಥವಾ ಟ್ರಕ್‌ಗಳಲ್ಲಿ ಸಾಗಿಸಲಾಗುತ್ತದೆ ಹಾಗೂ ಅವುಗಳು ಕೇರಳದ ಸುಮಾರು 44 ಮಾರುಕಟ್ಟೆಗಳಿಗೆ ಬರುತ್ತವೆ.

‘‘ಸರಾಸರಿ ಸುಮಾರು 3,000 ಪ್ರಾಣಿಗಳನ್ನು ಇತರ ರಾಜ್ಯಗಳಿಂದ ಕೇರಳಕ್ಕೆ ಸಾಗಿಸಲಾಗುತ್ತದೆ’’ ಎಂದು ಕೇರಳದ ಮಾಂಸ ಮತ್ತು ಆಕಳು ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಕಮಲುದ್ದೀನ್ ಹೇಳುತ್ತಾರೆ. ಒಡಿಶಾ ಮತ್ತು ಬಂಗಾಳದಿಂದಲೂ ಪ್ರಾಣಿಗಳನ್ನು ತರಲಾಗುತ್ತದೆ. ಸಾರ್ವಜನಿಕ ಕ್ಷೇತ್ರದ ‘ಭಾರತದ ಮಾಂಸ ಉತ್ಪನ್ನಗಳು’ ರಾಜ್ಯಾದ್ಯಂತ ತನ್ನ ಅಂಗಡಿಗಳಲ್ಲಿ ಬೀಫ್ ಮಾರಾಟ ಮಾಡುತ್ತದೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...