Friday, October 23, 2015

ಸೇಬಿನ ತೋಟದಲ್ಲಿ ‘ಆ ಮುಖ’ಶೂದ್ರ ಶ್ರೀನಿವಾಸ್

ಅಮೆರಿಕ ಎಂತೆಂಥದೋ ನೆನಪುಗಳನ್ನು ತುಂಬಿಸಿದೆ. ಅದರಲ್ಲಿ ಸೇಬಿನ ತೋಟದಲ್ಲಿ ಕಂಡ ಆ ಮುಖವೂ ಕೂಡ ಒಂದು ರೂಪಕವಾಗಿ ದಟ್ಟವಾಗಿ ಉಳಿದುಬಿಟ್ಟಿದೆ. ಬಾಸ್ಟನ್ ಪ್ರಾಂತ ಆ ದೇಶದಲ್ಲಿಯೇ ಹೆಚ್ಚು ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿರುವಂಥದ್ದು. ಅಂಥ ಬಾಸ್ಟನ್‌ನ ವೆಸ್ಟ್ ವುಡ್ ಪ್ರದೇಶದಲ್ಲಿ ಎಷ್ಟೊಂದು ಹಸಿರಿನ ಸೊಬಗನ್ನು ಅನುಭವಿಸಿದೆ. ಅಲ್ಲಿನ ಸುಸಜ್ಜಿತ ಗ್ರಂಥಾಲಯದಲ್ಲಿ ಹಳೆಯ ನ್ಯೂಯಾರ್ಕ್ ಮತ್ತು ವಾಲ್‌ಸ್ಟ್ರೀಟ್ ಪತ್ರಿಕೆಗಳನ್ನು ನೋಡಿ ಆನಂದಪಟ್ಟಷ್ಟೇ; ಮೊದಲನೆಯ ಬಾರಿಗೆ ಯಹೂದಿ ಟೆಂಪಲ್‌ಗೆ ಹೋಗಿ; ಅವರ ಪ್ರಾರ್ಥನಾ ವಿಧಾನದಲ್ಲಿ ಒಂದರ್ಧ ಗಂಟೆ ಭಾಗವಹಿಸಿದ್ದೆ. ಹಾಗೆ ನೋಡಿದರೆ ಬೆಂಗಳೂರಿನಲ್ಲಿಯೇ ಯಹೂದಿ ಮಂದಿರಕ್ಕೆ ಹೋಗಬೇಕು ಎಂದು ಯೋಚಿಸುತ್ತಲೇ ಮುಂದೂಡಿದ್ದೆ. ಆ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಡಾ. ಸವಿತಾ ಗೌಡ ನನ್ನ ಭಾವ ಜಯರಾಮ ರೆಡ್ಡಿಯವರ ಮಗಳು. ಒಂದು ದೃಷ್ಟಿಯಿಂದ ನನ್ನ ಕಣ್ಣ ಮುಂದೆಯೇ ಆಡಿ ಬೆಳೆದ ಹುಡುಗಿ. ನನ್ನ ಹೆಂಡತಿಯ ತೊಡೆಯ ಮೇಲೆ ಆಟವಾಡುತ್ತಲೇ ಬೆಳೆದವಳು. ಕಿಶೋರ್ ಗೌಡ ಎಂಬ ಎಂಜಿನಿಯರ್ ಪದವೀಧರನನ್ನು ಪ್ರೀತಿಸಿ ಅಮೆರಿಕದ ಬಾಸ್ಟನ್‌ಗೆ ಇಪ್ಪತ್ತೈದು ವರ್ಷಗಳ ಹಿಂದೆ ಹೋಗಿ ನೆಲೆಸಿ ಸ್ಪರ್ಧಾತ್ಮಕವಾಗಿ ಬೆಳೆದು ನಿಂತವರು. ಡಾ. ಸವಿತಾ ಗೌಡ ಮತ್ತು ಕಿಶೋರ್‌ಗೌಡ ಅವರು ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಘಟನೆಯಲ್ಲಿ ಕ್ರಿಯಾಶೀಲರಾಗಿರುವಂಥವರು. ಇವರಿಬ್ಬರೂ ತಮ್ಮ ವೃತ್ತಿಯಲ್ಲಿ ಎಷ್ಟು ತಾದಾತ್ಮತೆಯನ್ನು ಬೆಳೆಸಿಕೊಂಡಿದ್ದಾರೆ ಎಂದರೆ ಅದನ್ನು ಅರ್ಥೈಸಿಕೊಳ್ಳುವುದಕ್ಕೆ ಖುಷಿಯಗುತ್ತದೆ. ಪ್ರತಿಷ್ಠಿತ ಬಾಸ್ಟನ್ ಮ್ಯಾಗಝಿನ್ ಪ್ರತಿವರ್ಷ ಸಾವಿರಾರು ವೈದ್ಯರನ್ನು ಆಯ್ಕೆ ಮಾಡಿ, ಅವರಲ್ಲಿ ಅತ್ಯುತ್ತಮವಾದವರನ್ನು ನ್ಯೂಯಾರ್ಕ್‌ನ ತಜ್ಞರ ಸಮಿತಿಗೆ ಕಳಿಸಿಕೊಟ್ಟು; ಸೂಕ್ತ ಮೂರು ಹೆಸರುಗಳನ್ನು ತರಿಸಿಕೊಂಡು ಅವರನ್ನು ಗೌರವಿಸುವರು. ಅಂಥ ಗೌರವಾನ್ವಿತ ಪ್ರಶಸ್ತಿಯನ್ನು ಡಾ. ಸವಿತಾ ಗೌಡ ಅವರು ಕಳೆದ ಐದು ವರ್ಷಗಳಿಂದ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಆಕೆ ಒಮ್ಮೆಯೂ ನನ್ನ ಬಳಿ ಇದನ್ನು ಹೇಳಲಿಲ್ಲ. ಬೇರೆ ಅಮೆರಿಕಾದ ಗೆಳೆಯರಿಂದ ತಿಳಿದೆ.

  ಇಂಥ ಹಿನ್ನೆಲೆಯ ದಂಪತಿ ನನಗೆ ಬೇಕಾದ ಪುಸ್ತಕ, ಪತ್ರಿಕೆಗಳು, ಗ್ರಂಥಾಲಯಗಳಿಗೆ ಕರೆದುಕೊಂಡು ಹೋಗಿ ಪರಿಚಯಿಸಿದರು. ಅಷ್ಟೇ ಏಕೆ ತಮ್ಮ ಮನೆಯಿಂದ ಇಪ್ಪತ್ತು ಮೈಲಿ ದೂರವಿರುವ ಬಾಸ್ಟನ್‌ಗೆ ಎಷ್ಟೊಂದು ಬಾರಿ ಕರೆದುಕೊಂಡು ಹೋದರು. ಹಾರ್ವರ್ಡ್ ವಿಶ್ವವಿದ್ಯಾನಿಲಯವನ್ನು ನೋಡಿ ಆನಂದಿಸುವಂತೆ ಮಾಡಿದವರು. ಕಿಶೋರ್ ಗೌಡ ಅವರು ಮುನ್ನೂರು ನಾನೂರು ಮೈಲಿ ದೂರದಲ್ಲಿದ್ದ ನ್ಯೂಯಾರ್ಕ್‌ಗೆ ಕರೆದುಕೊಂಡು ಹೋಗಿ ಒಂದು ಅಪೂರ್ವ ಚಿತ್ರಣವನ್ನೇ ಅಮೆರಿಕಾದ ಬಗ್ಗೆ ಇಟ್ಟರು. ಅದನ್ನು ಪ್ರತ್ಯೇಕವಾಗಿಯೇ ಬರೆಯುವುದಕ್ಕೆ; ಈಗಾಗಲೇ ನನ್ನ ಮನಸ್ಸಿನಲ್ಲಿ ಸಾಕಷ್ಟು ಒತ್ತಡವಿದೆ. ತಮ್ಮ ಮನೆಯ ಮಿನಿ ಥಿಯೇಟರ್‌ನಲ್ಲಿ ನಾನೊಬ್ಬನೇ ಕೂತು ಮೂರು ನಾಲ್ಕು ದಶಕಗಳ ಹಿಂದೆ ನೋಡಿದ ಕ್ಲಿಯೋ ಪಾತ್ರ, ಲಾರೆನ್ಸ್ ಆಫ್ ಅರೇಬಿಯಾ ಚಿತ್ರಗಳನ್ನು ಅಧ್ಯಯನದ ದೃಷ್ಟಿಯಿಂದಲೇ ಆಸ್ವಾದಿಸಿದ್ದೆ. ಇಷ್ಟೆಲ್ಲ ಉತ್ಸಾಹದಿಂದಲೇ ಸೇಬಿನ ತೋಟಗಳನ್ನು ನೋಡಲೇ ಬೇಕು ಎನ್ನುವ ರೀತಿಯಲ್ಲಿ ಮೂವತ್ತು ಮೈಲಿ ದೂರವಿದ್ದ ಆ ತೋಟಕ್ಕೆ ಕರೆದುಕೊಂಡು ಹೋದರು. ಸಾವಿರಾರು ಎಕರೆಗಳ ಬಯಲು ಪ್ರದೇಶವದು. ಎಲ್ಲಿ ನೋಡಿದರಲ್ಲಿ ನೂರಾರು ಕಾರುಗಳನ್ನು ನಿಲ್ಲಿಸಿ ವೀಕ್ಷಿಸಲು ಬಂದವರು. ಜೊತೆಗೆ ನೆರೆದ ಜನಕ್ಕೆ ಸೇಬಿನ ತೋಟಗಳ ವೈಭವವನ್ನು ತೋರಿಸುವುದಕ್ಕೂ ಮೂರು ಟ್ರಾಕ್ಟರ್‌ಗಳು ಒಂದೇ ಸಮನೆ ಸುತ್ತಾಡುತ್ತಿದ್ದವು. ದೊಡ್ಡವರು ಚಿಕ್ಕವರೆನ್ನದೆ, ಒಂದು ಅಪೂರ್ವ ಸಂಭ್ರಮವನ್ನು ಅನುಭವಿಸುತ್ತಿದ್ದರು. ಚಿಕ್ಕ ಚಿಕ್ಕ ಹುಡುಗ ಹುಡುಗಿಯರ ಕೇಕೆ ಕುಣಿತ; ತಮಗೆ ಬೇಕಾದ ಸೇಬನ್ನು ಕಿತ್ತು ಅರ್ಧರ್ಧ ತಿಂದು ಬಿಸಾಕಿದ್ದು ರಾಶಿರಾಶಿ ಮರದ ಕೆಳಗೆ ಬಿದ್ದಿದ್ದವು.

ಹದಿನೈದು, ಮೂವತ್ತು ಡಾಲರ್ ಕೊಟ್ಟು ಬ್ಯಾಗುಗಳನ್ನು ಪಡೆದು; ತಮಗೆ ಬೇಕಾದಷ್ಟು ತಿಂದು ಆಯಾ ಬ್ಯಾಗುಗಳಿಗೆ ಅನುಗುಣವಾಗಿ ಬ್ಯಾಗುಗಳಲ್ಲಿ ತುಂಬಿಸಿಕೊಳ್ಳಬಹುದು. ಹೆಣ್ಣು ಮಕ್ಕಳು ತಮ್ಮ ಜಡೆಗಳಿಗೆ ಮಲ್ಲಿಗೆಯನ್ನು ಪೋಣಿಸಿಕೊಂಡು ಆನಂದಿಸುವ ಪರಿಯಲ್ಲಿ, ಮಲೆನಾಡಿನಲ್ಲಿ ಕಾಫಿ ತೋಟಗಳಲ್ಲಿ ಜಡೆಗಳ ಆಕಾರದಲ್ಲಿ ತುಂಬಿಕೊಂಡ ಕಾಫಿ ಹಣ್ಣುಗಳ ನೋಟ. ಎಂಥ ಸೊಬಗು. ಬಾಲ್ಯ ಕಾಲದಿಂದಲೂ ಸೇಬಿನ ತೋಟಗಳನ್ನು ನೋಡುವುದಕ್ಕಾಗಿಯೇ ಕಾಶ್ಮೀರಕ್ಕೆ ಹೋಗಬೇಕು ಎಂದು ತರಗತಿಯಲ್ಲಿ ಮೇಸ್ಟ್ರು ಹೇಳಿದಾಗ; ನೋಡುವ ಕನಸುಗಳನ್ನು ತುಂಬಿಕೊಂಡ ದಿನಗಳವು. ಆದರೆ ಕಾಶ್ಮೀರಕ್ಕಿಂತ ಹತ್ತರಷ್ಟು ದೂರದ ಅಮೆರಿಕದಲ್ಲಿ ಸೇಬಿನ ತೋಟಗಳನ್ನು ನೋಡಿ ಆನಂದಿಸಲು ಸಾಧ್ಯವಾಯಿತು. ಒಂದೊಂದು ಪುಟ್ಟ ಪುಟ್ಟ ರೆಂಬೆಯನ್ನು ಅಪ್ಪಿಕೊಂಡು ಆನಂದಿಸುವ ಹಣ್ಣು. ವಿಧವಿಧವಾದ ಜಾತಿಗೆ ಸೇರಿದ ಸೇಬಿನ ಮರಗಳು. ಒಂದೊಂದರ ರುಚಿಯೂ ಬೇರೆಯ ತೆರನದ್ದು. ಕಚ್ಚಿ ಕಚ್ಚಿ ತಿನ್ನುತ್ತ ರುಚಿಯ ಹುಡುಕಾಟದಲ್ಲಿ ಸುತ್ತಾಡುತ್ತಿದ್ದ ಜನಸ್ತೋಮ. ಎಲ್ಲರೂ ತಮ್ಮ ಬಾಲ್ಯಕಾಲವನ್ನು ನೆನಪು ಮಾಡಿಕೊಳ್ಳುತ್ತ; ಕೋತಿಗಳ ಜಾತಿಗೆ ಸೇರಿಬಿಟ್ಟಿದ್ದೆವು ಅನ್ನಿಸಿತು. ಡಾ. ಸವಿತಾ ಗೌಡ ಅವರು ನಮ್ಮನ್ನು ಓಡಾಡಿಸುತ್ತಲೇ ‘‘ಮಾವ ಹೀಗೆ ನಿಂತುಕೊಳ್ಳಿ’’ ಎಂದು ತರಾತುರಿ ರೀತಿಯಲ್ಲಿ ಕ್ಯಾಮರಾದ ಮೇಲೆ ಕೈಯಾಡಿಸಿದರು. ನನ್ನ ಹೆಂಡತಿ ಭಾವಚಿತ್ರ ಪ್ರಿಯೆಯಾದ್ದರಿಂದ ಸದಾ ಕ್ಯಾಮರಾಕ್ಕೆ ಸಿದ್ಧವಾಗಿ ನಿಲ್ಲುತ್ತಿದ್ದಳು.

  ಹೀಗೆ ಸುತ್ತಾಡುತ್ತ ಬೇಕಾದ ಸೇಬುಗಳನ್ನು ಕಿತ್ತು ಬ್ಯಾಗಿಗೆ ತುಂಬಿಸಿಕೊಳ್ಳುವ ಸಮಯದಲ್ಲಿ ಯಾರ್ಯಾರನ್ನೋ ಪರಿಚಯ ಮಾಡಿಕೊಂಡೆ. ಎಲ್ಲರೂ ಪ್ರೀತಿಯಿಂದ ಮುಖ ಹಿಗ್ಗಿಸಿ ಎಷ್ಟೊಂದು ಮುಗ್ಧವಾಗಿ ನಗುತ್ತಿದ್ದರು. ಹಾಗೆ ನೋಡಿದರೆ ಅಮೆರಿಕದಲ್ಲಿ ಯಾರೇ ಎದುರಿಗೆ ಸಿಕ್ಕಿದರೂ ‘ಹಲೋ’ ಎಂದು ಹೇಳಿ ನಗೆಯನ್ನು ಸೂಚಿಸಿ ಮುಂದೆ ನಡೆಯುತ್ತಿದ್ದರು. ನಮ್ಮಲ್ಲಿಯಂತೆ ನಮಗೂ ನಿಮಗೂ ಸಂಬಂಧವಿಲ್ಲವೆಂಬಂತೆ ಒಂದು ರೀತಿಯ ಪರಕೀಯತೆಯಿಂದ ನಡೆಯುತ್ತಿರಲಿಲ್ಲ. ಇದು ನಾನು ವೆಸ್ಟ್ ವುಡ್ ಪ್ರದೇಶದಲ್ಲಿ ಬೆಳಗ್ಗೆ ಮತ್ತು ಸಂಜೆ ವಾಕ್ ಮಾಡುವಾಗಲೂ ಅನುಭವಿಸಿದ್ದೇನೆ. ಅದರಲ್ಲೂ ಸಂಜೆಯ ವಾಕ್ ಸಮಯದಲ್ಲಿ ಗುಡುಗುಡು ಎಂದು ನಡೆಯುತ್ತಿದ್ದ; ಅತ್ಯಂತ ವಯೋವೃದ್ಧೆಯಾದ ಚೀನಿ ಮಹಿಳೆಯ ನಗು ಮತ್ತು ಮೆಲುದನಿಯಲ್ಲಿ ‘ಹಲೊ’ ಎಂದು ಹೇಳುವುದು ಎಷ್ಟು ಮೋಹಕವಾಗಿ ಒಟ್ಟು ನನ್ನ ಮನಸ್ಸಿನ ತುಂಬ ಆವರಿಸಿಕೊಂಡು ಬಿಟ್ಟಿದೆ. ಈ ನೆಲೆಯಲ್ಲಿ ಸೇಬಿನ ತೋಟದಲ್ಲಿ ಐದಾರು ಗಂಟೆ ಸುತ್ತಾಡುವಾಗ ನಮಗೆ ಆಯಾಸವೆಂಬುದೇ ಗೊತ್ತಾಗಲಿಲ್ಲ. ಬಿರುಬೇಸಿಗೆಯ ಕೊನೆಯ ದಿನಗಳಾಗಿದ್ದರಿಂದ; ಬಿಸಿಲು ತೀವ್ರವಾಗಿಯೇ ಇತ್ತು. ಆದರೆ ಸೇಬಿನ ಹಣ್ಣುಗಳ ಸ್ವಾಭಾವಿಕ ತಂಪಿನಲ್ಲಿ, ಜನರ ಗದ್ದಲ, ಕೇಕೆ, ಕುಣಿತದಲ್ಲಿ ಒಟ್ಟು ವಾತಾವರಣಕ್ಕೆ ಮತ್ತಷ್ಟು ತಂಪು ತುಂಬಿಕೊಂಡಿತ್ತು. ಎಲ್ಲರೂ ಜೀವನವನ್ನು ಅನುಭವಿಸಲು ತುದಿಗಾಲಿನಲ್ಲಿ ನಿಂತವರಂತೆ ಕಾಣುತ್ತಿದ್ದರು. ಡಾ. ಸವಿತಾ ಗೌಡ ಅವರಂತೂ ಪುಟ್ಟ ಹುಡುಗಿಯಂತೆ, ತಾವು ಒಬ್ಬ ದೊಡ್ಡ ವೈದ್ಯೆಯೆಂಬ ಯಾವುದೇ ರೀತಿಯ ‘ಇಗೋ’ ಇಲ್ಲದೆ, ಕೂಲಿಕಾರರ ರೀತಿಯಲ್ಲಿ ಹಣ್ಣಿನ ಬ್ಯಾಗನ್ನು ಭುಜಕ್ಕೆ ನೇತಾಕಿಕೊಂಡು ಭಾವಚಿತ್ರ ತೆಗೆಯು ತ್ತಿದ್ದರು. ಆಕೆಗೆ ಸಂಜೆ ಭಾರತಕ್ಕೆ ಆ ಚಿತ್ರಗಳನ್ನೆಲ್ಲ ರವಾನಿಸುವ ಉತ್ಸಾಹ.

ಇಂಥ ಸಂಭ್ರಮದ ಸಮಯದಲ್ಲಿ ಒಬ್ಬಾಕೆ ನಮ್ಮ ಬಳಿ ಬಂದು ನಿಂತು ‘‘ಯು ಆರ್ ಇಂಡಿಯನ್ಸ್’’ ಎಂದು ಕೇಳಿದಳು. ನಾವು ಹೌದು ಎಂದು ಹೇಳುವ ಸಮಯಕ್ಕೆ ಆಕೆ ‘‘ನನ್ನಪ್ಪ ಇಂಡಿಯಾಗೆ ಸೇರಿದವರು. ಅಲ್ಲಿಯ ಅನುಭವಗಳಿಗೆ ಸಂಬಂಧಿಸಿದಂತೆ ಎಂತೆಂಥದೋ ಕಥೆಗಳನ್ನು ಹೇಳಿದ್ದಾರೆ. ನಿಮ್ಮನ್ನು ನೋಡಿ ಸಂತೋಷವಾಯಿತು’’ ಎಂದು ಕೈಹಿಡಿದು ಒಂದು ರೀತಿಯ ಸಂತೋಷವನ್ನು ಅನುಭವಿಸುತ್ತ ಹೋದಳು. ಆಕೆಯ ವಯಸ್ಸು ಸುಮಾರು ನಲವತ್ತೈದು ಐವತ್ತು ಇರಬಹುದು. ಮುಖದ ತುಂಬ ವಿಷಾದದ ಭಾವನೆ ತುಂಬಿಕೊಂಡಿದೆ ಅನ್ನಿಸಿತು. ಹೆಸರು ಕೇಳಿದೆ ‘ಹೋಪ್’ ಎಂದು ಹೇಳಿದಳು. ಅತ್ಯಂತ ಅಪೂರ್ವ ಹೆಸರು ಅನ್ನಿಸಿತು. ಅಲ್ಲಿಗೆ ಅದು ಸ್ವಾಭಾವಿಕ ಇರಬಹುದು. ಹೀಗೆ ಮಾತಿನ ಮಧ್ಯೆ ಅರಿವಿಗೆ ಬಾರದ ಚಿತ್ರಣಗಳಲ್ಲಿ ಮುಖಾಮುಖಿಯಾಗುತ್ತ ಹೋದುವು. ಇಂಥ ವಾತಾವರಣದಲ್ಲಿಯೇ ಡಾ. ಸವಿತಾ ಅವರು ನನ್ನ ಬಳಿ ನಿಂತು ‘‘ಮಾವ ಆಕೆಯ ಹಿನ್ನೆಲೆ ‘ರೆಡ್ ಇಂಡಿಯನ್’ ಇರಬಹುದು. ಆದ್ದರಿಂದಲೇ ಒಟ್ಟು ಆಕೆಯ ಮಾತುಗಳು ಆ ವೇದನೆಯಿಂದಲೇ ವ್ಯಕ್ತವಾಗುತ್ತಿವೆ’’ ಎಂದು ನನ್ನ ಹೆಂಡತಿಯ ಮತ್ತು ತಮ್ಮ ತಾಯಿಯ ಜೊತೆಯಲ್ಲಿ ಮುಂದೆ ನಡೆದರು. ಆದರೆ ಆ ಮಾತಿನಿಂದ ‘ಹೋಪ್’ ಎಂಬ ಆ ಮಹಿಳೆ ಮಾನಸಿಕವಾಗಿ ನನಗೆ ಮತ್ತಷ್ಟು ಹತ್ತಿರವಾದಳು. ಆಕೆಯ ಕಣ್ಣಿನ ತುಂಬ ವೇದನೆ, ಆತಂಕ, ವಿಷಾದ ಮುಂತಾದುವನ್ನು ಎಷ್ಟೋ ವರ್ಷಗಳಿಂದ ಹೊತ್ತುಕೊಂಡು ‘ಹೋಪ್’ ಎಂಬುದನ್ನು ಮುಂದಿಟ್ಟುಕೊಂಡು ತಿರುಗುತ್ತಿದ್ದಾಳೆ ಅನ್ನಿಸಿತು.

ಇದಕ್ಕಿಂತ ಎರಡು ದಿವಸಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ‘ಅಮೆರಿಕನ್ ಇಂಡಿಯನ್ಸ್’ ಎಂಬ ಭವ್ಯವಾದ ಮ್ಯೂಸಿಯಂ ಮುಂದೆ ನಿಂತು ಭಾವಚಿತ್ರ ತೆಗೆದಿದ್ದೆ. ಒಂದು ಕ್ಷಣ ಇಲ್ಲಿಯವರೆಗೂ ನಾನು ರೆಡ್ ಇಂಡಿಯನ್ಸ್ ಬಗ್ಗೆ ಕೇಳಿದ, ಓದಿದ ಕಥೆಗಳೆಲ್ಲ ಮುಖಾಮುಖಿಯಾಗತೊಡಗಿದ್ದುವು. ಯಾಕೆಂದರೆ: ಹೇಗೆ ಒಂದು ಪ್ರಬಲವಾದ ಜನಾಂಗ ನಿರ್ನಾಮವಾಗಿ ಹೋಗಿಬಿಡ್ತಲ್ಲ ಎಂದು. ಅದೇ ಸಮಯಕ್ಕೆ ಆ ಜನಾಂಗವನ್ನು ಪ್ರತಿನಿಧಿಸು ವಂತೆ, ಒಂದು ವಿಧದ ಪಳೆಯುಳಿಕೆಯಂತೆ ಕಾಣುತ್ತಿರುವ ‘ಹೋಪ್’ ಎಂಬ ಮಹಿಳೆ ಅವ್ಯಕ್ತವಾದದ್ದನ್ನು ಹೇಳಲು ನಿಂತಿದ್ದಾಳೆ ಅನ್ನಿಸಿತು. ಹಾಗೆ ನೋಡಿದರೆ: ಆಕೆಯ ನೋಟದಲ್ಲಿ ಅಷ್ಟೊಂದು ದಟ್ಟವಾದ ತೀವ್ರತೆ ಆವರಿಸಿಕೊಂಡು ಬಿಟ್ಟಿದೆ. ಏನೋ ನಮ್ಮ ಪೂರ್ವಿಕರೊಬ್ಬರು ಸಿಕ್ಕಿದ್ದಾರೆ ಎಂದು ನನ್ನ ಕೈಹಿಡಿದೇ ನಿಂತಿದ್ದಳು. ಆದರೆ ಸ್ವಲ್ಪ ದೂರ ಮುಂದೆ ನಡೆದಿದ್ದ ಡಾ. ಸವಿತಾ ಗೌಡ ಮತ್ತು ನನ್ನ ಹೆಂಡತಿ ವಿಜಯಾ ಹಿಂದಿರುಗಿ ನೋಡಿ ನಕ್ಕು ಮತ್ತಷ್ಟು ಮುಂದೆ ನಡೆದಿದ್ದರು. ಕೊನೆಗೂ ಹೋಪ್‌ಗೆ ಹೇಳಿದೆ: ನಿನ್ನ ಹೋಪ್ ಎಂಬ ಹೆಸರಿನ ಶಬ್ದಕ್ಕೆ ಮತ್ತಷ್ಟು ಚೈತನ್ಯ ಬರಲಿ. ಆದರೆ ಕೊನೆಗೂ ನಮ್ಮ ನೆನಪುಗಳಲ್ಲಿ ಮಾತ್ರ, ಅಮೂಲ್ಯವಾದ ಸಂಗತಿಗಳನ್ನೆಲ್ಲ ಒಳಗೆ ಬಿಟ್ಟುಕೊಂಡು ಬದುಕಬೇಕಾಗುತ್ತದೆ ಎಂದು ಹೇಳಿದೆ. ಆಕೆ ವೌನಿಯಾಗಿ ನಿಂತೇ ಇದ್ದಳು. ಆಗ ಒಂದು ಕ್ಷಣ ಅನ್ನಿಸಿತು. ಬದುಕಿನ ಇಂಥ ಆಕಸ್ಮಿಕ ಕ್ಷಣಗಳನ್ನು ಹೇಗೆ ಅರ್ಥೈಸಿಕೊಳ್ಳುವುದು ಎಂದು. ಹಾಗೆ ನೋಡಿದರೆ; ಹೋಪ್ ಎಂಬ ಆ ಮಹಿಳೆಯ ಪೂರ್ವಜರಿಗೆ ಇದೇ ಬಯಲಿನಲ್ಲಿ ಸೇಬು ಎಂಬ ತೋಟಗಳ ಮಧ್ಯೆ ಅಥವಾ ಬೇರೆ ರೀತಿಯ ಗಿಡಮರಗಳ ನಡುವೆ ಯಾವ ರೀತಿಯ ಶ್ರಮ ಇತ್ತು, ಆಗ ಇದ್ದ ಹಿಂಸೆಯ ಹಿಂದಿನ ಹೋರಾಟ ಎಂಥದ್ದು ಎಂದು ಯೋಚಿಸುತ್ತ ಹೋದೆ. ಕೊನೆಗೂ ಹೋಪ್‌ಗೆ ಗುಡ್‌ಬೈ ಹೇಳಿ ದೂರ ಸರಿದೆ. ಆದರೆೆ ದೂರ ಸರಿದಂತೆಲ್ಲ ನೆನಪು ಮತ್ತಷ್ಟು ಹತ್ತಿರವಾಗುತ್ತಾ ಹೋಯಿತು. ಈಗ ಆ ಸೇಬಿನ ತೋಟದಿಂದ ‘ಹೋಪ್’ ಎಂಬ ಆ ಚಾರಿತ್ರಿಕ ಮಹಿಳೆಯನ್ನು ಹೊರಗಿಟ್ಟು ನೋಡಲಾಗುವುದಿಲ್ಲ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...