Saturday, October 31, 2015

ದಾವಣಗೆರೆ: ಉಚ್ಚಂಗಿ ಪ್ರಸಾದ್ ಮೇಲೆ ಹಲ್ಲೆಗೆ ಪ್ರತಿಭಟನೆ; ಪ್ರಗತಿಪರರ ರಕ್ಷಣೆಗೆ ಆಗ್ರಹ




ಸೌಜನ್ಯ : ನ್ಯೂಸ್ ಕನ್ನಡ ನೆಟ್ ವರ್ಕ್

ಕೋಮುವಾದ ತಡೆಯುವಲ್ಲಿ ಕೇಂದ್ರ ಸರ್ಕಾರ, ಪ್ರಗತಿಪರರನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ನಿಷ್ಕ್ರಿಯವಾಗಿವೆ ಎಂದು ಯುವ ಬರಹಗಾರ ಹಾರೋಹಳ್ಳಿ ರವೀಂದ್ರ ಆರೋಪಿಸಿದ್ದಾರೆ. ಕವಿ ಉಚ್ಚಂಗಿ ಪ್ರಸಾದ್ ಹಲ್ಲೆ ಖಂಡಿಸಿ ಇಲ್ಲಿನ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದ ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಹಿತಿ, ಬರಹಗಾರರು, ಚಿಂತಕರು ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಈ ಪ್ರತಿಭಟನೆ ಆಯೋಜಿಸಲಾಗಿತ್ತು.

ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಕೊಲೆ ಮತ್ತು ಸಜೀವ ದಹನಗಳು ಇನ್ನೂ ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ನಾಡಿನ ಎಲ್ಲರಿಗೂ ಘನತೆಯಿಂದ ಬದುಕುವ ಹಕ್ಕಿದೆ. ವೈಚಾರಿಕ ಅಭಿವ್ಯಕ್ತಿ ಸ್ವಾತಂತ್ರ್ಯವು ಎಲ್ಲರ ಹಕ್ಕಾಗಿದೆ. ಕರ್ನಾಟಕದಂತಹ ಜಾತ್ಯಾತೀತ ಪರಂಪರೆಯ ನಾಡಿನಲ್ಲಿಯೂ ಕೋಮುವಾದವು ಹೆಡೆಯೆತ್ತುತ್ತಿದೆ. ಕೊಮುವಾದವನ್ನು ಹಿಮ್ಮೆಟ್ಟಿಸಬೇಕಾದ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿರುವುದರಿಂದಲೇ ಮತಾಂಧತೆ ಕರ್ನಾಟಕವನ್ನು ಪ್ರವೇಶಿಸುತ್ತಿದೆ. ದಾವಣಗೆರೆಯ ಉಚ್ಚಂಗಿ ಪ್ರಸಾದ್ ಎಂಬ ಯುವ ಸಾಹಿತಿಯ ಮೇಲೆ ನಡೆದ ಹಲ್ಲೆ ಪ್ರಕರಣವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅನೈತಿಕ ಗೂಂಡಾಗಿರಿಯಿಂದ ಕರಾವಳಿ ಜಿಲ್ಲೆಗಳು ನಲುಗತೊಡಗಿದ್ದು, ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಗೂಂಡಾಗಿರಿ ಮಾಡುವ ಸಂಘಟನೆಗಳ ಮೇಲೆ ಕ್ರಮ ತೆಗೆದುಕೊಳ್ಳದಿರುವುದು ಈ ಅವಘಡಗಳಿಗೆ  ಕಾರಣವಾಗಿದೆ. ಡಾ. ಎಂ.ಎಂ. ಕಲಬುರ್ಗಿಯವರ ವಿಚಾರವಾದವನ್ನು ಹಾಗೂ  ಸತ್ಯ ಹೇಳುವ ಅವರ ಸಂಶೋಧನೆಯ ಮಾರ್ಗವನ್ನು ಸಹಿಸದೇ ಅವರನ್ನು ಮತೀಯ ಶಕ್ತಿಗಳು ಕೊಂದಿರುವ ದುರಂತವೂ ನಡೆದುಹೋಗಿದೆ ಎಂದು ಅವರು ಆಪಾದಿಸಿದ್ದಾರೆ.

ದೇಶದಲ್ಲಿಯೂ ಅಸಹಿಸ್ಣುತೆ ದೊಡ್ಡ ಪ್ರಮಾಣದಲ್ಲಿ ಅಸ್ತಿತ್ವದಲ್ಲಿದೆ. ಮಾಂಸಹಾರ ಇಟ್ಟುಕೊಂಡಿದ್ದಕ್ಕಾಗಿ ದಾದ್ರಿಯಲ್ಲಿ ಅಖ್ಲಾಕ್ ಹತ್ಯೆ, ದೇವಸ್ಥಾನ ಪ್ರವೇಶ ಮಾಡಲು ಯತ್ನಿಸಿದ ದಲಿತ ವ್ಯಕ್ತಿಯ ಜೀವಂತ ದಹನ, ದಲಿತ ಹಸುಳೆಗಳ ದಹನ ಪ್ರಕರಣಗಳು, ಎಲ್ಲೆಡೆ ಕೊಲ್ಲುವ ಕ್ರಿಯೆಗಳು ಸಹಜವೆನ್ನುವಂತೆ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಅವರು ಆಪಾದಿಸಿದ್ದಾರೆ. ದಲಿತರನ್ನು ನಾಯಿಗಳಿಗೆ ಹೋಲಿಸಿ ನಿಂದಿಸುವ ಸಚಿವರೂ ಕೇಂದ್ರ ಸಚಿವ ಸಂಪುಟದಲ್ಲಿದ್ದಾರೆ, ಅಂತಹ ಸರಕಾರದಿಂದ ಏನು ನಿರೀಕ್ಷಿಸಲು ಸಾಧ್ಯವಿಲ್ಲ. ದಲಿತರನ್ನು ನಿಂದಿಸಿದ ಕೇಂದ್ರ ಸಚಿವ ವಿ.ಕೆ. ಸಿಂಗ್ ರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು. ಉಚ್ಚಂಗಿ ಪ್ರಸಾದ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಮತಾಂಧರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಉಚ್ಚಂಗಿ ಪ್ರಸಾದ್ ರ ಶೈಕ್ಷಣಿಕ ಹಾಗೂ ರಕ್ಷಣೆಯ ಹೊಣೆಯನ್ನು ಸರಕಾರವೇ ಹೊರಬೇಕು ಮುಂತಾದ ಸುಮಾರು ಏಳು ಬೇಡಿಕೆಗಳ ಹಕ್ಕೊತ್ತಾಯವನ್ನು ಪ್ರತಿಭಟನಕಾರರು ತಾಲೂಕು ವಿಭಾಗಾಧಿಕಾರಿಗೆ ಸಲ್ಲಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಾಥಾ ಹೋಗಿ ತಾಲೂಕು ವಿಭಾಗಧಿಕಾರಿಯವರಿಗೆ, ಬಸವರಾಜು ಸೂಳಿಭಾವಿ ನೇತೃತ್ವದಲ್ಲಿ ಹಕ್ಕೊತ್ತಾಯ ಸಲ್ಲಿಸಲಾಯಿತು. ಬಸವರಾಜು ಸೂಳಿಭಾವಿ, ಶ್ರೀನಿವಾಸ್, ಹರಿಪ್ರಸಾದ್, ವಾಸು, ದಾದಾಪಿರ್, ವಸಂತ್ ಕುಮಾರ್ ಹಲ್ಲೂರ ಮುಂತಾದ ಪ್ರಮುಖರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

a
c
e

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...