Friday, October 30, 2015

ಅಮೆರಿಕದಲ್ಲೊಂದು ಕ್ಯಾಸ್ಟ್ರೋ ಜಿಲ್ಲೆಶೂದ್ರ ಶ್ರೀನಿವಾಸ್
 

‘‘ಇಪ್ಪತ್ತನೆಯ ಶತಮಾನದ ಸ್ಮರಣೀಯ ಬಹುದೊಡ್ಡ ಬೆಳವಣಿಗೆಯೆಂದರೆ: ಅಹಿಂಸಾತ್ಮಕತೆಯು ಒಂದು ಕ್ರಿಯೆಯಾಗಿ ವ್ಯಾಪಕಗೊಂಡದ್ದು. ಈ ಅಹಿಂಸಾತ್ಮಕ ಕ್ರಿಯೆಯು ಸತ್ಯಾಗ್ರಹ, ನೇರವಾದ ಪ್ರತಿರೋಧ; ಇದರಲ್ಲಿ ಪ್ರತಿಭಟನೆ, ಬಹಿಷ್ಕಾರ, ರಾಜಕೀಯ ಅಸಹಕಾರ, ನಾಗರಿಕ ಆಜ್ಞಾ ಉಲ್ಲಂಘನೆ, ಅಹಿಂಸಾತ್ಮಕ ಅಡಚಣೆ ಮುಂತಾದವು. ಈ ಕೌಶಲ್ಯಕ್ಕೆ ಬಹುದೀರ್ಘ ಇತಿಹಾಸವೇ ಇದೆ. ಆದರೆ ಇತಿಹಾಸಕಾರರು ಹಿಂಸಾತ್ಮಕ ಘರ್ಷಣೆ, ಕಿತ್ತಾಟ, ಯುದ್ಧ ಮುಂತಾದವುಗಳ ಕುರಿತು ಹೆಚ್ಚು ಒತ್ತುಕೊಟ್ಟರು. ಇದರಿಂದ ಅಹಿಂಸಾತ್ಮಕ ಹೋರಾಟಗಳ ಬೆಳವಣಿಗೆಯ ಚಿತ್ರಣವು ಮರೆಯಾಯಿತು’’ ಜಗತ್ತಿನ ಕೆಲವೇ ಶ್ರೇಷ್ಠ ಚಿಂತಕರು ಮತ್ತು ಇತಿಹಾಸಕಾರರಲ್ಲಿ ಒಬ್ಬರಾದ ಜೀನ್‌ಷಾರ್ಪ್ ಅವರು ಅಮೆರಿಕದ ಮತ್ತು ಯುರೋಪಿನ ಜನತೆಗೆ ‘ಫ್ರಂ ಡಿಕ್ಟೇಟರ್‌ಷಿಪ್ ಟು ಡೆಮಾಕ್ರಸಿ ಮತ್ತು ಗಾಂಧಿ ಅಸ್ ಎ ಪೊಲಿಟಿಕಲ್ ಸ್ಟ್ರಾಟಜಿಸ್ಟ್’ ಕೃತಿಗಳ ಮೂಲಕ ‘ವಾರ್ ವಿಥೌಟ್ ವೆಪನ್ಸ್; ಪರಿಕಲ್ಪನೆಯ ಬಗ್ಗೆ ವ್ಯಾಪಕವಾದ ಅರಿವನ್ನು ಮೂಡಿಸಿದವರು. ಎಪ್ಪತ್ತರ ದಶಕದಲ್ಲಿ ನೋಮ್ ಚೋಮ್‌ಸ್ಕಿಯು ‘ವಿಯಟ್ನಾಮ್ ವಾರ್’ ಕೃತಿಯ ಮೂಲಕ ಅಮೆರಿಕ ಸರಕಾರದ ಯುದ್ಧ ನೀತಿಯ ವಕ್ರತೆಗಳ ವಿಷಯದಲ್ಲಿ ಅರಿವು ಮೂಡಿಸಿದವರು. ಈ ರೀತಿ ಯೋಚಿಸುವ ಒಂದು ದೊಡ್ಡ ಪಡೆಯೇ ಆ ದೇಶದ ಉದ್ದಗಲಕ್ಕೂ ಬೆಳೆಯಿತು. ಇಂದಿಗೂ ಚೋಮ್‌ಸ್ಕಿ ಮತ್ತು ಜೀನ್ ಷಾರ್ಪ್ ಅವರು ಅತ್ಯಂತ ವಯೋವೃದ್ಧರಾಗಿದ್ದರೂ ತಮ್ಮ ಸೃಜನಾತ್ಮಕ ಚಿಂತನೆಗೆ ವಿರಾಮ ತಂದುಕೊಂಡಿಲ್ಲ. ಆ ದೇಶದ ಪ್ರಜಾಪ್ರಭುತ್ವವಾದಿಗಳ ಹೋರಾಟಕ್ಕೆ ಸಾಕ್ಷಿ ಪ್ರಜ್ಞೆಯಾಗಿರುವಂಥವರು. ಹಾಗೆ ನೋಡಿದರೆ ಜೀನೆ ಷಾರ್ಪ್ ಅವರ ಉಪನ್ಯಾಸವನ್ನು ನನ್ನ ಮೊಬೈಲ್‌ನಲ್ಲಿ ಕೇಳಿಸಿಕೊಂಡು ಮತ್ತು ಮಾತಿನ ಹಾವಭಾವವನ್ನು ಕಂಡು ಪುಳಿಕಿತನಾಗಿದ್ದೆ. ಅದೇ ಭಾವನಾತ್ಮಕ ಚಿತ್ರವನ್ನು ಅಮೆರಿಕದ ಚಾರಿತ್ರಿಕ ನಗರ ಬಾಸ್ಟನ್‌ನಲ್ಲಿ ಸುತ್ತಾಡುವ ಜೀನ್ ಷಾರ್ಪ್ ಕಾಣಿಸಿಕೊಳ್ಳುಬಾರದಾ? ಎಂದು ಕಲ್ಪಿಸಿಕೊಂಡಿದ್ದೆ. ಆದರೆ ತೊಂಬತ್ಮೂರು ವರ್ಷದ ಆಜ್ಞಾನವೃದ್ಧ ಮನೆಯಿಂದ ಹೊರಗೆ ಬರಲು ಹೇಗೆ ಸಾಧ್ಯ?

ಅಮೆರಿಕದಂಥ ವಿಶಾಲದೇಶದ ಮೂವತ್ತೊಂದನೆ ಪ್ರಾಂತವಾದ ಕ್ಯಾಲಿಪೋರ್ನಿಯಾದ ಸ್ಯಾನ್‌ಪ್ರಾನ್ಸಿಸ್ಕೊದಂಥ ವಿಶಾಲನಗರವನ್ನು ಸುತ್ತುವಾಗ ಎಂಥ ವಿಚಿತ್ರನಗರ ಅನ್ನಿಸಿತ್ತು. ಈ ದೃಷ್ಟಿಯಿಂದ ಈ ಪ್ರಾಂತದ ಲಾಸ್‌ವೇಗಾಸ್ ಮತ್ತು ಲಾಸ್ ಏಂಜಲೀಸ್ ನಗರಗಳು ಆಧುನಿಕತೆಯ ನೆಲೆಯಲ್ಲಿ ಹುಚ್ಚೆಬ್ಬಿಸುವಂಥವು. ಇರಲಿ, ನಮ್ಮ ‘ಸ್ವೀಟ್ ಟ್ರಾವೆಲ್ಸ್’ ಕೋಚ್‌ನ ಗೈಡ್ ಜಾನ್ ರಾಬರ್ಟ್ ಅವರು ಒಬ್ಬ ವಿಶ್ವವಿದ್ಯಾಲಯದ ಪ್ರಾಧ್ಯಾಪಕನ ರೀತಿಯಲ್ಲಿ ಎಷ್ಟು ಆತ್ಮೀಯವಾಗಿ, ವಿವರಣಾತ್ಮಕವಾಗಿ ವಿವರಿಸುತ್ತಿದ್ದರು. ಅದರಲ್ಲೂ ಅಲ್ಲೊಂದು ಚೌಕದಲ್ಲಿ ಬೃಹತ್ತಾದ ಸ್ತಂಭದ ಮೇಲೆ ಸಪ್ತವರ್ಣಗಳಲ್ಲಿ ಕಾಮನಬಿಲ್ಲನ್ನು ಆಕರ್ಷಣೆಯ ದೃಷ್ಟಿಯಿಂದ ಮೀರಿಸುವ ಬಾವುಟವನ್ನು ‘‘ನೋಡಿ ನೋಡಿ’’ ಎಂದು ಕೋಚನ್ನು ನಿಲ್ಲಿಸಿದಾಗ; ನಾನಂತೂ ರೋಮಾಂಚಿತನಾಗಿದ್ದೆ. ಯಾಕೆಂದರೆ ಆ ಪ್ರದೇಶಕ್ಕೆ ಜೂನ್ ತಿಂಗಳಲ್ಲಿ ಕ್ಯಾಸ್ಟ್ರೊ ಜಿಲ್ಲೆಯೆಂದು ನಾಮಕರಣ ಮಾಡಿದ್ದರು. ಅಲ್ಲಿಯೇ ಒಂದು ರಸ್ತೆಯ ಮಗ್ಗುಲಲ್ಲಿದ್ದ ಬೇಕರಿಗೆ ‘ಕ್ಯಾಸ್ಟ್ರೋ ಬೇಕರಿ; ಎಂದು ಬರೆದಿತ್ತು. ಮನಸ್ಸಿನಲ್ಲಿಯೇ ‘ಹೌ ಬ್ಯೂಟಿಫುಲ್’ ಎಂದುಕೊಂಡೆ. ನಮ್ಮ ಮಾರ್ಗದರ್ಶಕ ಜಾನ್ ರಾಬರ್ಟ್ ಅವರನ್ನು ಈ ರೀತಿ ನಾಮಕರಣ ಮಾಡುವುದಕ್ಕೆ ಯಾವುದೇ ರೀತಿಯ ಪ್ರತಿರೋಧ ಬರಲಿಲ್ಲವೇ? ಜನರಿಂದ ಎಂದು ಕೇಳಿದೆ. ಅದಕ್ಕೆ ಆತ ನಗುತ್ತ ‘‘ಇಲ್ಲ ಇಲ್ಲ ಜನ ಯಾವಾಗಲು ಪ್ರಜಾಪ್ರಭುತ್ವವಾದಿಗಳಾಗಿಯೇ ಬದುಕುತ್ತ ಬಂದಿದ್ದಾರೆ. ಕೆಲವು ಸರಕಾರಗಳು ಎಡಬಿಡಂಗಿಯಾಗಿ ವರ್ತಿಸಿರಬಹುದು. ಆದರೆ ಅಮೆರಿಕದ ಉದ್ದಗಲಕ್ಕೂ ಎಲ್ಲ ವಿಶ್ವವಿದ್ಯಾಲಯಗಳ ಬೌದ್ಧಿಕ ವಲಯ ಮತ್ತು ವಿದ್ಯಾರ್ಥಿಗಳು ಯುದ್ಧ ವಿರೋಧಿ ನೀತಿಯನ್ನು ತೀವ್ರವಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ’’ ಎಂದು ಹೇಳುವಾಗ; ಆತನ ಮಾತಿನಲ್ಲಿ ಒಂದು ರೀತಿಯ ಅಭಿಮಾನದ ಧ್ವನಿಯಿತ್ತು. ಅದಕ್ಕೆ ಪೂರಕವೆಂಬಂತೆ ಅಲ್ಲಿಗೆ ಸಮೀಪದ ಒಂದು ಬಯಲನ್ನು ತೋರಿಸಿ; ‘‘ಇಲ್ಲಿ ಎಂತೆಂಥ ಯುದ್ಧ ವಿರೋಧಿ ಸಭೆಗಳನ್ನು ಲೇಖಕರು, ಕಲಾವಿದರು ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ನಡೆಸಿಕೊಟ್ಟಿದ್ದಾರೆ’’ ಎಂದು ಹೇಳುವಾಗಲೂ ಆತನಲ್ಲಿ ಆತ್ಮಾಭಿಮಾನ ತುಂಬಿಕೊಂಡಿತ್ತು. ಆ ಸಮಯದಲ್ಲಿ ವಿಯಟ್ನಾಂ ವಿರುದ್ಧ ವಾಗಿ ಯುದ್ಧದಲ್ಲಿ ಭಾಗಿಯಾಗಲು ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರಬೇಕು ಎಂದು ಆಗಿನ ಸರಕಾರ ಅಜ್ಞೆ ಹೊರಡಿಸಿದಾಗ; ಅದಕ್ಕೆ ವಿರುದ್ಧವಾಗಿ ವ್ಯಾಪಕವಾಗಿ ‘‘ನಾವು ಸೈನ್ಯಕ್ಕೆ ಸೇರುವುದಿಲ್ಲ’’ ಎಂದು ಸರಕಾರದ ಆಜ್ಞೆಯ ವಿರುದ್ಧ ಜನಾಭಿಪ್ರಾಯವನ್ನು ಬೆಳೆಸಿದ್ದು ಚಾರಿತ್ರಿಕವಾದದ್ದು. ಒಂದು ನೆಲೆಯಲ್ಲಿ ಆ ರೀತಿಯ ಸಂಘರ್ಷಾತ್ಮಕ ಅಭಿಪ್ರಾಯ ದಟ್ಟವಾಗುತ್ತ ಬಂದಿದ್ದರಿಂದಲೇ ‘ಕ್ಯಾಸ್ಟ್ರೋ ಜಿಲ್ಲೆ’ ಎಂದು ನಾಮಕರಣಗೊಳ್ಳಲು ಸಾಧ್ಯವಾಗಿದ್ದು.

ಬರಾಕ್ ಒಬಾಮ ಅವರ ಸುಧಾರಣವಾದಿ ಆಡಳಿತದ ಜೊತೆಗೆ ಪೋಪ್ ಫ್ರಾನ್ಸಿಸ್ ಅವರಂಥ ‘ಪೀಪಲ್ಸ್ ಪೋಲ್’ ಎಂದು ಕರೆಸಿಕೊಂಡವರ ಪರೋಕ್ಷ ಒತ್ತಡವೂ ಕೂಡ ಕ್ಯೂಬಾದ ಜೊತೆಗಿನ ಸಂಬಂಧವು ಜಟಿಲತೆಯಿಂದ ಬಿಡುಗಡೆಗೊಂಡದ್ದು. ಒಬಾಮ ಅವರಂತೂ ಅರ್ಧಶತಮಾನಕ್ಕೂ ಮೇಲ್ಪಟ್ಟು ಮುಂದುವರಿದ ಕ್ಯೂಬಾ ಹಾಗೂ ಕ್ಯಾಸ್ಟ್ರೋವಿನ ಪ್ರತಿರೋಧವನ್ನು ‘ಇಗೊ’ ಹಂತದಲ್ಲಿ ವಿಶ್ಲೇಷಿಸಿಕೊಳ್ಳಲು ಹೋಗಲಿಲ್ಲ. ಈ ದೃಷ್ಟಿಯಿಂದ ವಿಶ್ವದ ಎಲ್ಲ ಪ್ರಜ್ಞಾವಂತರು ಸ್ವಾಗತಿಸುವುದರ ಜೊತೆಗೆ; ಅಮೆರಿಕದ ಪ್ರಜಾಪ್ರಭುತ್ವವಾದಿಗಳು ಹೃದಯತುಂಬಿ ಸ್ವಾಗತಿಸಿದರು. ಇದಕ್ಕೆ ಅನ್ವಯಿಸಿ ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ವಾಲ್‌ಸ್ಟ್ರೀಟ್ ಜರ್ನಲ್’ ದಿನಪತ್ರಿಕೆಗಳಲ್ಲಿ ಬರುತ್ತಿದ್ದ ಸಂವಾದಾತ್ಮಕ ಚರ್ಚೆಗಳನ್ನು ಕಂಡು ಖುಷಿಪಟ್ಟಿದ್ದೇನೆ. ಚರಿತ್ರೆಯಲ್ಲಿ ಯಾವಾಗಲೂ ರಿಜಿಡಿಟಿಯೇ ಮುಂದುವರಿಯಲು ಸಾಧ್ಯವಿಲ್ಲ. ಆಂತರಿಕ ಘರ್ಷಣೆಯ ಮೂಲಕ ಸುಧಾರಣೆಗಳನ್ನು ಕಾಣುತ್ತಲೇ ಹೋಗುತ್ತೇವೆ. ಇಂಥ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅಂಥವರು ನಿರ್ದಾಕ್ಷಿಣ್ಯವಾಗಿ ಲಿಬರಲ್ ಆಗಿ ಯೋಚಿಸುವುದು ಮತ್ತು ಕಾರ್ಯಪ್ರವೃತ್ತರಾಗುವುದು ವರ್ತಮಾನದ ಚಲನಶೀಲತೆಯ ಕಾರಣಕ್ಕಾಗಿ ಮಹತ್ವಪೂರ್ಣವಾದದ್ದೇ ಆಗಿರುತ್ತದೆ. ಪೋಪ್ ಫ್ರಾನ್ಸಿಸ್ ಅವರಿಗೂ ಗೊತ್ತು; ತಮ್ಮ ಕಾರ್ಯ ವೈಖರಿಯ ಚರ್ಚ್‌ನಲ್ಲಿ ಸಂಪ್ರದಾಯವಾದಿಗಳಿಗೆ ಇಷ್ಟವಾಗುವುದಿಲ್ಲವೆಂಬುದು. ನಂಬಿದ ನಂಬಿಕೆಗಳ ವಿರುದ್ಧವಾಗಿ ನಡೆದುಕೊಳ್ಳದೆ ಸೆಟೆದು ನಿಲ್ಲುವ ಮನೋಭಾವ ಯಾವಾಗಲೂ ಬೇಕಾಗುತ್ತದೆ ಎಂಬ ಅಚಲತೆಯನ್ನು ಕಾಪಾಡಿಕೊಂಡು ಹೋಗುವ ‘ಮಾರಲಿಸ್ಟ್’ ಆಗಿದ್ದಾರೆ ಎಂಬುದನ್ನು ಯಾರೂ ಪ್ರಶ್ನಿಸಲಾರರು. ಇಲ್ಲದಿದ್ದರೆ ‘ಪೀಪಲ್ಸ್ ಪೋಪ್’ ಎಂದು ಒಂದೇ ಸಮನೆ ಜನತೆಯಿಂದ ಪ್ರಜಾಪ್ರತಿನಿಧಿಗಳಿಂದ ಹಾಗೂ ಮಾಧ್ಯಮದವರಿಂದ ಕರೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರ ಬಗ್ಗೆ ಕೂಡ ಎಂಥ ಗುಣಾತ್ಮಕ ವಾಗ್ವಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು.

ಇದೇ ಕಾಲಘಟ್ಟದಲ್ಲಿ ಅಮೆರಿಕದ ನಾರ್ತ್ ಕರೋಲಿನಾ ಪ್ರಾಂತದ ರ್ಯಾಲೆಯಲ್ಲಿ ನಡೆದ ಸಮಾವೇಶವನ್ನು ಮುಗಿಸಿಕೊಂಡು ಗ್ರೀನ್ ಬರೋ ಪ್ರದೇಶದಲ್ಲಿ ನಾಲ್ಕು ದಿವಸವಿರುವಾಗ; ನಾವಿಕ (ನಾವು ವಿಶ್ವಕನ್ನಡಿಗರು) ಸಂಘಟನೆಯವರು ಮುಖ್ಯವಾಗಿ ಕುಸುಮಾ ಬಸಪ್ಪ, ಶ್ರೀನಾಥ್, ತಿಮ್ಮ ಶೆಟ್ಟಿ ಮುಂತಾದವರು ವಿಜಯಾ ಗೌಡ ಅವರ ಮನೆಯಲ್ಲಿ ಒಂದಷ್ಟು ಮಂದಿಯನ್ನು ಸೇರಿಸಿದ್ದರು. ಅದೊಂದು ಆತ್ಮೀಯವಾದ ಔತಣಕೂಟ. ಅವರಲ್ಲಿ ಬಹುಪಾಲು ಮಂದಿ ನೂರು ಮೈಲಿಗಿಂತ ಹೆಚ್ಚು ದೂರದಿಂದ ಬಂದವರು. ಅಂದು ಅಲ್ಲಿ ನಾನು ಗ್ರಹಿಸಿದ ಮಹಿಳಾ ಲೇಖಕಿಯರನ್ನು, ಚಿಂತಕಿಯರನ್ನು ಹಾಗೂ ಹೋರಾಟಗಾರ್ತಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ತುಂಬ ದೀರ್ಘವಾಗಿಯೇ ಮಾತಾಡಿದೆ. ಆಗ ಲಕ್ಷ್ಮೀ ನಾರಾಯಣ ಗಣಪತಿಯಂಥವರು ಎಂದೋ ದಕ್ಷಿಣ ಕನ್ನಡ ಪ್ರದೇಶದಿಂದ ಹೋಗಿ; ತಮ್ಮ ಶ್ರಮ ಮತ್ತು ಪ್ರತಿಭೆಯಿಂದ ಗಟ್ಟಿಯಾಗಿ ನೆಲೆಯೂರಿರುವಂಥವರು. ಆತ ಉತ್ತಮ ಲೇಖಕ, ನಟ ಹಾಗೂ ನಾಟಕಕಾರ ಅಂಥವರು ಚರ್ಚೆಯ ಸಂದರ್ಭದಲ್ಲಿ ಒಂದು ಪ್ರಶ್ನೆಯನ್ನು ಕೇಳಿದರು: ‘‘ನಿಮ್ಮಂಥ ಎಡಪಂಥೀಯರು ಯಾಕೆ ಅಮೆರಿಕವನ್ನು ದ್ವೇಷಿಸುತ್ತೀರಿ?’’ ಎಂದು. ಅದಕ್ಕೆ ನಾನು ಉತ್ತರಿಸಿದೆ: ನಾನು ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ. ಆದರೆ ನಾನು ಕೆಲವು ಅತ್ಯುತ್ತಮ ಕೃತಿಗಳಿಂದ, ಚಿಂತಕರಿಂದ ಹಾಗೂ ಸಂತ ಮಹನೀಯರಿಂದ ಒಂದಷ್ಟು ಗ್ರಹಿಸಿಕೊಳ್ಳಲು ಪ್ರಯತ್ನಿಸುತ್ತಿರುವಂಥವನು. ಈ ಚೌಕಟ್ಟಿನಲ್ಲಿ ‘ಪ್ರಗತಿಪರ ಮತ್ತು ಪ್ರತಿಗಾಮಿ’ ಶಬ್ದಗಳನ್ನು ಬಳಸಲು ಸಂಕೋಚವಾಗುತ್ತದೆ. ಮತ್ತೊಂದು ಮುಖ್ಯ ವಿಷಯ: ನನ್ನ ಅರಿವಿನ ಮಟ್ಟಿಗೆ ಜಗತ್ತಿನ ಯಾವ ಪ್ರಜ್ಞಾವಂತನೂ ಅಮೆರಿಕದ ಜನತೆಯನ್ನು ದ್ವೇಷಿಸುವುದಿಲ್ಲ. ಆದರೆ ಇಲ್ಲಿಯ ಕೆಲವು ಆಡಳಿತ ಸಂದರ್ಭದ ‘ಯಜಮಾನ’ ನೀತಿಯನ್ನು ವಿರೋಧಿಸುವರು. ಕ್ಯೂಬಾದ ಸಂಬಂಧ ನಮ್ಮ ಮುಂದೆಯೇ ಹೇಗೆ ರಿಲ್ಯಾಕ್ಸ್ ಆಯಿತು ನೋಡಿ. ಹಾಗೆ ನೋಡಿದರೆ ನಾನು ಅಮೆರಿಕಕ್ಕೆ ಬರದಿದ್ದರೆ ಅಪರಾಧಿಯಾಗುತ್ತಿದ್ದೆ. ಒಂದು ಬಹುದೊಡ್ಡ ದೇಶದಲ್ಲಿ ಆಗಿರುವ; ಪರಿಸರಕ್ಕೆ ಸಂಬಂಧಿಸಿದ ಹಾಗೂ ಆಡಳಿತಕ್ಕೆ ಸಂಬಂಧಿಸಿದ ಶಿಸ್ತು ತುಂಬ ಮೆಚ್ಚಿಗೆಯಾಗಿದೆ. ಅಷ್ಟೇ ಅಲ್ಲ ಇಂದು ಅಮೆರಿಕದಲ್ಲಿ ‘ಆಫ್ರಿಕನ್-ಅಮೆರಿಕನ್ಸ್’ ಪಡೆದಿರುವ ಸ್ವಾತಂತ್ರ ಸ್ಮರಣೀಯವಾದದ್ದು. ಆ ಕಪ್ಪು ಜನ ನೂರಾರು ವರ್ಷ ಗುಲಾಮಗಿರಿಯಿಂದ ನರಳಿದವರು. ಈಗ ಸ್ವತಂತ್ರವಾಗಿ ಹಕ್ಕಿಗಳಂತೆ ಓಡಾಡುತ್ತಿದ್ದಾರೆ. ಇದಕ್ಕೆ ಒಂದು ನಾಗರಿಕ ಸಮಾಜ ಸಂತೋಷಪಡಬೇಕು.

ಇಂದು ಅಮೆರಿಕದಲ್ಲಿ ಭಾರತೀಯ ಸಮುದಾಯ ಪ್ರಬಲವಾಗಿ ಬೆಳೆಯುತ್ತಿರುವುದರಿಂದ; ಆಂತರಿಕವಾಗಿ ಮುಂದೆ ಬೇರೆ ಬೇರೆ ರೀತಿಯ ಸಂಘರ್ಷವೂ ನೆಲೆಯೂರಬಹುದು. ಅದಕ್ಕೆ ಮಾನಸಿಕವಾಗಿ ಸಿದ್ಧವಾಗಿರಲೇಬೇಕಾಗುತ್ತದೆ. ಯಾವ ಭಾಷೆಯೂ, ಯಾವ ಜನಾಂಗವೂ ಸಾಯಬಾರದು. ಎಲ್ಲಿದ್ದರೂ ಸಾಮರಸ್ಯದ ನೆಲೆಗಳು ವಿಸ್ತಾರಗೊಳ್ಳುತ್ತಲೇ ಹೋಗಬೇಕಾಗುತ್ತದೆ. ನೀವೆಲ್ಲ ‘ನಾವಿಕ’ ಮೂಲಕ ಅಥವಾ ‘ಅಕ್ಕ’ ಸಂಘಟನೆಯ ಮೂಲಕ ಒಂದೆಡೆ ಸೇರಿ ಮಾತಾಡುತ್ತಿದ್ದರೆ: ಅದು ನಿಮ್ಮ ಪರಕೀಯತೆಯನ್ನು ಮರೆಯುವುದೂ ಆಗಿರುತ್ತದೆ; ಪರೋಕ್ಷವಾಗಿ ಮಾನಸಿಕವಾಗಿ ಗಟ್ಟಿಯಾಗುವುದು ಆಗಿರುತ್ತದೆ. ಈ ದೃಷ್ಟಿಯಿಂದ ನಾನು ಯಾವಾಗಲೂ ಚೋಮ್‌ಸ್ಕಿ, ಜೀನ್‌ಷಾರ್ಪ್ ಮತ್ತು ಇತರೆ ಬಹುಮುಖ್ಯ ಲೇಖಕರು ಮತ್ತು ಕಲಾವಿದರಿಗೆ ಋಣಿಯಾಗಿರುತ್ತೇನೆ. ಹಾಗೆಯೇ ಜಾನ್ ಹಾರ್ವರ್ಡ್‌ನಂಥವನ ಹೃದಯವಂತಿಕೆ ಹಾಗೂ ಮಾನಸಿಕ ವೈಶಾಲ್ಯವನ್ನು ಮನಸ್ಸಿನಲ್ಲಿ ತುಂಬಿಕೊಂಡು ಅಮೆರಿಕಕ್ಕೆ ಬಂದಿರುವಂಥವನು.

 ಆ ಮನೆಯಲ್ಲಿ ನೆರದ ಜನ ಬದುಕಿನ ಎಂತೆಂಥದೋ ಹುಡುಕಾಟ ದಲ್ಲಿರುವುದರಿಂದ; ನನ್ನ ಒಟ್ಟು ಮಾತುಗಳನ್ನು ಪ್ರೀತಿಯಿಂದ ಸ್ವೀಕರಿಸಿ ಗೌರವಿಸಿದರು. ನನಗಂತೂ ಅದೊಂದು ಶ್ರೀಮಂತವಾದ ಅನುಭವ. ಈ ಚಿಂತನೆಯ ನೆಲೆಯಲ್ಲಿಯೇ ಬಾಸ್ಟನ್‌ನಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸುತ್ತಾಡುವಾಗ; ಜೀನ್‌ಷಾರ್ಪ್ ಮತ್ತು ಚೋಮ್‌ಸ್ಕಿಯವರ ಹೆಜ್ಜೆಗುರುತುಗಳನ್ನು ಹುಡುಕ ತೊಡಗಿದ್ದೆ. ಅಷ್ಟೇ ಅಲ್ಲ ಜಾನ್ ಹಾರ್ವರ್ಡ್ ಪ್ರತಿಮೆಯನ್ನು ನೋಡಲು ಕ್ಯೂನಲ್ಲಿ ನಿಂತಾಗ; ಎಂಥದೋ ಅವಿನಾಭಾವ ಮನಸ್ಸಿನಲ್ಲಿ ತುಂಬಿಕೊಂಡಿತ್ತು. ಹಾರ್ವರ್ಡ್ ವೃತ್ತದಲ್ಲಿ ಪ್ರತಿ ಸಂಜೆ ಎಂತೆಂಥದೋ ಕಾರ್ಯಕ್ರಮಗಳು ನಡೆಯುವಾಗ ಜೀನ್ ಷಾರ್ಪ್ ಗಾಂಧೀಜಿಯವರನ್ನು ಕುರಿತು ಅಮೂಲ್ಯವಾದ ಸಂಗತಿಗಳನ್ನೆಲ್ಲ ಹೇಳಿರಬಹುದು. ಆದರೆ ಇಷ್ಟಂತೂ ಸತ್ಯ: ಜೀನ್ ಷಾರ್ಪ್ ಅವರ ಕೃತಿಗಳ ಪ್ರಕಟಣ ಸಂಸ್ಥೆಯಾದ ‘ಎಕ್ಸ್‌ಟೆಂಡಿಂಗ್ ಹಾರಿಜಾನ್ ಬುಕ್ಸ್, ಪೋರ್ಟರ್ ಸಾರ್ಜೆಂಡ್ ಪಬ್ಲಿಷರ್ಸ್’ನ್ನು ನೋಡಿ ಖುಷಿಯಾಯಿತು. ಅಲ್ಲಿರುವ ಕೆಲವು ಅಮೂಲ್ಯ ಕೃತಿಗಳನ್ನು ಬಾಚಿ ತಬ್ಬಿಕೊಳ್ಳಬೇಕೆನ್ನಿಸಿತು. ಹೊರಗೆ ಬಂದಾಗ ಅಮೆರಿಕದ ಬೇಸಿಗೆಯ ಬಿಸಿಯನ್ನು ಕುಗ್ಗಿಸಲು ಎಂಬಂತೆ ‘ಧೋ’ ಎಂದು ಮಳೆ ಸುರಿಯತೊಡಗಿತ್ತು. ಬಾಸ್ಟನ್ ಅತ್ಯಂತ ಶಿಸ್ತಿನಿಂದ ರೂಪಿಸಿದ ನಗರ. ಅಲ್ಲಿ ದೀರ್ಘವಾಗಿ ಬದುಕುತ್ತಿರುವ ಷಾರ್ಪ್ ಅಂಥವರೂ ಇದ್ದಾರೆ. ಹಾರ್ವರ್ಡ್ ರೀತಿಯಲ್ಲಿ ನೂರಾರು ಚಿಂತಕರನ್ನು ರೂಪಿಸುವ ವಿಶ್ವವಿದ್ಯಾಲಯವೂ ಇದೆ. ಕ್ಯೂಬಾದಂಥ ಪುಟ್ಟದೇಶಗಳು ನೆಮ್ಮದಿಯಿಂದ ಉಸಿರಾಡುವಂತಿರಲು; ಅಮೆರಿಕದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಪ್ರಜಾಪ್ರಭುತ್ವವಾದಿಗಳೂ ಇದ್ದಾರೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...