Thursday, October 08, 2015

ಮಹಿಳೆ: ಅಸ್ಮಿತೆ ಮತ್ತು ಸಾಮಾಜಿಕ ಸ್ಪಂದನೆ

- ಡಾ. ಪೌಲ್ ಜಿ. ಅಕ್ವಿನಸ್, ಮಂಗಳ ಗಂಗೋತ್ರಿ


ಭಾರತದ ಮಹಿಳೆಯರ ಬದುಕು ಮುಗ್ಧತೆ, ನಿರಾಕರಣೆ, ಪಲ್ಲಟ, ಹಿಂಸೆ ಮತ್ತು ನೋವಿನಿಂದ ಜರ್ಜರಿತವಾದುದಾಗಿದೆ. ಸಾಮಾನ್ಯ ಮಹಿಳೆಯೊಬ್ಬಳು ತನ್ನ ಜೀವನದುದ್ದಕ್ಕೂ ಲಿಂಗಾಧಾರಿತ ಕೌಟುಂಬಿಕ ಮತ್ತು ಸಾಮಾಜಿಕತೆಯಲ್ಲಿ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಾಳೆ. ಈಕೆ ಅಭಿವ್ಯಕ್ತಿಪಡಿಸುವ ಅಸ್ಮಿತೆ ನೈಜವಾದುದು ಮತ್ತು ಸಮಾನತೆ ಹಾಗೂ ಮಾನವೀಯ ನೆಲೆಯಲ್ಲಿ ರೂಪುಗೊಳ್ಳುವಂತಹದ್ದಾಗಿದೆ. ಉದಾರ ವೌಲ್ಯಗಳು ನಿರಂತರವಾಗಿ ಪ್ರತಿಕೂಲ ಸಾಮಾಜಿಕ ಶಕ್ತಿಗಳಿಂದ ಜರ್ಜರಿತಗೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ಸಮಾಜದ ಅವಿಭಾಜ್ಯ ಭಾಗವಾಗಿರುವ ಮಹಿಳೆಯರ ಸಮಸ್ಯೆಗಳು ಮತ್ತು ಅವರು ಅನುಭವಿಸುತ್ತಿರುವ ಬವಣೆಗಳು ನಮ್ಮೆಲ್ಲರ ಗಮನ ಸೆಳೆಯುತ್ತದೆ. ನಾವು ಇದುವರೆಗೂ ಮಹಿಳೆಯರ ಸ್ಯಾತಂತ್ರ್ಯಹರಣ, ಶಿಕ್ಷಿತ ಮಹಿಳೆಯರ ಬಿಕ್ಕಟ್ಟನ್ನು ನಮ್ಮ ಸಮಾಜದಲ್ಲಿ ಈಗಾಗಲೇ ಬೇರೂರಲ್ಪಟ್ಟ ಸೀಮಿತವಾದ ಮತ್ತು ಸ್ಥಿರ ವೌಲ್ಯಗಳ ದೃಷ್ಟಿಕೋನದಲ್ಲಿ ಮಾತ್ರ ನೋಡುತ್ತಿದ್ದೇವೆ. ಆದರೆ ಮಹಿಳೆಯರ ಶೋಷಣೆ ಮತ್ತು ಉದ್ದೇಶಪೂರ್ವಕ ಅನಾದರ ಆಕೆಯ ಜೀವನದ ವಿವಿಧ ಹಂತಗಳಲ್ಲಿ ನಡೆಯುತ್ತದೆ. ಒಂದು ಹಂತದಲ್ಲಿ ಇದು ಕೇವಲ ದೈಹಿಕ ಶೋಷಣೆಯಂತೆ ಕಂಡರೆ ಮತ್ತೊಂದು ಹಂತದಲ್ಲಿ ಇದು ಮಾನಸಿಕ ಶೋಷಣೆಯಾಗಿ ಗೋಚರಿಸುತ್ತದೆ. ಕೆಲವೊಂದು ಬಾರಿ ಈ ಶೋಷಣೆಯು ಭಾವನಾತ್ಮಕ ಹಂತಕ್ಕೂ ತಲುಪುವ ಸಾಧ್ಯತೆಗಳಿವೆ. ಇವುಗಳೆಲ್ಲವೂ ಮಹಿಳೆಯರು ತಮ್ಮ ಸ್ವಂತ ಮನೆಯೂ ಸೇರಿದಂತೆ ವಿವಾಹವಾಗಿ ಹೋಗುವ ಮನೆಯೂ ಸುರಕ್ಷಿತವಲ್ಲವೆಂಬುದನ್ನು ಸಾರುತ್ತದೆ. ದೇಶದ ಒಟ್ಟು ಜನಸಂಖ್ಯೆಯ ಅರ್ಧ ಭಾಗದಷ್ಟಿರುವ ಮಹಿಳೆಯರು ಹುಟ್ಟಿದ ಕ್ಷಣದಿಂದ ಬದುಕಿನ ಕೊನೆಯ ಕ್ಷಣದವರೆಗೂ ಆವರಿಸಿರುವ ಭಯ ಮತ್ತು ಶೋಷಣೆಯನ್ನು ನಮ್ಮ ಸಮಾಜವು ಅರ್ಥೈಸಿಕೊಂಡಂತಿಲ್ಲ. ಆದುದರಿಂದ ಸಮಾಜ ಒಮ್ಮೆ ಮಾಡಿದ ತಪ್ಪುಗಳನ್ನು ಮಗದೊಮ್ಮೆ ಮಾಡುತ್ತಿದೆ, ಮಹಿಳೆಯರನ್ನು ಮೂಲಭೂತ ಹಕ್ಕುಗಳಿಂದ ವಂಚಿತಗೊಳಿಸಿ ಅವರನ್ನು ಶೋಷಣೆಗೆ ನೇರ ಗುರಿಯನ್ನಾಗಿಸಿದೆ. ಭಾರತದಲ್ಲಿ ಸ್ತ್ರೀವಾದ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಬಹಳಷ್ಟು ಚಿಂತಕರು ಸ್ತ್ರೀವಾದದ ನಡೆಯ ಬಗ್ಗೆ ಹಾಗೂ ಪುರುಷನನ್ನು ಮುಖಾಮುಖಿಯಾಗಿಸುವ ಅಪಾಯದ ಬಗ್ಗೆ ಚಿಂತಿತರಾಗಿದ್ದಾರೆ. ಸ್ತ್ರೀವಾದ ಇಂತಹ ಸಂಕುಚಿತ ವ್ಯಾಪ್ತಿಯನ್ನು ಮೀರಿ ಕಾರ್ಯಾಚರಿಸಬೇಕಿದೆ. ಸ್ತ್ರೀವಾದದ ಮೂಲ ಉದ್ದೇಶ ಸಮಾನ ಹಕ್ಕು ಮತ್ತು ಅವಕಾಶಕ್ಕಾಗಿ ಹೋರಾಟ ನಡೆಸಿ, ಸಂವೇದನಾಶೀಲ ಸಮಾಜವನ್ನು ರೂಪಿಸುವುದಾಗಿದೆ. ಪುರುಷರನ್ನು ಹೊರತುಪಡಿಸಿ ಮಹಿಳಾ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ವ್ಯರ್ಥ ಪ್ರಯತ್ನ, ಬದಲಾಗಿ ಜೊತೆಯಾಗಿ ಮುಂದುವರಿಯಬೇಕಿದೆ. ಇಂದು ಸಮಾಜದಲ್ಲಿ ಸಾಂಪ್ರದಾಯಿಕ ಮನೋಸ್ಥಿತಿ ಮತ್ತು ಸಮಾನತೆ, ಘನತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯನ್ನಾಧರಿಸಿದ ಮಾನವೀಯ ಸಮಾಜದ ಮನೋಸ್ಥಿತಿಯ ಮಧ್ಯೆ ಸಂಕೀರ್ಣ ತಿಕ್ಕಾಟ ಕಂಡು ಬರುತ್ತಿದೆ. ಮಾನವೀಯ ಸಮಾಜದ ಎರಡು ಮುಖ್ಯ ಮೂಲ ಧಾತುಗಳೆಂದರೆ ಯಾವುದೇ ತಾರತಮ್ಯವಿಲ್ಲದ ಸಮಾನ ಗೌರವ ಮತ್ತು ಅನುಕಂಪದ ಸದ್ಬಳಕೆ. ಇವುಗಳಲ್ಲಿ ಯಾವ ಧಾತು ಸಮಾನ ಗೌರವ ಮತ್ತು ಮಹಿಳೆಯರ ಬದುಕನ್ನು ಉನ್ನತೀಕರಿಸಬಲ್ಲದೆಂಬುದನ್ನು ನಿರ್ಧರಿಸುವುದು ಕಷ್ಟ ಸಾಧ್ಯವಾದುದರಿಂದ ಇವೆರಡೂ ಜೊತೆಯಾಗಿ ಸಾಗಬೇಕಿದೆ.


ಸಾಮಾಜಿಕ ಚಿಂತನಾ ಕ್ರಮದ ಆಮೂಲಾಗ್ರ ಬದಲಾವಣೆ ಮತ್ತು ಕ್ರೋಡೀಕರಣವನ್ನು ಹಲವು ದಾರಿಯಲ್ಲಿ ಸಾಧಿಸಬಹುದಾಗಿದೆ. ಮುಖ್ಯವಾಗಿ ರಾಜಕೀಯ ನಾಯಕರು ಮಹಿಳಾ ವಿಮುಕ್ತಿಯ ಆಶಯದ ಹೋರಾಟಕ್ಕೆ ಜನಸಮೂಹವನ್ನು ಸಂಘಟಿಸಿ ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಜನಸಮೂಹದಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಕೆಲಸ. ಪ್ರತಿ ದೇಶ ಮತ್ತು ಸಮಾಜ ತಮ್ಮ ಸಾಂಸ್ಕೃತಿಕ ಚೌಕಟ್ಟಿಗೆ ಸೂಕ್ತವಾದ ತಂತ್ರಗಳ ಮೂಲಕ ಸಮೂಹ ಜಾಗೃತಿಯನ್ನು ಮೂಡಿಸಬೇಕಿದೆ. ಜೊತೆಗೆ ಸಾರ್ವಜನಿಕ ನೈತಿಕತೆಯನ್ನು ಪರಿಣಾಮಕಾರಿ ಸಮಾಜದ ಅನುಸಂಧಾನಕ್ಕೋಸ್ಕರ ಬಳಸಿಕೊಳ್ಳಬೇಕಿದೆ. ಸಮಾನತೆ ಮತ್ತು ಗೌರವದ ಸಂದೇಶ ಪರಿಣಾಮಕಾರಿಯಾಗಿ ರವಾನಿಸುವಲ್ಲಿ ಭಾಷೆ ಮತ್ತು ಮಾಧ್ಯಮದ ಆಯ್ಕೆಯು ಪ್ರಮುಖ ಪಾತ್ರವಹಿಸುತ್ತದೆ. ಪ್ರಪಂಚದ ಬೃಹತ್ ಪ್ರಜಾಪ್ರಭುತ್ವವಾಗಿರುವ ಮತ್ತು ಶಾಂತಿಯನ್ನು ಕಾರ್ಯನೀತಿಯನ್ನಾಗಿಸಿದ ಭಾರತದ ಸಮಾಜದಲ್ಲಿ ಲಿಂಗ ಅಸಮಾನತೆಯೆಂಬುದು ಆಳವಾಗಿ ಬೇರೂರಿರುವುದರಿಂದ ಗಂಭೀರ ಚರ್ಚೆ ನಡೆಸ ಬೇಕಾಗಿದೆ. ಪ್ರತಿಯೊಂದು ದೇಶವೂ ಕೆಲವೊಂದು ಸಾಮಾಜಿಕ ಪ್ರತ್ಯೇಕತೆಯನ್ನು ಹೊಂದಿರುತ್ತದೆ. ಭಾರತದ ಸನ್ನಿವೇಶದಲ್ಲಿ ಇದು ಲಿಂಗ ಸೂಕ್ಷ್ಮತೆಯೇ ಆಗಿದೆ. ಈ ಲಿಂಗ ಸೂಕ್ಷ್ಮ್ಮತೆಯು ಪುರುಷರು ತಮ್ಮನ್ನು ತಾವು ಶ್ರೇಷ್ಠರೆಂಬುದಾಗಿ ಭಾವಿಸಿಕೊಳ್ಳುವಂತೆ ಮಾಡುತ್ತದೆ. ಭಾರತೀಯ ಮಹಿಳೆಯರ ಬಹುತೇಕ ಸಮಸ್ಯೆಗಳು ಮೂಲಭೂತವಾಗಿ ಪಿತೃಪ್ರಧಾನ ಮೂಲದಿಂದ ಉಂಟಾಗಿರುವಂತಹದ್ದು. ಮಹಿಳೆಯ ಪ್ರಜನನ ಕಾರ್ಯ ಅತೀ ಪ್ರಮುಖವಾದ ಮತ್ತು ಸ್ವತ: ಆಕೆ ಸಂಪೂರ್ಣವಾಗಿ ನಿಯಂತ್ರಣ ಹೊಂದಿರಬೇಕಾದ ಅಂಶ. ಆದರೆ ಬಹುತೇಕ ಸಂದಭರ್ಗಳಲ್ಲಿ ಆಕೆಯ ಪ್ರಜನನ ಹಕ್ಕು ಇನ್ನೊಬ್ಬರಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಮಹಿಳೆಗೆ ಯಾವುದೇ ರೀತಿಯ ಆಯ್ಕೆ ಮತ್ತು ಸ್ವನಿಯಂತ್ರಣಕ್ಕೆ ಅವಕಾಶವಿರುವುದಿಲ್ಲ. ಮದುವೆ, ಮಕ್ಕಳ ಅಗತ್ಯತೆ ಮತ್ತು ಅಂತರವನ್ನು ನಿರ್ಧರಿಸುವಲ್ಲಿ ಮಹಿಳೆಯರ ಅಭಿಪ್ರಾಯಕ್ಕೆ ಯಾವುದೇ ಮನ್ನಣೆಯಿರುವುದಿಲ್ಲ, ಬದಲಾಗಿ ಗಂಡ ಮತ್ತು ಆತನ ಸಂಬಂಧಿಕರು ಆಕೆಯ ದೈಹಿಕ ಹಕ್ಕಿನ ಮೇಲೆ ಪಾರಮ್ಯ ಸಾಧಿಸುತ್ತಾರೆ. ಆರ್ಥಿಕ ವಿಚಾರಗಳಲ್ಲಂತೂ ಮಹಿಳೆಯರಿಗೆ ಯಾವುದೇ ಅಧಿಕಾರ ಮತ್ತು ನಿಯಂತ್ರಣವಿಲ್ಲದಾಗಿದೆ. ಪ್ರಸ್ತುತ ಮಹಿಳೆಯ ಸಮಸ್ಯೆ ಸಂಕೀರ್ಣ ಸ್ವರೂಪದಲ್ಲಿದ್ದು, ಹೊಸ ಆರ್ಥಿಕ ಮತ್ತು ಸಾಮಾಜಿಕ ಅಂಶಗಳು ಪ್ರಖರ ಪರಿಣಾಮವನ್ನು ಬೀರಿದೆ. ವೃತ್ತಿನಿರತ ಮಹಿಳೆಯರು ತಮ್ಮ ಉದ್ಯೋಗದ ರೂಪವನ್ನಾಧರಿಸಿ ಯಾವ ಸಮಯದಲ್ಲಿ ಮತ್ತು ಎಷ್ಟು ಸಂಖ್ಯೆಯ ಮಕ್ಕಳನ್ನು ಹೊಂದಬೇಕೆಂಬುದನ್ನು ಸಮಾಜೋ-ಆರ್ಥಿಕ ಸನ್ನಿವೇಶ ಒತ್ತಾಯಪೂರ್ವಕವಾಗಿ ನಿರ್ಧರಿಸುತ್ತದೆ. ಇತ್ತೀಚಿನ ಕೆಲವೊಂದು ಕಾರ್ಪೊರೇಟ್ ಸಂಸ್ಥೆಗಳು ತಮ್ಮಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳಾ ಉದ್ಯೋಗಿಗಳಿಗೆ ತಾಯ್ತನವನ್ನು ಮುಂದೂಡುವುದಕ್ಕೂ ಆರ್ಥಿಕ ಸವಲತ್ತನ್ನು ನೀಡುತ್ತಿದೆ.

ಖಂಡಿತವಾಗಿಯೂ ಕಳೆದು ಹೋದ ಕಾಲವನ್ನು ಬದಲಾಯಿಸುವುದು ಕಷ್ಟ. ಆದರೆ ನಮ್ಮ ಮುಂದಿರುವ ಭವಿಷ್ಯವನ್ನು ರಚನಾತ್ಮಕವಾಗಿ ಕಟ್ಟ ಬಹುದಾಗಿದೆ. ನಮ್ಮಲ್ಲಿ ಬಹುತೇಕರು ಮಹಿಳೆಯರನ್ನು ನಿಯಂತ್ರಿಸುವ ಮೂಲಕ ಸಂಸ್ಕಾರಯುತ ಸಂಸಾರ ಮತ್ತು ಸಮಾಜವನ್ನು ಕಟ್ಟಬಹುದೆಂಬ ತಪ್ಪುಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ನಾವೆಲ್ಲ ಸದೃಢವಾದ ಸಮಾಜವನ್ನು ಕಟ್ಟುವ ನೆಲೆಯಲ್ಲಿ ನಕಾರಾತ್ಮಕ ಧೋರಣೆ ತೊರೆದು ಸಮಗ್ರತೆಯೆಡೆಗೆ ನಡೆಯಬೇಕಿದೆ. ಸಮಾಜದ ಸಮಸ್ಯೆಗಳನ್ನು ವೈಚಾರಿಕ ಮತ್ತು ಮುನ್ನೆಲೆಗೆ ಪಥವಿಡುವ ದೃಷ್ಟಿಯಿಂದ ನೋಡಬೇಕಿದೆ. ನಾವೆಲ್ಲ ನಮ್ಮ ಜೀವನದ ಭಾಗವಾಗಿ ಬರುವ ಮಹಿಳೆಯ ಸ್ವರೂಪಗಳಾದ ತಾಯಿ, ಮಡದಿ ಮತ್ತು ಮಗಳನ್ನು ಸಮಾನತೆ ಮತ್ತು ಗೌರವದಿಂದ ಆಧರಿಸಲು ಆರಂಭಿಸಿದಲ್ಲಿ ಮಹಿಳೆಯೂ ಸದ್ಗುಣದ ಸಾಕಾರಮೂರ್ತಿಯಾಗಲು ಸಾಧ್ಯವಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...