Tuesday, October 20, 2015

ಎಲ್. ಹನಮಂತಯ್ಯನವರಿಗೆ ಬೆಳಗಾವಿಯ ಕನ್ನಡಪರ ಸಂಘಟನೆಗಳು ನೀಡಿದ ತಿರಗೇಟಿನ ಪತ್ರ


                                                                                                                                      20-10-2015

ಶ್ರೀ ಎಲ್.ಹಣಮಂತಯ್ಯ
ಅಧ್ಯಕ್ಷರು,
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ವಿಧಾನ ಸೌಧ
ಬೆಂಗಳೂರು
ವಿಷಯ : ದಿನಾಂಕ 19-10-2015 ರಂದು ತಾವು ಬೆಳಗಾವಿಯ
ಕನ್ನಡ ಸಂಘಟನೆಗಳ ಸಭೆಯಲ್ಲಿ ನೀಡಿದ ಹೇಳಿಕೆಯ ಕುರಿತು.


ಮಾನ್ಯರೇ,

ಗಡಿ ಭಾಗದಲ್ಲಿ ಕನ್ನಡದ ಸ್ಥಿತಿ ಗತಿಯ ಬಗ್ಗೆ ಕನ್ನಡ ಸಂಘಟನೆಗಳ ಜೊತೆಗೆ ಚರ್ಚಿಸಲು, ನಾವು ತಮಗೆ ದಿ. 7-10-2015 ರಂದು ನೀಡಿದ ಆಹ್ವಾನದ ಮೇರೆಗೆ, ದಿ. 19-10-2015 ರಂದು ಬೆಳಗಾವಿಗೆ ಭೆಟ್ಟಿ ನೀಡಿದ್ದಿರಿ. ಅಂದು ಮಧ್ಯಾಹ್ನ 12:15 ಕ್ಕೆ ಕನ್ನಡ ಸಂಘಟನೆಗಳ ಜೊತೆ ಸಭೆ ನಿಗದಿಯಾಗಿತ್ತು. ಕನ್ನಡ ನಾಡು, ನುಡಿ ಮತ್ತು ಗಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ನಾವೆಲ್ಲ ಅರ್ಧ ಗಂಟೆ ಮೊದಲೇ 11:45 ಕ್ಕೆ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದೆವು. ಆದರೆ ಒಂದು ತಾಸಿನವರೆಗೂ ಕಾದರೂ 12:45 ರ ವರೆಗೂ ತಾವು ಬರಲಿಲ್ಲ. ಅಷ್ಟೇ ಅಲ್ಲದೇ ಯಾವ ಅಧಿಕಾರಿಗಳೂ ಸಭೆಗೆ ಬಂದು ವಿಳಂಬವಾದ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆಯನ್ನೂ ಕೊಡಲಿಲ್ಲ. ಈ ಹಿನ್ನಲೆಯಲ್ಲಿ ನಾವು ಹತ್ತು ಹದಿನೈದು ಪ್ರಮುಖರು ಸಭೆಯಿಂದ ಹೊರಹೋಗಿದ್ದು ನಿಜ.

ಆದರೆ ಇಂದು ದಿ. 20 ರ ಮುಂಜಾನೆ ಕೆಲವು ಪತ್ರಿಕೆಗಳಲ್ಲಿ ನಿನ್ನೆಯ ಸಭೆಯಲ್ಲಿ ತಾವು ಆಡಿದರೆನ್ನಲಾದ ಹೇಳಿಕೆ ಪ್ರಕಟವಾಗಿದ್ದನ್ನು ನೋಡಿ ನಮಗೆ ಆಶ್ಚರ್ಯ ಮತ್ತು ಆಘಾತ ಉಂಟಾಗಿದೆ. “ಕನ್ನಡ ನಾಡು ನುಡಿಯ ಜಲದ ಬಗ್ಗೆ ಕಾಳಜಿ ಹೊಂದಿದವರು ಸಭೆಯಿಂದ ಎದ್ದು ಹೊರಗೆ ಹೋಗುತ್ತಿರಲಿಲ್ಲ” ಎಂಬ ತಮ್ಮ ಹೇಳಿಕೆ ಅತ್ಯಂತ ಅನುಚಿತ ಮತ್ತು ಅಯೋಗ್ಯತನದಿಂದ ಕೂಡಿದೆಯೆಂದು ವಿಷಾದದಿಂದಲೇ ಹೇಳಬೇಕಾಗಿದೆ.

ಕನ್ನಡ ನಾಡು ನುಡಿ ಗಡಿಯ ಬಗೆಗಿನ ಕಾಳಜಿಯನ್ನು ನಾವು ತಮ್ಮಿಂದ ಕಲಿಯಬೇಕಾಗಿಲ್ಲ. ಕಳೆದ 30 ವರ್ಷಗಳಿಂದ ಗಡಿ ಭಾಗದಲ್ಲಿ ಯಾವುದೇ ಫಲಾಫಲಗಳ ಅಪೇಕ್ಷೆಯಿಲ್ಲದೇ ನಿರಂತರವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ನಾವು ನಿಮ್ಮಂತೆ ಸರಕಾರದ ಸಂಬಳ ಪಡೆದು ಕನ್ನಡಾಭಿಮಾನವನ್ನು ತೋರಿಸುವ ವರ್ಗಕ್ಕೆ ಸೇರಿದವರಲ್ಲ. ಎಲ್ಲ ಸೌಕರ್ಯಗಳನ್ನು ಪಡೆದೂ ತಾವು ಬೆಳಗಾವಿಗೆ ಬಂದದ್ದು ನಾವು ಆಹ್ವಾನ ನೀಡಿದ ನಂತರವೇ ಎಂಬುದು ತಾವು ನೆನಪಿಸಕೊಳ್ಳಬೇಕು.

ಕಳೆದ ವರ್ಷ ತಾವು ಆಕಸ್ಮಿಕವಾಗಿ ಬೆಳಗಾವಿ ಜಿಲ್ಲೆಗೆ ಬಂದಾಗ ನಾವು ಕೆಲವರು ತಮ್ಮನ್ನು ಸರ್ಕಿಟ್ ಹೌಸ್‍ನಲ್ಲಿ ಭೆಟ್ಟಿಯಾಗಿದ್ದೆವು. ಒಂದೇ ವಾರದಲ್ಲಿ ಮುಖ್ಯಮಂತ್ರಿಗಳನ್ನು ಭೆಟ್ಟಿಯಾಗಿ ಗಡಿ ವಿವಾದ ಪ್ರಕರಣ ಸಂಬಂಧದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವದಾಗಿ ಹೇಳಿ ಹೋದವರು ಆಮೇಲೆ ತಮ್ಮ ಪತ್ತೆಯೇ ಇಲ್ಲಾ ! ಇಂತಹ ಪರಿಸ್ಥಿತಿಯಲ್ಲಿ ಸರಕಾರದ ಪರವಾಗಿ ಹಾಗೂ ಕನ್ನಡ ಪರ ಚಟುವಟಿಕೆಗಳಿಗಾಗಿಯೇ ರಚನೆಯಾಗಿ ಸಂಸ್ಥೆಯ ಅಧ್ಯಕ್ಷರಾಗಿ ತಾವು ಮಾಡಬೇಕಾದ ಕೆಲಸವನ್ನು ಮಾಡದಿರುವಾಗ ತಮ್ಮಿಂದ ನಾವು ಕನ್ನಡ ಕಾಳಜಿಯನ್ನು ಹೇಗೆ ಕಲಿಯಲು ಸಾಧ್ಯ?.
ನಿನ್ನೆಯ ಸಭೆಗೆ ಬೆಳಗಾವಿಯ ಅನೇಕ ಹಿರಿಯ ಸಾಹಿತಿಗಳು ಮತ್ತು ಹೋರಾಟಗಾರರಿಗೆ ಆಹ್ವಾನ ಬಂದಿರಲಿಲ್ಲ. ಆದರೂ ಅನೇಕರು ಪತ್ರಿಕೆಯಲ್ಲಿ ಸುದ್ದಿ ಓದಿ ಸಭೆಗೆ ಬಂದಿದ್ದರು. ತಮ್ಮ ವಿಪರೀತ ವಿಳಂಬದಿಂದ ಸಭೆಯಿಂದ ನಿರ್ಗಮಿಸಿದರು. ಇಂತವರಿಗೆ ಇಂದು ಪ್ರಕಟವಾದ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುವದು ತಿಳಿಯದೆ ಈ ಬಹಿರಂಗ ಪತ್ರವನ್ನು ಬರೆದಿದ್ದೇವೆ.
ವಂದನೆಗಳೊಂದಿಗೆ

ರಾಘವೇಂದ್ರ ಜೋಶಿ
ಅಶೋಕ ಚಂದರಗಿ
ರಮೇಶ ಸೊಂಟಕ್ಕಿ
ಶಂಕರ ಬಾಗೇವಾಡಿ
ದೀಪಕ ಗುಡಗನಟ್ಟಿ
ಬಾಬು ಸಂಗೋಡಿ
ರಾಜು ಕೋಲಾ
ಶಿವಪ್ಪ ಶಮರಂತ

ಪ್ರತಿ : ಶ್ರೀ ಸಿದ್ದರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ
ಶ್ರೀಮತಿ. ಉಮಾಶ್ರೀ ಸನ್ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು
ಶ್ರೀ ವ್ಹಿ.ಎಸ್. ಮಳೀಮಠ, ಅಧ್ಯಕ್ಷರು ಗಡಿ ಸಂರಕ್ಷಣಾ ಆಯೋಗ ಬೆಂಗಳೂರು
ಹಾಗೂ ಎಲ್ಲ ಮಾಧ್ಯಮ ಮಿತ್ರರಿಗೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...