Tuesday, October 27, 2015

ನೀನಾಸಂನಲ್ಲಿ ಕಂಡ ಜ್ಯೋತಿಬಾ ಫುಲೆಸನತಕುಮಾರ ಬೆಳಗಲಿ

ಜಾತ್ಯತೀತ ಭಾರತವನ್ನು ನಾಝೀಕರಣಗೊಳಿಸುವ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆದಿದೆ. ಉತ್ತರಪ್ರದೇಶದ ದಾದ್ರಿಯಲ್ಲಿ ದನದ ಮಾಂಸದ ನೆಪಮುಂದೆ ಮಾಡಿ ಅಮಾಯಕ ಮುಸ್ಲಿಂ ವ್ಯಕ್ತಿಯನ್ನು ಕೊಚ್ಚಿಕೊಂದು ಹಾಕಿದವರಿಗೆ ಪಶ್ಚಾತಾಪವಾಗುವುದು ಒತ್ತಟ್ಟಿಗಿರಲಿ ಈ ಕಗ್ಗೊಲೆಯನ್ನು ಸಮರ್ಥಿಸಲು ಪೈಪೋಟಿ ನಡೆದಿದೆ. ಆರೆಸ್ಸೆಸ್‌ನ ಮುಖಪತ್ರ ಪಾಂಚಜನ್ಯ ಈ ಹತ್ಯೆಯನ್ನು ಸಮರ್ಥಿಸಿಕೊಂಡಿದೆ. 

ಗೋಹತ್ಯೆ ಮಾಡಿದವರನ್ನು ವಧೆ ಮಾಡಬೇಕೆಂದು ವೇದಗಳಲ್ಲಿ ಹೇಳಲಾಗಿದೆ ಎಂದಿದೆ. ಮನುವಾದಿ ಫ್ಯಾಶಿಸ್ಟ್‌ನ ಗುರಿ ಬರೀ ಮುಸಲ್ಮಾನರು ಮಾತ್ರವಲ್ಲ, ಸಾಮಾಜಿಕ ನ್ಯಾಯಕ್ಕಾಗಿ ದನಿಯೆತ್ತಿರುವ ದಲಿತ ಹಿಂದುಳಿದವರು ಈ ಸೈತಾನರ ಗುರಿಯಾಗಿದ್ದಾರೆ. ಅಂತಲೇ ಹರ್ಯಾಣದಲ್ಲಿ ದಲಿತ ಕುಟುಂಬದ ಎಳೆ ಕಂದಮ್ಮಗಳನ್ನು ಇವರು ಕೊಚ್ಚಿಕೊಂದು ಹಾಕಿದರು.

 ಹತ್ಯೆಗೊಳಗಾದ ಈ ದಲಿತ ಮಕ್ಕಳನ್ನು ಬಿಜೆಪಿಯ ಕೇಂದ್ರ ಮಂತ್ರಿ ನಾಯಿಗೆ ಹೋಲಿಸಿದರು. ಕರ್ನಾಟಕದ ದಾವಣಗೆರೆಯಲ್ಲಿ ಅಂಬೇಡ್ಕರ್ ವಿಚಾರಗಳನ್ನಾಧರಿಸಿ ಪುಸ್ತಕ ಬರೆದ ದಲಿತ ಯುವಕ ಉಚ್ಚಂಗಿ ಪ್ರಸಾದ್ ಮೇಲೆ ಹಲ್ಲೆ ನಡೆದಿದೆ. ಅವರ ಬರೆಯುವ ಕೈಗೆ ಗಾಯಗೊಳಿಸಲಾಗಿದೆ. ಈ ಗೂಂಡಾಗಿರಿಯನ್ನು ಸಮರ್ಥಿಸಿಕೊಳ್ಳುವ ನೀಚರು ಸಾಮಾಜಿಕ ಜಾಲತಾಣಗಳಲ್ಲಿ ವಾಂತಿ ಮಾಡಿಕೊಳ್ಳತೊಡಗಿದ್ದಾರೆ. ದೇಶದಲ್ಲಿ ಇಷ್ಟೆಲ್ಲ ನಡೆಯುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚಿ ಮಾತಾಡುತ್ತಿಲ್ಲ. ಒಂದೆಡೆ ಸಾಕ್ಷಿ ಮಹಾರಾಜ, ಆದಿತ್ಯನಾಥ, ಸಾಧ್ವಿ ಪ್ರಾಚಿಯಂಥವರಿಗೆ ಒದರಲು ಬಿಟ್ಟು ಇನ್ನೊಂದೆಡೆ ರಾಜನಾಥ್ ಸಿಂಗ್ ಮೂಲಕ ‘‘ಹಾಗೆ ಮಾತಾಡಬಾರದು’’ ಎಂದು ತೋರಿಕೆಯ ಹೇಳಿಕೆ ನೀಡಿ ಜನರ ಕಣ್ಣಿಗೆ ಮಣ್ಣೆರಚುವ ಯತ್ನ ನಡೆದಿದೆ. 

ಭಾರತದ ಫ್ಯಾಶಿಸಂ ಜರ್ಮನಿ ಮತ್ತು ಇಟಲಿಯ ಫ್ಯಾಶಿಸಂನಂಥಲ್ಲ. ಇದು ಅತ್ಯಂತ ನಾಜೂಕಾಗಿ, ನಯವಾಗಿ ದೇಶವನ್ನು ಆಕ್ರಮಿಸುತ್ತಿದೆ. ಇದಕ್ಕೆ ಒಂದೇ ಮುಖವಿಲ್ಲ. ಸಾವಿರ ಮುಖಗಳಿವೆ. ಲಕ್ಷಾಂತರ ಹಲ್ಲುಗಳಿವೆ. ಪ್ರಸಂಗ ಬಂದರೆ ವಾಜಪೇಯಿಯಂಥ ಮುಖವಾಡಗಳಿವೆ. ಒಂದೆಡೆ ಪಾಂಚಜನ್ಯದಲ್ಲಿ ದಾದ್ರಿ ಹತ್ಯೆಯನ್ನು ಸಮರ್ಥಿಸುವ ಲೇಖನ ಪ್ರಕಟಿಸಿ ಮೈಮೇಲೆ ಬಂದಾಗ ಅದಕ್ಕೂ ತನಗೂ ಸಂಬಂಧವಿಲ್ಲ ಎಂದು ಹಾರಿಸಿಕೊಳ್ಳುವ ಹುನ್ನಾರ ನಡೆದಿದೆ. 

 ದೇಶದಲ್ಲಿ ಇಷ್ಟೆಲ್ಲ ನಡೆಯುತ್ತಿರುವಾಗ ಇತ್ತೀಚೆಗೆ (ಅಕ್ಟೋಬರ್ 8ರಿಂದ 21) ಸಾಗರ ಸಮೀಪದ ಹೆಗ್ಗೋಡಿನ ನೀನಾಸಂನ ಸಂಸ್ಕೃತಿ ಶಿಬಿರದಲ್ಲಿ ನಾನು ಪಾಲ್ಗೊಂಡಿದ್ದೆ. ಈ ಬಾರಿ ‘‘ಚಿಂತನೆ-ಪ್ರತಿ ಚಿಂತನೆ’’ ವಿಷಯದ ಮೇಲೆ ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ದೇಶದ ಹೆಸರಾಂತ ಚಿಂತಕರು ಪಾಲ್ಗೊಂಡಿದ್ದರು. ಹೆಗ್ಗೋಡು ರಂಗಗ್ರಾಮವೆಂದೇ ಹೆಸರಾಗಿದೆ. ಈ ಪುಟ್ಟ ಹಳ್ಳಿಯ ಪ್ರತಿ ಮನೆಯಲ್ಲೂ ರಂಗಕರ್ಮಿಗಳಿದ್ದಾರೆ. ಇದರ ಶ್ರೇಯಸ್ಸು ಕೆ.ವಿ.ಸುಬ್ಬಣ್ಣ ಅವರಿಗೆ ಸಲ್ಲಬೇಕು. ಸಮಾಜವಾದಿ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಸುಬ್ಬಣ್ಣ ಅವರು ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡು ಕಟ್ಟಿದ ನೀನಾಸಂ ಪಂಜನ್ನು ಕೆ.ವಿ. ಅಕ್ಷರ ಮತ್ತು ಗೆಳೆಯರು ಎತ್ತಿ ಹಿಡಿದಿದ್ದಾರೆ. 

ಈ ಬಾರಿಯ ಚಿಂತನ ಶಿಬಿರವನ್ನು ಉದ್ಘಾಟಿಸಿದ ಕವಿ ಎಚ್.ಎಸ್.ವೆಂಕಟೇಶಮೂರ್ತಿ ತದ್ವಿರುದ್ಧ ಚಿಂತನೆಗಳ ಬಗ್ಗೆ ಪರಸ್ಪರ ಮಾತುಕತೆ, ಚರ್ಚೆ, ಸಂವಾದ ನಡೆಸುವ ಮೂಲಕ ಗೌರವಿಸುವುದು ಕನ್ನಡ ಸಂಸ್ಕೃತಿಯಾಗಿದೆ. ಆದರೆ ಈ ಸಂಸ್ಕೃತಿಗೆ ತದ್ವಿರುದ್ಧವಾದ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ‘‘ದೇವರ ಕುರಿತು ಸಂವಾದ ವಾಗ್ವಾದ ನಡೆಸಿದ ದೇವರಿಗೆ ಸವಾಲು ಹಾಕಿದ ಸಾಂಸ್ಕೃತಿಕ ಪರಂಪರೆ ನಮ್ಮದು. ಪುರಂದರ ದಾಸರಲ್ಲಿ ಭಕ್ತಿಯ ಜೊತೆ ದೇವರನ್ನು ಪ್ರಶ್ನಿಸುವ ಗುಣವೂ ಇತ್ತು. ನಾನು ಎಷ್ಟು ದೊಡ್ಡವನೋ ನನ್ನ ದೇವರು ಅಷ್ಟೇ ದೊಡ್ಡವನು ಎಂದು ಶಿವರಾಮ ಕಾರಂತರು ಹೇಳುತ್ತಿದ್ದರು. ‘ದೇವರು’ ಪುಸ್ತಕ ಬರೆದ ಎ.ಎನ್.ಮೂರ್ತಿರಾಯರು ದೇವರ ಅಸ್ತಿತ್ವವನ್ನೇ ಪ್ರಶ್ನಿಸಿದರು’’ ಎಂದು ಎಚ್‌ಎಸ್‌ವಿ ಹೇಳಿದರು. ‘‘ಚಿಂತನೆ ಇದ್ದಲ್ಲಿ ಪ್ರತಿ ಚಿಂತನೆ ಇರುತ್ತದೆ. ಅದು ನಮಗೆ ಒಪ್ಪಿಗೆ ಆಗದೆ ಇರಬಹುದು. ಆದರೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವನ ಬಾಯಿ ಮುಚ್ಚಿಸಲಾಗದು. ವೈಚಾರಿಕೆ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಸಹಿಸಿಕೊಳ್ಳುವ, ಸ್ವೀಕರಿಸುವ, ಸಂವಾದಿಸುವ ಗುಣ ಹೊಸ ತಲೆಮಾರಿನಲ್ಲಿ ಬರಬೇಕು’’ ಎಂದು ಅವರು ಹೇಳಿದರು. 

ಈ ಶಿಬಿರದ ಬಗ್ಗೆ ಯಾಕೆ ಪ್ರಸ್ತಾಪಿಸಿದೆನೆಂದರೆ ರಾಜ್ಯದ ವಿವಿಧ ಭಾಗಗಳಿಂದ ಈ ಶಿಬಿರದಲ್ಲಿ 250ಕ್ಕೂ ಹೆಚ್ಚು ಪ್ರತಿನಿಧಿಗಳು ಬಂದಿದ್ದರು. ಅವರ್ಯಾರೂ ಒಂದೇ ಜಾತಿ, ಮತಕ್ಕೆ ಸೇರಿದವರಲ್ಲ. ಆದರೆ ಯಾರಲ್ಲೂ ಜಾತಿ ಮತದ ಸೋಂಕನ್ನು ನಾನು ಕಾಣಲಿಲ್ಲ. ಇಡೀ ದೇಶದ ತುಂಬ ಕೋಮುವ್ಯಾಧಿ ಹಬ್ಬುತ್ತಿರುವ ಈ ದಿನಗಳಲ್ಲಿ ನೀನಾಸಂನಂಥ ರಂಗಕೇಂದ್ರದಲ್ಲಿ ಜಾತಿಮತವನ್ನು ಮೀರಿದ ಕಲಾಭಿವ್ಯಕ್ತಿಯನ್ನು ನಾನು ಕಂಡೆ. ಐದೂ ದಿನದ ಶಿಬಿರದಲ್ಲಿ ಪಾಲ್ಗೊಂಡ ಗಣೇಶ್ ದೇವಿ, ಸುಂದರ ಸಾರುಕೈ, ವಿವೇಕ ಶಾನಭಾಗ್, ಶಿವಪ್ರಸಾದ, ಪುಟ್ಟಯ್ಯ ಇವರೆಲ್ಲ ಹೆಚ್ಚುತ್ತಿರುವ ಕೋಮುವ್ಯಾಧಿ ಬಗ್ಗೆ ಆತಂಕಗೊಂಡಿದ್ದರು. 

ಪ್ರತಿನಿತ್ಯ ಬೆಳಗಿನ ಜಾವ 7 ಗಂಟೆಗೆ ನಾಡಿನ ನಾನಾ ಚಿಂತಕರು ಮುಕ್ತವಾಗಿ ಮಾತಾಡಲು ಸಿಗುತ್ತಿದ್ದರು. ನನಗೆ ಪ್ರತಿನಿತ್ಯವೂ ಸಿಗುತ್ತಿದ್ದ ವಿವೇಕ ಶಾನಭಾಗ್ ‘‘ದೇಶದ ಇಂದಿನ ವಿದ್ಯಮಾನಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದರು. ನಾನು ಅಲ್ಲಿದ್ದಾಗಲೇ ಶಿಬಿರಕ್ಕೆ ಬಂದಿದ್ದ ಗುಜರಾತಿ ಲೇಖಕ ಗಣೇಶ್ ದೇವಿಯವರು ಕಲಬುರ್ಗಿ ಹತ್ಯೆಯನ್ನು ಖಂಡಿಸಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಾಪಸು ಕೊಡುವುದಾಗಿ ಹೇಳಿದರು. 

ನೀನಾಸಂನಲ್ಲಿ ಇದ್ದ ಐದು ದಿನಗಳಲ್ಲಿ ನಾನೊಂದು ಅಪರೂಪದ ನಾಟಕವನ್ನು ನೋಡಿದೆ. ಈ ದೇಶದ ಹೆಸರಾಂತ ಸಮಾಜ ಸುಧಾರಕ ಜ್ಯೋತಿಭಾ ಫುಲೆ ಅವರ ಬದುಕನ್ನು ಅನಾವರಣಗೊಳಿಸುವ ಮರಾಠಿಯ ಪ್ರೊ.ಜಿ.ಪಿ.ದೇಶಪಾಂಡೆ ಅವರ ನಾಟಕವನ್ನು ಡಾ.ಡಿ.ಎಸ್.ಚೌಗಲೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಅನಿಲಪೇಠೆ ನಿರ್ದೇಶಿಸಿದ್ದಾರೆ. ಇತ್ತೀಚಿನ ಸಂದರ್ಭಕ್ಕೆ ಅತ್ಯಂತ ಸೂಕ್ತವಾದ ಈ ನಾಟಕವನ್ನು ಕನ್ನಡದ ರಂಗಭೂಮಿಗೆ ತಂದವರು ‘ಜನಮನದಾಟ’ ತಂಡದ ಡಾ.ಎಂ.ಗಣೇಶ್. ಬೆಂಗಳೂರು ಸಮೀಪದ ಹೊಸಕೋಟೆಯ ಈ ಗಣೇಶ್ ಕರ್ನಾಟಕ ಕಂಡ ಅಪರೂಪದ ನಿರ್ದೇಶಕ. ಈ ಹಿಂದೆ ಸಿದ್ದಲಿಂಗಯ್ಯನವರ ‘ಊರುಕೇರಿ’ ನಾಟಕವನ್ನು ಇವರು ಅತ್ಯಂತ ಪರಿಣಾಮಕಾರಿಯಾಗಿ ರಂಗಕ್ಕೆ ತಂದಿದ್ದರು. ಇಂಥ ಗಣೇಶ್ ನಿರ್ದೇಶಿಸಿದ ಈ ನಾಟಕದಲ್ಲಿ ಜ್ಯೋತಿಬಾ ಫುಲೆ ಪಾತ್ರಕ್ಕೆ ಜೀವ ನೀಡಿದವರು ನಮ್ಮ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮದ ಶಕೀಲ್ ಅಹ್ಮದ್ ಮುಲ್ಲಾ. ಇನ್ನು ಮೂವತ್ತರೊಳಗಿನ ಈ ತರುಣನ ಅಭಿನಯ ಕಂಡು ನಾನು ದಂಗುಬಡಿದು ಕುಳಿತೆ. ನೀನಾಸಂನಲ್ಲೆ ರಂಗ ಶಿಕ್ಷಣ ಪಡೆದ ಈ ಶಕೀಲ ಅಹ್ಮದ್ ಜೊತೆ ಸಾವಿತ್ರಿ ಬಾಯಿ ಪಾತ್ರ ನಿರ್ವಹಿಸಿದ ಸಂಧ್ಯಾ ಅರಕೆರೆ ಅಭಿನಯ ಕೂಡ ಪರಿಣಾಮಕಾರಿಯಾಗಿದೆ. 

ಹದಿನೆಂಟನೆ ಶತಮಾನದ ಕೊನೆಯಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಮಹಿಳೆಯರಿಗೆ ಅಸ್ಪಶ್ಯರಿಗೆ ಅಕ್ಷರ ಕಲಿಸಲು ಪಟ್ಟ ಪಡಿಪಾಟಲು ಚರಿತ್ರೆಯಲ್ಲಿ ದಾಖಲಾಗಿದೆ. ಲೋಕಮಾನ್ಯರೆಂದು ಕರೆಯಲ್ಪಡುತ್ತಿದ್ದ ಬಾಲಗಂಗಾಧರ ತಿಲಕರಿಂದ ಹಿಡಿದು ಸಕಲ ಸನಾತನವಾದಿಗಳಿಂದ ಫುಲೆ ದಂಪತಿ ನಾನಾ ರೀತಿಯ ಚಿತ್ರಹಿಂಸೆ ಅನುಭವಿಸಿದರು. ಜ್ಯೋತಿಬಾ ಫುಲೆ ಪಾತ್ರಕ್ಕೆ ನಮ್ಮ ಶಕೀಲ ಅಹ್ಮದ್ ಮುಲ್ಲಾ ಜೀವ ತುಂಬಿದ್ದಾರೆ. ರಂಗದ ಮೇಲೆ ಇವರನ್ನು ನೋಡಿದರೆ ಸಾಕ್ಷಾತ್ ಜ್ಯೋತಿಬಾ ಫುಲೆಯನ್ನು ನೋಡಿದಂತಾಯಿತು. ಶಕೀಲ್ ಪ್ಯಾರೀಸ್ ವಿದ್ಯಾರ್ಥಿಗಳಿಗೆ ರಂಗಭೂಮಿಯ ಪಾಠ ಮಾಡಲು ಅಕ್ಟೋಬರ್‌ನಲ್ಲಿ ಪ್ಯಾರೀಸ್‌ಗೆ ಹೋಗಬೇಕಾಗಿತ್ತು. ಆದರೆ ‘ಶಕೀಲ್ ಅಹ್ಮದ್’ ಎಂಬ ಅವರ ಹೆಸರು ಪ್ರಯಾಣಕ್ಕೆ ಅಡ್ಡಿಯಾಯಿತು. ಈ ಹೆಸರನ್ನು ನೋಡಿ ವೀಸಾ ಕೊಡಬೇಕಾದವರು ಸಕಾಲಕ್ಕೆ ಕೊಡಲಿಲ್ಲ. ಹೀಗಾಗಿ ಅಕ್ಟೋಬರ್‌ನಲ್ಲಿ ಅವಕಾಶ ತಪ್ಪಿತು. ಮಾರ್ಚ್‌ನಲ್ಲಿ ಅವರು ಪ್ಯಾರೀಸ್‌ಗೆ ಹೊರಟಿದ್ದಾರೆ. 

 ಏನೋ ಬರೆಯಲು ಹೋಗಿ ಎಲ್ಲೋ ಬಂದು ನಿಂತೆ. ಒಟ್ಟಾರೆ ನೀನಾಸಂನಂಥ ಸಾಂಸ್ಕೃತಿಕ ಕೇಂದ್ರಗಳ ಅಗತ್ಯವೂ ಈಗ ಇದೆ. ಫ್ಯಾಶಿಸ್ಟ್ ಶಕ್ತಿಗಳಿಗೆ ಪರ್ಯಾಯವಾದ ಸಂಸ್ಕೃತಿಯೊಂದನ್ನು, ಸಂವಾದ ಸಂಸ್ಕೃತಿಯನ್ನು ನೀನಾಸಂ ಮಾಡುತ್ತಿದೆ. ನೀನಾಸಂ ಅಂದರೆ ನೀಲಕಂಠೇಶ್ವರ ನಾಟ್ಯ ಸಂಘ. 1949ರಲ್ಲಿ ಹೆಗ್ಗೋಡಿನ ಹಳ್ಳಿಯ ಜನ ಕಟ್ಟಿದ ಈ ನಾಟ್ಯ ಸಂಘಕ್ಕೆ ಸುಬ್ಬಣ್ಣ ಹೊಸರೂಪ ನೀಡಿದರು. ಭಾರತವನ್ನು ಹಿಟ್ಲರೀಕರಣಗೊಳಿಸಲು ಹೊರಟಿರುವ ಕರಾಳಶಕ್ತಿಗಳಿಗೆ ಸಾಂಸ್ಕೃತಿಕ ಪ್ರತಿರೋಧ ಒಡ್ಡುವುದು ಇಂದಿನ ಅಗತ್ಯವಾಗಿದೆ. ರಾಜಕೀಯ ಪ್ರತಿರೋಧ ವಿಫಲಗೊಂಡಲ್ಲಿ ಸಾಂಸ್ಕೃತಿಕ ಪ್ರತಿರೋಧ ಯಶಸ್ವಿಯಾಗುತ್ತದೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...