Monday, October 12, 2015

ಮನುಷ್ಯತ್ವವೇ ನಾಶವಾಗುವ ಮುನ್ನ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ
ಮನುಷ್ಯತ್ವವೇ ನಾಶವಾಗುವ ಮುನ್ನ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ


ಇದೇ ಸೆಪ್ಟಂಬರ್ 28ರಂದು ಉತ್ತರ ಪ್ರದೇಶದ ಬಿಸಾಡಾ ಗ್ರಾಮದಲ್ಲಿ ಮನೆಯ ಫ್ರಿಜ್‌ನೊಳಗೆ ಮಾಂಸ ಇದ್ದ ಕಾರಣಕ್ಕಾಗಿ ಮುಹಮ್ಮದ್ ಅಖ್ಲಾಕ್ ಸೈಫಿ ಎಂಬ 50 ವರ್ಷ ವಯಸ್ಸಿನ ಮುಸ್ಲಿಮ್ ವ್ಯಕ್ತಿಯನ್ನು ಅತ್ಯಂತ ಬರ್ಬರವಾಗಿ ಕೊಂದುಹಾಕಲಾಯಿತು. ಅಖ್ಲಾಕ್ ಮನೆಯಲ್ಲಿ ದನದ ಮಾಂಸವಿದೆ ಎಂದು ದೇವಾಲಯದ ಮೈಕ್ ಮೂಲಕ ಪ್ರಸಾರ ಮಾಡಿದ ಕೆಲವೇ ನಿಮಿಷಗಳಲ್ಲಿ ಸುಮಾರು 200 ಜನರ ಗುಂಪು ಅವರ ಮನೆಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಮಾಡಿ, ಅಖ್ಲಾಕ್‌ರನ್ನು ಅವರ ಹೊಲಿಗೆ ಮೆಷಿನ್‌ನಿಂದಲೇ ಜಜ್ಜಿ ಕೊಂದು ಹಾಕಿದರು. ದುರುಳರು ಅವರ ತಾಯಿ ಅಸ್ಗರಿಯವರ ಮೇಲೆ ಹಲ್ಲೆಗೈದು ಕಿರಿಯ ಮಗ ದಾನಿಶ್‌ಗೂ ಮಾರಣಾಂತಿಕವಾಗಿ ಹೊಡೆದರು. ‘‘ನಮ್ಮ ಮನೆಯಲ್ಲಿದ್ದುದು ಮಟನ್, ಬೀಫ್ ಅಲ್ಲ ಎಂದು ಖಾತ್ರಿಯಾದರೆ ನನ್ನ ತಂದೆ ಮರಳಿ ಬರುತ್ತಾರೆಯೇ?’’ ಎಂಬ ಅಖ್ಲಾಕ್ ಅವರ ಮಗಳು ಶಾಹಿಸ್ತಾಳ ಪ್ರಶ್ನೆಗೆ ಉತ್ತರ ಕೊಡುವವರಾರು? ಹತ್ಯೆಯ ನಂತರ ಸಂಘಪರಿವಾರದ ವಿವಿಧ ಮುಖಂಡರ ಮಾತುಗಳಲ್ಲಿ ಪಶ್ಚಾತ್ತಾಪದ ಮಾತು ಬಿಡಿ, ವಿಷಾದದ ಛಾಯೆಯೂ ಇಲ್ಲ. ಕೆಲವರಂತೂ ಇಂತಹ ಕೊಲೆಗಳು ಸಮರ್ಥನೀಯ ಎಂಬರ್ಥದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಏನು ಮಾಡೋಣ, ಶಾಖೆಗಳಲ್ಲಿ ಅವರು ಪಡೆದಿರುವ ತರಬೇತಿಯೇ ಹಾಗಿದೆ. ಬರೀ ದ್ವೇಷ ತುಂಬಿರುವ ತೊಳೆದ ಮಿದುಳುಗಳು ಅವು.

ಸೆಪ್ಟಂಬರ್ 31ರಂದು ಅದೇ ರಾಜ್ಯದ ಬಿಲಗಾಂವ್ ಗ್ರಾಮದಲ್ಲಿ ಚಿಮ್ಮ ಎಂಬ 90 ವರ್ಷ ವಯಸ್ಸಿನ ದಲಿತ ಅಲ್ಲಿನ ಮೈದಾನಿ ಬಾಬಾ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಾಗ ಸಾರ್ವಜನಿಕರ ಎದುರಿನಲ್ಲೇ ಅವರ ತಲೆಗೆ ಪಿಕ್ಕಾಸಿನಿಂದ ಹೊಡೆದು, ಸೀಮೆ ಎಣ್ಣೆ ಸುರಿದು ಸುಟ್ಟು ಹಾಕಲಾಯಿತು. ಜಾತಿ ಹೆಸರಿನಲ್ಲಿ ನಡೆದಿರುವ ಈ ಕಗ್ಗೊಲೆ ದೇಶದ ಪ್ರತಿಯೊಬ್ಬ ನಾಗರಿಕನನ್ನೂ ತಲೆತಗ್ಗಿಸುವಂತೆ ಮಾಡಿದೆ. ಎಲ್ಲದರಲ್ಲೂ ಮೇಲು ಕೀಳು, ಮಡಿ ಮೈಲಿಗೆ ಎಂದು ಭೇದ ಕಲ್ಪಿಸಿ ಇಂತಹ ಅಮಾನುಷ ಕೃತ್ಯಗಳಿಗೆ ಇಂಬುಗೊಡುವ ಜಾತಿಪದ್ಧತಿಯನ್ನು ಇನ್ನೂ ಜೀವಂತವಾಗಿಟ್ಟಿರುವುದು ನಾಚಿಕೆಗೇಡಿನ ಸಂಗತಿ. ಆದರೆ ಸಂಘಪರಿವಾರಿಗರು ಯಾಕೆ ವೌನ ವಹಿಸಿದ್ದಾರೆಂದು ಅರ್ಥ ಮಾಡಿಕೊಳ್ಳಲು ಕಷ್ಟವಿಲ್ಲ. ಈ ಹಿಂದೆ ದಲಿತರ ಸಾಮೂಹಿಕ ಹತ್ಯೆಗಳನ್ನು ನಡೆಸಿದವರು ಮೇಲ್ಜಾತಿಯ ರಣವೀರ ಸೇನೆಯವರಾಗಿದ್ದರೆಂದು ಕೋಬ್ರಾಪೋಸ್ಟ್‌ನ ಕುಟುಕು ಕಾರ್ಯಾಚರಣೆಯೊಂದು ತಿಳಿಸಿದೆ. ಮಾತ್ರವಲ್ಲ, ರಣವೀರ ಸೇನೆಗೆ ಕುಮ್ಮಕ್ಕು ನೀಡಿದವರು ಬಿಜೆಪಿ ಮತ್ತು ಜೆಡಿಯು ಪಕ್ಷಗಳ ಕೆಲವು ನಾಯಕರು ಎಂದೂ ಹೇಳಿದೆ. ಧರ್ಮ ಮತ್ತು ಜಾತಿಯ ಕಾರಣಕ್ಕಾಗಿ ನಡೆದಿರುವ ಇವೆರಡೂ ಕಗ್ಗೊಲೆಗಳನ್ನು ವೇದಿಕೆಯು ಅತ್ಯಂತ ಕಟುವಾಗಿ ಖಂಡಿಸುತ್ತದೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸುತ್ತದೆ.

ಕೋಬ್ರಾಪೋಸ್ಟ್‌ನ ಇತ್ತೀಚಿನ ಕುಟುಕು ಕಾರ್ಯಾಚರಣೆ ‘‘ಆಪರೇಷನ್ ಜೂಲಿಯೆಟ್’’ ಕೆಲವು ಭಯಾನಕ ಸತ್ಯಗಳನ್ನು ಹೊರಗೆಡವಿದೆ. ಪೊಲೀಸ್ ಇಲಾಖೆಯಲ್ಲಿ ಶೇ.60ರಷ್ಟು ಆರೆಸ್ಸೆಸ್ ಹಿನ್ನೆಲೆಯ ಕಾನ್‌ಸ್ಟೇಬಲ್‌ಗಳಿದ್ದಾರೆಂದು ಓರ್ವ ಬಿಜೆಪಿ ಎಂಎಲ್‌ಸಿಯೇ ಬಾಯ್ಬಿಟ್ಟಿದ್ದಾರೆ. ಪೊಲೀಸ್ ಇಲಾಖೆ ಕೇಸರೀಕರಣ ಆಗಿರುವ ಬಗ್ಗೆ ವೇದಿಕೆಯು ಕಳೆದು ಕೆಲವು ವರ್ಷಗಳಿಂದ ಹೇಳುತ್ತಾ ಬಂದಿರುವುದು ನಿಜವೆಂಬುದು ಈ ಮೂಲಕ ಸಾಬೀತಾಗಿದೆ. ‘‘ಲವ್ ಜಿಹಾದ್’’ ಎಂಬುದು ಸಂಘಪರಿವಾರವು ಹಣೆದಿರುವ ವ್ಯವಸ್ಥಿತ ಮುಸ್ಲಿಂ ವಿರೋಧಿ ಷಡ್ಯಂತ್ರವೆಂಬ ಸಂಗತಿಯೂ ಬಟಾಬಯಲಾಗಿದೆ. ಅಂತಧರ್ಮಿಯ ವಿವಾಹಗಳನ್ನು ಬಲಪ್ರಯೋಗದ ಮೂಲಕ ತಡೆಯುವ, ಬೇರೊಂದು ಧರ್ಮದ ಯುವಕನನ್ನು ಪ್ರೀತಿಸಿದ ಮಗಳನ್ನೇ ಕೊಂದ ತಂದೆಗೆ ಬೆಂಬಲ ನೀಡುವ ಇಂಥವರಲ್ಲಿ ಮನುಷ್ಯತ್ವ ಇದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ. ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತವಾಗಿ ಕೇಸರೀಕರಣಕ್ಕೆ ತುತ್ತಾಗಿರುವ ಇಡೀ ಪೊಲೀಸ್ ವ್ಯವಸ್ಥೆಯ ಶುದ್ಧೀಕರಣ ಮಾಡಬೇಕೆಂದು ವೇದಿಕೆಯು ಒತ್ತಾಯಿಸುತ್ತದೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನ ಜಾತಿ ಮತ ಭೇದವಿಲ್ಲದೆ ದೇಶದ ಪ್ರಜೆಗಳಿಗೆ ನೀಡಿರುವ ಸಮಾನತೆ, ಸ್ವಾತಂತ್ರ ಮತ್ತು ಕಾನೂನಿನ ರಕ್ಷಣೆಯ ಭರವಸೆಗಳು ಅಲ್ಪಸಂಖ್ಯಾತರು ಮತ್ತು ದಲಿತರ ಮಟ್ಟಿಗೆ ಒಂದು ಕ್ರೂರ ಅಣಕವಾಗಿ ಪರಿಣಮಿಸಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಂತೂ ದೇಶಾದ್ಯಂತ ಅಸಹನೆಯ ಮಟ್ಟ ವಿಪರೀತ ಏರಿದೆ. ಎತ್ತ ನೋಡಿದರೂ ದ್ವೇಷ ಮತ್ತು ಹಿಂಸೆ ವಿಜೃಂಭಿಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲ ಪೈಶಾಚಿಕ ಮತ್ತು ಬೀಭತ್ಸ ಕೃತ್ಯಗಳ ವಿರುದ್ಧ ದನಿಯೆತ್ತದಿದ್ದರೆ ನಮ್ಮ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಲೇ ಸಾಗುತ್ತೇವೆ. ಕೊನೆಯಲ್ಲಿ ನಮ್ಮಿಳಗಿನ ಮನುಷ್ಯತ್ವವೇ ನಾಶವಾಗುವ ಮೊದಲು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ.

-ಸುರೇಶ್ ಭಟ್ ಬಾಕ್ರಬೈಲು, 
ಅಲಿ ಹಸನ್, 
ಇಸ್ಮತ್ ಫಜೀರ್, 
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ದ.ಕ. ಜಿಲ್ಲೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...