Sunday, October 11, 2015

ಹೇಮಾ ಪಟ್ಟಣಶೆಟ್ಟಿ ಎರಡು ಕವಿತೆಗಳುಚಿಕಿತ್ಸೆತಮ್ಮ ಸಿಲುಬೆ ತಾವೆ ಹೊತ್ತು ನಡೆದವರ
ನೋಡಿರಬಹುದು ನೀವು ತಿಳಿದಿರಬಹುದು
ತನ್ನ ಹೆಣವ ತಾನೆ ಹೊತ್ತು ನಡೆದವನ
ಕಂಡಿರುವಿರಾ ನೀವು ಕಲ್ಪಿಸಬಲ್ಲಿರಾ?

ಪರರ ಕೊಂದು ಪಶ್ಚಾತ್ತಾಪದಲಿ ಬೆಂದು
ಬದುಕ-ಬಯಸುವುದು ಹೊಸತಲ್ಲ
ತನ್ನ ಆತ್ಮಹತ್ಯೆ ನಿರ್ಧರಿಸಿ ತಾನೆ
ತನು ಮನಕೆ ಎರವಾದರೆಲ್ಲಿ ಮುಕ್ತಿ?

ಸ್ನೇಹ ಪ್ರೇಮ ವಂಚಿಸಿ ಮತ್ತೆ
ಹೊಸ ಬಾಳ ಬಟ್ಟೆ ನೆಯ್ದವರಿರಬಹುದು
ಹೆತ್ತ ತಾಯಿಯನೆ ಕೊಂದು ತಿಂದು
ಅಟ್ಟಹಾಸದಿ ಮೆರೆವವರ ಕಂಡಿದ್ದೀರಾ?

ನೋಡಿ, ನೆಲದಾಯಿ ಮೇಲಿನ ಅತ್ಯಾಚಾರ
ಅನುದಿನ ಅಗೆದು ಬಗೆದು ಜೀವಜಲ
ಉಣಿಸಿ ವಿಷ ಕಾಯವಿಡೀ ಗಾಯ
ಬಂಜೆತನದ ನಂಜಿನ ಕೊನೆ ಕಾಣುತ್ತಿಲ್ಲವೇ?

ಇದ ಮೀರಿದ ತಾಯ್ಗಂಡತನ ಬೇರುಂಟೇ?
ನಾವೆ ಯೋಚಿಸಬೇಕು ನಾವೆ ಯೋಜಿಸಬೇಕು
ತಾಯ ಕಾಯಬೇಕು ಉತ್ತಿ ಬಿತ್ತಿ ಹೊಸ ಪ್ರಾಣ
ನಮ್ಮ ಹೆಣ ನಾವೆ ಹೊರುವುದು ಬೇಡ.
***


೨ 
ಅ ಪೂರ್ವಪೂರ್ವದಲ್ಲಿ ಸೂರ‍್ಯ
ಕಣ್ಬಿಟ್ಟು ಮೈ ಮುರಿದು
ಆಕಳಿಸುವಷ್ಟರಲೆ ಅವಸರಿಸಿ
ತನ್ನ ಪ್ರಾತರ್ವಿಧಿ ಮುಗಿಸಿ
ವಸುಂಧರೆ ಒಲೆ
ಪುಟಿ ಮಾಡಿರುತ್ತಾಳೆ.

ಸೂರ‍್ಯನಿಗೆ ಬೆಳಗಾಗಿ ಮೇಲೆದ್ದು
ಎದುರು ಕಂಡವರಿಗೆಲ್ಲ ’ಹಲೋ’
’ಹಲೋ’ ಹೇಳುವಷ್ಟರಲ್ಲಿ
ಗಂಡ ಮಕ್ಕಳು ಮನೆಗಾಗಿ ಬಿಸಿ
ನೀರು ಸ್ನಾನ, ಚಹ-ತಿಂಡಿ,
ಕುಕ್ಕರು ಸಿಳ್ಳೆ
ಒಂದರ ಹಿಂದೆ ಒಂದು
ಜೊತೆಯಲ್ಲಿ ಇನ್ನೊಂದು ಮತ್ತೊಂದು
ಸಾಲದಾಗಿದೆ ಇವಳಿಗೆ ಕೈ ಎರಡು.

ಸೂರ‍್ಯ ಹೊರಟಿದ್ದಾನೆ ವಾಯುವಿಹಾರಕ್ಕೆ
ವೀಕ್ಷಿಸುತ್ತಾನೆ ಮರ ಗಿಡ ಮನುಷ್ಯ
ಗುಡ್ಡ ಬೆಟ್ಟ ನದಿ ನೀರು ಸಮುದ್ರ
ಪಚ್ಚೆ ಹಸಿರ ಭೂರಮೆ
ಯ ವಿಧ ವಿಧ ಭಂಗಿ
ಹೊರಹೊರಗೆ
ವಿಚಾರಿಸುತ್ತಾನೆ ಯೋಗಕ್ಷೇಮ, ಕುಶಲೋಪರಿ
ತಾಗದು ಇವಳ ಕಿವಿಗೆ ಯಾವುದೂ
ಗಂಡನ ಟೈ ವಾಚು ಬೂಟು
ಮಕ್ಕಳ ಸಾಕ್ಸ್ ಯುನಿಫಾರ್ಮು
ಟಿಫಿನ್ ಬಾಕ್ಸ್ ಇತ್ಯಾದಿ ಗದ್ದಲದಲ್ಲಿ.

ಸೂರ‍್ಯ ನಳನಳಿಸುತ್ತ ನಭ
ದ ನೆತ್ತಿ ಏರುತ್ತಾನೆ
ಗದ್ದೆ-ಹೊಲ ಫ್ಯಾಕ್ಟರಿಯಲಿ ದುಡಿವ
ಮೈಗಳ ತುಂಬ ಉಪ್ಪು ನೀರಾಗುತ್ತಾನೆ
ಧಗೆಯಲ್ಲಿ ಬೆಂದಿದ್ದಾಳೆ ಇವಳು
ಬಟ್ಟೆ ಪಾತ್ರೆ ತೊಳೆವ ಪಾತ್ರದಲ್ಲಿ
ಹೈರಾಣಾದ ನಿಟ್ಟುಸಿರು
ಏಕಾಂತದಲ್ಲಿ ಮಾತ್ರ.

ಸೂರ‍್ಯ ಹೊಳೆಯುತ್ತಾನೆ ಲಕಲಕ
ಹೊನ್ನಕಿರಣ
ತಾಯ ಮಡಿಲು ಸೇರುವ ಸಂಭ್ರಮದಲಿ.
ಜಗವೆಲ್ಲ ಸುತ್ತಿ ದಣಿದಿರುವ
ಸೂರ‍್ಯದೇವನಿಗೆ ವಿಶ್ರಾಂತಿ ಬೇಕಲ್ಲವೇ?
ಈಕೆ ಭೂಮಿತಾಯಿ
ಯಾಕೆ ಈಕೆಗೆ ದಣಿವೂ ತಣಿವೂ?
ಅಪೂರ್ವ ಇವಳು ಅ-ಪೂರ್ವ
ಹೆಣ್ಣು
ತಾಯೆ ಮಾಯೆ
ಇವಳಿಗೆಲ್ಲಿಯ ನೋವು ನಲಿವು?!ಹೇಮಾ ಪಟ್ಟಣಶೆಟ್ಟಿ  (೧೯೫೪) ಕವಿ, ಲೇಖಕಿ, ನಾಟಕಕಾರ್ತಿ, ವಿಮರ್ಶಕಿ, ಅನುವಾದಕಿ, ರಂಗಚಿಂತಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ಧಾರವಾಡದವರು. ಮನೋವಿಜ್ಞಾನ ಮತ್ತು ಕನ್ನಡ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೇಮಾ ಉಪನ್ಯಾಸಕಿಯಾಗಿ ಹಾಗೂ ಆಕಾಶವಾಣಿಯಲ್ಲಿ ಕೆಲಸ ಮಾಡಿದ್ದಾರೆ. ೧೯೭೯ರಲ್ಲಿ ಅನನ್ಯ ಪ್ರಕಾಶನ ಶುರುಮಾಡಿ ಇದುವರೆಗೆ ೧೦೫ ಕೃತಿಗಳನ್ನು ಪ್ರಕಟಿಸಿದ್ದಾರೆ. ’ಸಂಕಲನ’ ದ್ವೈಮಾಸಿಕದ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ೨೭ ಕೃತಿಗಳು ಪ್ರಕಟವಾಗಿದ್ದು ಒಂದು ಕಥಾ ಸಂಕಲನ, ೫ ಕವನಸಂಕಲನ, ೫ ವಿಮರ್ಶಾ ಕೃತಿಗಳು, ೩ ನಾಟಕಗಳು, ೨ ವ್ಯಕ್ತಿ ಚಿತ್ರ, ೫ ಸಂಪಾದಿತ ಕೃತಿಗಳು, ೫ ಅನುವಾದಗಳು ಸೇರಿವೆ. ಹೇಮಾ ಕವಿತೆ, ಕತೆಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಎಸ್‌ವಿಪಿ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಐದು ಸಲ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ ಸೇರಿದಂತೆ ಹಲವಾರು ಮನ್ನಣೆಗಳು ಲಭಿಸಿವೆ.

ವಿಳಾಸ: ಹೂಮನೆ, ಶ್ರೀದೇವಿ ನಗರ, ವಿದ್ಯಾಗಿರಿ, ಧಾರವಾಡ ೫೮೦೦೦೪.
No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...