Saturday, October 31, 2015

ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಆಗ್ರಹ







ಗದಗ: ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಪ್ರಗತಿಪರರು, ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಬರಹಗಾರರು ಹಾಗೂ ವಿದ್ಯಾರ್ಥಿಗಳು ಶುಕ್ರವಾರ ಸತ್ಯಾಗ್ರಹ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಧರಣಿ ನಡೆಸಿದ ಅವರು, ಕಾಯ್ದೆ ಜಾರಿಗೆ ತರುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು.

ಸರ್ಕಾರ ಮೌಢ್ಯಾಚರಣೆ ಪ್ರತಿ ಬಂಧಕ ಕರಡನ್ನು ಸಾರ್ವಜನಿಕವಾಗಿ ಚರ್ಚೆಗಿಡಬೇಕು. ಕಾಯ್ದೆ ಅಂತಿಮಗೊಳ್ಳುವ ಮೊದಲು ಎಲ್ಲ ಮತ, ಧರ್ಮ, ಸಮುದಾಯಗಳ ನಾಯಕರು, ರಾಜಕೀಯ ಮುಖಂಡರು, ಮಾಧ್ಯಮ ಪ್ರಮುಖರು, ಪ್ರಗತಿಪರ ಸಂಘಟನೆಗಳ ಮುಖಂಡರ ಜತೆಗೆ ಸಮಾಲೋಚನೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲೆಯಲ್ಲಿಯೂ ಮಕ್ಕಳು ಮತ್ತು ಮಹಿಳೆಯರ ಜೀವಕ್ಕೆ ಹಾನಿ ಮಾಡುವ ಮೂಢನಂಬಿಕೆ ಆಚರಣೆಯಲ್ಲಿವೆ. ನಿಧಿ ಆಸೆಗಾಗಿ ಮಹಿಳೆಯರು ಹಾಗೂ ಮಕ್ಕಳು ಬಲಿ ಕೊಟ್ಟಿರುವ ಪ್ರಕರಣಗಳು ವರದಿಯಾಗಿದ್ದು ಇತ್ತೀಚೆಗೆ ಮಂತ್ರವಾ ದಿಗಳು ಮತ್ತು ಹುಸಿ ಜ್ಯೋತಿಷಿಗಳ ಹಾವಳಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜನ ಸಮುದಾಯಕ್ಕೆ ಮಾರಕವಾಗುವ, ಹಿಂಸೆ–ಶೋಷಣೆಗೆ ಕಾರಣವಾಗುವ ಆಚರಣೆಗಳನ್ನು ಯಾರೂ ಒಪ್ಪಬಾರದು. ಈಗಾಗಲೇ ಮಹಾರಾಷ್ಟ್ರದಲ್ಲಿ ಮೌಢ್ಯ ಆಚರಣೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ ರಾಜ್ಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಸಲ್ಲದ ವದಂತಿ ಹಬ್ಬಿಸಿದ್ದರಿಂದ ಸರ್ಕಾರ ಶಾಸನ ಸಭೆಯಲ್ಲಿ ಮೌಢ್ಯ ಮಸೂದೆ ಮಂಡಿಸಲು ಹಿಂಜರಿಯಿತು. ಇನ್ನಾದರೂ ಸರ್ಕಾರ ಜನರಲ್ಲಿ ತಿಳಿವಳಿಕೆ ಮೂಡಿಸುವ  ಕಾರ್ಯಕ್ರಮ ಹಮ್ಮಿಕೊಳ್ಳ ಬೇಕು ಎಂದು ಅವರು ಒತ್ತಾಯಿಸಿದರು.

ಡಾ.ಎಂ.ಎಂ.ಕಲಬುರ್ಗಿ ಹಂತ ಕರನ್ನು ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವಿಚಾರವಾದಿಗಳನ್ನು ಬೆದರಿಸುವ, ಅಶ್ಲೀಲ ಭಾಷೆ ಬಳಸಿ ನಿಂದಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯದಲ್ಲಿ ಮತೀಯ ಸಾಮರಸ್ಯ ಕದಡುವ ಸಂಘಟನೆಗಳನ್ನು ನಿಷೇಧಿಸ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...