Thursday, October 29, 2015

ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಧರಣಿ ಸತ್ಯಾಗ್ರಹ- ಗದಗ ಜಿಲ್ಲೆಯ ಕರಪತ್ರ


 
 
 
ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಹೋರಾಟ ವೇದಿಕೆ ಗದಗ


                              ಅಕ್ಟೋಬರ್ ೩೦ ರಂದು ಗದಗ ಗಾಂಧಿ ವೃತ್ತದಲ್ಲಿ


ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹಆತ್ಮೀಯರೆ


ಯಾವುದೇ ಸಮುದಾಯ ಮತ್ತು ದೇಶದಲ್ಲಿ ನಂಬಿಕೆಯೇ ಧರ್ಮದ ಜೀವಾಳವಾಗಿದೆ. ಮನುಷ್ಯ ಪ್ರೀತಿಯಾಚೆ ಎಲ್ಲ ಧರ್ಮಗಳು ನಂಬಿಕೆಯನ್ನು ಮೂಲಾಧಾರ ಮಾಡಿಕೊಂಡು ಬೆಳೆದು ಬಂದಿವೆ. ನಂಬಿಕೆ ಮತ್ತು ರೂಢಿಗತ ಆಚರಣೆಗಳ ಮೂಲಕವೇ ಧರ್ಮವು ಜನಸಮೂಹದ ಮೇಲೆ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಉನ್ನತ ಆದರ್ಶಗಳು ಎನ್ನುವ ಹಾಗೆ ಹುಸಿ ಸತ್ಯದ ಅಡಿಯಲ್ಲಿ ನಂಬಿಕೆಗಳು ಧರ್ಮದ ಆಶ್ರಯದಲ್ಲಿ ಉಳಿದುಕೊಂಡಿವೆ. ಜೀವಕ್ಕೆ ಸಮಾಜಕ್ಕೆ ಹಾನಿ ಮಾಡದೆ ವೈಯಕ್ತಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಇರುವ ನಂಬಿಕೆಗಳು ಮಾನ್ಯವೆನಿಸಿದರೂ ಈಗೀಗ ನಂಬಿಕೆಗಳಿಗಿಂತ ಮೂಢ ನಂಬಿಕೆಗಳೇ ವಿಜೃಂಭಿಸುತ್ತಿವೆ. ಕೆಲವು ಅಮಾನವೀಯ ಆಚರಣೆಗಳೂ ಧರ್ಮದ ಹೆಸರಿನಲ್ಲಿ ರೂಢಿಗೆ ಬಂದಿವೆ. ಇಂಥ ಆಚರಣೆಗಳು ಸಮಾಜದ ಒಡಕಿಗೆ ಕಾರಣವಾಗುವದಲ್ಲದೆ, ಮಾನವನ ಘನತೆಗೆ ಕುಂದುಂಟು ಮಾಡುತ್ತವೆ. ಮನುಷ್ಯ ಮನುಷ್ಯರ ನಡುವೆ ಬೇಧ ಸೃಷ್ಟಿಸುತ್ತವೆ.  ಸ್ತ್ರಿಯರನ್ನು ಮತ್ತು ಮಕ್ಕಳನ್ನು ಹಿಂಸೆಗೀಡು ಮಾಡುತ್ತವೆ. ಭಕ್ತಿಯ ಹೆಸರಿನಲ್ಲಿ ಅನಾದಿ ಕಾಲದಿಂದ ಇಂಥ ಆಚರಣೆಗಳು ಸನಾತನವಾದದೊಂದಿಗೆ ತಳಕುಹಾಕಿಕೊಂಡು ರೂಢಿಗತವಾಗಿವೆ. ಆರೋಗ್ಯವಂತ ಸಮಾಜಕ್ಕೆ ಮಾರಕವಾಗುವ ಇಂಥ ಮೌಢ್ಯಾಚರಣೆಗಳನ್ನು ಪೋಷಿಸುವವರು ಎಲ್ಲ ಧರ್ಮಗಳಲ್ಲಿಯೂ ಇದ್ದಾರೆ.

 ಗದಗ ಜಿಲ್ಲೆಯಲ್ಲಿಯೂ ಮಕ್ಕಳ ಮತ್ತು ಮಹಿಳೆಯರ ಜೀವಕ್ಕೆ ಹಾನಿ ಮಾಡುವ ಮೂಢನಂಬಿಕೆಗಳು ಆಚರಣೆಯಲ್ಲಿವೆ. ನಿಧಿಗಾಗಿ ಮಕ್ಕಳನ್ನು ಬಲಿಕೊಟ್ಟಿದ್ದು ಜಿಲ್ಲೆಯಲ್ಲಿ ವರದಿಯಾಗಿದೆ. ಇಲ್ಲಿ ಮಂತ್ರವಾದಿ ಮತ್ತು ಹುಸಿ ಜ್ಯೋತಿಷಿಗಳ ಹಾವಳಿ ವಿಪರೀತವಾಗಿವೆ. ಮಂತ್ರಕ್ಕೆ ಮಾವಿನಕಾಯಿ ಉದುರಿತು ಎನ್ನುವರು, ಪ್ರಸಾದಕ್ಕೆ ಮಕ್ಕಳು ಹುಟ್ಟುತ್ತಾರೆ ಎನ್ನುವರು ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಹುಸಿ ಧಾರ್ಮಿಕತೆಯ ಹೆಸರಿನಲ್ಲಿ ಇಂಥವುಗಳು ನಡೆಯುತ್ತಿರುವದು ಕಳವಳಕಾರಿಯಾಗಿದೆ.

ಜನ ಸಮುದಾಯಗಳ ಹಿತಕ್ಕೆ ಮಾರಕವೆನ್ನಿಸುವ, ಶೋಷಣೆ ಹಾಗೂ ಹಿಂಸೆಗೆ ಕಾರಣವಾಗುವ ಯಾವುದೇ ಮೌಢ್ಯಾಚರಣೆಗಳನ್ನು ನಾಗರಿಕ ಸಮಾಜ ಒಪ್ಪಿಕೊಳ್ಳಬಾರದು. ಈಗಾಗಲೇ ಮಹಾರಾಷ್ಟ್ರ ಸರ್ಕಾರವು ಮೌಢ್ಯಾಚರಣೆಗಳನ್ನು ನಿಷೇಧಿಸಿ ಕಾನೂನನ್ನು ಜಾರಿಗೆ ತಂದಿದೆ. ಕೇರಳದಲ್ಲಿ ಇಂಥ ಕಾನೂನು ಜಾರಿ ಮಾಡುವ ಪ್ರಯತ್ನಗಳು ನಡೆದಿವೆ. ಈ ಹಿನ್ನಲೆಯಲ್ಲಿ ಕರ್ನಾಟಕ ಸರಕಾರವೂ ಎರಡು ವರ್ಷಗಳ ಹಿಂದೆ ಮೌಢ್ಯಾಚರಣೆ ನಿಷೇಧಿಸುವ ಕಾಯ್ದೆ ಜಾರಿಗೆ ತರುವ ಉದ್ದೇಶದಿಂದ  ಶಾಸನ ಸಭೆಯಲ್ಲಿ ಮಸೂದೆ ಮಂಡಿಸುವ ಸಲುವಾಗಿ ಕರಡು ಸಿದ್ದಪಡಿಸಲು ಕೇಳಿಕೊಂಡಾಗ ರಾಷ್ಟ್ರೀಯ ಕಾನೂನು ಶಾಲೆ ಮತ್ತು ಧಾರವಾಡ ಕಾನೂನು ವಿವಿ ಕರಡನ್ನು ಸಿದ್ದಪಡಿಸಿ ಕೊಟ್ಟಿದ್ದವು. ಇವುಗಳನ್ನು ಆಧರಿಸಿ ಅಂತಿಮ ಕರಡು ಸಿದ್ದಗೊಳಿಸಿ ಶಾಸನ ಸಭೆಯಲ್ಲಿ ಮಂಡನೆ ಮಾಡಬೇಕೆಂದಾಗಲೇ ಪಟ್ಟಭದ್ರ ಹಿತಾಸಕ್ತಿಗಳು ಈ ಬಗ್ಗೆ ಇಲ್ಲಸಲ್ಲದ ವದಂತಿ ಹರಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡತೊಡಗಿದಾಗ ಹಿಂಜರಿದ ಸರಕಾರ ಮೌಢ್ಯ ನಿಷೇಧ ಮಸೂದೆ ಮಂಡನೆಯಿಂದ ದೂರ ಉಳಿಯಿತು. ಇದು ಇತಿಹಾಸ.

ಮೌಢ್ಯ ಪ್ರತಿಬಂಧಕ ಕಾಯ್ದೆ ರಾಜ್ಯದಲ್ಲಿ ಜಾರಿಗೆ ತರಬೇಕೆಂದು ದನಿ ಎತ್ತಿದವರಲ್ಲಿ ಇತ್ತೀಚೆಗೆ ಮತೀಯ ಶಕ್ತಿಗಳಿಂದ ಹತರಾದ ಡಾ. ಎಂ. ಎಂ. ಕಲಬುರ್ಗಿ ಕೂಡ ಒಬ್ಬರಾಗಿದ್ದರು. ಅವರ ದಾರುಣ ಹತ್ಯೆಯ ಹಿನ್ನಲೆಯಲ್ಲಿ ಸರಕಾರ ಕಲಬುರ್ಗಿಯವರು ಒತ್ತಾಯಿಸಿದ್ದ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಬೇಕು. ಅದು ಹುತಾತ್ಮ ಕಲಬುರ್ಗಿಯವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ.

ಮೌಢ್ಯ ನಿಷೇಧ ಕಾಯ್ದೆ ಯಾವ ಧರ್ಮದ ವಿರುದ್ಧವೂ ಅಲ್ಲ. ಎಲ್ಲ ಧರ್ಮಗಳಲ್ಲಿರುವ ಮೌಢ್ಯದ ದುಷ್ಟಾಚರಣೆ, ಅಂಧಾಚರಣೆ, ಹಿಂಸಾಚರಣೆ, ಜೀವ ಹತ್ಯೆಯ ಆಚರಣೆಗಳಷ್ಟೇ ನಿಷೇಧಿಸಬೇಕಾಗಿದೆ. ಸರಕಾರ ಈ ಕುರಿತು ಜನಗಳಿಗೆ ಸರಿಯಾದ ತಿಳುವಳಿಕೆ ನೀಡಬೇಕಾಗಿದೆ. ಮೌಢ್ಯಾಚರಣೆ ಪ್ರತಿಬಂಧಕ ಕರಡನ್ನು ಪರಿಷ್ಕರಿಸಿ ಶಾಸನ ಸಭೆಯಲ್ಲಿ ಮಂಡಿಸಲು ಮುಂದಾಗಬೇಕಾಗಿದೆ. ನಮ್ಮ ಕೆಳಗಿನ ಹಕ್ಕೊತ್ತಾಯಗಳನ್ನು ಕೂಡಲೇ ಜಾರಿಗೆ ತರಲು ಮುಂದಾಗಬೇಕೆಂದು ಈ ಮೂಲಕ ನಾವೆಲ್ಲ ಒತ್ತಾಯಿಸುತ್ತಿದ್ದೇವೆ.

 ಹಕ್ಕೊತ್ತಾಯಗಳು

 ೧.

ಸರಕಾರ ತನ್ನ ಮುಂದಿರುವ ಮೌಢ್ಯಾಚರಣೆ ಪ್ರತಿಬಂಧಕ ವಿಧೇಯಕದ ಕರಡನ್ನು ಪರಿಷ್ಕರಿಸಿ ಸಾರ್ವಜನಿಕ ಚರ್ಚೆಗಾಗಿ ಕರಡನ್ನು ಮಂಡಿಸಬೇಕು.

೨.
ಮೌಢ್ಯಾಚರಣೆ ಕಾಯ್ದೆ ರಚನೆ ಅಂತಿಮಗೊಳ್ಳುವ ಮೊದಲು ಇದಕ್ಕೆ ಸಂಬಂಧಿಸಿ ಎಲ್ಲ ಮತಧರ್ಮಗಳ ಧರ್ಮ ಗುರುಗಳು, ಸಮುದಾಯಗಳ ನಾಯಕರು, ರಾಜಕೀಯ ಪಕ್ಷಗಳ ಮುಖಂಡರು, ಮಾಧ್ಯಮ ಪ್ರಮುಖರು, ಪ್ರಗತಿಪರ ಸಂಘಟನೆಗಳ ಮುಖಂಡರ ಜೊತೆ ಸಮಾಲೋಚಿಸಬೇಕು.

೩.
ಡಾ. ಎಂ. ಎಂ. ಕಲಬುರ್ಗಿಯವರ ಹಂತಕರು ಇನ್ನೂ ಪತ್ತೆಯಾಗದಿರುವುದು ಆತಂಕದ ಸಂಗತಿಯಾಗಿದೆ.. ಹಂತಕರನ್ನು ಪತ್ತೆ ಮಾಡಲು ನಿಯೋಜಿಸಿರುವ ತಂಡಕ್ಕೆ ತನಿಖೆಯನ್ನು ತೀವ್ರಗೊಳಿಸಲು ಕಟ್ಟುನಿಟ್ಟಾದ ಆದೇಶವನ್ನು ನೀಡಬೇಕು. ಸಿಐಡಿ ತನಿಖಾ ಕಾರ್ಯದ ಮೇಲೆ ಅಪನಂಬಿಕೆ ಹುಟ್ಟುತ್ತಿರುವದರಿಂದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು. (ಎಸ್.ಐ.ಟಿ.) ಅದಕ್ಕೂ ಒಂದು ಕಾಲಮಿತಿಯನ್ನು ನಿಗದಿ ಮಾಡಬೇಕು

೪.
ಸಾಮಾಜಿಕ ಜಾಲತಾಣಗಳಲ್ಲಿ ವಿಚಾರವಾದಿಗಳನ್ನು ಬೆದರಿಸುವ, ಅಶ್ಲೀಲ ಭಾಷೆ ಬಳಸಿ ನಿಂದಿಸುವವರ ಮೇಲೆ ಕ್ರಮ ತಗೆದುಕೊಳ್ಳಬೇಕು. ಇದಕ್ಕಾಗಿ ಪೊಲೀಸ ಇಲಾಖೆಯಲ್ಲಿ ಪ್ರತ್ಯೇಕ ಸೆಲ್ ಆರಂಭಿಸಬೇಕು.

೫.
ರಾಜ್ಯದಲ್ಲಿ ಮತೀಯ ಸಾಮರಸ್ಯ ಕದಡುವ ಸಂಘಟನೆಗಳನ್ನು ನಿಷೇಧಿಸಬೇಕು.


ಸಹಭಾಗಿ ಸಂಘಟನೆಗಳು


ರಾಜ್ಯ ರೈತ ಸಂಘಟನೆ, ದಲಿತ ಸಂಘರ್ಷ ಸಮಿತಿ, ಡಿವೈಎಫ್‌ಐ, ಪ್ರಗತಿಶೀಲ ಲಿಂಗಾಯತ ಯುವಕ ಸಂಘ, ಲಡಾಯಿ ಪ್ರಕಾಶನ, ಭಾರತ ಜ್ಞಾನ ವಿಜ್ಞಾನ ಸಮಿತಿ, ನಿರಂತರ ವೇದಿಕೆ ಗಜೇಂದ್ರಗಡ, ಗದಗ ಜಿಲ್ಲಾ ಗಂಟಿಚೋರ ಸಮುದಾಯದ ಹಿತರಕ್ಷಣಾ ಸಮಿತಿ, ಸ್ಲಂ ಜನಾಂದಲೋಲನ ಸಮಿತಿ, ಸಮುದಾಯ, ಇಪ್ಟಾ, ಕೊತಬಾಳದ ಅರುಣೋದಯ ಕಲಾತಂಡ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಗದಗ ಜಿಲ್ಲಾ ಕನ್ನಡ ಪ್ರಾಧ್ಯಾಪಕರ ಸಂಘ, ಬಂಡಾಯ ಸಾಹಿತ್ಯ ಸಂಘಟನೆ, ಕರ್ನಾಟಕ ಸೌಹಾರ್ದ ವೇದಿಕೆ, ಎಸ್‌ಎಫ್‌ಐ, ಎಐಎಸ್‌ಎಫ್, ಗದಗ ಜಿಲ್ಲಾ ಇಂಗ್ಲಿಷ ಅದ್ಯಾಪಕರ ಸಂಘ,

 ಸಂಪರ್ಕ : 9480286844, 9482931100, 9481125166, 9886761978, 9739239811, 9880831913

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...