Thursday, October 29, 2015

ರೇಣುಕಾ ನಿಡಗುಂದಿ ಎರಡು ಕವಿತೆಗಳು




ಗೆಳೆಯನಿಗೆ 


ಗೆಳೆಯ ....ಹೇಳುತ್ತೇನೆ ಕೇಳು
ಈ ಮೊದಲೇ ನಮ್ಮವಾಗಬೇಕಿದ್ದ
ಸಾವಿರ ಸಾವಿರ ರಾತ್ರಿಗಳು
ಬೆಳಕಿನ ಮರಗಳಾಗಿ ಬೆಳೆದು
ನಮ್ಮ  ಕೈಗೆಟುಕದಷ್ಟು ದೂರದಲ್ಲಿವೆ


ಇನ್ನು ನಮ್ಮ ಕೈ ತಪ್ಪಿಹೋದ
ನೂರಾರು ದಿನಗಳು
ಹಗಲಿನ ಹಂಗಿನಲ್ಲಿ 
ದಿನಗೂಲಿ ಮಾಡುತ್ತ ಇಂದು
ನಾಳೆಗಳ ಲೆಕ್ಕಾಚಾರದಲ್ಲಿ
ಏಕಾಂಗಿಯಾಗಿವೆ

ಈಗಷ್ಟೇ ಮತ್ತೆ  ಸಿಕ್ಕಿದ್ದೇವೆ
ಅವೇ ಮರೆತುಹೋದ ಸಾವಿರಾರು ರಾತ್ರಿಗಳಂತೆ
ನೆನಪು ಮತ್ತು ಮರೆವಿನ ಹಾದಿಯಲ್ಲಿ 
ಕೈತಪ್ಪಿಹೋದ 
ನಕ್ಷತ್ರಗಳನ್ನು ಹುಡುಕುತ್ತಿದ್ದೇವೆ

ಈಗಲೂ ಹೇಳುತ್ತೇನೆ
ನಮ್ಮವೇ ಆಗಬೇಕಾಗಿರುವ

ಸಾವಿರ ಸಾವಿರ ಹಗಲು ಮತ್ತು

ರಾತ್ರಿಗಳ ಆಣೆ..

ಅಗಲಿರುವ ಪ್ರತಿ ಇರುಳಿನ ಹಳಕಿನಲ್ಲೂ
ನಮ್ಮವೇ ಆಗಿರಬೇಕಿದ್ದ ಹಗಲಿನ
ನಿಶ್ಯಬ್ದ  ಬೆಳಕಿದೆ

ಬೆಳಕಿನ  ಮೌನದಲ್ಲೂ
ನಿನ್ನದೇ  ದನಿಯಿದೆ ಮತ್ತು
ನನ್ನವೇ ಮಾತುಗಳಿವೆ……..***


ಮಾಗಿಯ ಚಳಿಯಲ್ಲಿ

ನಿನ್ನೆಯ ನಾಲ್ಕು ಹನಿ ಮಳೆಗೆ
ಚಳಿಯ ಹೂವು ಬಿರಿದು
ಸಣ್ನಗೇ ಗಾಳಿಗೆ ಎಲೆ ಅಲುಗಿ
ಮೆಲ್ಲಗೇ ಮೈ ಸವರಿದಾಗ
ನಿನ್ನ ಬೆಚ್ಚಗಿನ ಹೊಳೆಯಂಥ
ಕಣ್ಣುಗಳದ್ದೇ ನೆನಪು ನನಗೆ


ಮತ್ತೆ ಬೆಚ್ಚಗಿನ ಬೇಸಿಗೆಯ
ಸವಿಗಾಳಿಯ ಮಾತು ಕಿವಿಯಲ್ಲಿ
ಸೆರಗು ಎಳೆದು ಮಾತಾಡಿಸಿದ ತಂಗಾಳಿ
ಬೆರಳಲ್ಲಿ ಉಳಿದು ಹೋದ
ಆ ಮುಸ್ಸಂಜೆ ಇಬ್ಬನಿ
ನವಿಲುಗರಿಯಂಥ ಬೆರಳುಗಳದ್ದೇ ಧ್ಯಾನ

ಮಾಗಿಯ ಚಳಿಯಲ್ಲಿ
ಪಾರಿವಾಳಗಳನ್ನು ನೋಡಿದಾಗೆಲ್ಲ
ಮಂಜಿನಲ್ಲಿ ಬೆಚ್ಚಗಿನ ನದಿಯೊಂದು
ಸುಮ್ಮನೇ ಪಿಸುಗುಡುವಂತೆ
ಹೀಗೆ ನಿನ್ನ ಬೆಚ್ಚಗಿನ ಕಡಲಂಥ
ಕಣ್ಣುಗಳಲ್ಲಿ ಸೂರ್ಯ ಹುಟ್ಟುವುದನ್ನು ಕಾಣುತ್ತೇನೆ.....

***
 


ರೇಣುಕಾ ನಿಡಗುಂದಿ ಧಾರವಾಡದಲ್ಲಿ ಹುಟ್ಟಿದ್ದು ಕಳೆದ ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸವಾಗಿದ್ದಾರೆ. ಖಾಸಗೀ ಕಂಪನಿಯೊಂದರಲ್ಲಿ ಕಾರ್ಯದರ್ಶಿಯಾಗಿ ಉದ್ಯೋಗ ಮಾಡುತ್ತಿದ್ದಾರೆ. ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ  ಜಂಟಿಕಾರ್ಯದರ್ಶಿಯಾಗಿ, ಸಂಘದ ಮುಖವಾಣಿಅಭಿಮತ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ.  ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ.  ಮೊದಲ ಕವನ ಸಂಕಲನ " ಕಣ್ಣ ಕಣಿವೆಕೆಂಡಸಂಪಿಗೆ ವೆಬ್ಪೋರ್ಟಲ್ ನಲ್ಲಿ ಬರೆಯುತ್ತಿದ್ದ ಯಮುನಾತೀರೆ ಅಂಕಣ ಬರಹಗಳ  "ದಿಲ್ಲಿ ಡೈರಿಯ ಪುಟ", ಅಮೃತಾ ಪ್ರೀತ್ಂ ಸಂಗಾತಿ ಇಮರೋಜ್ ಕುರಿತು ಬರೆದ ಬರಹ, ಅನುವಾದಿಸಿದ ಕವಿತೆ ಅಮೃತಾ ನೆನಪುಗಳು” ಅವರ ಪ್ರಕಟಿತ ಕೃತಿಗಳಾಗಿವೆ. ಮನಸೇ" ದ್ವೈಮಾಸಿಕದಲ್ಲಿ ರಾಜಧಾನಿ ಮೇಲ್ ಅಂಕಣ ಬರೆಯುತ್ತಿದ್ದಾರೆ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...