Saturday, October 31, 2015

ವಾಸುದೇವ ನಾಡಿಗ್ ಎರಡು ಕವಿತೆಗಳು
ಊರ ಉಸಾಬರಿಗೆ ಬಿದ್ದವರು

ಬೆಣ್ಣೆಯ ಪೂಸಿಕೊಂಡು
ಸಖಿಯರ ನಿಡುಗಂಗಳ ಬೆಳಕಾಗಿ
ಪ್ರಣಯದ ಗಂಗೆಯ ಹರಿಸಬೇಕಿತ್ತು
ಬೆರಳಲಿ ಹಾಡ ಹಚ್ಚಬೇಕಿತ್ತು
ಕುಟಿಲಗಳಲಿ ಮುರುಟಿಹೋದ
ಧೂರ್ತ ಸಮರಗಳಲಿ ಕಮರಿಹೋದ
ಗುಲಾಬಿತುಟಿಗಳಿಗೆ
ವಿದ್ರೋಹದ ಮಾತ ಸವರಿದ
ನೆತ್ತರಿನಲ್ಲಿ ತೊಪ್ಪೆಯಾದ

ಉಂಡುಟ್ಟು ಬೆಚ್ಚಗೆ ತುಪ್ಪಳವ
ಹೊದ್ದು ಉಣ್ಣೆಯ ಹಾಸಿ
ಕನಸಿನಲಿ ಮುಳುಗಿಬಿಡಬೇಕಿತ್ತು
ಮುಳ್ಳತಂತಿ ತಲೆಗೆ ಸುತ್ತಿಸಿಕೊಂಡ
ಹಾಲಗರೆದು ಸಸಿಯನೆಡುವ ಅಂಗೈಗೆ
ಮೊಳೆಯ ಬಡಿಸಿಕೊಂಡ
ಹಣೆಯ ಗೆರೆಗಳಲಿ
ದಯೆಯನು ಬರೆಸಿಕೊಂಡ
ನಿರ್ದಯಿ ಏಟಿಗೆ ಎದೆಗೊಟ್ಟ

ಮಹಲು ಹಂಸಮೃದು ಮಂಚದಲಿ
ಮಲಗಬೇಕಿತ್ತು 
ಎಳೆಬಿಸಿಲಿಗೂ ಮುರುಟುವವ
ಬಯಲ ಉರಿಕೊಪ್ಪರಿಗೆಗೆ ಬಿದ್ದ
ಕರುಳುಗಳನು ಹಸಿವಿನಲಿ ಸುಟ್ಟ
ಹೊಟ್ಟೆಯಲಿ ಹಾವುಗಳನ್ನು
ಹರಿಹಾಯಿಸಿಕೊಂಡ
ನೋವುಗಳನು ಮುಟ್ಟಿ ಮಾತಾಡಿಸಿ
ಕ್ಯಾತೆಗಳನ್ನು ತಡವಿಕೊಂಡ ಕಾಡುಪಾಲಾದ

ಮಂತ್ರಗೊಟ್ಟಿಗಳಲಿ
ವೇಷಧರಿಸಿ ಹೂವ ಪೋಣಿಸಿ
ಲೀಲಾಜಾಲಮುಕ್ತಿಯ ಜಪಿಸಬೇಕಿತ್ತು
ಧೂಪದೀಪಗಳಲಿ ಉಳಿಯಬೇಕಿತ್ತು
ಹಳೆಹಳವಂಡಗಳ ಉಡಿತುಂಬಿಕೊಂಡ
ಅಂಗಳದಲಿ ರಕ್ಕಸರ ಕರೆದುಕೊಂಡ
ಜಡ್ಡುಗಳಿಗೆ ತೊಡೆತಟ್ಟಿದ
ಮೂರ್ಖರ ಮೆದುಳ ಕಲಕಿದ
ನಿಂತನೀರಲೇ  ಕರಗಿದ

ಊರಉಸಾಬರಿಯ ಸುರಿದುಕೊಂಡವರು
ಉರಿಯನು ಎದೆಗೆ ಸವರಿಕೊಂಡರು
ಊರ ತಂಟೆಗೇ ಹೋಗದವರು
ಸಿರಿ ಸಕಲವನು  ಎರೆದುಕೊಂಡರು
*** 
  ಕಳಚಿಡುವುದಕ್ಕೆ ವೇಷವಲ್ಲ


ಹಾಗೇ ಸುಮ್ಮನೆ
ಪ್ರತಿ ಅಂಕಕ್ಕೊಮ್ಮೆ
ನೇಪಥ್ಯಕೆ ತೆರಳಿ
ಮುಖ ಬದಲಾಯಿಸಿ
ಗೆರೆಗಳನ್ನು ಅಳಿಸಿ
ಸರಿಪಡಿಸಿ ನೆರಿಗೆಗಳನ್ನು
ಮತ್ತೆ ಮರಳಿ
ಉರುಹೊಡೆದ ಮಾತುಗಳನೆಲ್ಲಾ
ಬುಳಕ್ಕನೆ ವಾಂತಿಮಾಡಿಕೊಂಡಂತಲ್ಲ
ಬದುಕು.

ಯಾರೋ ಬರೆದಿಟ್ಟ ಕತೆಗೆ
ಕಡೆದಿಟ್ಟ ಪಾತ್ರಕ್ಕೆ
ತುಂಬಿ ಮಾತುಗಳ
ಇರುಕಿ ಭಾವಗಳ
ತಾನೇ ಆನಾಗುವ
ಆನೇ ತಾನಾಗುವ
ತಂತಿಯ ಮೀಟುವ ಪರಿ
ಕೊಡುವ ದೃಶ್ಯಕೆ
ಸತತ ತಾಲೀಮು
ಗಾಯಗಳಿಲ್ಲದಿದ್ದರೂ ಸವರಿ
ಮುಲಾಮ
ಗಾಯಗಳಿದ್ದರೂ ನಗುವ
ಕಾಯ ಕಾಯಕ
ಅಳಲಿನ ಸಾಗರವ ಮೆಟ್ಟಿ
ನಕ್ಕು
ನಗೆಯ ಕಡಲ ಅದುಮಿಟ್ಟು
ಅತ್ತು
ನಮ್ಮದಲ್ಲದ ಪಾತ್ರಕೆ
ಪಾತ್ರವಾಗಿ

ವೇಷವಕಳಚಿಡಲು
ಹೊರಟೆ
ಕಿತ್ತುಬಂದ ಚರ್ಮ
ರಕ್ತದ ತೊರೆ
ಅರಿವಿಗೆ ಬಂದದ್ದು
ಧರಿಸಿದ್ದು ವೇಷವಲ್ಲ ಅದೇ ಬದುಕು 
***
ವಾಸುದೇವ ನಾಡಿಗ್  ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ. ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ನಾಡಿಗ್ ಅವರು  ಕೇಂದ್ರ ಸರಕಾರದ ವಸತಿ ಶಾಲೆ ಜವಾಹರ ನವೋದಯ ವಿದ್ಯಾಲಯದ  ಕನ್ನಡ ಶಿಕ್ಷಕರಾಗಿದ್ದಾರೆ.  ಚತ್ತೀಸ್‌ಗಢದ ರಾಯಪುರ,ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ೨೦೧೨ ರಿಂದ ಉತ್ತರ ಪ್ರದೇಶದ ಜಾಲೊನ್ ಜಿಲ್ಲೆಯ ಓರೈ ನವೋದಯ ಶಾಲೆಯಲ್ಲಿದ್ದಾರೆ ಅವರ ಪ್ರಕಟಿತ ಕೃತಿಗಳು  ವೃಷಭಾಚಲದ ಕನಸು,   ಹೊಸ್ತಿಲು ಹಿಮಾಲಯದ ಮಧ್ಯೆ,  ಭವದ ಹಕ್ಕಿ, ವಿರಕ್ತರ ಬಟ್ಟೆಗಳು ,ನಿನ್ನ ಧ್ಯಾನದ ಹಣತೆ

ಪ್ರಸ್ತುತ ವಿಳಾಸ
ವಾಸುದೇವ ನಾಡಿಗ್
ಕನ್ನಡ ಶಿಕ್ಷಕ
ಜವಾಹರ ನವೋದಯ ವಿದ್ಯಾಲಯ
ಇಂಡಸ್ಟ್ರಿಯಲ್ ಏರಿಯಾ
ಕಾಲಪಿ ರೋಡ್
ಓರೈ   
ಜಾಲೋನ್
ಉತ್ತರಪ್ರದೇಶ೦೯೫೯೧೯೬೦೪೩೪/೦೮೧೭೫೦೧೫೬೪೪

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...