Friday, November 20, 2015

ಈ ತಪ್ಪನ್ನು ಕೂಡಲೇ ಸರಿಪಡಿಸಬೇಕಾಗಿದೆ-ಭಾಗ-2
ಸುರೇಶ್ ಭಟ್, ಬಾಕ್ರಬೈಲ್

ಸೌಜನ್ಯ : ವಾರ್ತಾಭಾರತಿ


ಸಂಘ ಪರಿವಾರದ ರಾಜಕೀಯ ಚಳವಳಿ

ಸಂಘ ಪರಿವಾರದ ರಾಜಕೀಯ ಚಳವಳಿ ಸಮಾಜದ ಎಲ್ಲಾ ಸ್ತರಗಳಲ್ಲಿ ನಡೆಯುತ್ತದೆ. ಅದಕ್ಕೋಸ್ಕರ ಒಂದೊಂದು ಕ್ಷೇತ್ರದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಂಗಸಂಸ್ಥೆಗಳನ್ನು ನಿಯೋಜಿಸಲಾಗಿದೆ. ಅವುಗಳ ಪೈಕಿ ಕೆಲವು ಸಂಘಟನೆಗಳ ಹೆಸರು ನಿಮಗೆ ತಿಳಿದಿರಲಿ. ‘ವಿದ್ಯಾ ಭಾರತಿ’, ‘ಸರಸ್ವತಿ ವಿದ್ಯಾ ಮಂದಿರ’, ‘ವನವಾಸಿ ಕಲ್ಯಾಣ ಆಶ್ರಮ’, ‘ಅಖಿಲ ಭಾರತೀಯ ಸಾಹಿತ್ಯ ಪರಿಷತ್’, ‘ಭಾರತೀಯ ಇತಿಹಾಸ ಸಂಕಲನಾ ಯೋಜನೆ’, ‘ಭಾರತೀಯ ಶಿಕ್ಷಣ ಮಂಡಲ’, ‘ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ’, ‘ಸಂಸ್ಕೃತ ಭಾರತಿ’, ‘ಸಂಸ್ಕಾರ ಭಾರತಿ’, ‘ಸೇವಾ ಭಾರತಿ’, ‘ಹಿಂದೂ ಸೇವಾ ಪ್ರತಿಷ್ಠಾನ’, ‘ಸ್ವಾಮಿ ವಿವೇಕಾನಂದ ವೈದ್ಯಕೀಯ ಮಿಷನ್’, ‘ರಾಷ್ಟ್ರೀಯ ವೈದ್ಯ ಸಂಘ’, ‘ಭಾರತೀಯ ಕುಷ್ಟ ನಿವಾರಕ ಸಂಘ’, ‘ಸಹಕಾರ ಭಾರತಿ’, ‘ಅಖಿಲ ಭಾರತೀಯ ಗ್ರಾಹಕ ಪಂಚಾಯತ್’, ‘ಭಾರತ್ ಪ್ರಕಾಶನ್’, ‘ಸುರುಚಿ ಪ್ರಕಾಶನ್’, ‘ಲೋಕಹಿತ ಪ್ರಕಾಶನ್’, ‘ಜ್ಞಾನಗಂಗಾ ಪ್ರಕಾಶನ್’, ‘ಅರ್ಚನಾ ಪ್ರಕಾಶನ್’, ‘ಭಾರತೀಯ ವಿಚಾರ ಸಾಧನಾ’, ‘ಮಾಧವ್ ಪ್ರಕಾಶನ್’, ‘ರಾಷ್ಟ್ರೋತ್ಥಾನ ಸಾಹಿತ್ಯ’, ‘ಸಾಧನಾ ಪುಸ್ತಕ್ ಪ್ರಕಾಶನ್’, ‘ಆಕಾಶವಾಣಿ ಪ್ರಕಾಶನ್’, ‘ವಿಜ್ಞಾನ್ ಭಾರತಿ’, ‘ಸಾಮಾಜಿಕ ಸಾಮರಸತಾ ಮಂಚ್’, ‘ವಿವೇಕಾನಂದ ಕೇಂದ್ರ’, ‘ಭಾರತ್ ವಿಕಾಸ್ ಪರಿಷತ್’, ‘ರಾಷ್ಟ್ರೀಯ ಸಿಖ್ ಸಂಗತ್’, ‘ಪೂರ್ವ-ಸೈನಿಕ್ ಸೇವಾ ಪರಿಷತ್’, ‘ವಿಶ್ವ ಹಿಂದೂ ಪರಿಷತ್’, ‘ಹಿಂದೂ ಜಾಗರಣ್ ಮಂಚ್’, ‘ಸ್ವದೇಶಿ ಜಾಗರಣ್ ಮಂಚ್’, ‘ಬಜರಂಗ ದಳ’, ‘ಶ್ರೀರಾಮ ಸೇನೆ’, ‘ಸನಾತನ ಸಂಸ್ಥೆ’, ‘ಹಿಂದೂ ಜಾಗರಣ ವೇದಿಕೆ’, ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’, ‘ಭಾರತೀಯ ಮಜ್ದೂರ್ ಸಂಘ’, ‘ರಾಷ್ಟ್ರೀಯ ಸೇವಿಕಾ ಸಮಿತಿ’, ‘ದುರ್ಗಾ ವಾಹಿನಿ’, ‘ಅನಿವಾಸಿ ಭಾರತೀಯರಿಗಾಗಿ ಭಾರತೀಯ ಸ್ವಯಂಸೇವಕ ಸಂಘ’, ‘ಹಿಂದೂ ಸ್ವಯಂ ಸೇವಕ ಸಂಘ’, ‘ಹಿಂದೂ ಸೇವಾ ಸಂಘ’, ‘ಸನಾತನ ಧರ್ಮ ಸ್ವಯಂಸೇವಕ ಸಂಘ’, ‘ಫ್ರೆಂಡ್ಸ್ ಆಫ್ ಇಂಡಿಯ ಸೊಸೈಟಿ ಇಂಟರ್‌ನ್ಯಾಷನಲ್’ ಇತ್ಯಾದಿಗಳು ಇವೆ. ಸಂಘ ಪರಿವಾರದ ಮಾತೃಸಂಸ್ಥೆ ಆರೆಸ್ಸೆಸ್‌ನ ಅಸಲಿ ಚಹರೆಯನ್ನು ತಿಳಿಯಲು ಹೆಚ್ಚು ಕಷ್ಟಪಡಬೇಕಾಗಿಲ್ಲ. 

1982ರ ಕನ್ಯಾಕುಮಾರಿ ಕೋಮು ಗಲಭೆಗಳ ತನಿಖೆ ನಡೆಸಿದ ನ್ಯಾ. ಪಿ.ವೇಣುಗೋಪಾಲ್‌ರವರ ಅಂತಿಮ ವರದಿ ಅದನ್ನು ಸಂಪೂರ್ಣವಾಗಿ ತೆರೆದಿಡುತ್ತದೆ: ‘‘ಆರೆಸ್ಸೆಸ್ ಒಂದು ಉಗ್ರವಾದಿ ಹಾಗೂ ಆಕ್ರಮಣಶೀಲ ಪ್ರವೃತ್ತಿಯನ್ನು ಅಳವಡಿಸಿಕೊಂಡಿದೆ. ಅದು ತನ್ನ ಕಲ್ಪನೆಯ ಹಿಂದೂ ಹಕ್ಕುಗಳಿಗಾಗಿ ಅಲ್ಪಸಂಖ್ಯಾತರ ವಿರುದ್ಧ ಹೋರಾಡಲು ತನ್ನನ್ನು ತಾನೇ ನೇಮಿಸಿಕೊಂಡಿದೆ... ಆರೆಸ್ಸೆಸ್‌ನ ‘ಶಾಖಾ’ಗಳು ನಡೆಸುವ ವಿವಿಧ ಕಾರ್ಯಕ್ರಮಗಳ ಪೈಕಿ ಲಾಠಿ, ಖಡ್ಗಗಳ ಬಳಕೆ ಮತ್ತು ಜ್ಯಾವೆಲಿನ್ ಎಸೆಯುವಿಕೆಯ ತರಬೇತಿ ಕೂಡಾ ಒಂದು. ಡ್ರಿಲ್, ಶಾರೀರಿಕ ಕಸರತ್ತು, ಪರೇಡ್ ಮತ್ತಿತರ ಚಟುವಟಿಕೆಗಳನ್ನು ಆಟದ ಮೈದಾನುಗಳು ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ.... ದೈಹಿಕ ಕಸರತ್ತುಗಳ ಹೆಸರಿನಲ್ಲಿ ನಡೆಸಲಾಗುತ್ತದೆ. ಉಗ್ರಗಾಮಿ ನಿಲುವನ್ನು ಬೆಳೆಸುವುದರೊಂದಿಗೆೆ ಯಾವುದೇ ವಿಧದ ಜನಸಂಘರ್ಷಗಳಿಗೆ ತರಬೇತಿ ಒದಗಿಸುವುದೇ ಈ ಚಟುವಟಿಕೆಗಳ ಉದ್ದೇಶವೆಂದು ತೋರುತ್ತದೆ...’’ ಎನ್ನುತ್ತದೆ ಆ ವರದಿ. ಕಳೆದ ದಶಕದಲ್ಲಿ ಬೆಳಕಿಗೆ ಬಂದ ಮಾಲೆಗಾಂವ್, ಮಕ್ಕಾ ಮಸೀದಿ, ಸಂಜೋತಾ ಎಕ್ಸ್‌ಪ್ರೆಸ್ ಮುಂತಾದ ಕೇಸರಿ ಭಯೋತ್ಪಾದಕ ಕೃತ್ಯಗಳ ಹಿನ್ನೆಲೆಯಲ್ಲಿ ತರಬೇತಿಗಳ ಈ ಪಟ್ಟಿಗೆ ಬಾಂಬ್ ಸ್ಫೋಟವೂ ಸೇರ್ಪಡೆಯಾಗಿರಬೇಕು.


ಹೀಗೆ ಬಗೆಬಗೆಯ ತರಬೇತಿಗಳನ್ನು ಪಡೆದ ಸಂಘ ಪರಿವಾರದ ಸಂಘಟನೆಗಳು ಹಿಂದೂ ರಾಷ್ಟ್ರ ನಿರ್ಮಾಣ ಚಳವಳಿಯ ಭಾಗವಾಗಿ ದೇಶಾದ್ಯಂತ ನಡೆಯುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶಿಕ್ಷಣ ಕ್ಷೇತ್ರದ ಕೇಸರೀಕರಣ, ಬೀದಿ ಹೋರಾಟ, ನೈತಿಕ ಪೊಲೀಸ್‌ಗಿರಿ, ಗೋಹತ್ಯೆ ನಿಷೇಧ ಅಭಿಯಾನ, ಜಾನುವಾರು ಸಾಗಾಟಕ್ಕೆ ಅಡ್ಡಿ, ಚರ್ಚ್ ದಾಳಿ, ಮತ ಪ್ರಚಾರಕರ ಮೇಲೆ ಹಲ್ಲೆ, ಕೋಮು ಗಲಭೆಗಳು ಮುಂತಾದ ನಾನಾ ಸ್ತರದ, ನಾನಾ ವಿಧದ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಳ್ಳುತ್ತವೆ. ಮಾತ್ರವಲ್ಲದೆ, ಸದಾ ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಕಿರುಚಾಡುತ್ತ, ಸ್ತ್ರೀಯರು ಹತ್ತತ್ತು ಮಕ್ಕಳನ್ನು ಹೆರಬೇಕು ಎನ್ನುತ್ತ, ಕೆಲವೊಮ್ಮೆ ಹಿಂಸಾ ಕೃತ್ಯಗಳಲ್ಲಿ ತೊಡಗುತ್ತ, ಕೆಲವೊಮ್ಮೆ ಸಾರ್ವಜನಿಕರಿಗೂ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಕರೆನೀಡುತ್ತವೆ. 

ಈ ಸಂದರ್ಭದಲ್ಲಿ, ಇದನ್ನೆಲ್ಲ ಗಮನಿಸುತ್ತಿರುವ ಪ್ರಜ್ಞಾವಂತ ಹಿಂದೂಗಳೆಲ್ಲರೂ ಕೇಳಲೇಬೇಕಾದ ನೂರಾರು ಪ್ರಶ್ನೆಗಳಿವೆ. ಉದಾಹರಣೆಗೆ, ಹಿಂದೂ ಧರ್ಮದ ನೈಜ ಉನ್ನತಿ, ಸುಧಾರಣೆ ಹಾಗೂ ಹಿಂದೂ ಜನರ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಘ ಪರಿವಾರದ ಸಾಧನೆಗಳೇನು? ದಲಿತರ ಹಕ್ಕುಗಳಿಗಾಗಿ, ಅವರಿಗೆ ವಿದ್ಯೆ, ಉದ್ಯೋಗಾವಕಾಶ ಮತ್ತು ಸಮಾಜದಲ್ಲಿ ಗೌರವಯುತ ಸ್ಥಾನ ಒದಗಿಸಲು ಇವರೇನು ಮಾಡಿದ್ದಾರೆ? ಮೇಲ್ಜಾತಿ ಜನರು ದಲಿತರ ಮೇಲೆ ದೌರ್ಜನ್ಯ ನಡೆಸುವಾಗ, ಅಸ್ಪಶ್ಯರಿಗೆ ಮಂದಿರ ಪ್ರವೇಶ ನಿರಾಕರಿಸುವಾಗ ಇವರು ಯಾರ ಪರ ನಿಂತವರು? ಅಮಾನವೀಯ ಜಾತಿಪದ್ಧತಿ, ಪಂಕ್ತಿಭೇದ, ಮಡೆಸ್ನಾನ, ಅಜಲು ಪದ್ಧತಿ ವಿರುದ್ಧ ಇವರಿಂದ ಎಷ್ಟು ಹೋರಾಟ ನಡೆದಿದೆ? ಕಾರ್ಪೊರೇಟ್ ಸಂಸ್ಥೆಗಳು ಆದಿವಾಸಿಗಳ, ಬುಡಕಟ್ಟುಗಳ, ರೈತರ ಭೂಮಿಯನ್ನು ಕಬಳಿಸುವಾಗ, ಕಾರ್ಮಿಕರ ಶೋಷಣೆ ಮಾಡುವಾಗ; ಸರಕಾರಗಳು ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವಾಗ ಇವರು ಎಲ್ಲಿರುತ್ತಾರೆ? ಗ್ರಾಮೀಣ ಕೂಲಿಕಾರ್ಮಿಕರ ಬದುಕನ್ನು ಸುಧಾರಿಸಲು ಇವರಲ್ಲೇನು ಯೋಜನೆ ಇದೆ? ಸ್ತ್ರೀ ಸಮಾನತೆಗಾಗಿ ಇವರೆಷ್ಟು ಹೋರಾಟ ಮಾಡಿದ್ದಾರೆ?..... ವಾಸ್ತವ ಹೀಗಿದ್ದರೂ ಸಂಘ ಪರಿವಾರದ ಈ ಸಂಘಟನೆಗಳು ಸಾರ್ವಜನಿಕ ವೇದಿಕೆಗಳಲ್ಲಿ, ಪ್ರಕಟಣೆಗಳಲ್ಲಿ ತಮ್ಮನ್ನು ‘ಹಿಂದೂ/ಹಿಂದೂಪರ’ ಎಂದು ಬಣ್ಣಿಸಿಕೊಳ್ಳುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಲ್ಲದೆ ಇನ್ನೇನೂ ಇಲ್ಲವೆಂಬುದು ಸ್ಫಟಿಕದಷ್ಟು ಸ್ಪಷ್ಟ. ಆದರೆ ತಿಳಿದೋ ತಿಳಿಯದೆಯೋ ಇವತ್ತು ಮಾಧ್ಯಮಗಳಲ್ಲಿಯೂ ಇಂತಹ ಪದಪುಂಜಗಳ ಬಳಕೆ ವಿಪರೀತ ಹೆಚ್ಚಿದೆ. ಪರಿಣಾಮವಾಗಿ ಇವೆಲ್ಲವೂ ಹಿಂದೂ ಧರ್ಮದ ಸಂಘಟನೆಗಳು, ಹಿಂದೂ ಧರ್ಮ ಮತ್ತು ಹಿಂದೂ ಜನರ ಉದ್ಧಾರಕ್ಕಾಗಿ ಹೋರಾಡುವವರು ಎಂಬ ದೊಡ್ಡದೊಂದು ತಪ್ಪು ಸಂದೇಶ ರವಾನೆಯಾಗುತ್ತ್ತಿದೆ. 

ಸಹಜವಾಗಿ ಇಂತಹ ಅಪಪ್ರಚಾರಕ್ಕೆ ಬಲಿಯಾಗುವವರೆಂದರೆ ಇವರ ನೈಜ ಕಾರ್ಯಸೂಚಿ ಏನೆಂಬುದನ್ನು ಅರಿಯದ ಅಮಾಯಕ ಜನಸಾಮಾನ್ಯರು. ಹೀಗೆ ಧರ್ಮಕ್ಕೆ ಸಂಬಂಧಿಸಿದ ಹೆಸರುಗಳನ್ನು ಇಟ್ಟುಕೊಂಡು ರಾಜಕೀಯ ಸಿದ್ಧಾಂತವೊಂದಕ್ಕೆ ಬದ್ಧವಾಗಿ ಕಾರ್ಯಾಚರಿಸುತ್ತಿರುವ ಈ ಸಂಘಟನೆಗಳು ‘ಹಿಂದೂ/ಹಿಂದೂಪರ’ ಸಂಘಟನೆಗಳೆಂದು ಜನಮಾನಸದಲ್ಲಿ ಗುರುತಿಸಲ್ಪಟ್ಟಾಗ ಅದು ಹಿಂದೂ ಸಮಾಜದ ಸಹಾನುಭೂತಿ, ಬೆಂಬಲ ಮತ್ತು ಒಪ್ಪಿಗೆ ಪಡೆಯುವುದಕ್ಕಾಗಿ ಸಂಘ ಪರಿವಾರ ಹಮ್ಮಿಕೊಂಡಿರುವ ಯೋಜನೆಗೆ ಪೂರಕವಾಗಿ ಪರಿಣಮಿಸುತ್ತದೆ. ಅಂತಿಮವಾಗಿ ಅದರ ‘ಹಿಂದೂ ರಾಷ್ಟ್ರ’ ಗುರಿಸಾಧನೆಗೆ ಹಾದಿ ಸುಗಮವಾಗುತ್ತದೆ. ಆದುದರಿಂದ ಸಾಂಸ್ಕೃತಿಕ ಮುಖವಾಡದ ರಾಜಕೀಯ ಸಂಸ್ಥೆಯಾದ ಆರೆಸ್ಸೆಸ್ ಮತ್ತದರ ಉಪಸಂಘಟನೆಗಳನ್ನು ‘ಹಿಂದೂ/ಹಿಂದೂಪರ’ ಎಂದು ಬಣ್ಣಿಸುವವರೆಲ್ಲರೂ ಹಾಗೆ ಹೇಳುವುದು ಎಷ್ಟರ ಮಟ್ಟಿಗೆ ಸರಿಯೆಂದು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮ ಸಮಾಜದ ಮೇಲೆ ಅದರಿಂದಾಗುವ ಹಾನಿಯನ್ನು ಅರಿಯಬೇಕಾಗಿದೆ. ಅವರು ಭಾರತದ ಬಹುಸಂಸ್ಕೃತಿಯ ಉಳಿವು ಮತ್ತು ಮತೀಯ ಸಾಮರಸ್ಯ ಬಯಸುವವರೆಂದಾದರೆ ಈಗಿಂದೀಗಲೆ ಇಂತಹ ಗುಂಪುಗಳನ್ನು ಅವುಗಳ ನೈಜ ಹೆಸರಿನಿಂದ ಅರ್ಥಾತ್ ಹಿಂದೂ ಮೂಲಭೂತವಾದಿ ಸಂಘಟನೆ ಅಥವಾ ಆರೆಸ್ಸೆಸ್ ಸಂಘಟನೆ ಅಥವಾ ಸಂಘ ಪರಿವಾರದ ಸಂಘಟನೆ ಎಂದೇ ಕರೆಯಬೇಕಾಗಿದೆ. ತಿಳಿದೋ ತಿಳಿಯದೆಯೋ ‘ಹಿಂದೂ/ಹಿಂದೂಪರ’ ಎಂಬ ಪದಗಳನ್ನು ಬಳಸುತ್ತಿರುವ ಮಾಧ್ಯಮಗಳೆಲ್ಲ ತಾವು ಭಾರತ ಎಂಬ ಪ್ರಜಾಸತ್ತಾತ್ಮಕ ಗಣತಂತ್ರವನ್ನು ಎತ್ತಿನಿಲ್ಲಿಸಬೇಕಾದ ನಾಲ್ಕನೆ ಕಂಬ ಎಂಬುದನ್ನು ನೆನಪಿಸಿಕೊಂಡು ಇಂತಹ ತಪ್ಪು ಪದಬಳಕೆಯನ್ನು ಕೂಡಲೇ ಕೈಬಿಡುವ ಮೂಲಕ ಸಮಾಜದ ಹಿತವನ್ನು ಕಾಪಾಡಬೇಕಾಗಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...