Thursday, November 05, 2015

ಗುಜರಾತ್ ಮಾದರಿ ಎಂದರೆ ಅಂಗನವಾಡಿ ಮಕ್ಕಳಿಗೂ ‘ಜಾತಿ ಗೋಡೆ!

 ನ್ಯೂಸ್ ಕನ್ನಡ ನೆಟ್ ವರ್ಕ್

ದೇಶಕ್ಕೇ ಗುಜರಾತ್ ಮಾದರಿ ಆಡಳಿತ ಬೇಕಾಗಿದೆ ಎಂಬ ಮಾಧ್ಯಮಗಳ ಅಬ್ಬರದ ಪ್ರಚಾರದ ನಡುವೆ ಕಳೆದ ಲೋಕಸಭಾ ಚುನಾವಣೆಯ ವೇಳೆ ಸೃಷ್ಟಿಸಲಾದ ‘ಮೋದಿ ಅಲೆ’ಯ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆದರೆ ದೇಶಕ್ಕೆ ಮಾದರಿಯಾಗ ಬೇಕಾದ ರಾಜ್ಯದಲ್ಲಿ ಇಂದಿಗೂ ಅಸ್ಪೃಶ್ಯತೆ ಯಾವ ಮಟ್ಟಿಗೆ ಜೀವಂತವಾಗಿದೆ ಎಂದರೆ, ಚಿಕ್ಕ ಚಿಕ್ಕ ಮಕ್ಕಳ ಮೇಲೂ ಈ ಪ್ರಯೋಗ ಮುಂದುವರಿದಿದೆ. ಹೌದು, ಗುಜರಾತ್ ನ ಪಟಾನ್ ಜಿಲ್ಲೆಯ ಹಾಜಿಪುರ್ ನಲ್ಲಿ 159 ಮತ್ತು 160 ನಂಬ್ರದ ಎರಡು ಪ್ರತ್ಯೇಕ ಅಂನವಾಡಿ ಕೇಂದ್ರಗಳಿವೆ. ಹೆಚ್ಚು ಮಕ್ಕಳಿದ್ದಾಗ ಹೆಚ್ಚು ತರಗತಿಗಳನ್ನು ವಿಭಜಿಸುವುದು ಸಮರ್ಥನೀಯವಾದುದು. ಆದರೆ ಇಲ್ಲಿನ ಅಂಗನವಾಡಿ ಕೇಂದ್ರ ವಿಭಜನೆ ಇದೀಗ ವಿವಾದದ ಕೇಂದ್ರವಾಗಿದೆ.

ಒಂದು ದಿನ ಮೂರು ವರ್ಷದ ಹುಡುಗಿ ಮಾನ್ವಿ ಚಮ್ಮಾರ್ ತನ್ನ 159ನೆ ನಂಬರ್ ನ ಅಂಗನವಾಡಿ ಬಿಟ್ಟು, ಪಕ್ಕದ ಮನೆಯ ನಿವಾಸಿ, ನಾಲ್ಕನೆ ವಯಸ್ಸಿನ ಸ್ನೇಹಿತೆ ಸುಹಾನಿ ಪಟೇಲ್ ಇರುವ 160ನೆ ನಂಬರ್ ನ ಅಂಗನವಾಡಿಗೆ ಹೋಗುತ್ತಾಳೆ. ಆದರೆ ಅವಳನ್ನು ಆ ಅಂಗನವಾಡಿಯ ಗೇಟಿನಲ್ಲೇ ತಡೆಯಲಾಗುತ್ತದೆ ಮತ್ತು 159ನೆ ಅಂಗನವಾಡಿಗೆ ಹೋಗುವಂತೆ ಹೇಳಲಾಗುತ್ತದೆ.

“ಅಂಗನವಾಡಿ ನಂಬರ್ 159 ನಮಗೆ ದಲಿತರಿಗಾಗಿದೆ. ಇನ್ನೊಂದು ಅಂಗನವಾಡಿಯ ಜನರು ನನ್ನ ಮಗಳನ್ನು ಆಕೆಯ ಅಂಗನವಾಡಿಗೆ ಹೋಗಲು ಹೇಳಿದ್ದಾರೆ. ನಾನು ಯಾಕೆ ನನ್ನ ಸ್ನೇಹಿತೆಯೊಂದಿಗೆ 160ನೆ ನಂಬರ್ ನ ಅಂಗನವಾಡಿಗೆ ಹೋಗಬಾರದು? ಎಂದು ಮಗಳು ಬಂದು ಮನೆಯಲ್ಲಿ ಕೇಳುತ್ತಾಳೆ. ನನಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ” ಎಂದು ತಾಯಿ ಪಿಂಕಿ ಚಮ್ಮಾರ್ ವಿಷಾಧ ವ್ಯಕ್ತ ಪಡಿಸುತ್ತಾರೆ.

ಅಹ್ಮದಾಬಾದ್ ನಿಂದ ಕೇವಲ 130 ಕಿ.ಮೀ. ದೂರದಲ್ಲಿರುವ ಹಾಜಿಪುರ್ ಗ್ರಾಮದಲ್ಲಿ ಸುಮಾರು 2,000 ಜನರು ವಾಸಿಸುತ್ತಾರೆ. ಪಟಾನ್ ಜಿಲ್ಲೆಯ ಇತರ ಗ್ರಾಮಗಳಲ್ಲಿರುವಂತೆ ಹಾಜಿಪುರ್ ನಲ್ಲಿಯೂ ಪಟೇಲರ ಜನ ಸಂಖ್ಯೆ ಅಧಿಕವಿದೆ. ಗ್ರಾಮದಲ್ಲಿ ಕೇವಲ 40 ದಲಿತರ ಮನೆಗಳಿವೆ. ಅವುಗಳೂ ಎರಡು ಮೊಹಲ್ಲಾಗಳಲ್ಲಿ ಹಂಚಿ ಹೋಗಿವೆ.

ದಲಿತ ಮಕ್ಕಳಿಗಾಗಿ ನಿರ್ಮಿಸಲಾಗಿರುವ ಅಂಗನವಾಡಿ ನಂಬರ್ 159
ದಲಿತ ಮಕ್ಕಳಿಗಾಗಿ ನಿರ್ಮಿಸಲಾಗಿರುವ ಅಂಗನವಾಡಿ ನಂಬರ್ 159

ಹಾಜಿಪುರದಲ್ಲಿರುವ ಈ ಎರಡು ಅಂಗನವಾಡಿಗಳಲ್ಲಿ ಆರು ತಿಂಗಳಿನಿಂದ ಆರು ವರ್ಷಗಳ ವರೆಗಿನ ಮಕ್ಕಳಿಗೆ ದಾಖಲಾತಿ ನೀಡಲಾಗುತ್ತದೆ. ಆದರೆ ಈ ಮಕ್ಕಳು ತಮ್ಮ ಶಾಲೆಯಲ್ಲಿ ಮೊದಲು ಕಲಿಯುವುದೇ ಅಸ್ಪೃಶ್ಯತೆಯ ಪಾಠ!.
ಅಂಗನವಾಡಿ 159ನ್ನು 1997ರಲ್ಲಿ ಆರಂಭಿಸಲಾಗಿದೆ. ಮೂರು ವರ್ಷಗಳ ನಂತರ ಬ್ರಾಹ್ಮಣರು ಮತ್ತು ಪಟೇಲರು ತಮಗೆ ಪ್ರತ್ಯೇಕ ಅಂಗನವಾಡಿ ತೆರೆಯುವಂತೆ ಬೇಡಿಕೆಯಿಟ್ಟಿದ್ದರು ಮತ್ತು ಪಕ್ಕದ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಮ್ಮ ಮಕ್ಕಳಿಗೆ ಅಂಗನವಾಡಿ ಕೇಂದ್ರವನ್ನು ಆರಂಭಿಸಿಯೂ ಬಿಟ್ಟಿದ್ದರು. ನಂಬರ್ 160 ಅಂಗನವಾಡಿ ಇದೀಗ ತನಗೇ ಒಂದು ಆವರಣವನ್ನು ಸೃಷ್ಟಿಸಿಕೊಂಡಿದೆ ಮತ್ತು ಎರಡು ಅಂಗನವಾಡಿಗಳನ್ನು ಪ್ರತ್ಯೇಕಿಸುವುದಕ್ಕಾಗಿ ಅವುಗಳ ನಡುವೆ ಗೋಡೆಯೊಂದನ್ನೂ ಕಟ್ಟಲಾಗಿದೆ.

ಬೆಳಗ್ಗೆ 9 ಗಂಟೆಗೆ ವರ್ಷಾಬೆನ್ ರಾವಲ್ ತನ್ನ ಎರಡೂವರೆ ವರ್ಷದ ಮಗ ಆರ್ಯನನ್ನು ನಂಬರ್ 160 ಅಂಗನವಾಡಿಗೆ ಕರೆದುಕೊಂಡು ಆಗಮಿಸುತ್ತಾಳೆ. “ಬ್ರಾಹ್ಮಣರು ಮತ್ತು ಪಟೇಲರ ಮಕ್ಕಳು ಈ ಅಂಗನವಾಡಿಗೆ ಬರುತ್ತಾರೆ. ಇನ್ನೊಂದು ಅದು ದಲಿತರಿಗೆ. ನನ್ನಂತಹ ಹೆತ್ತವರು ತಮ್ಮ ಮಕ್ಕಳನ್ನು ಅವರ ಮಕ್ಕಳೊಂದಿಗೆ ಕುಳಿತುಕೊಳ್ಳುವುದಾಗಲಿ, ತಿನ್ನುವುದನ್ನಾಗಲಿ ಒಪ್ಪುವುದಿಲ್ಲ” ಎಂದು ಆಕೆ ಹೇಳುತ್ತಾಳೆ.

ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಗೆ ಮುನ್ನಾ ಮಾಧ್ಯಮಗಳ ಪ್ರಕಾರ ಗುಜರಾತ್ ತುಂಬಾ ಮುಂದುವರಿದ ಹಾಗೂ ದೇಶಕ್ಕೇ ಮಾದರಿ ರಾಜ್ಯ. ಆದರೆ ರಾಜ್ಯ ರಾಜಧಾನಿಗಿಂತ ಕೇವಲ 130 ಕಿ.ಮೀ. ದೂರದ ಹಳ್ಳಿಯೊಂದರಲ್ಲಿ ಇಂತಹ ವಾತಾವರಣವಿರುವುದು ನಿಜಕ್ಕೂ ಆತಂಕಕಾರಿಯಾದುದಾಗಿದೆ.

ಅಂಗನವಾಡಿ 160ರಲ್ಲಿ ಬ್ರಾಹ್ಮಣ ಮತ್ತು ಇತರ ಮೇಲ್ಜಾತಿ ಮಕ್ಕಳು
ಅಂಗನವಾಡಿ 160ರಲ್ಲಿ ಬ್ರಾಹ್ಮಣ ಮತ್ತು ಇತರ ಮೇಲ್ಜಾತಿ ಮಕ್ಕಳು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...