Thursday, November 12, 2015

ಗುಲಾಮ್ ಅಲಿ, ಪಾಕಿಸ್ತಾನ ಮತ್ತು ಮುಸ್ಲಿಂ


ಸಂಗೀತಕ್ಕೆ ಇರುವುದೇ ಏಳು ಸ್ವರ. ಅದರಲ್ಲಿ ನನ್ನದು ಯಾವುದು, ನಿನ್ನದು ಯಾವುದು?
ಸೌಜನ್ಯ : ಪ್ರಜಾವಾಣಿ
ಹಿಂದೂಸ್ತಾನಿ ಸಂಗೀತದಲ್ಲಿ ಅನೇಕ ಪ್ರಕಾರಗಳಿವೆ. ಅವುಗಳಲ್ಲಿ ಗಜಲ್ ಕೂಡ ಒಂದು. ಗಜಲ್ ಗಾಯಕರು ಪಾಕಿಸ್ತಾನದಲ್ಲೂ ಇದ್ದಾರೆ, ಭಾರತದಲ್ಲೂ ಇದ್ದಾರೆ.  ಪಾಕಿಸ್ತಾನದ ಶ್ರೇಷ್ಠ ಗಾಯಕರಾದ ಉಸ್ತಾದ ಬಡೇ ಗುಲಾಮ್‌ ಅಲಿಖಾನ್, ನಜಾಕತ್ ಅಲಿ ಸಲಾಮತ್ ಅಲಿ, ಅದ್ನಾನ್ ಸಮಿ, ಮೆಹದಿ ಹಸನ್, ಗುಲಾಮ್ ಅಲಿ ಮುಂತಾದವರ ಗಾಯನವೆಂದರೆ ಭಾರತದಲ್ಲಿ ಅಚ್ಚುಮೆಚ್ಚು. ಇತ್ತೀಚೆಗೆ ಭಾರತದಲ್ಲಿ ಹಾಡಲು ಬಂದ ಗುಲಾಮ್ ಅಲಿಯವರಿಗೆ ಇಲ್ಲಿ ಅಡ್ಡಿಯುಂಟಾಗಿದೆ. ಇದರಿಂದ ಸಂಗೀತ ಲೋಕಕ್ಕೆ ನಿರಾಶೆ, ಆಘಾತವುಂಟಾಗಿದೆ. ಮೇರು ಗಜಲ್‌ ಗಾಯಕ ಗುಲಾಮ್ ಅಲಿ ಅವರು ಭಾರತದಲ್ಲಿ ಹಾಡಬಾರದು ಎಂದಾದರೆ ಭಾರತದಲ್ಲಿ ಯಾರೂ ಕೂಡ ಹಿಂದೂಸ್ತಾನಿ ಸಂಗೀತವನ್ನು ಹಾಡಲು ಸಾಧ್ಯವಿಲ್ಲ ಎನ್ನುವ ಅರ್ಥವೂ ಹೊರಡುತ್ತದೆ. ಯಾರೂ ಎಂದರೆ ಹಿಂದೂ, ಮುಸ್ಲಿಂ, ಫಾರಸಿ, ಜೈನ್, ಕ್ರೈಸ್ತ, ಸಿಖ್ ಮುಂತಾದ ಧರ್ಮಗಳ ಗಾಯಕರು ಎಂದರ್ಥ.

ಪಾಕಿಸ್ತಾನ ಕುರಿತು ಭಾರತದ ಕೆಲವು ಮನಸ್ಸುಗಳಿಗೆ ಇರುವ ಹಲವು ದೃಷ್ಟಿಕೋನಗಳಲ್ಲಿ ಎರಡು ವಿಶೇಷ ಅನಿಸುತ್ತದೆ. ಒಂದು ರಾಷ್ಟ್ರೀಯತೆಯ ದೃಷ್ಟಿಕೋನ, ಮತ್ತೊಂದು ಧಾರ್ಮಿಕತೆಯ ದೃಷ್ಟಿಕೋನ. ಭಾರತದ ರಾಷ್ಟ್ರೀಯತೆಯ ದೃಷ್ಟಿಕೋನವು ಸದಾ ಪಾಕಿಸ್ತಾನವನ್ನು ಎದುರು ದೇಶವೆಂದು ನೋಡುತ್ತದೆ. ಧಾರ್ಮಿಕತೆಯ ದೃಷ್ಟಿಕೋನವು ಪಾಕಿಸ್ತಾನವನ್ನು ಮುಸ್ಲಿಂ ಎಂಬ ಉಪಾಧಿಯಿಂದ ನೋಡುತ್ತದೆ. ಈ ಎರಡೂ ದೃಷ್ಟಿಕೋನಗಳು ಪಾಕಿಸ್ತಾನವು ತನ್ನದಲ್ಲವೆನ್ನುವುದನ್ನೇ ಹಟವಾಗಿ ಸಾಧಿಸುತ್ತವೆ. ಒಂದು ವಿಚಿತ್ರವಾದ ಆತ್ಮಪ್ರಶ್ನೆ ಎಂದರೆ ಅಮುಸ್ಲಿಂ ಭಾರತದ ಅವತಾರವನ್ನು ಪ್ರತ್ಯಕ್ಷೀಕರಣ ಮಾಡಿಕೊಳ್ಳುವುದು ಹೇಗೆ ಎಂಬುದು. ಅಮುಸ್ಲಿಂ ಭಾರತವೊಂದು ಇದೆಯಾ ಅಥವಾ ಅಂಥಾದ್ದು ಇರಲು ಸಾಧ್ಯವೆ? ಹಾಗೆಯೇ ಅಮುಸ್ಲಿಂ ಹಿಂದೂಸ್ತಾನಿ ಸಂಗೀತವನ್ನು ಊಹಿಸಲೂ ಸಾಧ್ಯವಿಲ್ಲ.

ವಿಶೇಷವಾಗಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಮಾತಾಡುವಾಗ ಇಂತಹ ಪ್ರಶ್ನೆಗಳ ಬುಗ್ಗೆಗಳು ಪುಟಪುಟಿದು ಮೇಲೇಳುತ್ತವೆ. ಪಂಡಿತ ಬಸವರಾಜ ಬೆಂಡಿಗೇರಿಯವರೆಂಬ ತಬಲಾವಾದಕರು ಧಾರವಾಡದಲ್ಲಿದ್ದರು. ಬೆಂಡಿಗೇರಿಯವರು, ಮಹಾನ್ ತಬಲಾ ಗುರು ಉಸ್ತಾದ್ ಮೆಹಬೂಬ್‌ಸಾಬ್ ಮಿರಜಕರ್ ಅವರ ಖಾಸಾ ಶಿಷ್ಯರು. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಅವರು ಹೇಳುತ್ತಿದ್ದ ಒಂದು ಮಾತು ಕೇಳಿ ನಾವು ಗಾಬರಿಯಾಗುತ್ತಿದ್ದೆವು. ಉಸ್ತಾದರು ಬೆಂಡಿಗೇರಿಯವರ ಕೈಯಲ್ಲಿ ಮಾರ್ಕೆಟ್‌ನಿಂದ ಮಟನ್ ತರಿಸುತ್ತಿದ್ದರಂತೆ. ಬೆಂಡಿಗೇರಿಯವರೇ ಅದನ್ನು ತೊಳೆದುಕೊಂಡು ಅಡುಗೆ ಮನೆಗೆ ಹೋಗಿ ಗುರುಮಾತೆಗೆ ಕೊಡುತ್ತಿದ್ದರಂತೆ.


ಗುರುಗಳು ತಮ್ಮ ಮಡದಿಗೆ ಹೀಗೆ ಹೇಳುತ್ತಿದ್ದರಂತೆ:‘ಏ ಬಚ್ಚೇಕೋ ದಾಲ ಚಾವಲ ಖಿಲಾವೋ ಕ್ಯೂಂಕೀ ಏ ಹಿಂದೂ ಹೈ, ಏ ಲಿಂಗಾಯತ ಹೈ’ ಗಜಲ್ ಗಾಯಕ ಗುಲಾಮ್ ಅಲಿ ಅವರು ಮೊನ್ನೆ ಆಲ್ ಇಂಡಿಯಾ ರೇಡಿಯೊ ಉರ್ದು ಸರ್ವೀಸ್‌ ಸ್ಟೇಷನ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಶ್ರೇಷ್ಠ ಮಾತುಗಳನ್ನಾಡಿದರು. ಅವರು ಹೀಗೆ ಹೇಳಿದರು. ‘ಬಿಬಿಸಿ ಲಂಡನ್‌ನ ಒಂದು ಸಂದರ್ಶನದಲ್ಲಿ ಪ್ರಖ್ಯಾತ ಸಂಗೀತ ನಿರ್ದೇಶಕ ಮದನ್‌ಮೋಹನ್ ಅವರು ನನ್ನ ಬಗ್ಗೆ ಬಹಳ ಪ್ರೀತಿಯ ಮಾತಾಡಿದ್ದರು’ ಎಂದು. ಸಂದರ್ಶಕರು ಅವರಿಗೆ ಕೇಳಿದ ಒಂದು ಪ್ರಶ್ನೆ ಹೀಗಿತ್ತು. ‘ಹಿಂದೂಸ್ತಾನದಲ್ಲಿ ನಿಮ್ಮ ಇಷ್ಟದ ಉಪ ಶಾಸ್ತ್ರೀಯ ಗಾಯಕರು ಯಾರು?’ ಎಂದು. ಅದಕ್ಕೆ ಗುಲಾಮ್ ಅಲಿ ಅವರು ‘ಮಾಶಲ್ಲಾ ಮಾಶಲ್ಲಾ! ಗಿರಿಜಾದೇವಿ, ನಿರ್ಮಲಾದೇವಿ, ಬೇಗಂ ಅಖ್ತರ್, ಲಕ್ಷ್ಮೀಶಂಕರ್ ಪಂಡಿತ್, ಜಗಜಿತ್‌ ಸಿಂಗ್ ಮುಂತಾದವರು ನನ್ನ ಇಷ್ಟದವರು’ ಎಂದರು. ಅವರು ಭಾರತದ ಗಜಲ್ ಗಾಯಕ ಜಗಜಿತ್‌ ಸಿಂಗ್ ಅವರನ್ನು ‘ಭಾಯಿ’ ಎಂದು ಕರೆಯುತ್ತಿದ್ದರು.

ನಾನು ಮತ್ತು ನನ್ನ ಸಂಗೀತ ಗೆಳೆಯರು ಗುಲಾಮ್ ಅಲಿ ಅವರ  ಹಾಡುಗಾರಿಕೆ ಕೇಳಿ ಮೂಕವಿಸ್ಮಿತರಾಗುತ್ತೇವೆ. ಪಂಡಿತ ಭೀಮಸೇನ ಜೋಶಿ ಅವರ ಗುರು ಸವಾಯಿ ಗಂಧರ್ವರು ಹಿಂದೂಗಳು (ಬ್ರಾಹ್ಮಣರು) ಮತ್ತು ಅವರ ಗುರು ಉಸ್ತಾದ್ ಅಬ್ದುಲ್ ಕರೀಂಖಾನ್ ಸಾಹೇಬರು ಮುಸ್ಲಿಮರು. ಆದರೆ ಅವರನ್ನು ಬರೀ ಧರ್ಮದ ಚೌಕಟ್ಟಿನಲ್ಲಿ ನೋಡಲಾದೀತೇ! ಅವರು ಭೈರವಿ ರಾಗದಲ್ಲಿ ‘ಜಮುನಾಕೇ ತೀರ’ ಎಂಬ ಠುಮ್ರಿಯನ್ನು ಹಾಡುತ್ತಿದ್ದರು. ಪಾಕಿಸ್ತಾನದ ಉಸ್ತಾದ್ ಬಡೇಗುಲಾಮ್ ಅಲಿ ಖಾನ್ ಸಾಹೇಬರು ಪಹಾಡಿ ರಾಗದಲ್ಲಿ ‘ಹರಿ ಓಂ’ ಹಾಡುತ್ತಿದ್ದರು.  ಮಹ್ಮದ್ ರಫಿ ಅವರು ‘ಬೈಜು ಬಾವರಾ’ ಸಿನಿಮಾದಲ್ಲಿ ಮಾಲಕೌಂಸ ರಾಗದಲ್ಲಿ ‘ಹರಿ ಓಂ ಮನ ತರಫತ ಹರಿ ದರುಶನಕೋ ಆಜ’ ಹಾಡಿದ್ದಾರೆ.

ಮೇರುಖಂಡ ಶೈಲಿಯ ಮೇರು ಗಾಯಕ ಉಸ್ತಾದ್ ಅಮೀರ್‌ಖಾನ್ ಸಾಹೇಬರ ಮಾನಸಗುರು ಹಾಗೂ ಮೇರುಖಂಡ ಗಾಯಕಿಯ ಸೃಷ್ಟಿಕರ್ತ ಉಸ್ತಾದ್ ವಹೀದ್ ಖಾನ್ ಸಾಹೇಬರು ಜಂಗಮ ಮೂರ್ತಿಗಳಾಗಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಗುರುಗಳು. ವಹೀದ್‌ಖಾನ್ ಸಾಹೇಬರು ಶಿವಯೋಗ ಮಂದಿರದಲ್ಲಿ ಹಲವು ವರ್ಷ ಇದ್ದು ಪಂಚಾಕ್ಷರ ಗವಾಯಿಗಳಿಗೆ, ಪುಟ್ಟರಾಜ ಗವಾಯಿಗಳಿಗೆ ಮತ್ತು ಬಸವರಾಜ ರಾಜಗುರುಗಳಿಗೆ ಸಂಗೀತ ಕಲಿಸಿ ಹೋಗಿದ್ದಾರೆ. ನಾನು ಭೈರವ ರಾಗದಲ್ಲಿ ವಿಲಂಬಿತ ಏಕತಾಲದಲ್ಲಿ ‘ಅಲ್ಲಾ ಹೋ ಅಕ್ಬರ್’ ಎಂಬ ಚೀಜ್ ಕಟ್ಟಿ ಹಾಡಿದ್ದೇನೆ. ಅದು ಗುಲ್ಬರ್ಗ ಆಕಾಶವಾಣಿಯಿಂದ ಪ್ರಸಾರವಾಗಿದೆ. ಪಂಡಿತ ಮಲ್ಲಿಕಾರ್ಜುನ ಮನ್ಸೂರರು ಶಿವಮತ ಭೈರವ ರಾಗದಲ್ಲಿ ‘ಪ್ರಥಮ ಅಲ್ಲಾ’ ಎಂಬ ಚೀಜನ್ನು ಹಾಡಿದ್ದಾರೆ. ಅವರ ಗುರು ಉಸ್ತಾದ್ ಮಂಜೀಖಾನ್, ಬುರ್ಜಿಖಾನ್‌ರ ತಂದೆ ಉಸ್ತಾದ್ ಅಲ್ಲಾದಿಯಾ ಖಾನ್ ಸಾಹೇಬರು ಬಹಾದ್ದೂರಿ ತೋಡಿ ರಾಗದಲ್ಲಿ ‘ಏ ಮಹಾದೇವ ಪಾರ್ವತಿ ಪತೇ’ ಎಂಬ ಚೀಜನ್ನು ಕಟ್ಟಿ ಹಾಡಿದ್ದಾರೆ ಮತ್ತು ಕಲಿಸಿದ್ದಾರೆ.


ಅವರು ದಿನಾಲೂ ಮುಂಜಾನೆ ತಮ್ಮ ಮಕ್ಕಳೊಂದಿಗೆ ಈ ಚೀಜನ್ನು ಹಾಡುತ್ತಿದ್ದರಂತೆ. ಪರವೀನ್ ಸುಲ್ತಾನಾ ಅವರು ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ಅವರು ಭೈರವಿ ರಾಗದ ‘ಭವಾನಿ ದಯಾನಿ’ ಎಂಬ ಚೀಜನ್ನು ಬಹಳ ಸಂತೋಷದಿಂದ ಹಾಡುತ್ತಾರೆ. ನಮ್ಮ ಗುರುಗಳಾದ ಪಂಡಿತ ಬಸವರಾಜ ರಾಜಗುರು ಅವರು ಉಸ್ತಾದ್ ಅಮಾನ್ ಅಲಿ ಬೆಂಡಿಗೇರಿ ಅವರ ಬಳಿ ಮತ್ತು ತಾವು ಕ್ವೆಟ್ಟಾ, ಕರಾಚಿಯಲ್ಲಿದ್ದಾಗ ಕಲಿತುಬಂದ ‘ಬಾನ ನೈನೋಂಕಾ ಜಾಲಿಂನೇ’ ಮತ್ತು ‘ತೇರಿ ತಿರಚಿ ನಜರಿಯಾಕೇ ಬಾನ್’ ಎಂಬ ಉರ್ದು ಕವ್ವಾಲಿಗಳನ್ನು ಹಾರಾಡಿ ಹಾಡುತ್ತಿದ್ದರು. ಎಲ್ಲಾ ಹಿಂದೂಸ್ತಾನಿ ಸಂಗೀತಗಾರರು ಉರ್ದು, ಹಿಂದಿ, ಬ್ರಿಜ್‌, ಪಂಜಾಬಿ, ಪಾಲಿ, ಗುಜರಾತಿ ಭಾಷೆಗಳ ಚೀಜುಗಳನ್ನು ಹಾಡುವುದು ಗೊತ್ತೇ ಇದೆ.  ಹರಿಹರನ್, ಜಗಜಿತ್‌ ಸಿಂಗ್, ಅನೂಪ್ ಝಲೋಟಾ, ಪಂಕಜ ಉದಾಸ, ಭೂಪೇಂದರ್, ಮನಹರ್ ಮುಂತಾದವರು ಉರ್ದು ಗಜಲ್‌ಗಳನ್ನು ಕೂಡ ಹಾಡುತ್ತಾರಲ್ಲ!

ಉಸ್ತಾದ್ ಅಮೀರ್ ಖಾನ್ ಸಾಹೇಬರು ಬಸವರಾಜ ರಾಜಗುರು ಗಾಯನವನ್ನು ಮೆಚ್ಚಿಕೊಂಡಿದ್ದರಂತೆ. ಅದೇ ರೀತಿ ಬಸವರಾಜ ರಾಜಗುರು ಕೂಡ ಉಸ್ತಾದ್ ಅಮೀರ್‌ಖಾನ್ ಸಾಹೇಬರ ಹೆಸರೆತ್ತಿದ್ದರೆ ಕಿವಿ ಮುಟ್ಟಿಕೊಂಡು ‘ಅವರ ಗಾಯನ ಹಿಮಾಲಯ ಪರ್ವತದಂತೆ ಮತ್ತು ಅರಬ್ಬೀ ಸಮುದ್ರದಂತೆ’ ಎನ್ನುತ್ತಿದ್ದರು. ಒಮ್ಮೆ ಪಂಡಿತ ಬಸವರಾಜ ರಾಜಗುರುಗಳನ್ನು ವಿಜಯಪುರ ಜಿಲ್ಲೆಯ ಸಿಂದಗಿಯ ಆಗಿನ ಶಾಸಕರಾಗಿದ್ದ ಪಡಗಾನೂರು ಶಂಕರಗೌಡರು ಪಡಗಾನೂರಿಗೆ ಹಾಡಲು ಕರೆಸಿದ್ದರು. ಅಲ್ಲಿ ನೂರಾ ಒಂದು ಸ್ವಾಮಿಗಳ ಸಮಾವೇಶ ನಡೆದಿತ್ತು. ಅಲ್ಲಿ ಗುರುಗಳು ಹಾಡಿದರು. ನಂತರ ಎಂದಿನಂತೆ ನಮ್ಮೆಲ್ಲರನ್ನೂ ಕರೆದುಕೊಂಡು ಊಟಕ್ಕೆ ಕುಳಿತರು. ಅಲ್ಲಿಗೆ ಬಂದ ಶಾಸಕರು ನಮ್ಮನ್ನು ತೋರಿಸುತ್ತಾ ‘ಗುರುಗಳೇ ಇವರೆಲ್ಲಾ ಯಾವ ಮಾರ್ಗದವರು?’ ಎಂದು ಕೇಳಿದರು.

ಆ ಕಡೆಯವರು ‘ಮಾರ್ಗ’ ಎಂದರೆ ‘ಜಾತಿ’ ಎಂದು ಅರ್ಥೈಸುತ್ತಾರೆ. ಶಾಸಕರ ಮಾತು ಕೇಳಿ ತಬ್ಬಿಬ್ಬಾದ ಗುರುಗಳು ಶಾಸಕರಿಗೆ, ‘ರೀ ಗೌಡ್ರ ಶಾಸಕರಾಗಿ ಜಾತಿ ಕೇಳತೀರಲ್ರೀ...ಇವರು ನಮ್ಮ ಜಾತಿಯವರು’ ಎಂದು ಹೇಳಿದರು. ‘ಅಂದ್ರ ಇವರೆಲ್ಲ ಜಂಗಮರೇನ್ರಿ ಹಂಗಾರ?’ ಎಂದು ಶಾಸಕರು ಪುನಃ ಕೇಳಿದರು. ಆಗ ಗುರುಗಳು ‘ಮತ್ತೆ ಅದೇ ಮಾತನಾಡತೀರಲ್ರೀ ಗೌಡ್ರss ಈಗ ಕೇಳ್ರಿ ಹೇಳತೀನಿ, ಇವರೆಲ್ಲ ಗಂಧರ್ವ ಜಾತಿಯವರು’ ಎಂದುಬಿಟ್ಟರು. ಪಂಡಿತ ರಾಜೀವ ತಾರಾನಾಥರು ತಮ್ಮ ಗುರು ಉಸ್ತಾದ ಅಲಿ ಅಕಬರ್ ಖಾನ್‌ರ ಫೋಟೊ ತೋರಿಸುತ್ತ ‘ಅಂವ ನಮ್ಮಪ್ಪ’ ಎನ್ನುತ್ತಾರೆ.


ಗುಲಾಮ್ ಅಲಿ ಅವರ ಗಜಲ್ ಗಾಯನವನ್ನು ಹುಚ್ಚೆದ್ದು ಕೇಳುವವರು ಭಾರತದಲ್ಲಿ ಇದ್ದಾರೆ. ಅಲಿ ಅವರು ಹೇಳುತ್ತಿರುತ್ತಾರೆ ‘ಹಿಂದೂಸ್ತಾನದಲ್ಲಿ ನನ್ನ ಅನೇಕ ದೋಸ್ತರಿದ್ದಾರೆ. ನಾನು ಅಗಾಗ ಇಲ್ಲಿಗೆ ಬಂದು ಅವರಿಗಾಗಿ ಹಾಡುತ್ತಿರುತ್ತೇನೆ. ಅದು ನನಗೆ ಅತ್ಯಂತ ಇಷ್ಟದ ಕಾರ್ಯ’ ಎಂದು. ಮೊನ್ನೆ ಅವರು ಭಾರತದಲ್ಲಿ ತಮ್ಮ ಗಾಯನಕ್ಕೆ ಬಂದ ಅಡಚಣೆಯ ಬಗ್ಗೆ ಒಂದು ಮಾತನ್ನು ಹೇಳುತ್ತಾರೆ, ‘ನನಗೆ ಇದರಿಂದ ಸಿಟ್ಟು ಬಂದಿಲ್ಲ. ಆದರೆ ಹೃದಯದಲ್ಲಿ ಆಳವಾದ ಗಾಯವಾಗಿದೆ’ ಎಂದು. ಅವರು ಮಹಾನ್ ಗಾಯಕರು ಎಷ್ಟೋ ಅಷ್ಟೇ ಪ್ರಮಾಣದಲ್ಲಿ ಮಹಾನ್ ಸಂಭಾವಿತರೂ ಹೌದು. ಅಂತಹ ಮಹಾನ್ ಗಾಯಕ ಇಂಥಲ್ಲಿ ಹಾಡಬೇಕು, ಇಂಥಲ್ಲಿ ಹಾಡಬಾರದು ಎಂಬ ಕಟ್ಟಪ್ಪಣೆಗಳನ್ನು ಹೇಗೆ ಗ್ರಹಿಸಬೇಕೋ ಕಷ್ಟಕಷ್ಟ! ಆನಂತರ ಅವರನ್ನು ಹಾಡಲು ದಿಲ್ಲಿಯವರು, ಕೋಲ್ಕತ್ತದವರು ಪರ್ಯಾಯವಾಗಿ ಕರೆದರೆ ‘ಈಗ ನನ್ನ ಮನಸ್ಸು ಹಾಡುವ ಸ್ಥಿತಿಯಲ್ಲಿಲ್ಲ. ಸದ್ಯ ಪಾಕಿಸ್ತಾನಕ್ಕೆ ಹೋಗುತ್ತೇನೆ’ ಎಂದರು.

ಒಮ್ಮೆ ‘ವಿಶ್ವ ಗಜಲ್‌ ಸಮ್ಮೇಳನದಲ್ಲಿ ಜಗಜಿತ್ ಸಿಂಗ್ ಕಾರ್ಯಕ್ರಮ ನಿರೂಪಕರು. ಪ್ರಪಂಚದ ಘಟಾನುಘಟಿ ಗಜಲ್ ಗಾಯಕರು ಅಲ್ಲಿ ದ್ದರು. ಮೆಹದಿ ಹಸನ್‌ರು ಸಮ್ಮೇಳನಾಧ್ಯಕ್ಷರು. ಜಗಜಿತ ಸಿಂಗ್ ಅವರು ಮೆಹದಿ ಹಸನ್‌ರ ಬಳಿ ಬಂದಾಗಲೆಲ್ಲ ಅವರ ಪದತಲದಲ್ಲಿ ಕುಳಿತು ಚರ್ಚಿಸುತ್ತಿದ್ದರು. ಇನ್ನೊಂದು ಗಮನಾರ್ಹವಾದ ವಿಷಯವೊಂದಿದೆ. ಅದನ್ನು ಎಂದೂ ಮರೆಯಬಾರದು. ಭಾರತಕ್ಕೆ ಹಿಂದೂಸ್ತಾನ ಎಂದು ಕರೆಯುವವರು ಬಹುತೇಕ ಮುಸಲ್ಮಾನರು. ಮೊಗಲ್ ದೊರೆ ಹುಮಾಯೂನನು ಇರಾನ್‌ನಿಂದ  ಕಲಾವಿದರನ್ನೂ, ಸಂಗೀತಗಾರರನ್ನೂ, ನೃತ್ಯಗಾರರನ್ನೂ, ಹಾಡುಗಾರರನ್ನೂ ಭಾರತಕ್ಕೆ ಕರೆತಂದನು. ಹಿಂದೂಸ್ತಾನಿ ಸಂಗೀತವನ್ನು ಕಂಡು ಹಿಡಿದವರೇ ಹಿಂದೂ ಮತ್ತು ಮುಸಲ್ಮಾನರು ಸೇರಿ. ಒಬ್ಬರು ಅಲ್ಲಾವುದ್ದೀನ್‌ ಖಿಲ್ಜಿಯ ದರಬಾರದಲ್ಲಿದ್ದ ಅಮೀರ್ ಖುಸ್ರೊ ಹಾಗೂ ಇನ್ನೊಬ್ಬರು ದೇವಗಿರಿಯ ಆಸ್ಥಾನದಲ್ಲಿದ್ದ ಗೋಪಾಲನಾಯಕ.

ಇವರಿಬ್ಬರೂ ಸೇರಿ ಭಾರತದ ಸಂಗೀತ ಮತ್ತು ಮಧ್ಯಪ್ರಾಚ್ಯದ ಸಂಗೀತಗಳೆರಡನ್ನೂ ಕೂಡಿಸಿ, ರುಬ್ಬಿ, ಅರೆದು, ಹದಮಾಡಿ, ಬೆಸೆದು, ಕಲಾಯಿ ಮಾಡಿ ಹಿಂದೂಸ್ತಾನಿ ಸಂಗೀತವನ್ನು ಆವಿಷ್ಕರಿಸಿದರು. ಭಾರತದ ಸಂಸ್ಕೃತಿಯ ಪ್ರತೀಕಗಳಲ್ಲಿ ಮುಸ್ಲಿಂ ಕಲೆ, ವಾಸ್ತುಶಿಲ್ಪ, ಸಂಗೀತ, ಉರ್ದು, ಅರಬ್ಬಿ, ಫಾರಸಿ ಭಾಷೆಗಳು ಮಹತ್ತರ ಪಾತ್ರವಾಡುತ್ತವೆ. ಹಿಂದೂಸ್ತಾನಿ ಸಂಗೀತದ ಉತ್ಕೃಷ್ಟ ಗ್ರಂಥ ‘ಕಿತಾಬ್-ಏ-ನೌರಸ’ವನ್ನು ರಚಿಸಿದವನು ವಿಜಯಪುರದ ಬಾದಷಹಾ ಎರಡನೇ ಇಬ್ರಾಹಿಂ ಆದಿಲ್‌ಶಾಹಿ. ಇದು ಹಿಂದೂಸ್ತಾನಿ ಸಂಗೀತದ ಪ್ರಥಮ ಗ್ರಂಥವಿರಬಹುದು. ಆತ ಆ ಗ್ರಂಥದಲ್ಲಿ ಹಿಂದೂ ದೈವಗಳಾದ ಸರಸ್ವತಿ, ಗಣಪತಿ, ಲಕ್ಷ್ಮೀ, ಪಾರ್ವತಿ, ಶಿವ, ಹನುಮಂತ ಮುಂತಾದವರ ಬಗ್ಗೆ ಚೀಜ್‌ನ ರೂಪದ ಸ್ತೋತ್ರಗಳನ್ನು ಕಟ್ಟಿದ್ದಾನೆ.

ಹಿಂದೂ, ಮುಸ್ಲಿಂ ಮೊದಲಾದ ಹಿಂದೂಸ್ತಾನಿ ಗಾಯಕರು ಹಾಡುವಾಗ ಲಾ, ನಾ, ತಾ, ತೋಂ, ಯಾ ಗಳನ್ನು ಬಳಕೆ ಮಾಡುತ್ತಾರೆ. ಅವೆಲ್ಲಾ ಅಲ್ಲಾ, ಇಲ್ಲಿಲ್ಲಾಹಿ ಇತ್ಯಾದಿ ದೈವ ಸ್ತುತಿಗಳೇ ಆಗಿವೆ. ತರಾನಾದಲ್ಲಿ ಹಾಡುವ ತೋಂ, ತನ, ನನ ಗಳು ಮಂತ್ರಾಕ್ಷರಗಳೇ ಆಗಿವೆ. ಅರಬ್ಬಿಯ ಹದೀಸ್ ಹಾಗೂ ವೇದ ಮಂತ್ರಗಳ ಪಠಣಗಳ ವಿಧಿಗಳು ಹಿಂದೂಸ್ತಾನಿ ಗಾಯನದ ಅಲಾಪ ಭಾಗದಲ್ಲಿ ಸಮ್ಮಿಳಿತಗೊಂಡಿರಬಹುದೆನಿಸುತ್ತದೆ. ಭೈರವ ರಾಗದ ಪರಾಂಪರಾಗತ ಚೀಜ್ ‘ಬಾಲಮುವಾ ಮೋರೇ ಸೈಂಯ್ಯಾ’ ಎಂಬ ಬಡಾ ಖ್ಯಾಲವು ಮಸೀದಿಯಲ್ಲಿಯ ಅಜಾದಂತೆ ನನಗೆ ಕೇಳಿಸುತ್ತದೆ. ಅದಕ್ಕಾಗಿಯೇ ನಾನು ಭೈರವ ರಾಗದಲ್ಲಿ ‘ಅಲ್ಲಾ ಹೋ ಅಕ್ಬರ್’ ಎಂಬ ಚೀಜ್ ಕಟ್ಟಿದೆ. ಮುಂಜಾನೆಯಾದರೆ ಸಾಕು ತೋಡಿ ರಾಗದಲ್ಲಿ ‘ಅಲ್ಲಾ ಜಾನೇ ಮೌಲಾಜಾನೇ’ ಎಂದು ಹಾಡುತ್ತಾ  ಕೂಡುತ್ತೇವೆ.

ಈಗಿನ ನನ್ನ ಗುರು ಉಸ್ತಾದ್ ಮಶಕೂರ ಅಲಿ ಖಾನ್ ಸಾಹೇಬರಿಗೆ ‘ಯಾವಾಗ ಪಾಠಕ್ಕೆ ಬರಲಿ’ಎಂದರೆ, ‘ಯೇ ಘರ್ ತುಮ್ಹಾರಾ ಹೀ ತೋ ಹೈ. ಯೇ ಹಮ್‌ಸೆ ಕ್ಯಾ ಪೂಛತೇ ಹೋ?’ ಎಂದು ನಗುತ್ತಾರೆ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಸಾಹೇಬರನ್ನು ಅಮೆರಿಕಕ್ಕೆ ಕರೆದರೆ ‘ಅಲ್ಲಿ ಹಿಂದೂಸ್ತಾನ ಇದೆಯಾ? ಅಲ್ಲಿ ಕಾಶಿ ಇದೆಯಾ? ಅಲ್ಲಿ ನಮ್ಮ  ಕಾಶಿ ವಿಶ್ವನಾಥ ಮಂದಿರ ಇದೆಯಾ?’ ಎಂದು ದಿಟ್ಟಿಸಿ ನೋಡಿ ಮುಸಿಮುಸಿ ನಗುತ್ತಿದ್ದರು. ಸಂಗೀತಕ್ಕೆ ಇರುವುದೇ ಏಳು ಸ್ವರ. ಅದರಲ್ಲಿ ನನ್ನದು ಯಾವುದು ನಿನ್ನದು ಯಾವುದು ಗೆಳೆಯ? ಅವು ನನ್ನದೂ ಅಲ್ಲ ನಿನ್ನದೂ ಅಲ್ಲ.

ಡಾ. ಹನುಮಣ್ಣನಾಯಕ ದೊರೆ ಹಿಂದೂಸ್ತಾನಿ ಗಾಯಕರು, ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ  ವಿಶ್ರಾಂತ ಕುಲಪತಿ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...